ವೀರಪ್ಪನ್ ಸಮ್ಮತಿಗೆ ಕಾಯುತ್ತಿರುವ, ಕಾಡು ತಲುಪಿದ ಗೋಪಾಲ್
ಚೆನ್ನೈ : ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ವಿವರಗಳನ್ನು ನೀಡಿ, ರಾಜ್‌ಕುಮಾರ್ ಅವರನ್ನು ಬಿಡುಗಡೆಗೊಳಿಸುವಂತೆ ವೀರಪ್ಪನ್ ಮನವೊಲಿಸಲು ಬುಧವಾರ ರಾತ್ರಿ ಕಾಡಿಗೆ ತೆರಳಿದ ಸಂಧಾನಕಾರ ಗೋಪಾಲ್ ಸತ್ಯಮಂಗಲಂ ಕಾಡು ಪ್ರವೇಶಿಸಿದ್ದು, ಅಡಗುತಾಣದತ್ತ ಹೆಜ್ಜೆ ಹಾಕಲು ವೀರಪ್ಪನ್ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ ಎಂದು ನಕ್ಕೀರನ್ ಪತ್ರಿಕೆಯ ಮೂಲಗಳು ಗುರುವಾರ ಮಧ್ಯಾಹ್ನ ತಿಳಿಸಿವೆ.
ಸತ್ಯಮಂಗಲಂ ಕಾಡಿನ ಪ್ರದೇಶವನ್ನು ಪ್ರವೇಶಿಸಿರುವ ಗೋಪಾಲ್ ಅವರಿಗೆ ಇನ್ನೂ ವೀರಪ್ಪನ್ ತನ್ನ ಅಡಗುತಾಣಕ್ಕೆ ಬರಲು ಅನುಮತಿ ಕೊಟ್ಟಿಲ್ಲ. ಹೀಗಾಗಿ ಅವರು, ವೀರಪ್ಪನ್ ಸಹಚರರು ತರುವ ಸಂದೇಶಕ್ಕಾಗಿ ಅಲ್ಲಿಯೇ ಕಾಯುತ್ತಿದ್ದಾರೆ ಎಂದು ನಕ್ಕೀರನ್ ಪತ್ರಿಕೆಯ ಮೂಲಗಳು ತಿಳಿಸಿವೆ.
ಗೋಪಾಲ್ ಅವರಿಗೆ ನಾಲ್ಕನೆ ಬಾರಿಗೆ ಕಾನನ ಯಾತ್ರೆ ಕೈಗೊಳ್ಳಲು ಸುತರಾಂ ಇಷ್ಟ ಇರಲಿಲ್ಲ. ಆದರೂ ಕೂಡ, ಕರ್ನಾಟಕ ರಾಜ್ಯ ಸರಕಾರ ಹಾಗೂ ತಮಿಳುನಾಡು ಸರಕಾರಗಳು ವೀರಪ್ಪನ್ ಷರತ್ತನ್ನು ಪೂರೈಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸುವ ಸಲುವಾಗಿ ಕಾಡಿಗೆ ಹೋಗಲೇ ಬೇಕು ಎಂದು ಕರುಣಾನಿಧಿ ಅವರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಒಲ್ಲದ ಮನಸ್ಸಿನಿಂದಲೇ ಕಾಡಿಗೆ ತೆರಳಿದ್ದರು.
ಈಗಾಗಲೇ ಮೂರು ಬಾರಿ ವೀರಪ್ಪನ್ ಜತೆ ಸಂಧಾನ ನಡೆಸಿರುವ ಗೋಪಾಲ್ ಅವರು ರಾಜ್‌ಕುಮಾರ್ ಹಾಗೂ ಇತರ ಮೂವರು ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವಲ್ಲಿ ವಿಫಲರಾಗಿದ್ದಾರೆ. ವೀರಪ್ಪನ್ ತನ್ನ ಸಹಚರರಾದ ಟಾಡಾ ಬಂದಿಗಳು ಹಾಗೂ ತಮಿಳು ಉಗ್ರರ ಬಿಡುಗಡೆಗೆ ಪಟ್ಟು ಹಿಡಿದಿದ್ದಾನೆ. ಎರಡೂ ಸರ್ಕಾರಗಳು ಈ ಷರತ್ತುಗಳನ್ನು ಒಪ್ಪಿವೆಯಾದರೂ, ಸರ್ವೋನ್ನತ ನ್ಯಾಯಾಲಯದ ತೀರ್ಪಿನಿಂದ ಟಾಡಾ ಬಂದಿಗಳ ಬಿಡುಗಡೆಗೆ ಅಡ್ಡಿಯುಂಟಾಗಿದೆ.












Click it and Unblock the Notifications