ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಜ್ಯಾಕ್‌

By Staff
|
Google Oneindia Kannada News


ನೋಡ್ತಾನೋಡ್ತಾನೆ ನಕ್ಸಲೀಯರು ಬಸ್‌ವೊಂದನ್ನು ಹೈಜಾಕ್‌ ಮಾಡಿದರು.. ಆ ಮುಸುಕುಧಾರಿ ನಕ್ಸಲರ ಕೈಯಲ್ಲಿ ಬಂದೂಕುಗಳು.. ಪ್ರಯಾಣಿಕರ ಮನದಲ್ಲಿ ದಿಗಿಲು.. ಆಮೇಲೆ?

Hijack, a Short Story in Kannada by Ravishankarಆಂಧ್ರ ಗಡಿಯ ಕಗ್ಗಳ್ಳಿಯಂತಿದ್ದ ಆ ಊರಿನಲ್ಲಿ, ಆಟೊ ಹುಡುಕಿ, ಹಿಡಿದು ಇನ್ನೊಂದು ಮೂಲೆಗೆ ಹೋಗುವುದು ಹುಚ್ಚಿನ ಕೆಲಸವೆಂದು ಸಮೀರನಿಗೆ ಗೊತ್ತಿತ್ತು. ಇದ್ದ ಎರಡು ಉಪಾಯಗಳೆಂದರೆ, ತಾನು ಹೋಗಬೇಕಿದ್ದ ಜಾಗಕ್ಕೆ ಬಸ್‌ ಇದ್ದರೆ ಹತ್ತಿ ಹೋಗುವುದು, ಇಲ್ಲ, ಹರಕು ಹೋಟೆಲಿನ ರೂಮಿನಲ್ಲಿ ರಾತ್ರಿಯ ತನಕ ಕೊಳೆಯುವುದು. ಎರಡೂ ಉಪಾಯಗಳೂ ದರಿದ್ರವಾಗಿ ಕಂಡು, ಸಮೀರನಿಗೆ ಮೈ ಪರಚಿಕೊಳ್ಳುವಂತಾಗಿತ್ತು.

ಒಂದೋ, ಅವನ ಬಳಿ ಇದ್ದದ್ದು, ಹಿಂದಿನ ರಾತ್ರಿ ತಪ್ಪು ಲೆಕ್ಕ ಮಾಡಿ, ಇದ್ದ ಬದ್ದ ದುಡ್ಡನ್ನೆಲ್ಲ ಕುಡಿದು ಹಾಕಿಯಾದ ಮೇಲೆ, ಅದೃಷ್ಟವಶಾತ್‌ ರೂಮಿನಲ್ಲಿ ಬಿಟ್ಟುಹೋಗಿದ್ದ ಎಪ್ಪತ್ತು ರುಪಾಯಿ ಚಿಲ್ಲರೆ. ತನ್ನ ಮೇನೇಜರನ ಬಳಿ ಇನ್ನೊಂದಿಷ್ಟು ಹೆಚ್ಚು ಮುಂಗಡ ಕೇಳಿ, ತೆಗೆದುಕೊಳ್ಳದೆ ಬಂದದ್ದು ತನ್ನ ಹೆಡ್ಡತನವೆಂದು ಕೋಪಬಂದಿತ್ತು. ತನ್ನ ಅಕ್ಕನನ್ನು ಕೊಟ್ಟ ಊರು, ತಾನು ಆಫೀಸಿನ ಕೆಲಸದ ಮೇಲೆ ಬಂದಿಳಿದಿದ್ದ ಈ ಊರಿನಿಂದ ಸುಮಾರು ಮೂವತ್ತು ಕಿ.ಮಿ ದೂರದಲ್ಲಿದ್ದು, ಅಲ್ಲಿಗೆ ಬರುವುದಾಗಿ ಆಕೆಗೆ ಮಾತು ಕೊಟ್ಟಿದ್ದ.

ಕ್ಷಣ ಕ್ಷಣವೂ ಏರುತ್ತ, ತನ್ನ ಅಂಕೆಯಾಳಗಿನ ಎಲ್ಲವನ್ನೂ ಸುಟ್ಟು ಕರಕಲಾಗಿ ಮಾಡುವಂತಿದ್ದ ಬಿಸಿಲಿನ ತಾಪಕ್ಕೆ, ಏನನ್ನೂ ಯೋಚಿಸದವನಂತಾಗಿ ಸಮೀರ ಹೊಟೇಲಿನ ಹೊರಗಡೆ ರಸ್ತೆ ಬದಿಯ ಕಲ್ಲಿನ ಮೇಲೆ, ಧಿಮಿ ಧಿಮಿಗುಟ್ಟುತ್ತಿದ್ದ ತಲೆಯನ್ನು ಎರಡೂ ಕೈಗಳ ಮಧ್ಯ ಸಿಕ್ಕಿಸಿಕೊಂಡು ಒತ್ತಿಕೊಂಡು ಕುಳಿತುಬಿಟ್ಟ. ಹಿಂದಿನ ರಾತ್ರಿಯ ಅಮಲಿನಿಂದ ಏಳುವ ಹೊತ್ತಿಗೆ ಸ್ನಾನದ ನೀರು ನಿಂತು, ಆ ದಿನ ಸ್ನಾನ, ಚೌರ ಏನೂ ಇಲ್ಲದೆ, ಹಾಕಿಕೊಳ್ಳಲು ಬೇರೆ ಜೊತೆ ಬಟ್ಟೆ ಇಲ್ಲದೆ, ಕಂಕುಳ ಸಂಧಿ, ಮೀಸೆಯ ಕೆಳಗೆ, ತಲೆಯಲ್ಲಿ, ಬೆವರಿನ ನಾತದಿಂದ ನಾರುತ್ತಿದ್ದ.

