ಮೋದಿ ಕನಸಿನ ರಾಷ್ಟ್ರೀಯ ಶಿಕ್ಷಣ ನೀತಿಗೆ ರಾಜ್ಯದಲ್ಲೇ ಒದಗಿತು ದುಃಸ್ಥಿತಿ!
ಬೆಂಗಳೂರು, ಆ. 19: ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಯಾವ ಪೂರ್ವ ತಯಾರಿ ಇಲ್ಲದೇ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯನ್ನು ಪದವಿ ಹಂತದಲ್ಲಿಈ ಸಾಲಿನಿಂದಲೇ ಅನುಷ್ಠಾನಕ್ಕೆ ತರಲು ಉನ್ನತ ಶಿಕ್ಷಣ ಇಲಖೆ ಆದೇಶಿಸಿದೆ. ಸಿದ್ಧತೆ ಇಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಲಾಗದೇ ಕಾಲೇಜುಗಳು ಒದ್ದಾಡುತ್ತಿವೆ. ದೇಶದ ಅತ್ಯುತ್ತಮ ಯೋಜನೆಯನ್ನು ಹಳ್ಳ ಹಿಡಿಸುವ ಎಲ್ಲಾ ಲಕ್ಷಣಗಳು ರಾಜ್ಯದಲ್ಲಿ ಗೋಚರಿಸುತ್ತಿದೆ.
ಸ್ವಾತಂತ್ರ್ಯ ಬಂದ ಬಳಿಕ ರಾಷ್ಟ್ರೀಯ ಶಿಕ್ಷಣದಲ್ಲಿ ಯಾವುದೇ ಮಹತ್ವದ ಬದಲಾವಣೆ ತಂದಿರಲಿಲ್ಲ ತಂತ್ರಜ್ಞಾನ, ಕೌಶಲ್ಯ, ಉದ್ಯೋಗ ಆಧಾರಿತ ಶಿಕ್ಷಣ ಕಲಿಸುವ ನಿಟ್ಟಿನಲ್ಲಿ ರಾಷ್ಟ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ್ದು, ಅದನ್ನು ಸಮರ್ಥ ರೀತಿಯಲ್ಲಿ ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದರು. ದೇಶದ ಶಿಕ್ಷಣ ಪದ್ದತಿಯಲ್ಲಿ ಅಮೂಲಗ್ರ ಬದಲಾವಣೆ ತರುವ ಉದ್ದೇಶದಿಂದಲೇ ಈ ಯೋಜನೆ ಅನುಷ್ಠಾನ ಮಾಡಲು ಪ್ರಧಾನಿ ಸೂಚನೆ ನೀಡಿದ್ದರು. ಕೊರೊನಾ ಸೋಂಕು ಶಿಕ್ಷಣ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಭೀರಿದ ಕಾರಣದಿಂದ ರಾಷ್ಟ್ರೀಯ ಶಿಕ್ಷಣ ನೀತಿ- 2020 ಅನುಷ್ಠಾನ ನೆನೆಗುದಿಗೆ ಬಿದ್ದಿತು. ಇದೀಗ ಕೊರೊನಾ ನಡುವೆ ಪದವಿ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಉನ್ನತ ಶಿಕ್ಷಣ ಸಚಿವರು ನಾಂದಿ ಹಾಡಿದ್ದಾರೆ. ಕೆಲ ಕಾಲೇಜುಗಳು ಮುಂದಿನ ವರ್ಷದಿಂದ ಜಾರಿ ಮಾಡುವ ಸಲಹೆ ಕೊಟ್ಟರು ಉನ್ನತ ಶಿಕ್ಷಣ ಸಚಿವರು ತಲೆ ಕೆಡಿಸಿಕೊಂಡಿಲ್ಲ. ಆದರೆ, ಪ್ರಾಥಮಿಕ ಹಂತದಲ್ಲಿ ಯೋಜನೆ ಸಮರ್ಥ ಅನುಷ್ಠಾನ ಸಂಬಂಧ ತಜ್ಞರ ಸಮಿತಿ ರಚಿಸಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತನ್ನ ಪ್ರಬುದ್ಧತೆ ಮೆರೆದಿದ್ದಾರೆ.

