ಹಸಿರು ಸೀರೆ
ಅವಳು ಅಳುತ್ತಿರುವದ ನೋಡಿ ಕೆ.ಕೆ.ಯ ಕಣ್ಣಲ್ಲೂ ನೀರಾಡತೊಡಗಿತು.
ಪರಿಸ್ಥಿತಿ ಬಿಗಡಾಯಿಸುತ್ತಿರುವುದು ಕಂಡು ರುಕ್ಮಿಣಿ ‘‘ನೀನು ಮೆಷಿನ್‌ನಲ್ಲಿ ಇದ್ದ ಬಟ್ಟೆ ತೆಗೆದು ಒಣ ಹಾಕು. ಬಕೇಟಲ್ಲಿ ಇರುವ ಆ ನೀಲಿ ಲುಂಗಿಯನ್ನು ಮಾತ್ರ ಯಾವುದಕ್ಕೂ ತಾಕಿಸಬೇಡಾ ಬಣ್ಣ ಬಿಡುತ್ತದೆ ಅದು’’ಎಂದಳು.
‘‘ನೀನೆ ಮೊದಲು ತಿಂಡಿ ತಿನ್ನು, ದೋಸೆ ನಾನು ಹೊಯ್ಯುತ್ತೇನೆ’’ ಅಂದ ನಾಯರ್. ಹೆಚ್ಚು ಕಡಿಮೆ ರುಕ್ಮಿಣಿಯನ್ನು ದಬ್ಬಿಯೇ ಕುಳ್ಳಿರಿಸಿದ. ದೋಸೆಯ ಹಿಟ್ಟನ್ನು ಕಾವಲಿಗೆ ಹುಯ್ದು ಹದವಾಗಿ ತುಪ್ಪ ಚಿಮುಕಿಸಿ ಬಿಳಿಯ ಹಿಟ್ಟು ಕೆಂಪಾಗಿ ದೋಸೆಯಾಗುವುದನ್ನು ಸಡಗರದಿಂದ ನೋಡಿದ. ಬಾಲ್ಯ ದಿನಗಳು, ಬೆಳಗಿನ ಚುಮು ಚುಮು ಚಳಿಯಲ್ಲಿ ಅಮ್ಮ ದೋಸೆ ಹೊಯ್ದು ಕಾಯಿ ಚಟ್ನಿಯನ್ನು ಬಿಸಿ ತುಪ್ಪದ ಜೊತೆ ಬೆರೆಸಿಕೊಡುವುದು ನೆನಪಾಗಿ ಮತ್ತೊಂದಿಷ್ಟು ಅರ್ದಗೊಂಡ. ಈ ದೋಸೆ ಎರೆಯುವ ಕಾರ್ಯ ಮತ್ತು ಬಿಸಿದೋಸೆಯ ನಿರೀಕ್ಷೆಯಲ್ಲಿ ಸ್ವಲ್ಪ ಅಚ್ಚರಿಯಿಂದಲೇ ಕುಳಿತ ರುಕ್ಮಿಣಿಯನ್ನು ನೋಡಿ ಎಣೆ ಇಲ್ಲದ ಹಿಗ್ಗೊಂದು ತನ್ನ ಎದೆ ತುಂಬಿಕೊಳ್ಳುವುದು ಅರಿವಿಗೆ ನಿಲುಕಿ ಸುಖಗೊಂಡಂತೆ ಕಣ್ಣು ಮುಚ್ಚಿದ. ಅದರ ಹಿಂದೆಯೇ ತನಗೆ ಎಂದೂ ಹೀಗೆ ಅನ್ನಿಸದ್ದು, ಈಗ ಯಾಕೆ ಅನ್ನಿಸುತ್ತಿದೆ ಎನ್ನಿಸಿ ಮತ್ತೊಂದಿಷ್ಟು ಕಳವಳಗೊಂಡ.
