ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸಿರು ಸೀರೆ

By Staff
|
Google Oneindia Kannada News


‘ಅರೆ ಡಾಕ್‌ ನಾನೇನೂ ನಿನ್ನನ್ನು ವರುಷ ಬಿಟ್ಟಿರಲಿಲ್ಲವಲ್ಲಾ ಒಂದೆರಡು ವಾರಕ್ಕೆ ತಾನೆ ಹೋಗಿ ಬಂದದ್ದು, ಹೋಗಲಿ ಇದು ಕೈ ತುಂಬಾ ಸಂಬಳ ಬರುವ ಕೆಲಸ ತಾನೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟೆಲ್ಲಾ ಮೇಲೇರಿದವರು ಎಷ್ಟಿದ್ದಾರೆ ಹೇಳು ನೋಡೋಣ, ನಿಮ್ಮಪ್ಪನ ನೋಡು, ಮೂವತ್ತು ವರುಷ ಅದೇ ಫ್ಯಾಕ್ಟರಿಯ ಒಂದೇ ಅಕೌಂಟ ಹುದ್ದೆಯಲ್ಲಿ, ಅದೇ ಅನ್ನ ಸಾರು ತಿನ್ನುತ್ತ ರಿಟೈರ್ಡಆದರಲ್ಲ’ ಎಂದು ಗಹಗಹಿಸಿದ್ದ. ರುಕ್ಮಿಣಿ ಏನೂ ಹೇಳದೇ ಕೈ ಕೊಸರಿಕೊಂಡು, ಹಾಲ್‌ ನಲ್ಲಿ ಟಿ.ವಿ. ಹಚ್ಚಿಕೊಂಡು ಕುಳಿತುಬಿಟ್ಟಿದ್ದಳು.

ಇದೆಲ್ಲದರ ಮಧ್ಯವೂ ಅಪ್ಪನಿಗೆ ತಮ್ಮನ್ನು ಓದಿಸಲು, ಬೆಳೆಸಲು, ಅಮ್ಮನಿಗೆ ವಾರಕ್ಕೊಂದು ಮಲ್ಲಿಗೆ ದಂಡೆತರಲೂ ಸಾಧ್ಯಆಗಿತ್ತಲ್ಲ ಎಂದು ಹೇಳಬೇಕೆನಿಸಿದರೂ ಮತ್ತೆ ಶುರು ಹಚ್ಚಿಕೊಳ್ಳುವ ಜಗಳಕ್ಕೆ ಬೇಸರ ಹತ್ತಿದಂತೆ ಅವಳು ಸುಮ್ಮನೇ ಉಳಿದಿದ್ದಳು.

ಕೆ.ಕೆ. ನಾಯರ್‌ಗೆ ಈಗ, ಈ ದಿನ ಆ ಫೋಟೊಗಳ ನೋಡಿ, ಆ ನಾಯಿಗಳ ನೋಡಿ, ಆ ನಾಯಿಯ ಬಾಯಿಂದ ಬೀಳುತ್ತಿರುವ ಎಂಜಲ ನೋಡಿ ಜೋತು ಬಿದ್ದಿರುವ ಆ ಮೋಲೆಗಳು ತನ್ನ ಎದೆಯಿಂದಲೇ ಅವೆಲ್ಲ ಹುಟ್ಟಿದಂತೆ ಕಂಡು ಅಸಹ್ಯದಿಂದ ವಾಕರಿಕೆ ಬರುವಂತಾಯಿತು. ಅದರ ಹಿಂದೆಯೇ ಈ ದರಿದ್ರ ಫೋಟೋ ಇಷ್ಟು ದಿನ ಬೆಡ್‌ ರೂಂನಲ್ಲಿ

