ಕೆಂಪು ಟೋಪಿ
ನಕ್ಸಲರು ಮಾಡಬಹುದಾದ ಧಾಳಿಯನ್ನು ಎದುರಿಸಲು ಹೆಚ್ಚುಕಮ್ಮಿ ಇಪ್ಪತ್ನಾಲ್ಕು ಮನೆಯ ಜನರೂ ಸಜ್ಜಾಗತೊಡಗಿದರು. ದೇವಸ್ಥಾನದಲ್ಲಿ ತುರ್ತು ಸಭೆ ಕರೆಯಲಾಯಿತು. ಆಶ್ಚರ್ಯವೆಂದರೆ ಭಾಗಾಯ್ತು ಹೊಂದಿರುವ ಇಪ್ಪತ್ನಾಲ್ಕು ಮನೆಯ ಎರಡೂ ಪಾರ್ಟಿಯ ಜನರು ಸೇರಿದ್ದರು. ಗೊಂದಲ ಬೇಡವೆಂದು ಎರಡೂ ಪಾರ್ಟಿಗೂ ಹಿತವಾಗಿರುವ ಇಲ್ಲಿಯ ವಿಚಾರ ಅಲ್ಲಿಗೆ, ಅಲ್ಲಿಯ ವಿಚಾರ ಇಲ್ಲಿಗೆ ಹೇಳುತ್ತಾ ನಾನು ಎಲ್ಲರಿಗೂ ಒಳ್ಳೆಯವನು ಎಂದು ತೋರಿಸಿಕೊಳ್ಳುತಿದ್ದ ಒಬ್ಬನಿಗೆ ಸಭೆಯ ಅಧ್ಯಕ್ಷತೆ ನೀಡಿ, ನಕ್ಸಲೀಯರ ಧಾಳಿ ಎದುರಿಸುವ ಬಗೆ ಹೇಗೆ ಎಂಬ ಚರ್ಚೆ ಶುರುವಾಯಿತು.
"ಎಲ್ಲರೂ ಒಂದು ಬಂದೂಕು ತೆಗೆದುಕೊಳ್ಳುವುದು" ಉತ್ಸಾಹಿ ತರುಣನೊಬ್ಬ ಹೇಳಿದ "ನಿನ್ತಲೆ ಅದಕ್ಕೆಲ್ಲಾ ಕನಿಷ್ಟ ಆರು ತಿಂಗಳಾದರೂ ಬೇಕು, ಈಗ ಏನು ಮಾಡಬೇಕು ಅದನ್ನ ಯೋಚಿಸಿ" ಹಿರಿಯರೊಬ್ಬರು ಹೇಳಿದರು.
"ನಾವು ಎಲ್ಲರೂ ಒಟ್ಟು ನಲ್ವತ್ತು ಜನ ಇದ್ದೇವೆ,ಹತ್ತು ಜನರ ಒಂದೊಂದು ಗುಂಪು ಮಾಡಿಕೊಂಡು ಸರದಿಯಂತೆ ರಸ್ತೆಯಲ್ಲಿ ಕತ್ತಿ ಕೋಲು ಹಿಡಿದು ಗಸ್ತು ತಿರುಗುತ್ತಾ ಇರುವುದು, ನಕ್ಸಲರು ಬಂದ ತಕ್ಷಣ ಶೀಟಿ ಹೊಡೆಯುವುದು" ಮತ್ತೊಂದು ಸಲಹೆ ಬಂತು.
