• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಲಾರ : ಈಗ ನಿರಾಭರಣ ಸುಂದರಿ

By Super
|

ವಿಶ್ವವಿಖ್ಯಾತ ಕೊಲಾರದ ಚಿನ್ನದ ಗಣಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಅವಸಾನ ಹತ್ತಿರವಾಗಿದ್ದರೂ ಕುಟುಕು ಜೀವ ಕೊನೆಯುಸಿರು ಎಳೆಯಲು ಹೆಣಗಾಡುತ್ತಿದೆ. ಏಷ್ಯಾದಲ್ಲಿಯೇ ಅಂತ್ಯತ ಪುರಾತನವೂ ಹಾಗೂ ಅತ್ಯಂತ ಆಳವಾದ ಗಣಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಿನ್ನದ ಗಣಿ ಇನ್ನೇನು ಬಾಗಿಲು ಮುಚ್ಚುತ್ತಿದೆ ಎಂಬ ಸುದ್ದಿಯ ಬೆನ್ನಲ್ಲೇ ಮರುಜೀವಕ್ಕೆ ಚುಚ್ಚುಮದ್ದು ನೀಡುವ ಪ್ರಯತ್ನಗಳು ಆರಂಭವಾಗಿವೆ.

ಕೇಂದ್ರ ಸರಕಾರದ ಆರ್ಥಿಕ ಆದೇಶದಂತೆ ಗಣಿ ಏಪ್ರಿಲ್‌ ಒಂದಕ್ಕೇ ಮುಚ್ಚಬೇಕಿತ್ತು. ತತ್ಸಂಬಂಧವಾಗಿ ಔಪಚಾರಿಕ ಪ್ರಕಟಣೆ ಹೊರಬೀಳಬೇಕಿತ್ತು. ಆದರೆ ಈಗ ಸಂಸತ್‌ ಸದಸ್ಯರ ನಿಯೋಗವೊಂದು ಗಣಿಗೆ ಭೇಟಿ ನೀಡಲಿದೆ ಎಂಬ ಬಲ್ಲಮೂಲಗಳ ಸುದ್ದಿಯಿಂದ ಸ್ವರ್ಣನಗರಿಯಲ್ಲಿ ವಿದ್ಯುತ್‌ ಸಂಚಲನ ಆರಂಭವಾಗಿದೆ. ನೀರಿನಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿಯೇ ಆಸರೆ ಎಂಬಂತೆ ಈ ಸುದ್ದಿಯಿಂದ ಗಣಿ ಉಳಿದೀತೆಂಬ ಆಶಾಭವನೆ ಮೂಡಿದೆ.

ಇತಿಹಾಸ : ಕೋಲಾರದ ಚಿನ್ನದ ಗಣಿಗೆ 120 ವರ್ಷಗಳ ಅಧಿಕೃತ ಇತಿಹಾಸವಿದೆ. ಅಧಿಕೃತವಾಗಿ ಈ ಗಣಿ ಆರಂಭವಾದದ್ದು, 1880ರಲ್ಲಿ. ಆದರೆ ಇಲ್ಲಿನ ಗಣಿಗಾರಿಕೆಗೆ ಸಾವಿರಾರು ವರ್ಷಗಳ ಇತಿಹಾಸವೇ ಇದೆ.

1880ರಲ್ಲಿ ಜಾನ್‌ ಟೇಲರ್‌ ಅಂಡ್‌ ಸನ್ಸ್‌ ಕಂಪೆನಿಯು ಮೈಸೂರ್‌ ಮೈನ್ಸ್‌ ಎಂಬ ಹೆಸರಿನಲ್ಲಿ ಪ್ರಾರಂಭಿಸಿದ ಈ ಪೀತಲೋಹದ ಗಣಿ 1956ರ ವರೆಗೂ ಅದೇ ಕಂಪನಿಗೆ ಚಿನ್ನದ ಮಳೆಯನ್ನೇ ಸುರಿಸಿತು. 1956ರಲ್ಲಿ ಈ ಕಂಪೆನಿಯನ್ನು ಮೈಸೂರು ಸರಕಾರದ ವಶಕ್ಕೆ ಒಪ್ಪಿಸಲಾಯಿತು. 1962ರಲ್ಲಿ ಕೇಂದ್ರ ಸರಕಾರ ಈ ಗಣಿಯನ್ನು ವಹಿಸಿಕೊಂಡು ಭಾರತ್‌ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ ಎಂದು ಮರುನಾಮಕರಣ ಮಾಡಿತು.

