ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಿಮ ಜ್ಞಾನೋದಯದತ್ತ...

By Staff
|
Google Oneindia Kannada News


ಬದುಕಿನ ಪ್ರಶ್ನೆಗಳಿಗೆ ಉತ್ತರ ಹುಡುಕಹೊರಡಬೇಕೆಂಬ ನನ್ನ ನಿರ್ಧಾರ ಅಚಲವಾಗುತ್ತಿದ್ದಂತೇ ಇಂದು ನನ್ನ ಮುಖದಲ್ಲಿ ಮೂಡಿದ ಶಾಂತಿ ಅವಳ ಮುಖದಲ್ಲೂ ಪ್ರತಿಫಲಿಸಿತ್ತು. ಅವಳು ಸಂತಸಗೊಂಡಿದ್ದಳು. ನನ್ನ ಮನದ ಗೊಂದಲಗಳೆಲ್ಲಾ ದೂರವಾಗಿ, ನನ್ನೆದೆಯ ಪ್ರಶ್ನೆಗಳಿಗೆಲ್ಲಾ ಉತ್ತರಗಳು ಸಿಕ್ಕಿ ನಾನೀಗ ಮತ್ತೆ ಈ ಬದುಕಿಗೆ ಮರಳುತ್ತಿದ್ದೇನೆ ಎಂದು ಅವಳು ತಿಳಿದಂತಿತ್ತು. ನಾನು ಈ ಅರಮನೆಯ ಬದುಕಿನಿಂದ, ಅವಳಿಂದ ಶಾಶ್ವತವಾಗಿ ದೂರಹೋಗುತ್ತಿದ್ದೇನೆಂಬ ಅರಿವು ಪಾಪ ಆ ಮುಗ್ಧೆಗೆ ಇರಲೇ ಇಲ್ಲ. ತನಗನಿಸಿದ್ದೇ ಸತ್ಯ ಎಂದು ತಿಳಿದು ನೆಮ್ಮದಿಯಾಗಿ ಮಲಗಿಬಿಟ್ಟಿದ್ದಾಳೆ. ಮುಗ್ಧರೆಲ್ಲರೂ ಹೀಗೇ ಅಲ್ಲವೇ? ಇರಲಿ. ನಾನು ಬಯಸಿದ್ದೂ ಇದನ್ನೇ. ಅವಳಿಗರಿವಿಲ್ಲದಂತೆ ನಾನು ಇಲ್ಲಿಂದ ಎದ್ದು ಹೋಗಬೇಕಾದರೆ ಅವಳು ನಿರ್ಯೋಚನೆಯಿಂದ ಮೈಮರೆತು ನಿದ್ರಿಸಲೇಬೇಕಿತ್ತು.

ಇಡೀ ಅರಮನೆ ಮೌನದಲ್ಲಿ ಮುಳುಗಿತ್ತು. ಇದೇ ಸರಿಯಾದ ಸಮಯ! ನನ್ನೆದೆಯ ನಿರ್ಧಾರ ಮತ್ತೂ ಅಚಲವಾಯಿತು.

ಜಗವೆಲ್ಲಾ ಮಲಗಿತ್ತು. ನಾನು ಎದ್ದೆ.

ಎರಡು ಕ್ಷಣ ಹಾಗೇ ಹಾಸಿಗೆಯ ಮೇಲೆ ನಿಶ್ಚಲವಾಗಿ ಕುಳಿತೆ. ಏಳುವಾಗ ಸ್ವಲ್ಪ ಸದ್ದಾಗಿ ಅದು ಯಶೋದೆಯ ನಿದ್ದೆಗೆ ಭಂಗ ತಂದಿರಬಹುದೆಂಬ ಅನುಮಾನ ನನ್ನನ್ನು ಕಾಡಿತ್ತು! ಹಾಗೆ ಕುಳಿತಂತೇ ಮೆಲ್ಲಗೆ ಅವಳತ್ತ ನೋಟ ಹೊರಳಿಸಿದೆ. ಸಣ್ಣಗೆ ಉರಿಯುತ್ತಿದ್ದ ಪ್ರಣತಿಯ ಮಂದಬೆಳಕಿನಲ್ಲಿ ಕಂಡ ಅವಳ ಮುಖವನ್ನೇ ಅನುಮಾನದಿಂದ ದಿಟ್ಟಿಸಿದೆ.

ಪ್ರಶಾಂತ ಮುಖಮುದ್ರೆ! ನಸುಬೆವರಿನಲ್ಲಿ ಹೊಳೆಯುತ್ತಿದ್ದ ಹಣೆ, ಬೆವರಿಗೆ ಅಂಟಿದ್ದ ಮುಂಗುರುಳುಗಳು... ನಮ್ಮಿಬ್ಬರ ಪ್ರಥಮ ಸಮಾಗಮದ ರಾತ್ರಿ ಫಕ್ಕನೆ ನೆನಪಾಯಿತು!

