• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಂಪು ಟೋಪಿ

By Staff
|

ಮಲೆನಾಡಿನಲ್ಲಿ ಈಚೀಚೆಗೆ ನಕ್ಸಲರದೇ ಸುದ್ದಿ. ಸುದ್ದಿಗೆ ಕಾವು ಕೊಡುವಂತೆ, ಅಲ್ಲೊಂದು ಇಲ್ಲೊಂದು ಹೆಣಗಳು!ನಕ್ಸಲರ ಬಗ್ಗೆ ಪರ ಅಥವಾ ವಿರೋಧ ವಾದಗಳನ್ನು ಅವುಗಳ ಪಾಡಿಗೆ ಬಿಟ್ಟು, ಒಂದು ಕತೆ ಓದೋಣ ಬನ್ನಿ...


Kempu TopiKannada Short story by R.Sharmaಬೆನ್ನಟ್ಟೆ ಊರಿಗೆ ನಕ್ಸಲರು ಬಂದಿದ್ದಾರಂತೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಆ ಸುದ್ದಿಯ ಮೂಲ ಮೇಲಿನ ಗದ್ದೆ ರಾಮಣ್ಣ, ಆತ ಆದ್ರಮಳೆ ಹಬ್ಬದಲ್ಲಿ ತಿಂದಿದ್ದ ಕೋಳಿ ಅರಗದಿದ್ದ ಪರಿಣಾಮವಾಗಿ, ರಾತ್ರಿ ಹೊಳೆಕಡೆಗೆ ಹೋಗಿ ವಾಪಾಸು ಬರುವಾಗ ಗೊರಬಳೆ ಗೂಟಕ್ಕೆ ಕೆಂಪು ಬಣ್ಣದ ಟೋಪಿ ನೇತುಹಾಕಿಕೊಂಡಿದ್ದನ್ನು, ಹಾಗು ಅನತಿ ದೂರದಲ್ಲಿ ಮೂರ್ನಾಲ್ಕು ಜನ ಹಿಂದಿ ಸಿನಿಮಾದಲ್ಲಿರುವಂತೆ ಮಧ್ಯೆ ಬೆಂಕಿಹಾಕಿ,ತಲೆಯ ತುಂಬಾ ಶಾಲು ಹೊದೆದು,ವೃತ್ತಾಕಾರವಾಗಿ ಕುಳಿತುಕೊಂಡಿದ್ದನ್ನು ಕಂಡು ಬಂದಿದ್ದನಂತೆ.

ಮೊದಮೊದಲು ಇದು ಸುಳ್ಳು ಸುದ್ದಿ ಎಂದು ಜನರು ನಂಬದಿದ್ದರೂ ನಂತರ ಊರಿನ ಕೆಲ ಉತ್ಸಾಹಿ ಯುವಕರ ಗುಂಪು ರಾಮಣ್ಣ ಹೇಳಿದ ಸ್ಥಳಕ್ಕೆ ಭೇಟಿ ನೀಡಿ ಇನ್ನೂ ಆರದ ಬೆಂಕಿ ಹಾಗು ಅಲ್ಲಿಯೇ ಹುಗಿದಿದ್ದ ಗೊರಬಳೆ ಗೂಟವನ್ನು ನೋಡಿಕೊಂಡು ಪರಿಶೀಲನೆ ನಡೆಸಿ, ಯಾರೋ ರಾತ್ರಿ ಅಲ್ಲಿ ಬಂದು ಹೋಗಿದ್ದಾರೆ ಎಂಬ ವರದಿ ನೀಡಿದ ಮೇಲೆ ರಾಮಣ್ಣನ ಕುಲ್ಡು ಬ್ಯಾಟರಿಗೆ ಟೋಪಿಯ ಬಣ್ಣ ಕಂಡಿದ್ದು ಸುಳ್ಳಾದರು ಮಿಕ್ಕಿದ್ದೆಲ್ಲಾ ಸತ್ಯ ಎಂಬ ತೀರ್ಮಾನಕ್ಕೆ ಬಂದಿದ್ದರು.

