• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೈಜ್ಯಾಕ್‌

By Staff
|

ತೂಕಡಿಕೆಯ ಮಧ್ಯೆ ಜೋಲಿ ಹೊಡೆದಂತಾಗಿ ಎಚ್ಚರವಾಗುವುದಕ್ಕೂ, ಬಸ್ಸು ಉಗ್ರವಾಗಿ ಬ್ರೇಕ್‌ ಹೊಡೆದು ನಿಲ್ಲುವುದಕ್ಕೂ ಸರಿ ಹೋಯಿತು. ಬೆಳಗಿನ ತಿಂಡಿ ಇರದ ಹೊಟ್ಟೆಗೆ, ಕೆಟ್ಟ ಮುಖದ ಚಹ ಸೇವಿಸಿದ್ದರಿಂದ ಸಮೀರನಿಗೆ ಹೊಟ್ಟೆ ತೊಳಸು, ತಲೆ ನೋವು ಬಂದು ವಾಂತಿ ಮಾಡುವಂತಾಗಿ ಹಿಂಸೆಯಾಯಿತು. ಅರ್ಧ ನಿದ್ದೆಗೆ ಎಚ್ಚರಾದಂತಾಗಿ, ತಾನು ಕಾಣುತ್ತಿದ್ದ, ಚಿಕ್ಕಂದಿನಿಂದಲೂ ಎಂದಾದರೊಮ್ಮೆ ಮರುಕಳಿಸುತ್ತಿದ್ದ ಕನಸು - ಸ್ನೇಹಿತರೆಲ್ಲ ಕ್ಲಾಸಿನಲ್ಲಿ ಕೂತು ಪಾಠ ಕೇಳುತ್ತಿದ್ದಾಗ, ಸ್ಕೂಲಿನಿಂದ ಮೈಲಿ ದೂರದಲ್ಲಿದ್ದ ಗದ್ದೆಯ ತಂಪಿನ ಮಧ್ಯೆ, ತಂಪಾದ ಹುಣಿಸೆಮರದ ಕೆಳಗಿನ ದೊಡ್ಡ ಬಾವಿಯನ್ನು ಸುತ್ತಿ ಸುತ್ತಿ ಸುತ್ತು ಹಾಕುತ್ತ ಹಾಡಿಕೊಳ್ಳುತ್ತಿದ್ದದ್ದು - ಅರ್ಧಕ್ಕೆ ನಿಂತಂತಾಗಿ ತಲೆ ಸಿಡಿಯ ಹತ್ತಿತು.

ರಸ್ತೆಯ ಧೂಳೆಲ್ಲ ಬ್ರೇಕ್‌ ಹಾಕಿದ ರಭಸದಿಂದಾಗಿ ಬಸ್ಸೊಳಗೆ ನುಗ್ಗಿ ಕಣ್ಣು ಮಸುಕಾಯಿತು. ಸಮೀರ ಕಣ್ಣುಜ್ಜಿಕೊಂಡು ನೋಡಿದಾಗ ಎಚ್ಚರಿಕೆ ಪೂರ್ತಿಯಾಯಿತು. ಮೂರು ಜನ, ಮುಖವನ್ನು ಕಪ್ಪನೆ ಮುಸುಕಿನಿಂದ ಮುಚ್ಚಿಕೊಂಡು, ಹಸಿರು ಖಾಕಿ ಧರಿಸಿ ಕೈಯಲ್ಲಿ ಆಧುನಿಕ ಬಂದೂಕುಗಳನ್ನು ಹಿಡಿದು ಬಸ್ಸನ್ನೇರಿದ್ದರು.

