ಬೇಟೆ


(ಕಥೆ ಮುಂದುವರಿದಿದೆ...)

‘ಕೂತ್ಕೊಳ್ಳಿ ಸಾರ್‌..’ ಅಂತ ಮಂಚ ತೋರಿಸಿ ಕೃಷ್ಣಸ್ವಾಮಿ ಒಳಹೋದ. ಮಗ ಊಟ ಮಾದುತ್ತಿದ್ದ. ಮಗ ಮುಂಚಿನಿಂದಲೂ ಸ್ವಲ್ಪ ಮೂಡಿ. ಅಕ್ಕನಷ್ಟು ಚುರುಕಲ್ಲ. ಮನೆಗೆ ಯಾರಾದರು ಬಂದರೆ ಕೃಷ್ಣಸ್ವಾಮಿಗೆ ತನ್ನ ಮಗಳ ನೆನಪಾಗದೆ ಇರುತ್ತಿರಲಿಲ್ಲ. ಆ ಒಬ್ಬ ಮಗಳ ಮದುವೆ ಒಂದು ಮುಗಿದರೆ ಸಾಕು ಎಂದುಕೊಂಡೇ ಈ ಬ್ರೋಕರ್‌ ಕೆಲಸ ಶುರು ಮಾಡಿದ್ದು.

‘ನಾನು ಯಾರನ್ನಾದ್ರು ಲವ್‌ ಮ್ಯಾರೇಜ್‌ ಮಾಡ್ಕೊಂಡು ಹೋಗ್ತೀನಿ’ ಅಂತ ಅವಳು ಅವಳ ಗೆಳತಿಗೆ ಹೇಳಿದ್ದು ಹೆಂಡತಿಯ ಮೂಲಕ ಕಿವಿಗೆ ಬಿದ್ದಾಗ ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹುಡುಗಾಟಿಕೆಯಲ್ಲಿ ಏನೋ ಹೇಳಿರ್ತಾಳೆ, ಮೊದಲೇ ಚೆಲ್ಲು ಚೆಲ್ಲು ಹುಡುಗಿ ಅದು ಅಂತ ಸುಮ್ಮನಿದ್ದ. ಹೋದವಳು ಹೋದಳು, ಯಾರೊಂದಿಗೆ ಓಡಿಹೋದ್ಳು ಅನ್ನೋದೂ ಗೊತ್ತಾಗ್ಲಿಲ್ಲ. ಆ ರಾತ್ರಿ ತಾನು ಅವಳ ಮೇಲೆ ರೇಗದೇ ಇದ್ದಿದ್ದರೆ ಬಹುಶಃ ಅವಳು ಮಾರನೆಯ ದಿನವೇ ಯಾರಿಗೂ ಹೇಳದೆ ಹೋಗುತ್ತಿರಲಿಲ್ಲವೇನೋ ಅಂತ ಅವನಿಗೆ ಆಗಾಗ ಅನ್ನಿಸುವುದಿದೆ. ಆದರೆ, ಆವತ್ತು ಸ್ನೇಹಿತೆಯೊಡನೆ ಅವಳಾಡಿದ ಮಾತುಗಳನ್ನು ಹೆಂಡತಿಯ ಮೂಲಕವೇ ತಿಳಿದಾಗ ಅದರ ಬಗ್ಗೆ ವಿಚಾರಿಸದೆ ವಿಧಿಯಿರಲಿಲ್ಲ.

