• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಡ ಬೆಳದಿಂಗಳು

By Staff
|

ಜೋಗಿ ಅವರ ಚಂದ್ರಹಾಸ, 32ಎನ್ನುವ ಕತೆಯನ್ನು,ಲಿಂಗದೇವರು ಕಾಡಬೆಳದಿಂಗಳುಹೆಸರಲ್ಲಿ ಸಿನಿಮಾ ಮಾಡಿದ್ದಾರೆ. ಈ ಸಿನಿಮಾಕ್ಕೆ ಜೋಗಿ ಮತ್ತು ಉದಯ ಮರಕಿಣಿ ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈ ಚಿತ್ರಕ್ಕೆ ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂಬ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಬೆನ್ನು ತಟ್ಟಿದೆ.ಈ ಮಧ್ಯೆ ಕಾಡ ಬೆಳದಿಂಗಳುಈ ವಾರ ಓಷಿಯಾನೋ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಕಾಡ ಬೆಳದಿಂಗಳುಕತೆ ಈಗ ನಿಮ್ಮ ಮುಂದಿದೆ.


Kada BeladingaluFilm Storyಸುದೇಷ್ಣೆ ಸ್ಪಾಟಿಗೆ ಬರುವ ಹೊತ್ತಿಗೆ ಆಕೆಯ ಪತ್ರಿಕೆಯ ಫೋಟೋಗ್ರಾಫರು ಫೋಟೋ ತೆಗೆದದ್ದು ಮುಗಿಸಿ ಕೆಮರಾವನ್ನು ಬ್ಯಾಗಿಗೆ ತುರುಕುತ್ತಿದ್ದ. ಅವಳನ್ನು ನೋಡಿದ್ದೇ ತಡ, ಆಗಲೇ ಬರಬೇಕಾಗಿತ್ತು ಅಂತ ಗೊಣಗಿದ. ಅವನು ಮಾತಾಡುವುದೇ ಹಾಗೆ, ಗೊಣಗಿದಂತೆ ಕೇಳಿಸುತ್ತದೆ.

ಸುದೇಷ್ಣೆ ತನ್ನ ಮುಂದೆ ಕರಕಲಾಗಿ ಬಿದ್ದಿದ್ದ ದೇಹಗಳನ್ನೊಮ್ಮೆ ನೋಡಿದಳು. ಯಾವುದನ್ನೂ ಗುರುತು ಹಿಡಿಯುವ ಹಾಗಿರಲಿಲ್ಲ. ಹತ್ತೋ ಇಪ್ಪತ್ತೋ ಹರೆಯದ ಜೀವಗಳು ಕಮರಿ ಹೋಗಿದ್ದವು. ಕೈಕಾಲು ಕಳೆದುಕೊಂಡು ವಿರೂಪಗೊಂಡು ಬಿದ್ದಿದ್ದವು. ಕಣ್ಣಲ್ಲೇ ಎಣಿಸಲು ಯತ್ನಿಸಿದಳು. ಏನು ಮಾಡಿದರೂ ಲೆಕ್ಕ ಸಿಗಲಿಲ್ಲ. ಅಗಾಧ ರಾಕ್ಪಸನೊಬ್ಬ ಅಂಗೈಯಲ್ಲಿ ತಿಕ್ಕಿ ಎಸೆದಂತೆ ದೇಹ ಮಾಂಸದ ಉಂಡೆಯಾಗಿ ಬಿದ್ದದ್ದು ನೋಡಿ ಸುದೇಷ್ಣೆಗೆ ಕರುಳು ಒತ್ತರಿಸಿ ಬಂತು. ಕಣ್ಮುಚ್ಚಿ ಅಲ್ಲಿಂದ ಕಾಲ್ತೆಗೆದಳು.