ತೆಲುಗಿನಲ್ಲಿ ಮಾತಾಡಲು ಶುರುಮಾಡಿದ ಅವರು, ತಾವು ಪಿ.ಡಬ್ಲ್ಯೂ.ಜಿಗೆ ಸೇರಿದ ನಕ್ಸಲೀಯರೆಂದೂ, ತಾವೇರಿರುವ ಈ ಬಸ್ಸನ್ನು ಹೈಜಾಕ್‌ ಮಾಡುತ್ತಿದ್ದೇವೆಂದೂ, ಯಾರಾದರೂ ಮಿಸುಕಾಡಿದರೆ, ಗುಂಡಿಕ್ಕಿ ಕೊಲ್ಲುವರೆಂದು ಹೇಳುತ್ತಿದ್ದರು. ಸಮೀರನಿಗೆ ಇದು ಅರ್ಥವಾಗಲು ತೆಲುಗಿನ ಆವಶ್ಯಕತೆ ಕಾಣಲಿಲ್ಲ. ಅರ್ಥವಾದಮೇಲೆ, ಸುಮ್ಮನೆ ಬಸ್ಸಿನ ಕಿಟಕಿಯ ಕಂಬಿಗೆ ತಲೆಯಾನಿಸಿ ಕುಳಿತ ಸಮೀರನ ಒಳಗಿನಿಂದ ಇದ್ದಕ್ಕಿದ್ದಂತೆ ಶಾಂತ ಅಲೆಯಾಂದು ಹೊಮ್ಮಿ ಮೈಯೆಲ್ಲ ವ್ಯಾಪಿಸಿದಂತಾಯಿತು.

ತಾನಿದ್ದ ಸ್ಥಿತಿಯಲ್ಲಿ, ತನ್ನ ದೇಹ ಮತ್ತು ಬುದ್ಧಿ ತಡೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಆಕ್ರಮಣಗಳ ಹೊರತಾಗಿಯೂ, ಸಮೀರ ಶಾಂತಚಿತ್ತನಾಗಿ ಧೇನಿಸುತ್ತ ಒರಗಿದ. ಹೊರಗೆ ಸಮಾಧಾನದಿಂದ ನೋಡಿದರೆ, ಕೆಂಪನೆ ಮಣ್ಣು ಮತ್ತು ಧೀ ಆಕಾರದ ಬಂಡೆಗಳ ಬಿಸಿಲಿನ ರಾವನ್ನು ಬಿಟ್ಟರೆ ಬೇರೇನೂ ಪ್ರತಿಷ್ಟವಾಗದ ವಾತಾವರಣ ಕಂಡಿತು. ನರಪಿಳ್ಳೆಯಾಗಲಿ, ಪ್ರಾಣಿ ಪಕ್ಷಿಯಾಗಲಿ ಸುಳಿವಿಲ್ಲದ ಈ ಬಂಜರಿನ ಮಧ್ಯೆ ಸಮೀರ ತಂಪಾಗುತ್ತ ಕಾಯುತ್ತ ಕಣ್ಮುಚ್ಚಿ ಕೂತ.

ಬುದ್ಧಿಗೆ ಹೊಳೆದದ್ದು ಇಷ್ಟು - ಬಸ್ಸು ಸುಮಾರು ದೂರ ಕ್ರಮಿಸಿ ಬಂಜರಿನ ಮಧ್ಯೆ ಬರಬೇಕಾದರೆ ನಕ್ಸಲೀಯರು ತಡೆದು ಹತ್ತಿ ಹೈಜಾಕ್‌ ಮಾಡಿದ್ದಾರೆ. ಬುದ್ಧಿಗೆ ಹೊಳೆಯದಿದ್ದದ್ದು - ಇವರು ವೇಷ ಮರೆಸದೇ ಹತ್ತಲು ಕಾಯುತ್ತಿದ್ದಾಗ, ಡ್ರೈವರನು ಯಾಕೆ ಬಸ್ಸನ್ನು ನಿಲ್ಲಿಸದೆ ಮುಂದೆ ಓಡಿಸಲಿಲ್ಲ? ಎಂಬುದು. ಎಂದಿನಂತೆ ಆ ಪ್ರಶ್ನೆಯನ್ನು ಆಳಕ್ಕೆ ಕೆದಕದೆ ಬಿಟ್ಟ. ಅತ್ಯಂತ ಸಂದಿಗ್ಧ ಸ್ಠಿತಿಗಳ ಮುಖಾಮುಖಿಯಲ್ಲಿ, ಹೇಗೆ ತಾನು ತಣ್ಣಗೆ, ಯಾವುದೇ ತವಕವಿಲ್ಲದೆ ಕೂರಬಲ್ಲೆ ಎಂದು ಯಾಚಿಸಿ ಆಶ್ಚರ್ಯವಾಯಿತು. ಅಪಾಯದ, ಆಕ್ರಮಣದ ಒಳಧ್ಯಾನದಿಂದಲೇ, ಅಪಾಯದ ಮೂಲವನ್ನು ಶೋಧಿಸುವ ಪ್ರಾಣಿ ಸಂಕುಲಗಳ ಬಗ್ಗೆ ಅಸಂಬದ್ಧವಾದ ಯೋಚನೆ ಬಂತು.