ಗಣಿ 1979ರವರೆಗೆ ಲಾಭದಾಯಕವಾಗಿ ಕಾರ್ಯ ನಿರ್ವಹಿಸಿತು. 1980ರಿಂದ ನಷ್ಟಕ್ಕೆ ಒಳಗಾದ ಈ ಗಣಿ ಮತ್ತೆ ಲಾಭದ ಹೆಸರನ್ನೇ ಕೇಳಲಿಲ್ಲ. ಸತತವಾಗಿ ನಷ್ಟವನ್ನು ಅನುಭವಿಸಿದ ಈ ಗಣಿಯ ಹೆಗಲಮೇಲೀಗ ನೂರಾರು ಕೋಟಿ ರುಪಾಯಿಗಳ ಸಾಲದ ಹೊರೆಯಿದೆ. ಈ ಹೊರೆಯನ್ನು ಇಳಿಸಲಾಗದೆ ಅನಿವಾರ್ಯವಾಗಿ ಗಣಿಗೆ ಚರಮಗೀತೆ ಹಾಡಲೇ ಬೇಕಾಗಿ ಬಂದಿದೆ.

ಈವರೆಗೆ ಗಣಿಯಲ್ಲಿ ಸುಮಾರು 40 ಸಾವಿರ ಕೋಟಿ ರುಪಾಯಿ ಮೌಲ್ಯದ 80 ಲಕ್ಷ ಕಿಲೋಗ್ರಾಂ ಚಿನ್ನವನ್ನು ಉತ್ಪಾದಿಸಲಾಗಿದೆ. ಒಂದು ಕಾಲದಲ್ಲಿ ರಾಷ್ಟ್ರದ ಬೊಕ್ಕಸವನ್ನು ಶ್ರೀಮಂತಗೊಳಿಸುತ್ತಿದ್ದ ಗಣಿ ರಾಷ್ಟ್ರದ ಬೊಕ್ಕಸವನ್ನು ಬರಿದು ಮಾಡುವ ಸ್ಥಿತಿ ತಲುಪಿದೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿಗ್ರಾಂಗೆ 400 ರಿಂದ 450 ರುಪಾಯಿಗಳಾದರೆ ಈ ಗಣಿಯಲ್ಲಿ ಈಗ ಪ್ರತಿ ಗ್ರಾಂ ಚಿನ್ನ ಉತ್ಪಾದಿಸಲು ತಗಲುತ್ತಿರುವ ವೆಚ್ಚ ಸುಮಾರು 2000 ರುಪಾಯಿ.

ಕಳೆದ 20 ವರ್ಷಗಳಲ್ಲಿ 200 ಕೋಟಿ ರುಪಾಯಿಗಳಿಗೂ ಅಧಿಕ ನಷ್ಟ ಅನುಭವಿಸಿದ ಭಾರತ್‌ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ ಬ್ಯಾಂಕುಗಳಿಗೆ ಪಾವತಿಸಬೇಕಾಗಿರುವ ಮೊತ್ತವೇ 200 ಕೋಟಿ ರುಪಾಯಿಗಳು. ವಿದ್ಯುತ್‌ ಬಾಕಿ ಸುಮಾರು 25 ಕೋಟಿ ರುಪಾಯಿ.

ಪ್ರಾರಂಭದ ದಿನಗಳಲ್ಲಿ ಪ್ರತಿ ಟನ್‌ ಅದಿರಿಗೆ 8 ರಿಂದ 10 ಗ್ರಾಂನಷ್ಟು ದೊರೆಯುತ್ತಿದ ಶುದ್ಧ ಚಿನ್ನದ ಪ್ರಮಾಣ ಈಗ 1ರಿಂದ 2 ಗ್ರಾಂಗೆ ಕುಸಿದಿದೆ. ಮಿಗಿಲಾಗಿ ಬಹಳ ಆಳದಿಂದ ಚಿನ್ನವನ್ನು ಹೊರತೆಗೆಯ ಬೇಕಾಗಿರುವ ಕಾರಣ ಉತ್ಪಾದನಾ ವೆಚ್ಚ ನೂರ್ಮಡಿಯಾಗಿದೆ.