ನಕ್ಸಲೀಯರು ಬಂದಿದ್ದಾರೆ ಎಂಬ ಅಂತೆ ಕಂತೆಗಳ ಸಂತೆಯಲ್ಲಿ ಊರಿಗೆ ಊರೇ ಮುಳುಗೇಳತೊಡಗಿತು.. ಅವರು ಬಡವರಿಗೆ ನ್ಯಾಯ ಒದಗಿಸುತ್ತಾರಂತೆ ಎನ್ನುವ ವಿಷಯದಿಂದ ಶುರುವಾದ ಕಥೆ ಶತ ಸೋಂಬೇರಿ ಶ್ಯಾಂಭಟ್ಟನ ಬಾಯಲ್ಲಿ ಮುಂದುವರೆದು ಬಣ್ಣ ಬಳಿದುಕೊಂಡು, ಇನ್ನು ಮೇಲೆ ಯಾರೂ ಕೂಲಿ ಕೆಲಸ ಮಾಡುವುದು ಬೇಡವಂತೆ ನಕ್ಸಲೀಯರು ಊರಿನ ಶ್ರೀಮಂತರನ್ನು ಬಡಿದು ಅವರ ದುಡ್ಡನ್ನು ಸಮನಾಗಿ ಎಲ್ಲಾ ಜನರಿಗೆ ಹಂಚಿಬಿಡುತ್ತಾರಂತೆ ಎಂಬಲ್ಲಿವರಗೆ ಮುಂದುವರೆದಿತ್ತು. ಆದರೆ ಅದು ಯಾವಾಗ ಎಲ್ಲಿ ಎನ್ನುವುದರ ಕುರಿತು ಸರಿಯಾದ ಮಾಹಿತಿ ಯಾರಬಳಿಯೂ ಸಿಗುತ್ತಿರಲಿಲ್ಲ.

***

ಬೆನ್ನಟ್ಟೆ ಆರು ತಿಂಗಳು ಕಾಲ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುವ ಮಲೆನಾಡಿನ ಕುಗ್ರಾಮ. ಮೂರು ಕಿಲೋಮೀಟರ್ ಕಚ್ಚಾ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದರಂತೆ ಇಪ್ಪತ್ನಾಲ್ಕು ಮನೆಗಳನ್ನು ಹಾಗು ಊರಿನ ತುದಿಯಲ್ಲಿ ಒಂದುಗುಪ್ಪೆಯಾಗಿ ಮೂವತ್ತು ಕೂಲಿಕಾರರ ಮನೆಗಳನ್ನು ಹೊಂದಿದ ಊರು . ಊರಿನ ಮುಖ್ಯ ಹಣಕಾಸು ವಹಿವಾಟು ಅಡಿಕೆ ದರದ ಏರುಪೇರುಗಳನ್ನು ಅವಲಂಬಿಸಿತ್ತು. ಊರಿನಿಂದ ೬೦ ಕಿಲೋಮೀಟರ್ ದೂರದ ತಾಲ್ಲೂಕು ಕೇಂದ್ರ ತಲುಪಲು ಬೆಳಿಗ್ಗೆ ಒಂದು ಬಸ್ಸು ಬಿಟ್ಟರೆ ಮತ್ತೇನೂ ಇರಲಿಲ್ಲ. ಬೆಳಿಗ್ಗೆ ಹೋದ ಬಸ್ಸು ರಾತ್ರಿ ವಾಪಾಸು ಬಂದರೆ ಮತ್ತೆ ಮಾರನೆ ದಿನಬೆಳಿಗ್ಗೆ ಪಟ್ಟಣದ ಮುಖ ನೋಡಬಹುದಷ್ಟೆ. ಇದು ಬೆನ್ನಟ್ಟೆ ಊರಿನ ಕಥೆಯಾದರೆ ಅಲ್ಲಿನ ಜನರ ಕಥೆ ಮತ್ತೊಂದು ಬಗೆಯದು.

