ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾಗೆ ಹೋಗಲಾಗದ ಭಾರತೀಯನ ಕತೆ...

By Staff
|
Google Oneindia Kannada News


ಅಲ್ಲಿ ಡಾಲರ್‌ಗಟ್ಟಲೇ ಸಂಬಳವಂತೆ ಅನ್ನುವುದರಿಂದ ಆರಂಭಗೊಂಡು, ಬಿಳಿ ಚರ್ಮದ ಬೆಡಗಿಯರ ತನಕ ಅಮೆರಿಕಾ ದೇಶದ ಸೆಳೆತ ಮತ್ತು ಪರಿಕಲ್ಪನೆಗಳು ಭಾರತೀಯರಲ್ಲಿ ಮನೆ ಮಾಡಿವೆ. ಆದರೆ ಯಾರ್ಯಾರ ಸುಖ ಎಲ್ಲೆಲ್ಲಿದೆ ಎನ್ನುವುದು ಈ ಕತೆ ಓದಿದವರಿಗೆ ಅರಿವಾಗುತ್ತದೆ!

Besagarahalli Narasimharaoಅಂದು ಮಧ್ಯಾಹ್ನ ಎಂದಿನಂತೆ ನನ್ನ ಮೊಬೈಲ್‌ ರಿಂಗಣಿಸಿದಾಗ, ನಾನು ‘ಹಲೋ’ ಎಂದೆ. ಅತ್ತ ಕಡೆಯಿಂದ ನನ್ನ ಹಳೆ ಸ್ನೇಹಿತನ ಧ್ವನಿನೂ ‘ಹಲೋ ’ ಎಂದಿತು. ಎಲ್ಲೊ ಕೇಳಿದ ಹಾಗೆ ಇದೆಯೆಲ್ಲ ಅಂದುಕೊಂಡೆ.... ಯಾರು? ಅಂತ ಕೇಳಿದೆ. ನಾನು ಕಣೋ ‘ಗುಲ್ಪ’ ಅಂದ ತಕ್ಷಣ ಹೊಳೆಯಿತು ಇವನು ‘ ಸುಬ್ಬು’ ಎಂದು. ಹಿಂದೆ ನಾವೆಲ್ಲ ಜೊತೆಯಾಗಿ ಕೆಲಸ ಮಾಡುತ್ತಿದ್ದಾಗ ಉಪಯೋಗಿಸುತ್ತಿದ್ದ ‘ಶಬ್ಧ’ ಇದು. ಬಹಳ ದಿನಗಳ ಮೇಲೆ ಕೇಳಿದ್ದರಿಂದ ಮನಸ್ಸಿಗೆ ಏನೋ ಒಂದು ತರಹದ ಸಂತೋಷ.

ಈಗ ಅವನದು ಇಲ್ಲೆಎಲ್ಲೋ ಇರುವ ಅಮೆರಿಕಾದಲ್ಲಿ ಕೆಲಸ. ಅಲ್ಲಿಗೆ ಹೋಗಿ ಹಲವು ವರ್ಷಗಳೆ ಕಳೆದರೂ ಅವನ ಮಾತಿನ ಧಾಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಅಲ್ಲಿಯೇ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಡನೆ ‘ಆರಾಮ’ ವಾದ ಜೀವನ.