" ಅವರ ಹತ್ತಿರ ಬಂದೂಕು ನಮ್ಮ ಬಳಿ ಕೋಲು ಕವಣೆ, ಅವರ ಕೋವಿ ಒಂದು ಬಾರಿ ಡಂ ಎಂದರೆ ನಿನ್ನ ಚಡ್ಡಿ ಒದ್ದೆಯಾಗಿ ನೀನೆ ಶೀಟಿ ಹೊಡೆಯುತ್ತೀಯಾ, ಅವೆಲ್ಲಾ ಓಬಿರಾಯನ ಕಥೆ ಬೇರೆ ಸಲಹೆ ಇದ್ದರೆ ಹೇಳಿ" ಮಗದೊಬ್ಬರು ಅಪಹಾಸ್ಯಮಾಡಿದರು. ಇವನ್ನೆಲ್ಲಾ ಕೇಳುತ್ತಲಿದ್ದ ಗಪ್ಪಯ ಹೆಗಡೆಗೆ ಶ್ಯಾಂಭಟ್ಟನಿಗೆ ನಕ್ಸಲರು ಪರಿಚಯ ಇದ್ದುದ್ದೂ, ಅವನು ನಕ್ಸಲರು ಯಾರಿಗೂ ಏನೂ ಮಾಡದಂತೆ ಮಾತುಕತೆಯ ಮೂಲಕ ವ್ಯವಸ್ಥೆ ಮಾಡುವುದಾಗಿ ಹೇಳಿದ್ದನ್ನು ಸಭೆಯಲ್ಲಿ ಹೇಳೋಣ ಎಂದು ಒಮ್ಮೆ ಅನಿಸಿತಾದರೂ ಶ್ಯಾಂಭಟ್ಟ ಯಾರಿಗೂ ಹೇಳಬೇಡಿ ಎಂದದ್ದು ನೆನಪಾಗಿ,ಊರವರು ಏನಾದರೂ ಮಾಡಿಕೊಳ್ಳಲಿ ನನ್ನ ತಂಟೆಗೆ ನಕ್ಸಲರು ಬಾರದಂತಾಯಿತಲ್ಲ ಎಂದು ಸುಮ್ಮನುಳಿದ.
" ಇವೆಲ್ಲಾ ನಮ್ಮ ಕೈಯಲ್ಲಿ ಬಗೆ ಹರಿಯುವ ವಿಚಾರ ಅಲ್ಲ, ಪೋಲೀಸರಿಗೆ ಕಂಪ್ಲೇಂಟ್ ನೀಡೋಣ, ಆವಾಗ ಅವರೊಟ್ಟಿಗೆ ನಾವು ಸೇರಿಕೊಳ್ಳೋಣ" ಎಂದು ಅನುಭವಸ್ಥರೊಬ್ಬರು ಸಲಹೆ ಇತ್ತರು. ಹಾಗೆ ಹೇಳಿದ ಹಿರಿಯರು ಮಠಕ್ಕೆ ನಡೆದುಕೊಳ್ಳುವ ಗುಂಪಿನವರಾದ್ದರಿಂದ ಅವರು ಹೇಳಿದ್ದಕ್ಕೆ ಊರಿನವರು ಒಪ್ಪಿಕೊಂಡರೆ ತಮ್ಮದೇನು ಉಳಿದಂತಾಗುತ್ತದೆ ಎಂದು ಮಠದ ವಿರೋಧಿ ಗುಂಪಿನಲ್ಲೊಬ್ಬ " ಪೋಲಿಸರಿಗಿಂತ ನಮ್ಮ ಶಾಸಕರಿಗೆ ತಿಳಿಸಬೇಕು,ಪ್ರಜಾಪ್ರಭುತ್ವದಲ್ಲಿ ಇವೆಲ್ಲಾ ಜನಪ್ರತಿನಿಧಿಗಳ ಜವಾಬ್ಧಾರಿಯಾದ್ದರಿಂದ ಅದೇ ಸರಿಯಾದ ಕ್ರಮ" ಎಂದ ಇದಕ್ಕಿಂತ ಉತ್ತಮ ಸಲಹೆ ಮತ್ಯಾವುದು ಬಾರದಿದ್ದುದರಿಂದ ಎರಡೂ ಸಲಹೆಯನ್ನು ಸರ್ವಾನುಮತದಿಂದ ಒಪ್ಪಿಕೊಳ್ಳಲಾಯಿತು. ಪ್ರಾಯಶಃ ಬೆನ್ನಟ್ಟೆ ಊರಿನಲ್ಲಿ ಸರ್ವಾನುಮತದಿಂದ ಒಪ್ಪಿಗೆಯಾದ ಇತಿಹಾಸದಲ್ಲಿ ಇದೊಂದೆ ಎಂದರು ಅಲ್ಲಿದ್ದವರೊಬ್ಬರು. ಪೋಲಿಸರಿಗೆ ಸುದ್ದಿ ತಿಳಿಸಲು ಒಬ್ಬಾತ ಹೊರಟ. ಶಾಸಕರಿಗೆ ವಿಷಯ ಮನದಟ್ಟು ಮಾಡಲು ಮತ್ತೊಬ್ಬಾತ ಹೊರಟ.
