ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುನಿಸ್ವಾಮಿ ಪರಿಣಯ

By Staff
|
Google Oneindia Kannada News


ಸಂಕ್ರಾಂತಿ ಹಬ್ಬದ ಪ್ರಯುಕ್ತ ಒಂದು ವಿಶೇಷ ಕತೆ ಇಲ್ಲಿದೆ. ಇದು ತಮಾಷೆ ಕತೆಯೋ, ವಿಷಾದದ ಕತೆಯೋ ಓದುಗರೇ ಹೇಳಬೇಕು. ಕತೆಯಲ್ಲಿ ಬರೋ ಮುನಿಸ್ವಾಮಿ, ನಮ್ಮ ನಡುವೆ ಈಗಲೂ ಇದ್ದಾನಾ?

ಅವನ ಹೆಸರು ಮುನಿಸ್ವಾಮಿ ಅಂತ ನನಗೆ ಗೊತ್ತೇ ಇರಲಿಲ್ಲ. ತಿಂಗಳಿಗೊಮ್ಮೆ ಅವನ ಹತ್ತಿರ ಹೋಗುತ್ತಿದ್ದೆನಾದರೂ ಅವನ ಹೆಸರನ್ನು ನಾನು ಯಾವತ್ತೂ ಕೇಳಿರಲಿಲ್ಲ. ಕೇಳಬೇಕು ಅನ್ನಿಸುವಂಥ ವ್ಯಕ್ತಿತ್ವವೂ ಅವನದಾಗಿರಲಿಲ್ಲ. ತುಂಬ ವರುಷಗಳಿಂದ ಹೋಗುತ್ತಿದ್ದೆನಾದ್ದರಿಂದ ನಾನು ಹೋದ ತಕ್ಷಣ ಕುರ್ಚಿಯಲ್ಲಿ ಕೂರಿಸಿ, ಒಂದೂ ಮಾತಾಡದೇ ಕ್ಷೌರ ಮಾಡುತ್ತಿದ್ದ. ನಾನೇನಾದರೂ ಬದಲಾವಣೆ ಹೇಳಿದರೆ ಅದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದ.
ಕೌನ್‌ ಬನೇಗಾ ಕರೋಡ್‌ ಪತಿ ಪ್ರಸಾರ ಆಗುತ್ತಿದ್ದ ದಿನಗಳಲ್ಲಿ ಅಮಿತಾಬ್‌ ಥರದ ಗಡ್ಡ ಬೇಕು ಅಂದಾಗ ಕೂಡ ಆತ ತುಟಿ ಪಿಟಕ್‌ ಎಂದಿರಲಿಲ್ಲ. ಅದು ನನಗೆ ಚೆನ್ನಾಗಿ ಕಾಣಿಸುತ್ತದೋ ಇಲ್ಲವೋ ಅಂತ ಆತ ಹೇಳಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಎಲ್ಲಾ ಮುಗಿದಾದ ಮೇಲೆ ಹೇಗೆ ಕಾಣಿಸುತ್ತೆ ಅಂತ ಕೇಳಿದ್ದಕ್ಕೆ, ಸಾಮಾನ್ಯವಾಗಿ ಕಾಲ ಕೆಳಗೆ ಇಟ್ಟಿರುತ್ತಿದ್ದ ತಲೆಯ ಹಿಂಬದಿಯನ್ನು ತೋರಿಸುವುದಕ್ಕೆ ಮಾತ್ರ ಬಳಸುವ ಕನ್ನಡಿಯನ್ನು ಕೈಗೆ ಕೊಟ್ಟಿದ್ದ ; ನೀನೇ ನೋಡ್ಕೋ ಎಂಬಂತೆ. ಅವತ್ತಂತು ಅವನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು.

ಅವನ ಹೆಸರು ಮುನಿಸ್ವಾಮಿ ಅನ್ನುವುದು ನನಗೆ ಗೊತ್ತಾದದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ. ಒಂದು ಮಂಗಳವಾರ ನಾನು ಆಫೀಸಿನಿಂದ ಮನೆಗೆ ಬರುವಷ್ಟರಲ್ಲಿ ಮನೆಯಲ್ಲೊಂದು ಮದುವೆ ಕಾಗದ ಬಿದ್ದಿತ್ತು. ಎತ್ತಿಕೊಂಡು ನೋಡಿದರೆ ನಾನು ಯಾವತ್ತೂ ಕೇಳಿರದ ನಾಲ್ಕಾರು ಹೆಸರುಗಳು ಅದರಲ್ಲಿದ್ದವು. ಮಾರನಹಳ್ಳಿಯ ಕೃಷ್ಣಪ್ಪನ ದ್ವಿತೀಯ ಪುತ್ರ ಚಿ.ರಾ.ರಾ. ಮುನಿಸ್ವಾಮಿಗೂ, ನಾಗಶೆಟ್ಟಿಹಳ್ಳಿಯ ರಾಮಪ್ಪನ ತೃತೀಯ ಪುತ್ರಿ ಹ.ಕು.ಶೋ. ನಿರ್ಮಲಾಳಿಗೂ ವಿವಾಹ ಮಾಡುವುದೆಂದು ಗುರುಹಿರಿಯರು ನಿಶ್ಚಯಿಸಿದ್ದೇವೆ. ಈ ವಿವಾಹ ಸಮಾರಂಭಕ್ಕೆ... ಇತ್ಯಾದಿ.

ನನಗೆ ಅವರ ಪೈಕಿ ಯಾರೂ ಗೊತ್ತಿರಲಿಲ್ಲ. ಮಾರನಹಳ್ಳಿ ಕೃಷ್ಣಪ್ಪನಾಗಲೀ, ನಾಗಶೆಟ್ಟಿಹಳ್ಳಿಯ ರಾಮಪ್ಪನಾಗಲೀ ನನಗೆ ಗೊತ್ತಿರುವುದು ಸಾಧ್ಯವೇ ಇರಲಿಲ್ಲ. ಆದರೆ ಆಮಂತ್ರಣ ಪತ್ರಿಕೆಯ ಮೇಲೆ ನನ್ನ ಹೆಸರು ವಿಳಾಸ ಸರಿಯಾಗಿಯೇ ಬರೆಯಲಾಗಿತ್ತು.

ಇವರ್ಯಾರೋ ನಿನ್ನ ಕಡೆಯವರೇ ಇರಬೇಕು ಅಂತ ಆಮಂತ್ರಣ ಪತ್ರಿಕೆ ತೋರಿಸಿ ನನ್ನ ಹೆಂಡತಿಗೆ ತಮಾಷೆ ಮಾಡಿದೆ. ಅವಳು ಅದನ್ನು ನೋಡಿ, ಕರೆಕ್ಟೂ ನಮ್ಮವರೇ, ನಮ್ಮ ಮಾವನ ಕಡೆಯವರು ಅಂದಳು. ಯಾವ ಮಾವ ಕೇಳಿದೆ. ಇನ್ಯಾವ ಮಾವ ಇದ್ದಾರೆ ನನಗೆ. ನಿಮ್ಮಪ್ಪನನ್ನು ಬಿಟ್ಟರೆ ಅಂತ ಚಟಾಕಿ ಹಾರಿಸಿದಳು.

2

ಅದ್ಯಾರು ಅಂತ ಪತ್ತೆ ಹಚ್ಚಬೇಕು ಅಂದುಕೊಂಡು ಆ ದಿನ ನಾನು ಮದುವೆಗೆ ಹೋದೆ. ಅಲ್ಲಿಗೆ ಹೋದಾಗಲೂ ಅವನು ಯಾರು ಅನ್ನುವುದು ನನಗೆ ಗೊತ್ತಾಗಲೇ ಇಲ್ಲ. ತುಂಬ ಹೊತ್ತಿನ ನಂತರ ಅಲ್ಲಿಗೆ ಬಂದ ನನ್ನ ಮತ್ತೊಬ್ಬ ಗೆಳೆಯ ಹೇಳಿದ ಮೇಲೆ ನನಗೆ ಅವನು ಮುನಿಸ್ವಾಮಿ ಅಂತ ಗೊತ್ತಾಗಿತ್ತು. ನಾನು ಅವನ ಮುಖವನ್ನೂ ಇಷ್ಟು ದಿನ ಸರಿಯಾಗಿ ನೋಡಿರಲಿಲ್ಲವಲ್ಲ ಅನ್ನಿಸಿತು. ನಾನೂ ಅಲ್ಲೇ ಕಟ್ಟಿಂಗ್‌ ಮಾಡಿಸ್ಕೊಳ್ಳೋದು. ಆದ್ರೂ ಅವನ ಗುರುತೇ ಸಿಕ್ಲಿಲ್ಲ ನೋಡು ಅಂದೆ. ಆ ಮಾತಲ್ಲಿ ಹೆಮ್ಮೆಯೂ ಇತ್ತು ಅಂತ ಈಗ ಅನ್ನಿಸುತ್ತಿದೆ. ಮದುಮಗನ ವೇಷದಲ್ಲಿರುವಾಗ ಗುರುತು ಹಿಡಿಯೋದು ಕಷ್ಟ ಅಂತ ಗೆಳೆಯ ಸಹಮತ ಸೂಚಿಸಿದ. ಹೋದ ತಪ್ಪಿಗೆ ಅವನ ಕೈಗೊಂದು ನೂರು ರೂಪಾಯಿ ಕೊಟ್ಟು ಬಂದೆ. ಅಲ್ಲಿಂದ ಹೊರಗೆ ಬರುತ್ತಿರುವಾಗ ಎಲ್ಲರೂ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದಾರೆ ಅನ್ನಿಸಿತು.

ಇದಾದ ಕೆಲವು ವಾರಗಳ ನಂತರ ನಮ್ಮ ಮನೆಕೆಲಸ ಮಾಡುತ್ತಿದ್ದ ಸುಧಾರಾಣಿ ಮದುವೆಯಾಗಿ ಹೊರಟು ಹೋದಳು. ಒಂದು ವಾರದ ಪರದಾಟದ ನಂತರ ನನ್ನ ಹೆಂಡತಿ ಮತ್ತೊಬ್ಬಾಕೆಯನ್ನು ಕರೆದುಕೊಂಡು ಬಂದಳು. ನೋಡಲು ಕಪ್ಪಗೆ, ಕುಳ್ಳಗೆ ಇದ್ದ ಆಕೆಯ ಹೆಸರು ರಮಣಿ. ವಿಪರೀತ ಮಾತುಗಾತಿ. ಆ ಮಾತು ಆರಂಭದಲ್ಲಿ ನನಗೆ ಕಿರಿಕಿರಿ ಅನ್ನಿಸಿದ್ದಂತೂ ನಿಜ. ಆದರೆ ಕ್ರಮೇಣ ಅದೇ ಅಭ್ಯಾಸವಾಯ್ತು. ಇವಳೂ ಅವಳಿಗೆ ಹೊಂದಿಕೊಂಡಳು. ನನ್ನ ಆಫೀಸು, ಕ್ಲಬ್ಬು, ಗೆಳೆಯರು, ಭಾಷಣ, ಟ್ರೆಕ್ಕಿಂಗು ಅಂತ ಹೊರಡುತ್ತಿದ್ದ ನನ್ನಂಥವನಿಂದ ಅವಳಿಗೆ ಹೆಚ್ಚು ಮಾತು ಸಿಗುವುದು ಸಾಧ್ಯವಿರಲಿಲ್ಲ. ಅವಳ ಮಾತಿನ ಚಟಕ್ಕೆ ರಮಣಿ ಜೊತೆಯಾದಳು. ಬಿಗ್‌ಬಜಾರು, ಚಿಕ್ಕಪೇಟೆಗಳಿಗೆ ಅವಳನ್ನು ಕರೆದುಕೊಂಡೇ ಹೊರಡುವುದು ಶುರುವಾಯಿತು.

ಈ ಮಧ್ಯೆ ಮುನಿಸ್ವಾಮಿ ನನ್ನೊಂದಿಗೆ ಮಾತು ಶುರು ಮಾಡಿದ್ದ. ಅವನ ಮದುವೆಗೆ ಹೋಗಿದ್ದೆ ಎಂಬ ಕೃತಜ್ಞತೆಗೋ ಏನೋ ತಲೆಯನ್ನು ಮೊದಲಿನಷ್ಟು ಜೋರಾಗಿ ತಿರುಗಿಸುತ್ತಿರಲಿಲ್ಲ. ಶೇವಿಂಗಿಗೆ ಒಳಗೆಲ್ಲೋ ಬಚ್ಚಿಟ್ಟು ಕೊಂಡಿದ್ದ ಓಲ್ಡ್‌ ಸ್ಪೈಸ್‌ ಕ್ರೀಮನ್ನು ಗುಟ್ಟಾಗಿ ಹಾಕುತ್ತಿದ್ದ. ಆಮೇಲೆ ಅದೇ ಕಂಪೆನಿಯ ಆಫ್ಟರ್‌ಶೇವ್‌ ಲೋಷನ್ನು ಬಳಿಯುತ್ತಿದ್ದ. ಶುದ್ಧವಾದ ಬಟ್ಟೆ ಹೊದಿಸುತ್ತಿದ್ದ. ಮನೇಲೆಲ್ಲ ಚೆನ್ನಾಗಿದ್ದಾರಾ ಅಂತ ಆಗಾಗ ಕೇಳುತ್ತಿದ್ದ. ತುಂಬ ಜನ ಕಾಯುತ್ತಿದ್ದರೆ ತಾನೇ ಸಿಗರೇಟು, ಟೀ ತರಿಸಿಕೊಡುತ್ತಿದ್ದ. ಒಳಗೇ ಸೇದಿ ಪರವಾಗಿಲ್ಲ ಅನ್ನುವ ರಿಯಾಯಿತಿಯನ್ನು ಕೊಟ್ಟಿದ್ದ. ನಾನು ಹೋದಾಗೆಲ್ಲ ತಾನು ನೋಡುತ್ತಿದ್ದ ಸನ್‌ ಟೀವಿಯ ಚಾನೆಲ್ಲು ಬದಲಾಯಿಸಿ ಈ ಟೀವಿ ಹಾಕುತ್ತಿದ್ದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X