ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಿಮ ಜ್ಞಾನೋದಯದತ್ತ...

By Staff
|
Google Oneindia Kannada News


ಇಂದು(ಮೇ.2) ಬುದ್ಧ ಪೂರ್ಣಿಮಾ. ಈ ಸಂದರ್ಭದಲ್ಲಿ ದಟ್ಸ್‌ ಕನ್ನಡ ಓದುಗರಿಗಾಗಿ ವಿಶೇಷ ಕತೆ. ಜ್ಞಾನದ ಬೆಳಕು ಅರಸಿ, ಮನೆಯ ಮಂಚ ಇಳಿಯುವ ಮುನ್ನ, ಆ ಕೆಲ ಕ್ಷಣಗಳಲ್ಲಿ ಬುದ್ಧನಿಗೆ ಏನನ್ನಿಸಿತು? ಕತೆ ಓದಿ..

A Kannada short story by Premshekhar on Buddhaಮೂರು ತಾಸುಗಳಿಂದ ನಾನು ಕಣ್ಣ ರೆಪ್ಪೆ ಮುಚ್ಚಿರಲಿಲ್ಲ, ನಿದ್ದೆ ಹೋಗಿರಲಿಲ್ಲ. ಹ್ಞುಹ್‌ ನಿದ್ರಿಸುವ ಉದ್ದೇಶವೇ ನನಗಿರಲಿಲ್ಲ! ಈ ರಾತ್ರಿ ನಾನು ಹಾಸಿಗೆ ಸೇರಿದ್ದು ನೆಮ್ಮದಿಯಾಗಿ ನಿದ್ರಿಸುವುದಕ್ಕಲ್ಲ. ಬದಲಾಗಿ ಪ್ರಿಯಪತ್ನಿ ಯಶೋದೆ, ಮುದ್ದುಕಂದ ರಾಹುಲ ನೆಮ್ಮದಿಯಾಗಿ ನಿದ್ರಿಸಲಿ ಎಂಬ ಮನದಾಳದ ಬಯಕೆಯಿಂದಷ್ಟೇ.

‘ನಾ ನೆಮ್ಮದಿಯಾಗಿ ಮಲಗುತ್ತಿದ್ದೇನೆ. ನೀವೂ ಮಲಗಿ’ ಎಂಬ ಆಶ್ವಾಸನೆಯನ್ನು ಅವರಿಬ್ಬರಿಗೂ ನೀಡುವ ಹುನ್ನಾರದಿಂದಷ್ಟೇ. ಹಲದಿನಗಳಿಂದ ನಾನು ನಿದ್ದೆ ಬಾರದೇ ರಾತ್ರಿಯೆಲ್ಲಾ ಹೊರಳಾಡುವುದನ್ನು ಕಂಡು ಯಶೋದೆ ಅದೆಷ್ಟು ಆತಂಕಗೊಂಡಿದ್ದಳು! ನನ್ನೆದೆಯ ತಳಮಳವನ್ನು ಅವಳಿಗೆ ಹೇಳಲಾಗದೇ, ಹೇಳದೆ ಇರಲೂ ಆಗದೆ ನಾನೆಷ್ಟು ಒದ್ದಾಡಿದ್ದೆ!

ನನ್ನ ಆ ಒದ್ದಾಟ!

ಅಂದು ನಾ ಕಂಡ... ಆ ವೃದ್ಧ, ಆ ರೋಗಿ, ಆ ಮೃತದೇಹ! ಆ ಗಳಿಗೆಯಿಂದ ನಾನು ನಾನಾಗಿ ಉಳಿದಿರಲಿಲ್ಲ. ಅಲ್ಲಿಯವರೆಗೆ ನನ್ನ ಅರಿವಿಗೆ ನಿಲುಕಿರದಿದ್ದ ಬದುಕಿನ ಹಲವು ದಾರುಣ ಸತ್ಯಗಳು ನನ್ನೆದುರು ಏಕಾಏಕಿ ಅನಾವರಣಗೊಂಡಾಗ ನಾ ಘಾಸಿಗೊಂಡಿದ್ದೆ, ಮಾತು ಕಳೆದುಕೊಂಡಿದ್ದೆ. ಬದುಕೆಂದರೆ ಯೌವನ, ಸುಖ, ಸಂತೋಷ, ಮೋಹದ ಮಡದಿಯಾಡನೆ ಒಲವಿನ ಒಡನಾಟ ಎಂದಷ್ಟೆ ತಿಳಿದಿದ್ದ ನನ್ನ ಭಾವನೆ ಏಕಾಏಕಿ ಚೂರುಚೂರಾಗಿ ಸಿಡಿದಿತ್ತು.