ಅಡಿಕೆ ಭಾಗಾಯ್ತು ಇರುವ ಇಪ್ಪತ್ನಾಲ್ಕು ಮನೆಗಳಲ್ಲಿ ಖಡಾಖಂಡಿತವಾಗಿ ಎರಡು ಪಾರ್ಟಿ. ದೇವಸ್ಥಾನದ ಆಡಳಿತ ಹೊಂದಿರುವ ಆದರೆ ಗುರುಮಠವನ್ನು ವಿರೋಧಿಸಿ ನಾವು ನಾಸ್ತಿಕರು ಎನ್ನುವ ವಿಚಿತ್ರ ಸಿದ್ದಾಂತದ ಐದು ಮನೆಗಳ ಗುಂಪು. ಇನ್ನೊಂದು ಗುರುಮಠದ ಸಂಪರ್ಕ ಹೊಂದಿರುವ ದೇವಸ್ಥಾನಕ್ಕೆ ದೇಣಿಗೆ ಕೊಡದಿರುವ ಹಾಗು ನಾವು ಆಸ್ತಿಕರು ಎನ್ನುವ ಹತ್ತು ಮನೆಗಳ ಗುಂಪು. ಇವೆರಡರ ಮಧ್ಯೆ ಸಂದರ್ಭಾನುಸಾರವಾಗಿ ಆಚೆಗೂ ಈಚೆಗೂ ಓಲಾಡುತ್ತಿರುವ ಒಂಬತ್ತು ಮನೆಗಳ ಗುಂಪು. ಹೀಗೆ ಸ್ಪರ್ಧೆಗೆ ಬಿದ್ದವರಂತೆ ಚರ್ಚೆ,ಮೀಟಿಂಗು ಮುಂತಾದ ಕವಡೆ ಕಾಸೂ ಪ್ರಯೋಜನಕ್ಕೆ ಬಾರದ ಕೆಲಸಗಳಿಂದ ದಿನದ ಬಹುಪಾಲು ಸಮಯ ಕಳೆಯುತ್ತಿರುವವರ ಸಂಖ್ಯೆಯ ಜನರು. ಊರಿನ ಆಗುಹೋಗುಗಳಿಗೆ ಯಾರೂ ತಲೆಕೆಡಿಸಿಕೊಳ್ಳುವ ಮನಸ್ಸು ಇದ್ದವರಲ್ಲ. ಚರಂಡಿಯೇ ಇಲ್ಲದ ರಸ್ತೆ, ವಾರಕ್ಕೊಮ್ಮೆ ಮುಖತೋರಿಸಿವ ಕರೆಂಟು,ಸರಿಯಾಗಿ ನಡೆಯದ ಶಾಲೆ, ಹೀಗೆ ಬೆಟ್ಟದಷ್ಟು ಸಮಸ್ಯೆಗಳಿದ್ದರೂ ಅವುಗಳನ್ನು ಮೈಯುಂಡು ಇಸ್ಪೀಟಾಟದಲ್ಲಿ ಕಾಲ ಕಳೆಯುತ್ತಾ ನಾವು ಮುಂದುವರೆದವರು ಎಂಬ ಸೋಗಿನ ಸ್ವಭಾವದ ಜನರು ತುಂಬಿರುವ ಊರು.

***

ಈಗ ನಕ್ಸಲರು ಊರಿಗೆ ಬಂದಿದ್ದಾರೆ ಎಂದಾಗ ಎಲ್ಲಾ ಜನರೂ ಸ್ವಲ್ಪ ಗಾಬರಿಯಾಗಿದ್ದರು. ಅವರು ಕೂಲಿಕಾರರ ಪರ ಎಂದು ಪೇಪರ್ ಓದಿ ಅರ್ದಂಬರ್ದ ತಿಳಿದುಕೊಂಡಿದ್ದ ದುಡ್ಡಿರುವ ಜನರಿಗೆ ಒಳಗೊಳಗೆ ನಡುಕ ಶುರುವಾಗಿಬಿಟ್ಟಿತ್ತು. ಕೆಲವು ಹೆದರು ಪುಕ್ಕಲರಂತೂ ಮನೆ ಕೆಲಸದ ಆಳಿನಲೆಕ್ಕ ಬರೆದ ಪುಸ್ತಕಗಳನ್ನು ನೀರೊಲೆಗೆ ಹಾಕುವ ತಯಾರಿ ಆರಂಬಿಸಿಬಿಟ್ಟಿದ್ದರು. ಕೆಂಪು ಬಣ್ಣದ ವಸ್ತ್ರ ಧರಿಸಿ ಬರುತ್ತಾರಂತೆ. ಮನೆಯ ಯಜಮಾನನ ಕುತ್ತಿಗೆಗೆ ಬಂದೂಕಿನ ಚೂರಿ ಆನಿಸಿ ಹಿಡಿದು ಬೆದರಿಸುತ್ತಾರಂತೆ. ದೇವರ ಪೂಜೆ ಮಠ ಮುಂತಾದವುಗಳ ಆಚರಣೆ ಇಟ್ಟುಕೊಂಡವರನ್ನು ಮೊದಲು ಬಲಿಹಾಕುತ್ತಾರಂತೆ, ಮುಂತಾದ ವದಂತಿಗಳಿಗೆ ಇತಿಮಿತಿಯಿರಲಿಲ್ಲ. ಆದರೆ ನಕ್ಸಲರು ಬಂದಿದ್ದಾರೆ ಎಂಬ ಸುದ್ದಿಯ ಜತೆಗೆ ಬಹಳ ವರ್ಷದ ನಂತರ ಅಡಿಕೆ ಭಾಗಾಯ್ತು ಹೊಂದಿರುವ ಇಪ್ಪತ್ನಾಲ್ಕು ಮನೆಗಳೂ ಒಂದಾಗುವುದು ಅನಿವಾರ್ಯ ಎಂಬ ಮಾತುಗಳೂ ಕೇಳಿಬರುತ್ತಿತ್ತು.