***
ಆದ್ರಮಳೆ ಹಬ್ಬದ ಮಾರನೆ ದಿನವಾದ್ದರಿಂದ ಕೂಲಿಕಾರರ ಕೇರಿಯಲ್ಲಿ ಗಂಟೆ ಒಂಬತ್ತಾದರೂ ಇನ್ನೂ ಎಲ್ಲರಿಗೂ ಬೆಳಗಾಗಿರಲಿಲ್ಲ. ಆದ್ರೆ ಅಷ್ಟರಲ್ಲಿ ಪ್ರಭಾಕರ ಎಲ್ಲರ ಮನೆಯ ಬಾಗಿಲೂ ತಟ್ಟುತ್ತಿದ್ದ, ನಕ್ಸಲೀಯರ ಸುದ್ದಿ ತಂದ ಮೇಲಿನಗದ್ದೆ ರಾಮಣ್ಣನ ಭೇಟಿ ಮಾಡಲು ಹೋದನಾದರೂ ಅವನಿಗೆ ಬೇಧಿ ಜಾಸ್ತಿಯಾಗಿ ಪಟ್ಟಣಕ್ಕೆ ಹೋದನೆಂದು ತಿಳಿಯಿತು. ಹಾಗಾಗಿ ನಕ್ಸಲರ ಬಗ್ಗೆ ಮಾಹಿತಿ ಹೇಳುವವರಿಲ್ಲದ ಕಾರಣ ಹೆಚ್ಚಿನ ಸುದ್ದಿ ಬಿತ್ತರಿಸುವ ಜವಾಬ್ದಾರಿ ಪ್ರಭಾಕರನೇ ವಹಿಸಿಕೊಂಡ. ಹಾಗು ಶ್ಯಾಂಭಟ್ಟ ಅವನ ಜತೆಗೂಡಿದ.
ಜ್ಞಾನ ಮಂದಿರದಲ್ಲಿ ಕೂಲಿಕಾರರ ಸಭೆ ಸೇರಿತು.
"ನೀವು ಶೋಷಿತ ವರ್ಗ, ದುಡಿಯುವ ಜನರು ನೀವು, ಕುಳಿತು ಉಣ್ಣುವವರು ಅವರು. ನಿಮ್ಮ ಬೆವರಿನ ಹನಿ ಭಾಗಾಯ್ತುದಾರರ ಹೆಂಡಿರ ಕೊರಳಲ್ಲಿ ಬಂಗಾರದ ಸರವಾಗಿದೆ. ನಿಮ್ಮ ರಕ್ತ ಅವರು ಕುಡಿದು ಕೇಕೆ ಹಾಕುತ್ತಿದ್ದಾರೆ. ನೀವು ಮೂಕ ಪಶುಗಳಂತೆ ದುಡಿಯುತ್ತಿದ್ದೀರಿ. ಇದನ್ನು ನಿಮಗೆ ಅರಿವು ಮೂಡಿಸಿ ನ್ಯಾಯ ಒದಗಿಸಲು ನಮ್ಮ ಊರಿಗೆ ನಕ್ಸಲೀಯರು ಬಂದಿದ್ದಾರೆ. ಅವರಿಗೆ ನಾವೆಲ್ಲಾ ಪೂರ್ಣ ಬೆಂಬಲ ಕೊಟ್ಟು ಶ್ರೀಮಂತರ ಸೊಕ್ಕು ಅಡಗಿಸಬೇಕು" ಪ್ರಭಾಕರನ ಭಾಷಣ ಅವ್ಯಾಹತವಾಗಿ ಸಾಗಿತ್ತು. ಶ್ಯಾಂಭಟ್ಟ ಮಧ್ಯೆ ಮಧ್ಯೆ ತಲೆ ಆಡಿಸಿ ಸಾತ್ ನೀಡುತ್ತಿದ್ದ.
