ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಟೆ

By Staff
|
Google Oneindia Kannada News


(ಕಥೆ ಮುಂದುವರಿದಿದೆ...)

ವಿಷಜಂತುಗಳು, ಕ್ರೂರ ಮೃಗಗಳಿರುವ ಕಾಡಿನೊಳಗೆ ವಜ್ರದ ಗಣಿಯನ್ನು ಹುಡುಕಲು ಹೊರಟವರಂತೆ ಅಚೀಚೆ ನೋಡುತ್ತ ನಡೆಯುತ್ತಿದ್ದ ಕೃಷ್ಣಸ್ವಾಮಿಯನ್ನು ರಮೇಶ್‌ ಹಿಂಬಾಲಿಸಿದ. ‘ಇದೇ..’ ಎಂದು ತಿಳಿ ಹಸಿರು ಬಣ್ಣ ಬಳಿದಿದ್ದ ಮನೆಯ ಹೊಸ ಕಪ್ಪು ಬಣ್ಣದ ಗೇಟ್‌ ನೂಕಿಕೊಂಡು ಇಬ್ಬರೂ ಒಳಹೋದರು. ಮೂರ್ನಾಲ್ಕು ಬಾರಿ ಬೆಲ್‌ ಒತ್ತಿ ಬಾಗಿಲು ತಟ್ಟಿದ ಮೇಲೂ ಬಾಗಿಲು ತೆರೆಯಲಿಲ್ಲ. ಎರಡಂತಸ್ತಿನ ಮನೆಯಲ್ಲಿ ಮಧ್ಯಾಹ್ನ ಮೂರರ ಹೊತ್ತಿಗೆ ಯಾರೂ ಇದ್ದಂತಿರಲಿಲ್ಲ.

‘ಮನೆಯಲ್ಲಿ ಯಾರೂ ಇಲ್ಲ ಅಂತ ಕಾಣುತ್ತೆ . ಸಂಡೇ ಅಲ್ವಾ, ಎಲ್ಲದ್ರೂ ಹೊರಗ್‌ ಹೋಗಿರ್ತಾರೆ. ಇದೇ ಮನೆ. ಅವರು ಸಂಜೆಯಾದ ಮೇಲೆ ಎಲ್ಲೂ ಹೊರ ಹೊಗೊಲ್ಲ; ಮನೆಯಲ್ಲೇ ಇರ್ತಾರೆ. ಗ್ರೌಂಡ್‌ ಫ್ಲೋರ್‌ನಲ್ಲಿ ಓನರ್‌ ಇದ್ದಾರೆ. ಫರ್ಸ್ಟ್‌ ಫ್ಲೋರ್‌ ಮನೇನೆ ಖಾಲಿ ಇರೋದು. ಸೆಕಂಡ್‌ ಫ್ಲೋರ್‌ ಮನೆ ಲೀಸಿಗೆ ಕೊಟ್ಟಿದ್ದಾರೆ. ಸಂಜೆ ಬನ್ನಿ, ಇರ್ತಾರೆ.’ ಎಂದು ಕೄಷ್ಣಸ್ವಾಮಿ ಹೇಳಿದಾಗ ಮಧ್ಯಾಹ್ನ ಊಟವೂ ಮಾಡದೆ ಒಂದು ಗಂಟೆಯಿಂದ ಇವನ ಹಿಂದೆ ಸುತ್ತಿದ ರಮೇಶನಿಗೆ ಸಹಜವಾಗಿಯೇ ಸಿಟ್ಟು ಬಂತು. ‘ ಸರಿ, ಇನ್ನೇನ್‌ ಮಾಡೋದು’ ಎಂದು ಹೊರಬಂದ. ಅದೇ ಸಮಯಕ್ಕೆ ಸರಿಯಾಗಿ ಹೆಂಗಸೊಬ್ಬಳು ಒಬ್ಬ ಮುದುಕನನ್ನು ಅದೇ ಮನೆ ತೋರಿಸಲು ಕರೆತಂದಳು. ‘ಯಾರೂ ಇಲ್ಲ...’ ಅಂತ ಕೃಷ್ಣಸ್ವಾಮಿ ಹೇಳಿದರೂ ಒಮ್ಮೆ ಒಳಹೋಗಿ ನೋಡಿಬರುವ ಅಂತ ಒಳಹೋಗಿ ಬೆಲ್‌ ಒತ್ತಿದಳು.