ಉನ್ನತ ಶಿಕ್ಷಣ ಸಚಿವರ ನಿರ್ಧಾರಕ್ಕೆ ಅಪಸ್ವರ
ಕೊರೊನಾ ಸೋಂಕಿನ ಹೊಡೆತದಿಂದ ರಾಜ್ಯದಲ್ಲಿ ಇನ್ನೂ ಶಿಕ್ಷಣ ಸಂಸ್ಥೆಗಳು ಚೇತರಿಸಿಕೊಂಡಿಲ್ಲ. ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅವಕಾಶ ಕೊಟ್ಟಿಲ್ಲ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಪದವಿ ಹಂತದಲ್ಲಿ ಜಾರಿಗೆ ತರುವಂತೆ ಉನ್ನತ ಶಿಕ್ಷಣ ಸಚಿವರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆತುರದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದ್ದು, ಬಹುತೇಕ ಕಾಲೇಜುಗಳು ಹೊಸ ನೀತಿ ಅಳವಡಿಸಿಕೊಳ್ಳಲಾಗದೇ ಒದ್ದಾಡುತ್ತಿವೆ. ಯಾವ ಪೂರ್ವ ತಯಾರಿ ಇಲ್ಲದೇ ಅನುಷ್ಠಾನ ಮಾಡುತ್ತಿರುವುದರಿಂದ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಬರಲಿದೆ ಎಂದು ಕಾಲೇಜು ಆಡಳಿತ ಮಂಡಳಿಗಳ ಸಲಹೆ ನೀಡಿದರು ಅವಕ್ಕೆ ಸೊಪ್ಪು ಹಾಕಿಲ್ಲ. ಕೊರೊನಾ ಸೋಂಕು ಇರಲಿ, ಬರಲೀ, ಇಲ್ಲದೇ ಹೋಗಲಿ ಈ ವರ್ಷ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರಬೇಕು ಎಂದು ಉನ್ನತ ಶಿಕ್ಷಣ ಸಚಿವರು ಪಟ್ಟು ಹಿಡಿದು ಕೂತಿದ್ದಾರೆ. ಹೀಗಾಗಿ ತರಾತುರಿಯಲ್ಲಿ ಪದವಿ ಹಂತದಲ್ಲಿ ಈ ವರ್ಷದಿಂದಲೇ ಜಾರಿಯಾಗುತ್ತಿದೆ.

ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮುಂದಿನ ವರ್ಷ
ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಳ್ಳಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮುಂದಾಗಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುವ ಸಂಬಂಧ ತಜ್ಞರ ಸಮಿತಿ ರಚಿಸಿದ್ದು, ಅ ಸಮಿತಿ ಶಿಫಾರಸು ಅನ್ವಯ ಸುಲಭವಾಗಿ ಯೋಜನೆ ಜಾರಿಗೆ ತರಲು ಪ್ರಾಯೋಗಿಕವಾಗಿ ಚಿಂತನೆ ನಡೆಸಿದ್ದಾರೆ. ಅದೇ ಹಾದಿಯಲ್ಲಿ ಯೋಜನೆಯನ್ನು ಸಮರ್ಥವಾಗಿ ಕಾರ್ಯಗತ ಗೊಳಿಸಲು ಪ್ಲಾನ್ ರೂಪಿಸಿದ್ದಾರೆ. " ಕೊರೊನಾ ಸೋಂಕಿನಿಂದ ಶಿಕ್ಷಣ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬಿದ್ದಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಬೇಕು. ಅದಕ್ಕಾಗಿ ಸಾಕಷ್ಟು ಸಿದ್ಧತೆ ತಯಾರಿ ನಡೆಸಬೇಕಿದೆ. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ರಚಿಸಿದ್ದು , ಅದರ ಶಿಫಾರಸಿನಂತೆ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ತಜ್ಞರಿಂದ ಅಧ್ಯಯನ ಮಾಡುವ ಸಣ್ಣ ಪ್ರಯತ್ನ ಇಲ್ಲ
ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಯಾವ ರೀತಿ ಮಾಡಬೇಕು. ರಾಜ್ಯದಲ್ಲಿ ಎಷ್ಟು ವಿದ್ಯಾರ್ಥಿಗಳು ಈ ನೀತಿ ವ್ಯಾಪ್ತಿಗೆ ಒಳಪಡುತ್ತಾರೆ. ಅವರಿಗೆ ಬೇಕಿರುವ ಮೂಲ ಸೌಕರ್ಯಗಳು ಕಾಲೇಜುಗಳಲ್ಲಿ ಇವೆಯೇ? ಸಮರ್ಥವಾಗಿ ಈ ಯೋಜನೆಯನ್ನು ಅನುಷ್ಠಾನ ಮಾಡಲು ಸರ್ಕಾರ ಏನು ಮಾಡಬೇಕು. ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿ ಸಮುದಾಯಕ್ಕೆ ಯಾವ ರೀತಿ ಪ್ರಯೋಜನವಾಗಲಿದೆ ಎಂಬುದರ ಬಗ್ಗೆ ತಜ್ಞರ ಸಮಿತಿಯಿಂದ ಅಧ್ಯಯನ ಮಾಡಿಸಿ ಒಂದು ವರ್ಷ ತಡವಾದರೂ ಸಮರ್ಥ ಅನುಷ್ಠಾನಕ್ಕೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಯನ್ನು ಮತ್ತು ಕಾಲೇಜುಗಳಲ್ಲಿ ಸಿದ್ಧತೆ ಮಾಡುವ ದಿಟ್ಟ ನಿರ್ಧಾರವನ್ನು ಉನ್ನತ ಶಿಕ್ಷಣ ಸಚಿವರು ಕೈಗೊಳ್ಳಬೇಕಿತ್ತು. ಆದರೆ, ದೇಶದಲ್ಲಿ ನಾವೇ ಅನುಷ್ಠಾನ ಮಾಡಿದ ಮೊದಲ ರಾಜ್ಯ ಎಂಬ ಕಿರೀಟ ಧರಿಸಿ ಕೇಂದ್ರ ನಾಯಕರನ್ನು ಮೆಚ್ಚಿಸಲು ಯೋಜನೆ ಮೂಲ ಉದ್ದೇಶವನ್ನೇ ಮರೆತು ಆತುರದಲ್ಲಿ ಜಾರಿಗೆ ತರುತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವರ ಆತುರದ ಆದೇಶವನ್ನು ಅನುಷ್ಠಾನ ಮಾಡಲಾಗದೇ ಕಾಲೇಜುಗಳು ವಿಲ ವಿಲ ಒದ್ದಾಡುತ್ತಿವೆ.

ಸಾರ್ವಜನಿಕರಲ್ಲಿ ಅರಿವು ಮೂಡಿಸಿಲ್ಲ
ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿಲ್ಲ. ಯೋಜನೆ ಮೂಲ ಉದ್ದೇಶ, ಅದರ ಸದ್ಭಳಕೆಯ ಬಗ್ಗೆ ಯಾರಿಗೂ ತಿಳಿಸಿಲ್ಲ. ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಿರುವ ಕಾರಣ ಅದಕ್ಕೆ ತಕ್ಕ ಹಾಗೇ ಕಾಲೇಜುಗಳು ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿಲ್ಲ. ಈ ವರ್ಷದಿಂದಲೇ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ದಾಖಲಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯ ಕ್ರಮವಿಲ್ಲ. ಪಠ್ಯ ಪುಸ್ತಕಗಳು ಇಲ್ಲ. ಕಲಾ ವಿದ್ಯಾರ್ಥಿಗಳು ಒಂದು ವಿಷಯ ವಿಜ್ಞಾನ ಆಯ್ಕೆಗೆ ಅವಕಾಶ ನೀಡಿರುವ ಕಾರಣ ಪ್ರಾಧ್ಯಾಪಕರ ಸಮಸ್ಯೆ ತಲೆದೊರಲಿದೆ. ಕೊರೊನಾ ಸಂಕಷ್ಟದಿಂದ ಹಳೇ ಪಠ್ಯ ಕ್ರಮ ಬೋಧನೆ ಮಾಡುವುದೇ ಕಷ್ಟವಾಗಿರುವ ಕಾಲದಲ್ಲಿ ಹೊಸ ಶಿಕ್ಷಣ ನೀತಿ ಜಾರಿ ಹೆಸರಿನಲ್ಲಿ ಅದರ ಮೂಲ ಆಶಯಕ್ಕೆ ಧಕ್ಕೆ ತರಲಾಗುತ್ತಿದೆ ಎನ್ನುತ್ತಿವೆ ಕಾಲೇಜು ಆಡಳಿತ ಮಂಡಳಿಗಳು.