ಯಾಕಿತ್ತು ಎಂದು ಕೂಡಾ ಅನ್ನಿಸಿತು. ಎಂ.ಜಿ.ರೋಡಿನ ಅಕ್ಕ ಪಕ್ಕ ಸ್ಟೂಲ್‌ ಇಟ್ಟುಕೊಂಡು ಬಿಡಿಸುವ ಯಾವುದೇ ಚಿತ್ರಕಾರ, ಇದಕ್ಕೂ ಚೆನ್ನಾಗಿ ಚಿತ್ರಿಸುವ ಸಾಧ್ಯತೆ ಇರುವಾಗ, ಸರಿಯಲಿಸಂನ ಆರ್ಟ್‌ ಗ್ಯಾಲರಿಯ ಲ್ಯಾವೆಂಡರ್‌ ಪರಿಮಳ ಹೊತ್ತ ಹೆಂಗಳೆಯರ ಮಧ್ಯೆ ಇದಿತ್ತು ಎನ್ನುವ ಕಾರಣಕ್ಕಾಗಿಯೇ ತಾನು ಅದಕ್ಕೆ ಅಷ್ಟೆಲ್ಲಾ ದುಡ್ಡು ಕೊಟ್ಟೆನೇ? ಎನ್ನಿಸಿ ಖಿನ್ನತೆ ಆವರಿಸಿತು. ಕೆ.ಕೆ. ನಾಯರ್‌ಗೇ ಆ ಪಟವನ್ನು ಅಲ್ಲಿಡಲು ಸಾಧ್ಯವೇ ಇಲ್ಲ ಎನ್ನಿಸಿ, ಗೋಡೆಯಿಂದ ಅದನ್ನು ಇಳಿಸಿ, ಎಲ್ಲೂ ಇಡಲು ಜಾಗ ಕಾಣದೇ ಮಂಚದ ಅಡಿಯಲ್ಲಿ ಸರಿಸಿದ. ಬಗ್ಗಿ ಕುಳಿತು ಮತ್ತೆ ಅದು ಕಾಣಲಾರದು ಎಂದು ಖಾತ್ರಿಮಾಡಿಕೊಂಡ.

ಕೆ.ಕೆ. ಹೀಗೆ ಹೊಸದಾಗಿ ತುಂಬಿಕೊಳ್ಳುತ್ತಿರುವ ವಿಚಿತ್ರ ಯೋಚನೆಗಳ ಅರಿವೂ ಹತ್ತಿದಂತೆ ಒಂದು ಕ್ಷಣ ಕಂಗಾಲಾದ. ತಾನು ಕಂಡಿರುವದೆಲ್ಲಾ ಕನಸೇ ಇರಬೇಕು. ಸತ್ಯದಲ್ಲಿ ಇಂತಹ ಯೋಚನೆಗಳು ಬರಲೂ ಹೇಗೆ ಸಾಧ್ಯ ಸಣ್ಣವನಿರುವಾಗಲಿಂದ ಲುಂಗಿ ಉಟ್ಟು ಮಲಗುವವನಿಗೆ ಒಂದಿಷ್ಟು ನಿರ್ದಿಷ್ಟತೆಗಳಿದ್ದವು. ಒಂದು - ಲುಂಗಿ ಯಾವತ್ತೂ ನೀಲಿಯದೇ ಆಗಬೇಕು. ಎರಡು - ಅದರ ಮೇಲೆ ಬಿಳಿಯ ಗೆರೆಗಳು ಉದ್ದಕ್ಕೆ ಅಡ್ಡಕ್ಕೆ ಹರಿದು ಒಂದು ಚಚ್ಚೌಕವನ್ನು ನಿರ್ಮಿಸಬೇಕು. ಮೂರು - ಪ್ರತಿದಿನವೂ ಅದನ್ನು ತೊಳೆದು ಬಿಸಿಲಿಗೆ ಒಣಗಿ ಹಾಕಬೇಕು. ನಾಲ್ಕು - ಗರಿ ಗರಿಯಾದ ಬಿಸಿಲಿಗೆ ಹದವಾಗಿ ಒಣಗಿಕೊಂಡ ಅದನ್ನು ತೆಗೆದು ಇಸ್ತ್ರಿ ಮಾಡಬೇಕು. ಇವು ಮಾತ್ರ ರಾಜಿ ಆಗದ ವಿಷಯ.. ಈ ಕುರಿತು, ಅವನಿಗೂ ರುಕ್ಮಿಣಿಗೂ ಆದ ಜಗಳಗಳೂ ಅಷ್ಟಿಷ್ಟಲ್ಲ.

