• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಸಿರು ಸೀರೆ

By Staff
|

‘‘ಕೆ.ಕೆ. ನೀನು ಆಫೀಸಿಗೆ ಹೋಗಲು ಹೊತ್ತಾಗಲಿಲ್ಲವಾ?’’ ಎಂದಳು ರುಕ್ಮಿಣಿ. ‘‘ಮತ್ತೆ ನಾನು ಪಾಪುವಿನ ಸ್ಕೂಲಿಗೆ ಹೋಗಬೇಕು. ಡಿ.ಪಿ.ಎಸ್‌.ದಲ್ಲಿ ಮಕ್ಕಳಿಗೆ ಗಾಳಿ ಪಟ ಹಾರಿಸುವ ಕಾರ್ಯಕ್ರಮವಿದೆಯಂತೆ. ನಿನಗೆ ಸಾಧ್ಯವಾಗಲ್ಲ ಎಂದು ನಾನೇ ಬರುತ್ತೇನೆ ಅಂದಿದ್ದೇನೆ ಪಾಪುವಿನ ಹತ್ತಿರ’’ ಎಂದಳು ರುಕ್ಮಿಣಿ.

ದೋಸೆ ಎರೆಯುವುದರಿಂದ ತಲೆ ತಿರುಗಿಸಿ ‘‘ನಾನು ಬರುತ್ತೇನೆ’’ ಅಂದ ಕೆ.ಕೆ. ‘‘ಮತ್ತೆ ಆಫೀಸು’’ ಅಂದಳು ರುಕ್ಮಿಣಿ. ‘‘ಪರವಾಗಿಲ್ಲ, ಒಂದೆರಡು ಮೀಟಿಂಗ್‌ ಇದೆ, ಮುಂದೆ ಹಾಕುತ್ತೇನೆ. ಆದರೆ ಸಂಜೆ ಒಂದು ಮುಖ್ಯ ಮೀಟಿಂಗ್‌ ಇದೆ. ಅದಕ್ಕೆ ಹೋಗಬೇಕು’’ ಎಂದ. ಅದೇ ನಿಟ್ಟಿನಲ್ಲಿ ತನ್ನ ಸಹೋದ್ಯೋಗಿಗೆ ಫೋನು ಮಾಡಿ ‘‘ಬಾಸ್‌ಗೆ ಹೇಳುತ್ತೀಯಾ ನನಗೆ ಮೀಟಿಂಗ್‌ಗೆ ಬರಕಾಗಲ್ಲ’’ ಎಂದು ಅಂದ. ‘‘ಅರೆ, ನೀನೇ ನೇರವಾಗಿ ಫೋನು ಮಾಡು’’ ಅಂದ ಸಹೋದ್ಯೋಗಿ. ಕೆ.ಕೆ. ‘‘ಬಾಸ್‌ಗೆ ಫೋನು ಮಾಡಲಾ?’’ ಎಂದು ರುಕ್ಮಿಣಿಯನ್ನು ಕೇಳಿದ. ಮದುವೆಯಾಗಿ ಇಷ್ಟು ವರುಷಕ್ಕೆ ಆತ ಏನನ್ನೂ ಕೇಳಿರಲೇ ಇಲ್ಲ. ಈಗ ತನ್ನ ಸಲಹೆಗಾಗಿ ಕೇಳುತ್ತಿದ್ದಾನೆ ಎಂದು ಗಡಿಬಿಡಿ ಹತ್ತಿದಂತೆ ರುಕ್ಮಿಣಿ ‘ಮಾಡಲಾ’ ಎಂದಳು. ಹೇಳಿದ ಮಾತಿಗೆ ತಾನು ಹಾಗೆ ಹೇಳಬಾರದಿತ್ತೇನೊ, ಕೆ.ಕೆ. ಆಫೀಸಿಗೆ ಹೋಗಿದ್ದರೇ ಒಳ್ಳೆಯದಿತ್ತು ಎಂದು ಅನ್ನಿಸಿತು.