ಒಟ್ಟಾರೆ ಇಪ್ಪತ್ತರಿಂದ ಇಪ್ಪತ್ತೈದು ಜನರಿದ್ದ ಕೂಲಿಕಾರರಿಗೆ ಏನೂ ಅರ್ಥವಾಗುತ್ತಿರಲಿಲ್ಲ. ಅವರಲ್ಲೊಬ್ಬ "ಅಯ್ಯಾ ಬಿಡಿ ಸೋಮಿ ಅವರವರ ಹಣೆಮೇಲೆ ಬರೆದಿದ್ದು ಹಂಗೆ ಅದಕ್ಕೆ ಯಾರೇನ್ಮಾಡಕಾಯ್ತದೆ" ಎಂದ. "ಇದೆ ನಾನು ಬೇಡ ಅನ್ನೋದು.. ನೀವು ಹಿಂಗೆ ಅಂದ್ಕೋಂಡೆ ಅವರು ಕೊಬ್ಬಿರೋದು,ನಿಮ್ಮ ದುಡ್ಡಲ್ಲಿ ಅವರು ಮಜಾ ಉಡಾಯಿಸ್ತಿರೋದು,ನೀವು ಕಷ್ಟದಲ್ಲಿ ಬದುಕ್ತಿರೋದು" ಪ್ರಭಾಕರ ಸಿಟ್ಟಿನಿಂದ ಹೇಳಿದ. ಶ್ಯಾಂಭಟ್ಟ ದನಿಗೂಡಿಸಿದ.
"ನಾವು ಕಷ್ಟದಲ್ಲಿದೀವಿ ಅಂತ ನಿಮ್ಗೆ ಯಾರು ಹೇಳಿದ್ರು ಸ್ವಾಮೀ, ಆ ದೇವ್ರು ರಟ್ಟೆ ತುಂಬಾ ಕಸು ಕೊಟ್ಟಿದಾನೆ,ದುಡಿತೀವಿ, ತಿಂತೀವಿ,ಮಲಗ್ತೀವಿ, ನಮ್ಮುಡುಗ್ರು ಕೆಲವ್ರು ಒದಿ ಸರ್ಕಾರಿ ಕೆಲ್ಸ ಹಿಡಿದವ್ರೆ,ಅವರು ಓದಿ ಕಸ್ಟಾ ಪಟ್ರು ಕೆಲಸ ಸಿಕ್ತು, ನಾವು ಓದ್ಲಿಲ್ಲ ಕೂಲಿ ಮಾಡ್ತೀವಿ ಅದ್ರಲ್ಲೆನು ತಪ್ಪು ಬಿಡಿ ಸೋಮಿ, " ಮಗದೊಬ್ಬ ಹಿರಿಯ ಹೇಳಿದ.
"ನೀವು ಹೀಗೆ ಮುಗ್ದರಾಗಿರೋದ್ರಿಂದ ನಿಮ್ಮ ಸುಲಿಗೆ ನಡಿತಿರೋದು, ಭಾಗಾಯ್ತುದಾರರು ಒಗ್ಗಟ್ಟಾಗಿ ನಿಮ್ಮನ್ನ ಮಟ್ಟಹಾಕಲು ದೇವಸ್ಥಾನದಲ್ಲಿ ಸಭೆ ಸೇರಿದ್ದಾರೆ" ಶ್ಯಾಂಭಟ್ಟ ದನಿಗೂಡಿಸಿದ. ಈಗ ಕೆಲವರ ಮುಖದಲ್ಲಿ ಬದಲಾವಣೆ ಕಂಡಿತು.
" ಈಗ ಅವೆಲ್ಲಾ ಇರ್ಲಿ,ನಮ್ಮ ಊರಿಗೆ ನಕ್ಸಲೀಯರು ಬಂದಿದ್ದಾರೆ, ಅವರು ಸಾಮಾಜಿಕ ನ್ಯಾಯ ಕೊಡಿಸ್ತಾರೆ, ಊರಿನಲ್ಲಿ ಎಲ್ಲರ ದುಡ್ಡನ್ನೂ ಸಮಾನಾಗಿ ಹಂಚ್ತಾರೆ,ನೀವು ಮನೇಲಿ ಇದ್ದಂಗೆ ದಿನಕ್ಕೆ ೧೦೦ ರುಪಾಯಿ ಸಂಪಾದನೆ" ಮತ್ತೆ ಕೆಲ ಯುವಕರ ಕಿವಿ ನೆಟ್ಟಗಾಯಿತು.ಹಿರಿಯರನ್ನೆಲ್ಲಾ ಹಿಂದೆ ತಳ್ಳಿ ಹೊಸಬರು ತಲೆ ಆಡಿಸಲಾರಂಬಿಸಿದರು.