ಅಂದು... ಕಂಡ ಹೊಚ್ಚಹೊಸ ಜಗತ್ತು... ಅನುಭವಕ್ಕೆ ಸಿಕ್ಕಿದ ಬಣ್ಣಿಸಲಾಗದ ಸುಖ... ನಾವು ನಾವಾಗಿ ಉಳಿದಿರಲಿಲ್ಲ. ಅವಳು ಮೈಮರೆತಿದ್ದಳು, ಹಾಗೇ ನನ್ನ ತೋಳುಗಳಲ್ಲೇ ನಿದ್ದೆಗೆ ಜಾರಿದ್ದಳು. ನನಗೋ ನಿದ್ರಿಸುವ ಮನಸ್ಸೇ ಇರಲಿಲ್ಲ. ಅವಳ ಚೆಲುವು ಮುಖವನ್ನು ನೋಡುತ್ತಲೇ ಇರಬೇಕೆನ್ನಿಸಿಬಿಟ್ಟಿತ್ತು. ನೋಡುತ್ತಲೇ ಇದ್ದೆ... ಕಣ್ಣುಗಳಲ್ಲಿ ತುಂಬಿಕೊಂಡು ಹೃದಯದಲ್ಲಿ ಅಚ್ಚೊತ್ತಿಕೊಳ್ಳುತ್ತಿದ್ದೆ... ಹಾಗೆಯೇ ನನಗರಿವಿಲ್ಲದಂತೇ ಕಣ್ಣವೆಗಳು ಮೆಲ್ಲಮೆಲ್ಲನೆ ಹತ್ತಿರಾಗಿದ್ದವು. ನಾನೂ ನಿದ್ದೆಗೆ ಜಾರಿದ್ದೆ. ಕ್ಷಣದಲ್ಲಿ ರೆಪ್ಪೆಗಳು ಛಕ್ಕನೆ ದೂರ ಸರಿದಿದ್ದವು! ಅಗಲವಾಗಿ ಕಣ್ಣುತೆರೆದಿದ್ದೆ. ನನ್ನರಸಿಯ ಮುದ್ದು ಮುಖದತ್ತ ಆತುರಾತುರವಾಗಿ ನೋಟ ಹರಿಸಿದ್ದೆ. ಅಲ್ಲಿ ಕಂಡದ್ದು... ಬೆವರಿನಿಂದ ತೋಯ್ದ ಹಣೆ... ಬೆವರಿಗೆ ಅಂಟಿದ್ದ ಕಡುಗಪ್ಪು ಮುಂಗುರುಳುಗಳು! ನನ್ನೆದೆಯಲ್ಲಿ ಉಕ್ಕಿದ ನೂರು ಬಯಕೆಗಳ ಮಹಾಪೂರ... ಮೆಲ್ಲನೆ, ಮೆಲ್ಲಮೆಲ್ಲನೆ ಬಲಹಸ್ತವನ್ನು ಅವಳ ಮುಖದತ್ತ ಕೊಂಡೊಯ್ದೆ. ಹಣೆಯಲ್ಲಿ ಸಾಲುಗಟ್ಟಿದ್ದ ಬೆವರ ಮಣಿಗಳನ್ನು ತೋರುಬೆರಳಿನಿಂದ ಮೃದುವಾಗಿ ಒರೆಸಿದೆ... ಹೊಳೆಯುತ್ತಿದ್ದ ಹಣೆಗೆ ಮುತ್ತಿಟ್ಟೆ...

ಈಗ ಅವಳ ಹಣೆಯಲ್ಲಿ ಕಂಡ ಬೆವರ ಹನಿಗಳು ನನ್ನನ್ನು ಏಕಾಏಕಿ ಮೂರುವರ್ಷಗಳ ಹಿಂದಕ್ಕೆ ಕೊಂಡೊಯ್ದುಬಿಟ್ಟವು. ಅಂದು ಮಾಡಿದ ಹಾಗೇ ಅವಳ ಹಣೆಯ ಬೆವರಮುತ್ತುಗಳನ್ನು ಬೆರಳಿನಿಂದ ಮೃದುವಾಗಿ ಒರೆಸಬೇಕೆಂಬ ಬಯಕೆ ಒಳಗಿನಿಂದ ಒತ್ತರಿಸಿಕೊಂಡು ಬಂತು. ನನಗರಿವಿಲ್ಲದಂತೇ ನನ್ನ ಬಲಹಸ್ತ ಅವಳ ಮುಖದತ್ತ ಸರಿಯಿತು. ಕಿರುಬೆರಳು, ಉಂಗುರದ ಬೆರಳು, ಮಧ್ಯದ ಬೆರಳುಗಳನ್ನು ಮಡಿಸಿ, ಹೆಬ್ಬೆರಳನ್ನು ಅವುಗಳ ಮೇಲೆ ಒತ್ತಿ, ತೋರುಬೆರಳನ್ನು ನೆಟ್ಟಗೆ ಮುಂದೆ ಚಾಚಿದೆ. ಬೆರಳ ತುದಿ ಇನ್ನೇನು ಅವಳ ಹಣೆಗೆ ಸೋಕಬೇಕು...

ನನಗೆ ಥಟ್ಟನೆ ಜ್ಞಾನೋದಯ!