ತಂದ ಹೊಸ ಲುಂಗಿಯನ್ನು ಕೆ.ಕೆ. ಉಳಿದ ಬಟ್ಟೆಗಳ ಜೊತೆ ತೊಳೆಯಲು ವಾಶಿಂಗ್‌ ಮೆಷಿನ್‌ಗೆ ಹಾಕಿಬಿಡುತ್ತಿದ್ದ. ಅದು ಲೀಟರ್‌ ಗಟ್ಟಲೇ ಬಣ್ಣ ಬಿಟ್ಟು ರುಕ್ಮಿಣಿಯ ಸೀರೆಗಳ ಬಣ್ಣಗೆಡಿಸಿಬಿಡುತ್ತಿತ್ತು. ತಾಗಿದಲೆಲ್ಲ ಬಣ್ಣಗೆಡಿಸುವ ಅದರ ಕಂಡರೆ ರುಕ್ಮಿಣಿಗೆ ರೇಜಿಗೆ ಹುಟ್ಟಿಬಿಡುತ್ತಿತ್ತು. ಅಪ್ಪಿ ತಪ್ಪಿ ರುಕ್ಮಿಣಿ ಏನಾದರೂ ಇಸ್ತ್ರಿ ಮಾಡಲು ಮರೆತರೆ ಘನಘೋರವಾದ ತಪ್ಪು ಅವಳಿಂದ ಘಟಿಸಿದಂತೆ ರೇಗಾಡಿ ಕೆ.ಕೆ. ಗೆಳೆಯರ ಮನೆಗೆ ಹೋಗಿ ಮಲಗಿಬಿಡುತ್ತಿದ್ದ.

ಒಮ್ಮೆಯಂತೂ ಇದು ವಿಕೋಪಕ್ಕೆ ಹೋಗಿ ರುಕ್ಮಿಣ್ಣಿ ಕೆ.ಕೆ.ಗೆ ನಾನು ನೀನು ಬೇರೆಯಾದರೆ ಹೇಗೆ ಎಂದು ತಮಾಷೆಗೆಂದರೆ ‘‘ ಅದು ಒಳ್ಳೆಯದು, ಆಗಲಾದರೂ ನನ್ನ ಲುಂಗಿಯ ಮೇಲಿರುವ ನಿನ್ನ ಹಗೆತನ ಮುಗಿಯಬಹುದು. ಇವತ್ತೇ ಬೇಕಾದರೂ ನೀನು ಮನೆಯನ್ನು ಬಿಟ್ಟು ಹೋಗಬಹುದು’’ ಅಂದಿದ್ದ. ಅವನ ಧ್ವನಿ ತಮಾಷೆಯದಾಗಿರಲಿಲ್ಲ. ಕಣ್ಣುಗಳು ತಣ್ಣಗಿನ ಕ್ರೂರತನದಿಂದ ಹೊಳೆಯುತ್ತಿದ್ದವು. ಅದಾದ ಹತ್ತು ದಿನ ರುಕ್ಮಿಣಿಯ ಜೊತೆ ಆತ ಮಾತನ್ನೇ ಆಡಿರಲಿಲ್ಲ. ಆ ದಿನಗಳಲ್ಲಿ ರುಕ್ಮಿಣಿ ಎಷ್ಟು ಹೆದರಿಕೊಂಡಿದ್ದಳೆಂದರೆ ಹದಿನಾಲ್ಕನೆಯ ಮಹಡಿಯ ಬಾಲ್ಕನಿಯಲ್ಲಿ ಒಣಗಿರುತ್ತಿದ್ದ ಬಿಸಿಲಿಗೆ ನಿಧಾನವಾಗಿ ಸರಿದಾಡುತ್ತಿದ್ದ ಆ ನೀಲಿ ಲುಂಗಿಯನ್ನು ಕಣ್ಣೆತ್ತಿ ನೋಡಲೂ ಹೆದರಿಕೆಯಾಗುತ್ತಿತ್ತು. ತನ್ನ ಬದುಕಿನ ಎಲ್ಲ ಸಾಧ್ಯತೆಗಳೂ ಆ ನೀಲಿ ಲುಂಗಿಯ ತುಂಬಾ ಹರಡಿಕೊಂಡ ಬಿಳಿಯ ಗೆರೆಯ ಚಚ್ಚೌಕದಲ್ಲಿ ಹುಗಿದು ಹೋದಂತೆ ಕಂಡಿತು.