ಅತ್ತಲಿಂದ ಬಾಸ್‌ ‘‘ಕೆ.ಕೆ. ವಿಚಾರ ಮಾಡು, ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಬೇಕು. ಕನಿಷ್ಟ ಐದು ನೂರು ಎಕರೆಯಾದರೂ ಬೇಕು. ಇಲ್ಲಿ ಸಿಗದಿದ್ದರೆ ದೇವನಹಳ್ಳಿಯಲ್ಲಿ ಕೊಡಲಿ, ಅಲ್ಲೂ ಸಿಗದಿದ್ದರೇ ಮೈಸೂರಿನಲ್ಲಿ ಕೊಡಲಿ. ಎಸ್‌.ಇ.ಜೆಡ್‌ನಂತಹ ಯೋಗ ಪದೇ ಪದೇ ಬರುವದಿಲ್ಲ. ಅದು ಎಲ್ಲಿ ಬರುತ್ತದೆ ಎನ್ನುವದು ಇನ್ನೂ ನಿಶ್ಚಯವಿಲ್ಲ. ಎಲ್ಲಿಯಾದರೂ ಅದೂ ಬರಲಿ, ಆದರೆ ಜಾಗ ಬೇಕು. ಟ್ಯಾಕ್ಸ್‌ ಹಾಲಿಡೇ, ನಿರ್ಯಾತ್‌ ಮತ್ತು ಆಯಾತಕ್ಕೆ ಇರುವ ಬೆಂಬಲ ಎಲ್ಲವೂ ನಮಗೆ ಅನುಕೂಲವೇ. ಕನಿಷ್ಟ ಅಂದರೇ 30,000 ಕಾರಿನ ಉತ್ಪಾದನಾ ಘಟಕ ತೆಗೆಯಬಹುದು. ಇದು ದೊಡ್ಡ ಯೋಜನೆಯ ವಿಷಯ. ಬರಿ ಸ್ಟಾಪ್‌ ಪಿಕನಿಕ ಕುರಿತಾದದಲ್ಲ. ಸಾಕಷ್ಟು ಪೇಪರ್‌ ವರ್ಕ್‌ ಪೆಂಡಿಂಗ್‌ ಇದೆ... ’’ ಅಂದ.

ಕೆ.ಕೆ.ಯ ಕೈಗಳೂ ಯಾಕೋ ಕಂಪಿಸಿದವು. ಧ್ವನಿ ಯಾಕೋ ದುಃಖ ಒತ್ತಿದಂತೆ ಒಡೆದುಕೊಂಡಿತು. ತಾನು ಅತ್ತೇ ಬಿಡುತ್ತೇನೋ ಅನ್ನಿಸಿತು. ‘ನೊ ಮಾಧವನ್‌, ಇಟ್‌ ಇಸ್‌ ವೆರಿ ಇಂಪಾರ್ಟೆಂಟ್‌ ಫಾರ್‌ ಮಿ ಟು ಬಿ ವಿತ್‌ ಮೈ ಕಿಡ್‌, ಪ್ಲೀಸ್‌ ಅಂಡರ್‌ ಸ್ಟಾಂಡ್‌’ ಅಂದ. ಆ ಕಡೆ ಇದ್ದ ಬಾಸ್‌ಗೆ ಕೆ.ಕೆ. ಗದ್ಗದಿತವಾದದ್ದು ಯಾಕೆಂದು ಅರ್ಥವಾಗಿಲ್ಲ. ಮಾಧವನ್‌ ಯಾವತ್ತೂ ಕೆ.ಕೆ.ಯ ಅಷ್ಟು ಮೃದುವಾದ ಈಗ ಅತ್ತೇ ಬಿಡುತ್ತಾನೇನೋ ಎಂದು ಎನ್ನಿಸುವ ಧ್ವನಿಯನ್ನು ಕೇಳಿದ್ದೇ ಇಲ್ಲ. ಹೇಳಬೇಕೆಂದರೇ ಆತನ ದಾಷ್ಟ್ಯಕ್ಕೆ ಸ್ವತ ಅವರೇ ಹೆದರಿಕೊಂಡಿದ್ದರು. ಈಗ ಅಂಥ ಅಳುವಂತಹದ್ದನ್ನು ತಾನೇನು ಹೇಳಿದೆ ಎಂದು ಕೂಡಾ ಅರ್ಥವಾಗದೇ ‘ಸರಿ ಮಾರಾಯ ಸಂಜೆ ಆರೂವರೆಗೆ ಮೀಟಿಂಗ್‌ ಇಟ್ಟುಕೊಳ್ಳುತ್ತೇನೆ. ಅದಕ್ಕೆ ಮಾತ್ರ ಇಲ್ಲ ಎನ್ನಬೇಡಾ’ ಎಂದು ಫೋನಿಟ್ಟಿದ್ದರು ಮಹಾದೇವನ್‌.