ಮಗಳಾಡುವ ಇಂತಹ ಮಾತುಗಳೆಲ್ಲ ತನ್ನ ಹೆಂಡತಿಗೆ ಹೇಗೋ ಗೊತ್ತಾಗಿ ಬಿಡುತ್ತಿತ್ತು. ಯಾರ್ಯಾರ ಮುಖೇನ ಹರಿದು ಬಂದು ಯಾರಾದರೊಬ್ಬರು ತಲುಪಿಸಿಬಿಡುತ್ತಿದ್ದರು. ತಾನಿಲ್ಲಿ ಅವಳ ಮದುವೆ ಆಗೋವರೆಗೆ ಅಂತ ಇಷ್ಟೆಲ್ಲ ಕಷ್ಟ ಪಡ್ತಿದ್ದರೆ ಅವಳು- ‘ಅಯ್ಯೋ ನಮ್ಮಪ್ಪಂಗೆ ನೆಟ್ಟಗೆ ಮನೆ ಹುಡ್ಕೊಡೋಕೇ ಬರೊಲ್ಲ, ಇನ್ನು ನನಗೆ ಸರಿಯಾದ್‌ ಗಂಡ್‌ ಹುಡುಕ್ತಾರಾ?. ನಾನೇ ಯಾರನ್ನಾದ್ರು ನೋಡ್ಕೋಬೇಕು.’ ಅಂತ ಹೇಳಿದ್ದು ಕೇಳಿ ಎಷ್ಟು ಕೋಪ ಬಂದಿತ್ತು... ಎಷ್ಟು ಬೇಜಾರಾಗಿತ್ತು?. ಅದೊಂದು ರಾತ್ರಿ ರೇಗಿದ್ದಕ್ಕೆ ಎಲ್ಲಿದ್ದಾಳೋ? ಹೇಗಿದ್ದಾಳೋ? ಅನ್ನೋದೂ ತಿಳಿಯದ ಹಾಗೆ ಕಣ್ಮರೆಯಾದ ಮಗಳ ನೆನಪಾದಾಗೆಲ್ಲ ‘ಈಗ ಯೋಚ್ಸಿ ಏನ್‌ ಪ್ರಯೋಜ್ನ?’ ಅನ್ನುವ ಅಸಹಾಯಕ ಸಮಾಧಾನದಲ್ಲಿ ಕೃಷ್ಣಸ್ವಾಮಿ ಸಹಜ ಸ್ಥಿತಿಗೆ ಮರಳುತ್ತಿದ್ದ.

ಮಗನಿಗೊಂದು ಕೆಲಸ ಸಿಗೋವರ್ಗೆ ಹೇಗೋ ಕಷ್ಟ ಪಟ್ರಾಯ್ತು ಅಂತ ಅಂದುಕೊಂಡರೆ ಬಿ.ಎಸ್ಸಿ ಮುಗಿಸಿ ಒಂದು ವರ್ಷ ಕಳೆದ್ರೂ ಕಾಲ್‌ ಸೆಂಟರ್‌ನಲ್ಲೂ ಕೆಲಸ ಅಂತ ಸಿಗಲಿಲ್ಲ. ಒಳಕೋಣೆಯಿಂದ ಜೀರ್ಣಾವಸ್ಥೆಯಲ್ಲಿರುವ ಪುಸ್ತಕವೊಂದನ್ನು ಹಿಡಿದುಕೊಂಡು ಬಂದ ಕೃಷ್ಣಸ್ವಾಮಿ, ಯಾವುದನ್ನೂ ಲೆಕ್ಕಿಸದೆ ಇಡೀ ಪ್ರಪಂಚವನ್ನೇ ಸಸ್ಸಾರ ಮಾಡಿ ಊಟ ಮಾಡುತ್ತಿದ್ದ ಮಗನನ್ನು ಕಂಡು ಸಿಟ್ಟಿನಲ್ಲಿ ಏನೇನೋ ಗೊಣಗಿದ. ಮಗ, ತನ್ನ ನಿಸ್ಸೀಮ ಕಿವುಡು ಮುಂದುವರೆಸಿಕೊಂಡು ಟಿವಿಯ ಸದ್ದು ಹೆಚ್ಚಿಸಿದ. ಯಾರೂ ಮನ್ನಿಸದ ತನ್ನ ಸಿಟ್ಟನ್ನು ಬಾಗಿಲಲ್ಲೇ ಬಿಟ್ಟು ಹೊರಬಂದು ಮಂಚದ ಮೇಲೆ ಕುಳಿತು ಪುಸ್ತಕ ತೆರೆದ.

‘ಬನ್ನಿ ಕುತ್ಕೊಳ್ಳಿ, ನಿಂತೇ ಇದ್ದೀರಲ್ಲ’ ಅಂದದಕ್ಕೆ ಇರ್ಲಿ ಪರ್ವಾಗಿಲ್ಲ ಎಂದು ರಮೇಶ್‌ ನಿಂತೇ ಇದ್ದ. ಅಲ್ಲಿಂದ ತೆರಳುವ ಆತುರದಲ್ಲಿದ್ದ. ನಮ್‌ ಸನ್ನು ಅಂತ ಕೃಷ್ಣಸ್ವಾಮಿ ಒಳಗೆ ಊಟ ಮಾಡುತ್ತಿರುವ ತನ್ನ ಮಗನ ಕಡೆ ಕೈ ತೋರಿ ಹೇಳಿದ. ರಮೇಶ್‌ ಕೊಂಚ ಬಗ್ಗಿ ಒಳ ನೋಡಿದಾಗ ಆ ಹುಡುಗ ಊಟ ಮುಗಿಸಿ ಎದ್ದು ಕೈತೊಳೆಯಲು ಒಳಹೋದ. ನಿಮ್ಮ ಫೋನ್‌ ನಂಬರ್‌ ಕೊಡಿ ಸಾರ್‌ ಎಂದು ಕೃಷ್ಣಸ್ವಾಮಿ ಕೇಳಿದಾಗ ಅನುಮಾನವಿಲ್ಲದೆ ತಿಳಿಸಿದ. ನಂಬರ್‌ ಬರೆದುಕೊಂಡವನು ‘ಕಾಫಿ ಕುಡೀತೀರ?’ ಎಂದು ವಿಚಾರಿಸಿದ.

