• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಸಿರು ಸೀರೆ

By Staff
|

ಕೆ.ಕೆ. ನಾಯರ್‌ ನಿಧಾನವಾಗಿ ಎದ್ದು ತನ್ನ ವಾರ್ಡ್‌ ರೋಬ್‌ ತೆಗೆದ. ಎಷ್ಟೆಲ್ಲಾ ವರುಷದಿಂದ ಅಜ್ಜಿಯ ಸೀರೆ ಇದ್ದಲ್ಲಿಯೇ ಇತ್ತು. ಈಗಲೂ ಅದು ಎಳೆಯ ಭತ್ತದ ತೆನೆಯಂತೆ ಹೊಳೆಯುತ್ತಿತ್ತು. ಕೆ.ಕೆ. ಅದರ ನೆರಿಗೆ ಬಿಚ್ಚಿ, ಸೆರಗೂ ಬಿಚ್ಚಿ ನಿಧಾನವಾಗಿ ಪ್ಯಾಂಟು ಶರ್ಟು ಬಿಚ್ಚೊಗೆದು ಬತ್ತಲಾದ ತನ್ನ ಮೈ ತುಂಬಾ ಆ ಯನ್ನು ಸುತ್ತಿಕೊಂಡ. ಒಂದು ಸುಖದ ಕನಸು ಮೈಯ ಹೊಕ್ಕಿದಂತೆ ಕಣ್ಣು ಮುಚ್ಚಿ ನಿಂತ.

ಬುಧವಾರ, ಇಪ್ಪತ್ತನಾಲ್ಕು ಜನವರಿ ಎರಡು ಸಾವಿರದ ಏಳರ ಬೆಳಗ್ಗೆ ಬಡಿದುಕೊಂಡ ಅಲಾರಾಂ ಸಪ್ಪಳಕ್ಕೆ ಏಳತೊಡಗಿದ ಕೆ.ಕೆ. ನಾಯರ್‌ಗೆ ತಾನು ಉಟ್ಟುಕೊಂಡ ಲುಂಗಿ, ಮೂಲದಲ್ಲಿದ್ದ ತನ್ನ ನೀಲಿ ಬಣ್ಣಗಳ ಕಳೆದುಕೊಂಡು, ತನ್ನ ಮೈ ಮೇಲಿದ್ದ ಬಿಳಿಯ ಗೆರೆಗಳನ್ನೆಲ್ಲಾ ಕಳೆದುಕೊಂಡು, ಬಿಳಿಯ ಬಣ್ಣವೊಂದನ್ನು ಮಾತ್ರ ಉಳಿಸಿಕೊಂಡು, ಬಿಳಿಯ ಸೀರೆಯಾಗಿ ತನ್ನ ಮೈಯನ್ನು ಸುತ್ತಿಕೊಂಡಿರುವಂತೆ ಅನ್ನಿಸಿ ದಡಕ್ಕನೆ ಎದ್ದು ಕುಳಿತುಕೊಂಡ.

ಸ್ವಪ್ನವೋ ಅಥವಾ ಇದು ನಿಜವೋ ಎಂದು ಹೊದೆದುಕೊಂಡ ಬೆಡ್‌ಶೀಟನ್ನು ಸ್ವಲ್ಪವೇ ಸರಿಸಿ ನೋಡಿದರೇ ನೀಲಿಯಾಗಿರಬೇಕಿದ್ದ ಲುಂಗಿ ಮತ್ತೆ ಬಿಳಿಯ ಸೀರೆಯಂತೆ ತನ್ನದೆ ವೈದವ್ಯದಂತೆ ಹೊಳೆದು, ಗಲಿಬಿಲಿಯಿಂದ ಮತ್ತೆ ಕುಳಿತಲ್ಲೆ ಗೋಡೆಗೆ ಒರಗಿಕೊಂಡ.

