ಹಸಿರು ಸೀರೆ


ಕೆ.ಕೆ. ನಾಯರ್‌ ತನ್ನ ತಲೆಯ ಒಳಗೆ ನಡೆಯುತ್ತಿರುವುದು ಯಾವುದೂ ತನಗೆ ಸಂಬಂಧಿಸಿದ್ದಲ್ಲಾ ಎಂದು ತಲೆಯಿಂದ ಹೊರ ಹಾಕುವವನಂತೆ ತಲೆ ಕೊಡವಿ ತಾನಿನ್ನೂ ನಿದ್ದೆಯಲ್ಲಿ ಇಲ್ಲ ತಾನೆ ಎಂದು ದೃಢಪಡಿಸಿಕೊಳ್ಳಲಿಕ್ಕೆ ತನ್ನನ್ನು ತಾನೇ ಜಿಗುಟಿಕೊಂಡ. ಹಾಗೆ ಜಿಗುಟಿಕೊಂಡಾಗ ಇಡಿಯ ಮೈ ತುಂಬಾ ಉರಿ ಎದ್ದಂತಾಯಿತು. ಅದರ ಹಿಂದೆಯೇ ತಾನು ಜಿಗುಟಿಕೊಂಡಾಗ ತನ್ನ ತೋಳುಗಳು ಯಾಕೋ ಸ್ವಲ್ಪ ಮೃದುವಾಗಿ ಇದ್ದಂತೆ ಅನ್ನಿಸಿತು. ಮತ್ತೊಮ್ಮೆ ಜಿಗುಟಿಕೊಳ್ಳಲು ಹೆದರಿಕೆಯಾಯಿತು.

ಕೆ.ಕೆ.ನಾಯರ್‌ ಇನ್ನು ಸಾಧ್ಯವೇ ಇಲ್ಲ ಎನ್ನಿಸಿ ದಡಕ್ಕನೆ ಎದ್ದು ನಿಂತ. ತನ್ನ ಬೆಡ್‌ ಪಕ್ಕವೇ ಇರುವ ಟೇಬಲ್‌ನ ಮೇಲಿರುವ ವಿಲ್ಸ್‌ ಸಿಗರೇಟ್‌ ಪ್ಯಾಕೆಟ್‌ ನೋಡಿದ. ಯಾಕೋ ಎಂದಿನ ಅಭ್ಯಾಸದಂತೆ ಸಿಗರೇಟನ್ನು ಯಾಂತ್ರಿಕವಾಗಿ ಎತ್ತಿಕೊಂಡು ಲೈಟರ್‌ ಹಚ್ಚುವುದು ಸಾಧ್ಯವೇ ಆಗಲಿಲ್ಲ. ಬೆಳಗಿನಿಂದ ಒಂದು ರೀತಿಯ ಕಿನ್ನತೆಬೇರೆ, ಎಲ್ಲವೂ ಬದಲಾಗಿದೆ ಎನ್ನುವ ಭಾವನೆ, ತಾನು ಹೊಂದಿದ ಎಲ್ಲದರ ಮೇಲೂ ಒಂದು ರೀತಿಯ ಅಸಹ್ಯ ಹುಟ್ಟಿಕೊಂಡ ಹಾಗೆ. ಸಿಗರೇಟಿನ ಕಮಟು ವಾಸನೆ ಮೂಗಿನ ತುಂಬಾ ಅಡರಿಕೊಂಡಂತಾ ಭಾವನೆ. ಬಿದ್ದುಕೊಂಡ ಸಿಗರೇಟನ್ನು ಮುಟ್ಟಲೂ ಹೇಸಿಕೆ. ಬಾಲ್ಯದಿಂದಲೂ ಬೆರಗಿನಿಂದಲೇ ನೋಡುತ್ತ, ಹಾಸ್ಟೆಲ್‌ ರೂಂನಲ್ಲಿ ಸತತ ಅಭ್ಯಾಸದಿಂದ ರೂಢಿಗೊಳಿಸಿಕೊಂಡ ರಜನೀಕಾಂತ್‌ನ ಎಲ್ಲ ಸ್ಟೈಲುಗಳು ಈಗ ಇನ್ನೂ ಮಂಜು ಬಿಟ್ಟಿರದ ಈ ಬೆಳಗಿನ ಹೊತ್ತಲ್ಲಿ ಕೈ ಕೊಟ್ಟು ಹೋದಂತ ದುಗುಡ.