ರಮೇಶ ಈ ವಿಚಾರಣೆಯನ್ನು ನಿರೀಕ್ಷಿಸಿರಲಿಲ್ಲ. ತಾನು ಬೇಡವೆನ್ನುತ್ತೇನೆ ಕಾಫಿ ಮಾಡುವ ಪ್ರಸಂಗ ಬರಲಾರದು ಅಂತ ತಿಳಿದಿದ್ದೂ ಅವನೇಕೆ ಕೇಳಿದ?. ಉತ್ತರ ಬೇಡದ ಉದ್ದೇಶವಿರದ ಈ ಪ್ರಶ್ನೆಗೆ ’ಬೇಡ’ ಎನ್ನುವ ಉಪೇಕ್ಷೆಗೊಳಾದ ಉತ್ತರ ನೀಡಿದ. ಕೃಷ್ನಸ್ವಾಮಿ ಮತ್ತೊಮ್ಮೆ ‘ಸಾರ್‌ ದಯವಿಟ್ಟು ಮಂಜುನಾಥ ಸ್ಟೋರ್ಸ್‌ ಅವರಿಗೆ ಮಾತ್ರ ಈ ಮನೆ...’ ಎಂದಾಗ ಹೇಳೋದಿಲ್ಲ ಬಿಡ್ರಿ ಸಂಜೆ ಆರೂವರೆಗೆ ಬರ್ತೀನಿ ಅಂತ ಹೇಳಿ ಅಲ್ಲಿಂದ ಹೊರಟ.

*

ಸಂಜೆ ಆರು ಗಂಟೆಗೆ ಮೊಬೈಲ್‌ ರಿಂಗಾಗಿದ್ದು ಕೇಳಿ ರಮೇಶ್‌ ಬೆಚ್ಚಿ ಎದ್ದ. ಮೊಸಲೆ ಬಾಯಿ ತೆರೆಯುವಂತೆ ಮೊಬೈಲ್‌ ಸೀಳಿ ಹಲೋ ಎಂದ.

‘ಸಾರ್‌, ನಾನು- ಕೃಷ್ಣಸ್ವಾಮಿ. ಆರೂವರೆಗೆ ಬರ್ತೀದಿರಲ್ಲ?’ ಗಣೇಶ್‌ ಸ್ಟೋರ್ಸ್‌ನ ಎಡಬದಿಯಲ್ಲಿ ಗೋಡೆಗೆ ತೂಗುಬಿದ್ದಿರುವ ಪಬ್ಲಿಕ್‌ ಫೋನ್‌ನಿಂದ ಮಾತಾಡುತ್ತಿದ್ದ.

‘ನಾನೀಗ ಬೇರೆ ಕಡೆ ಇದ್ದೀನಿ. ಸ್ವಲ್ಪ ಬೆರೆ ಕೆಲ್ಸ ಇದೆ. ನೋಡ್ತೀನಿ’

‘ಆಗ್ಲೆ ಇನ್ನೊಬ್ರು ಬಂದು ನೋಡ್ಕೊಂಡು ಹೋಗಿದ್ದಾರೆ, ಬೆಳಗ್ಗೆ ನೀವೇ ನೋಡಿದ್ರಲ್ಲ. ಒಂದೈದು ನಿಮಿಷ ಬಂದು ಹೋಗಿ. ಇಷ್ಟ ಆದ್ರೆ ಟೋಕನ್‌ ಅಡ್ವಾನ್ಸ್‌ ಕೊಟ್ಟುಬಿಡಿ. ಇಂತಹ ಮನೆ ಸಿಗೋದು ಕಷ್ಟ ಸಾರ್‌.’

