ಸಣ್ಣಕತೆ ಭಾಗ 5: ದಿಗ್ಭ್ರಮೆ ಮೂಡಿಸಿದ ರಮೇಶನ ಪತ್ರ
ಸುಜಾತೆಗೆ ತನ್ನ ಕಾಲಕೆಳಗಿನ ನೆಲ ಕುಸಿದಂತೆ ಆಗಿ, ತೂರಾಡತೊಡಗಿದಳು. ದೇಶಪಾಂಡೆಯವರೇ ಮೂರೂ ಜನರನ್ನು ಸಂಭಾಳಿಸಿ ತಮ್ಮ ಫೋನಿನಿಂದ ನಾಲ್ಕಾರು ಜನರಿಗೆ ಕಾಲ್ ಮಾಡಿ ಆಸ್ಪತ್ರೆಗೆ ಬರ ಹೇಳಿದರು.
ದಿಗ್ಭ್ರಮೆಗೊಂಡ ತಮ್ಮ ಮಗಳು, ಮಗನನ್ನು ಕಳೆದುಕೊಂಡು ಎದೆಯೊಡೆದುಕೊಂಡಿದ್ದ ತಮ್ಮ ತಂಗಿ ಲಕ್ಷ್ಮಿ, ಮಾತು ನಿಲ್ಲಿಸಿ ಭಯಪಡಿಸುತ್ತಿರುವ ತಮ್ಮ ಸ್ನೇಹಿತನೇ ಆದ ತಂಗಿಯ ಗಂಡ ಪ್ರಾಣೇಶ ಈ ಮೂವರಲ್ಲಿ ಯಾರನ್ನು ಸಮಾಧಾನ ಪಡಿಸುವುದು? ತಾವೂ ಸಮಾನದುಃಖಿಗಳೇ ಆ ವಿಷಯದಲ್ಲಿ.
ಆದರೂ ಧೈರ್ಯತಂದುಕೊಂಡು ನಿಧಾನಕ್ಕೆ "ಅಲ್ಲೋ ಪಾಣ್ಯಾ, ಏನಾತು? ಇಷ್ಟು ದಿನ ಯಾಕ ಸುಮ್ಮನಿದ್ರಿ? ಹೇಳಬೇಕ ಬ್ಯಾಡೋ ರಮೇಶ ಮನಸಿನ್ಯಾಗ ಕೊರಗ್ಲಿಕ್ಕೆ ಹತ್ಯಾನ ಅಂತಂದು?" ಅಂದಾಗ ಕುಲಕರ್ಣಿಯವರು ತಮ್ಮ ಜೇಬಿಗೆ ಕೈ ಹಾಕಿ ಕಣ್ಣೀರಿನ ಕಲೆಯಿಂದ ಕೂಡಿದ ಒಂದು ಕಾಗದವನ್ನು ತೆಗೆದು ದೇಶಪಾಂಡೆಯವರ ಕೈಗಿತ್ತು ತಾವು ಶೂನ್ಯದತ್ತ ತಿರುಗಿದರು.
" ಶ್ರೀರಾಘವೇಂದ್ರ ಪ್ರಸನ್ನ "
ತೀರ್ಥರೂಪರಿಗೆ ಮತ್ತು ಅಮ್ಮ ಇವರಿಗೆ ನಮಸ್ಕಾರಗಳು. ನಿಮ್ಮನ್ನು ಇಂಥಾ ಪರಿಸ್ಥಿತಿಯಲ್ಲಿ ಬಿಟ್ಟು ಹೋಗಹತ್ತಿರುವುದಕ್ಕೆ ದಯೆತೋರಿ ಕ್ಷಮಾ ಮಾಡಿರಿ. ನನ್ ಕಡೆ ಬ್ಯಾರೆ ಯಾವ ಉಪಾಯನೂ ಇದ್ದಿಲ್ಲ ಆದಕಾರಣ ಈ ದಾರಿ ಹಿಡದೇನಿ ನಾನು. ಹೋದ ತಿಂಗಳು ಬ್ಯಾಂಕಿನ ಎಕ್ಸಾಮು ಬರ್ದಿದ್ದು ನಿಮಗ ಗೊತ್ತs ಅದs. ಮೊನ್ನೆ ನಾಕನೇ ತಾರೀಕs ಅದರ ರಿಸಲ್ಟ ಬಂದಾವ.
ಹೋದ ಸಲೆಕಿಂತ ನಾನು ಈ ಸಲ ಭಾಳ ಛೊಲೋ ಬರೆದಿದ್ದೆ. ಈ ಸಲೆ ಮಾರ್ಕ್ಸ್ರು ಜಾಸ್ತಿನ ಬಂದಾವ ಖರೆ. ಆದರ ಶನಿಮಹರಾಯ ನನ್ನ ಬೆನ್ನು ಏರಿ ಕೂತಾಂವ ಇಳಿಯಂಗಿಲ್ಲ ಅಂತಂದ್ರ ನಾ ಅರ ಏನ ಮಾಡಲಿ? ಈ ಸಲೆ ಕಟಾಫ್ 97.2ಕ್ಕೆ ನಿಂತದ. ನಂದು 95.86 ಬಂದದ. ಹಂಗಾಗಿ ಆಶಾ ತೀರಿ ಹೋತು. ಮೊನ್ನೆ ಬಮ್ಮಾಪೂರ ಓಣಿ ಪ್ರದೀಪ ತಾಂಬ್ರೆ ಭೆಟ್ಯಾಗಿದ್ದ. ನನ್ನ ಸಂಗ್ತೀನ ಅತ ಎಕ್ಸಾಮು ಬರ್ದಿದ್ದ್ದ. 67% ಬಂದಾವ ಅತಗ. ಆದ್ರ ಸೆಲೆಕ್ಟ್ ಆಗೇ ಬಿಟ್ಟಾನ.
