ಅಂತಿಮ ಜ್ಞಾನೋದಯದತ್ತ...
ನನಗೆ ನೆಮ್ಮದಿಯೆನಿಸಿತು. ಇನ್ನು ತಡಮಾಡುವುದು ಬೇಡ. ಬಾಗಿಲತ್ತ ತಿರುಗಿದೆ. ನಸುವೂ ಶಬ್ಧವಾಗದಂತೆ ಒಂದು ಹೆಜ್ಜೆ ಮುಂದಿಟ್ಟೆ. ಇನ್ನೊಂದು ಹೆಜ್ಜೆ... ಮತ್ತೊಂದು... ಥಟ್ಟನೆ ನಿಂತುಬಿಟ್ಟೆ. ಹಿಂದೆ ಸದ್ದಾಗಿತ್ತು!
ಗಾಬರಿಗೊಂಡು ಹಿಂದೆ ತಿರುಗಿದವನಿಗೆ ಕಂಡದ್ದು ‘‘ಉಹ್ಞು ಉಹ್ಞು’’ ಎಂಬ ಸಣ್ಣನೆಯ ಗೊರಗು ದನಿ ಹೊರಡಿಸುತ್ತಾ ಎಡಮಗ್ಗುಲಿಗೆ ಹೊರಳಿಕೊಳ್ಳುತ್ತಿದ್ದ ಯಶೋದೆ. ಹಾಗೆ ಹೊರಳುತ್ತಿದ್ದಂತೇ ಎದೆ ಮುಚ್ಚಿದ್ದ ಕಂಚುಕ ಒಂದುಪಕ್ಕಕ್ಕೆ ಜಾರಿಹೋಯಿತು. ಪ್ರಣತಿಯ ಪ್ರಕಾಶದಲ್ಲಿ ಅವಳ ವಕ್ಷಸ್ಥಳ ಇಡಿಯಾಗಿ ಅನಾವರಣಗೊಂಡಿತು. ನನ್ನ ಕಣ್ಣುಗಳು ವಿಶಾಲವಾಗಿ ತೆರೆದುಕೊಂಡವು. ಮರುಕ್ಷಣ ಬಿಗಿಯಾಗಿ ಮುಚ್ಚಿಕೊಂಡವು. ಮುಂದಿನ ಕ್ಷಣದಲ್ಲಿ ಅಂಕೆ ತಪ್ಪಿದಂತೆ ತೆರೆದುಕೊಂಡವು... ನನ್ನೆದೆ ಉದ್ವೇಗದಿಂದ ಏರಿಳಿಯಿತು.
ಓಹ್ ಇದು ಮೋಹ. ಇಹಕ್ಕೆ ನನ್ನನ್ನು ಸೆಳೆಯುವ, ಅಲ್ಲೇ ನನ್ನನ್ನು ಬಂಧಿಸಿಬಿಡುವ ಸಂಕೋಲೆ. ನನ್ನನ್ನು ಸತ್ಯದಿಂದ ದೂರ ಒಯ್ಯುವ ಮಾಯೆ...
‘ಇಲ್ಲ ಇಲ್ಲ. ಈ ಬಂಧನಕ್ಕೆ ನಾನು ಮತ್ತೆ ಒಳಗಾಗಲಾರೆ. ಆಗಕೂಡದು.’ ಮನ ವಿಹ್ವಲವಾಗಿ ಚೀರಿತು.
ಥಟ್ಟನೆ ಮುಖ ಹೊರಳಿಸಿದೆ. ಎರಡು ಹೆಜ್ಜೆ ಮುಂದಿಟ್ಟೆ. ಕಾಲುಗಳು ಸೋತು ನಿಂತುಬಿಟ್ಟವು.