ಈ ಎಲ್ಲದರ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಗಣಿಯನ್ನು ಹೊಸ ಸಹಸ್ರಮಾನದ ಏಪ್ರಿಲ್‌ ಒಂದರಿಂದ ಮುಚ್ಚುವಂತೆ ಆದೇಶ ಹೊರಡಿಸಿದೆ.

ಹಾಲಿ ಗಣಿಯಲ್ಲಿ ಕೆಲಸ ಮಾಡುವ 4200ರಷ್ಟು ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಅಥವಾ ಏಪ್ರಿಲ್‌ ಒಂದರಿಂದ ಸೇವೆಯಿಂದಲೇ ವಜಾ ಎಂಬ ಎರಡು ಅವಕಾಶ ನೀಡಲಾಗಿತ್ತು. ಕೆಲವು ನೌಕರರು ಸ್ವಯಂ ನಿವೃತ್ತಿ ಘೋಷಿಸಿದ್ದಾರೆಂಬ ವರದಿಗಳೂ ಇವೆ. ಇವರ ಸಂಖ್ಯೆ ಕೇವಲ 100ರ ಗಡಿಯಾಚೆ ಈಚೆ ಇದೆ. ಕೇಂದ್ರ ಸರಕಾರವಂತೂ 2000-01ನೇ ಸಾಲಿನಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆ ಮುಂದುವರಿಸಲು (ಸುರಕ್ಷತೆಯ ಕಾರ್ಯಕ್ರಮಗಳ ವಿನಾ) ಯಾವುದೇ ರೀತಿಯ ಧನ ಸಹಾಯವನ್ನು ಮುಂದುವರಿಸುವುದಿಲ್ಲ ಎಂದು ಆಡಳಿತ ಮಂಡಳಿಗೆ ಸ್ಪಷ್ಟಪಡಿಸಿದೆ.

ಗಣಿಯಲ್ಲಿ ಕೆಲಸ ಮಾಡುವ ಬಹಳಷ್ಟು ಮಂದಿ ನಿರಕ್ಷರಸ್ಥರಾಗಿದ್ದು, ಗಣಿಯ ಕೆಲಸದ ವಿನಾ ಮತ್ತೇನೂ ಅರಿಯದ ಅವರು ಗಣಿ ಮುಚ್ಚಿದರೆ ಮುಂದೇನು ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಇವರನ್ನು ಕೆಲವು ಸ್ವಾರ್ಥ ಸಾಧಕರು ತಪ್ಪುದಾರಿಗೂ ಎಳೆದಿದ್ದಾರೆ.

ಗಣಿ ಮುಚ್ಚುವುದರ ವಿರುದ್ಧ ಹೋರಾಟ ನಡೆಸಿದ, ಯಾವುದೇ ಕಾರಣಕ್ಕೂ ಗಣಿ ಮುಚ್ಚಲು ಬಿಡುವುದಿಲ್ಲ ಎಂದು ಹೇಳುತ್ತಿದ್ದ ಜನನಾಯಕರು ಪರಿಸ್ಥಿತಿ ತಮ್ಮ ಕೈಮೀರಿದೆ ಎಂಬುದನ್ನು ಅರಿತ ನಂತರ ಗಂಭೀರ ಮೌನ ತಳೆದಿದ್ದಾರೆ. ಆದರೂ ಅಲ್ಲಿ ಇಲ್ಲಿ ಗಣಿ ಮುಚ್ಚುವ ಬಗ್ಗೆ ರಾಜ್ಯಾದ್ಯಂತ ವಿರೋಧದ ಕೂಗು ಕೇಳಿಬಂದಿದೆ. ದೆಹಲಿಯಲ್ಲಿ ನಡೆದ ಅಧಿಕಾರಿಗಳ - ಕಾರ್ಮಿಕ ನಾಯಕರ ಸಭೆಯಲ್ಲಿ ಸಂಸತ್‌ ಸದಸ್ಯ ಕೆ.ಎಚ್‌. ಮುನಿಯಪ್ಪ ಅವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಗಣಿಯ ಇಂದಿನ ಈ ಸ್ಥಿತಿಗೆ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆನಂತರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಗಣಿ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಏಪ್ರಿಲ್‌ ತಿಂಗಳ ಎರಡನೇ ವಾರ ಸಂಸತ್‌ ಸದಸ್ಯರ ನಿಯೋಗವೊಂದು ಕೋಲಾರ ಗೋಲ್ಡ್‌ ಫೀಲ್ಡ್ಸ್‌ಗೆ ಭೇಟಿ ನೀಡಲಿದೆ ಎಂಬ ಬಲ್ಲಮೂಲಗಳನ್ನು ಆಧರಿಸಿದ ಸುದ್ದಿ ಹೊರಬಿದ್ದಿದೆ. ಈ ಸುದ್ದಿಯಿಂದ ನಿಸ್ತೇಜವಾಗಿದ್ದ ಕೆ.ಜಿ.ಎಫ್‌ನಲ್ಲಿ ಸಂಚಲನ ಉಂಟಾಗಿದೆ.

