ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮಯ್ಯ ಅಮ್ಮಯ್ಯ ಬಾರೇ.. ಅಕ್ಕರೆ ಸಕ್ಕರೆ ತಾರೇ..

By Staff
|
Google Oneindia Kannada News


ಇವು ನನಗೆ ಎಲ್ಲೋ ಸಿಕ್ಕ ಕತೆಗಳು? ನಂಬೋದಿಲ್ವಾ? -‘ವಿಶ್ವ ಅಮ್ಮಂದಿರ ದಿನ’(ಮೇ.13)ದ ಸಂದರ್ಭದಲ್ಲಿ ಮೂವರು ಅಮ್ಮಂದಿರ ಚಿತ್ರ ಇಲ್ಲಿದೆ.

ಅವಳ ಹೆಸರೇ ಅಮ್ಮ ಅಲ್ವಾ?

Mothers are The Sweetest!ನನ್ನಮ್ಮನ ಮೇಲೆ ನನಗೆ ಆವತ್ತು ಸಕತ್ತು ಸಿಟ್ಟು ಬಂದಿತ್ತು. ಎಲ್ಲಾ ಅನರ್ಥಕ್ಕೂ ಅವಳೇ ಕಾರಣ ಎನ್ನುವಷ್ಟು ದ್ವೇಷವೂ, ಜಿಗುಪ್ಸೆಯೂ ಉಂಟಾಗಿತ್ತು. ಅವಳನ್ನು ಕೊಂದು ಜೈಲಿಗೆ ಹೋಗಲೇ ಅನ್ನಿಸುವಷ್ಟು ಮನಸ್ಸಿನಲ್ಲಿದ್ದ ರಾಕ್ಷಸ ಅಬ್ಬರಿಸುತ್ತಿದ್ದ. ತಪ್ಪು ನನ್ನದೂ ಇರಬಹುದು!

ನನಗೆ ಅಪ್ಪ ಯಾರು ಎಂಬುದೇ ಗೊತ್ತಿಲ್ಲ. ನಾನು ಹುಡುಗನಾಗಿದ್ದಾಗ, ಮನೆಗೆ ಯಾರ್ಯಾರೋ ಬರ್ತಾ ಇದ್ದರು. ಬಂದವರು ನನಗೆ ಚಾಕಲೇಟ್‌ ಕೊಡ್ತಾಯಿದ್ದರು. ಅಮ್ಮ ಅವರ ಜೊತೆ ನಗ್ತಾನಗ್ತಾ ಮಾತಾಡ್ತಾಯಿದ್ದರು. ಅಕ್ಕಪಕ್ಕದ ಜನ ನನ್ನನ್ನು ಕಂಡು, ಒಂದು ಥರಾ ನಗ್ತಾಯಿದ್ದರು. ಯಾಕೋ ನನಗೆ ಅದೆಲ್ಲ ಆವಾಗ ಅರ್ಥವಾಗ್ತಾ ಇರಲಿಲ್ಲ.

ಏನೇನೋ ಮಾಡಿ, ಅಮ್ಮ ನನ್ನ ಓದಿಸಿದಳು. ನಾನು ಜ್ಞಾನವಂತನಾಗೋ ಹೊತ್ತಿಗೆ, ಅಮ್ಮ ದಣಿದಿದ್ದಳು. ಅಮ್ಮ ದಣಿಯಲು ಕಾರಣ ಸಹಾ ನನಗೆ ಗೊತ್ತಾಗಿತ್ತು! ಆದರೆ ಕೇಳುವಂತಿರಲಿಲ್ಲ. ಆ ಬಗ್ಗೆ ಚರ್ಚೆ ಮಾಡುವಂತಿರಲಿಲ್ಲ. ಆದರೆ ಮೊನ್ನೆ ಮನೆಗೆ ಬಂದಾಗ, ಅಂದು ಚಾಕಲೇಟ್‌ ಕೊಟ್ಟಿದ್ದ ಗಂಡಸು ಮನೆಯಲ್ಲಿದ್ದ! ನನ್ನ ಹೃದಯದ ಮೇಲೆ ಕೆಂಡದ ಮಳೆ.