ಬೆನ್ನಟ್ಟೆ ಊರಿನಲ್ಲಿ ಶ್ಯಾಂಭಟ್ಟ ಹಾಗು ಪ್ರಭಾಕರರ ಜೋಡಿ ಜನಜನಿತ.ಇಂಥ ಕಾಲುಬಾಲವಿಲ್ಲದ ಸುದ್ದಿಗಳ ನೇತಾರರು ಅವರಿಬ್ಬರೆ. ಒಂದು ಕಾಲದಲ್ಲಿ ಅವರಿಬ್ಬರೂ ಜಮೀನ್ದಾರರೇ ಆಗಿದ್ದವರು. ಪ್ರಭಾಕರ ತನ್ನ ಷೋಕಿಯ ಜೀವನಕ್ಕೆ ಜಮೀನು ಮಾರಾಟ ಮಾಡಿದರೆ ಶ್ಯಾಂಭಟ್ಟ ಸೊಮಾರಿತನದಿಂದ ಅಡಿಕೆ ಭಾಗಾಯ್ತು ಹಾಳುಮಾಡಿಕೊಂಡಿದ್ದ. ಇಬ್ಬರೂ ಪ್ರಚಂಡ ಬುದ್ದಿವಂತರು.ಹಾಗಾಗಿ ಮೂಕರ್ಜಿ ಬರೆಯುವುದು,ಸುಳ್ಳು ಕಂಪ್ಲೇಂಟ್ ಕೊಡುವುದು ಮುಂತಾದ ಕೆಲಸಗಳನ್ನು ವೃತ್ತಿಯನ್ನಾಗಿಸಿಕೊಂಡು ಜೀವನ ನಡೆಸುತ್ತಿದ್ದರು. ಊರಿನಲ್ಲಿ ಎರಡು ಪಂಗಡ ಸಕ್ರಿಯವಾಗಿದ್ದರೆ ಇವರ ಜೀವನ ಸುಗಮ ಎಂಬ ಸರಳ ತತ್ವವನ್ನು ನಂಬಿದ್ದರು. ಹಾಗಾಗಿ ಹಲವಾರು ವರ್ಷಗಳಿಂದ ಎರಡು ಪಾರ್ಟಿಗಳಲ್ಲಿ ಸರಿಯಾದ ಅಂತರವನ್ನು ಇಟ್ಟುಕೊಂಡು ಬಂದಿದ್ದರು. ನಕ್ಸಲರ ಆಗಮನದಿಂದ ಅಕಸ್ಮಾತ್ ಊರು ಒಗ್ಗಟ್ಟಾದರೆ ಅವರ ಜೀವನಕ್ಕೆ ಸಂಚಕಾರ ತಂದುಕೊಡುವ ಸಾಧ್ಯತೆ ಹೆಚ್ಚಾಗಿತ್ತು ಎನ್ನುವುದನ್ನು ಇಬ್ಬರು ಎಲ್ಲರಿಗಿಂತ ಮೊದಲೇ ಅರಿತಿದ್ದರು. ನಕ್ಸಲರು ಬಂದಿದ್ದಾರೆ ಎನ್ನುವ ಹೊಸ ವಿಚಾರ ಈ ಜೋಡಿಗೆ ಉತ್ತಮ ಅವಕಾಶವನ್ನು ತಂದು ಕೊಟ್ಟಿತು.

***

ಮೊದಲು ಸುದ್ದಿ ತಿಳಿದ ಶ್ಯಾಂಭಟ್ಟ ಆಗಲೆ ಕಾರ್ಯಾಚರಣೆ ಶುರುವಿಟ್ಟುಕೊಂಡುಬಿಟ್ಟಿದ್ದ. ಸ್ವಲ್ಪ ದುಡ್ಡಿರುವ ಹಾಗು ಬೇಗನೆ ಹೆದರುವ ಗಪ್ಪಯ್ಯ ಹೆಗಡೆ ಅವನ ಮೊದಲ ಮಿಕವಾಗಿದ್ದರು.