ಗಣಿ ಮುಚ್ಚುವ ವಿಚಾರ ಇಂದಿನದೇನಲ್ಲ. 1883ರಲ್ಲೇ ಗಣಿ ಮುಚ್ಚುವ ಕೂಗು ಅಂದಿನ ಪಾಲುದಾರರ ಸಭೆಯಲ್ಲಿ ಪ್ರತಿಧ್ವನಿಸಿತ್ತು. ಕಂಪೆನಿಯನ್ನು ಮುಚ್ಚಿ ಬಂಡವಾಳವನ್ನು ಪಾಲುದಾದರಿಗೆ ಹಂಚುವ ಪ್ರಸ್ತಾಪವೂ ಆಗಲೇ ಬಂದಿತ್ತು. ಆದರೆ ಇದನ್ನು ಜಾನ್‌ ಟೇಲರ್‌ ಬಲವಾಗಿ ಪ್ರತಿರೋಧಿಸಿದರು. ಅವರಿಗೆ ಮತ್ತಿಬ್ಬರ ಬೆಂಬಲವೂ ಆಗ ದೊರೆತಿತ್ತು.

ಅಂದು ಈ ಟೇಲರ್‌ ಅವರು ಪ್ರತಿಭಟನೆ ಮಾಡದಿದ್ದಿದ್ದಲ್ಲಿ ಕೋಲಾರದಲ್ಲಿ ಸ್ವರ್ಣಯುಗ ಅರಂಭವೇ ಆಗುತ್ತಿರಲಿಲ್ಲವೇನೋ.

ಆದರೆ ಇಂದು ಗಣಿ ಮುಚ್ಚದಂತೆ ತಡೆಯುವರು ಇಲ್ಲ. ತಡೆಯಲೂ ಆಗದಂತ ಪರಿಸ್ಥಿತಿ ಬಂದಿದೆ. ಗಣಿ ಮುಚ್ಚುವಂತಾಗಿರುವುದಕ್ಕೆ ಆಡಳಿತ ಮಂಡಲಿಯ ದುರಾಡಳಿತವೇ ಕಾರಣ ಎಂದು ಗಣಿ ಕಾರ್ಮಿಕರು ದೂರುತ್ತಿದ್ದಾರೆ.

1980ರಲ್ಲಿ ಗಣಿ ನಷ್ಟಕ್ಕೆ ಒಳಗಾದಾಗಲೇ ಆಡಳಿತ ಮಂಡಲಿ ಎಚ್ಚೇತ್ತಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದು ಕಾರ್ಮಿಕರ ಅಳಲು. ಆದರೆ ಅತಿ ಆಳದಿಂದ ಚಿನ್ನ ತೆಗೆಯುವ ಯಾವುದೇ ಗಣಿ ಅರ್ಥಿಕವಾಗಿ ಸದೃಢವಾಗಿರಲು ಸಾಧ್ಯವಿಲ್ಲ ಎಂಬುದು ಆಡಳಿತ ಮಂಡಳಿಯ ವಾದ.

ದಕ್ಷಿಣ ಆಫ್ರಿಕಾದ ಕೆಲವು ಗಣಿಗಳನ್ನು ಬಿಟ್ಟರೆ ಇಷ್ಟು ಆಳದಲ್ಲಿ ಚಿನ್ನವನ್ನು ಉತ್ಪಾದಿಸುವ ಗಣಿ ಎಂಬ ಹೆಗ್ಗಳಿಕೆಗೂ ಕೋಲಾರ ಚಿನ್ನದ ಗಣಿ ಪಾತ್ರವಾಗಿದೆ.

