ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಜ್ಯಾಕ್‌

By Staff
|
Google Oneindia Kannada News


‘‘ನನ್ನ ಜೀನ್ಸ್‌ ತೊಡೆಯ ಸಂಧಿ ಕುಯ್ಯುತ್ತಿದೆ..ಎದ್ದು ಅಡ್ಜಸ್ಟ್‌ ಮಾಡಿಕೊಳ್ಳಲೆ?’’ ಎಂದು ತೊಡೆಯಕಡೆ ತೋರಿಸುತ್ತ ಕೇಳಿದ. ಬಂದೂಕುಧಾರಿ, ಇವನನ್ನು ಸುಸ್ತಾದವನಂತೆ ನೋಡುತ್ತ, ತೊಡೆಯಮೇಲಿದ್ದ ಬಂದೂಕನ್ನು ನಿಲ್ಲಿಸಿಕೊಳ್ಳುತ್ತ, ತಲೆಯಾಡಿಸಿದ. ಆ ಬೇಸರವನ್ನು ನೋಡಿ, ಸಮೀರ ಅವನನ್ನು ‘‘ಯಾಕೆ.. ಏನಾಯಿತು?’’ ಎಂದು ಕೇಳಿದಾಗ, ಆತ ಉತ್ತರಿಸದೆ, ಪಕ್ಕಕ್ಕೆ ತಿರುಗಿ ನೋಡುತ್ತ ಕುಳಿತ. ಪ್ಯಾಂಟಿನ ಜಿಪ್ಪನ್ನು ಬಿಚ್ಚಿ, ಒಳಗೆ ಕೈ ತೂರಿಸಿ, ಸರಿ ಪಡಿಸಿಕೊಂಡು, ಹಾಯದ ನಿಟ್ಟುಸಿರು ಬಿಟ್ಟು, ಮತ್ತೆ ಹಾಕಿಕೊಂಡು ಸಮೀರ ಕುಳಿತ. ಇದಾದನಂತರ, ಪಕ್ಕದವನು ಮುಂದೆ ಡ್ರೈವರನ ಬಳಿಯಿದ್ದ ತನ್ನ ಸಹಚರನ ಬಳಿ ಹೊರಟ. ಇದೆಲ್ಲ ನಡೆಯುತ್ತಿದ್ದಾಗ, ಬಸ್ಸು ನಿಧಾನವಾಗಿ ಗುಡ್ಡವೊಂದನ್ನು ಉಬ್ಬಸಪಡುತ್ತ ಏರುತ್ತಿತ್ತು.

ಬಸ್ಸು ಗುಡ್ಡದ ನೆತ್ತಿಯ ಮೇಲಿದ್ದ ಸಮತಟ್ಟಾದ ಜಾಗವೊಂದರಲ್ಲಿ ನಿಂತಿತು. ಮೂವರೂ ಬಂದೂಕುಧಾರಿಗಳು ಎದ್ದು ನಿಂತಾಗ, ಇಷ್ಟು ಹೊತ್ತೂ ಮೌನವಾಗಿ ಅಸಹನೀಯ ಆತಂಕವನ್ನು ಅನುಭವಿಸುತ್ತಿದ್ದ ಪ್ರಯಾಣಿಕರಿಗೆ ಬಿಡುಗಡೆಯ ನಿರೀಕ್ಷೆಯುಂಟಾದಂತಾಯಿತು. ಅನಿರೀಕ್ಷಿತವಾಗಿ ಈ ಸಂದರ್ಭದ ಅನಿವಾರ್ಯತೆಯಲ್ಲಿ ಸಿಲುಕಿ ಕಾತರದಿಂದ ತೀವ್ರವಾಗಿ ತಳಮಳಗೊಂಡ ಜನ, ಈಗ ಸ್ವಲ್ಪ ಸುಲಭವಾಗಿ ಉಸಿರಾಡಹತ್ತಿದರು.