ಈ ಮಧ್ಯೆ, ಒಬ್ಬ ಮುಸುಕುಧಾರಿ ಬಸ್ಸಿನ ಬಾಗಿಲಲ್ಲಿ ಹಿಡಿಕಂಬಿಗಳಿಗೊರಗಿಕೊಂಡು, ತೂಗಾಡುತ್ತ ನಿಂತು, ಬಂದೂಕಿನ ನಳಿಕೆಯನ್ನು ಬಸ್ಸಿನೊಳಗೆ ಅಪ್ರತಿಭರಾಗಿ ಕುಳಿತಿದ್ದ ಜನರ ಕಡೆಗೆ ತೋರಿದ್ದ. ಮತ್ತೊಬ್ಬ ಡ್ರೈವರನ ಕಡೆಗೆ ನೋಡುತ್ತ ಸೂಚನೆ ಕೊಡುತ್ತಿದ್ದ. ಮೂರನೆಯವ ರೋದಿಸುತ್ತಿದ್ದ ಮಗುವೊಂದರ ತಾಯಿಗೆ ತೆಲುಗಿನಲ್ಲಿ ಉಚ್ಚಸ್ವರದಲ್ಲಿ ಅದನ್ನು ಸಮಾಧಾನ ಪಡಿಸುವಂತೆ ಆಗ್ರಹಿಸುತ್ತಿದ್ದ.

ಕೆಲಹೊತ್ತಿನ ನಂತರ ಬಸ್ಸು ಹೊರಟಿತು. ಆಘಾತದ ತತ್ಕ್ಷಣದ ತೀವ್ರತೆ ಕಮ್ಮಿಯಾದಂತೆ, ಪ್ರತಿಮೆಗಳಂತೆ ಕೂತಿದ್ದ ಜನ ಬಿಸಿಲಿನ ಝಳಕ್ಕೆ, ಗಾಳಿಗಾಗಿ ಚಡಪಡಿಸುತ್ತ ಪಂಚೆ, ಸೀರೆ ಸೆರಗು, ಟವಲುಗಳಿಂದ ಬೀಸಿಕೊಳ್ಳಲು ಶುರುಮಾಡಿದ್ದರು. ಸಮೀರ ನಿಧಾನವಾಗಿ ಕಣ್ತೆರೆದು ನೋಡಿದಾಗ, ಒಬ್ಬ ಕಾಲೇಜು ವಿದ್ಯಾರ್ಥಿ - ರಜೆಗೆ ಎಲ್ಲೋ ಹೋಗುತ್ತಿದ್ದನೊ ಏನೋ - ಮಗುವಿನ ಅಮ್ಮನ್ನನ್ನು ಗದರಿಸಲು ಬಂದಿದ್ದ ಯುವ ನಕ್ಸಲೀಯನೊಂದಿಗೆ ಸ್ನೇಹಪೂರ್ಣವಾಗಿ ಮಾತಾಡುತ್ತಿದ್ದ.

ಸಮೀರನಿಗೆ ತತ್ಕ್ಷಣ ತನ್ನ ಅಕ್ಕ, ಬಹುಶ: ಊಹೆಯ ಮೇರೆಗೆ ತನ್ನ ಬರುವನ್ನು ಇದಿರು ನೋಡುತ್ತಿರಬಹುದು ಎನಿಸಿ, ಮನಸಿನಲ್ಲಿ ಒಮ್ಮೆ ಚುಚ್ಚಿದ ಹಾಗಾಯಿತು. ತನ್ನ ಮೇಲೆ ತನಗೆ ಬೇಸರ ಮೂಡಿ, ತಾನು ಇಂಥ ಪರಿಸ್ಥಿತಿಗಳೊಡನೆಯೆ ಜೀವಮಾನವಿಡೀ ಒದ್ದಾಡುತ್ತ ಬದುಕುವುದಕ್ಕೆ ಲಾಯಖ್ಖು ಎಂದೆನಿಸಿ, ಒಣಗಿದ ತುಟಿಗಳ ಮೇಲೆ ವಿಷಾದದ ನಗೆಯಾಂದು ಹಾದು ಹೋಯಿತು.