‘ರುಕ್ಮಿಣಿ ನಾನು ನಿನ್ನ ಜೊತೆ ಬರುತ್ತೇನೆ ನಡೆ’ ಎಂದ ಕೆ.ಕೆ. ‘ಯಾಕೋ ನೀನು ಆಫೀಸಿಗೆ ಹೋದರೆ ನನಗೆ ಸಮಾಧಾನ’ ಅಂದಳು ರುಕ್ಮಿಣಿ. ಶಾಲೆಯಲ್ಲಿ ಅಪ್ಪನ ನಿರೀಕ್ಷೆಯಲ್ಲಿ ಇರದಿದ್ದ ಮಗನಿಗೆ ಅಪ್ಪನ ನೋಡಿ ವಿಚಿತ್ರ ಸಂಕೋಚ ಅನ್ನಿಸಿತು. ಇಡಿಯ ಬಯಲು ತುಂಬಿಕೊಂಡ ಗದ್ದಲದಲ್ಲಿ ಕೆ.ಕೆ.ಗೇ ಆಫೀಸಿನ ನೆನಪಾಗಲಿಲ್ಲ. ಗಾಳಿಪಟ ಹಾರಿಸಲು ಸಹಾಯ ಮಾಡುವ ಪ್ಯೂನ್‌ ಮಹಾದೇವ ಹತ್ತಿರ ಕುಶಲೋಪರಿ ಕೇಳಿದ. ಪಾಪುವನ್ನು ಟೋಯ್ಲೆಟಿಗೆ ಕರೆದುಕೊಂಡು ಹೋಗುವ ಆಯಾನ ಹತ್ತಿರ ಮಾತಿಗೆ ನಿಂತ. ಟೀಚರ್‌ ವಸುಮತಿಯ ಜೊತೆ ಹೊಸರುಚಿಯ ಬಗ್ಗೆ ಮಾತಾಡಿದ. ಎಲ್ಲ ಮುಗಿಸಿ ಮನೆಗೆ ರುಕ್ಮಿಣಿಯನ್ನು ತಿರುಗಿ ಬಿಟ್ಟು, ಬಿಡದಿ ರೋಡ್‌ ಹಿಡಿದವನಿಗೆ ಯಾಕೋ ದಿನ ಪಲ್ಲಟಗೊಂಡಂತೆ ಮತ್ತೆ ಅನ್ನಿಸಿತು.

ಕಾರಿನ ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ಎಂದಿಗಿಂತಲೂ ಪ್ರಶಾಂತವಾಗಿ ಅದು ಹೊಳೆದಂತೆ ಕಂಡಿತು. ಈವರೆಗಿನ ತನ್ನ ರೂಪವೊಂದು ತನ್ನಿಂದ ಬೇರ್ಪಟ್ಟ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡಂತೆ ಅನ್ನಿಸಿ ಮುಂದೆ ನೋಡಿದರೆ ದಾರಿಯ ಎಡಬದಿಯಲ್ಲಿರುವ ಗಾರ್ಮೆಂಟ್‌ ಫ್ಯಾಕ್ಟರಿಯ ಕೆಲಸಕ್ಕೆ ಹೋಗುವ ಹೆಂಗಳೆಯರೂ, ಅವುಗಳನ್ನು ಹಿಂಬಾಲಿಸುವ ಪುಟ್ಟ ಮಕ್ಕಳು, ಅವರ ಒಡೆದ ಬರಿಗಾಲು, ಧೂಳು, ವಾಹನದ ಹೊಗೆಯಿಂದ ಆವೃತಗೊಂಡ ಅವರ ಮುಖ ಏದೆಯಾಳದೊಳಗಿಳಿದು, ಏನೋ ಕಲಕಿದಂತಾಯ್ತು.

