ಮೋದಿ ಗುಜರಿ ನೀತಿಗೆ ರಾಜ್ಯದ 40 ಲಕ್ಷ ವಾಹನ ಜಖಂ ಪಕ್ಕಾ!
ಬೆಂಗಳೂರು, ಆ. 15: ಕೇಂದ್ರ ಸರ್ಕಾರ ಜಾರಿಗೆ ತಂದಿರುವ "ಗುಜರಿ ನೀತಿ"ಗೆ ರಾಜ್ಯದಲ್ಲಿ ಆರಂಭದಲ್ಲಿಯೇ ಬರೋಬ್ಬರಿ 40 ಲಕ್ಷಕ್ಕೂ ಅಧಿಕ ವಾಹನಗಳು ಗುಜರಿ ಪಾಲಾಗಲಿವೆ.
ಹೊಸ ಗುಜರಿ ನೀತಿಯಿಂದಾಗಿ ಹದಿನೈದು ವರ್ಷ ಮೇಲ್ಪಟ್ಟ ಬಸ್, ಕಾರು, ಆಟೋ, ಮ್ಯಾಕ್ಸಿ ಕ್ಯಾಬ್ ಸೇರಿದಂತೆ ಸುಮಾರು 9 ಲಕ್ಷ ಕ್ಕೂ ಅಧಿಕ ವಾಹನಗಳು ಗುಜರಿ ಕೇಂದ್ರಗಳ ಮುಂದೆ ನಿಲ್ಲಬೇಕಾಗುತ್ತದೆ. ಇನ್ನು ಸರಿ ಸುಮಾರು 30 ಲಕ್ಷಕ್ಕೂ ಅಧಿಕ ದ್ವಿಚಕ್ರ ವಾಹನಗಳು ಗುಜರಿ ತೂಕಕ್ಕೆ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯ ಸಾರಿಗೆ ಸಂಸ್ಥೆಯ ಅನೇಕ ಬಸ್‌ಗಳು ಕೂಡ ಈ ಗುಜರಿ ನೀತಿಯ ವ್ಯಾಪ್ತಿಗೆ ಒಳಗಾಗಲಿವೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಸುದ್ದಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೇಂದ್ರ ಗುಜರಿ ನೀತಿ 2021 ಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಹಳೇ ವಾಹನಗಳನ್ನು ಗುಜರಿಗೆ ಹಾಕುವ ಮೂಲಕ ಆಟೋ ಮೊಬೈಲ್ ಕ್ಷೇತ್ರವನ್ನು ಉತ್ತೇಜಿಸುವುದು ಹಾಗೂ ಪರಿಸರ ಮಾಲಿನ್ಯವನ್ನು ತಡೆಯುವುದು ಈ ಯೋಜನೆಯ ಉದ್ದೇಶ. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಈ ಗುಜರಿ ನೀತಿಯನ್ನು ಘೋಷಣೆ ಮಾಡಿದ್ದರು.