ನಕ್ಸಲೀಯರ ಬಾಂಬು ತಯಾರಿಕಾ ಕೇಂದ್ರ ಸ್ಪೋಟ. ಮೂವತ್ತಮೂರು ಸಾವು ಎಂದು ಹೆಡ್ಡಿಂಗು ಬರೆದು ತನ್ನ ವರದಿಯನ್ನು ಕಂಪೋಸಿಂಗ್ ಸೆಕ್ಪನ್ನಿಗೆ ಕಳಿಸಿಕೊಡುವ ಹೊತ್ತಿಗೆ ಗಂಟೆ ಹನ್ನೊಂದು ದಾಟಿತ್ತು. ಬ್ಯಾಗು ಜೋಡಿಸಿಕೊಂಡು ಇನ್ನೇನು ರೂಮಿಗೆ ವಾಪಸ್ಸಾಗಬೇಕು ಅನ್ನುವಷ್ಟರಲ್ಲಿ ಸಂಪಾದಕ ಹಿಡಿದುಕೊಂಡ. ಮೂವತ್ತಮೂರು ಸಾವು ಅಂತ ಹೇಳಿದರೆ ಏನು ಹೇಳಿದ ಹಾಗಾಯಿತು. ಆ ಮೂವತ್ತ ಮೂರು ಮಂದಿ ಯಾರ್ಯಾರು, ಎಲ್ಲಿಯವರು ಅನ್ನುವ ವಿವರ ಮುಖ್ಯ. ವಾಟ್ ಆರ್ ಯೂ ಟ್ರೈಯಿಂಗ್ ಟು ಪ್ರೂವ್. ಘಟನೆಯ ಅಗಾಧತೆ ಹೇಳೋಕೆ ಹೊರಟಿದ್ದೀಯಾ ಅಥವಾ ಜನರಿಗೆ ಸಹಾಯ ಮಾಡೋದಕ್ಕೆ ಹೊರಟಿದ್ದೀಯಾ ಅಂತ ದಬಾಯಿಸಿದ. ನಥಿಂಗ್ ಡೂಯಿಂಗ್, ಈ ವರದಿ ನನಗೆ ಬೇಕಾಗಿಲ್ಲ. ಸತ್ತವರ ಪಟ್ಟಿ ಜೊತೆಗೆ ಹೋಗಬೇಕು ಅಂತ ಪಟ್ಟುಹಿಡಿದ.

ಮತ್ತೆ ಸೀಟಿಗೆ ಬಂದು ಕುಳಿತು ಸುದೇಷ್ಣೆ ಇನ್‌ಸಪೆಕ್ಟರ್ ಆಲಿಯನ್ನು ಲೈನಿಗೆ ತೆಗೆದುಕೊಂಡಳು. ಹೇಗಾದರೂ ಮಾಡಿ ಸತ್ತವರ ಹೆಸರು ಕೊಡಿ ಅಂತ ಗೋಗರೆದಳು. ಅವನು ಫೋನನ್ನು ಹೆಡ್ ಕಾನ್ ಸ್ಟೇಬಲ್ ಕುಮಾರಪ್ಪನಿಗೆ ದಾಟಿಸಿದ. ಲಿಸ್ಟೇ ಬಂದಿಲ್ಲ ಅಂತ ಗೊಣಗುತ್ತಾ ಕುಮಾರಪ್ಪ ಕೊನೆಗೊಂದು ಪಟ್ಟಿ ಓದಿ ಹೇಳಿದ. ಆತ ನಿಧಾನವಾಗಿ ಓದಿ ಹೇಳಿದ್ದನ್ನು ಗ್ರಹಿಸುತ್ತಾ ಹನ್ನೆರಡು ನಿಮಿಷದ ಕೊನೆಗೆ ಮೂವತ್ತಮೂರನೇ ಹೆಸರನ್ನು ಸುದೇಷ್ಣೆ ಬರೆದುಕೊಂಡಳು; ಚಂದ್ರಹಾಸ, ಸನ್ನಾಫ್ ಶಿವರಾಮಯ್ಯ,32, ಕೊಪ್ಪ ವಿಲೇಜ್ ಮತ್ತು ಪೋಸ್ಟ್, ಬಾಳೆಹೊನ್ನೂರು ತಾಲೂಕು.

