ದೂರದಲ್ಲೇ ವೀರಪ್ಪನ್, ಇನ್ನಷ್ಟು ಬೇಡಿಕೆ ನಿರೀಕ್ಷೆ
ಬೆಂಗಳೂರು : ಕರ್ನಾಟಕ - ತಮಿಳುನಾಡಿನಿಂದ ಸಂಧಾನಕಾರರಾಗಿ ವೀರಪ್ಪನ್ ಬಳಿಗೆ ತೆರಳಿರುವ ನಕ್ಕೀರನ್‌ಗೋಪಾಲ್ ಮತ್ತೊಂದು ಕಂತಿನ ಬೇಡಿಕೆಗಳುಳ್ಳ ಹೊಸ ಕ್ಯಾಸೆಟ್‌ನೊಂದಿಗೆ ಮಂಗಳವಾರ ಬೆಳಗ್ಗೆ ಚೆನ್ನೈ ತಲುಪಲಿದ್ದಾರೆ ಎಂಬ ಗುಸುಗುಸು ಸೋಮವಾರ ರಾತ್ರಿ ಸುಳಿದಾಡುತ್ತಿತ್ತು.
ಆದರೆ, ಎರಡೂ ರಾಜ್ಯಗಳೂ ಬೇಡಿಕೆಯನ್ನು ಒಪ್ಪಿರುವುದರಿಂದ ಡಾ. ರಾಜ್‌ಕುಮಾರ್ ಬಿಡುಗಡೆ ಆಗೇ ಆಗುತ್ತದೆ. ವೀರಪ್ಪನ್ ತನ್ನ ಬೇಡಿಕೆಗಳನ್ನು ಸರಕಾರ ಈಡೆಸುತ್ತದೆ ಎಂಬುದನ್ನು ಆಕಾಶವಾಣಿಯಿಂದ ಕೇಳಿ ತಿಳಿದಿದ್ದಾನೆ. ಎಲ್ಲರ ಬಿಡುಗಡೆ ಆಗೇ ತೀರುತ್ತದೆ ಎಂದು ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಮಧ್ಯಾಹ್ನ ತಿಳಿಸಿದ್ದಾರೆ.
ಕರ್ನಾಟಕ ಅರಣ್ಯ ವಲಯದ ಆಸುಪಾಸಿನಲ್ಲೇ ಒತ್ತೆಯಾಳುಗಳೊಂದಿಗೆ ವೀರಪ್ಪನ್ ಇದ್ದಾನೆ ಎಂಬ ಹೊಸ ವಿಷಯದ ಹೊರತಾಗಿ ಸೋಮವಾರ ಮತ್ತಾವ ಸುದ್ದಿಯೂ ಬಂದಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಈ ಮಧ್ಯೆ ಸಂಧಾನಕಾರ ಗೋಪಾಲ್ ಹಾಗೂ ವೀರಪ್ಪನ್ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ತಲೈಮಲೈ, ದಿಂಬಂ ಅಥವಾ ಸತ್ಯಮಂಗಲ ಅರಣ್ಯ ಪ್ರದೇಶದಲ್ಲೇ ವೀರಪ್ಪನ್ ಇದ್ದಾನೆ ಎಂಬ ವದಂತಿಗಳೂ ಇವೆ. ಡಾ. ರಾಜ್‌ಕುಮಾರ್ ಅಪಹರಣವಾದ ದಿನದಿಂದಲೂ ವದಂತಿಗಳದೇ ಸಾಮ್ರಾಜ್ಯವಾಗಿದೆ.
ನಗರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದೆ, ಅಲ್ಲಿ ಬೆಂಕಿ ಹಚ್ಚಲಾಗಿದೆ, ಇಲ್ಲಿ ಬಸ್ಸಿಗೆ ಕಲ್ಲು ತೂರಲಾಗಿದೆ ಎನ್ನುವ ವದಂತಿಗಳ ಜತೆಗೆ ವೀರಪ್ಪನ್ ಬೇಡಿಕೆಗಳು, ವೀರಪ್ಪನ್ ಇರುವ ಅಡಗುತಾಣ ಎಲ್ಲವೂ ವದಂತಿಗಳ ತೆಕ್ಕಿಗೆ ಸಿಲುಕಿವೆ. ಈಗ ವೀರಪ್ಪನ್, ರಾಜ್ ಹಾಗೂ ಇತರರೊಂದಿಗೆ ಗಾಜನೂರು ಬಳಿ ಇರುವ ಗ್ರಾನೈಟ್ ಉದ್ಯಮಿಯಾಬ್ಬರಿಗೆ ಸೇರಿದ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾನೆ ಎಂಬುದೂ ಸೇರಿದೆ.
ವೀರಪ್ಪನ್ ಈಗ ಗಾಜನೂರು ಸಮೀಪದ 15 ಕಿಲೋ ಮೀಟರ್ ವ್ಯಾಪ್ತಿಯಲ್ಲೇ ಇರುವ ಮನೆಯಾಂದರಿಂದ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂಬ ಬಗ್ಗೆ ನಮಗೆ ಮಾಹಿತಿ ದೊರಕಿದೆ ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸಹ ದೃಢಪಡಿಸಿದ್ದಾರೆ.
ಡಾ. ರಾಜ್ ಹಾಗೂ ಇತರರು ಮರಳಿ ಬರುವ ತನಕ ವದಂತಿಗಳದೇ ಕಾರುಭಾರು ಎಂಬುದರಲ್ಲಿ ಅನುಮಾನವಿಲ್ಲ. ಈಗ ಸರಕಾರ ವೀರಪ್ಪನ್ ಸಹಚರರ ವಿರುದ್ಧದ ಟಾಡಾ ಮೊಕದ್ದಮೆಗಳನ್ನು ಕೈಬಿಟ್ಟು, ಅವರನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ರಾಜ್ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಮಧ್ಯೆ ರಾಜಕುಮಾರ್ ಅವರ ತೋಟದ ಕೂಲಿ ಕಾರ್ಮಿಕರಿಂದಲೇ ವೀರಪ್ಪನ್, ರಾಜ್‌ಕುಮಾರ್ ಅವರ ಬಗ್ಗೆ ಪೂರ್ಣ ಮಾಹಿತಿ ಸಂಗ್ರಹಿಸಿ ಅವರನ್ನು ಭೀಮನ ಅಮಾವಾಸ್ಯೆಯಂದು ಅಪಹರಿಸಿದ ಎಂದೂ ಹೇಳಲಾಗುತ್ತಿದೆ. ರಾಜಕುಮಾರ್ ಅಪಹರಣಾ ನಂತರ ಕೆಲವು ಕೂಲಿ ಕಾರ್ಮಿಕರು ಕಾಣೆಯಾಗಿದ್ದಾರೆ ಎಂಬ ವದಂತಿಗಳೂ ಇವೆ.












Click it and Unblock the Notifications