1970-80ರ ಸಾಲಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರಿದಾಗ ಈ ಗಣಿ ಲಾಭ ಕಂಡಿತ್ತು. ಆನಂತರ ಕಂಡಿದೆಲ್ಲ ಬರೀ ನಷ್ಟ ಮಾತ್ರ.

ಹೀಗಾಗಿ ಗಣಿ ಈಗ ಸರಕಾರದ ಆದೇಶದಂತೆ ಮುಚ್ಚಲೇ ಬೇಕು. ಆದರೆ ಸರಕಾರವಾಗಲೀ, ಆಡಳಿತ ಮಂಡಲಿಯಾಗಲೀ ಇಲ್ಲಿನ ನೌಕರರಿಗೆ ಪುನರ್ವಸತಿ ಕಲ್ಪಿಸುವ ಇಲ್ಲವೇ ಪರ್ಯಾಯ ಉದ್ಯೋಗದ ಬಗ್ಗೆ ಚಿಂತಿಸಿಲ್ಲ. ಬದಲಾಗಿ ನೌಕರರಿಗೆ ಸ್ವಯಂ ನಿವೃತ್ತಿ ಅಥವಾ ಕೆಲಸದಿಂದ ವಜಾ ಎಂಬ ಎರಡು ಅವಕಾಶ. ಸ್ವಯಂ ನಿವೃತ್ತಿಯ ಲಾಭವೂ ಆಶಾದಾಯಕವಾಗೇನೂ ಇಲ್ಲ. ನೌಕರ ಸ್ವಯಂ ನಿವೃತ್ತಿ ಪಡೆದರೆ ಆತನಿಗೆ ದೊರಕುವುದು ಕೇವಲ 45 ದಿನಗಳ ಸಂಬಳ ಮಾತ್ರ. ನೌಕರರು ಸ್ವಯಂ ನಿವೃತ್ತಿ ಒಪ್ಪದಿದ್ದರೆ ಅವರಿಗೆ ವಜಾ ನಂತರ ದೊರಕುವುದು ಕೇವಲ 15 ದಿನಗಳ ಸಂಬಳವಷ್ಟೇ ಎಂದು ಆಡಳಿತ ಮಂಡಲಿ ಎಚ್ಚರಿಸಿದೆ ಕೂಡ.

ಕಸದಿಂದ ರಸ

ಕಾರ್ಮಿಕ ಸಂಘಟನೆಗಳು ಮಂಡಳಿಯ ಈ ನಿರ್ಧಾರದಿಂದ ಬೇಸತ್ತಿವೆ. 1992ರಿಂದಲೂ ವೇತನ ಪರಿಷ್ಕರಿಸದ ಮಂಡಳಿ, ಕಂಪನಿ ಮುಚ್ಚುವುದನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಆರೋಪಿಸಿವೆ. ನಮಗೆ ವೇತನ ಪರಿಷ್ಕರಣೆ ಆದರೆ ಆಗ ನಾವು ಸ್ವಯಂ ನಿವೃತ್ತಿ ಒಪ್ಪಿಕೊಳ್ಳ ಬಹುದು ಎಂಬುದು ಅವರ ಅಭಿಪ್ರಾಯ. ಮಿಗಿಲಾಗಿ ಚಿನ್ನವನ್ನು ಬೇರ್ಪಡಿಸಿದ ಮೇಲೆ ನಿರುಪಯುಕ್ತ ಎಂದು ನಗರದ ಸುತ್ತಲೂ ಸುರಿಯಲಾಗಿರುವ ಸಯನೈಡ್‌ ದಿಬ್ಬ ಎಂದೇ ಕರೆಯಲಾಗುವ ದಿಬ್ಬದಿಂದ ಮತ್ತೆ ಚಿನ್ನ ತೆಗೆಯ ಬಹುದಾಗಿದ್ದು, (ಈ ಕೆಲಸ ಅಲ್ಪ ಪ್ರಮಾಣದಲ್ಲಿ ನಡೆಯುತ್ತಿದೆ) ಕಸದಿಂದ ರಸ ತೆಗೆಯುವ ಈ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಆಡಳಿತ ಮಂಡಳಿ ಪ್ರಾರಂಭಿಸಿದರೆ ಇಲ್ಲಿನ ನೌಕರರಿಗೆ ಇನ್ನೂ ಹನ್ನೆರಡು ವರ್ಷ ಕೆಲಸ ನೀಡ ಬಹುದು ಎಂಬುದು ಕಾರ್ಮಿಕ ನಾಯಕರೊಬ್ಬರ ಅಭಿಪ್ರಾಯ.