ಹಾಗೆ ಹಾಸಿಗೆಯಲ್ಲಿ ಕುಳಿತುಕೊಂಡ ಕೆ.ಕೆ. ನಾಯರ ತನ್ನ ಕಾಲಿನ ಕಡೆ ನೋಡಿಕೊಳ್ಳಲು ಈಗ ಹೆದರಿಕೊಂಡ. ಮೈತುಂಬ ಮುಸುಕೆಳೆದು ಮತ್ತೆ ಕಣ್ಣುಮುಚ್ಚಿ ಎದ್ದರೇ, ಮತ್ತೆ ಅದೇ ಬಿಳಿಯ ಸೀರೆ ಮತ್ತಷ್ಟು ಬಿಳಿಯಾಗಿ ಹೊಳೆಯಿತು. ಹೆದರಿದಂತೆ ಮತ್ತೆ ತಲೆ ತಿರುಗಿಸಿ ಮೇಲೆ ನೋಡಿದರೆ ವಿಶಾಲ ಮಲಗು ಕೋಣೆಯ ತುಂಬಾ ತಾನೇ ದೇಶ ವಿದೇಶದಿಂದ ತಂದು ಶೇಖರಿಸಿದ ಮಾಡರ್ನ್‌ ಆರ್ಟಿನ ಫ್ರೇಂಗಳು ಕಂಡವು. ಹಿಂದೆಲ್ಲಾ ಅದ್ಭುತವಾಗಿ ತೋರಿದ ಅವು ಈಗ ಮಾತ್ರ ಚಿತ್ರವಿಚಿತ್ರವಾಗಿ ಇಡಿಯ ಕೋಣೆತುಂಬ ಹಬ್ಬಿಕೊಂಡು ಹೆದರಿಸತೊಡಗಿದವು.

ಕೋಣೆಯ ಎಡಗಡೆಯ ಮೂಲೆಯಲ್ಲಿ ಕೆ.ಕೆಯ ಮೊದಲ ಅಮೆರಿಕೆಯ ಭೇಟಿಯ ಸಂದರ್ಭದಲ್ಲಿ ಸರಿಯಲಿಸಂ ಆರ್ಟ್‌ ಗ್ಯಾಲರಿಯಲ್ಲಿ ಐದುನೂರು ಡಾಲರ್‌ ಕೊಟ್ಟು ಖರೀದಿಸಿದ ಚಿತ್ರವಿತ್ತು. ತಲೆಯೇ ಇಲ್ಲದ, ಹೆಣ್ಣೋ ಗಂಡೋ ಎಂದೂ ಕೂಡಾ ಹೇಳಲಾಗದ ಕೇವಲ ಸೋಂಟದಿಂದ ಕುತ್ತಿಗೆಯವರೆಗೆ ಇರುವ ಚಿತ್ರದ ಎದೆ ತುಂಬುವಂತೆ ಇಳಿದು ಬಿದ್ದ ಎರಡು ಭಾರಿ ಗಾತ್ರದ ಜೋತು ಬಿದ್ದ ಮೊಲೆಗಳು, ಆ ಮೊಲೆಗಳನ್ನು ಹಾದಿಯ ಮೇಲೆ ಕುಳಿತು ತದೇಕ ದೃಷ್ಟಿಯಿಂದ ನೋಡುವ ಎರಡು ಗಂಡು ನಾಯಿಗಳು, ಆ ನಾಯಿಗಳ ಹಲ್ಲಿಂದ ಹೊರ ಚಾಚಿದ ನಾಲಿಗೆಯಿಂದ ಈಗಲೋ ಆಗಲೋ ನೆಲಕ್ಕೆ ಬೀಳಬಹುದು ಎಂದು ಕಾಣುವ ಎಂಜಲಿನ ರಾಶಿ. ಅವೆರಡಕ್ಕೆ ಹಿನ್ನೆಲೆಯಾಗಿ ಕ್ಯಾನ್‌ವಾಸಿನ ಇನ್ನೊಂದು ಮೂಲೆಗೆ ಜೆ.ಸಿ.ಬಿ. ಯಂತ್ರದ ಟೈಯರನ್ನಾಗಲಿ, ಅಥವಾ ಅರ್ಥ್‌ ಮೂವರ್ಸ್‌ನ ಹಿಡಿಕೆಯಂತೆ ಕಾಣುವ ಒಂದು ಗೋಲ ಮತ್ತು ಅನ್‌ನೋನ್‌ ಆರ್ಟಿಸ್ಟ್‌ ಎಂದು ಸಹಿ ಹಾಕಿದ ಚಿತ್ರಕಾರನ ಬಿಳಿಯ ರುಜು..