ಹೊರಗಿನಿಂದ ನೋಡಲು ಮನೆ ಹೊಸದಾಗಿ ಚೆನ್ನಾಗಿರುವಂತೆ ತೋರಿತು. ರಮೇಶನಿಗೆ ಮನೆ ಹುಡುಕಿ ಹುಡುಕಿ ಸುಸ್ತಾಗಿತ್ತು. ಈವರೆಗೆ ಅದೆಷ್ಟು ಮನೆಗಳನ್ನು ನೋಡಿದ್ದನೋ?. ಒಂದೋ ಮನೆ ಚಿಕ್ಕದು, ಅಥವಾ ಏರಿಯಾ ಹಿಡಿಸುವುದಿಲ್ಲ, ಕೆಲವುದರ ಅಡಿಗೆಮನೆ ಸರಿಯಿರುವುದಿಲ್ಲ ಮತ್ತೆ ಕೆಲವುದರಲ್ಲಿ ಬಚ್ಚಲು ಮನೆ ಕೊಳಕು. ಒಂದಲ್ಲ ಒಂದು ಸಮಸ್ಯೆ. ಯಾವೊಂದು ಮನೆಯೂ ಹಿಡಿಸುತ್ತಿರಲಿಲ್ಲ- ರಮೇಶನಿಗಿಂತ ಹೆಚ್ಚಾಗಿ ಅವನ ಹೆಂಡತಿಗೆ.

ಗಂಡ-ಹೆಂಡತಿ ಇಬ್ಬರೇ ಇರಲು ಎಷ್ಟು ಮಹಾ ದೊಡ್ಡ ಮನೆ ಬೇಕಿದೆ?. ಅಲ್ಲದೇ ಇಬ್ಬರೂ ಕೆಲಸಕ್ಕೆ ಹೋಗುವವರು. ಆದರೂ ಮನೆಗೆ ಬಂದು ಹೋಗುವವರು ಬಹಳ. ರಮೇಶನ ತಂದೆ-ತಾಯಿ, ಅತ್ತೆ-ಮಾವ ತಿಂಗಳು ಎರಡು ತಿಂಗಳಿಗೊಮ್ಮೆ ಬಂದು ಎರಡು ವಾರ ಇದ್ದು ಹೋಗುತ್ತಿದ್ದರು. ರಮೇಶನ ಪೈಕಿಯವರಿಗಂತೂ ಬೆಂಗಳೂರಿಗೆ ಬಂದರೆ ಲಗೇಜ್‌ ಇರಿಸುವುದಕ್ಕೆ ಇವನ್ನದ್ದೊಂದೇ ಮನೆ. ಹೆಂಡ್ತಿಯ ಒತ್ತಾಯದ ಮೇರೆಗೆ ಈ ಮನೆ ಹುಡುಕೋ ಆಟ ಶುರುವಾಗಿದೆ.

ಏಳೆಂಟು ಬ್ರೋಕರ್‌ ಆದ ಮೇಲೆ ಈಗ ಈ ಕೃಷ್ಣಸ್ವಾಮಿ. 18ನೇ ಕ್ರಾಸಿನ ಕೃಷ್ಣಸ್ವಾಮಿಯ ಹತ್ರ ಒಂದು ಮನೆಯಿದೆ,ಹೋಗಿ ನೋಡಿ ಬನ್ನಿ ಎಂದು ರಮೇಶನ ಪರಿಚಿತ ಬ್ರೊಕರ್‌ ಕಳುಹಿಸಿದ್ದ. ಕೃಷ್ಣಸ್ವಾಮಿಯನ್ನು ತೋರಿಸಲು ರಮೇಶನೊಟ್ಟಿಗೆ ಬಂದಿದ್ದ ಹುಡುಗನಿಗೆ- ‘ನೀನು ಹೋಗೋ, ನಾನು ತೋರಿಸ್ತೀನಿ. ಏನಾಯ್ತು ಅಂತ ಅವರು ಆಮೇಲೆ ತಿಳಿಸ್ತಾರೆ. ಹೋಗು..’ ಅಂತ ಹೇಳಿ ಬಲವಂತವಾಗಿ ಕೃಷ್ಣಸ್ವಾಮಿ ಸಾಗಹಾಕಿದ್ದ. ಈಗ ಮನೆಯ ಓನರ್‌ ಇಲ್ಲದೇ ಇದ್ದದ್ದು ಇಬ್ಬರಿಗೂ ಬೇಸರ ತಂದಿತ್ತು. ಇವರುಗಳು ಹೊರಬರುವ ಸಮಯಕ್ಕೇ ಮತ್ತೊಬ್ಬ ಹೆಂಗಸು ಒಬ್ಬ ಮುದುಕನನ್ನು ಇದೇ ಮನೆಯನ್ನು ತೋರಿಸಲು ಕರೆದುಕೊಂಡು ಬಂದದ್ದು ಕೃಷ್ಣಸ್ವಾಮಿಗೆ ಹೆದರಿಕೆಯನ್ನೂ ತಂದಿತ್ತು.