ಅವನ ಹೆಸರು ಕೇಳಿದಾಗಲೆಲ್ಲಾ ಮನಸ್ಸಿಗೆ ಏನೋ ಬೇಸರ ಮತ್ತು ಅಸಮಾಧಾನ. ವರ್ಣಿಸುವುದಕ್ಕೆ ಕಷ್ಟ. ನನ್ನ ಜೊತೆಯಲ್ಲೇ ಕೆಲಸ ಮಾಡುತ್ತಿದ್ದವನು, ಈಗ ಅಮೆರಿಕಾದಲ್ಲಿ ಕುಳಿತು ನನ್ನನ್ನು ಅಣಕಿಸಿದಂತೆ ಭಾಸವಾಗುತಿತ್ತು. ನನ್ನ ಜೀವನ ಶೈಲಿಯಲ್ಲಿ ಅಂತಹದೇನು ಬದಲಾವಣೆ ಆಗಿರಲಿಲ್ಲ. ಅದೇ ಆಸೆಗಳು, ಆಕಾಂಕ್ಷೆಗಳು, ಅದೇ ಗುರಿ. ಏನನ್ನೊ ಸಾಧಿಸುವ ಹಂಬಲ. ವಾರಕ್ಕೊಮ್ಮೆ ಇದ್ದ ಪಾರ್ಟಿ ತಿಂಗಳಿಗೊಮ್ಮೆ, ಸ್ನೇಹಿತರ ಬದಲು ಹೆಂಡತಿ ಜೊತೆ ಓಡಾಟ, ಅಷ್ಟೆ ವ್ಯತ್ಯಾಸ. ಓದುವುದು ಬಿಟ್ಟು ಕೆಲಸ ಮಾಡಲು ಶುರು ಮಾಡಿ 15 ವರ್ಷಗಳೇ ಕಳೆದರು, ಕೆಲವೊಂದು ಆಸೆಗಳು ಇನ್ನೂ ಆಸೆಯಾಗಿಯೇ ಉಳಿದಿವೆ, ನನಗೆ.

‘ನಾಳೆ ಸಂಜೆ ಮೀಟ್‌ ಮಾಡೋಣ ’ ಎಂದು ಫೋನ್‌ ಕೆಳಗಿಟ್ಟಾಗ ಅವನು ಹೇಗಿರಬಹುದು? ಎಷ್ಟೊಂದು ಬೀಗುತ್ತಿರಬಹುದು ಎಂದು ಮನಸ್ಸಿನಲ್ಲೆ ಲೆಕ್ಕ ಹಾಕುತ್ತಿದ್ದೆ.

ಮಾರನೆ ದಿನ ಸಂಜೆ ತಡವಾಗಿ ಬರುವ ವಿಷಯವನ್ನು ಮನೆಯವರಿಗೆ ತಿಳಿಸಿ, ಆಫೀಸ್‌ಗೆ ಹೋದೆ. ಕೆಲಸ ಮಾಡಲು ಆಸಕ್ತಿ ಇರಲಿಲ್ಲ,. ಮನಸ್ಸು ಸಂಜೆ ಗಡಿಯಾರದ ಕಡೆಗೆ ನೆಟ್ಟಿತ್ತು. ಸಂಜೆ ಆಗುತ್ತಿದ್ದಾಗಲೆ, ಆತುರದಿಂದ ಹೊರಟು ನಮ್ಮ ಹಳೆಯ‘ಅಡ್ಡ’ ದ ಬಾರ್‌ನಲ್ಲಿ, ಅವನಿಗಾಗಿ ಕಾದು ಕುಳಿತೆ. ಟೈಮ್‌ ಸೆನ್ಸು ! ಅಮೆರಿಕನ್ನರ ಹಾಗೇ ಸರಿಯಾದ ಸಮಯಕ್ಕೆ ಹಾಜರಾದ ಸ್ನೇಹಿತನ ಜೊತೆ ಹರಟಲು ಶುರು ಮಾಡಿದೆ.

ಹಳೆಯ ಸ್ನೇಹಿತರ ಬಗ್ಗೆ, ಸ್ನೇಹಿತೆಯರ ಬಗ್ಗೆ, ಅಮೆರಿಕ ಜೀವನ ಶೈಲಿಯ ಬಗ್ಗೆ, ಕೆಲಸದ ಬಗ್ಗೆ, ಕುಟುಂಬದ ಬಗ್ಗೆ, ರಾಜಕೀಯದ ಬಗ್ಗೆ ಮಾತನಾಡುತ್ತ ಸಮಯ ಹೋಗಿದ್ದೆ ತಿಳಿಯಲಿಲ್ಲ. ಗಡಿಯಾರದ ಕಡೆ ನೋಡಿದಾಗ ನನ್ನ ಹೆಂಡತಿಯ ಜೊತೆ ರಾತ್ರಿ ನಡೆಯಲಿರುವ ಜಗಳದ ದೃಶ್ಯ, ಕಣ್ಣ ಮುಂದೆ ಹಾದು ಹೋಯಿತು. ನಮ್ಮ ಮಾತು ಮುಗಿಯುವಷ್ಟರಲ್ಲಿ, ಮನಸ್ಸಿಗೆ ಏನೋ ಉಲ್ಲಾಸ, ಕಾರಣವಿಲ್ಲದ ಸಂತಸ.