ಬೆಳಗ್ಗೆ ಓದಿದ್ದ ಸುಭಾಷಿತ ನನ್ನನ್ನು ತಣ್ಣಗಾಗಿಸಿತು. ‘ಆಕೆ ಏನೇ ತಪ್ಪು ಮಾಡಿರಬಹುದು. ನೀವು ಕ್ಷಮಿಸಿ ಬಿಡಿ. ಯಾಕೆಂದರೆ, ಆಕೆ ನಿಮ್ಮ ತಾಯಿ’. ಹೌದು, ಅವಳು ನನ್ನಮ್ಮ. ಅವಳ ರಕ್ತ-ಮಾಂಸ ಹಂಚಿಕೊಂಡು, ಭೂಮಿಗೆ ಬಂದವನು ನಾನು! ಅವಳು ಅಮ್ಮ..

***

ಅಮ್ಮನ ನೆನಪೇ ಸಾಕು..

ಎಲ್ಲವೂ ಮುಗಿದು ಹೋಯಿತು ಎಂದು ಅನ್ನಿಸುತ್ತಿತ್ತು. ಪ್ರಾಣ ಕಳೆದುಕೊಳ್ಳುವ ಬಯಕೆ ಮನದಲ್ಲಿ ಮೊಳೆಯುತ್ತಿತ್ತು. ಕಷ್ಟಪಟ್ಟು ಸಂಪಾದಿಸಿದ್ದ ಕೆಲಸವನ್ನು ಕಳೆದುಕೊಂಡು ಅಂದಿಗೆ, ನಾಲ್ಕು ದಿನ. ಕೆಲಸ ಹೋದದ್ದಕ್ಕಿಂತ ಅವಮಾನವೇ ಮನವನ್ನು ಕೊರೆಯುತ್ತಿತ್ತು. ಮೋಸಗಾರ ಎಂದು ಜಗತ್ತು ಕೇಕೆ ಹಾಕುತ್ತಿತ್ತು.

ಯಾವುದೋ ಒಂದು ಕ್ಷಣದ ದುರಾಸೆ, ನನ್ನನ್ನು ಬೆತ್ತಲು ಮಾಡಿ ಜಗದ ಮುಂದೆ ನಿಲ್ಲಿಸಿತ್ತು. ಇಷ್ಟು ವರ್ಷದ ನಿಯತ್ತು ಎಲ್ಲರಿಗೂ ಮರೆತು ಹೋಗಿತ್ತು. ಕೆಲಸ ಕಳೆದುಕೊಂಡ ವಿಚಾರ ಗೊತ್ತಾದ ಮರುಕ್ಷಣವೇ, ನನ್ನ ನಿಶ್ಚಿತಾರ್ಥ ಮುರಿದು ಬಿತ್ತು. ಜೀವಕ್ಕೆ ಜೀವ ಕೊಡ್ತೀನಿ ಎನ್ನುತ್ತಿದ್ದ ಮಾವನ ಮಗಳು, ‘ನಮ್ಮಪ್ಪ ಅಮ್ಮನ ಮನಸ್ಸು ನೋಯಿಸೋದು ಹೇಗೆ?’ ಅಂದಳು.

ಎಲ್ಲರೂ ನನ್ನನ್ನು ಕೈಬಿಟ್ಟಿದ್ದಾರೆ ಅನ್ನಿಸಿದಾಗ, ಅಮ್ಮ ನೆನಪಾದಳು. ಅಮ್ಮ ನೆನಪಾದ ತಕ್ಷಣ ಬೆಳಕು ಕಾಣಿಸಿತು.