ಜನರನ್ನು ಹಿಂಡುವ ಮೂರು ನೀತಿ: ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ದರ 105 ರೂ. ಡೀಸೆಲ್ ದರ 95 ರೂ. ಪೆಟ್ರೋಲ್ ಡೀಸಲ್ ದರ ಏರಿಕೆಯಿಂದ ವಾಹನ ಖರೀದಿಸಲು ಮಾತ್ರವಲ್ಲ ಓಡಿಸಲು ಆಗದ ಸ್ಥಿತಿ ಎದುರಾಗಿದೆ. ಇನ್ನೊಂದಡೆಗೆ ಎಲೆಕ್ಟ್ರಾನಿಕ್ ಕಾರುಗಳನ್ನು ಖರೀದಿಸೋಣ ಎಂದರೆ ಅವುಗಳದ್ದು ಕೈಗೆಟುಕದ ದುಬಾರಿ ಬೆಲೆ. ಹೋಗಲಿ ಹಳೇ ವಾಹನ ಇಟ್ಟುಕೊಳ್ಳೋಣ ಎಂದರೆ ಗುಜರಿ ನೀತಿಯ ಕಂಟಕ. ಅಂತೂ ಸರ್ಕಾರದ ಈ ಮೂರು ನೀತಿಯಿಂದಾಗಿ ದೇಶದ ಸಂಚಾರ ವ್ಯವಸ್ಥೆಗೆ ಸಂಚಾರಕಾರ ಒದಗಿದೆ. ಬಡ ಮತ್ತು ಮಧ್ಯಮ ವರ್ಗದ ಜನ ಜೀವನದಲ್ಲಿ ವಾಹನ ಎಂದು ಸುಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ರಾಜ್ಯದಲ್ಲಿ ಫಿಟ್ನೆಸ್ ಕೇಂದ್ರಗಳು: ಈ ಗುಜರಿ ನೀತಿ ಜಾರಿಗೆ ತರಲು ಅಗತ್ಯವಿರುವ ಸ್ವಯಂ ಚಾಲಿತ ವಾಹನ ಫಿಟ್ನೆಸ್ ತಪಾಸಣಾ ಕೇಂದ್ರಗಳನ್ನು ತೆರೆಯುವ ಕಾರ್ಯಕ್ಕೆ ಕೇಂದ್ರ ಸಾರಿಗೆ ಮಂತ್ರಾಲಯ ಚಾಲನೆ ನೀಡಿ ಆಗಿದೆ. ಹೀಗಾಗಿ ಒಂದು ವರ್ಷದಲ್ಲಿ ಈ ಯೋಜನೆಯನ್ನು ಜಾರಿಗೆ ಬರಲಿದ್ದು ಹಳೇ ವಾಹನ ಮಾಲೀಕರು ಲಕ್ಷಾಂತರ ವಾಹನ ಕಳೆದುಕೊಳ್ಳುವ ಸಂಕಷ್ಟ ಎದುರಿಸುವಂತಾಗಿದೆ.
ಹೊಸ ಗುಜರಿ ನೀತಿ ಹಳೇ ವಾಹನ ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬದುಕಿಗಾಗಿ ಖರೀದಿಸಿರುವ ವಾಹನಗಳನ್ನು ಕಳೆದುಕೊಳ್ಳಬೇಕಾಗಿದೆ. ಇಲ್ಲವೇ ಗುಜರಿಗೆ ಹಾಕಿ ಅವರು ಕೊಡುವ ಬಿಡಿಗಾಸಿನಿಂದ ಅನಿವಾರ್ಯವಾಗಿ ಹೊಸ ವಾಹನ ಖರೀದಿಸಬೇಕಾಗುತ್ತದೆ. ಅರ್ಹತೆ ಪಡೆದ ಎಲ್ಲಾ ವಾಹನಗಳನ್ನು ಗುಜರಿಗೆ ಹಾಕಿಬಿಟ್ಟರೆ, ಸಾರಿಗೆ ಉದ್ಯಮದ ಮೇಲೂ ನಕಾರಾತ್ಮಕ ಪರಿಣಾಮ ಬೀರಲಿದೆ. ಈಗಿನ ಕೊರೊನಾ ಪರಿಸ್ಥಿತಿಯಲ್ಲಿ ಹಳೇ ವಾಹನ ರಿಪೇರಿ ಮಾಡಿಸಲು ಆಗದ ಸ್ಥಿತಿಯಲ್ಲಿ ಜನರಿದ್ದಾರೆ. ಇನ್ನು ಹೊಸ ಕಾರು ಖರೀದಿ ಮಾಡವುದೇ ಕಷ್ಟವಾಗಲಿದೆ.