ಕೆ.ಕೆ. ನಾಯರ್‌ ತನ್ನ ತಲೆಯ ಒಳಗೆ ಮತ್ತೊಂದು ರೀತಿಯ ವಿಚಾರಣೆ ಪ್ರಾರಂಭವಾಗಿಬಿಡಬಹುದಾದ ಹೆದರಿಕೆಯಲ್ಲಿ ಎದ್ದು ಬಾತ ರೂಂ ಬಾಗಿಲು ಹಾಕಿಕೊಂಡು ಶೇವ್‌ ಮಾಡುವ ಬ್ಲೇಡ್‌ ತೆಗೆದವನಿಗೆ, ನಿನ್ನೆಯಿಂದ ಇವತ್ತಿಗೆ ಬೆಳೆಯಬೇಕಾದಷ್ಟು ಗಡ್ಡ ಬೆಳೆದೇ ಇಲ್ಲ ಅನ್ನಿಸಿ ಶೇವಿಂಗ್‌ ಕ್ರೀಮ್‌ ತೆಗೆದಿಟ್ಟ. ಕನ್ನಡಿಯಲ್ಲಿ ಮುಖ ತಿರುಗಿಸಿ ತಿರುಗಿಸಿ ನೋಡಿದಾಗ ಯಾಕೆ ಅವು ಮತ್ತೊಂದಿಷ್ಟು ಮೃದುವಾಗುತ್ತಿರುವಂತೆ ಅನ್ನಿಸಿತು.

ಕನ್ನಡಿಯಿಂದ ಮುಖತೆಗೆದು, ಗಸಗಸನೆ ಹಲ್ಲು ತಿಕ್ಕಿ ಹೊರಬಂದವನಿಗೆ ರುಕ್ಮಿಣಿ ಅಡುಗೆ ಮನೆಯಲ್ಲಿ ಅಡುಗೆಯವಳ ಹತ್ತಿರ ಮಾತಿಗೆ ನಿಂತಿದ್ದು ಕಂಡಿತು. ಕೆ.ಕೆ. ನಾಯರ್‌ ತನ್ನ ಲುಂಗಿಯ ಕಡೆ ದೃಷ್ಠಿ ಹರಿಸದೆ ಕಿಚನ್‌ ಬಳಿಗೆ ಬಂದು ಮಾತಿಗೆ ನಿಂತ.

‘‘ಏನಮ್ಮಾ, ನಿನ್ನ ಮಗ ಚೆನ್ನಾಗಿ ಓದುತ್ತಿದ್ದಾನಾ? ಮಾರ್ಚ್‌ ಬರುತ್ತಿದೆಯಲ್ಲಾ ಅವನಿಗೆ ಎಕ್ಸಾಮ್ಸ್‌ ಇರಬೇಕು. ಮತ್ತೆ ನಿನ್ನ ಗಂಡ ಕುಡಿಯುವುದು ಕಡಿಮೆ ಮಾಡಿದನಾ, ಬೆಳಿಗ್ಗೆ ಅಷ್ಟು ಮುಂಚೆ ಹೇಗೆ ಕೆಲಸಕ್ಕೆ ಬರುತ್ತೀಯಾ, ಬೀದಿ ನಾಯಿಗಳ ಕಾಟ ಇಲ್ಲ ತಾನೆ...’’ ಅಂದ. ಪಾಪ ಮೊನ್ನೆ ದರಿದ್ರನಾಯಿಗಳು ಹೇಗೆ ಆ ಪಾಪುವನ್ನ ಕಚ್ಚಿತಿಂದವು, ಎಲ್ಲ ಶಂಡರೂ ದೂರನಿಂತು ಹಚ್‌ ಹುಚ್‌ ಅಂದಿದ್ದು ಬಿಟ್ಟರೆ ಮುಂದುಬಂದವರೂ ಯಾರು ಇರಲಿಲ್ಲವಂತೆ.. ಮನೆ ಮುಂದೆ ಗಲಾಟೆಯಾದರೆ ಸಂಡಾಸ ಹೊಕ್ಕಿಕೊಳ್ಳುವ ಈ ಮಂದಿ ಮತ್ತೆ ಏನುಮಾಡಿಯಾರು ಎಂದು ಸೇರಿಸಿದ.