ಕೆ.ಕೆ. ನಾಯರ್‌ ಆಫೀಸಿಗೆ ಹೋದ ಮೇಲೆ, ಅಪ್ಪನಿಗೆ ಫೋನ್‌ ಮಾಡಿ ಹೇಳಿದರೆ ರುಕ್ಮಿಣಿಯ ಅಪ್ಪ ಗಹಗಹಿಸಿ ನಕ್ಕುಬಿಟ್ಟಿದ್ದರು. ‘‘ಅಲ್ಲ ಮಾರಾಯ್ತಿ ಆತನೇನಾದರೂ ಬಿಳಿಯ ಗೆರೆ ಹೊತ್ತಿರುವ ನೀಲಿ ಸೀರೆಯನ್ನು ಸುತ್ತಿಕೊಂಡಿರುವ ಹೆಣ್ಣೊಬ್ಬಳ ಹಿಂದೆ ಓಡಾಡತೊಡಗಿದ್ದರೆ, ಆ ಸೀರೆಯನ್ನು ಬಿಡಲೂ ಸಾಧ್ಯವಿಲ್ಲ ಎಂದಿದ್ದರೆ ನಾವೇನಾದರೂ ಮಧ್ಯೆ ಪ್ರವೇಶಿಸಬಹುದಿತ್ತು. ಆ ಯಕಶ್ಚಿತ್‌ ಲುಂಗಿಗೇ ನೀನು ಯಾಕೆ ಅಷ್ಟು ಹಟ ಹಿಡಿಯಬೇಕು. ಒಂದು ಹತ್ತು ಲುಂಗಿ ತಂದು ಬೇರೆ ಬಕೇಟ್ಟಲ್ಲಿ ಇಡು. ಬೇರೆ ಬೇರೆಯಾಗಿಯೇ ತೊಳೆದು ಒಣಹಾಕಿದರೇ ಆಯಿತಲ್ಲಾ’’ ಎಂದು ಅಪ್ಪ ನಗುತ್ತಲೇ ಫೋನ್‌ ಇಟ್ಟುಬಿಟ್ಟಿದ್ದರು. ಅಮ್ಮ ಮಾತ್ರ ಗಂಡಸರೇ ಹಾಗೆ, ಅವರಿಗೆ ಅದೆಲ್ಲಾ ಅರ್ಥವೆಲ್ಲಾಗುತ್ತದೆ ಸುಮ್ಮನಿದ್ದು ಬಿಡು ಅಂದಿದ್ದರು.