"ಅಯ್ಯೋ ನಾನು ಅವತ್ತು ತೀರ್ಥಹಳ್ಳಿಯಲ್ಲಿ ನಕ್ಸಲರು ನನ್ನ ದೋಸ್ತ್ ಲಿಂಗೆಗೌಡನ ತಲೆ ಒಡೆದಿದ್ದು ನೋಡಿದ್ದೆ, ಅಬ್ಬಾ ಈ ಶ್ರೀಮಂತಿಕೆ ಜೀವನ ಯಾರಿಗೂ ಬೇಡ ಅಂತ ಅನ್ಸಿ ಹೋಯ್ತಪ್ಪ." ಗಪ್ಪಯ್ಯ ಹೆಗಡೆಯ ಹತ್ತಿರ ಶ್ಯಾಂಭಟ್ಟ ಹೇಳಿದ.

"ಹೌದಾ......, ನಕ್ಸಲರು ಅವರ ತಲೆ ಒಡೆದದ್ದು ಯಾಕೆ ?" ಗಪ್ಪಯ್ಯ ಹೆಗಡೆ ಸಣ್ಣ ದನಿಯಲ್ಲಿ ಕೇಳಿದರು.

"ಅದೊಂದು ದೊಡ್ಡ ಕಥೆ. ಆ ಗೌಡ್ರ ಮನೆ ಗದ್ದೆ ತಲೇಲಿ ಕೂಲಿಕಾರರ ಮನೆಗೆ ಹರಿದು ಹೋಗುವ ಅಬ್ಬಿ ನೀರಿತ್ತಂತೆ. ಗೌಡ್ರು ಆ ನೀರು ತಮಗೂ ಬೇಕು ಅಂತ ಕೋರ್ಟಿಗೆ ಹೋಗಿದ್ರಂತೆ. ಅಷ್ಟಕ್ಕೆ ನಕ್ಸಲರು ಅವರ ತಲೆ......ಅಯ್ಯೋ....ಅಬ್ಬಾ"

"ನೀರು ಕೇಳಿ ಕೋರ್ಟಿಗೆ ಹೋಗಿದ್ದಕ್ಕೆ ತಲೆ ಒಡೆದ್ರಾ..ಅಲ್ಲ ಕೂಲಿಕಾರರ ವಿರುದ್ದ ಹೊದರೆ ಮಾತ್ರ ಅವರು ಹೆದರಿಸ್ತಾರ...ಅಥವಾ..?" ಗಪ್ಪಯ್ಯ ಹೆಗಡೆ ಹೆದರುತ್ತಾ ಕೇಳಿದರು. ಕಾರಣ ಇವರದ್ದೂ ಅದೇ ಸಮಸ್ಯೆ. ಪ್ರಭಾಕರ ಇವರ ಮನೆಗೆ ಬರುವ ಅಬ್ಬಿ ನೀರಿಗೆ ತಡೆ ಹಾಕಿದ್ದ,ಇವರು ಅದಕ್ಕೆ ಕೋರ್ಟಿಗೆ ಹೋಗಿದ್ದರು.