ಮುಖ್ಯಸ್ಥನಂತಿದ್ದ ಹಿರಿಯ ಬಂದೂಕುಧಾರಿ, ಡ್ರೈವರನನ್ನೂ ಒಳಗೊಂಡಂತೆ ಎಲ್ಲರನ್ನೂ ಕೆಳಗಿಳಿಯುವಂತೆ ಆಜ್ಞಾಪಿಸಿದ. ಭಯಗೊಂಡೇ ಇಳಿದ ಪ್ರಯಾಣಿಕರು, ಬಸ್ಸಿನ ಹೊರಗಡೆ ನಿಂತು ಅಸಹಾಯಕರಾಗಿ ಕಾದರು. ಬಂದೂಕುಧಾರಿಗಳು ಬಸ್ಸಿನ ಬಾಗಿಲಿನಲ್ಲಿ ನಿಂತುಕೊಂಡು, ಬಂದೂಕುಗಳನ್ನು ಪ್ರಯಾಣಿಕರತ್ತ ತಿರುಗಿಸಿಕೊಂಡೇ ಸಮಾಲೋಚನೆ ಮಾಡಹತ್ತಿದರು. ಒಬ್ಬ ಮತ್ತಿಬ್ಬರ ಜೊತೆ ವಾದಿಸುತ್ತಿದ್ದಂತೆ ಕಂಡಿತು. ಮಾತಾಡುತ್ತಲೇ, ಆತ ಪದೇ ಪದೇ ವಾಂತಿಯಂತದ್ದನ್ನು ಉಗುಳುತ್ತಿದ್ದ. ದೂರದಿಂದಲೆ ಅವನ ಅನಾರೋಗ್ಯದ ಬಗ್ಗೆ ಸಮೀರನಿಗೆ ಮನವರಿಕೆಯಾಯಿತು.

ಕುತೂಹಲ ಮತ್ತು ಕಾತರದಿಂದ ದಿಟ್ಟಿಸುತ್ತಿದ್ದ ಪ್ರಯಾಣಿಕರು ಯಾರೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಸುಮಾರು ಹೊತ್ತು ನಡೆದ ಸಮಾಲೋಚನೆ ಕೊನೆಗೊಂಡಂತೆ, ಹಿರಿಯನು ಡ್ರೈವರನನ್ನು ತಮ್ಮತ್ತ ಬರುವಂತೆ ಸನ್ನೆ ಮಾಡಿ ಕರೆದ. ಏನನ್ನೂ ನಿರಾಕರಿಸುವ ಸ್ಥಿತಿಯಲ್ಲಿಲ್ಲದ ಡ್ರೈವರನು ಒಮ್ಮೆ ಕಂಡಕ್ಟರನ ಕಡೆ ನೋಡಿ, ತಲೆ ತಗ್ಗಿಸಿಕೊಂಡು, ಆತಂಕದಿಂದ, ಕೊಂಚ ಬೆದರುತ್ತ, ಅತ್ತ ಕಡೆ ಹೋದ. ಕಂಡಕ್ಟರ, ತನ್ನ ತೊಗಲಿನ ಚೀಲವನ್ನು ಭದ್ರವಾಗಿ ಅವುಚಿಕೊಂಡು ಡ್ರೈವರನ ಕಡೆ ನೋಡುತ್ತಿದ್ದ.

ಹಿರಿಯ ಬಂದೂಕುಧಾರಿ ಡ್ರೈವರನಿಗೆ ಬಸ್ಸಿನೊಳಕ್ಕೆ ಹೋಗಲು ಹೇಳಿದ. ಅದನ್ನು ಪಾಲಿಸಿದ ಡ್ರೈವರನ ಹಿಂದೆ ತಾನೂ ಹತ್ತಿದ. ಮತ್ತಿಬ್ಬರ ಹದ್ದಿನಲ್ಲಿದ್ದ ಪ್ರಯಾಣಿಕರು ನೋಡುನೋಡುತ್ತಲೆ, ಬಸ್ಸು ಗರ ಗರ ಶಬ್ದದೊಂದಿಗೆ ಶುರುವಾಗಿ, ನಿಧಾನವಾಗಿ ಗುಡ್ಡದ ತುದಿಯ ಕಡೆ ಸಾಗಿತು. ಸಮೀರನಿಗೆ ತನ್ನ ಸುತ್ತಲಿನ, ತತ್‌-ಕ್ಷಣದ ಇರುವಿನ ಅಗಾಧ ನಿರರ್ಥಕತೆಯ ಪರಕೀಯ ಪ್ರಜ್ಞೆ ಜಾಗ್ರತವಾದಂತಾಗಿ, ಅದು ತನ್ನ ಅರಿವಿನ ಪರಿಧಿಯನ್ನು ದಾಟದೆ ಒದ್ದಾಡಲು, ಅಸಹ್ಯಪಡುತ್ತ, ತನ್ನ ಮುಂದೆ ನಿಂತಿದ್ದ 15 ಜನ ಅಸಹಾಯಕ ಪ್ರಾಣಿಗಳನ್ನು ದಿಟ್ಟಿಸುತ್ತಿದ್ದ.

ಹೊಟ್ಟೆ ಹಸಿವಿನ ಅರಿವಾಗಿ, ಕುಳಿತುಕೊಳ್ಳುವ ಸಾಧ್ಯತೆಗಳ ಬಗ್ಗೆ ಯೋಚಿಸುತ್ತ ನಿಂತಿದ್ದಾಗ, ಇದ್ದಕ್ಕಿದ್ದಂತೆ ಮುಂದಿದ್ದವರ ಮುಖದಮೇಲೆ ಹಾದುಹೋದ ಭಯಾನಕ ಛಾಯೆಯನ್ನು ಗಮನಿಸಿದ. ನಿಧಾನವಾಗಿ ಹಿಂದಿರುಗಿ ನೋಡಲು, ಹಿರಿಯ ಬಂದೂಕುಧಾರಿ ಮತ್ತು ಡ್ರೈವರ, ಇಬ್ಬರು, ಗುಡ್ಡದ ಕೆಳಗಿನ ಕೊರಕಲಿನೊಳಗೆ ಬಸ್ಸನ್ನು ತಳ್ಳುತ್ತಿದ್ದುದು ಕಾಣಿಸಿತು.

ಸಮೀರ ನೋಡುವಷ್ಟರಲ್ಲಿ, ಬಸ್ಸು ತನ್ನ ಅಂತಿಮ ನೆಗೆತಕ್ಕೆ ಅಣಿಯಾದಂತಿತ್ತು. ಕೊನೆಯ ಬಾರಿ, ಇಬ್ಬರೂ ಶಕ್ತಿಯನ್ನೆಲ್ಲ ಉಪಯೋಗಿಸಿ ನೂಕಲು, ಬಸ್ಸು ನಿಧಾನವಾಗಿ ಕೊರಕಲಿನೆಡೆಗೆ, ಇಳಿಜಾರಿನಲ್ಲಿ ಉರುಳಿತು. ಬರು ಬರುತ್ತ, ತನ್ನ ವೇಗವನ್ನು ಹೆಚ್ಚಿಸಿಕೊಂಡ ಬಸ್ಸು, ಒಂದು ನಿಮಿಷದೊಳಗೆ, ಕಿವಿಗಡಚಿಕ್ಕುವಂತೆ ಭಯಾನಕ ಆಸ್ಫೋಟದೊಂದಿಗೆ ತನ್ನ ಮೋಕ್ಷವನ್ನು ಪಡೆದುಕೊಂಡಿತು. ಆಸ್ಫೋಟದ ಮುಂಚಿನ ನಿರ್ಲಿಪ್ತ ನಿಶ್ಶಬ್ದವನ್ನು ಧೇನ್ನಿಸುತ್ತ ನಿಂತ ಸಮೀರನ ಮುಂದೆ, ಮಂಕುಹೊಡೆದಂತೆ ಜನ ನಿಂತಿದ್ದರು.

ಕಂಡಕ್ಟರನು ತನ್ನ ಕಣ್ಣನ್ನು ನಂಬದಂತೆ, ತನ್ನ ಇರುವಿಕೆಯ ಮೂಲದ್ರವವೆ ಆವಿಯಾದಂತೆ ದಿಗ್ಮೂಢನಾಗಿ ನಿಂತಿದ್ದ. ಮೂವರು ಹೆಂಗಸರು ತಮ್ಮ ಬಾಯಿಗಳನ್ನು ಕೈಗಳಿಂದ ಮುಚ್ಚಿ ಹಿಡಿದು ಅಗಲವಾಗಿ ಕಣ್ಬಿಟ್ಟು ನಿಂತಿದ್ದರು. ವಿದ್ಯಾರ್ಥಿಯೂ, ಮುದುಕರೊಬ್ಬರೂ, ಅತ್ತಿಂದಿತ್ತ, ಇತ್ತಿಂದತ್ತ, ಬಸ್ಸು ಬಿದ್ದ ಕಡೆಗೂ, ತಮ್ಮ ಮುಂದೆ ನಿಂತಿದ್ದ ಬಂದೂಕುಧಾರಿಗಳ ಕಡೆಗೂ ದೃಷ್ಟಿ ಹಾಯಿಸುತ್ತ ಗೊಂದಲಗೊಂಡಿದ್ದರು. ಬಸ್ಸು ಉರಿಯುವವರೆಗೂ ಎಂಬಂತೆ, ಡ್ರೈವರನು, ಹಿರಿಯನೂ, ಕೆಳಗೆ ನೋಡುತ್ತ ನಿಂತುಕೊಂಡಿದ್ದರು.