ಹಸಿರು ತೆರಿಗೆ ವ್ಯಾಪ್ತಿಗೆ 60 ಲಕ್ಷ ವಾಹನ?: ದೇಶದಲ್ಲಿ ಸಂಚರಿಸುವ ವಾಣಿಜ್ಯ ವಾಹನಗಳು ಎಂಟು ವರ್ಷ ಅವಧಿಯಾದ ಕೂಡಲೇ ಸರ್ಕಾರ ನಡೆಸುವ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಬೇಕು. ಬ್ರೇಕ್,ಇಂಜಿನ್ ದಕ್ಷತೆ, ವಾಹನ ಗುಣಮಟ್ಟ, ಎಲ್ಲವನ್ನೂ ತಪಾಸಣೆ ನಡೆಸಬೇಕು. ಚಾಲನೆಗೆ ಅರ್ಹತೆ ಪಡೆದರೂ ಹಳೇ ವಾಹನಗಳು ಶೇ. 10 ರಿಂದ 15 ರಷ್ಟು ಹಸಿರು ತೆರಿಗೆ ಪಾವತಿಸಬೇಕು. ಗುಜರಿ ನೀತಿ ಅನುಷ್ಠಾನ ಮಾಡಿದ ಕೂಡಲೇ ರಾಜ್ಯದಲ್ಲಿ ಸುಮಾರು 60 ಲಕ್ಷ ವಾಹನಗಳು ಹಸಿರು ತೆರಿಗೆ ವ್ಯಾಪ್ತಿಗೆ ಒಳಪಡಲಿವೆ ಎಂದು ಸಾರಿಗೆ ಇಲಾಖೆಯ ಉನ್ನತ ಮೂಲಗಳು ಸ್ಪಷ್ಟಪಡಿಸಿದೆ. ಇನ್ನು ಬಿಳಿ ಬೋರ್ಡ್ ನ ವಾಹನಗಳಿಗೆ ಹಸಿರು ತೆರಿಗೆ ಕಾಲಮಿತಿ ಸ್ವಲ್ಪ ವಿಸ್ತರಿಸಿದ್ದು ಹನ್ನೆರಡು ವರ್ಷದ ಬಳಿಕ ಪಾವತಿಸಬೇಕಾಗುತ್ತದೆ. ಇದನ್ನು ಉಲ್ಲಂಘನೆ ಮಾಡಿದರೆ ಪ್ರಕರಣ ದಾಖಲಿಸಿ ವಾಹನವನ್ನು ಸಾರಿಗೆ ಅಧಿಕಾರಿಗಳು ಜಪ್ತಿ ಮಾಡಲಿಕೊಳ್ಳಲಿದ್ದಾರೆ. ಇರುವ ನಿಯಮಗಳನ್ನೇ ತೋರಿಸಿ ಕೊಳ್ಳೆ ಹೊಡೆಯುತ್ತಿರುವ ಸಾರಿಗೆ ಅಧಿಕಾರಿಗಳ ಪಾಲಿಗೆ ಮಾತ್ರ ಗುಜರಿ ನೀತಿ ದೊಡ್ಡ ಉಡುಗೊರೆ!
ಸಂಚಾರ ವೆಚ್ಚ ದುಬಾರಿ: ರಾಜ್ಯದಲ್ಲಿ ಹೊಸ ಗುಜರಿ ನೀತಿಯಿಂದಾಗಿ ಜನ ಸಾಮಾನ್ಯ ವ್ಯಕ್ತಿಯ ಜೇಬಿಗೂ ಕತ್ತರಿ ಬೀಳಲಿದೆ. ಈಗಲೇ ಭಾರತದಲ್ಲಿ ಜನ ಸಾಮಾನ್ಯರು ಅತಿ ದುಬಾರಿ ವೆಚ್ಚವನ್ನು ಪ್ರಯಾಣಕ್ಕೆ ವ್ಯಯಿಸಬೇಕಾಗಿದೆ. ಗುಜರಿ ನೀತಿಯಿಂದಾಗಿ ಹಳೇ ವಾಹನಗಳು ಗುಜರಿ ಸೇರಿ ಹೊಸ ವಾಹನ ಖರೀದಿಸಿ ಸಾರಿಗೆ ಸೌಲಭ್ಯ ಕಲ್ಪಿಸುವ ಸಂಸ್ಥೆಗಳು ಅನಿವಾರ್ಯವಾಗಿ ಪ್ರಯಾಣ ದರವನ್ನು ಹೆಚ್ಚಳ ಮಾಡಬೇಕಾಗುತ್ತದೆ. ಕೆಎಸ್ಆರ್‌ಟಿಸಿ - ಬಿಎಂಟಿಸಿ ಸಾರಿಗೆ ಪ್ರಯಾಣ ದರದಲ್ಲೂ ನಿರೀಕ್ಷೆಗೂ ಮೀರಿ ಏರಿಕೆಯಾಗಲಿದೆ. ಇನ್ನು ಹಳೇ ಬೈಕ್ ಮತ್ತು ಕಾರು ನಂಬಿಕೊಂಡು ಜೀವನ ಸಾಗಿಸುತ್ತಿರುವ ಮೆಕ್ಯಾನಿಕ್‌ಗಳು ಕೂಡ ಬೀದಿಗೆ ಬೀಳಲಿದ್ದಾರೆ. ಹಳೇ ವಾಹನ ವಹಿವಾಟು ಕೇಂದ್ರ ಕೂಡ ಸಂಪೂರ್ಣ ನೆಲ ಕಚ್ಚಲಿದೆ ಎಂದು ಸಾರಿಗೆ ಕ್ಷೇತ್ರದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications