ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುನಿಸ್ವಾಮಿ ಪರಿಣಯ

By Staff
|
Google Oneindia Kannada News


3

ಈ ಮಧ್ಯೆ ನನಗೂ ನನ್ನ ಹೆಂಡತಿಗೂ ಭೀಕರ ಜಗಳವಾಯಿತು. ಅದಕ್ಕೆ ಕಾರಣಳಾದದ್ದು ಪಕ್ಕದ ಮನೆಯ ಪುಟ್ಟ ಹುಡುಗಿ ರಾಗಿಣಿ. ಆಕೆ ಪಿಯೂಸಿ ಓದುತ್ತಿದ್ದ ಹುಡುಗಿ. ಯಾವುದೋ ಮಾಹಿತಿ ಕೇಳಲು ಬಂದ ಆಕೆಯನ್ನು ನನ್ನತ್ತ ಅಟ್ಟಿದ್ದೇ ನನ್ನ ಹೆಂಡತಿ. ಆಮೇಲೆ ಅವಳು ನನಗೆ ಎಷ್ಟು ಹತ್ತಿರವಾದಳು ಅಂದರೆ ದಿನಾ ಮನೆಗೆ ಬರಲು ಶುರುಮಾಡಿದಳು. ನನ್ನೊಂದಿಗೆ ಕುಳಿತು ಇಂಟರ್‌ನೆಟ್‌ ಬ್ರೌಸ್‌ ಮಾಡುತ್ತಿದ್ದಳು. ಸುಮ್ಮನೆ ಹರಟುತ್ತಿದ್ದಳು. ಕೆನ್ನೆ ಜಿಗುಟುತ್ತಿದ್ದಳು. ನೀನು ಎವರ್‌ಗ್ರೀನ್‌ ಅಂತ ಚುಡಾಯಿಸುತ್ತಿದ್ದಳು.

ಬಹುಶಃ ನನ್ನಾಕೆಯನ್ನು ಕೊಂಚ ಕೆರಳಿಸಿರಬೇಕು. ಆ ವಿಚಾರದಲ್ಲಿ ಒಂದೆರಡು ಸಾರಿ ಜಗಳವೂ ಆಯ್ತು. ಜಗಳವಾಯ್ತು ಅನ್ನುವ ಕಾರಣಕ್ಕೇ ನಾನು ರಾಗಿಣಿಯನ್ನು ಮತ್ತಷ್ಟು ಹತ್ತಿರ ಮಾಡಿಕೊಂಡೆ. ಸಿನೆಮಾಕ್ಕೆ ಕರೆದುಕೊಂಡು ಹೋದೆ. ಹುಟ್ಟುಹಬ್ಬಕ್ಕೆ ಒಂದು ಸುಂದರವಾದ ದುಬಾರಿ ಗಿಫ್ಟು ತಂದುಕೊಟ್ಟೆ. ಹಾಗೆ ಕೊಟ್ಟಾಗಲೆಲ್ಲ ನನ್ನ ಹೆಂಡತಿಯ ಕಣ್ಣು ಕೆಂಪಾಗುವುದನ್ನು ನೋಡಿ ಸಂಭ್ರಮಿಸಿದೆ. ಅದಕ್ಕೆ ಸರಿಯಾಗಿ ರಾಗಿಣಿ ಕೂಡ ಕೊಂಚ ಬಿಡುಬೀಸಾಗಿಯೇ ವರ್ತಿಸುತ್ತಿದ್ದಳು. ಈ ಕಾಲದ ಹುಡುಗಿಯರ ಹಾಗೆ ಸಲೀಸಾಗಿ ಓಡಾಡಿಕೊಂಡಿದ್ದಳು. ಅವಳ ಸಂಗವನ್ನು ನಾನೂ ಒಳಗೊಳಗೇ ಇಷ್ಟಪಡುತ್ತಿದ್ದೇನೋ ಏನೋ? ನನಗೆ ಅವಳಲ್ಲಿ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ್ದದ್ದೆಂದರೆ ಆಕೆ ನನ್ನನ್ನು ಯಾವತ್ತೂ ಆಂಕಲ್‌ ಎಂದು ಕರೆದಿರಲಿಲ್ಲ. ಫ್ರೆಂಡ್‌ ಎನ್ನುತ್ತಿದ್ದಳು.

ನಮಗಿಬ್ಬರಿಗೂ ಗೊತ್ತಿಲ್ಲದ ಹಾಗೆ ಇದು ಮಿತಿಮೀರಿ ಒಂದು ರಾತ್ರಿ ಇಬ್ಬರಿಗೂ ಭೀಕರವಾದ ಜಗಳವೂ ಆಯ್ತು. ನಾನೂ ಬೆಕ್ಕಿನ ಹಾಗೆ ಹಠಕಟ್ಟಿ ಜಗಳ ಆಡಿದೆ. ಅವಳೂ ಬಿಡಲಿಲ್ಲ. ಕೊನೆಗೆ ಎಲ್ಲಾ ಜಗಳದ ಹಾಗೆ ಇದೂ ಅವಳ ಕಣ್ಣೀರಿನಲ್ಲಿ ಪರ್ಯಾವಸಾನಗೊಳ್ಳುತ್ತದೆ ಅಂದುಕೊಂಡಿದ್ದೆ. ಹಾಗಾಗಲಿಲ್ಲ. ಆ ರಾತ್ರಿ ಅವಳು ಅಳಲಿಲ್ಲ. ಮಾರನೆಯ ಬೆಳಗ್ಗೆ ಅವಳು ಮನೆಯಲ್ಲಿರಲಿಲ್ಲ. ಆಕೆ ಬರೆದಿಟ್ಟು ಹೋದ ಪತ್ರ ಇತ್ತು. ನನ್ನನ್ನು ಶಾಶ್ವತವಾಗಿ ಬಿಟ್ಟು ಹೋಗುವುದಾಗಿ ಬರೆದಿಟ್ಟು ಆಕೆ ಹೊರಟು ಹೋಗಿದ್ದಳು. ಆ ಕ್ಷಣಕ್ಕೆ ನನಗೇನೂ ಅಂಥ ಬೇಸರವಾಗಲಿಲ್ಲ. ಎಲ್ಲಿಗೆ ಹೋಗ್ತಾಳೆ. ಬಂದೇ ಬರುತ್ತಾಳೆ ಅನ್ನುವ ನಂಬಿಕೆ ನನಗಿತ್ತು.

ಆಕೆ ಬರಲಿಲ್ಲ. ಅವಳು ಹೋದ ನಂತರ ರಾಗಿಣಿಯೂ ನಮ್ಮ ಮನೆಗೆ ಬರಲಿಲ್ಲ. ಕೆಲಸದಾಕೆ ರಮಣಿಯೂ ಬರಲಿಲ್ಲ. ನಾನು ನನ್ನ ಜೀವನ ಶೈಲಿ ಬದಲಾಯಿಸಿಕೊಂಡೆ.

4

ಇದಾಗಿ ವಾರದ ನಂತರ ನಾನು ಮುನಿಸ್ವಾಮಿಯ ಹತ್ತಿರ ಹೋದೆ. ನಾಲ್ಕೈದು ಮಂದಿ ಮಾತ್ರ ಅಲ್ಲಿ ಕಾದಿದ್ದರು. ನನ್ನನ್ನು ನೋಡಿ ಮುನಿಸ್ವಾಮಿ ನಗಲಿಲ್ಲ. ಅವನ ಕಣ್ಣುಗಳಲ್ಲಿ ಸ್ವಾಗತವೂ ಇರಲಿಲ್ಲ. ಅದನ್ನು ನಾನು ಗಮನಿಸಲೂ ಇಲ್ಲ.

ಸಾಮಾನ್ಯವಾಗಿ ಮುನಿಸ್ವಾಮಿ ಎಷ್ಟೇ ಮಂದಿ ಇದ್ದರೂ ನನಗೆ ಪ್ರಾಶಸ್ತ್ಯ ಕೊಡುತ್ತಿದ್ದ. ಅವರು ಬೆಳಗ್ಗೆಯೇ ಫೋನ್‌ ಮಾಡಿದ್ದರು ಅಂತ ಹೇಳಿ ಎಲ್ಲರ ವಿರೋಧದ ನಡುವೆ ನನ್ನನ್ನು ಬೇಗನೇ ಕಳುಹಿಸಿಕೊಡುತ್ತಿದ್ದ. ಆದರೆ ಈ ಬಾರಿ ಅಲ್ಲಿದ್ದ ನಾಲ್ಕೈದು ಮಂದಿಯ ಕ್ಷೌರ ಮುಗಿದ ನಂತರ ಕೂಡ ಆತ ನನ್ನತ್ತ ನೋಡಲಿಲ್ಲ. ನಾನೇ ಮುಂದುವರಿದಾಗ ಆತ ಕೊಂಚ ಕಟುವಾಗಿಯೇ ಹೇಳಿದ : ಇಲ್ಲ, ನೀವು ಬೇರೆಲ್ಲಾದರೂ ಮಾಡಿಸ್ಕಳ್ಳಿ.

ಅಂಥ ಅವಮಾನ ನನಗೆ ಯಾವತ್ತೂ ಆಗಿರಲಿಲ್ಲ. ಗಾಂಧೀಜಿಗೆ ದಕ್ಷಿಣ ಆಫ್ರಿಕಾದಲ್ಲಿ ಆಗಿರಬಹುದಾದ ಅವಮಾನ ಮತ್ತು ನೋವು ನನಗೆ ಆವತ್ತೇ ಅರ್ಥವಾದದ್ದು. ಆತ ಹಾಗೆ ಹೇಳುತ್ತಿದ್ದಂತೆ ನಾನು ಅವನ ಕಪಾಳಕ್ಕೆ ಬಿಗಿಯಬೇಕು ಅನ್ನುವಷ್ಟು ಸಿಟ್ಟು ಬಂದಿತ್ತು. ಕೀರಲು ಧ್ವನಿಯಲ್ಲಿ ಯಾಕೆ ಅಂತ ಕೇಳಿದೆ.

ಯಾಕೂ ಇಲ್ಲ ಹೋಗಿ. ಹೋಗಿ ಅಂತ ಪರಮ ಅಸಹನೆಯಿಂದ ಹೇಳಿದ್ದ. ಅವನ ಹಾಗೇಕೆ ಹೇಳಿದ ಅಂತ ನನಗೆ ಅರ್ಥವೇ ಆಗಿರಲಿಲ್ಲ.

ಆಮೇಲೆ ಒಂದೆರಡು ಸಾರಿ ಮುನಿಸ್ವಾಮಿ ಮತ್ತು ರಮಣಿ ನನಗೆ ಹಾದಿಯಲ್ಲಿ ಸಿಕ್ಕಿದ್ದರು. ನನ್ನನ್ನು ನೋಡಿದ ತಕ್ಷಣ ಅತ್ತ ಮುಖ ತಿರುಗಿಸಿಕೊಂಡು ಹೋಗಿಬಿಡುತ್ತಿದ್ದರು.

5

ನಾನು ಬೇರೊಬ್ಬ ಕ್ಷೌರಿಕನನ್ನು ಹುಡುಕಿಕೊಂಡು ಹೋಗಬೇಕಾಯಿತು. ಆ ವಯಸ್ಸಿನಲ್ಲಿ ಕ್ಷೌರಿಕನನ್ನು ಬದಲಾಯಿಸುವ ಕಷ್ಟ ನಿಮಗೆ ಗೊತ್ತಿಲ್ಲ. ಮೂರು ಫರ್ಲಾಂಗ್‌ ದೂರದಲ್ಲಿರು ಕ್ಷೌರಿಕನ ಅಂಗಡಿಗೆ ಹೋಗಿ ಅಪರಿಚಿತನಂತೆ ಕೂತು ನನಗೆ ಬೇಕಾದ ಶೈಲಿಗೆ ಅವನು ಒಗ್ಗಿಕೊಳ್ಳುವಂತೆ ಮಾಡುವುದೇ ಒಂದು ನರಕ. ಅವನೋ ಪರಮ ಮಾತುಗಾರ. ನನ್ನ ಮಾತನ್ನೇ ಕೇಳಿಸಿಕೊಳ್ಳುತ್ತಿರಲಿಲ್ಲ. ನಾನು ಹೇಳಿದ್ದೆಲ್ಲ ಮುಗಿದ ನಂತರ ಕತ್ತಿನ ಹತ್ತಿರ ಶೇವ್‌ ಮಾಡುತ್ತಾ ಆತ ನಿರ್ವಿಕಾರ ದನಿಯಲ್ಲಿ ಕೇಳಿದ. ಅಮ್ಮಾವರು ಏನ್ಮಾಡ್ತಾರೆ. ಎಷ್ಟು ಮಕ್ಕಳು. ಎಲ್ಲಿ ಮನೆ?

ಮುನಿಸ್ವಾಮಿ ಮದುವೆ ನೆನಪಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X