"ಅದಕ್ಕೆ ನಾವು ಏನ್ ಮಾಡ್ಬೇಕು"?ಒಬ್ಬಾತ ಉತ್ಸಾಹದಿಂದ ಕೇಳಿದ.
"ಹಾಗ್ಬನ್ನಿ ದಾರಿಗೆ..... ಇವತ್ತೋ ನಾಳೇನೋ ಕಾಡಿಗೆ ಬಂದೋರು ಊರಿಗೆ ಬರ್ತಾರೆ, ಅಷ್ಟರೊಳಗೆ ನಾವೆಲ್ಲಾ ಒಂದು ಸಂಘಟನೆಯ ಅಡಿಯಲ್ಲಿ ಇರಬೇಕು. ಸಂಘಟನೆ, ಹೋರಾಟ, ಅಂತಂದ್ರೆ ಸುಲಭದ ಮಾತಲ್ಲ. ಬ್ಯಾನರ್,ಬಂಟಿಂಗ್ಸ್ ಅಂತ ಬಹಳ ಖರ್ಚಿದೆ, ಎಲ್ರೂ ಐವತ್ತೋ ನೂರೋ ದೇಣೀಗೆ ಹಾಕ್ಕೊಂಡು ತಯಾರಾಗಿರ್ಬೇಕು. ಅವರು ಬಂದ ತಕ್ಷಣ ನಿಮ್ಮ ಜಿವನದ ಗತಿ ಬದಲಾಯಿತು ಎಂದಿಟ್ಟುಕೊಳ್ಳಿ.ಈ ನೂತನ ಸಂಘಟನೆಗೆ ನನ್ನೀಂದಲೆ ದೇಣಿಗೆ ಆರಂಭವಾಗಲಿ." ಎಂದು ಜೇಬಿನಿಂದ ನೂರರ ನೋಟು ತೆಗೆದು ಮೇಜಿನ ಮೇಲಿಟ್ಟು ಉದ್ದ ಭಾಷಣ ಮಾಡಿದ ಪ್ರಭಾಕರ.
ಸಾಮಾಜಿಕ ನ್ಯಾಯ ಹೋರಾಟಗಳೆಲ್ಲಾ ಯಾರಿಗೂ ಅರ್ಥವಾಗದಿದ್ರೂ ಎಲ್ರೂ ಸಂಘಕ್ಕೆ ಹಣ ಕೊಡ್ಬೇಕು ಅನ್ನೋದು ಅರ್ಥವಾಯ್ತು.ಯುವಕನೊಬ್ಬ ಹಣ ಸಂಗ್ರಹಿಸತೊಡಗಿದ. ಆದ್ರಮಳೆ ಹಬ್ಬದ ಸಮಯವಾದ್ದರಿಂದ ಬೇಗನೆ ದುಡ್ಡು ಸಂಗ್ರಹವಾಯಿತು.
ಅಷ್ಟರಲ್ಲಿ ಶ್ಯಾಂಭಟ್ಟ ಕಿಟಕಿಯಾಚೆ ನೋಡಿದ ದೂರದಲ್ಲಿ ನಾಲ್ವರು ಯುವಕರು ಇತ್ತಕಡೇ ಬರುತ್ತಿದ್ದರು ಅವರಲ್ಲಿ ಒಬ್ಬಾತ ಕೆಂಪು ಟೊಪಿ ಧರಿಸಿದ್ದ. ಅವರನ್ನು ನೋಡಿದವನೆ ಕೆಲಸಕೆಟ್ಟಿತು ಎನ್ನುತ್ತಾ ಶ್ಯಾಂಭಟ್ಟ ಅಲ್ಲಿಂದ ಜಾಗ ಖಾಲಿ ಮಾಡಿದ.