ಅಲ್ಲಿಂದ ಹಿಂದಿರುಗುವಾಗ ದಾರಿಯುದ್ದಕ್ಕೂ, ‘ಸಾರ್‌, ಈ ಮನೇನ ಬೇರೆ ಯಾರಿಗೂ ತೋರ್ಸೋಕೆ ಹೋಗ್ಬೇಡಿ. ಆ ಮಂಜುನಾಥ್‌ ಸ್ಟೊರ್ಸ್‌ ಅವರು ಕೇಳಿದ್ರೆ ಮನೆ ಎಲ್ಲಿದೆ ಅಂತ ಹೇಳ್ಬೇಡಿ. ಸಂಜೆ ಬನ್ನಿ ಸಾರ್‌. ನಿಮಗೆ ಖಂಡಿತ ಲೈಕ್‌ ಆಗುತ್ತೆ. ಇಷ್ಟ ಆದ್ರೆ ಸಾವಿರ ರೂಪಾಯಿ ಟೋಕನ್‌ ಅಡ್ವಾನ್ಸ್‌ ಕೊಟ್ಬಿಡಿ. ಆಮೇಲೆ ಮತ್ತೆ ಬೇರೆ ಯಾರಾದ್ರು ನೋಡಿ ಅಡ್ವಾನ್ಸ್‌ ಕೊಟ್ಬಿಟ್ರೆ ಕಷ್ಟ. ನೋಡಿದ್ರಲ್ಲ- ಆಗ್ಲೆ ಒಬ್ರು ನೋಡೋಕ್‌ ಬಂದಿದಾರೆ. ನಿಮಗೆ ಇಂತಹ ಮನೆ ಸಿಗೊಲ್ಲ. ಓನರ್‌ ಬಹಳ ಒಳ್ಳೇ ಜನ. ರೆಡ್ಡೀಸ್‌ ಇರಬೇಕು. ಅವರ ಪಾಡಿಗೆ ಅವರಿರ್ತಾರೆ, ನಿಮ್‌ ಪಾಡಿಗೆ ನೀವ್‌ ಇರ್ತೀರ; ಅವರ ಮನೇಲಿ ಅವರು ಏನ್‌ ಮಾಡ್ಕೊಂಡ್ರೂ ನೀವ್‌ ಮೇಲ್‌ ಇರ್ತೀರಲ್ವಾ, ಏನೂ ಸ್ಮೆಲ್‌ ಬರೊಲ್ಲ. ಕಾರ್ಪೋರೇಶನ್‌ ನೀರು ಯಾವಾಗ್ಲೂ ಬರ್ತಾ ಇರುತ್ತೆ, ಏರಿಯಾ ಡೌನ್‌ ಅಲ್ವಾ...’ ಮನೆಯ ಗುಣಗಾನದ ಮಾತು ನಿಲ್ಲುತ್ತಲೇ ಇರಲಿಲ್ಲ.

ರಮೇಶ ಎಲ್ಲಕ್ಕೂ ಹೂಂ ಅನ್ನುತ್ತಿದ್ದವನು- ಮನೆ ಒಪ್ಪಿಗೆಯಾಗುವರೆಗೆ ಈತನಿಗೆ ಹತ್ತು ರೂಪಾಯಿಯೂ ಕೊಡುವುದಿಲ್ಲ- ಅಂತ ತೀರ್ಮಾನಿಸಿದ.

ಮತ್ತದೇ 18ನೇ ಕ್ರಾಸಿಗೆ ಬಂದು ನೀರಿನ ಟ್ಯಾಂಕಿಯ ಎದುರು ನಿಂತಾಗ, ರಮೇಶ್‌- ‘ಆ ಏರಿಯಾ ಅಷ್ಟು ಚೆನ್ನಾಗಿಲ್ಲ ರ್ರೀ. ಆ ಏರಿಯಾಗೆ ಆರು ಸಾವಿರ ಹೆಚ್ಚಾಯ್ತು’ ಅಂದ.