ರಾಷ್ಟ್ರೀಯ ಶಿಕ್ಷಣ ನೀತಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಆದರೆ ಇಷ್ಟು ಆತರದಲ್ಲಿ ಜಾರಿ ತುಂಬಾ ಕಷ್ಟ. ಶಿಕ್ಷಣ ವ್ಯವಸ್ಥೆಯ ಮೂಲ ವಾಸ್ತವಿಕತೆಯನ್ನು ಅರ್ಥ ಮಾಡಿಕೊಳ್ಳಬೇಕು. ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಕಾಲೇಜುಗಳು ಬದಲಾಗಲು ಕನಿಷ್ಠ ಕಾಲಾವಕಾಶ ಬೇಕು ಎಂದು ಕೋಲಾರ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕರು ತಿಳಿಸಿದ್ದಾರೆ. ಇನ್ನು NEP ಅಂದ್ರೆ ಬಹುತೇಕ ಶಿಕ್ಷಕರಿಗೆ ಗೊತ್ತಿಲ್ಲ. ಕಾಲೇಜುಗಳಲ್ಲಿ ಯಾವ ಪೂರ್ವ ತಯಾರಿಯೂ ನಡೆದಿಲ್ಲ. ಇದರ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ವಿದ್ಯಾರ್ಥಿಗಳ ಜತೆ ಯಾವ ರೀತಿ ಸಂವಹನ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯೂ ಇಲ್ಲ ಎನ್ನುತ್ತಾರೆ ಮತ್ತೊಂದು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರು. ಕೇವಲ ಮೊದಲ ವರ್ಷದ ಪದವಿ ವಿದ್ಯರ್ಥಿಗಳು ಮಾತ್ರ ಹೊಸ ಶಿಕ್ಷಣ ನೀತಿ ವ್ಯಾಪ್ತಿ ಗೆ ಒಳಪಡಲಿದ್ದಾರೆ ಎಂದು ಗೊತ್ತು. ಆದರೆ ಅವರ ಪಠ್ಯ ಕ್ರಮ, ಪುಸ್ತಕ ಪೂರೈಕೆ ಯಾವುದೂ ಆಗಿಲ್ಲ. ಇದರ ಬಗ್ಗೆ ದೊಡ್ಡ ಗೊಂದಲ ಏರ್ಪಟ್ಟಿದೆ ಎಂದು ಪ್ರಾಧ್ಯಾಪಕರು ಇರುವ ವಾಸ್ತವನ್ನು ಬಿಚ್ಚಿಟ್ಟಿದ್ದಾರೆ.

ಮೊದಲ ವರ್ಷದ ಪದವಿಯಿಂದ ಜಾರಿ
ರಾಜ್ಯದಲ್ಲಿರುವ ಎಲ್ಲಾ ವಿಶ್ವ ವಿದ್ಯಾಲಯಗಳ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ. ಈ ಕುರಿತು ಸುತ್ತೋಲೆ ಹೊರಡಿಸಿದೆ. ಪ್ರಸಕ್ತ ಸಾಲಿನಲ್ಲಿ 2020- 21 ನೇ ಸಾಲಿನಲ್ಲಿ ಮೊದಲ ವರ್ಷದ ಪದವಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ನೂತನ ಶಿಕ್ಷಣ ನೀತಿ ವ್ಯಾಪ್ತಿಗೆ ಒಳಪಡಲಿದ್ದಾರೆ. ಮೂರು ವರ್ಷದ ಪದವಿ ಶಿಕ್ಷಣವನ್ನು ನೂತನ ನೀತಿ ಪ್ರಕಾರ ನಾಲ್ಕು ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಬಿಎ ಆನರ್ಸ್, ಬಿಎಸ್‌ಸಿ ಆನರ್ಸ್, ಬಿಕಾಂ ಆನರ್ಸ್, ಬಿಬಿಎಂ ಆನರ್ಸ್ ಎಂಬ ಪದವಿ ಲಭ್ಯವಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಮೊದಲ ವರ್ಷದ ಪದವಿಗೆ ದಾಖಲಾತಿ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಮುಗಿಸಲು ಸೂಚಿಸಲಾಗಿದೆ. ಆದರೆ ಪಠ್ಯಕ್ರಮ ಕೈಗೆ ಸೇರಿಲ್ಲ. ಪಠ್ಯ ಪುಸ್ತಕದ ಮುದ್ರಣವೂ ಆಗಿಲ್ಲ. ಇನ್ನು ಪಠ್ಯ ಬೋಧನೆ ವಿದ್ಯಾರ್ಥಿಗಳಿಗೆ ವಿಷಯ ಆಯ್ಕೆ ಬಗ್ಗೆಯೂ ಸ್ಪಷ್ಟತೆ ಇಲ್ಲದಂತಾಗಿದೆ. ಆತುರದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿರುವ ಕಾರಣ ನಾನಾ ಸಮಸ್ಯೆಗಳು ತಲೆ ದೋರಿವೆ.