ಆ ದಿನ ಒಬ್ಬಳೇ ಕುಳಿತು ತಾಸುಗಟ್ಟಲೇ ತಾನು ಅತ್ತಿದ್ದನ್ನು ರಾತ್ರಿ ಮನೆಗೆ ಬಂದ ಕೆ.ಕೆ.ಗೆ ಹೇಳಿದರೇ ‘‘ನಿನ್ನ ಅಪ್ಪ ನಿನಗಿಂತ ಬುದ್ಧಿವಂತ. ಈಗಲಾದರೂ ಬುದ್ಧಿ ಬಂತಲ್ಲಾ ನಿನಗೆ, ಇವತ್ತು ನಮ್ಮ ಕಂಪನಿಯ ತ್ರೈಮಾಸಿಕ ಫಲಿತಾಂಶ. ಸಿ.ಎನ್‌.ಬಿ.ಸಿ.ಯಲ್ಲಿ ನಾನು ಬರುವವನಿದ್ದೇನೆ. ಬೇಕಿದ್ದರೆ ನಿನ್ನ ಅಪ್ಪ ಅಮ್ಮರಿಗೆ ಫೋನ್‌ ಮಾಡಿ ಹೇಳು’’ ಎಂದು ಟಿ.ವಿ.ಯ ಮುಂದೆ ಕುಳಿತು ಬಿಟ್ಟಿತ್ತು ಆಸಾಮಿ. ರುಕ್ಮಿಣಿ ಒಳಗೆ ಬೇಡ್‌ರೂಂಗೆ ಹೋದರೆ ಆಗಷ್ಟೆ ಗರಿಗರಿಯಾಗಿ ಹೊಳೆಯುತ್ತಿದ್ದ ಲುಂಗಿ ಅವಳನ್ನು ಹಲ್ಕಿರಿದು ಅಣಕಿಸುವಂತಿತ್ತು. ತಾನು ಸಿ.ಎನ್‌.ಬಿ.ಸಿ.ಯಲ್ಲಿ ಬರುತ್ತಿದ್ದರೆ ಅದನ್ನ ನೋಡಲಿಕ್ಕೂ ಬರದ ರುಕ್ಮಿಣಿಯ ಮೇಲೆ ಮತ್ತೆ ಹತ್ತೂ ದಿನ ಕೆ.ಕೆ ಮುನಿಸಿಕೊಂಡಿದ್ದ. ಕೊನೆಗೆ ಗರ್‌ ಗರ್‌ಕಿ ಕಹಾನಿಯಲ್ಲಿಯೇ ಮುಳುಗಿರುವ ನಿನಗೆ ಇದೆಲ್ಲಾ ಎಲ್ಲಿ ತಿಳಿಯುತ್ತದೆ ಎಂದೂ ಲೇವಡಿ ಕೂಡಾ ಮಾಡಿದ್ದ. ಯಾವುದಕ್ಕೂ ರುಕ್ಮಿಣಿ ಜಗ್ಗದಾಗ, ಪಂಚತಾರಾ ಹೋಟೆಲ್‌ನಲ್ಲಿ ಊಟ ಹಾಕಿಸಿ, ಒಂದು ಸುಖ ಸಂಸಾರಕ್ಕೆ ಇವೆಲ್ಲವೂ ಎಷ್ಟು ಮುಖ್ಯ ಔದ್ಯೋಗಿಕ ರಂಗದಲ್ಲಿ ತಾನು ಹೊಂದುತ್ತಿರುವ ಪ್ರಗತಿ ತಮ್ಮ ಬದುಕನ್ನು ಹೇಗೆ ಗುಣಾತ್ಮಕವಾಗಿ ಬದಲಾಯಿಸುತ್ತದೆ. ಹೇಗೆ ಈಗಿನ ಅಮೆರಿಕಯ ಕಂಪನಿಯಲ್ಲಿ ಎಷ್ಟು ಬೇಗನೆ ಮುಖ್ಯ ಹುದ್ದೆಗೆ ತಾನು ಬರುತ್ತಿದ್ದೇನೆ. ಅಮೆರಿಕೆಯ ಅತಿಥಿಗಳು ಬಂದಾಗ ಮನೆಗೆ ಕರೆದು ಅವರನ್ನು ಒಳ್ಳೆಯ ರೀತಿಯಲ್ಲಿ ಸತ್ಕರಿಸುವುದು ತನ್ನ ಕೆರಿಯರ್‌ ದೃಷ್ಟಿಯಿಂದ ಎಷ್ಟು ಮುಖ್ಯ ಎಂದೂ ಕೊರೆದಿದ್ದ. ‘ದೀಪಾವಳಿಯಲ್ಲಿ ಆ ಜಾನ್‌ ಹಕಮನನ್ನು ನೀನು ಮನೆಗೆ ಕರೆದಿದ್ದೆಯಲ್ಲ ಅವರೇನಾದರೂ ನಿನ್ನನ್ನು ಕ್ರಿಸ್‌ ಮಸ್‌ ಊಟಕ್ಕೆ ಕರೆದರೇ ?’ ಎಂದು ರುಕ್ಮಿಣಿ ಕೇಳಿದ್ದಕ್ಕೆ ಮತ್ತೆರಡೂ ದಿನ ಸಿಟ್ಟುಗೊಂಡಿದ್ದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X