ಡ್ರೈವರನಿಗೆ ಸೂಚನೆಗಳನ್ನು ಕೊಟ್ಟ ನಂತರ, ಮೊದಲನೆಯವ, ಬಸ್ಸಿನಲ್ಲಿದ್ದ ಜನರನ್ನು ಎಣಿಸತೊಡಗಿದ. ಬಸ್ಸಿನಲ್ಲಿ ಇದ್ದದ್ದು ಕೇವಲ 15-16 ಜನ ಎಂದು ಸಮೀರ ಗಮನಿಸಿದ್ದು ಆಗಲೆ. ತಾನು ಕೇಳಬೇಕೆಂದುಕೊಂಡಿದ್ದ ಪ್ರಶ್ನೆಗಳನ್ನು ಕೇಳಿಲ್ಲವೆಂದು, ತಾನು ಇನ್ನೂ ಟಿಕೀಟನ್ನು ಕೂಡ ಕೊಂಡಿಲ್ಲವೆಂದು ಕೂಡ ಅವನಿಗೆ ಹೊಳೆದದ್ದು ಆಗಲೆ. ಎಂಜಿನ್ನಿನ ಜೋಗುಳದಂತಹ ಶಬ್ದ, ನಡುವೆ ಜೋಲಿಹೊಡೆಸುವಂತೆ ಎತ್ತೆತ್ತಿ ಹಾಕುವಂತಹ ರಸ್ತೆ, ಮತ್ತು ಮೂವರು ಬಂದೂಕುಧಾರಿಗಳು, ಇವುಗಳ ಮಧ್ಯೆ ಕಂಡಕ್ಟರ ತೂಕಡಿಸುತ್ತ ಕುಳಿತಿದ್ದ.

* * *

ಬಂದೂಕುಧಾರಿಗಳ ಇರುವಿಕೆಯನ್ನೂ ಧಿಕ್ಕರಿಸಿ ಬೇಯಿಸುತ್ತಿದ್ದ ಬಸ್ಸಿನ ಉಬ್ಬೆಯಾಳಗೆ ಇದ್ದವರೆಲ್ಲ ಸ್ತಬ್ಧರಾಗಿದ್ದರು. ಶಾಂತವಾಗಿದ್ದ ಸಮೀರನ ಮನಸ್ಸು ಖಾಲಿಯಾಗಿ ಸುತ್ತಲನ್ನು ಗ್ರಹಿಸದೆ ಸುಮ್ಮನೆ ಕೂತಿತ್ತು. ಬಸ್ಸು ಹಳ್ಳಿಗಳನ್ನು ದಾಟುತ್ತ, ಬೇಸಿಗೆಗೆ ಒಡೆದುಕೊಂಡಿದ್ದ ನೆಲದ ಮೂಲಕ ಹಾದು ಹೋಗುತ್ತಿತ್ತು. ಹಳ್ಳಕೊಳ್ಳಗಳ ಸಣ್ಣ ರಸ್ತೆಯ ಬದಿಯಲ್ಲಿ ಚಟಪಟ ಕುರುಚಲು ಗಿಡಗಳು ಸತ್ತು ಮಲಗಿದ್ದಂತಿತ್ತು. ಇದು ಶೀಘ್ರದಲ್ಲಿ ಮುಗಿಯುವ ಪಯಣವಲ್ಲವೆನಿಸಿ ಸಮೀರನಿಗೆ ಅರೆನಿದ್ದೆ ಹತ್ತಿತು.

ಸ್ವಲ್ಪ ಹೊತ್ತಿನ ನಂತರ ತಲೆ ಧಿಮಿಗುಟ್ಟುತ್ತ ಸಮೀರ ಎದ್ದಾಗ ಪಕ್ಕದಲ್ಲೆ ಒಬ್ಬ ಬಂದೂಕುಧಾರಿ ಕುಳಿತಿದ್ದ. ತಲೆಕೊಡವಿಕೊಂಡು ಸಮೀರ ನೋಡಿದರೆ, ಮುಂದಿನ ಸೀಟಿನಲ್ಲಿದ್ದ ಗಂಡ, ಬಿಕ್ಕಿ ಅಳುತ್ತಿದ್ದ ಹೆಂಡತಿಯನ್ನು ಸಮಾಧಾನ ಪಡಿಸುವಂತೆ ತಲೆ ತಡುವುತ್ತಿದ್ದ. ಮನಸ್ಸಿಗೆ ಹಾಯೆನಿಸಿ, ಪಕ್ಕ ನೋಡಿದ. ಮುಸುಕಿನ ಒಳಗಿನಿಂದ ಕೆಂಪು ಕಣ್ಣುಗಳಿಂದ ತೀವ್ರವಾಗಿ ಕಾಯುತ್ತ ಕುಳಿತಿದ್ದ ಪಕ್ಕದವನನ್ನು ಸಮೀರ ನೋಡಿದ. ಅವನ ಖಾಕಿ ಬಟ್ಟೆಯ ಧೂಳು, ಕಂಕುಳಲ್ಲಿ ಆಗಿದ್ದ ಬೆವರಿನ ಕರೆಗಳನ್ನು ನೋಡುತ್ತ, ತಲೆ ನೋವು ನಿಧಾನವಾಗಿ ಮಾಯವಾಗುತ್ತಿರುವಂತೆನಿಸಿತು.