ಕಾಲೇಜುಗಳಲ್ಲಿ ತಯಾರಿ ನಡೆದಿಲ್ಲ
ನೂತನ ಶಿಕ್ಷಣ ನೀತಿ ಪ್ರಕಾರ ನೂತನ ಪದವಿ ನಾಲ್ಕು ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಮೊದಲ ವರ್ಷ ಕಲಿತು ಪದವಿ ಬಿಟ್ಟವರಿಗೆ ಸರ್ಟಿಫಿಕೇಟ್ ಕೋರ್ಸ್ ಎಂದು ಪರಿಗಣಿಸಲಾಗುತ್ತದೆ. ಎರಡನೇ ವರ್ಷದ ಪದವಿ ಮುಗಿಸಿದವರಿಗೆ ಡಿಪ್ಲೋಮಾ ಪದವಿ ಎಂದು ಸರ್ಟಿಫಿಕೇಟ್ ನೀಡಲಾಗುತ್ತದೆ. ಮೂರನೇ ವರ್ಷ ಓದಿದವರಿಗೆ ಪದವಿ, ನಾಲ್ಕನೇ ವರ್ಷ ಅಧ್ಯಯನ ಮಾಡಿದವರಿಗೆ ಆನರ್ಸ್ ಎಂದು ಪರಿಗಣಿಸಿ ಅಂಕಪಟ್ಟಿ ನೀಡಲಾಗುತ್ತದೆ. ವಿಶೇಷ ಎಂದರೆ ಬಿಎ ಪದವಿಗೆ ವಿಷಯ ಆಯ್ಕೆ ಮಾಡಿಕೊಂಡು ಎರಡು ವರ್ಷ ಓದಿದ ಬಳಿಕ ವಾಣಿಜ್ಯ, ವಿಜ್ಞಾನ ವಿಷಯವನ್ನು ಕೂಡ ಅಯ್ಕೆ ಮಾಡಿಕೊಳ್ಳಲು ನೂತನ ಶಿಕ್ಷಣ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕಲಾ ವಿಭಾಗ ಓದಿದವರು ವಿಜ್ಞಾನ ಆಯ್ಕೆಗೂ ಅವಕಾಶ ನೀಡಿರುವುದು ವಿಶೇಷ. ಇದರಿಂದ ಕಲಾ ವಿಭಾಗದವರು ವಿಜ್ಞಾನ ಆಯ್ಕೆಗೆ, ವಿಜ್ಞಾನ ಓದುತ್ತಿರುವರು ಕಲಾ ವಿಭಾಗ ಆಯ್ಕೆಗೂ ಅವಕಾಶ ನೀಡಿರುವುದು ಹೊಸ ಶಿಕ್ಷಣ ನೀತಿ ವಿಶೇಷ. ಒಂದು ವಿಷಯ ಆಯ್ಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭಾರತೀಯ ನಾಗರಿಕ ಸೇವೆ, ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷೆ ತೆಗೆದುಕೊಳ್ಳುವರಿಗೆ ಹೆಚ್ಚು ಅನುಕೂಲವಾಗಲಿದೆ. ಆದರೆ ಆತುರದಲ್ಲಿ ಯೋಜನೆ ಅನುಷ್ಠಾನಕ್ಕೆ ತರುತ್ತಿರುವ ಕಾರಣದಿಂದ ವಿಷಯ ಆಯ್ಕೆಗೆ ಕಾಲೇಜುಗಳೇ ತಯಾರಿ ಮಾಡಿಕೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳಿಗೂ ಹಾಗೂ ಕಾಲೇಜುಗಳಿಗೆ ಸಮಸ್ಯೆ ಎದುರಾಗುವ ಜತೆಗೆ ಯೋಜನೆ ಮೂಲ ಉದ್ದೇಶಕ್ಕೆ ಧಕ್ಕೆ ಬರಲಿದೆ ಎಂದೇ ಹೇಳಲಾಗುತ್ತಿದೆ.