"ಇಲ್ಲಪ್ಪ ಒಟ್ಟಿನಲ್ಲಿ ಅವರು ಯಾರಿಗೆ ಜಮೀನು ಇಲ್ಲವೋ ಅವರ ಪರ,ಜಾತಿ ಗೀತಿ ಅವರ ತಲೇಲಿಲ್ಲ.ಒಟ್ಟಿನಲ್ಲಿ ಜಮೀನು ಇದ್ದವರನ್ನು ಕಂಡ್ರೆ ಅವ್ರಿಗೆ ಆಗಲ್ಲ, ನನಗೆ ನಕ್ಸಲರ ಕಡೆ ಕಾಮ್ರೆಡ್‌ಗಳು ಬಹಳ ಜನ ಪರಿಚಯದೋರು ಇದ್ದಾರೆ ಆ ಅನುಭವದಮೇಲೆ ಹೇಳ್ತಿರೋದು." ಶ್ಯಾಂಭಟ್ಟನಿಗೆ ಹೆಗಡೆಯವರು ಹೆದರುತ್ತಿರುವುದು ಮನವರಿಕೆಯಾಯಿತು.ಮತ್ತಷ್ಟು ಮುಂದುವರೆಸಿದ. "ಆದರೆ ಅವರು ಸೆಟ್ಲಮೆಂಟ್‌ಗೆ ಒಪ್ತಾರೆ ಹತ್ತೊ ಇಪ್ಪತ್ತೋ ಸಾವಿರ ಕೊಟ್ರೆ ಹಾಗೆ ಹೋಗ್ತಾರೆ , ಆವತ್ತು ತೀರ್ಥಹಳ್ಳಿ ಲಿಂಗೇಗೌಡಂಗೆ ನಾನು ಸೆಟ್ಲಮಾಡಿಕೊಡ್ತೇನೆ ಅಂತ ಹೇಳಿದ್ದೆ ಆದರೆ ನನ್ನ ಮಾತು ಕೇಳ್ದೆ ಸುಮ್ನೆ ಜೀಂವ ಬಲಿ ಕೊಟ್ಟ", ಗಪ್ಪಯ್ಯ ಹೆಗಡೆಗೆ ನಡುಕ ಹೆಚ್ಚಾಯಿತು.ಶ್ಯಾಂಭಟ್ಟ ಸುಳ್ಳು ಹೇಳುತ್ತಿದ್ದಾನೇನೋ ಎಂಬ ಅನುಮಾನ ಕಾಡಿದರೂ ಅವರಿಗೂ ತೀರ್ಥಹಳ್ಳಿ ಘಟನೆ ಎಲ್ಲೋ ಓದಿದ ನೆನಪಿತ್ತು. ಕುಡಿಯಲು ಟಿ ತಂದ ಹೆಂಡತಿಗೆ ಕಾರಣವಿಲ್ಲದೆ ರೇಗಿದರು. ಆಕೆ "ಅಯ್ಯ.. ಅದಕ್ಯಾಕೆ ನನ್ಮೇಲೆ ರೇಗ್ತೀರಿ ಹೇಗೂ ಶ್ಯಾಮಣ್ಣಂಗೆ ಗುರ್ತು ಪರಿಚಯ ಇದೆ ಅಂತಾಯ್ತಲ್ಲ, ಸಾಯೋವಾಗ ನಾವೇನು ದುಡ್ಡು ತಗಂಡು ಹೋಗ್ತೀವಾ ಅಷ್ಟೊ ಇಷ್ಟೊ ಬಿಸಾಕಿದರಾಯಿತು" ಎಂದಳು.

ಶ್ಯಾಂಭಟ್ಟ ಕವಳದ ಹರಿವಾಣ ಹತ್ತಿರ ಎಳೆದುಕೊಂಡು " ಗಪ್ಪಯ್ಯಾ... ನಾವೆಲ್ಲಾ ನಿಮ್ಮವರು ಅಂತ ಇರೋದ್ಯಾಕೆ, ಚಿಟಿಕಿ ಹೊಡೆಯೊದ್ರೊಳಗೆ ಸೆಟ್ಲ ಮಾಡ್ತೀನಿ ನೋಡ್ತಾ ಇರಿ. ಯಾವುದಕ್ಕೂ ದುಡ್ದು ಮನೇಲಿ ಇಟ್ಕೊಂಡು ತಯಾರಾಗಿರಿ. ಅವರು ಎಷ್ಟು ಹೊತ್ತಿಗೆ ಮಾತುಕಥೆಗೆ ಬರ್ತಾರೆ ಅಂತ ಹೇಳೊಕಾಗಲ್ಲ. ಸದ್ಯ ಒಂದು ಐನೂರು ಇದ್ದರೆ ಕೊಡಿ ಅಡ್‌ವಾನ್ಸ್ ಅಂತ ಅವ್ರಿಗೆ ಕೊಟ್ಟಿರ್ತೀನಿ...ಹ್ಞಾ ಮತ್ತೆ ಊರಿನ ಆ ಪಾರ್ಟಿಯವ್ರಿಗೆ ಅಪ್ಪಿತಪ್ಪಿಯೂ ನಂಗೆ ನಕ್ಸಲರು ಪರಿಚಯ ಅಂತ ಬಾಯಿಬಿಡಬೇಡಿ ನಮಗೆ ಅವರ ಉಸಾಬರಿಯೆಲ್ಲಾ ಯಾಕೆ ಏನಾದ್ರೂ ಮಾಡ್ಕಂಡು ಸಾಯ್ಲಿ" ಎಂದು ಗರಿಗರಿನೋಟು ಜೇಬಿಗಿಳಿಸಿ ಹೊರಟ.