ಅಕ್ಕನ ಮನೆಗೆ ಕರೆ ಮಾಡಿ ತಾನು ಬರುವುದಾಗಿ ಹೇಳುವುದು ಸಮೀರನಿಗೆ ಹಿಡಿಸಲಿಲ್ಲ. ಅಕ್ಕನ ವಿನ: ಬೇರೆ ಯಾರಾದರೂ ಫೋನನ್ನು ಎತ್ತಿ, ತನ್ನ ಪ್ರವರವನ್ನೆಲ್ಲ ಹೇಳಿಕೊಂಡು....ಸಮೀರನ ತಲೆಯ ಮೇಲಿನ ಬಿಸಿಲಿನ ರಾವು ಏರುತ್ತಲೇ ಹೋಯಿತು. ಚಿಕ್ಕಂದಿನಲ್ಲೆ ಮದುವೆಯಾಗಿ ಹೋದ ಅಕ್ಕನ ಬಗ್ಗೆ ಹೆಚ್ಚು ಯೋಚಿಸಲಿಕ್ಕೆ ಅವಕಾಶವೇ ಇಲ್ಲದಂತೆ ಸಮೀರ ತನ್ನ ತೆವಲುಗಳಲ್ಲಿ ಸಿಕ್ಕಿಬಿಟ್ಟಿದ್ದರಿಂದ, ಈಚೆಗೆ ಆಕೆಯ ಬಗ್ಗೆ ಮೃದುವಾದ ಪಶ್ಚಾತ್ತಾಪದಂತಹ ಆಪ್ಯಾಯಮಾನತೆ ಹುಟ್ಟಿತ್ತು. ಆದರೆ ಸಮೀರನ ಭಾವನಾಲೋಕದೊಂದಿಗೆ ಆಕೆ ಸಂವಾದಿಸುವಂಥವಳಾಗಿರಲಿಲ್ಲ.

ತನ್ನ ಜೇಬಿನಲ್ಲಿದ್ದ ಎಪ್ಪತ್ತು ರೂಪಾಯಿಗಳನ್ನು ತಡಕಿಕೊಳ್ಳುತ್ತ ನಿಧಾನವಾಗಿ ಕಲ್ಲು ಬೆಂಚಿನ ಮೇಲಿಂದೆದ್ದು ಬಸ್‌ ಸ್ಟಾಪಿನ ಕಡೆ ತನ್ನನ್ನೆ ದ್ವೇಷಿಸಿಕೊಳ್ಳುತ್ತ ನಡೆದ. ಯಾವ ಬಸ್‌ ತನ್ನ ಅಕ್ಕನ ಊರಿಗೆ ಹೋಗುವುದು, ಎಲ್ಲಿ ಇಳಿಯಬೇಕು ಮುಂತಾದ್ದನ್ನೆಲ್ಲ ಕೇಳಿಯೇ ತೀರಬೇಕಾದ ಅನಿವಾರ್ಯತೆಯನ್ನು ಶಪಿಸುತ್ತ ಕೆದರಿದ ತಲೆಗೂದಲನ್ನು ಆದಷ್ಟು ತೀಡುತ್ತ ಬಸ್‌ ಸ್ಟಾಪಿನಂತಿದ್ದ ಜಾಗದತ್ತ ಬಂದು ನಿಂತ.