ಕೊಂಚ ಸಮಯ ತಡೆದು,

‘‘ಮುಸುಕು ತೆಗೆದು ಕೂರಬಾರದೇ?’’ ಎಂದು, ತನ್ನ ಧ್ವನಿಗೆ ತಾನೆ ಅಚ್ಚರಿಪಡುತ್ತ, ಪಕ್ಕದ ಬಂದೂಕುಧಾರಿಯನ್ನು ಕೇಳಿದ. ‘‘ಉಸಿರುಗಟ್ಟುತ್ತಿಲ್ಲವೆ?’’ ಇದ್ದಕ್ಕಿದ್ದಂತೆ ತನ್ನೆಲ್ಲ ದುಗುಡಗಳೂ ಕಳೆದವೆನಿಸಿತು. ಮನಸ್ಸಿನಲ್ಲಿ ನಿರಾಳ, ಆಶರಹಿತ ಸ್ಥಿತಿ ಉಂಟಾಗಿ, ಪಕ್ಕದವನ ಹೆಗಲ ಮೇಲೆ ಕೈ ಹಾಕಿ ಅವನ ಕಣ್ಣನ್ನೆ ನೋಡುತ್ತ ಕೇಳಿದ ‘‘ಉಸಿರುಗಟ್ಟಿ ಸಾಯುತ್ತೀಯ.. ಮುಸುಕು ತೆಗೆಯಬಾರದೆ?’’. ಸಮೀರನ ತಲೆನೋವು ಮಾಯವಾಗಹತ್ತಿತು. ಉಸಿರಿನ ಜಡ್ಡು ಕಳೆಯಹತ್ತಿತು. ಉಲ್ಲಾಸವೆನಿಸಿತು.

ಹಿಂದಿನ ವಾರದ ಎನ್‌ ಕೌಂಟರ್‌ನಲ್ಲಿ ಮಡಿದ ಮೂವರು ನಕ್ಸಲೀಯರ ಬಗ್ಗೆ ಕೇಳಬೇಕೆನಿಸಿತು. ಅವನ ದುಗುಡಗಳನ್ನು, ಅವನ ಆಸೆಗಳನ್ನು ತಿಳಿಯಲು ಅತೀವ ಆಸೆಯಾಯಿತು. ಪಕ್ಕದವನ ಕಣ್ಣುಗಳು ರಕ್ತಗೆಂಪಾಗಿದ್ದವು. ‘‘ನಿದ್ದೆಯಿಲ್ಲವೆ?’’ ಎಂದು ಆಪ್ತವಾಗಿ ಕೇಳಬೇಕೆನಿಸಿತು. ಇಷ್ಟರಲ್ಲೆ ಅವನು, ಮುಸುಕಿನಿಂದಲೆ ಏನನ್ನೋ ಗೊಣಗಿದಾಗ ಸಮೀರ ಮತ್ತೆ ಕಣ್ಣುಗಳನ್ನು ದಿಟ್ಟಿಸಿದನು. ಆ ಕಣ್ಣುಗಳು ಗೊಂದಲಗೊಂಡಿದ್ದವು. ‘‘ಇಲ್ಲ.. ಹೈಜಾಕ್‌ ಸಮಯದಲ್ಲಿ ತೆಗೆಯುವಂತಿಲ್ಲ’’ ಎಂದು ಮತ್ತೆ ತೆಲುಗಿನಲ್ಲಿ ಹೇಳಿದಾಗ ಸಮೀರನಿಗೆ ಮುಂದೆ ಏನು ಹೇಳಬೇಕೋ ಗೊತ್ತಾಗಲಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more