ಆ ಫೋಟೊ ಮನೆಗೆ ತಂದಾಗ ಕೆ. ಕೆ. ನಾಯರನಿಗೆ ಮದುವೆಯಾಗಿ ಒಂದು ವರ್ಷವಾಗಿತ್ತಷ್ಟೆ. ಕೆಲಸದ ಗಡಿಬಿಡಿಯಲ್ಲಿ ತಿರುಗಾಟದಲ್ಲಿ ಆ ವರುಷ ಆತ ಮನೆಯಲ್ಲಿ ಇದ್ದದ್ದು ಕಡಿಮೆಯೇ. ಹೆಂಡತಿ ರುಕ್ಮಿಣಿ ಎನ್‌.ಎಮ್‌.ಕೆ.ಆರ್‌. ಕಾಲೇಜಿನಲ್ಲಿ ಫಿಸಿಕ್ಸ್‌ ಪ್ರೊಫೆಸರ್‌, ಆ ದಿನ ರಜೆ ಹಾಕಿ, ಏರ್‌ ಪೋರ್ಟಿನಿಂದ ಕರೆ ಬರುವದನ್ನು ಕಾಯುತ್ತಿದ್ದಳು. ಅವಳ ಈ ವರೆಗಿನ ದಾಂಪತ್ಯದಲ್ಲಿ, ಏರಪೋರ್ಟನಿಂದ ಬರುವ ಅವನನ್ನ ಕಾಯುವ ದಿನಗಳ ಸಂಖ್ಯೆ, ಅವಳು ಅವನ ಜೊತೆಗೆ ಕಳೆದ ದಿನಗಳ ಸಂಖ್ಯೆಗಿಂತ ಹೆಚ್ಚು ಇತ್ತು.

ಓಮ್ಮೊಮ್ಮೆ ತನಗೆ ಮದುವೆಯಾಗಿರುವದೇ ಸುಳ್ಳಿರಬೇಕು ಅನ್ನಿಸುವಷ್ಟು ಅಸಮಂಜತೆಯಲ್ಲಿ ಆಕೆಗೆ ದು:ಖವುಕ್ಕಿ ಬಿಡುತ್ತಿತ್ತು. ಕೆ.ಕೆ ಮಾತ್ರ, ಇಡಿಯ ಬದುಕನ್ನ ಕುಂಡೆಯ ಅಡಿ ಇಟ್ಟು ಬಿಸಿ ಮಾಡುವನಂತೆ, ಯಾರು ಊಹಿಸದ ಒಂದು ದೊಡ್ಡ ತತ್ತಿ ಇಟ್ಟುಕೊಂಡು ಶಾಖಕೊಡುತ್ತಿರುವಂತೆ ತೋರಿ, ಹುಡಿಗಿಯರ ಮುಂದೆ ಪಾಠಮಾಡುವಾಗ ನಗೆ ಉಕ್ಕಿ ಬಿಡುತ್ತಿತ್ತು. ಸೆಮಿಸ್ಟರು, ಎಕ್ಸಾಮ ಎಂದೆಲ್ಲಾ ಗಡಿಬಿಡಿಸಿ ಓದುವ ತನ್ನ ವಿದ್ಯಾರ್ಥಿಗಳೆಲ್ಲ ಮುಂದೊಂದು ದಿನ ಕೆ.ಕೆ ಯಂತಹ ಪ್ರಾಣಿಯ ಪಾಣಿಗ್ರಹಣ ಮಾಡಿ, ತನ್ನಹಾಗೆಯೇ ಬಾಗಿಲಿಗೊರಗಿ ಕಾಯುವ ಚಿತ್ರ ಬೇಡ ಅಂದರು ಹುಟ್ಟಿಕೊಂಡು ಪಾಠಮಾಡುವ ಮನಸ್ಸೆ ಹಾಳಾಗುತ್ತಿತ್ತು.