***ಶ್ಯಾಂಭಟ್ಟ ಆತುರ ಆತುರವಾಗಿ ದೇವಸ್ಥಾನ ತಲುಪುವಷ್ಟರಲ್ಲಿ ಇಪ್ಪತ್ನಾಲ್ಕು ಮನೆಯವರು ಸಭೆ ಮುಗಿಸಿ ಹೊರಡುವ ತಯಾರಿಯಲ್ಲಿದ್ದರು.
" ಅಲ್ಲಿ ಜ್ಞಾನ ಮಂದಿರದಲ್ಲಿ ನಕ್ಸಲೀಯರು ಕೂಲಿಕಾರರೊಡನೆ ಸಭೆ ನಡೆಸುತ್ತಿದ್ದಾರೆ" ತಾನು ಅಲ್ಲಿಂದ ಹೊರಡುತ್ತಿರುವಾಗ ಬರುತ್ತಿದ್ದರು ಎಂದರೆ ಇಷ್ಟೊತ್ತಿಗೆ ಸಭೆಯಲ್ಲಿ ಇರಬಹುದು ಎಂದು ಅಂದಾಜು ಮಾಡಿ ಹೇಳಿದ ಶ್ಯಾಂಭಟ್ಟ.
ಇಪ್ಪತ್ನಾಲ್ಕು ಮನೆಯ ಜನರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗತೊಡಗಿತು. ಈಗ ಮಾಡುವುದೇನು?, ಈಗ ಮಾಡುವುದೇನು"? ಎಂಬ ಪ್ರಶ್ನೆಯೊಂದಿಗೆ ಮತ್ತೆ ಸಭೆ ಸೇರಿತು.
"ಹತ್ಯಾರಗಳೊಂದಿಗೆ ನಾವು ಅವರನ್ನು ಸುತ್ತುವರೆದು ಬಿಡೋಣ" ಯುವವಕನೊಬ್ಬನ ಸಲಹೆ ಬಂತು.
"ತೋಟಕ್ಕೆ ಬಂದ ಮಂಗಗಳನ್ನ ಓಡ್ಸಕ್ಕಾಗಲ್ಲ, ಸುತ್ತುವರಿಯುತ್ತಾನಂತೆ" ಮತ್ಯಾರೋ ಲೇವಡಿ ಮಾಡಿದರು. ಬಿಗಿಯಾದ ವಾತಾವರಣದಲ್ಲೂ ಅಲ್ಲೊಂದು ಇಲ್ಲೊಂದು ನಗು ಉಕ್ಕಿತು.
"ಮೊದಲು ನಕ್ಸಲೀಯರು ಬಂದ ಕಾರಣ ಕೇಳೋಣ,ನಮ್ಮ ಊರಿನಲ್ಲಿ ಜಮೀನ್ದಾರರ ದಬ್ಬಾಳಿಕೆಯಂತೂ ಇಲ್ಲ. ಇರುವ ಇಪ್ಪತ್ನಾಲ್ಕು ಮನೆಯಲ್ಲಿ ಒಬ್ಬಿಬ್ಬರನ್ನು ಹೊರತುಪಡಿಸಿದರೆ ಮತ್ತೆಲ್ಲ ಜನರೂ ಮಧ್ಯಮವರ್ಗದವರೆ. ಹಾಗಾಗಿ ಅವರೊಡನೆ ಮಾತುಕಥೆಯಾಡೊಣ ಅದರಲ್ಲೇನಿದೆ" ಸಮಾಧಾನಿಯೊಬ್ಬ ಹೇಳಿದ.
ಅದು ಸರಿಯಾದ ತೀರ್ಮಾನ ಎಂದು ಎಲ್ಲರಿಗೂ ಅನಿಸತೊಡಗಿತು. ಆದರೆ ಸಂಧಾನದ ಮಾತುಕತೆಗೆ ಹೋಗುಚ ಛಾತಿ ಯಾರಿಗಿದೆ ಎಂಬ ಪ್ರಶ್ನೆ ಎದುರಾಯಿತು.
"ಶ್ಯಾಂಭಟ್ಟನಿಗೆ ಅಲ್ಲಿನ ಕಾಮ್ರೆಡ್‌ಗಳ ಪರಿಚಯ ಇದೆಯಂತೆ, ಅವನನ್ನು ಮುಂದು ಮಾಡಿಕೊಂಡು ನಾಲ್ಕೈದು ಜನರು ಹೋಗಿ" ಗಪ್ಪಯ್ಯ ಹೆಗಡೆ ಹೇಳಿದ. ಶ್ಯಾಂಭಟ್ಟನಿಗೆ ಈಗ ಪರಿಸ್ಥಿತಿ ಪಿಕಲಾಟಕ್ಕಿಟ್ಟುಕೊಡಿತು. ಗಪ್ಪಯ್ಯ ಹೆಗಡೆಯಿಂದ ಐದುನೂರು ರೂಪಾಯಿ ಪೀಕಿಸಲು ಮಾಡಿದ ಉಪಾಯ ಹೀಗೆ ಕೊರಳು ಸುತ್ತಿಕೊಳ್ಳುತ್ತದೆ ಎಂದುಕೊಂಡಿರಲಿಲ್ಲ. ಆದರೆ ಅನಿವಾರ್ಯ.
