ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜನ್‌ - ನಾಗೇಂದ್ರ ಸಂಗೀತ ಜೋಡಿಯ ನಾಗೇಂದ್ರ ನಿಧನ

By Staff
|
Google Oneindia Kannada News

ಬೆಂಗಳೂರು : ಕನ್ನಡ ಚಲನಚಿತ್ರ ರಂಗದ ಮೆಲೋಡಿ ಕಿಂಗ್ಸ್‌ ಎಂದು ಖ್ಯಾತರಾಗಿದ್ದ ರಾಜನ್‌ - ನಾಗೇಂದ್ರ ಜೋಡಿಯ ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ನಾಗೇಂದ್ರ ಶನಿವಾರ ಬೆಳಗ್ಗೆ 7 ಗಂಟೆಗೆ ಇಲ್ಲಿನ ಬೌರಿಂಗ್‌ ಆಸ್ಪತ್ರೆಯಲ್ಲಿ ನಿಧನರಾದರು.

ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ನಾಗೇಂದ್ರ ಅವರಿಗೆ 65 ವರ್ಷ ವಯಸ್ಸಾಗಿತ್ತು. ಆಸ್ಪತ್ರೆಯಲ್ಲಿದ್ದರೂ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಬಳಲಿದ್ದರೂ ಕೂಡ ಯಾರ ನೆರವನ್ನೂ ಬಯಸದೆ ಯಾರ ಮುಂದೂ ಕೈಚಾಚದೆ ಶ್ರೀಸಾಮಾನ್ಯರ ಸಾರ್ವಜನಿಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಾ ಸ್ವಾಭಿಮಾನಿ ನಾಗೇಂದ್ರ ಅವರಿಗೆ ಪತ್ನಿ, ತಾಯಿ ಹಾಗೂ ಒಬ್ಬ ಪುತ್ರ ಇದ್ದಾರೆ.

1952ರಲ್ಲಿ ಚಿತ್ರರಂಗಕ್ಕೆ ಪದಾರ್ಪಣ ಮಾಡಿದ ನಾಗೇಂದ್ರ ಸುಮಾರು 300ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಹಾಗೂ 35 ತೆಲುಗು ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದರು. ರತ್ನ ಮಂಜರಿ ಚಿತ್ರದಲ್ಲಿ ಹಾಸ್ಯರತ್ನ ನರಸಿಂಹ ರಾಜು ಅಭಿನಯಕ್ಕೆ ಯಾರು ಯಾರು ನೀ ಯಾರು? ಎಲ್ಲಿಂದ ಬಂದೆ ಯಾವೂರು ? ಎಂಬ ಗೀತೆಯನ್ನೂ ಹಾಡಿದ್ದರು. ಇವರ ಸುಮಧುರ ಕಂಠದಿಂದ ಹೊರ ಹೊಮ್ಮಿದ ಇತರ ಜನಪ್ರಿಯ ಗೀತೆಗಳು - ಮುತ್ತೆೈದೆ ಭಾಗ್ಯ ಚಿತ್ರದ - ನಮ್ಮೂರೆ ಚೆಂದ, ನಮ್ಮವರೆ ಅಂದ, ಕನ್ನಡ ಭಾಷೆ ಕರ್ಣಾನಂದ ಹಾಗೂ ಗಾಳಿ ಮಾತು ಚಿತ್ರದಲ್ಲಿ ಕೋಕಿಲಾ ಮೋಹನ್‌ ಹಾಗೂ ಹೇಮಾಚೌದರಿ ಅಭಿನಯಕ್ಕೆ ಹಾಡಿದ ನಮ್ಮೂರ ಸಂತೇಲಿ, ಪೇಟೆಯ ಬೀದಿಲಿ ಜಡೆಯನ್ನು ಎಳೆದವ ನೀ ತಾನೆ .... ಎಂಬ ಸುಮಧುರ ಗೀತೆ.

ಸೌಭಾಗ್ಯಲಕ್ಷ್ಮೀ, ನವಜೀವನ, ಹೊಂಬಿಸಿಲು, ದೇವರಗುಡಿ, ಚಂದನದಗೊಂಬೆ ಚಿತ್ರಗಳಿಗೆ ಸಂಗೀತ ಸಂಯೋಜನೆ ನೀಡಿರುವ ರಾಜನ್‌ - ನಾಗೇಂದ್ರ ಜೋಡಿಗೆ ಎರಡು ಕನಸು, ಪರಸಂಗದ ಗೆಂಡೆತಿಮ್ಮ ಚಿತ್ರಗಳು ರಾಜ್ಯ ಪ್ರಶಸ್ತಿ ತಂದು ಕೊಟ್ಟಿದ್ದವು. ಅವರು ಸಂಗೀತ ನಿರ್ದೇಶಿಸಿದ ಇತ್ತೀಚಿನ ಚಿತ್ರ ಸಿದ್ಧಲಿಂಗಯ್ಯನವರ ಪ್ರೆಮ ಪ್ರೇಮ ಪ್ರೇಮ.

ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದ ಚಿಕಿತ್ಸೆಗಾಗಿ ಸೆಪ್ಟೆಂಬರ್‌ನಲ್ಲಿ ನಾಗೇಂದ್ರ ಬೌರಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದರು. 90ರ ದಶಕದವರೆಗೂ ರಾಜನ್‌ - ನಾಗೇಂದ್ರ ಜೋಡಿ ಸುಮಧುರ ಸಂಗೀತ ನಿರ್ದೇಶನಕ್ಕೆ ಹೆಸರಾಗಿತ್ತು. ನಾಗೇಂದ್ರ ಅವರ ನಿಧನದೊಂದಿಗೆ ಮಧುರ ಮಧುರ ಮಂಜುಳಗಾನದ ಅಧ್ಯಾಯ ಅಂತ್ಯಕಂಡಿದೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X