ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ ಕನ್ನಡಿಗ ಎಸ್‌ಎಂಕೆ

By Staff
|
Google Oneindia Kannada News

ಕನ್ನಡದ ಪ್ರಪ್ರಥಮ ಪೋರ್ಟಲ್‌ ದಟ್ಸ್ ಕನ್ನಡ ಓದುಗರಿಂದ ಇಸವಿ- 2000 ವರ್ಷದ ವ್ಯಕ್ತಿಯಾಗಿ ಆಯ್ಕೆಗೊಂಡಿರುವ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರಿಗೆ ಅಭಿನಂದನೆಗಳು.

ವರ್ಷದ ಕನ್ನಡಿಗ- ಆಯ್ಕೆಯಲ್ಲಿ ಒಳನಾಡಿನ ಕನ್ನಡಿಗರು ಮಾತ್ರವಲ್ಲದೆ, ವಿಶ್ವದ ಮೂಲೆ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಭಾರೀ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. ಬಹುತೇಕ ಅವರೆಲ್ಲರ ನೆಚ್ಚು ಮುಖ್ಯಮಂತ್ರಿ ಕೃಷ್ಣರ ಪಾಲಿಗೆ. ಪ್ರತಿಶತ 68.75 ಮತಗಳನ್ನು ಪಡೆದಿರುವ ಕೃಷ್ಣ , ಸ್ಪಷ್ಟ ಬಹುಮತದಿಂದ ವರ್ಷದ ಕನ್ನಡಿಗ ಗೌರವಕ್ಕೆ ಪಾತ್ರರಾಗಿದ್ದಾರೆ.

ಕರ್ನಾಟಕ ಈವರೆಗೆ ಕಂಡಿರುವ ಮುಖ್ಯಮಂತ್ರಿಗಳಲ್ಲಿ ಎಸ್‌ಎಂಕೆ ಅತ್ಯಂತ ದಕ್ಷರು ಎಂದು ಅನೇಕ ಓದುಗರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ, ಮಾಹಿತಿ ತಂತ್ರಜ್ಞಾನದಲ್ಲಿ ರಾಜ್ಯ ದಾಪುಗಾಲಿಡುವಲ್ಲಿ ಕೃಷ್ಣ ಅವರ ಮಹತ್ವದ ಪಾತ್ರ, ರಾಜ್‌ ಅಪಹರಣದಲ್ಲಿ ಅವರು ತೋರಿದ ದಕ್ಷತೆ ಹಾಗೂ ಯಾವುದೇ ಹಗರಣದಲ್ಲಿ ಕೈ ಮಸಿ ಮಾಡಿಕೊಂಡಿಲ್ಲವೆನ್ನುವ ಪ್ರಾಮಾಣಿಕತೆಯನ್ನು ಓದುಗರು ಗುರ್ತಿಸಿದ್ದಾರೆ. ಕೃಷ್ಣ ಅವರ ಸಿಂಗಪುರ ಘೋಷಣೆ ಕ್ಲಿಕ್ಕಾಗಿಲ್ಲ ನಿಜವಾದರೂ, ದಕ್ಷ ಮತ್ತು ಪಾರದರ್ಶಕ ಆಡಳಿತ ನೀಡುವಲ್ಲಿ ಮುಖ್ಯಮಂತ್ರಿಗಳು ಪ್ರಾಮಾಣಿಕ ಹಾಗೂ ದಿಟ್ಟ ಹೆಜ್ಜೆಗಳನ್ನಿಟ್ಟಿದ್ದಾರೆ ಎಂದು ಬೆನ್ನು ತಟ್ಟಿದ್ದಾರೆ.

ವರ್ಷದ ಕನ್ನಡಿಗ ಆಯ್ಕೆಯಲ್ಲಿ ಕೃಷ್ಣ ಅವರ ನಂತರದ ಸ್ಥಾನ ಇನ್‌ಫೋಸಿಸ್‌ನ ನಾರಾಯಣಮೂರ್ತಿ ಅವರದ್ದು . ಶೇ.9.37 ರಷ್ಟು ಓಟುಗಳನ್ನು ಗಿಟ್ಟಿಸಿರುವ ಅವರು, ಈ ಹೊತ್ತು ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿರುವುದಕ್ಕೆ ಕಾರಣಕರ್ತರು ಎಂದು ಕನ್ನಡಿಗರ ಮೆಚ್ಚುಗೆ ಗಳಿಸಿದ್ದಾರೆ. ಕನ್ನಡ ಐಟಿ ಪ್ರತಿಭೆಗಳು ಅಮೆರಿಕದ ಆಕರ್ಷಣೆಯಿಂದ ತಪ್ಪಿಸಿಕೊಂಡು ಕರ್ನಾಟಕದಲ್ಲಿಯೇ ಉಳಿಯುವಂತಹ ವಾತಾವರಣವನ್ನು ಅವರು ಕಲ್ಪಿಸಿದ್ದಾರೆ ಎನ್ನುವ ಶಹಬ್ಬಾಸ್‌ಗಿರಿಯೂ ನಾರಾಯಣಮೂರ್ತಿಯವರಿಗೆ ದಕ್ಕಿದೆ.