ರುಕ್ಮಿಣಿಯ ಪ್ಲೇಟಿಗೆ ದೋಸೆ ಚಟ್ನಿ ಬಡಿಸುತ್ತಾ ಹನ್ನೆರಡು ಘಂಟೆಗೆ ಇರುವ ಮುಖ್ಯ ಮೀಟಿಂಗ್‌ಗಳೆಲ್ಲವನ್ನೂ ಮರೆತು ತಾನು ಏನೇನೊ ಮಾಡುತ್ತಾ ನಿಂತಿದ್ದೇನೆ ಎನ್ನಿಸಿದರೂ, ಮಾಡದೇ ಇರಲೂ ಆಗದೇ ತನ್ನ ಮೇಲಿನ ನಿಯಂತ್ರಣ ತನಗೇ ತಪ್ಪಿದಂತೆ ಕೆ.ಕೆ., ರುಕ್ಕೂ ಕಣ್ಣಲ್ಲಿ ಕಣ್ಣು ನೆಟ್ಟು ನನ್ನೊಳಗೆ ಏನಾದರೂ ಬದಲಾಗಿದೆಯೇ ನೋಡು ಅಂದ. ಬೆಳಿಗ್ಗೆ ಏಳುತ್ತಲೇ ತಾನು ಬಿಳಿಯ ಸೀರೆಯನ್ನು ಉಟ್ಟುಕೊಂಡು ವೈದವ್ಯ ಹೊದ್ದವರಂತೆ ಕಂಡಿತು ಎಂದು ಹೇಳಬೇಕೆಂದುಕೊಂಡರೂ, ರುಕ್ಮಿಣಿ ತನಗೆ ಹುಚ್ಚು ಹಿಡಿದಿದೆ ಎಂದು ಅಂದುಕೊಂಡರೆ ಎನ್ನಿಸಿ ಸುಮ್ಮನಾದ.
ರುಕ್ಮಿಣಿಗೆ ಕೆ.ಕೆ.ಯ ಈ ಹೊಸ ವರಸೆ ಒಂದು ಸ್ಟಂಟ್ ಎಂದು ಅನ್ನಿಸಲೂ ಶುರುವಾಗಿತ್ತು. ಇಡೀ ದಿನ, ಆಫೀಸು ಮೀಟಿಂಗ್ ಎಂದು ಓಡಾಡುವ ಕೆ.ಕೆ. ಮನೆಯ ಬಗೆಗೆ ಲಕ್ಷ್ಯ ಹಾಕಿದ್ದೇ ಇಲ್ಲ. ಇನ್ನು ದೋಸೆ ಎರೆಯುವದಿರಲಿ, ತಿಂದ ಪ್ಲೇಟನ್ನು ಸಿಂಕಿನಲ್ಲಿ ಇಟ್ಟವನಲ್ಲ. ತನ್ನ ಹುಟ್ಟಿದ ಹಬ್ಬ ಸಾಯಲಿ, ಮಗನ ಹುಟ್ಟಿದ ಹಬ್ಬವನ್ನೂ ನೆನಪಿಟ್ಟುಕೊಳ್ಳಲಾರದ ಅವನ ಬಗೆಗೆ, ಅವಳ ನಿರೀಕ್ಷೆಗಳು ತುಂಬಾ ಕಡಿಮೆಯದಾಗಿದ್ದವು. ವರುಷಕ್ಕೆ ಒಮ್ಮೆ ಕ್ರಿಸ್‌ಮಸ್ ಟೈಂನಲ್ಲಿ ಅಮೆರಿಕದವರಿಗೇ ರಜೆ ಎಂದೂ, ಕೆಲಸದ ಒತ್ತಡ ಕಡಿಮೆ ಎಂದು ಒಂದು ವಾರ ರಜೆ ಹಾಕಿ ಯಾವುದಾದರೂ ಒಂದು ಕಡೆ ಕರೆದುಕೊಂಡು ಹೋಗುತ್ತಿದ್ದ. ಕೆ.ಕೆ ರಿಸಾರ್ಟ್‌ನ ಸ್ವಾಗತಕಾರರನ್ನು ಕೇಳುವ ಮೊದಲ ಪ್ರಶ್ನೆ ಸಿ.ಎನ್.ಬಿ.ಸಿ. ಬರುತ್ತಾ, ಎಕನಾಮಿಕ್ ಟೈಮ್ಸ್ ಸಿಗುತ್ತಾ ಅನ್ನುವುದೇ ಆಗಿರುತ್ತಿತ್ತು.
ಬೆಳಗ್ಗೆ ಎದ್ದು ಬಿಬಿಸಿ ನೊಡಿ, ಇಕಾನಾಮಿಕ್ಸ ಪೇಪರ ಓದಿ ಹಾಯಾಗಿ ಕಾಲುನೀಡಿ ಕೆ.ಕೆ ಕುಳಿತಿರುತ್ತಿದ್ದರೇ ರುಕ್ಮಿಣಿ ಮಗನನ್ನು ಬೀಚಿನಲ್ಲಿಯೋ ರೆಸಾರ್ಟಿನಲ್ಲಿನ ಮಕ್ಕಳ ಆಡಿಸುವ ಕೆಂದ್ರದಲ್ಲಿಯಾ ಆಟ ಆಡಿಸಿಕೊಂಡು ಬರುತ್ತಿದ್ದಳು.