ಅಲ್ಲದೆ ಗಣಿ ಉತ್ಪಾದಿಸುವ ವಿಂಡರ್ಸ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದು ಆಡಳಿತ ಮಂಡಳಿ ಇದರ ಉತ್ಪಾದನೆ ಮುಂದುವರಿಸಿದರೆ ಆ ವರ್ಗದ ಕಾರ್ಮಿಕರಿಗಾದರೂ ಕೆಲಸ ಇರುತ್ತದೆ ಎಂಬುದು ಅವರ ಕಾರ್ಮಿಕ ಕಳಕಳಿ.

ಎಚ್ಚೆತ್ತ ಆಡಳಿತ ಮಂಡಲಿ

ಹೀಗೆ ಗಣಿಯ ಇಂದಿನ ಸ್ಥಿತಿಗೆ ಆಡಳಿತ ಮಂಡಳಿಯೇ ಕಾರಣ ಎಂದು ಸರ್ವತ್ರ ಟೀಕೆಗಳು ಬಂದಿರುವ ಹಿನ್ನೆಲೆಯಲ್ಲಿ ಏಕಾಏಕಿ ಎಚ್ಚೆತ್ತಿರುವ ಆಡಳಿತ ಮಂಡಳಿ ಏಪ್ರಿಲ್‌ 3ರ ಸೋಮವಾರದಿಂದ ಎರಡು ತಿಂಗಳ ಕಾಲ ಈಗಿನ ಉತ್ಪಾದನೆಯನ್ನು ದುಪ್ಪಟ್ಟು ಮಾಡಲು, ತನ್ಮೂಲಕ ಮೇ 16ರಂದು ಬಿಐಎಫ್‌ಆರ್‌ ನೀಡಲಿರುವ ಅಂತಿಮ ವರದಿಯಲ್ಲಿ ಗಣಿ ಮುಚ್ಚದಿರುವಂತೆ ನೋಡಿಕೊಳ್ಳಲು ಸರ್ವ ಪ್ರಯತ್ನ ಮುಂದುವರಿಸಿದೆ.

ಈ ವಿಷಯದಲ್ಲಿ ಕಾರ್ಮಿಕ ಸಂಘಟನೆಗಳೂ ಹಿಂದೆ ಬಿದ್ದಿಲ್ಲ. ಅವೂ ಕೂಡ ಸಂಸದರ ನಿಯೋಗ ನಗರಕ್ಕೆ ಭೇಟಿ ನೀಡಿದಾಗ, ಗಣಿ ಮುಚ್ಚದಂತೆ ಒತ್ತಾಯಿಸುವುದಲ್ಲದೆ, ಗಣಿಯನ್ನು ಲಾಭದಾಯಕವಾಗಿ ನಡೆಸಲು ಪರ್ಯಾಯ ಕ್ರಮಗಳನ್ನು ಹಾಗೂ ಗಣಿ ಅಭಿವೃದ್ಧಿಗೆ ಬೇಕಾದ ಕ್ರಮಗಳನ್ನು ಕುರಿತು ಚರ್ಚಿಸಲು ಸರ್ವ ಸಿದ್ಧತೆ ನಡೆಸಿದೆ.

ಜನತೆಗೆ ಶಾಪವಾಗಿರುವ ಸಯನೈಡ್‌ ದಿಬ್ಬ

ಗಣಿಯೇನೋ ಮುಚ್ಚುವ ಹಂತ ತಲುಪಿದೆ ಆದರೆ ಊರಿನ ಸುತ್ತ 10 ಕಿ.ಮೀ ಉದ್ದ , 120 ಅಡಿ ಎತ್ತರ ಹಾಗೂ 200 ಅಡಿ ಅಗಲಕ್ಕೆ ಸುರಿಯಲಾಗಿರುವ 40 ಮಿಲಿಯ ಟನ್‌ ನಿರುಪಯುಕ್ತ ಮಣ್ಣಿನ ರಾಶಿ ಸಾರ್ವಜನಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು ಇವುಗಳನ್ನು ಸಯನೈಡ್‌ ದಿಬ್ಬಗಳೆಂದೇ ಕರಯಲಾಗುತ್ತಿವೆ.