ಕೊಪ್ಪ ಮೂಡಿಗೆರೆ ತಾಲೂಕಲ್ಲಿದೆಯೋ, ನರಸಿಂಹರಾಜಪುರದಲ್ಲಿದೆಯೋ ಚಿಕ್ಕಮಗಳೂರಲ್ಲಿದೆಯೋ ಬಾಳೆ ಹೊನ್ನೂರಲ್ಲಿದೆಯೋ ಅಥವಾ ಬಾಳೆಹೊನ್ನೂರು ತಾಲೂಕು ಕೇಂದ್ರ ಹೌದೋ ಅಲ್ಲವೋ ಅನ್ನುವುದು ಸುದೇಷ್ಣೆಗೂ ಹೊಳೆಯಲಿಲ್ಲ, ಆ ಹೆಡ್ ಕಾನ್ ಸ್ಟೇಬಲ್ ಯೋಚಿಸುವುದಕ್ಕೂ ಹೋಗಲಿಲ್ಲ.

***

ಶಿವರಾಮಯ್ಯನಿಗೆ ಸುದ್ದಿ ತಿಳಿದದ್ದು ಮಾರನೆಯ ದಿನ ಮಧ್ಯಾಹ್ನದ ಹೊತ್ತಿಗೆ. ಆ ಊರಿಗೆ ಹೋಗುವ ಪತ್ರಿಕೆಯಲ್ಲಿ ಸತ್ತವರ ಹೆಸರು ಪ್ರಕಟವಾಗಿರಲಿಲ್ಲ. ತಾವು ತೋಡಿದ ಹಳ್ಳಕ್ಕೆ ತಾವೇ ಬಿದ್ದ ದುಷ್ಕರ್ಮಿಗಳು ಅಂತ ಕೆಟ್ಟದಾಗಿ ಹೆಡ್ಡಿಂಗು ಕೊಟ್ಟು, ಮೂವತ್ತೆಂಟು ಮಂದಿ ಕ್ರಿಮಿನಲ್ ಹಿನ್ನೆಲೆಯ ನರಹಂತಕರು ಸತ್ತಿದ್ದಾರೆ ಅನ್ನುವಂತೆ ಆ ಸುದ್ದಿಯನ್ನು ಆ ಪತ್ರಿಕೆ ಪ್ರಕಟಿಸಿತ್ತು.

ಅದನ್ನು ಓದುವ ಹೊತ್ತಿಗೆ ಶಿವರಾಮಯ್ಯ, ಗೆಳೆಯ ಚಂದ್ರಶೇಖರಯ್ಯನ ಮನೆಯಲ್ಲಿದ್ದರು.

ಚಂದ್ರಶೇಖರಯ್ಯ ನಿವೃತ್ತ ಮೇಷ್ಟರು. ಶಿವರಾಮಯ್ಯ ಕೃಷಿಕ. ಎಂಟು ವರುಷದ ಹಿಂದೆ ಒಂದೆಕರೆ ಹೊಲದಲ್ಲಿ ಅದೆಷ್ಟೋ ಕ್ವಿಂಟಾಲ್ ಬತ್ತ ಬೆಳೆದು ಮಾದರಿ ಕೃಷಿಕ ಅನ್ನಿಸಿಕೊಂಡಿದ್ದರು. ಹನ್ನೆರಡೆಕರೆ ಗದ್ದೆ, ಎಂಟೆಕರೆ ತೆಂಗಿನ ತೋಟವಿತ್ತು. ಆದರೆ ದುಡಿಯುವ ತ್ರಾಣ ಇರಲಿಲ್ಲ. ಆಗಲೇ ಎಪ್ಪತ್ತೆಂಟು ದಾಟಿ, ಎಂಬತ್ತಕ್ಕೆ ಕಾಲಿಟ್ಟಿದ್ದರು ಶಿವರಾಮಯ್ಯ.