‘ಮನೆ ಚೆನ್ನಾಗಿದೆ ಸಾರ್‌. ಇಲ್ಲಾಂದ್ರೆ ಈ ಕಡೆ ಇನ್ನೊಂದಿದೆ. ಹೈ ಕ್ಲಾಸ್‌ ಏರಿಯಾ. ಎಂಟು ಸಾವಿರ ಆದ್ರೆ ಪರ್ವಾಗಿಲ್ವಾ?’- ಎಂದು ಅದೇ ಕಟ್ಟೆಯ ಮೇಲೆ ಕುಳಿತ ಕೃಷ್ಣಸ್ವಾಮಿ ಇನ್ನೇನೋ ಪುರಾಣ ಶುರು ಮಾಡುವ ಲಹರಿಯಲ್ಲಿದ್ದದ್ದನ್ನು ಗ್ರಹಿಸಿದ ರಮೇಶ್‌- ‘ಸರಿ, ನಾನು ಹೊರಡ್ತೀನಿ. ಸಂಜೆ ಆರೂವರೆಗೆ ಇಲ್ಲಿಗೇ ಬರ್ತೀನಿ’ ಅಂದ.

‘ಸಂಜೆ ಬನ್ನಿ ಸಾರ್‌. ಇಲ್ಲೇ ಬನ್ನಿ, ಇಲ್ಲೇ ಇರ್ತೀನಿ. ಅಕಸ್ಮಾತ್‌ ಇಲ್ಲಾಂದ್ರೆ ಮನೇಲಿ ಇರ್ತೀನಿ. ನಮ್‌ ಮನೆ ಇಲ್ಲೇ ಪಕ್ಕದಲ್ಲೇ ಇದೆ. ಇದೇ... ಮೂರನೇ ಮನೆ. ಬನ್ನಿ ಇಲ್ಲೇ’ ಎಂದು ಕೃಷ್ಣಸ್ವಾಮಿ ಮನೆಯತ್ತ ಹೊರಳಿದಾಗ ರಮೇಶ್‌ ಒಲ್ಲದ ಮನಸ್ಸಿನಿಂದ ಹಿಂಬಾಲಿಸಿದ.

ಗೇಟು-ಬಾಗಿಲುಗಳಿಲ್ಲದೆ ಸಣ್ಣ ಓಣಿಯೊಂದಿಗೆ ಶುರುವಾಗಿ ಒಳಗೆ ಅಂಗಳದಲ್ಲಿ ತೆರೆದುಕೊಳ್ಳುತ್ತದೆ ಕೃಷ್ಣಸ್ವಾಮಿಯ ಮನೆ. ಅಂಗಳವೆಂದರೆ ಅಂಗಳವೂ ಅಲ್ಲ, ರಸ್ತೆಬದಿಯಲ್ಲಿಯ ಫುಟ್‌ಪಾತ್‌ ಮನೆಯೊಳಗೆ ನುಸುಳಿದಂತಿದೆ. ಅಂಗಳದ ಒಂದು ಬದಿಯಲ್ಲಿ ಮಂಚವಿದ್ದರೆ ಇನ್ನೊಂದು ಬದಿಯಲ್ಲಿ ಟೈಯರ್ರು, ಏಣಿ, ಸೈಕಲ್‌, ಒಳಗೇನಿದೆ ಎಂದು ತಿಳಿಯದ ಒಂದಿಷ್ಟು ಮೂಟೆಗಳು ಒಂದಕ್ಕೊಂದು ಸಾಂತ್ವನ ಹೇಳುತ್ತ ಒಟ್ಟಾಗಿ ಮಲಗಿವೆ.

ಮತ್ತೊಂದು ಮೂಲೆಯಲ್ಲಿ ಶೀಟಿನಡಿಯಲ್ಲಿ ಹುದುಗಿಕೊಂಡಿರುವ ಮನೆಯಂತಹ ಗೂಡು. ಒಳಗೆ ಒಬ್ಬ ಹುಡುಗ ಊಟ ಮಡುತ್ತಿದ್ದ, ಮತ್ತೆಲ್ಲ ಅಸ್ಪಷ್ಟವಾಗಿತ್ತು. ಮನೆಗಿಂತ ಅಂಗಳವೇ ಹಿರಿದಾಗಿರುವಂತೆ ತೋರುತಿತ್ತು. ಮನೆಯನ್ನು ಅಂಗಳವನ್ನು ಸುತ್ತಮುತ್ತಲಿನ ಮರಗಳ ನೆರಳು ಆವರಿಸಿದ್ದು ತಂಪೆರೆಯುವುದಕ್ಕೋ ಬೆಳಕು ಮುಚ್ಚುವುದಕ್ಕೋ ಎನ್ನುವುದು ತಿಳಿಯುತ್ತಿರಲಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X