ಆಫೀಸಿನ ಒಳಗೆ ಕಾಲಿಟ್ಟೊಡನೆ ಪಾಪುವಿಗೆ ಬೆಳಿಗ್ಗೆ ಹಾಲು ಕೊಟ್ಟೇ ಇಲ್ಲವಲ್ಲ ಎನ್ನುವ ಸಂಶಯವೊಂದು ಭಾದಿಸಿತು. ಅದರ ಹಿಂದೆಯೇ ಬಾಸ್‌ ನಿಂದ ಫೋನು. ಎತ್ತಲೋ ಬಿಡಲೋ ಎನ್ನುವ ಸಂದಿಗ್ಧವಾಯಿತು. ಯಾವತ್ತೂ ಅನ್ನಿಸದ್ದು ಇವತ್ತು ಯಾಕೆ ಅನ್ನಿಸಿ ಫೋನ್‌ ಎತ್ತಿದ. ಬಾಸ್‌ ‘ಬಾ ಮಾರಾಯ, ಎಲ್ಲರೂ ಬಂದಿದ್ದಾರೆ, we shall prevail on this largest opportunity to create asset ಅಂದ.

ಬೋರ್ಡ್‌ ರೂಂನ ಹವಾನಿಯಂತ್ರಿತ ವಾತಾವರಣದಲ್ಲಿ ಕುಳಿತವನಿಗೆ ಇಲ್ಲಿ ನಡೆಯುತ್ತಿರುವುದಕ್ಕೂ ತನಗೂ ಯಾವ ಸಂಬಂಧವೂ ಇಲ್ಲ ಅನ್ನಿಸಿತು. ತೆರೆದುಕೊಂಡ ಈ ಸಾಮ್ರಾಜ್ಯ ವಿಸ್ತರಿಸುವ ಕನಸು ಯಾಕೋ ಯಾರೋ ಬಲವಂತದಿಂದ ಹೇರುತ್ತಿರುವ ಬಸಿರಿನಂತೆ ಅನಿಸತೊಡಗಿತು. ಈ ಕನಸಿಗೆ ತಾನು ಹಿಸ್ಸೆದಾರನೆ ಅಲ್ಲೇ ಅಲ್ಲ, ಇದಕ್ಕೂ ತನಗೂ ಯಾವ ಸಂಬಂಧವೂ ಇಲ್ಲ ಅನ್ನಿಸಿ ಇಲ್ಲಿಂದ ಎದ್ದು ಹೋಗಬೇಕು ಅನ್ನಿಸಿತು. ನೂರಾರು ಜನರ ಸಾವಿರಾರು ಎಕರೆ ನೆಲ ಒಂದು ಪವರ್‌ ಪಾಯಿಂಟ್‌ ಬುಲೆಟ್‌ ಆಗಿ ಇಲ್ಲಿ ಬಿಕರಿಯಾಗುತ್ತಿತ್ತು. ಅದರ ಜೊತೆ ಅವರ ಕನಸುಗಳು ಕೂಡ.