ಹೀಗೆ ಈ ಅಪರಾತ್ರಿಯಲ್ಲಿ ಹೆಂಡತಿಯನ್ನೂ ಮಗುವನ್ನೂ ಬಿಟ್ಟು ಸದ್ದಿಲ್ಲದೇ ಕಳ್ಳನಂತೆ ಓಡಿಹೋಗುವುದೇ?
ಹಿಂದೆ ತಿರುಗಿದೆ. ಕಣ್ಣುಗಳು ತಾವಾಗಿಯೇ ರಾಹುಲನನ್ನು ಅರಸಿದವು. ಹಣತೆಯ ಬೆಳಕು ಅವನ ಮುಖದ ಒಂದು ಪಾರ್ಶ್ವವನ್ನು ನನಗೆ ತೋರಿಸಿತು. ಆ ಮುಖವನ್ನೇ, ನನ್ನ ಮುದ್ದುಮಗನ ಮುಖವನ್ನೇ ಹತ್ತಿರದಿಂದ ನೋಡುವ ಬಯಕೆಯಾಯಿತು. ನನ್ನ ಕಾಲುಗಳು ನನಗರಿವಿಲ್ಲದಂತೇ ಹಾಸಿಗೆಯತ್ತ ಸರಿದವು. ಮೋಡಿಗೊಳಗಾದವನಂತೆ ನಿಧಾನವಾಗಿ ಸಾಗಿ ಹಾಸಿಗೆಯ ಅಂಚಿಗೆ ಕೈಯೂರಿ ಬಾಗಿ ನಿಂತು ಮಗುವಿನ ಮುಖದ ಮೇಲೆ ದೃಷ್ಟಿ ನೆಟ್ಟೆ.
ಹುಣ್ಣಿಮೆಯ ಚಂದಿರನಂತಹ ಮುದ್ದುಮುಖ... ಮಗು ಯಾವುದೋ ಕನಸಿನಲ್ಲಿ ತೇಲುತ್ತಿರಬೇಕು, ತುಟಿಗಳ ಮೇಲೆ ನಸುನಗೆ ಲಾಸ್ಯವಾಡುತ್ತಿತ್ತು. ಆ ದೃಶ್ಯವನ್ನು ನೋಡುತ್ತಲೇ ಇರಬೇಕೆನಿಸಿತು. ನೋಡಿದೆ... ರಾಹುಲನ ಮುಖದ ಒಂದೊಂದು ಗೆರೆಗಳು, ವಿಶಾಲ ಹಣೆ, ತೆಳು ಹುಬ್ಬು, ತುಂಬಿದ ಕೆನ್ನೆಗಳು, ನೀಳ ನಾಸಿಕ, ದುಂಡು ಗಲ್ಲ, ಚೆಂಗುಲಾಗಿ ತುಟಿಗಳು...
ಹ್ಞಾ ಕೆಳತುಟಿಯ ಅಂಚಿನಲ್ಲಿ ಕಂಡ ಬಿಳುಪು ಬೊಟ್ಟು! ಅದೇನು?
ಮತ್ತೂ ಬಾಗಿದೆ. ಬಿಳುಪು ಬೊಟ್ಟಿನ ಗುರುತು ಹತ್ತಿತು. ಅದೊಂದು ಹಾಲಿನ ಹನಿ! ತುಸುಹೊತ್ತಿನ ಮುಂಚೆ ಮಗು ಸ್ತನ್ಯಪಾನ ಮಾಡಿತ್ತು... ಒಂದು ಹನಿ ಶುಭ್ರಶ್ವೇತ ಹಾಲು ಒಂದು ಚಂದದ ಬೊಟ್ಟಾಗಿ ತೂಟಿಯಂಚಿನಲ್ಲಿ ಮೂಡಿತ್ತು! ಮಾತೆಯಾಡನೆ ಮಗುವಿನ ಅನುಬಂಧದ ಕುರುಹಾಗಿ ಕಂಗೊಳಿಸಿತ್ತು. ಮನುಜನನ್ನು ಈ ಲೋಕಕ್ಕೆ ಬಂಧಿಸಿದ ಸಂಕೇತವಾಗಿ ಮೆರೆದಿತ್ತು.