ಕೊನೆಗೆ, ಅವರಿಬ್ಬರೂ, ಭಾರವಾದ ಹೆಜ್ಜೆಗಳೊಡನೆ, ಮರಳಿ ಬಂದರು. ಡ್ರೈವರನು, ಮುಖ ಮುಚ್ಚಿಕೊಂಡು ಬಿಕ್ಕಳಿಸಿ, ಬಿಕ್ಕಳಿಸಿ ಅಳುತ್ತ ಬಂದ. ನಿಧಾನವಾಗಿ ಗುಸು ಗುಸು ದನಿಯಲ್ಲಿ ಮಾತನಾಡತೊಡಗಿದ ಪ್ರಯಾಣಿಕರಿಗೆ, ಹಿರಿಯ ಬಂದೂಕುಧಾರಿ, ತೆಲುಗಿನಲ್ಲಿ, ನಿಧಾನವಾಗಿ ಬಿಡಿಸಿ ಬಿಡಿಸಿ ತೀಕ್ಷ್ಣವಾಗಿ ದಿಟ್ಟಿಸುತ್ತ ಹೇಳಿದ - ನೀವೆಲ್ಲರೂ ಈಗ ಸ್ವತಂತ್ರರು. ಈಗ ನೀವೆಲ್ಲ ನಿಮ್ಮ ನಿಮ್ಮ ಪಾಡಿಗೆ ಹೋಗಬಹುದು. ನಮ್ಮನ್ನು ಯಾರೂ ಹಿಂಬಾಲಿಸಬೇಡಿ..ಹಾಗೇನಾದರೂ ಹಿಂಬಾಲಿಸಿದರೆ, ಗುಂಡು ಹಾರಿಸಬೇಕಾಗುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ. ವಾಂತಿ ಮಾಡಿಕೊಂಡ ಕಿರಿಯ ಏನನ್ನೋ ಹೇಳಲುಹೋದಾಗ, ಹಿರಿಯ ಕೈತೋರಿ ಅವನನ್ನು ಸುಮ್ಮನಿರಿಸಿದ.

ಪ್ರಯಾಣಿಕರಿಗೆ, ತಮ್ಮನ್ನು ಹೀಗೆ ಈ ಪರಿಸ್ಥಿತಿಯಲ್ಲಿ ಬಿಟ್ಟಿದ್ದಕ್ಕೆ ಖುಶಿಪಡಬೇಕೋ, ದು:ಖಿಸಬೇಕೋ, ತಿಳಿಯಲಿಲ್ಲ. ಆ ಗುಂಪಿನಲ್ಲಿ ಒಬ್ಬ ತಾಯಿ, ಒಂದು ಪುಟ್ಟ ಮಗು, ಇಬ್ಬರು ಮುದುಕರಿದ್ದರು. ಉರಿಬೇಸಿಗೆಯ ಅಸಾಧ್ಯ ಬಿಸಿಲು, ಹಸಿರಿನ ತುಣುಕೂ ಕಾಣದ ಬೆಂಗಾಡಿನಲ್ಲಿ ಹೊದ್ದು ಕಾಯುತ್ತಿತ್ತು. ಆ ಬಿಸಿಲಿನ ತಾಪಕ್ಕೆ ಬಸಿದುಹೋಗಿದ್ದ ಯಾರ ಯೋಚನಾಶಕ್ತಿಗೂ, ಏನು ಮಾಡಬೇಕೆಂದು ಹೊಳೆಯಲಿಲ್ಲ. ಸಮೀರ, ವಾಂತಿಮಾಡಿಕೊಂಡ ಕಿರಿಯ ಬಂದೂಕುಧಾರಿಯನ್ನು ಕುತೂಹಲದಿಂದ ದಿಟ್ಟಿಸಿನೋಡಿದ. ನೆಟ್ಟಂತೆ ನಿಂತ ಪ್ರಯಾಣಿಕರಲ್ಲಿ ಹುಟ್ಟಿದ ಅನೇಕ ಪ್ರಶ್ನೆಗಳು, ಗಂಟಲಲ್ಲೆ ಅರ್ಧ ಸತ್ತುಹೋಗುತ್ತಿದ್ದವು.