ಯಾಕೋ ಹಳೆಯದೆಲ್ಲ ನೆನಪಿಸಿಕೊಂಡು ಅತ್ತ ಶಂಕ್ರಮ್ಮ ನೆನಪಾದಳು. ಹಿಂದೆಯೆ ಕಣ್ಣು ಮುಚ್ಚಿದರೆ ಎಲ್ಲಿ ಹಕ್ಕಿ ಹಾರಿಬಿಡಬಹುದೋ ಎನ್ನುವ ಭಯದಲ್ಲಿ ಕಣ್ಣು ಬಿಟ್ಟುಕೊಂಡೇ ಉತ್ತರಾಯಣದಲ್ಲಿ ಸತ್ತ ಅಜ್ಜ ನೆನಪಾದ. ಅಜ್ಜನ ಶವಯಾತ್ರೆಗೆ ಕಟ್ಟಿದ ಚಟ್ಟದ ಪಕ್ಕವೇ ಕುಳಿತು ಅಜ್ಜ ಸತ್ತಿದ್ದಕ್ಕಿಂತ ಮುತ್ತೈದೆಯಾಗಿ ಸಾಯುವ ಭಾಗ್ಯ ತಪ್ಪಿ ಹೋದುದರಿಂದಲೆ ತಪ್ಪಿ ಹೋಗಿಬಿಡಬಹುದಾದ ಸ್ವರ್ಗದ ಬಾಗಿಲ ಮೆಟ್ಟಿಲುಗಳನ್ನು ನೆನನೆನಸಿ ಹಣೆ ಜಪ್ಪಿಸಿಕೊಂಡು ಅತ್ತ ಅಜ್ಜಿ ನೆನಪಾದಳು. ವೈಧವ್ಯ ಬಡಿದ ಗೋಳಿನ ಅಳುವಿನ ಮಧ್ಯವೂ ಹಸಿ ಕಟ್ಟಿಗೆ ಬೆಂಕಿ ಹಿಡಿಯದೆ, ಮುದಿ ವೈದಿಕರು ಮಂತ್ರವನ್ನು ವೇಗವಾಗಿ ಸಾಗಿಸಲಾರದೇ. ಶವದ ಕ್ರಿಯೆ ಹಿಡಿಯುವ ಕಾರ್ಯ ಎಲ್ಲವೂ ತಡವಾಗಿ, ಮಕ್ಕಳೂ, ಮೊಮ್ಮಕ್ಕಳೂ ಹಸಿದರೆ ಎಂದು ಚಿಂತಿಸುತ್ತಲೇ ಅಳುವಿನ ಮಧ್ಯವೇ ಅಮ್ಮನಿಗೆ ಮಕ್ಕಳಿಗೆ ಹಾಲು ಕೊಟ್ಟೆಯಾ, ಮೊಮ್ಮಗು ಕೆಮ್ಮುತ್ತಿದ್ದಾಳಲ್ಲಾ, ಅವಳಿಗೆ ಅಮೃತಬಳ್ಳಿಯ ಕಷಾಯ ಕೊಟ್ಟೆಯಾ. ತಂಗಿಗೆ ಜ್ವರ, ಕೆಲಸದ ರಾಮ ಔಷಧಿ ತಂದಿದ್ದಾನಾ? ಎಂದು ಸಮಷ್ಠಿಯ ಸುಖವನ್ನು ವಿಚಾರಿಸಿಕೊಂಡ ಅಜ್ಜಿಯ ಬದುಕಿನ ಆಸಕ್ತಿ ಎಂತಹದು ಎನ್ನಿಸಿತು.

ಅಜ್ಜಿಯ ವೈದವ್ಯದ ವಿಷಾದದ ಗೋಜಿನಲ್ಲಿಯೂ ಅವಳ ಕಣ್ಣಿನಲ್ಲಿ ಒಡೆದುಕೊಂಡ ಕಾಳಜಿಯ ಬೆಳಕಿನ ಬಣ್ಣ ಯಾವುದಿತ್ತು? ಎನ್ನುವುದೆಲ್ಲಾ ಈಗ ಕೆ.ಕೆಯ ತಲೆಯಲ್ಲಿ ಗಿರಕಿ ಹೊಡೆಯತೊಡಗಿತು. ಇಲ್ಲಿ ನಡೆಯುತ್ತಿರುವ ಮೀಟಿಂಗ್‌ದ ಉದ್ದೇಶವೆ ಕ್ರೂರವಾದದ್ದು ಬದುಕಿರುವದನ್ನೆಲ್ಲ ಕೊಲ್ಲುವದು ಎಂದು ಅನ್ನಿಸತೊಡಗಿತು. ಸರಕಾರಗಳ ಜೊತೆ ಶಾಮಿಲಾಗಿ ನಾವು ಕಟ್ಟಬಹುದಾದ ಬೃಹತ್‌ ಕೈಗಾರಿಕೆಗಳ ವಸಾಹತು ಕಾರಣವಾಗಿಯೆ ಬೀದಿಗೆ ಬೀಳುವ ರೈತರ, ಅವರ ಮಕ್ಕಳ, ಹೆಂಡಿರ ಗೋಳಿನ ಧ್ವನಿಯಾಂದೆ ಸ್ವಘೋಷಿತ ಸಾಧನೆಯ ಎಲ್ಲ ದನಿಯನ್ನು ಮೀರಿಸಿ ಕಿವಿಗಡಚಿಕ್ಕಿದಂತೆ ಕೆಳಿಸಿ, ಇನ್ನು ತಾಳಲಾಗದಂತೆ ಕೆ.ಕೆ. ದಡಕ್ಕನೇ ಎದ್ದು ನಿಂತ.