ಅದನ್ನು ಒರೆಸಿ ತೆಗೆಯುವ ಬಯಕೆ ನನಗಾಯಿತು. ಮತ್ತೂ ಬಾಗಿದೆ. ಬಲಗೈ ಮುಂದೆ ಚಾಚಿದೆ. ಚಾಚಿದ ಕೈ ಹಾಗೇ ನಿಂತಿತು.
ಮಗುವಿನ ನಿದ್ದೆಗೆ ಭಂಗವಾದರೆ? ಅವನು ಎಚ್ಚರಾಗಿ ಅತ್ತರೆ? ಪರಿಣಾಮವಾಗಿ ಯಶೋದೆಯೂ ಎಚ್ಚರಗೊಂಡರೆ? ಅವರಿಬ್ಬರ ನಿದ್ದೆಗೆ ಭಂಗವಾದರೆ ಅದರರ್ಥ ನನ್ನ ಗುರಿಯ ಹಾದಿ ಭಂಗಗೊಂಡಂತೆ.
ಥಟ್ಟನೆ ಕೈ ಹಿಂತೆಗೆದೆ. ನೆಟ್ಟಗೆ ನಿಂತೆ.
ಬೇಡ. ಮಗುವಿನ ನಿದ್ದೆಗೆ ಭಂಗ ತರುವುದು ಬೇಡ. ಈ ಹಾಲು ಮಣಿ ಹಾಗೇ ಉಳಿಯಲಿ. ಅಷ್ಟಕ್ಕೂ ನಾನು ಒರೆಸಬೇಕಾಗಿರುವುದು ಮಡದಿಯ ಹಣೆಯ ಬೆವರನ್ನಲ್ಲ, ಮಗನ ತುಟಿಗಂಟಿದ ಹಾಲಹನಿಯಲ್ಲ. ನಾನು ಒರೆಸಬೇಕಾಗಿರುವುದು ಇಡೀ ಜಗತ್ತಿನ ಕಣ್ಣೀರನ್ನು.
ನನಗೆ ಮತ್ತೊಮ್ಮೆ ಜ್ಞಾನೋದಯ.
ಒಮ್ಮೆ ಕಣ್ಣುಮುಚ್ಚಿದೆ. ನಿರ್ಧಾರ ಅಚಲವಾಯಿತು. ಕಣ್ಣು ತೆರೆದೆ. ಮುಂದಿನ ಹಾದಿ ಸ್ಪಷ್ಟವಾಗಿತ್ತು.
ಉಪ್ಪರಿಗೆಯ ಮೆಟ್ಟಲುಗಳನ್ನು ಒಂದೊಂದಾಗಿ ಇಳಿಯುತ್ತಿದ್ದಂತೇ ನಾನು ಮಿಥ್ಯದ ಹಾದಿಯನ್ನು ತೊರೆದು ಸತ್ಯದೇಗುಲದ ಮೆಟ್ಟಲುಗಳನ್ನು ಒಂದೊಂದಾಗಿ ಏರುತ್ತಿರುವಂತೆನಿಸಿತು. ಮನದ ದ್ವಂದ್ವ, ಆತಂಕಗಳು ಕಾಣದಂತೆ ಕರಗಿಹೋಗಿದ್ದವು. ಇಹದ ಬಂಧನಗಳನ್ನು ಹರಿದುಕೊಂಡು ನಿರಾಳವಾಗಿ ಹೆಜ್ಜೆ ಹಾಕುತ್ತಾ ಮೂರನೆಯ ಹಾಗೂ ಅಂತಿಮ ಜ್ಞಾನೋದಯವನ್ನರಸಿ ನಾ ಸಾಗಿದೆ...












Click it and Unblock the Notifications