ಅಡುಗೆ ಶಂಕ್ರಮ್ಮನಿಗೆ ನಾಯರ ಒಳಬಂದು ನಿಂತಾಗ ಗಡಿಬಿಡಿ ಹತ್ತಿಕೊಂಡುಬಿಟ್ಟಿತ್ತು. ನಾಯರ್‌ ಯಾವತ್ತೂ ಅಡುಗೆ ಮನೆಗೆ ಕಾಲಿಟ್ಟಿದ್ದೇ ಇಲ್ಲ. ಶೇವ್‌ ಮಾಡಿ ಹಲ್ಲು ತಿಕ್ಕಿ ಇಕನಾಮಿಕ್‌ ಟೈಮ್ಸ್‌ ಹಿಡಿದು ಡೈನಿಂಗ್‌ ಟೇಬಲ್‌ನ ಮುಂದೆ ಕುಳಿತರೆ, ರುಕ್ಮಿಣಿಯೇ ತಟ್ಟೆ ಇಟ್ಟು ಚಹಾ ಕೊಡುತ್ತಿದ್ದಳು. ಆಗಲೇ ಪಾಪು ತಯಾರಾಗಿ ಶಾಲೆಗೆ ಹೋಗಿಯಾಗಿತ್ತು. ರುಕ್ಮಿಣಿಯೂ ಅವನು ಮುಂದಿದ್ದಾಗ, ಶಂಕ್ರಮ್ಮನ ಜೊತೆ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಚಹಾ ಕೂಡಾ ಅಸ್ಸಾಂ ಚಹಾ ಪುಡಿಯದೇ ಆಗಬೇಕು ಹೈದನಿಗೆ. ಏನಾದರೂ ಹೆಚ್ಚು ಕಮ್ಮಿಯಾದರೆ ಮೂಗಿನ ತುದಿಯಲ್ಲಿ ಸಿಟ್ಟಿಟ್ಟುಕೊಂಡಿರುವ ಆತ ಎದ್ದು ಹೊರನಡೆದು ಬಿಡುತ್ತಿದ್ದ. ಲಕ್ಷಗಟ್ಟಲೇ ದುಡಿಯುವ ನನಗೆ ಮನೆಯಲ್ಲಿ ಸಿಗುವ ಮರ್ಯಾದೆ ಇಷ್ಟೆನಾ ಎನ್ನುವ ಧಮಕಿ ಬೇರೆ..

ಇವತ್ತು ಕೆ.ಕೆ. ಮಾತಿಗೆ ನಿಂತಿದ್ದು ಅವಳಿಗೆ ನಾಚಿಕೆಯಾಗಲು ಕಾರಣವಾಗಿತ್ತು. ‘‘ಹೂಂ ಓದ್ತಾನೆ ಮುಂದಿನ ವರುಷ ಪಿ.ಯು.ಸಿ. ಸೆಕೆಂಡ್‌ ಇಯರ್‌’’ ಎಂದು ರುಕ್ಮಿಣಿಯ ಮುಖ ನೋಡಿದಳು.

‘‘ಚೆನ್ನಾಗಿ ಓದ್ತಾನಾ?’’ ಎಂದು ನಾಯರ್‌ ಮತ್ತೆ ಮಾತು ಮುಂದುವರಿಸಿದನೆ ಹೊರತು ಮುಗಿಸುವಂತೆ ಕಾಣಲಿಲ್ಲ.

‘‘ಓದ್ತಾನೆ ಅಣ್ಣಾ, ಹೋದ ವರುಷ 92 ಪರ್ಸೆಂಟ್‌ ಮಾಡಿದ್ದಾನೆ. ಈ ವರುಷ ನೋಡಬೇಕು, ಒಳ್ಳೆಯ ಹುಡುಗ’’ ಎಂದು ಅಭಿಮಾನಪಟ್ಟಳು ಶಂಕ್ರಮ್ಮ

‘‘ಯಾವ ಕಾಲೇಜಿಗೆ ಹೋಗ್ತಾನೆ?’’ಎಂದ ಕೆ.ಕೆ.

‘‘ಇಲ್ಲೆ, ವಿಜಯ ಕಾಲೇಜಿಗೆ ಹೋಗ್ತಾನೆ. ಮಲ್ಲೇಶ್ವರದ ಎಂ.ಇ.ಎಸ್‌.ನಲ್ಲು ಸಿಕ್ಕಿತ್ತು. ಆದ್ರೆ ನಾನು ಮನೆಗೆಲಸಕ್ಕೆ ಬರುವುದು ಕಷ್ಟ. ಈಗಿರುವ ಮನೆ ವಿನಾಯಕನಗರದಲ್ಲಿ. ಸ್ವಲ್ಪ ಕಡಿಮೆ ಭೋಗ್ಯಕ್ಕೆ ಸಿಕ್ಕಿದೆ’’ ಅಂದು ಮತ್ತೆ ರುಕ್ಮಿಣಿಯ ಮುಖ ನೋಡಿದಳು.