‘‘ನಾವು ಈ ಜಾಗಕ್ಕಾಗಿ ಅರ್ಜಿ ಹಾಕುವುದು, ಆಗುತ್ತಿರುವ ಅನ್ಯಾಯವನ್ನು ಬೆಂಬಲಿಸಿದಂತೆ. ಹಾಗಾಗಿ ಇಂತಹ ಒಂದು ಯೋಜನೆಯಿಂದ ನಾವು ದೂರವಿರಬೇಕು’’ ಅಂದ.

ನಡೆಯುತ್ತಿರುವ ಮಂತ್ರದ ಉದ್ಘೋಷ ಒಮ್ಮೆಲೇ ಸ್ತಬ್ಧವಾಗಿ ಎಲ್ಲರ ಕಣ್ಣುಗಳು ಕೆ.ಕೆ.ಯತ್ತಲೇ ತಿರುಗಿದವು. ಅವರೆಲ್ಲರ ನೋಟದಲ್ಲಿ ನಿನಗೆ ತಲೆ ಕೆಟ್ಟಿರಬಹುದು ಎನ್ನುವ, ಪೇಂಟಿಂಗ್‌ನಲ್ಲಿ ಜೋತು ಬಿದ್ದ ಮೊಲೆಗಳನ್ನು ಎವೆಯಿಕ್ಕದೆ ನೋಡುತ್ತಲುಳಿದ ನಾಯಿಗಳ ನೋಟ ಒಡೆದು ಕಂಡಿತು. ಹೊಟ್ಟೆ ತುಂಬಿಯೂ ಅವು ಹಸಿದುಕೊಂಡಂತೆ ಇದ್ದವು. ಒಂದು ಕ್ಷಣದ ನಂತರ ಮತ್ತೆ ಗದ್ದಲಗಳು ಪ್ರಾರಂಭವಾದವು.

‘ನಿನ್ನ ಸ್ವಂತ ಅಭಿಪ್ರಾಯ ನಿನ್ನಲ್ಲೇ ಇಟ್ಟುಕೊ ಮಾರಾಯ, ನಮ್ಮ ಘನ ಸರಕಾರ ಕೊಡುತ್ತಿರುವ ಜಾಗ ಅದು. ನಾವೇನು ಕಸಿದುಕೊಂಡೆವಾ? ನಾವು ಬಿಟ್ಟರೆ ಉಳಿದವರು ಬಿಡುತ್ತಾರಾ? ಸ್ವಲ್ಪ ಪ್ರಾಕ್ಟಿಕಲ್‌ ಆಗಿ ಯೋಚನೆ ಮಾಡು. ಎನಿ ವೇ ಯು ಹ್ಯಾವ್‌ ಕಟ್‌ ಎ ಗುಡ್‌ ಜೋಕ್‌’ ಎಂದು ಗದರಿ ಮತ್ತೆ ಬಾಸ್‌ ಮೀಟಿಂಗನ್ನು ಮುಂದುವರಿಸಿದ. ಉತ್ಪಾದನೆಗಳು, ಬಂಡವಾಳ ಹೂಡಿಕೆಗೆ ನಿಷ್ಠವಾಗಿರಬೇಕಾದ ನಿಯಮ. ಎಂ.ಬಿ.ಎ. ಕ್ಲಾಸಿನಲ್ಲಿ ಕಲಿತ ಗೆರಿಲ್ಲ ವಾರ್‌ ಪೇರ್‌ ಬಗ್ಗೆ, ವಿರೋಧಿಗಳ ಹತ್ತಿಕ್ಕಲು ಇರುವ ನೂರೆಂಟು ಉಪಾಯಗಳ ಬಗೆಗೆ ಪ್ರಬುದ್ಧ ಪ್ರಬಂಧಗಳ ಬರೆದ ರ್ಯಾಂಕ ಗಳಿಸಿದ ತಾನು ಯಾವ ನೆಲೆಯಲ್ಲಿ ಈ ಮಾತನಾಡಿದೆ ಎಂದು ತೋಚದೆ ನಿಧಾನವಾಗಿ ಮನೆಗೆ ಬಂದ.