ಕಾರಣ ಏನಿರಬಹುದೆಂದು ಹುಡುಕ ಹೊರಟಾಗ ಸಿಕ್ಕ ಉತ್ತರಗಳು.....

ಮನೆಯಲ್ಲಿ ಎಷ್ಟು ಅಕ್ಕಿ ಇದ್ದರೇನು, ಸರಿಯಾದ ಸಮಯಕ್ಕೆ ಊಟವಿರದಿದ್ದಲ್ಲಿ, ಎಷ್ಟು ಒಡವೆ ವಸ್ತ್ರ ಇದ್ದರೇನು, ಪಕ್ಕದ ಮನೆಯವರಿಗೆ / ಹತ್ತಿರದವರಿಗೆ ತೋರಿಸದಿದ್ದಲ್ಲಿ, ಎಂತಹ ಮನೆಯಿದ್ದರೇನು, ಬಂಧುಮಿತ್ರರ ಕರೆದು ಉಣಬಡಿಸದಿದ್ದಲ್ಲಿ, ಎಂತಹ ಕಾರು ಇದ್ದರೇನು, ಬೇಕಾದವರ ಕೂರಿಸಿಕೊಂಡು (ಬೇಡದವರ ಮನೆ ಮುಂದೆ) ಓಡಾಡದಿದ್ದಲ್ಲಿ, ಕೈ ತುಂಬಾ ಸಂಬಳ ಬರುವ ಕೆಲಸವಿದ್ದರೇನು, ಬೇಕಾದಾಗ ರಜಾ ಸಿಗದಿದ್ದಲ್ಲಿ......

ದಿನವು ಜಗಳವಾಡುತ್ತಾ.. ಇರುವುದರಲ್ಲಿ ಹಂಚಿ ತಿನ್ನುತ್ತಾ ... ಬೆಂಗಳೂರಿನಲ್ಲಿ ಮನೆ ಕಟ್ಟುವ ಕನಸು ಕಾಣುತ್ತಾ.. ಹಬ್ಬ ಹರಿದಿನದಂದು ಬಂಧುಮಿತ್ರರ ಜೊತೆ ಬೆರೆಯುತ್ತಾ, ಎಲ್ಲದಕ್ಕು ಸರ್ಕಾರವನ್ನು ಬಯ್ಯುತ್ತಾ, ಬೇಕಾದಾಗ ರಜಾ ಹಾಕಿ ಮಜಾ ಮಾಡುತ್ತಾ, ಮನಸ್ಸಿನ ತುಂಬಾ ಕನಸು ಕಾಣುತ್ತಾ ಇರುವ ಜೀವನವೇ ಲೇಸು ಎನ್ನಿಸತೊಡಗಿತ್ತು.

ಬೇರೇನು ಬದಲಾವಣೆ ಇರದಿದ್ದರು ಮಾರನೇ ದಿನ ಕೆಲಸಕ್ಕೆ ಹೋಗುವಾಗ, ಏನೋ ಒಂಥರಾ ಖುಷಿ. ಮೊದಲಿಗಿಂತಲು ಹೆಚ್ಚು ಉತ್ಸಾಹ. ನನ್ನ ಮನಸ್ಸು ತನಗರಿವಿಲ್ಲದಂತೆಯೇ ಅಮೆರಿಕ ಗೆಳೆಯನಿಗೆ ಥ್ಯಾಂಕ್ಸ್‌ ಹೇಳುತ್ತಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X