ಆ ದಿನ, ಕೆ.ಕೆ. ಬಂದವನೇ, ‘‘ನೋಡು ನಿನಗೇನೋ ಪ್ರೆಸೆಂಟ್‌ ತಂದಿದ್ದೇನೆ’’ ಎಂದು ಸುರುಳಿ ಸುತ್ತಿಕೊಂಡ ಆ ಚಿತ್ರವನ್ನು ಜೋಪಾನವಾಗಿ ಬಿಡಿಸಿ ಬೆಡ್‌ರೂಂನ ಹಾಸಿಗೆಯ ಮೇಲೆ ಹರಡಿ ನಿಂತಿದ್ದ. ರುಕ್ಮಿಣಿಗೆ ಅವನು ಹಾಗೆ ಹರಡಿಕೊಂಡು ಬಿಚ್ಚುವಾಗ, ಕೇವಲ ಕೆಂಪು ಹಳದಿ ಬಣ್ಣ ಕಂಡಿದ್ದು, ಈಗ ಪೂರ್ಣ ಬಿಚ್ಚಿ ಹರಡಿದಾಗ ಪಟದಲ್ಲಿ ಹರಡಿಕೊಂಡ ಜೋತು ಬಿದ್ದ ಮೊಲೆಗಳೂ ಅದನ್ನೇ ಜೊಲ್ಲು ಸುರಿಸಿಕೊಂಡು ನೋಡುತ್ತಿರುವ ಎರಡು ಗಂಡು ನಾಯಿಗಳು ಈಗಲೇ ಎದ್ದು ಆ ಮನೆಯ ಡ್ರಾಯಿಂಗ್‌ ರೂಂನಲ್ಲಿ ಕುಳಿತುಕೊಂಡಂತೆ ಕಂಡು ಕೋಪ, ದುಃಖ ಹೇಸಿಗೆ ಎಲ್ಲವೂ ಒಟ್ಟಿಗೇ ಹುಟ್ಟಿಕೊಂಡಿತ್ತು. ಇದಾವುದರ ಲಕ್ಷ್ಯವೇ ಇರದೇ ಕೆ.ಕೆ. ನಾಯರ್‌, ಆ ಚಿತ್ರವನ್ನು ಹಾಸಿಗೆಯಿಂದ ತೆಗೆದು ಟೇಬಲ್‌ ಮೇಲೆ ಹರಡಿಕೊಂಡು ಸಾಲದುದಕ್ಕೆ ಟೇಬಲ್‌ ಲ್ಯಾಂಪ್‌ ಲೈಟು ಬಿಟ್ಟು ತುಟಿಯಲ್ಲೊಂದು ಕಿಂಗ್ಸ್‌ ಸಿಗರೇಟು ಕಚ್ಚಿಕೊಂಡು, ಅದರ ಆಳ ನಿಗೂಢ ಅರ್ಥವನ್ನೆಲ್ಲಾ ಸಂಪೂರ್ಣವಾಗಿ ಗ್ರಹಿಸುವಂತೆ ಕಣ್ಣು ಬಿಟ್ಟುಕೊಂಡು ನಿಂತಿದ್ದ.

ಜೋತುಬಿದ್ದ ಮೋಲೆಗಳನ್ನ ಹರಿದು ತಿನ್ನುವಂತೆ ನೋಡುವ ಆ ಗಂಡುನಾಯಿಯಗಳ ಚಿತ್ರದಲ್ಲಿ ಅಂತಹ ಮಹತ್ತರವಾದದ್ದೇನಿದೆ ಎಂದು ರುಕ್ಮಿಣಿಗೆ ತಿಳಿಯುವಂತಿರಲಿಲ್ಲ.