ತಿರುಗಿ ಬಂದು ಬೆಡ್‌ ರೂಂನ ಹಾಸಿಗೆಯ ಮೇಲೆ ಕುಳಿತವನಿಗೆ ಎಂ.ಬಿ.ಎ.ಯ ತನ್ನ ಕೊನೆಯ ದಿನಗಳು ನೆನಪಾದವು. ತನ್ನ ಬರುವಿಕೆಗಾಗಿಯೇ ಜೀವ ಹಿಡಿದುಕೊಂಡ ಅಜ್ಜಿ ತನ್ನ ಹೆಜ್ಜೆ ಸಪ್ಪಳಕ್ಕೆ ನಿಧಾನವಾಗಿ ಕಣ್ಣು ತೆರೆದಿದ್ದಳು. ಸಂಜೆ ಸೂರ್ಯನ ಬೆಳಕೊಂದು ಅವಳ ಹಣೆಯ ನೆರಿಗೆ ನೆರಿಗೆಯಲ್ಲಿ ನೆರಳು ಬೆಳಕಿನ ಚಿತ್ರ ಬಿಡಿಸುತ್ತಿತ್ತು. ತಲೆ ತುಂಬಿಕೊಂಡ ಬಿಳಿಯ ಕೂದಲು ಸಂಜೆಯ ಎಳೆಯ ಕಿರಣಕ್ಕೆ ಬಂಗಾರದಂತೆ ಹೊಳೆಯುತ್ತಿದ್ದವು. ಕೃಷವಾದ ದೇಹದಲ್ಲಿ ಅಗಲವಾಗಿ ತೆರೆದ ಕಣ್ಣುಗಳು ತನ್ನನ್ನು ಬಗೆಯುವಂತೆ ನೋಡುತ್ತಿದ್ದವು.

ಕಣ್ಣು ತೆರೆದ ಅಜ್ಜಿ, ಸಂಜ್ಞೆಯ ಮುಖಾಂತರವೆ ಕಪಾಟಿನ ಬಾಗಿಲುಗಳನ್ನು ತೆರೆಯಲು ಹೇಳಿದ್ದಳು. ಹಳೆಯ ಹಲಸಿನ ಮರದಿಂದ ಮಾಡಿದ ಕಪಾಟಿನ ಬಾಗಿಲು ತೆರೆದವನಿಗೆ ಮೇಲಣ ಅಂತಸ್ತಿನಲ್ಲಿ ಕಷಾಯಕ್ಕಾಗಿ ಬಳಸುವ ನೂರೆಂಟು ಬೇರು ಚಕ್ಕೆಗಳು ಕಂಡವು. ಅವುಗಳಲ್ಲಿ ಯಾವುದಾದರೂ ಬೇಕೇನೊ ಎಂದು ಕೇಳಿದರೆ ತಲೆ ಅಲ್ಲಾಡಿಸಿದಳು. ಮತ್ತೆ ನಡುಗುವ ಕೈಯನ್ನು ನಿಧಾನವಾಗಿ ಎತ್ತಿ ಮೇಲೆ ಮೇಲೆ ಎಂದು ಸನ್ನೆ ಮಾಡಿದಳು. ಮೇಲೆ ಕಪಾಟಿನ ಒಳಗೆ ಮಡಿಚಿಟ್ಟ ಒಂದು ಕಂಡಿತು. ಹಸಿ ಭತ್ತದ ತೆನೆಯಷ್ಟು ಹಸಿರಿನ ಆ ಸೀರೆ ತನ್ನ ಮೂಲದ ಬಣ್ಣವನ್ನು ಈಗಲೂ ಉಳಿಸಿಕೊಂಡಿತ್ತು. ಬಿದ್ದ ಒಂದಿಷ್ಟು ಬೆಳಕಿನಲ್ಲಿ ಸುಂದರವಾಗಿ ಹೊಳೆಯುತ್ತಿತ್ತು. ಅದರಿಂದ ಉಕ್ಕಿ ಹರಿದ ಹಸಿರು, ಅಜ್ಜಿಯು ಹಣೆಯಮೇಲೆ ಬಿಳುವ ಬೆಳಕಿನ ಜೊತೆ ಸೇರಿಕೊಳ್ಳುತ್ತಿತ್ತು.