ಕೃಷ್ಣ ಅವರಿಗೆ ಭಾರೀ ಸ್ಪರ್ಧೆ ನೀಡಬಹುದೆಂದು ನಿರೀಕ್ಷಿಸಲಾಗಿದ್ದ ವರನಟ ಡಾ. ರಾಜ್‌ಕುಮಾರ್‌ ಕೇವಲ ಶೇ.6.25 ಓಟು ಪಡೆಯುವುದರೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಶಬ್ದವೇಧಿಯ ಬಿಡುಗಡೆ ಹಾಗೂ ಅಪಹರಣದ ಸಂದರ್ಭದ ಸಹಾನುಭೂತಿ ಅವರ ನೆರವಿಗೆ ಅಷ್ಟಾಗಿ ಬಂದಿಲ್ಲ .

ವಿಪ್ರೋದ ಅಜೀಂ ಪ್ರೇಂಜಿ ಅವರಿಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ಅವರಿಗೆ ದಕ್ಕಿರುವುದು ಪ್ರತಿಶತ 4.68 ಮತಗಳು ಮಾತ್ರ. ಐಟಿ ಕ್ಷೇತ್ರದಲ್ಲಿ ರಾಜ್ಯಕ್ಕೆ ಪ್ರೇಂಜಿ ಅವರು ಮಹತ್ವದ ಕೊಡುಗೆ ಸಲ್ಲಿಸಿದ್ದಾರೆ ಎಂದು ಕನ್ನಡಿಗರು ಬೆನ್ನು ತಟ್ಟಿದ್ದಾರೆ.

ವರ್ಷದ ವ್ಯಕ್ತಿ ಸಮೀಕ್ಷೆಯ ಶೇ. 90 ರಷ್ಟು ಓಟುಗಳನ್ನು ಮೊದಲ ನಾಲ್ಕು ಸ್ಥಾನ ಪಡೆದಿರುವ ಕೃಷ್ಣ, ನಾರಾಯಣ ಮೂರ್ತಿ, ರಾಜ್‌ ಹಾಗೂ ಪ್ರೇಂಜಿ ಹಂಚಿಕೊಂಡಿದ್ದಾರೆ. ಉಳಿದ ಶೇ. 10 ಮತಗಳು ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್‌ ಒಂದರಲ್ಲಿ ಹತ್ತೂ ವಿಕೆಟ್‌ಗಳನ್ನು ಪಡೆದ ಅನಿಲ್‌ ಕುಂಬ್ಳೆ, ಭಾರತ ಕ್ರಿಕೆಟ್‌ ತಂಡದ ಉಪನಾಯಕ ರಾಹುಲ್‌ ದ್ರಾವಿಡ್‌, ಇತ್ತೀಚೆಗೆ ತಾನೆ ನಿಧನರಾದ ಕಲಾವಿದ ಧೀರೇಂದ್ರ ಗೋಪಾಲ್‌ ಪಡೆದಿದ್ದಾರೆ. ರಾಜ್‌ ಅಪಹರಣದ ಮೂಲಕ ಉಭಯ ರಾಜ್ಯ ಸರ್ಕಾರಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಿದ ವೀರಪ್ಪನ್‌ ಹಾಗೂ ಅಪಾರ ತಾಳ್ಮೆಯ ಕನ್ನಡಿಗ ಕೂಡ ಈ ಪಟ್ಟಿಯಲ್ಲಿದ್ದಾರೆ. ಕೆಲವು ಓದುಗರು ವರ್ಷದ ವ್ಯಕ್ತಿಯಾಗುವಂಥ ಅರ್ಹತೆ ಯಾರಿಗೂ ಇಲ್ಲ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X