• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೌತಿಯ ಚಂದ್ರನ ನೋಡಿದಿರಾ?

By ಶೋಭಾಪ್ರಿಯ
|

ಗಣಪನಿಗೆ ಮೋದಕ ಅರ್ಥಾತ್‌ ಕಡುಬು ಎಂದರೆ ಬಲು ಪ್ರೀತಿ. ಭಕ್ತರನ್ನು ಕಂಡರೆ ಕೂಡ ಅವನಿಗೆ ಬಲು ಅಕ್ಕರೆ. ಒಮ್ಮೆ ಭೂಲೋಕದಲ್ಲಿ ಭಕ್ತರ ಮನೆಗೆಲ್ಲಾ ಭೇಟಿಕೊಟ್ಟ ಗಣಪ ಎಲ್ಲರ ಮನೆಯಲ್ಲೂ ಕಡುಬು, ಕಜ್ಜಾಯ, ನೈವೇಧ್ಯಗಳನ್ನು ಭಕ್ಷಿಸಿ ಭಾರವಾದ ಹೊಟ್ಟೆಯಾಂದಿಗೆ ತನ್ನ ವಾಹನ ಇಲಿಯ ಮೇಲೇರಿ ಕೈಲಾಸದತ್ತ ಹೊರಟಿದ್ದ.

ಬಿದಿಗೆ ಚಂದ್ರ ಬಂದ ನೋಡು ದೀಪ ಹಚ್ಚಿದಂತೆ ಜೋಡು.... ಎಂದು ಕವಿ ಹಾಡಿರುವುದನ್ನು ಕೇಳಿರುವಿರಲ್ಲ. ಬಿದಿಗೆಯ ನಂತರದ ಚೌತಿಯಲ್ಲಿ ಮತ್ತಷ್ಟು ಸಂದರವಾಗಿ ಕಾಣುವ ಚಂದ್ರ ಬಾನಿನಲ್ಲಿ ಮುಗುಳುನಗೆ ಸೂಸುತ್ತ ತನ್ನ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದ್ದ.

ಕಡುಬು ತಿಂದು ಸುಸ್ತಾಗಿದ್ದ ಗಣಪ ಇಲಿಯ ಮೇಲೆ ಕುಳಿತು ಕೈಲಾಸದತ್ತ ಹೊರಟಿದ್ದನ್ನು ಚಂದ್ರ ನಸು ನಗುತ್ತಾ ಗಮನಿಸುತ್ತಲೇ ಇದ್ದ. ಗಣಪನ ಹೊತ್ತ ಇಲಿ ಪಕ್ಕದಲ್ಲಿ ಹರಿದು ಬಂದ ಹಾವನ್ನು ಕಂಡು ಹೆದರಿ ಓಡತೊಡಗಿತು. ಗಣಪ ದೊಪ್‌ ಎಂದು ಕೆಳಗೆ ಬಿದ್ದ. ಹೊಟ್ಟೆ ಒಡೆಯಿತು. ತಿಂದಿದ್ದ ಕಡುಬೆಲ್ಲಾ ಹೊರಕ್ಕೆ ಚೆಲ್ಲಿತು. ಗಣಪ ಸ್ವಲ್ಪ ಅಪಮಾನವಾದವನಂತೆ ಕಂಡುಬಂದ. ಅತ್ತಿತ್ತ ನೋಡಿ ಯಾರೂ ಇಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು, ಕೆಳಗೆ ಚೆಲ್ಲಿದ ಎಲ್ಲವನ್ನೂ ಹೊಟ್ಟೆಗೆ ಮತ್ತೆ ತುಂಬಿಕೊಂಡ. ತನ್ನ ಇಲಿಯನ್ನು ಹೆದರಿಸಿ ಹತ್ತಿರದಲ್ಲೇ ಹರಿಯುತ್ತಿದ್ದ ಹಾವನ್ನು ಹಿಡಿದು ಸೊಂಟಕ್ಕೆ ಬಿಗಿದ.