***

ನಕ್ಸಲರು ಮಾಡಬಹುದಾದ ಧಾಳಿಯನ್ನು ಎದುರಿಸಲು ಹೆಚ್ಚುಕಮ್ಮಿ ಇಪ್ಪತ್ನಾಲ್ಕು ಮನೆಯ ಜನರೂ ಸಜ್ಜಾಗತೊಡಗಿದರು. ದೇವಸ್ಥಾನದಲ್ಲಿ ತುರ್ತು ಸಭೆ ಕರೆಯಲಾಯಿತು. ಆಶ್ಚರ್ಯವೆಂದರೆ ಭಾಗಾಯ್ತು ಹೊಂದಿರುವ ಇಪ್ಪತ್ನಾಲ್ಕು ಮನೆಯ ಎರಡೂ ಪಾರ್ಟಿಯ ಜನರು ಸೇರಿದ್ದರು. ಗೊಂದಲ ಬೇಡವೆಂದು ಎರಡೂ ಪಾರ್ಟಿಗೂ ಹಿತವಾಗಿರುವ ಇಲ್ಲಿಯ ವಿಚಾರ ಅಲ್ಲಿಗೆ, ಅಲ್ಲಿಯ ವಿಚಾರ ಇಲ್ಲಿಗೆ ಹೇಳುತ್ತಾ ನಾನು ಎಲ್ಲರಿಗೂ ಒಳ್ಳೆಯವನು ಎಂದು ತೋರಿಸಿಕೊಳ್ಳುತಿದ್ದ ಒಬ್ಬನಿಗೆ ಸಭೆಯ ಅಧ್ಯಕ್ಷತೆ ನೀಡಿ, ನಕ್ಸಲೀಯರ ಧಾಳಿ ಎದುರಿಸುವ ಬಗೆ ಹೇಗೆ ಎಂಬ ಚರ್ಚೆ ಶುರುವಾಯಿತು.

"ಎಲ್ಲರೂ ಒಂದು ಬಂದೂಕು ತೆಗೆದುಕೊಳ್ಳುವುದು" ಉತ್ಸಾಹಿ ತರುಣನೊಬ್ಬ ಹೇಳಿದ "ನಿನ್ತಲೆ ಅದಕ್ಕೆಲ್ಲಾ ಕನಿಷ್ಟ ಆರು ತಿಂಗಳಾದರೂ ಬೇಕು, ಈಗ ಏನು ಮಾಡಬೇಕು ಅದನ್ನ ಯೋಚಿಸಿ" ಹಿರಿಯರೊಬ್ಬರು ಹೇಳಿದರು.

"ನಾವು ಎಲ್ಲರೂ ಒಟ್ಟು ನಲ್ವತ್ತು ಜನ ಇದ್ದೇವೆ,ಹತ್ತು ಜನರ ಒಂದೊಂದು ಗುಂಪು ಮಾಡಿಕೊಂಡು ಸರದಿಯಂತೆ ರಸ್ತೆಯಲ್ಲಿ ಕತ್ತಿ ಕೋಲು ಹಿಡಿದು ಗಸ್ತು ತಿರುಗುತ್ತಾ ಇರುವುದು, ನಕ್ಸಲರು ಬಂದ ತಕ್ಷಣ ಶೀಟಿ ಹೊಡೆಯುವುದು" ಮತ್ತೊಂದು ಸಲಹೆ ಬಂತು.