ಮೂವರೂ ತಮ್ಮ ತಮ್ಮಲ್ಲೆ ಮಾತಾಡಿಕೊಳ್ಳುತ್ತ ನಿಂತಲ್ಲೆ ಚಡಪಡಿಸತೊಡಗಿದರು. ಮಾತಿನ ಮಧ್ಯೆ, ಕೆಂಪು ಕಣ್ಣಿನ ಕಿರಿಯ ಏನನ್ನೋ ಬಲವಾಗಿ ನಿರಾಕರಿಸುವಂತೆ, ಬಂದೂಕಿನ ಹಿಂಬದಿಯಿಂದ ಜೋರಾಗಿ ನೆಲಕ್ಕೆ ಗುದ್ದಿದ. ಹಿರಿಯ ಅವನಿಗೆ ಏನನ್ನೋ ಹೇಳುತ್ತ ಸಮಾಧಾನಪಡಿಸುವಂತೆ ತೋರಿತು. ಮೂರು ಜನರೂ ಮಾತು ನಿಲ್ಲಿಸಿ, ಸಮೀರನೆಡೆಗೆ ನೋಡಿದರು. ಹಿರಿಯ ಅವನನ್ನು ತಮ್ಮೆಡೆಗೆ ಬರುವಂತೆ ಕೈಬಿಸಿ ಕರೆದ.

ಸಮೀರ ಅವರತ್ತ ನಡೆಯುತ್ತಿದ್ದಾಗ, ಹಿಂದಿದ್ದ ಪ್ರಯಾಣಿಕರೆಲ್ಲರೂ ಆಸೆ ಕಣ್ಗಳಿಂದ ಯಾವುದೋ ಸಾಧ್ಯತೆಗಾಗಿ ನಿರೀಕ್ಷಿಸುತ್ತ ನಿಂತಿದ್ದರು. ಮೂವರು ಬಂದೂಕುಧಾರಿಗಳೂ ತಮ್ಮಲ್ಲೇ ಮತ್ತೊಮ್ಮೆ ಮಾತಾಡಿಕೊಂಡು, ಕೊನೆಗೆ ಸಮೀರನನ್ನು ತಮ್ಮ ಜೊತೆಗೆ ಬರುವಂತೆ ಹೇಳಿದರು. ನಿಂತಿದ್ದ ಪ್ರಯಾಣಿಕರು ನಿಂತಲ್ಲೇ, ಕಣ್ಣು ಕಿರಿದಾಗಿಸಿ, ನಾಲ್ವರೂ ಇಳಿಜಾರಿನಲ್ಲಿ ಕರಗಿಹೋಗುವುದನ್ನೇ ನೋಡುತ್ತ ನಿಂತರು.

***

ಅರ್ಧಘಂಟೆಯ ನಡಿಗೆಯ ನಂತರ ಸಮೀರನಿಗೆ ಮತ್ತೆ ತಂಪಾದ ಶಾಂತತೆ ಆವರಿಸಿ, ತಾನು ಈ ಮೂವರ ಕೂಡೆ, ಥೆಳುವಾಗಿದ್ದ ಗಾಳಿಯಲ್ಲಿ ತೇಲುತ್ತ ತೇಲುತ್ತ ಹೋಗುತ್ತಿದ್ದಂತೆ ಅನಿಸಿತು. ಈ ಬಾರಿ, ಯಾವುದೇ ಪ್ರಜ್ನೆಯ, ಅರಿವಿನ ಕಟ್ಟಳೆಯ ಹಂಗಿಲ್ಲದೆ ಅನುಭವಿಸುತ್ತ, ಧೂಳಿನ ದಾರಿಯಲ್ಲಿ ಮೂರು ಬಂದೂಕುಗಳ ಮಧ್ಯ ಸಂಬಂಧವಿಲ್ಲದಂತೆ ನಡೆಯುತ್ತ ಹೋದ.