ಇದನ್ನೆಲ್ಲಾ ನೋಡುತ್ತಿದ್ದ ಚೆಲುವ ಚಂದಿರ ಗಹಗಹಿಸಿ ನಕ್ಕ. ಗಣಪನಿಗೆ ಕೋಪ ಬಂತು. ನೀನು ಅಂದವಾಗಿರುವೆ ಎಂದು ನಿನಗೆ ದುರಹಂಕಾರ ಇನ್ನು ಮುಂದೆ ಯಾರೂ ನಿನ್ನನ್ನು ನೋಡದಿರಲಿ ಎಂದು ಶಾಪ ಕೊಟ್ಟ. ಚಂದ್ರನಿಗೆ ತನ್ನ ತಪ್ಪಿನ ಅರಿವಾಯಿತು. ಭೂಮಿಗಿಳಿದು ಬಂದು ಗಣಪನ ಕಾಲಿಗೆ ಬಿದ್ದು, ಕ್ಷಮೆ ಕೋರಿದ. ಪ್ರಸನ್ನನಾದ ಗಣಪ ತನ್ನ ಶಾಪವನ್ನು ಹಿಂದಕ್ಕೆ ಪಡೆದನಾದರೂ, ಭಾದ್ರಪದ ಶುಕ್ಲ ಚೌತಿಯ ದಿನ ನಿನ್ನ ದರ್ಶನ ಮಾಡಿದವರಿಗೆ ಕಳ್ಳತನದ ಆರೋಪ ಬರುತ್ತದೆ ಎಂದು ಚಿಕ್ಕ ಶಾಪವನ್ನು ಕೊಟ್ಟ. ಅಂದಿನಿಂದ ಇಂದಿನವರೆಗೆ ಚೌತಿಯ ದಿನ ಚಂದ್ರ ಎಷ್ಟೇ ಚೆನ್ನಾಗಿದ್ದರೂ ಜನ ಅವವನ್ನು ನೋಡಲು ಹೆದರುತ್ತಾರೆ.

ಕೃಷ್ಣನನ್ನೂ ಕಾಡಿದ ಶಾಪ : ಒಮ್ಮೆ ದ್ವಾಪರಯುಗದಲ್ಲಿ ಶ್ರೀಕೃಷ್ಣ ಚೌತಿಯ ದಿನ ಅರಮನೆಯ ಉಪ್ಪರಿಗೆಯಲ್ಲಿ ಕುಳಿತಿದ್ದ. ರುಕ್ಮಿಣಿ ಆತನಿಗೆ ಹಾಲು ತಂದುಕೊಟ್ಟಳು. ಹಾಲು ಕುಡಿಯಲು ಲೋಟ ಎತ್ತಿದಾಗ ಹಾಲಿನಲ್ಲಿ ಕೃಷ್ಣನಿಗೆ ಚೌತಿಯ ಚಂದ್ರನ ದರ್ಶನವಾಯಿತು. ಅವನ ಮೇಲೂ ಕಳ್ಳತನದ ಆರೋಪ ಬಂತು.

ಶಮಂತಕ ಮಣಿಯ ಕತೆ : ಕೃಷ್ಣನ ಬಂಧುಗಳಲ್ಲಿ ಒಬ್ಬನಾದ ಸತ್ರಾರ್ಜಿತನಲ್ಲಿ ಸೂರ್ಯ ದಯಪಾಲಿಸಿದ ಶಮಂತಕ ಎಂಬ ಒಂದು ಅಮೂಲ್ಯ ರತ್ನ ಇತ್ತು. ಅದು ದಿನವೂ 8 ಸೇರು ಬಂಗಾರವನ್ನು ನೀಡುತ್ತಿತ್ತು. ಅದನ್ನು ಧರಿಸಿ ಹೊರಟರೆ ಅದರ ಪ್ರಕಾಶದಿಂದ ಸೂರ್ಯನೇ ಧರೆಗಿಳಿದಂತೆ ಭಾಸವಾಗುತ್ತಿತ್ತು. ಕೃಷ್ಣ ಒಮ್ಮೆ ಇಂತಹ ಮಣಿ ಚಕ್ರವರ್ತಿಯ ಬಳಿ ಇರುವುದು ಕ್ಷೇಮ ಬಲರಾಮನಿಗೆ ಕೊಟ್ಟು ಬಿಡು ಎಂದು ಕೇಳಿದ. ಆದರೆ ಸತ್ರಾರ್ಜಿತ ಒಪ್ಪಲಿಲ್ಲ.