ಬಸ್‌ ನಿಲ್ದಾಣ ಬರಡಾಗಿ ನಿಂತಿತ್ತು. ಎಂದೋ ನೆಟ್ಟ ಕಬ್ಬಿಣದ ಕಂಬಗಳು ಬಣ್ಣಗೆಟ್ಟು, ತುಕ್ಕು ಹಿಡಿದು, ನಿಲ್ಲಲೋ ಎಂಬಂತೆ ನಿಂತಿದ್ದವು. ಗಾಳಿಯ ಸುಳಿವೂ ಇಲ್ಲದ ರಾವು ಬಿಸಿಲಿನ ಬೇಗೆ ಸಮೀರನ ಹದವನ್ನು ಪರೀಕ್ಷಿಸುತ್ತಿತ್ತು. ಹತ್ತಿರದಲ್ಲೆ ಇದ್ದ ಚಹದ ಅಂಗಡಿಯಂತದ್ದರಲ್ಲಿ ಒಂದು ಚಹದಂತದ್ದನ್ನು ಕುಡಿದು ಬಂದು ಬಸ್ಸಿನ ಬರುವಿಕೆಯ ಬಗೆಗೂ ಸಂದೇಹಿಸುತ್ತ ನಿಂತ.

ಚಹದ ಅಂಗಡಿಯ ಪಕ್ಕ ಒಂದು ಕಂಗೆಟ್ಟ ನಾಯಿಯ ಮೈ ಪೂರ ಕಣ್ಣಿಗೆ ರಾಚುವಂತೆ ಯಾರೋ ನೇರಳೆ ಬಣ್ಣ ಬಳೆದಿದ್ದರು - ಬಹುಶ: ಹಿಂದಿನ ವಾರದ ಹೋಳಿಯ ಪ್ರಯುಕ್ತ. ಆ ವಾತಾವರಣದ ಬೇಸರಕ್ಕೂ, ಆ ನಾಯಿಯ ಉತ್ಸಾಹದ ಬಣ್ಣಕ್ಕೂ, ಅದರ ಜೋಲು ಮೋರೆಗೂ ಯಾವುದೇ ತಾಳೆಯಾಗದೆ ಸಮೀರ ಅದನ್ನೇ ದುರುಗುಟ್ಟಿ ನೋಡ ಹತ್ತಿದ. ನಾಯಿ ತನ್ನ ಕತ್ತನ್ನು ಸುಮ್ಮಗೆ ತಗ್ಗಿಸಿಕೊಂಡು, ಗಿರಾಕಿಗಳ ಸಾಧ್ಯತೆಗಳಿಂದ ಮುಕ್ತನಾಗಿ, ಅರ್ಧ ಭರ್ತಿಯಾದ ಕಡಲೆಕಾಯಿ ಬುಟ್ಟಿಯ ಮುಖಕ್ಕೆ ಆಕಳಿಸುತ್ತ ಕೂತಿದ್ದ ಸ್ಠಿತಪ್ರಜ್ನನ ಕಡೆಗೆ ನಿಧಾನವಾಗಿ ನಡೆಯಿತು. ಸಮೀರನಿಗೆ ಎಲ್ಲ ನೋಡುತ್ತ ಈ ರಾವು ಬಿಸಿಲು, ತಾನು, ತನ್ನ ಇರುವು, ಈ ಊರಿನ ಇರುವು, ಈ ಲೋಕದ ಇರುವು ಎಲ್ಲ ಒಮ್ಮೆಲೇ ಸ್ತಬ್ಧವಾದಂತೆನಿಸಿತು.

ಅರ್ಧಘಂಟೆಯ ತಪಸ್ಸಿನ ನಂತರ ಬಸ್ಸೊಂದು ಜೋರಾಗಿ ಬಂದು ಬ್ರೇಕ್‌ ಹಾಕುತ್ತ ನಿಂತಿತು. ಶತಮಾನಗಳಷ್ಟು ಹಳೆಯದಿದ್ದಿರಬಹುದಾದ ಬಸ್ಸಿನ ಇಂಜಿನ್ನು ತನ್ನನ್ನು ಕೊಂದುಬಿಡುವಂತೆ ಬೇಡಿಕೊಂಡು ರೋದಿಸುತ್ತಿತ್ತು. ಸಮೀರ ಬಸ್ಸಿನ ಮುಂಬಾಗಿಲಿನ ಹತ್ತಿರ ಬಂದು ತಾನು ಹೋಗಬೇಕಿದ್ದ ಊರಿಗೆ ಹೋಗುವುದೇ? ಎಂದು ಕೇಳಿದ. ಬೇಸರದಿಂದ ಕಂಡಕ್ಟರ ಬಂದು ಹತ್ತೆನ್ನುವಂತೆ ಸನ್ನೆ ಮಾಡುತ್ತಲೆ ಕೀರಲು ಧ್ವನಿಯಲ್ಲಿ ‘‘ರೈಟ್‌ ರೈಟ್‌’’ ಎಂದು ಕೂಗಿದ. ಬೆವರನ್ನು ಒರೆಸಿಕೊಳ್ಳುತ್ತ ಅರ್ಧ ತುಂಬಿದ್ದ ಬಸ್ಸು ಹತ್ತಿ ಸಮೀರ ಸೀಟೊಂದರಲ್ಲಿ ಕುಳಿತು ಎರಡು ನಿಮಿಷದೊಳಗೆ ತೂಕಡಿಸಹತ್ತಿದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X