ಬೇಸಿಗೆಯಲ್ಲಂತೂ ನಗರಾದ್ಯಂತ ಹಬ್ಬುವ ಇದರ ಧೂಳು ಆಸ್ತಮಾ, ಅಲರ್ಜಿ, ಉಸಿರಾಟದ ತೊಂದರೆಗಳಿಗೆ ಕಾರಣವಾಗಿದೆ.

ಗಣಿಯಲ್ಲಿ ಪ್ರತಿ ಟನ್‌ ಮಣ್ಣಿನಲ್ಲಿ 3 -4 ಗ್ರಾಂ ಚಿನ್ನ ದೊರಕುತ್ತಿದ್ದ ಸಂದರ್ಭದಲ್ಲೂ ಅದನ್ನು ಬೇರ್ಪಡಿಸದೆ ಇಲ್ಲಿ ತಂದು ಸುರಿಯಲಾಗಿದೆ. ಈಗ ಈ ದಿಬ್ಬದಿಂದಲೇ ಮತ್ತೇ ಚಿನ್ನ ತೆಗೆದರೂ ಪ್ರತಿ ಟನ್‌ ಮಣ್ಣಿನಲ್ಲಿ ಸರಾಸರಿ 0.88 ಗ್ರಾಂ ಚಿನ್ನ ದೊರಕುವುದೆಂಬುದು ತಜ್ಞರ ಲೆಕ್ಕಾಚಾರ.

ಒಟ್ಟಿನಲ್ಲಿ ಗೋಲ್ಡ್‌ ಸಿಟಿ ಎಂದು ಖ್ಯಾತವಾಗಿದ್ದ ನಗರ ಇಂದು ಗೋಸ್ಟ್‌ ಸಿಟಿಯಂತಾಗಿದೆ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಏಪ್ರಿಲ್‌ ಅಂತೂ ಕೆ.ಜಿ.ಎಫ್‌. ನಗರವಾಸಿಗಳ ಪಾಲಿಗೆ ಕರಾಳ ಮಾಸವಾಗಿದೆ. ಗಣಿ ಮುಚ್ಚಿದರೆ ಗತಿಯೇನು? ಎಂಬುದು ಕಾರ್ಮಿಕರ ಆತಂಕವಾದರೆ, ಸಯನೈಡ್‌ ದಿಬ್ಬದಿಂದ ಆಗಬಹುದಾದ ಹಾನಿಯ ಬಗ್ಗೆ ಹಲವರಲ್ಲಿ ಚಿಂತೆ ಕಾಡುತ್ತಿದೆ.

ಸಯನೈಡ್‌ ದಿಬ್ಬದಿಂದ ಚಿನ್ನ ವನ್ನು ಲಾಭದಾಯಗವಾಗಿ ಮತ್ತೆ ತೆಗೆಯ ಬಹುದೆಂದಾದರೆ, ಈ ಬಗ್ಗೆ ಗಣಿಯ ಆಡಳಿತ ಮಂಡಳಿ ಗಂಭೀರವಾಗಿ ಚಿಂತಿಸಿದರೆ ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಾರು.

ತಮ್ಮ ಗಣಿಯನ್ನು ಉಳಿಸಿಕೊಳ್ಳಲು ಆಡಳಿತ ಮಂಡಳಿ ಹಾಗೂ ಕಾರ್ಮಿಕರು ಹಗಲು ರಾತ್ರಿ ಎನ್ನದೆ ದುಡಿದು, ಅದನ್ನು ಲಾಭದಾಯಕ ಗಣಿಯನ್ನಾಗಿ ಪರಿವರ್ತಿಸಿದರೆ, ಕನ್ನಡನಾಡು ಚಿನ್ನದನಾಡಾಗೇ ಉಳಿದು. ಕೋಲಾರದಲ್ಲಿ ಸ್ವರ್ಣಯುಗ ಪುನರ್ಜನ್ಮ ಪಡೆದರೂ ಪಡೆಯಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
karnataka, kolar, bgml, india gold reserves, law and order, kannada, gold mines in india,

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more