ಎರಡು ವರ್ಷಕ್ಕೆ ಕನ್ನಡ ಕಡ್ಡಾಯ ಎಂಬ ಭರವಸೆ
ನೂತನ ಶಿಕ್ಷಣ ನೀತಿ ಪ್ರಕಾರ ಭಾಷಾ ವಿಷಯ ಅಧ್ಯಯನವನ್ನು ಕೇವಲ ಒಂದು ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಅದರೆ, ಬಹುತೇಕ ರಾಜ್ಯಗಳು ಸ್ಥಳೀಯ ಭಾಷಾ ವಿಷಯಕ್ಕೆ ಆದ್ಯತೆ ನೀಡಿಲ್ಲ ಎಂಬ ಅಪಸ್ವರ ಕೇಳಿ ಬಂದಿತ್ತು. ರಾಜ್ಯದಲ್ಲಿ ಸಹ ಕನ್ನಡ ಪ್ರಾಧ್ಯಾಪಕರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಖಂಡಿಸಿದ್ದರು. ಕನಿಷ್ಠ ಎರಡು ವರ್ಷಕ್ಕೆ ಕನ್ನಡ ಭಾಷಾ ವಿಷಯವನ್ನು ಓದಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು. ಭಾಷೆ ಎಂಬುದು ಸಂಸ್ಕೃತಿ. ಬದುಕನ್ನು ನಿರ್ಧರಿಸಿವುದು ಸಾಹಿತ್ಯ ಮತ್ತು ಜ್ಞಾನ. ಮಾತೃ ಭಾಷೆ ಬಿಟ್ಟು ಅನ್ಯ ಭಾಷೆಯಲ್ಲಿ ವಿದ್ಯಾರ್ಥಿಗಳು ಸಮರ್ಥವಾಗಿ ಕಲಿಯಲು ಸಾಧ್ಯವಿಲ್ಲ. ಹೀಗಾಗಿ ಎರಡು ವರ್ಷಕ್ಕೆ ಕನ್ನಡ ಭಾಷಾ ಅಧ್ಯಯನವನ್ನು ಉಳಿಸಿಕೊಳ್ಳಬೇಕು ಎಂಬ ಬೇಡಿಕೆ ಇಟ್ಟಿದ್ದರು. ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ್ದ ಉನ್ನತ ಶಿಕ್ಷಣ ಸಚಿವ ಸಿ.ಎನ್ ಅಶ್ವತ್ಥ್ ನಾರಾಯಣ ಎರಡು ವರ್ಷ ಕನ್ನಡ ಭಾಷಾ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಇನ್ನು ಎನ್ಇಪಿ ಜಾರಿ ಸಂಬಂಧ ಮೈಸೂರು ವಿವಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಸಭೆ ಕರೆದಿದ್ದು, ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಸರ್ಕಾರಿ ಉಪನ್ಯಾಸಕರೇ ಇಲ್ಲ
ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿತ್ತಿದೆ. ರಾಜ್ಯದಲ್ಲಿರುವ ವಿಶ್ವ ವಿದ್ಯಾಲಯಗಳ ಪರಿಸ್ಥಿತಿ ಅವಲೋಕಿಸಿದರೆ ಶೇ. 20 ರಿಂದ 30 ರಷ್ಟು ಪ್ರೊಫೇಸರ್ ಗಳು ಖಾಯಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದ ಶೇ. 80 ರಷ್ಟು ಪ್ರಾಧ್ಯಾಪಕರು ಅತಿಥಿ ಉಪನ್ಯಾಸಕರು. ಮೈಸೂರು ವಿಶ್ವ ವಿದ್ಯಾಲಯದ ಪರಿಸ್ಥಿತಿ ಹೀಗಿರುವಾಗ ಇನ್ನು ಕರ್ನಾಟಕದ ಇತರೆ ವಿಶ್ವ ವಿದ್ಯಾಲಯಗಳ ಪರಿಸ್ಥಿತಿ ಕೂಡ ಭಿನ್ನವೇನಲ್ಲ. ಸರ್ಕಾರ ಯಾವ ತಯಾರಿ ಇಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾಯೋಗಿಕ ಜಾರಿಗೆ ಮುಂದಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ಹಲವು ಸಮಸ್ಯೆಗಳನ್ನು ಪರಿಹರಿಸಿ ಸಾಧಕ ಬಾಧಕಗಳ ಬಗ್ಗೆ ಚರ್ಚೆಸಿ ಅನುಷ್ಠಾನ ಮಾಡಬೇಕಿತ್ತು ಎನ್ನುತ್ತಾರೆ ಕಾಲೇಜು ಪ್ರಾಧ್ಯಾಪಕರು.












Click it and Unblock the Notifications