‘ಸರಿ, ನೋಡ್ತೀನಿ’ ಎಂದು ಅವನ ಮಾತುಗಳಿಗೆ ಹೆಚ್ಚು ಬೆಲೆ ಕೊಡದೆ ಫೋನಿಟ್ಟ. ಅರ್ಧಗಂಟೆಯ ನಂತರ ಸರಿಯಾಗಿ ಆರೂವರೆಗೆ ಮತ್ತೆ ಫೋನ್‌ ಮಾಡಿದ ಕೃಷ್ಣಸ್ವಾಮಿಯ ಹಲೋ ದನಿಯಲ್ಲಿ ಆ ಅರ್ಧಗಂಟೆಯ ಚಡಪಡಿಕೆ ಮೂರ್ತಗೊಂಡಿತ್ತು. ರಮೇಶ್‌ ಈ ಬಾರಿ ವಿಧಿಯಿಲ್ಲದೆ ಹೇಳಲೇ ಬೇಕಾಯಿತು - ‘ರ್ರೀ....ಆ ಏರಿಯಾ ಬೇಡ ರೀ. ನಮ್‌ ಮನೆಯವರಿಗೆ ಆ ಕಡೆ ಅಷ್ಟು ಒಪ್ಲಿಲ್ಲ. ಬೇರೆ ಎಲ್ಲಾದ್ರು ಇದ್ರೆ ನೋಡಿ. ಇಲ್ಲೇ ಎಂಟನೇ ಕ್ರಾಸಿನ ಹತ್ರ ಯಾವ್ದೂ ಇಲ್ವಾ?’.

ಅದೇ ಭಾನುವಾರ ಬೆಳಗ್ಗೆ ರಮೇಶನ ಹೆಂಡತಿ ತರಕಾರಿ ಹೆಂಗಸು ಲಕ್ಷ್ಮಿಯೊಡನೆ ಹೋಗಿ ಒಂದು ಮನೆಗೆ ಟೋಕನ್‌ ಅಡ್ವಾನ್ಸ್‌ ಕೊಟ್ಟಿ ಬಂದಿದ್ದಳು. ಆಕಡೆ ಏರಿಯಾ ಬೇಡವೇ ಬೇಡ, ನಾನು ನೋಡಿರೋ ಮನೆ ಚೆನ್ನಾಗಿದೆ, ಅಡ್ವಾನ್ಸ್‌ ಕೊಟ್ಟಿದ್ದೀನಿ, ಸಂಜೆ ಹೋಗಿ ನೋಡ್ಕೊಂಡು ಬರೋಣ. ಆ ಬ್ರೋಕರ್‌ಗೆ ಬೇರೆ ಮನೆ ಆಯ್ತು ಅಂತ ಹೇಳಿ ಅಂದಿದ್ದಳು. ಆದ್ರೂ ರಮೇಶ ಬೇರೆ ಮನೆ ಆಗಿದೆ ಅನ್ನುವುದನ್ನು ನೇರವಾಗಿ ಹೇಳಲು ಯಾಕೋ ಹಿಂಜರಿದ.

‘ಒಳ್ಳೆ ಏರಿಯಾನೇ ಸಾರ್‌. ಇಂತಹ ಒಳ್ಳೆ ಮನೆ ಇಷ್ಟು ಕಡಿಮೆ ಬಾಡಿಗೆಗೆ ಬೇರೆ ಎಲ್ಲೂ ಸಿಗೊಲ್ಲ. ಓನರ್‌ ಕೂಡ ಬಹಳ ಒಳ್ಳೆಯ ಜನ. ಒಂದು ಸಲ ನಿಮ್‌ ಮಿಸ್ಸೆಸ್‌ನ ಕರ್ಕೊಂಡು ಬಂದು ತೋರ್ಸಿ. ಮನೆ ಒಳಗೆ ನೋಡಿದ್ರೆ ಖಂಡಿತ ಲೈಕ್‌ ಆಗುತ್ತೆ. ನಾನು ಇಲ್ಲೇ ಇರ್ತೀನಿ. ಬರೋದಿದ್ರೆ ಹೇಳಿ’ ಅನ್ನುವಾಗ ಕೃಷ್ಣಸ್ವಾಮಿಗೆ ಭರವಸೆಯೇನೂ ಉಳಿದಿರಲಿಲ್ಲ.