ಚಂದ್ರಶೇಖರಯ್ಯನ ವಯಸ್ಸೂ ಹೆಚ್ಚೂ ಕಡಿಮೆ ಅಷ್ಟೇ ಇತ್ತು. ಆದರೆ ಸರ್ವೀಸಿನಲ್ಲಿದ್ದಾಗ ಮೇಲಧಿಕಾರಿಗಳು ಅವರನ್ನು ಕನಿಷ್ಠ ಹದಿನೈದು ಬಾರಿ ಎಲ್ಲೆಲ್ಲಿಗೋ ವರ್ಗಾ ಮಾಡಿದ್ದರು. ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮಕ್ಕೆ ವರ್ಗಾ ಆಗಿ ಹೋದ ವರುಷ ಅವರನ್ನೊಂದು ವಿಚಿತ್ರ ಕಾಯಿಲೆ ಅಮರಿಕೊಂಡಿತು. ಅದನ್ನು ಮಂಗನ ಕಾಯಿಲೆ ಅಂತಲೂ ಮೆದುಳುಜ್ವರ ಅಂತಲೂ ಕರೆದು ವೈದ್ಯರು ತಮ್ಮ ಪರಿಣತಿ ಹೆಚ್ಚಿಸಿಕೊಂಡರು. ಮೂರು ತಿಂಗಳ ಕಾಲ ಎಡೆಬಿಡದೆ ಕಾಡಿದ ದ್ವರ ನಿಂತಾಗ ಚಂದ್ರಶೇಖರಯ್ಯ ಎಲುಬಿನ ಗೂಡಾಗಿದ್ದರು. ಆಮೇಲೆ ಅವರ ದೇಹವನ್ನು ಯಾವ ಆರೈಕೆ ಕೂಡ ಮುಟ್ಟಲಿಲ್ಲ.

ಹಾದಿ ತಪ್ಪುತ್ತಿರುವ ಯುವಕರ ಬಗ್ಗೆ, ಹೆಚ್ಚುತ್ತಿರುವ ನಕ್ಸಲೀಯ ಚಟುವಟಿಕೆಗಳ ಬಗ್ಗೆ, ತೋಟದಲ್ಲಿ ಅತಿಯಾಗುತ್ತಿರುವ ಕಳ್ಳತನಗಳ ಬಗ್ಗೆ ಹರಟುತ್ತಾ ಕುಳಿತಾಗಲೇ ಶಿವರಾಮಯ್ಯನವರನ್ನು ಆ ಸುದ್ದಿ ತಲುಪಿದ್ದು. ಅವರ ಮಗ ಚಂದ್ರಹಾಸ ಬಾಂಬ್ ಬ್ಲಾಸ್ಟ್ ಆಗಿ ಸತ್ತ ಸುದ್ದಿ. ಅಲ್ಲಿಯ ತನಕ ಕೇವಲ ಸುದ್ದಿಯಷ್ಟೇ ಆಗಿದ್ದ ಮಾಹಿತಿ, ಇದೀಗ ಅವರನ್ನು ಅಲ್ಲಾಡಿಸುವ ಸತ್ಯವಾಗಿ ಪರಿಣಮಿಸಿತು. ಒಂದೂ ಮಾತಾಡದೇ ಶಿವರಾಮಯ್ಯ ಎದ್ದು ಮನೆಗೆ ಹೋದರು. ಆಗಷ್ಟೇ ತಿಂಡಿ ತಿನ್ನುತ್ತಿದ್ದ ಹೆಂಡತಿ ವಿಶಾಲಾಕ್ಷಿ ತಿಂಡಿ ತಿನ್ನುವ ತನಕ ಕಾದಿದ್ದು ಅವಳನ್ನು ಹೊರಡಿಸಿಕೊಂಡು ಮಂಗಳೂರಿಗೆ ಹೊರಟರು. ಕೊಪ್ಪದಿಂದ ಮಂಗಳೂರಿಗೆ ಆರು ಗಂಟೆಯ ಹಾದಿ.

***

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more