ಸೀರೆಯನ್ನು ಅಜ್ಜಿಯ ಕೈಯಲ್ಲಿ ಇಟ್ಟರೆ, ತಿರುಗಿ ಆ ಸೀರೆಯನ್ನು ಅಜ್ಜಿ ಕೆ.ಕೆ.ಯ ತೊಡೆಯ ಮೇಲಿಟ್ಟು ನೀನೆ ಇಟ್ಟುಕೊ ಎನ್ನುವಂತೆ ಸನ್ನೆ ಮಾಡಿದಳು. ಬಹಳ ಹೊತ್ತಿನವರೆಗೆ ತನ್ನ ನಡುಗುವ ಕೈಯಿಂದ ಕೆ.ಕೆ.ಯ ಬೆರಳುಗಳನ್ನು ಸವರುತ್ತಲೆ ಆಕೆ ಇದ್ದಳು. ಒಣಗಿದ ತುಟಿಗಳ ಸಂದಿನಿಂದ ಜಾರಿದ ಜೊಲ್ಲು ಗಾಳಿ ಆಡುವ ಕೋಣೆಯಲ್ಲಿ ತುಂಬಿಕೊಂಡ ಧೂಪದ ಹೊಗೆಯ ವಾಸನೆ, ಅಜ್ಜಿಯ ಹೊಳೆವ ದಪ್ಪ ಕಣ್ಣುಗಳು ಎಲ್ಲವೂ ಒಂದು ಸ್ಥಿರ ಚಿತ್ರದಂತೆ ಕೆ.ಕೆ.ಗೆ ಇವತ್ತಿಗೂ ನೆನಪಿದೆ. ಇದಾಗಿ, ಹದಿನೈದು ದಿನದ ನಂತರ ಒಂದು ಸಂಜೆ ಅಜ್ಜಿ ತೀರಿಕೊಂಡಳು. ಅವತ್ತೇ ಕೆ.ಕೆ ಭಾರತದ ಔದ್ಯೊಮಿಕ ಕ್ಷೇತ್ರದ ಮಹೋನ್ನತ ಉದ್ದೇಶದ ಹಿಸ್ಸೆದಾರನಾಗಿ ಸೇರಿಕೊಳ್ಳುವ ಸಡಗರದ ಕಾರಣಕ್ಕಾಗಿ ಅಜ್ಜಿಯ ಕ್ರಿಯೆಗಳಿಗೆ ಹೋಗಿರಲಿಲ್ಲ.

ಕೆ.ಕೆ. ನಾಯರ್‌ ನಿಧಾನವಾಗಿ ಎದ್ದು ತನ್ನ ವಾರ್ಡ್‌ ರೋಬ್‌ ತೆಗೆದ. ಎಷ್ಟೆಲ್ಲಾ ವರುಷದಿಂದ ಅಜ್ಜಿಯ ಸೀರೆ ಇದ್ದಲ್ಲಿಯೇ ಇತ್ತು. ಈಗಲೂ ಅದು ಎಳೆಯ ಭತ್ತದ ತೆನೆಯಂತೆ ಹೊಳೆಯುತ್ತಿತ್ತು. ಕೆ.ಕೆ. ಅದರ ನೆರಿಗೆ ಬಿಚ್ಚಿ, ಸೆರಗೂ ಬಿಚ್ಚಿ ನಿಧಾನವಾಗಿ ಪ್ಯಾಂಟು ಶರ್ಟು ಬಿಚ್ಚೊಗೆದು ಬತ್ತಲಾದ ತನ್ನ ಮೈ ತುಂಬಾ ಆ ಯನ್ನು ಸುತ್ತಿಕೊಂಡ. ಒಂದು ಸುಖದ ಕನಸು ಮೈಯ ಹೊಕ್ಕಿದಂತೆ ಕಣ್ಣು ಮುಚ್ಚಿ ನಿಂತ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more