ಉತ್ತರ ಕರ್ನಾಟಕ ವಕೀಲರ ನಿರ್ಧಾರ
ಹುಬ್ಬಳ್ಳಿ : ರಾಜ್ ಅಪಹರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಕೃಷ್ಣ ಸರ್ಕಾರವನ್ನು ಬೆಂಬಲಿಸುವ ಸಲುವಾಗಿ ಅವಳಿ ನಗರದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ಕೋರ್ಟ್ ಕಲಾಪ ಬಹಿಷ್ಕರಿಸಿದ್ದ ವಕೀಲರು ಸೋಮವಾರದಿಂದ ಕೋರ್ಟಿಗೆ ಅರ್ಧ ದಿನ ಹಾಜರಾಗುವುದಾಗಿ ತಿಳಿಸಿದ್ದಾರೆ.
ಭಾನುವಾರ ನಡೆದ ಉತ್ತರ ಕರ್ನಾಟಕ ಹೈಕೋರ್ಟ್ ಪೀಠ ಹೋರಾಟ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಬೆಳಗ್ಗೆ ಕೋರ್ಟಿಗೆ ಹಾಜರಾಗಿ, ಮಧ್ಯಾಹ್ನ ಕಲಾಪಗಳನ್ನು ಬಹಿಷ್ಕರಿಸಲು ಸಂಘ ತೀರ್ಮಾನಿಸಿತು. ಕುಂದಗೋಳ, ಶಿಗ್ಗಾಂವ, ಲಕ್ಷ್ಮೇಶ್ವರ, ನವಲಗುಂದ, ರೋಣ, ಹಾನಗಲ್, ಬಾದಾಮಿ, ನರಗುಂದ ಹಾಗೂ ಕಲಘಟಗಿ ವಕೀಲರ ಸಂಘಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಕಾರವಾರ, ಹಾವೇರಿ, ಗದಗ, ಬಾಗಲಕೋಟೆ, ಶಿರಸಿ ಹಾಗೂ ಹಿರೇಕೆರೂರು ವಕೀಲರ ಸಂಘಗಳು ಸಭೆಯ ನಿರ್ಣಯಕ್ಕೆ ಪತ್ರಗಳ ಮೂಲಕ ಬೆಂಬಲ ಸೂಚಿಸಿವೆ ಎಂದು ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಸಿ.ಆರ್. ಪಾಟೀಲ್ ತಿಳಿಸಿದರು.
ವಾಜಪೇಯಿ, ಕೃಷ್ಣ ಸರ್ಕಾರಗಳಿಗೆ ನೈತಿಕ ಬೆಂಬಲ : ಕಾಶ್ಮೀರದಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಮಸ್ಯೆ ಎದುರಿಸುತ್ತಿದ್ದಾರೆ. ವರನಟ ರಾಜ್ ಅವರನ್ನು ವೀರಪ್ಪನ್ ಒತ್ತೆಯಿಂದ ಬಿಡಿಸಿಕೊಂಡು ಬರುವ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಕೃಷ್ಣ ಈಗ ಒತ್ತಡದಲ್ಲಿದ್ದಾರೆ. ಹೀಗಾಗಿ ಅವರಿಗೆ ನೈತಿಕ ಬೆಂಬಲ ಕೊಡುವ ಉದ್ದೇಶದಿಂದ ಸಭೆ ಈ ನಿರ್ಣಯಕ್ಕೆ ಬಂದಿದೆ ಎಂದು ಪಾಟೀಲ್ ಹೇಳಿದರು.












Click it and Unblock the Notifications