ಮಲ್ಲೇಶ್ವರವೇ ಆದರೂ ಹತ್ತನೆಯ ಕ್ರಾಸಿನಿಂದ ಈಚೆಗೆ ಇರುವ ಖಾಲಿ ಮನೆಗಳು ಮಾತ್ರ ತನಗೆ ಗೊತ್ತಿರುವುದು.ತಾನೇನು ಅಂತ ದೊಡ್ಡ ಬ್ರೋಕರ್‌ ಅಲ್ಲ. ಬೇರೆ ಬೇರೆ ಏರಿಯಾಗಳಲ್ಲೂ ಮನೆ ಹುಡುಕಿ ಕೊಡುವ ಏಜೆಂಟ್‌ ಅಲ್ಲ. ಆ ಕಡೆ ಏರಿಯಾದಲ್ಲೇ ಬೇಕು ಅಂದರೆ ನಿನ್ನಿಂದ ಏನೂ ಪ್ರಯೋಜನವಿಲ್ಲ, ನೀನಿನ್ನೇನು ಫೋನ್‌ ಮಾಡೋ ಅವಶ್ಯಕತೆಯಿಲ್ಲ ಅನ್ನುವುದನ್ನ ಹೀಗೆ ಹೇಳಿದ ಹಾಗಾಯಿತು. ಆದರೂ ಬೇರೆ ಎಲ್ಲೂ ಮನೆ ಸಿಗಲಿಲ್ಲ ಅಂದ್ರೆ ಇಲ್ಲಿಗೆ ಬರಲೇ ಬೇಕು, ಮಲ್ಲೇಶ್ವರದಲ್ಲಿ ಬಾಡಿಗೆಗೆ ಒಳ್ಳೆಯ ಮನೆ ಸಿಗೋದು ಅಂದ್ರೆ ಹುಡುಗಾಟವಾ?. ಆ ಕಡೆ ಎಲ್ಲೂ ಆಗಿಲ್ಲ ಅಂದ್ರೆ ಈ ಕಡೆ ಬಂದೇ ಬರ್ತಾರೆ ಅಂದುಕೊಂಡ.

‘ ಸರಿ, ನಾನೀಗ ಬೇರೆ ಕಡೆ ಇದ್ದೀನಿ. ಇವತ್ತು ಆಗೊಲ್ಲ. ಮುಂದಿನ ವಾರ ನಾನೇ ಬರ್ತೀನಿ’ ಎಂದು ರಮೇಶ್‌ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೃಷ್ಣಸ್ವಾಮಿ ಮತ್ತೆ ಈ ಮನೆಯ ವಿಚಾರ ಮಂಜುನಾಥ ಸ್ಟೋರ್ಸ್‌ ಅವರಿಗೆ ತಿಳಿಸಬೇಡಿ ಅಂತ ವಿನಂತಿಸಿಕೊಂಡ. ‘ಆಯ್ತು ಯಾರಿಗೂ ಹೇಳೋದಿಲ್ಲ. ನಂಗೆ ಅರ್ಥ ಆಗುತ್ತೆ’ ಅಂತ ಹೇಳಿ ಯಾಡುತ್ತಿದ್ದ ತಾನು ಯಾವುದೋ ಗಾರನಿಂದ ತಪ್ಪಿಸಿಕೊಂಡ ನೆಮ್ಮದಿಯಲ್ಲಿ ರಮೇಶ ಫೋನಿಟ್ಟ.

ಫೋನು ರಿಸೀವರ್‌ ಇಡುತ್ತಲೇ ಕೃಷ್ಣಸ್ವಾಮಿಗೆ ಮಗಳ ಮಾತುಗಳು ಅಣಕಿಸಿದ ಹಾಗಾಯಿತು. ಆ ಮನೆ ನಾಳೆ ಸಂಜೆಯ ಹೊತ್ತಿಗೆ ಯಾರಿಗಾದರು ಆಗಿಬಿಡಬಹುದು ಎನ್ನುವ ಆತಂಕದಲ್ಲಿ ಕೃಷ್ಣಸ್ವಾಮಿ ತನ್ನ ಮನೆಯತ್ತ ಹೆಜ್ಜೆ ಹಾಕಿದ. ಹಳದಿ ಬಣ್ಣದ ಟ್ಯಾಂಕಿಯ ಬುಡದಲ್ಲಿ ಎಲ್ಲಿ ಬಿರುಕಿದೆ ಎನ್ನುವುದು ತಿಳಿಯದಷ್ಟು ಸೂಕ್ಷ್ಮವಾಗಿ ನೀರು ಜಾರಿಕೊಂಡು ರಸ್ತೆಯನ್ನು ಅಲ್ಲಲ್ಲಿ ತೋಯಿಸಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+