ನಂತರ ಮಧ್ಯಾನ್ಹ ಊಟ, ಒಂದು ಗಂಟೆ ನಿದ್ದೆ, ಅಪ್ಪಿ ತಪ್ಪಿ ಕೆ.ಕೆ. ಮಗನ ಜೊತೆ ಆಟಕ್ಕೆ ಇಳಿದರೆ ಅವರಿಬ್ಬರ ಮಧ್ಯೆ ಜಗಳ ಹಚ್ಚಿಕೊಂಡು ಬಿಡುತ್ತಿತ್ತು. ಮಾಡಬೇಡಾ ಎಂದು ಕೆ.ಕೆ. ಮಾಡುತ್ತೇನೆ ಎನ್ನುವ ಮಗ. ಜಿ.ಕೆ. ಏಳುವರುಷದ ಪೋರನಲ್ಲಿಯೂ ಅಪ್ಪನ ಗುಣವೇ. ಗಂಡು ಕುಲವೇ ಹಾಗೆ ಎನ್ನುವ ಹಾಗೆ! ಮಧ್ಯ ತಾನು ರೇಜಿಗೆ ಹಿಡಿದು ರಜೆಯಾಂದು ಮುಗಿದು ತಿರುಗಿ ಬೆಂಗಳೂರಿಗೆ ಬಂದರೆ ಸಾಕಾಗುತ್ತಿತ್ತು.
ಕೆ.ಕೆ. ಮಾತ್ರ ರಸ್ತೆಯುದ್ದಕ್ಕೂ ಡ್ರೈವ್ ಮಾಡುತ್ತಾ ಬೆಳೆಯುತ್ತಿರುವ ಬ್ಯಾಂಕ್ ಬ್ಯಾಲೆನ್ಸಿನ ಬಗ್ಗೆ ಕಂಪನಿಯಲ್ಲಿ ಏರಬೇಕಾದ ಹುದ್ದೆಗಳ ಬಗೆಗೆ, ವಿವರವಾಗಿ ಕೊರೆಯುತ್ತಿದ್ದರೆ ಅವಳಿಗೆ ನಿದ್ದೆ ಆವರಿಸಿಕೊಳ್ಳುತ್ತಿತ್ತು. ಹೀಗಿದ್ದರೂ ಅವನ ಕಂಪನಿ ಏರ್ಪಡಿಸುವ ವರ್ಕ್ ಲೈಪ್ ಬ್ಯಾಲೆನ್ಸಗಳ ಸೆಮಿನಾರ್ ನಂತರ ಒಂದೆರಡು ದಿನ ಕೆ.ಕೆ. ಬದಲಾದಂತೆ ಕಾಣುತ್ತಿದ್ದ. ಸೆಮಿನಾರ್ ಮುಗಿಸಿ ಮನೆಗೆ ಬರುವ ದಾರಿಯಲ್ಲಿ ರುಕ್ಮಿಣಿಗಾಗಿಯೇ ಆತ ಒಂದು ಗುಲಾಬಿಯ ಹೂಗೊಂಚಲನ್ನು ಖರೀದಿಸುತ್ತಿದ್ದ. ಮಗನಿಗೆ ಇಷ್ಟ ಎಂದು ಜೆ.ಪಿ ನಗರದ ಮಿಠಾಯಿ ಶಾಪನಲ್ಲಿ ಜಿಲೇಬಿ ಕಟ್ಟಿಸಿಕೊಂಡು ಬರುತ್ತಿದ್ದ. ಉಮೇದು ಹೆಚ್ಚಾದರೆ ಬಸವನಗುಡಿಯ ವಿದ್ಯಾರ್ಥಿ ಭವನಕ್ಕೋ ಮಾವಳ್ಳಿ ಟಿಫನ್ ರೂಂಗೋ ಕರೆದುಕೊಂಡು ಹೋಗಿ ಉದ್ದ ಕ್ಯೂನಲ್ಲಿ ಅರ್ಧ ಒಂದು ಘಂಟೆ ಕಾಯಿಸಿ ಅಥೆಂಟಿಕ್ ತಿಂಡಿ ಎಂದು ತಿನ್ನಿಸಿ ‘ವೆರಿ ಗುಡ್ ವಂಡರ್ ಫುಲ್ ಡೇ’ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ತಿರುಗಿಬಂದು ಹಾಸಿಗೆಯಲ್ಲಿ ಬಿದ್ದು ಗೊರಕೆ ಹೊಡೆಯುತ್ತಿದ್ದ.