"ನಾನೇನೋ ಊರಿಗಾಗಿ ನನ್ನ ಜೀವವನ್ನು ಪಣವಿಟ್ಟು ಹೋಗುತ್ತೇನೆ. ಬಂದೂಕಿನ ನಳಿಕೆಯೊಂದಿಗೆ ಮಾತುಕತೆ ಎಂದರೆ ಅಷ್ಟೊಂದು ಸುಲಭವಲ್ಲ ಆದರೆ ಅವರು ಯಾವಕ್ಷಣದಲ್ಲಾದರೂ ದುಡ್ಡು ಕೇಳಬಹುದು ಹಾಗಾಗಿ ಹತ್ತುಸಾವಿರ ರೂಪಾಯಿ ಇಟ್ಟುಕೊಂಡೆ ಹೋಗಬೇಕು". ಸಾಯುವವನಿಗೆ ಹುಲ್ಲು ಕಡ್ಡಿಯೇ ಆಧಾರ ಎಂದು ಶ್ಯಾಂಭಟ್ಟ ಹೇಳಿದ.
ಕೆಲವರಿಗೆ ಅನುಮಾನ ಆದರೆ ಹಲವರು ತಲೆಯಾಡಿಸಿದರು.ಗುಸುಗುಸು ಪಿಸಪಿಸ ಚರ್ಚೆಯ ನಡುವೆ ಸಭೆ ಒಪ್ಪಿಗೆ ನೀಡಿ ಹತ್ತು ಸಾವಿರ ರುಪಾಯಿಯ ಗಂಟಿನೊಂದಿಗೆ ಸಂಧಾನಕಾರರನ್ನು ಜ್ಞಾನಮಂದಿರಕ್ಕೆ ಕಳುಹಿಸಲಾಯಿತು.
***
ಹಣ ಸಂಗ್ರಹದಲ್ಲಿ ನಿರತನಾಗಿದ್ದ ಪ್ರಭಾಕರ ತಲೆ ಎತ್ತಿ ನೋಡಿದ ಜ್ಞಾನಮಂದಿರದ ಬಾಗಿಲಲ್ಲಿ ನಾಲ್ವರು ನಿಂತಿದ್ದರು ಅವರಲ್ಲೊಬ್ಬ ಧರಿಸಿದ್ದ. ಒಮ್ಮೆ ಪ್ರಭಾಕರನಿಗೆ ಎದೆ ಧಸಕ್ಕೆಂದಿತು ತಕ್ಷಣ ಸಾವಾರಿಸಿಕೊಂಡು " ಬನ್ನಿ ಬನ್ನಿ ಎಲ್ಲಾ ನಿಮ್ಮ ಕುರಿತೇ ಚರ್ಚೆ ತಯಾರಿ ಎಲ್ಲಾ" ಗಡಿಬಿಡಿಯಲ್ಲಿಯೂ ಸಂಗ್ರಹವಾದ ಹಣ ಜೇಬಿಗಿಳಿಸುತ್ತಾ ಹೇಳಿದ .
ಆ ನಾಲ್ವರು ಮಿಕ ಮಿಕ ನೋಡತೊಡಗಿದರು. ಅವರಿಗೆ ಯಾವುದೂ ಅರ್ಥವಾಗಲಿಲ್ಲ.
"ಬರ್ರಾ... ಅದ್ಯಾರೋ ಬರ್ತಾರಂತೆ ನಮಗೆ ದಿನಾ ಮನೆ ಬಾಗ್ಲಿಗೆ ದುಡ್ಡು ತಂದು ಕೊಡ್ತಾರಂತೆ ನಿಮ್ಮೂರಾಗು ಹಂಗೆ ಮಾಡ್ರಿ.." ಹಿರಿಯ ಆ ನಾಲ್ವರ ಕುರಿತು ಹೇಳಿದ.