ರುಕ್ಮಿಣಿಗೂ ಈ ಇಲ್ಲದ ಉಸಾಬರೆಯೆಲ್ಲಾ ಯಾಕೆ ಸುಮ್ಮನೆ ತಿಂಡಿ ತಿಂದು ಆಫೀಸಿಗೆ ಹೋಗಬಾರದಾ ಎಂದು ಅನ್ನಿಸುತ್ತಿತ್ತು. ಕೆ.ಕೆ. ನಾಯಕ್‌ ಮಾತು ನಿಲ್ಲಿಸುವಂತೆ ಕಾಣಲಿಲ್ಲ.

‘‘ನಿಮ್ಮ ಮನೆಯವರು ಆರೋಗ್ಯವಾಗಿದ್ದಾರಾ, ಎಲ್ಲಿ ಕೆಲಸ ಮಾಡ್ತಾರೆ’’ ಎಂದ. ಹಾಗೆನ್ನುತ್ತಿದ್ದ ಹಾಗೆ ಶಂಕ್ರಮ್ಮನ ಕಣ್ಣಲ್ಲಿ ನೀರೊಡೆದುಕೊಂಡಿತು. ಆಕೆ ಅಳುವನ್ನು ತಡೆಯುವಂತೆ ಕಾಣಲಿಲ್ಲ.

‘‘ಏನ ಹೇಳ್ಲಿ, ಅಣ್ಣಾ ನಮಗೂ ಒಂದೆರಡು ಎಕರೆ ಜಮೀನಿತ್ತು. ಆ ಹಾಳು ಮೈಸೂರಿಗೆ ಬೆಂಗಳೂರಿಗೆ ಹೈವೇ ಮಾಡಾಕೆ ಹೊರಟ್ರಾ, ಎಲ್ಲಿಂದಲೋ ಬಂದವರು ನಮ್ಮ ಮನೆಯವರತಾವಾ, ಏನೇನೋ ಸಿಕ್ತೈತಿ ಅಂತಾ ಒಂದಿಷ್ಟು ಪೇಪರಿಗೆ ಸಹಿ ಹಾಕಿಸಿಕೊಂಡು ಒಂದು ಎರಡು ಲಕ್ಷ ಕೊಟ್ಟು ಆಚೆಗೆ ನಾಪತ್ತೆಯಾದ್ರಾ, ನಮ್ಮನಿಯವರಿಗೆ ಏನೂ ಕಯಾಲಿ ಹತ್ತಿತೋ ಬಿಸೆನೆಸ್‌ ಮಾಡ್ತಿನಿ ಅಂತ, ರಾತ್ರಿ ಕೆಲಸಕ್ಕೆ ಹೋಗುವವರನ್ನು ಕರೆದೊಯ್ಯಲು ವಾಹನ ತಗತಿನಿ ಅಂತಾ ಎರಡು ಲಕ್ಷದ ಮೇಲೆ ನಾಲ್ಕು ಲಕ್ಷ ಸಾಲ ಮಾಡಿ ಟಾಟಾ ಸುಮೋ ತಗೊಂಡ್ರಾ, ಅದು ಎಕ್ಸಿಡೇಂಟಾಗಿ ಆ ಸಾಲವೂ ಮೈ ಮೇಲೆ ಬಂದು ಸಾಲ ಕೊಟ್ಟವರೂ ಕೈಕಾಲು ಮುರಿಯೋ ರೀತಿ ಹೊಡೆದ್ರಾ, ಊರೇ ಬಿಟ್ಟು ಓಡಿ ಬಂದ್ವಿ ನಾವು. ಜಮೀನು ಮನೆಯೆಲ್ಲಿ ಹುಟ್ಟಿದಷ್ಟಕ್ಕೆ ಬಾಳ ಹೊಂದಿಸಿಕೊಂಡು ಹಾಯಾಗಿ ಇದ್ದವರು ನಾವು. ಈಗ ನೋಡಿ, ಜಮೀನು ಮನೆ ಕಳಕೊಂಡು, ಕೆಲಸ ಇಲ್ಲದೇ ಕುಡಿಯೋಕೆ ಶುರು ಹಚ್ಚಿಕೊಂಡ ಗಂಡನ ಕಟ್ಟಿಕೊಂಡು, ಮನೆ ಕೆಲಸ ಮಾಡಿಕೊಂಡು ಜೀವನ ಮಾಡೊ ಸ್ಥಿತಿಗೆ ತಂದಿಟ್ಟರು ಅಣ್ಣಾ’’ ಎಂದು ಅಳತೊಡಗಿದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+