" ಅವರ ಹತ್ತಿರ ಬಂದೂಕು ನಮ್ಮ ಬಳಿ ಕೋಲು ಕವಣೆ, ಅವರ ಕೋವಿ ಒಂದು ಬಾರಿ ಡಂ ಎಂದರೆ ನಿನ್ನ ಚಡ್ಡಿ ಒದ್ದೆಯಾಗಿ ನೀನೆ ಶೀಟಿ ಹೊಡೆಯುತ್ತೀಯಾ, ಅವೆಲ್ಲಾ ಓಬಿರಾಯನ ಕಥೆ ಬೇರೆ ಸಲಹೆ ಇದ್ದರೆ ಹೇಳಿ" ಮಗದೊಬ್ಬರು ಅಪಹಾಸ್ಯಮಾಡಿದರು. ಇವನ್ನೆಲ್ಲಾ ಕೇಳುತ್ತಲಿದ್ದ ಗಪ್ಪಯ ಹೆಗಡೆಗೆ ಶ್ಯಾಂಭಟ್ಟನಿಗೆ ನಕ್ಸಲರು ಪರಿಚಯ ಇದ್ದುದ್ದೂ, ಅವನು ನಕ್ಸಲರು ಯಾರಿಗೂ ಏನೂ ಮಾಡದಂತೆ ಮಾತುಕತೆಯ ಮೂಲಕ ವ್ಯವಸ್ಥೆ ಮಾಡುವುದಾಗಿ ಹೇಳಿದ್ದನ್ನು ಸಭೆಯಲ್ಲಿ ಹೇಳೋಣ ಎಂದು ಒಮ್ಮೆ ಅನಿಸಿತಾದರೂ ಶ್ಯಾಂಭಟ್ಟ ಯಾರಿಗೂ ಹೇಳಬೇಡಿ ಎಂದದ್ದು ನೆನಪಾಗಿ,ಊರವರು ಏನಾದರೂ ಮಾಡಿಕೊಳ್ಳಲಿ ನನ್ನ ತಂಟೆಗೆ ನಕ್ಸಲರು ಬಾರದಂತಾಯಿತಲ್ಲ ಎಂದು ಸುಮ್ಮನುಳಿದ.

" ಇವೆಲ್ಲಾ ನಮ್ಮ ಕೈಯಲ್ಲಿ ಬಗೆ ಹರಿಯುವ ವಿಚಾರ ಅಲ್ಲ, ಪೋಲೀಸರಿಗೆ ಕಂಪ್ಲೇಂಟ್ ನೀಡೋಣ, ಆವಾಗ ಅವರೊಟ್ಟಿಗೆ ನಾವು ಸೇರಿಕೊಳ್ಳೋಣ" ಎಂದು ಅನುಭವಸ್ಥರೊಬ್ಬರು ಸಲಹೆ ಇತ್ತರು. ಹಾಗೆ ಹೇಳಿದ ಹಿರಿಯರು ಮಠಕ್ಕೆ ನಡೆದುಕೊಳ್ಳುವ ಗುಂಪಿನವರಾದ್ದರಿಂದ ಅವರು ಹೇಳಿದ್ದಕ್ಕೆ ಊರಿನವರು ಒಪ್ಪಿಕೊಂಡರೆ ತಮ್ಮದೇನು ಉಳಿದಂತಾಗುತ್ತದೆ ಎಂದು ಮಠದ ವಿರೋಧಿ ಗುಂಪಿನಲ್ಲೊಬ್ಬ " ಪೋಲಿಸರಿಗಿಂತ ನಮ್ಮ ಶಾಸಕರಿಗೆ ತಿಳಿಸಬೇಕು,ಪ್ರಜಾಪ್ರಭುತ್ವದಲ್ಲಿ ಇವೆಲ್ಲಾ ಜನಪ್ರತಿನಿಧಿಗಳ ಜವಾಬ್ಧಾರಿಯಾದ್ದರಿಂದ ಅದೇ ಸರಿಯಾದ ಕ್ರಮ" ಎಂದ ಇದಕ್ಕಿಂತ ಉತ್ತಮ ಸಲಹೆ ಮತ್ಯಾವುದು ಬಾರದಿದ್ದುದರಿಂದ ಎರಡೂ ಸಲಹೆಯನ್ನು ಸರ್ವಾನುಮತದಿಂದ ಒಪ್ಪಿಕೊಳ್ಳಲಾಯಿತು. ಪ್ರಾಯಶಃ ಬೆನ್ನಟ್ಟೆ ಊರಿನಲ್ಲಿ ಸರ್ವಾನುಮತದಿಂದ ಒಪ್ಪಿಗೆಯಾದ ಇತಿಹಾಸದಲ್ಲಿ ಇದೊಂದೆ ಎಂದರು ಅಲ್ಲಿದ್ದವರೊಬ್ಬರು. ಪೋಲಿಸರಿಗೆ ಸುದ್ದಿ ತಿಳಿಸಲು ಒಬ್ಬಾತ ಹೊರಟ. ಶಾಸಕರಿಗೆ ವಿಷಯ ಮನದಟ್ಟು ಮಾಡಲು ಮತ್ತೊಬ್ಬಾತ ಹೊರಟ.***

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more