ಪ್ರಭಾಕರನಿಗೆ ಇದೇನೋ ದಾರಿ ತಪ್ಪುತ್ತಿರುವ ಅರಿವಾಯಿತು. "ಇವರೆಲ್ಲಾ ಯಾರು" ಕೇಳಿದ. " ಇವರು ಕಲ್ಲೂರಿನ ನಮ್ಮ ನೆಂಟ್ರು, ಆದ್ರಮಳೆ ಹಬ್ಬಕ್ಕೆ ಬಂದಿದ್ರು". ಒಬ್ಬಾತ ಹೇಳಿದ"ನಿನ್ನೆ ರಾತ್ರಿ ಗುಡ್ಡದಲ್ಲಿ....... ಬೆಂಕಿ..........ಗೂಟಕ್ಕೆ ಟೋಪಿ". ಪ್ರಭಾಕರ ಕೇಳಿದ"ಹೌದ್ರಾ ಹುಚ್ಚುಮುಂಡೇವು ಅಲ್ಲಿ ಬೆಂಕಿ ಹಾಕ್ಕೊಂಡು ರಾತ್ರಿ ಪೂರ್ತಿ ಇಸ್ಪೀಟಾಟ ಆಡಿದಾರೆ ಅದೇನೋ ಗುಡ್ದಾಗೆ ಆಡೋದ್ರಲ್ಲಿ ಮಜ ಅಂತೆ" ಮುಂದಾಳುವೊಬ್ಬ ಹೇಳಿದ. ಪ್ರಭಾಕರನಿಗೆ ನಕ್ಸಲರ ರಹಸ್ಯ ತಿಳಿಯಿತು. ಇನ್ನು ಸಂಘಟನೆಗೆ ಅರ್ಥವಿಲ್ಲ ಎಂಬುದು ಮನವರಿಕೆಯಾಯಿತು. ಆದರೆ ಬಾಯಿಬಿಟ್ಟರೆ ಬಣ್ಣಗೆಟ್ಟು ಹಣ ವಾಪಾಸು ಕೊಡಬೇಕಾದೀತು ಎಂದು ಲಗುಬಗೆಯಿಂದ ಸಂಘಟನೆ ನಕ್ಸಲಿಯರು ಮುಂತಾದವುಗಳಿಗೆಲ್ಲಾ ತಿಪ್ಪೆ ಸಾರಿಸಿ ಅಲ್ಲಿಂದ ಹೊರಟ.
***
ಸಂಧಾನಕ್ಕೆ ಹೊರಟ ಶ್ಯಾಂಭಟ್ಟನಿಗೆ ದಾರಿಯಲ್ಲಿ ಸಿಕ್ಕ ಪ್ರಭಾಕರ ಎಲ್ಲವನ್ನೂ ಸಾದ್ಯಂತವಾಗಿ ಗುಸುಗುಸು ಪಿಸಪಿಸ ಎಂದು ವಿವರಿಸಿದ. ತಕ್ಷಣ ಶ್ಯಾಂಭಟ್ಟ ಉಳಿದ ಸಂಧಾನಕಾರರನ್ನು ಅಲ್ಲಿಯೇ ಇರಲು ಹೇಳಿ ಕೇರಿಗೆ ಹೋಗಿ ಆ ನಾಲ್ವರನ್ನು ಕರೆದು ಅವರಿಗೆ ತಲಾ ನೂರು ರೂಪಾಯಿಕೊಟ್ಟು ತಕ್ಷಣ ಊರು ಬಿಡುವಂತೆ ತಾಕೀತು ಮಾಡಿ ಉಳಿದದ್ದನ್ನು ಇಬ್ಬರು ಹಂಚಿಕೊಂಡರು.
***
ಬೆನ್ನಟ್ಟೆ ಸ್ವಲ್ಪ ದಿನದ ನಂತರ ನಕ್ಸಲಿಯರ ಭಯವನ್ನು ಹೊಟ್ಟೆಯಲ್ಲಿ ಅರಗಿಸಿಕೊಂಡಿತು. ಇಪ್ಪತ್ನಾಲ್ಕು ಮನೆಯವರು ಮಠ ದೇವಸ್ಥಾನದಲ್ಲಿ ಮುಳುಗಿದರು. ಕೂಲಿಕಾರರು ಸಂಘಟನೆಯ ದಾರಿ ಕಾಯುತ್ತಾ ಉಳಿದರು.












Click it and Unblock the Notifications