‘‘ನೋಡು ರುಕ್ಮಿಣಿ ಈ ಚಿತ್ರವನ್ನು ಎಂತಹ ಅದ್ಭುತ ಸೃಷ್ಠಿ ಇದಕ್ಕೆ ಐದುನೂರು ಡಾಲರ್‌. ಅಂದರೆ ಹತ್ತಿರ ಹತ್ತಿರ ಇಪ್ಪತ್ತೂ ಸಾವಿರಕ್ಕೂ ಮಿಗಿಲು, ... ನೋಡು ಇಲ್ಲಿ ಕೆಂಪು ಹಳದಿ ಮಿಶ್ರವಾಗುವಲ್ಲಿ ಒಂದು ಬಿಳಿಯ ರೇಖೆ ಹುಟ್ಟಿಕೊಳ್ಳುತ್ತಿದೆಯಲ್ಲಾ ಅದು ಬದುಕು ಸಾಧಿಸುವ ಒಂದು ಶಾಂತಿಯ ಸಂಕೇತ. ಸಂಘರ್ಷಗಳ ಮುಖಾಂತರವೇ ನಿರಂತರವಾದ ಶಾಂತಿ ಸಾಧ್ಯ ಎನ್ನುವ ರ್ಯಾಡಿಕಲ್‌ ಚಿಂತನ ಕ್ರಮ. ಅದು ಬಿಂದುವಾಗಿ ಹುಟ್ಟುವುದು, ಹೇಗೆ ಇಡಿಯ ಪಟವನ್ನು ಗಾಢವಾಗಿ ಆವರಿಸುತ್ತಿದೆ ನೋಡು, ಕಾಮ, ಕ್ರೋಧ, ಮದ ಮತ್ಸರಗಳ ಬಿಂಬಿಸುವ ಈ ನಾಯಿಗಳ ಆಕಾರ ನೋಡು. ಅವುಗಳಲ್ಲಿ ಒಂದು ಸಣ್ಣದು, ಮತ್ತೊಂದು ದೊಡ್ಡದು, ಸಣ್ಣ ನಾಯಿಯ ಹೊಟ್ಟೆ ನೋಡು, ಅದು ಹೇಗೆ ಹಸಿವಿನಿಂದ ಬಳಲುತ್ತಿದೆ. ಅದು ಮೊಲೆಗಳನ್ನು ನೋಡುತ್ತಿರುವುದು ಕಾಮದಿಂದಲ್ಲ, ವಾಂಚಲ್ಯದಿಂದಲ್ಲ. ಬದಲಿಗೆ, ಜೀವಿಸಲೂ, ಅಗತ್ಯವಾಗಿ ಬೇಕಾದ ಆಹಾರಕ್ಕಾಗಿ, ಅದರ ಕಣ್ಣುಗಳ ನೋಡು ಹೇಗೆ ಬದುಕುವ ಛಲದಿಂದ ಅವು ಹೊಳೆಯುತ್ತಿವೆ. ಬದುಕಿನ ನಿರಂತತೆಯ ಸಂಕೇತ ಅದು. ಹುಟ್ಟು ಸಾವಿನ ಮಧ್ಯೆ ಇರುವ ಖಾಸಗಿ ಜಾಗ ಅದು. ಆ ಎದೆಗಳ ನೋಡು, ಅದು ಈ ನೆಲದ ಸಂಕೇತ. ಬಯಸಿದ್ದನ್ನು ಕೊಡುವ ಅಮೃತ ಕಲಶಗಳು ಅವು ... ಅಲ್ಲಿ ಮುಪ್ಪಿನ ನೆರಿಗೆಗಳಿಲ್ಲ ಸೋತ ಧ್ವನಿ ಇಲ್ಲ. ಬಾ ಶಕ್ತಿ ಇದ್ದರೆ ಮೊಗೆದು ಕುಡಿ ಎನ್ನುವ ಪಂಥದ ಆಹ್ವಾನ ಮಾತ್ರ. ಬಣ್ಣಗಳ ಕಲಸುವಿಕೆಯಿಂದ ಎದ್ದ ಪ್ರಭೆಯನ್ನು ನೋಡು’’ ಎನ್ನುತ್ತ ಹೋದವನಿಗೆ ರುಕ್ಮಿಣಿ ಕೇಳುತ್ತಲೆ ಇಲ್ಲ ಎನ್ನುವ ಸಂಶಯ ಹುಟ್ಟಿ ಮುಖ ಎತ್ತಿ ನೋಡಿದರೆ, ಅವಳು ಹದಿನಾಲ್ಕನೇ ಮಹಡಿಯ ಕಿಟಕಿಯ ಬಾಗಿಲಿನಿಂದ, ಕಾಣುವ ವಿಶ್ವದಲ್ಲಿ ಮುಖ ನೆಟ್ಟಿದ್ದಳು. ಅವಳ ಕಣ್ಣುಗಳು ತೆಳುವಾಗಿ ತುಂಬಿಕೊಂಡಿದ್ದವು.