ನಾನು ಮಾಡುತ್ತಿರುವುದೇನು? ಮೋಹಪಾಶದಿಂದ ದೂರ ಹೋಗಬೇಕೆಂಬ ನಿರ್ಧಾರ ಅದೆಲ್ಲಿ ಮಾಯವಾಯಿತು? ನಾನೇಕೆ ವಿಚಲಿತನಾದೆ? ಓಹ್‌ ಇಲ್ಲ ಇಲ್ಲ. ನಾನು ಹಿಂದಕ್ಕೆ ಹೋಗುವುದಿಲ್ಲ. ನನ್ನ ಮುಂದಿನ ಗುರಿ ಸ್ಪಷ್ಟವಾಗಿದೆ.

ಅವಳ ಹಣೆಯನ್ನು ಸಮೀಪಿಸಿದ್ದ ಕೈಯನ್ನು ಥಟ್ಟನೆ ಹಿಂತೆಗೆದೆ. ಹಾಸಿಗೆಯ ಮೇಲೆ ನಾನು ಇನ್ನೊಂದು ಕ್ಷಣ ಉಳಿದರೂ ನನ್ನ ಗುರಿಯಿಂದ ದೂರಾಗಿಬಿಡಬಹುದೆಂಬ ಆತಂಕ ನನ್ನನ್ನು ಇಡಿಯಾಗಿ ಆವರಿಸಿಕೊಂಡಿತು. ಇಲ್ಲ ಇಲ್ಲ ಹಾಗಾಗಕೂಡದು.

ದಢಕ್ಕನೆ ಹಾಸಿಗೆಯಿಂದ ಕೆಳಗಿಳಿದೆ. ಅನೂಹ್ಯ ಅಪಾಯದಿಂದ ದೂರ ಓಡುವಂತೆ ನಾಲ್ಕು ಹೆಜ್ಜೆ ಹಿಂದೆ ಹಾರಿದೆ... ದಂಗಾಗಿ ನಿಂತುಬಿಟ್ಟೆ! ನನ್ನಿಂದ ಬಲುದೊಡ್ಡ ತಪ್ಪಾಗಿತ್ತು!

ನಾನು ಕೆಳಗಿಳಿದ ರಭಸಕ್ಕೆ ಮಂಚ ಅಲುಗಿ ಯಶೋದೆಯ ನಿದ್ದೆಗೆ ಭಂಗವಾಗಿತ್ತು. ಅವಳಿಗೆ ಎಚ್ಚರವಾಗಿತ್ತು!

ದೇವರೇ...! ಅವಳೀಗ ಕಣ್ಣು ತೆರೆದರೆ? ಗಡಬಡಿಸಿ ಎದ್ದುಕುಳಿತು ‘‘ಹಾಗೇಕೆ ದೂರ ನಿಂತಿದ್ದೀರಿ?’’ ಎಂದು ಗಾಬರಿಯ ದನಿ ತೆಗೆದರೇನು? ನನ್ನ ಕೈಹಿಡಿದು ಹಾಸಿಗೆಗೆ ಕರೆದು ರಾತ್ರಿಯಿಡೀ ನನ್ನನ್ನು ಅಪ್ಪಿ ಮಲಗಿದರೇನು ಮಾಡುವುದು? ಈ ರಾತ್ರಿ ನಾನಿಲ್ಲಿಂದ ಹೊರಡದೇಹೋದರೆ ನನ್ನ ಸತ್ಯಾನ್ವೇಷಣೆಯ ಗುರಿಯ ಗತಿಯೇನು? ನನ್ನ ಗತಿಯೇನು? ಹಾರುತ್ತಿದ್ದ ಎದೆಯನ್ನು ಒತ್ತಿಹಿಡಿದು ಅವಳತ್ತ ಭೀತಿಯ ನೋಟ ಹೂಡಿದೆ.

ನಾನು ನೋಡುತ್ತಿದ್ದಂತೇ ಯಶೋದೆ ತನ್ನ ಎಡಗೈನಿಂದ ಹಣೆ ಸವರಿಕೊಂಡಳು. ಬಲಮಗ್ಗುಲಾಗಿ ಒರಗಿದ್ದವಳು ಅಂಗಾತ ಮಲಗಿದಳು. ‘‘ಊಂ ಊಂ... ಹ್ಞುಂ ’’ ಎಂಬ ನಸುಉದ್ಗಾರ ಅವಳ ಗಂಟಲಿನಿಂದ ಹೊರಟಿತು. ನನ್ನೆದೆಯಲ್ಲಿ ಕೋಲಾಹಲ. ಇಲ್ಲಿಂದ ಓಡಿಬಿಡಲೇ ಅನಿಸಿತು. ಆದರೆ ಕಾಲುಗಳು ನೆಲಕ್ಕೇ ಅಂಟಿಕೊಂಡಿದ್ದವು. ಹಾಗೇ ಕಲ್ಲುಕಂಬದಂತೆ ನಿಂತು ಅವಳ ಕಣ್ಣುಗಳತ್ತ ನೋಟ ಕೀಲಿಸಿದೆ. ಅವು ಮುಚ್ಚಿಕೊಂಡೇ ಇದ್ದವು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X