ಆ ಮಣಿಯನ್ನು ಭೇಟೆಗೆ ಹಾಕಿಕೊಂಡು ಹೋಗುವಂತಿರಲಿಲ್ಲ. ಆದರೂ ಸತ್ರಾರ್ಜಿತ ಸೋದರ ಪ್ರಸೇನನು ಶಮಂತಕ ಮಣಿ ಧರಿಸಿ ಶ್ರೀಕೃಷ್ಣನ ಜತೆಗೂಡಿ ಬೇಟೆಗೆ ಹೋದನಂತೆ. ಬೇಟೆಯ ಸಂದರ್ಭದಲ್ಲಿ ಎಲ್ಲರೂ ದಾರಿ ತಪ್ಪಿದರು. ಪ್ರಸೇನ ಎಲ್ಲೋ ಕಾಡಿನಲ್ಲಿ ಕಾಣೆಯಾದ. ಪ್ರಸೇನನನ್ನು ಸಿಂಹವೊಂದು ಕೊಂದು ಶಮಂತಕ ಮಣಿಯನ್ನು ಅಪಹರಿಸಿತು. ಆ ಸಿಂಹವನ್ನು ಜಾಂಬವಂತನೆಂಬ ಕರಡಿಯು ಕೊಂದು ಮಣಿಯನ್ನು ತನ್ನ ಸ್ವಾಧೀನ ಮಾಡಿಕೊಂಡು ಅದನ್ನು ಮಗುವಿನ ತೊಟ್ಟಿಲಿಗೆ ಆಡಲು ಕಟ್ಟಿತು.

ಇತ್ತ ಕಾಡಿನಲ್ಲಿ ಪ್ರಸೇನನಿಗಾಗಿ ಹುಡುಕಿದ ಯಾದವರು, ಆತ ಸಿಗದಿದ್ದಾಗ ಕೃಷ್ಣ ಸಮೇತನಾಗಿ ಅರಮನೆಗೆ ಮರಳಿದರು. ಆದರೆ, ಸತ್ರಾರ್ಜಿತ ಹಾಗೂ ಪುರಜನರು ಮಣಿಗಾಗಿ ಕೃಷ್ಣನೇ ತನ್ನ ಸೋದರ ಪ್ರಸೇನನನ್ನು ಕೊಂದಿರಬೇಕು ಎಂದು ಅನುಮಾನಿಸಿದರು. ಚೌತಿಯ ಚಂದ್ರನ ದರ್ಶನದಿಂದ ತನಗೆ ಈ ಅಪವಾದ ಬಂದಿದೆ ಎಂಬುದನ್ನು ಗ್ರಹಿಸಿದ ಕೃಷ್ಣ , ಗಣಪನನ್ನು ಪೂಜಿಸಿ, ಪ್ರಸಾದ ಸ್ವೀಕರಿಸಿ, ಮಣಿಯನ್ನು ಹುಡುಕುತ್ತಾ ಕಾಡಿಗೆ ಹೊರಟ. ಆಗ ಅವನಿಗೆ ಸಿಂಹ ಪ್ರಸೇನನನ್ನು ಕೊಂದ್ದದ್ದು, ಸಿಂಹವನ್ನು ಜಾಂಬವಂತ ಕೊಂದಿದ್ದು ಹೆಜ್ಜೆ ಗುರುತುಗಳಿಂದ ತಿಳಿಯಿತು. ಮಣಿ ಹುಡುಕುತ್ತಾ ಅವನು ತನ್ನ ಸಹಚರರೊಂದಿಗೆ ಕರಡಿಯ ಗುಹೆಗೂ ಬಂದ. ಎಲ್ಲರನ್ನೂ ಹೊರಗೆ ನಿಲ್ಲಿಸಿ ತಾನೊಬ್ಬನೇ ಕರಡಿಯ ಗುಹೆ ಹೊಕ್ಕ. ಕ್ಷತ್ರಿಯನಾದ ತಾನು ಹೋರಾಡಿಯೇ ಈ ಮಣಿಯನ್ನು ಪಡೆಯುತ್ತೇನೆ ಎಂದು ಹೇಳಿ ಪಂಚಜನ್ಯವನ್ನು ಊದಿದ. ಹೊರಗೆ ಹೋಗಿದ್ದ ಜಾಂಬವಂತ ಗುಹೆಗೆ ಮರಳಿ, ದ್ವಾರಕ್ಕೆ ದಪ್ಪ ಕಲ್ಲ ಬಂಡೆಯನ್ನು ಅಡ್ಡ ಇಟ್ಟು, ಕೃಷ್ಣನೊಂದಿಗೆ ಕಾಳಗಕ್ಕೆ ನಿಂತ.