ನಾನs ನಾಚಿಗೀ ಬಿಟ್ಟು ಕೇಳಿದೆ ಅತಗ. ಹೆಂಗೋ ಇದು ಅಂತಂದು. ಅಂವಾ ಹೇಳಿದ. ನಂದು ಎಸ್ಸಿಎಸ್ಟಿ ಕೆಟಗರಿ ಒಳಾಗ ಸೆಲೆಕ್ಟ್ ಆಗೆದ ಅಂತಂದು. ಏನು ಅನ್ಲಿ ಇದಕ್ಕ? ನೀವs ಹೇಳರಿ. ನಿನ್ನೆ ಸೈತ ಬ್ಯಾಂಕಿನ್ಯಾಗ ಆ ಮ್ಯಾನೇಜರ ಹೇಳಿದ್ರು. ಎಸ್ಸಿಎಸ್ಟಿ ಕೋಟಾ ಆದ್ರ ಕೆಲವೊಂದು ಲೋನ್ ಬೇಗ ಆಗತಾವ ಮತ್ತು ಅದರಾಗ ಇಂಟರೆಸ್ಟ್ ರೇಟ ಸೈತ ಕಮ್ಮಿ ಇರ್ತದ ಅಂತಂದು.
ಚಿಂತಿ ಮಾಡಬ್ಯಾಡ್ರಿ ನಿಮ್ಮದೂ ಆಗತದ ಅಂತಂದು ಸೈತ ಹೇಳ್ಯಾರ ಖರೆ ಅವರು. ಆದರ ಗ್ಯಾರಂಟೀ ಆಗೇದ ನಂಗ. ನನ ಹಣೀ ಒಳಗ ಬರೇ ಫೇಲಾಗೋದ ಬರ್ದದ ಅಂತಂದು. ನನ್ ಕಡೆ ಈ ವ್ಯವಸ್ಥಾದ ವಿರುದ್ಧ ಹೋರೋಡೋ ತ್ರಾಣ ಇಲ್ಲ ಅಂತ ಅನಸ್ತದ ನಂಗ.
ಸುಜ್ಜಿ ಭಾಳ ಧೈರ್ಯಸ್ಥ ಇದ್ದಾಳ. ಅಕಿ ನನ್ ಜೊತೀಗೆ ಮಾತಾಡಕೋತ ಇದ್ರ ನಂಗ ಈ ಕೆಲಸ ಮಾಡಲಿಕ್ಕೆ ಬಿಡತಿದ್ದಿಲ್ಲ. ಹಂಗಂತಂದs ಅಕಿಗೆ ನಾನು ಒಂದು ಚಾಲೇಂಜ ಹಾಕಿ ಅಕಿನ್ನ ಇವತ್ತಿನ ಮಟ್ಟಿಗೆ ದೂರ ಇರಲಿಕ್ಕೆ ಹೇಳೇನಿ. ನಾನು ಅಕಿ ಜೊಡಿ ಇದ್ದೀನಂದ್ರ ಅಕೀ ಧೈರ್ಯ ಸೈತ ಹಾಳು ಮಾಡಿ ಹಾಕೋ ಪೈಕಿ ಇದ್ದೇನಿ ನಾನು.
ನಿಮ್ಮಿಬ್ರೀಗೆ ನಾ ಛೊಲೋ ಮಗಾ ಅಂತಂದು ಯಾವತ್ತೂ ಆಗೇ ಇಲ್ಲ. ಹಿಂಗs ನಾ ಒಬ್ಬಾಂವ ಯಲ್ಲಾರಿಗೂ ತ್ರಾಸ ಕೊಟಗೋತ ಕೂಡೋ ಬದಲಿ ನಾನs ದೂರ ಹೋದ್ರs ಸರಿ ಇರ್ತದ ಅಂತಂದು ನಂಗ ಅನಸೇದ. ಈ ತೀರ್ಮಾನ ನಿಮಗ ತ್ರಾಸನಾಗ ಇಡತದ ಸ್ವಲ್ಪ ದಿನ. ಆದ್ರ ಮುಂದ ಛೊಲೋನ ಆಗ್ತದ. ಕುಲಸ್ವಾಮಿ ನರಸಿಂಹದೇವರ ಕ್ಛಮಾ ಅರ ಸಿಗತದ ನಂಗ ಅಂತಂದು ಆಶಾ ಇಟಗೊಂಡ ಈ ತೀರ್ಮಾನ ಮಾಡೇನಿ.
ನಿಮಗೂ, ಅಮ್ಮನಿಗೂ, ರಾಘೂ ಮಾಮಾ, ಮಾಮಿಗೆ ನಮಸ್ಕಾರಗಳು. ಸುಜ್ಜಿಗೆ ನನ್ನ ಅಭಿನಂದನಪೂರ್ವಕ ಆಶೀರ್ವಾದಗಳು.
ಇತಿ
ರಮೇಶ ಪ್ರಾಣೇಶರಾವ್ ಕುಲಕರ್ಣಿ"
ಪತ್ರ ಓದಿದ ದೇಶಪಾಂಡೆಯವರಿಗೆ ಮಗಳ ಕಡೆ ನೋಡುವ ಧೈರ್ಯವಾಗಲಿಲ್ಲ.












Click it and Unblock the Notifications