ಎನ್‌.ಎಮ್‌.ಕೆ. ಕಾಲೇಜಿನ ಬರೇ ಹುಡುಗಿಯರನ್ನೂ, ಪರೀಕ್ಷೆಯಲ್ಲಿ ಫೇಲಾಗಿ ಬಿಡುವ ಭಯದಿಂದ, ದೇವರಿಗೆ ಕೈಮುಗಿದ ಹತ್ತಿರದ ಬಸವನಗುಡಿಯ ಬಸವನಿಗೇ ಹರಕೆ ಹೊತ್ತು ಜೀನ್ಸ್‌ ಪ್ಯಾಂಟಿನ ಕಿಸೆಯ ತುಂಬಾ ಹೂ, ಪ್ರಸಾದ, ದೇವರ ಫೋಟೊ ತುರುಕಿಕೊಂಡು ಬಂದು, ಉತ್ತರ ಪತ್ರಿಕೆಯ ಎರಡು ಬದಿಯಲ್ಲಿ ಮೂರು ಮೂರು ಇಂಚಿಗೆ ಗೆರೆ ಎಳೆದು ಮ್ಯಾಮ್‌, ಪೆನ್ಸಿಲ್‌ ಇದೆಯಾ, ಇದೆಯಾ ಎಂದು ಕೇಳುವ ಅವರ ನಕರಾಗಳನ್ನು ನೋಡಿ ನೋಡಿ ರೂಢಿ ಬಿದ್ದು ಹೋಗಿದ್ದ ರುಕ್ಮಿಣಗೆ ಹೀಗೆ ಜೋತು ಬಿದ್ದ ಮೊಲೆಗಳನ್ನು, ಅದನ್ನು ನೋಡುವ ನಾಯಿಗಳನ್ನು ಬೇರೆಯದೇ ಆದ ನೆಲೆಯಲ್ಲಿ ವಿಶ್ಲೇಷಿಸುತ್ತಾ ಲೋಕ ಮರೆತಿರುವ ಗಂಡಸಿನ ಈ ಹೊಸ ಲೋಕಕ್ಕೆ ತಕ್ಷಣ ತೆರೆದುಕೊಂಡಂತೆ ಅನ್ನಿಸಿತು. ಅದರ ಹಿಂದೆಯೇ ಇದೆಲ್ಲ ಪಲ್ಲಟ ಆದ ಚಿತ್ರ. ಪಲ್ಲಟ ಆದ ಮನಸ್ಸಿನಿಂದ ಹುಟ್ಟಿಹದು. ಅದನ್ನು ಐದು ನೂರು ಡಾಲರ್‌ ಕೊಟ್ಟು ಖರೀದಿಸಿದ ನಿನ್ನ ಮೆದುಳಿನ ತುಂಬಾ ಕಾರ್ಪೊರೇಶನ್‌ ತೊಟ್ಟಿಯ ಕಸ ತುಂಬಿಕೊಂಡಿರಬೇಕು ಎಂದು ಬಾಯ ತುದಿಗೆ ಬಂದ ಮಾತನ್ನು ಹೇಳಬೇಕೆಂದರೂ ದುಃಖ ಉಮ್ಮಳಿಸಿ ಹೇಳಲಾಗದಂತಿತ್ತು. ಅವಳಿಗೆ ಅರಿವೇ ಆಗದ ಕಾರಣಗಳಿಂದ ಅಸಾಧ್ಯ ಕೋಪ ದುಃಖಗಳು ಹುಟ್ಟಿ ಈ ಮದುವೆ ಹಾಳಾಗಿಹೋಗಲಿ ಅನ್ನಿಸತೊಡಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more