ಮತ್ತೆ ಬೆಳಗಾದರೆ ತನ್ನ ಮೂಲಸ್ಥಾನಕ್ಕೆ ಮರಳುತ್ತಿದ್ದ ಕೆ.ಕೆ. ಹಾಗಾಗಿ ಇಂತಹ ಸೆಮಿನಾರ್‌ಗಳೂ, ನಡೆದಿರಬಹುದಾದ ಕೆ.ಕೆ. ಅದಕ್ಕೆ ಹೋಗಿರಬಹುದಾದ ಎಲ್ಲ ಸಾಧ್ಯತೆಯ ವಿಷಯಗಳೂ, ಕೆ.ಕೆ. ಹೇಳದೆಯೆ ಆಕೆಗೆ ಗೊತ್ತಾಗಿ ಬಿಡುತ್ತಿತ್ತು. ಹಾಗಾಗಿಯೆ ಅವನು ಹೊಗೊಂಚಲು ತಂದಾಗ, ಜೀವವೇ ಇರದ ನಗುವೊಂದು ಅವಳ ತುಟಿಗಳ ಮೇಲೆ ಒಡೆದುಕೊಳ್ಳುತಿತ್ತು.
ಆದರೆ ಇವತ್ತಿನ ರೀತಿಯೇ ಬೇರೆ. ಅವನ ಧ್ವನಿ ತನ್ನ ಮೊದಲಿನ ಗಡಸು ಕಳೆದುಕೊಂಡಂತೆ ಇತ್ತು. ಕಣ್ಣುಗಳೂ ಪ್ರಾಮಾಣಿಕತೆಯಿಂದಲೇ ಹೊಳೆಯುವಂತಿದ್ದವು. ಅಡುಗೆ ಮನೆಯಲ್ಲಿ ಶಂಕ್ರಮ್ಮನ ಜೊತೆ ಅವನು ಮಾತನಾಡುತ್ತಾ ನಿಂತ ರೀತಿ ಥೇಟ್ ತಾನೇ ನಿಂತಂತೆ ಅನ್ನಿಸುತ್ತಿತು. ಈಗ ತನಗೆ ಬೆನ್ನು ಹಾಕಿ ತುಪ್ಪವನ್ನು ಕಾವಲಿಗೆ ಹದವಾಗಿ ಸವರಿ, ದೋಸೆಯ ಹಿಟ್ಟನ್ನು ಒಂದೇ ಒಂದು ಹನಿ ನೆಲಕ್ಕೆ ಬೀಳದಂತೆ ತೆಗೆದುಕೊಂಡು ದೋಸೆ ಬೇಯಿಸುತ್ತಿರುವ ಕೆ.ಕೆ. ಥೇಟ್ ತನ್ನ ತಾಯಿಯಂತೆ ಅನ್ನಿಸಿ ಅವಳಿಗೆ ವಿಚಿತ್ರ ಹೆದರಿಕೆ ಅನ್ನಿಸಿತ್ತು. ಸತ್ತವರ ಯಾರದ್ದೋ ಭೂತ ಮೆಟ್ಟಿಕೊಂಡಿಲ್ಲ ತಾನೇ! ಫಿಸಿಕ್ಸ್ ಪ್ರೊಫೆಸರಾಗಿ ತಾನು ಯೋಚಿಸುತ್ತಿರುವ ರೀತಿಗೆ ನಗು ಬಂದಿತು.
ಕೆ.ಕೆ. ಮಾತ್ರ ಇದು ಯಾವುದೂ ಅರಿವಿರದಂತೆ ದೋಸೆ ಎರೆಯುವುದರಲ್ಲಿ ಮಗ್ನನಾಗಿದ್ದ. ಅವನಿಗೆ ದಿನವೊಂದು ಹೊಸತಾಗಿ ಹುಟ್ಟಿದಂತೆ ಅನ್ನಿಸುತ್ತಿತ್ತು. ಬೆಳಗ್ಗೆ ಏಳುವಾಗ ಬಿಳಿಯದಾಗಿ ಕಂಡ ಲುಂಗಿ ಇಗ ಅಷ್ಟಾಗಿ ಹೆದರಿಸುತ್ತಿರಲಿಲ್ಲ.












Click it and Unblock the Notifications