ಹೊರಗೆ ನಿಂತಿದ್ದವರು 7 ದಿನ ಕಾದರೂ ಕೃಷ್ಣ ಬಾರದಿದ್ದಾಗ ಕೃಷ್ಣ ಸತ್ತಿರಬೇಕು ಎಂದು ತಿಳಿದು ಹಿಂತಿರುಗಿದರು. ಸತತವಾಗಿ 15 ದಿನ ಯುದ್ಧ ನಡೆಯಿತು. ತ್ರೇತಾಯುಗದ ರಾಮನ ಭಂಟನಾಗಿದ್ದ ಜಾಂಬವಂತನೂ ಸೋಲಲಿಲ್ಲ. ದ್ವಾಪರದಲ್ಲಿ ಕೃಷ್ಣಾವತಾರದಲ್ಲಿದ್ದ ನಾರಾಯಣನೂ ಸೋಲಲಿಲ್ಲ. ಕಡೆಗೆ ಕೃಷ್ಣ ಪರಮಾತ್ಮ ಶ್ರೀರಾಮನಾಗಿ ಜಂಬವಂತನಿಗೆ ದರ್ಶನ ನೀಡಿದ. ತನ್ನ ತಪ್ಪನ್ನು ಅರಿತ ಜಾಂಬವಂತ ತನ್ನ ಮಗಳು ಹಾಗೂ ಕನ್ಯಾಮಣಿಯಾದ ಜಾಂಬವತಿಯನ್ನು ಕೃಷ್ಣನಿಗೆ ಕೊಟ್ಟು ಮದುವೆ ಮಾಡಿ, ಶಮಂತಕ ಮಣಿ ಕೊಟ್ಟು, ಆನಂದದಿಂದ ಕಳುಹಿಸಿಕೊಟ್ಟ. ಕೃಷ್ಣ ಶಮಂತಕ ಮಣಿಯಾಂದಿಗೆ ಮರಳಿದಾಗ ಜನರು ತಮ್ಮ ತಪ್ಪನ್ನು ಮನ್ನಿಸುವಂತೆ ಕೃಷ್ಣನನ್ನು ಕೋರಿದರು.

ಚೌತಿಯ ಚಂದ್ರ ದರ್ಶನ ದೇವಾನು ದೇವತೆಗಳನ್ನೂ ಬಿಟ್ಟಿಲ್ಲ ಎನ್ನುತ್ತದೆ ಕತೆ. ಅಕಸ್ಮಾತ್‌ ಚೌತಿಯ ಚಂದ್ರ ದರ್ಶನವಾಗಿದ್ದರೂ, ಈ ಕತೆ ಕೇಳಿದರೆ ಅಥವಾ ಓದಿದರೆ, ಜನರಿಗೆ ದೋಷಕ್ಕೆ ಪರಿಹಾರ ಸಿಗುತ್ತದೆ ಎನ್ನುತ್ತದೆ ಪುರಾಣ. ಆ ದೋಷ ಪರಿಹಾರಾರ್ಥವಾಗಿ ಸಿಂಹಃ ಪ್ರಸೇನ್ನಂ ಅವಧಿ, ಸಿಂಹೌ ಜಾಂಬವತಾ ಹತಃ, ಸುಕುಮಾರಕ ಮಾರೋದ, ತವಶ್ಯೇಷ ಶಮಂತಕಃ ಎಂಬ ಶ್ಲೋಕವನ್ನು ಪದೇ ಪದೇ ಪಠಿಸ ಬೇಕು ಎನ್ನುತ್ತಾರೆ ಹಿರಿಯರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Story of Shamantakamani

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more