ಕೆಲಹೊತ್ತಿನ ನಂತರ, ಎಲೆಗಳೆಲ್ಲ ಕಳೆದ ಬೋಳು ಮರವೊಂದರ ಕೆಳಗೆ ಬಂದು ನಿಂತು ಮೂವರೂ, ಸಮೀರನಿಗೆ ಅರ್ಥವಾಗದ ತೆಲುಗಿನಲ್ಲಿ ಮಾತನಾಡಲು ಶುರುಮಾಡಿದರು. ಅವರುಗಳು ತಮ್ಮ ಥೆಳುವಾದ ಮುಸುಕುಗಳನ್ನು ತೆಗೆದು, ಮುಖವೊರೆಸಿಕೊಂಡು, ತನ್ನೆಡೆಗೆ ಶೂನ್ಯದೃಷ್ಟಿಯ ನೋಟ ಬೀರಿದಾಗ, ಸಮೀರನಿಗೆ ಥಟ್ಟನೆ, ಇವರಿಗೆ ತಾವೇನು ಮಾಡುತ್ತಿದ್ದೇವೆಂಬ ಅರಿವು ಬಹುಶ: ಇಲ್ಲವೆಂಬ ಸಾಧ್ಯತೆ ಹೊಳೆಯಿತು.

ತನಗೆ ಗೊತ್ತಿದ್ದ ತೆಲುಗಿನಲ್ಲಿ, ‘‘ಯಾಕೆ ಹೀಗೆ ಮಾಡಿದಿರಿ?’’ ಎಂದು ಸಮಾಧಾನದಿಂದ ಕೇಳಿದಾಗ, ಕೆಂಪನೆ ಕಣ್ಣಿನವ ವಿಷಾದದಿಂದ ಹಿರಿಯನೆಡೆಗೆ ನೋಡಿದನು. ಮೂವರೂ, ಮಾತಿಲ್ಲದೆ ಮರದ ಕೆಳಗೆ ಕುಳಿತು, ಯೋಚನಾಮಗ್ನರಾದರು. ಮೈಸರಿಯಿಲ್ಲದ ಯುವಕ, ಬಿಕ್ಕಳಿಸಿ ಅಳತೊಡಗಿದ. ತನ್ನ ಬಂದೂಕನ್ನೂ, ಸೊಂಟಕ್ಕೆ ಸುತ್ತಿದ್ದ ಬುಲ್ಲೆಟ್ಟಿನ ಸರವನ್ನೂ ಕಿತ್ತೊಗೆದು, ದು:ಖದ ಮುಖಮಾಡಿಕೊಂದು ಹೊರಟುಹೋದ.

ಉಳಿದಿಬ್ಬರು, ಅವನು ಹೋದ ಕಡೆಗೇ ಭಾವನಾರಹಿತರಾಗಿ ದಿಟ್ಟಿಸುತ್ತ ಕೆಲ ಸಮಯ ಕುಳಿತಿದ್ದು, ನಿಧಾನವಾಗಿ, ಬಂದೂಕನ್ನೂ, ಗುಂಡುಗಳ ಸರವನ್ನೂ ಎತ್ತಿಕೊಂಡಾಗ, ಸಮೀರ ತನಗೆ ತಾನೆ...‘‘ಹೌದು...ಹೌದು’’ ಎಂದುಕೊಳ್ಳುತ್ತ ಸುಡುಬಂಡೆಯ ಮೇಲೆ, ನಿಧಾನವಾಗಿ ಕುಳಿತುಕೊಂಡ. ಸಮೀರನನ್ನೊಮ್ಮೆ ಮತ್ತೆ ಭಾವನಾರಹಿತರಾಗಿ ನೋಡಿಕೊಂಡು, ಇಬ್ಬರೂ, ಭಾರವಾದ ಹೆಜ್ಜೆಗಳೊಂದಿಗೆ, ಬೆಂದ ನೆಲದ ಬಂಜರಿನ ಮಧ್ಯೆ ನಡೆದು ಮರೆಯಾದರು.

ಸಮೀರ ನೆರಳಿರದ ಮರದ ಕೆಳಗೆ ಕುಳಿತು, ಚಿಕ್ಕ ಚಿಕ್ಕ ಕಲ್ಲುಗಳನ್ನು ಬಂಡೆಯಾಂದರ ಕಡೆಗೆ ಎಸೆಯುತ್ತಾ ಕುಳಿತ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X