***

ಅಮ್ಮನ ಹಂಬಲ

ಬದುಕಿದ್ದಾಗ ಎರಡು ಹನಿ ನೀರು ಬಿಡಲು ಬರಲು ಅವನಿಗೆ ಪುರುಸೊತ್ತಿಲ್ಲ. ಫೋನ್‌ ಮಾಡಿ, ‘ಜೀವ ಆಗಲೋ ಈಗಲೋ ಎನ್ನುವಂತಿದೆ. ಬೇಗ ಬನ್ನಿ’ ಅಂದ್ರೆ, ‘ಇಗೋ ಬಂದೆ’ ಅಂದವನು ಬಂದದ್ದು ಎಲ್ಲಾ ಮುಗಿದ ಮೇಲೆ! ಸಾಯೋ ಮುನ್ನ ಮಗನ ಮುಖ ನೋಡಬೇಕು ಎಂದು ಆ ತಾಯಿ ಎಷ್ಟು ಹಂಬಲಿಸಿದ್ದಳು. ಒಂದು ಸಣ್ಣ ಹಂಬಲವನ್ನು ಈಡೇರಿಸಲು ಅವನಿಂದ ಆಗಲಿಲ್ಲ. ಛೇ ಛೇ.

ಜನರಿಗೆ ಅಂಜಿ, ಹೆಣದ ಮುಂದೆ ಬಲವಂತದ ಕಣ್ಣೀರು ಸುರಿಸುತ್ತಿದ್ದಾನೆ. ಬದುಕಿದ್ದಾಗ ತಿರುಗಿ ನೋಡದೇ, ಈಗ ಸಮಾಧಿ, ಸಮಾಧಿ ತುಂಬಾ ಹೂವು.. ಕಾಯಿ ಮೇಲೆ ಕಾಯಿ ಒಡೆಯುತ್ತಿದ್ದಾನೆ.. ಬಡ್ಡೀ ಮಗ.. ಛೇ ಛೇ.

ಅವನು ಆ ತಾಯಿಗೆ ಒಂದು ರೀತಿ ಮೋಸ ಮಾಡಿದ. ನಾನು ಮಾಡಿದ್ದೇನು? ಹಾಸಿಗೆ ಕೆಳಗಿದ್ದ ಅಡಿಕೆಎಲೆ ಚೀಲದಿಂದ ಕವರ್‌ನಲ್ಲಿ ಸುತ್ತಿದ್ದ ನೋಟುಗಳನ್ನು ನನ್ನ ಮುಂದೆ ಹಾಕಿದ್ದಳು ಪುಣ್ಯಾತ್ಗಿತ್ತಿ. ‘ಇದರಲ್ಲಿ 3000 ಇದೆ. ನನ್ನ ಬೆಂಗಳೂರು ಆಸ್ಪತ್ರೆಗೆ ಸೇರಿಸೋ’ ಎಂದು ಅಂಗಲಾಚಿದ್ದಳು.

‘ಮಗ ಇರೋವಾಗ, ನಾನು ಆ ಕೆಲಸ ಮಾಡಿದ್ರೆ ಏನ್‌ ಚೆನ್ನಾಗಿರುತ್ತೆ. ಒಂದು ಸಲ ಅವನಿಗೆ ವಿಷಯ ತಿಳಿಸ್ತೀನಿ. ಅವನು ಆಸಕ್ತಿ ತೋರಿಸದಿದ್ದರೇ, ನಾನಿದ್ದೀನಿ’ ಎಂದು ಭರವಸೆ ನೀಡಿದ್ದೆ. ಮಲಗಿದ ಜಾಗದಲ್ಲೇ ನಕ್ಕಿದ್ದಳು. ಅವಳು ಅಂದು ನಕ್ಕದ್ದರ ಅರ್ಥ ಇಂದು ಗೊತ್ತಾಗುತ್ತಿದೆ. ಆದರೆ ಸಮಯ ಮೀರೋಯ್ತಲ್ಲಾ..

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X