ಈ ಯೌವನ ಒಂದು ದಿನ ಕಳೆದುಹೋಗುತ್ತದೆ! ದೇಹ ರೋಗರುಜಿನಗಳ ಧಾಳಿಗೆ ಸಿಕ್ಕಿ ನರಳುತ್ತದೆ! ವೃದ್ಧಾಪ್ಯದಿಂದ ಕೃಶಗೊಳ್ಳುತ್ತದೆ!... ಒಂದುದಿನ... ಶಾಶ್ವತವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ! ಯಾವುದೂ ಶಾಶ್ವತವಲ್ಲ, ಎಲ್ಲವೂ ನಶ್ವರ! ಈ ಅರಿವು ನನಗೆ ತಟ್ಟಿದಾಗಿನಿಂದ... ನಾನು ನೆಮ್ಮದಿ ಕಳೆದುಕೊಂಡಿದ್ದೆ, ಯೋಚನೆಗೆ ಬಿದ್ದಿದ್ದೆ. ಈ ಬದುಕೆಂದರೆ ಏನು? ನಾನೀ ಜಗತ್ತಿಗೆ ಬಂದದ್ದು ಏಕೆ? ಇಲ್ಲಿ ನಾ ಮಾಡಬೇಕಾಗಿರುವುದೇನು? ಇಲ್ಲಿಂದ ನಾ ಹೋಗುವುದೆಲ್ಲಿಗೆ? ಪ್ರಶ್ನೆಗಳು, ಪ್ರಶ್ನೆಗಳು, ಪ್ರಶ್ನೆಗಳು...

ಎಷ್ಟೋಂದು ಪ್ರಶ್ನೆಗಳು! ನನ್ನೆದುರು ಅವು ಭೂತಗಳಾಗಿ ಕುಣಿದಿದ್ದವು, ಕೂರಂಬುಗಳಾಗಿ ನನ್ನನ್ನು ಇರಿದಿದ್ದವು... ಅವುಗಳ ಧಾಳಿಯಿಂದ ನಾನು ಜರ್ಝರಿತನಾಗಿ ಹೋಗಿದ್ದೆ. ಇನ್ನು ತಾಳಲಾರೆ ಎಂಬ ಸ್ಥಿತಿಗೆ ನಾ ತಲುಪಿದ್ದೆ.

ಈ ಪ್ರಶ್ನೆಗಳಿಂದ ಬಿಡುಗಡೆ ಪಡೆಯುವುದಕ್ಕೆ ಇರುವ ದಾರಿ ಒಂದೇ- ಅವುಗಳಿಗೆ ಉತ್ತರಗಳನ್ನು ಪಡೆದುಕೊಳ್ಳುವುದು! ಹೌದು ಪ್ರಶ್ನೆಗಳಿಗೆ ಉತ್ತರ ಹುಡುಕುವ ನಿರ್ಧಾರವನ್ನು ನಾನು ಕೈಗೊಂಡಿದ್ದೆ. ನನ್ನೆದೆಯ ನಿರ್ಧಾರ ಅಚಲವಾಗಿತ್ತು. ಅದನ್ನು ಕಾರ್ಯರೂಪಕ್ಕಿಳಿಸಲು ಈ ರಾತ್ರಿಯನ್ನು ಆರಿಸಿಕೊಂಡಿದ್ದೆ.

ಈ ರಾತ್ರಿ ಈ ಅರಮನೆಯಿಂದ ಹೊರಹೋಗಲು ಹಂಚಿಕೆ ಹಾಕಿದ್ದೆ. ಯಾಕೆಂದರೆ ನನ್ನನ್ನು ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರಗಳು ಈ ಅರಮನೆಯಲ್ಲಿ, ಇಲ್ಲಿನ ವೈಭೋಗದಲ್ಲಿ, ಮುದ್ದುಮಡದಿಯ ಮೋಹಪಾಶದಲ್ಲಿ ಸಿಗುವಂತಿರಲಿಲ್ಲ. ಹೀಗಾಗಿಯೇ ಇವೆಲ್ಲವನ್ನೂ ತೊರೆದುಹೋಗಬೇಕೆಂದು ನಾನು ಸಂಕಲ್ಪಿಸಿದ್ದೆ. ಇವೆಲ್ಲಾ ಬಂಧನಗಳಿಂದ ದೂರ ಸಾಗಿಹೋಗಬೇಕೆಂದು ನಾ ನಿರ್ಧರಿಸಿದ್ದೆ...

ಒಮ್ಮೆ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿ ತೆರೆದೆ. ನಿಧಾನವಾಗಿ ತಲೆಯನ್ನಷ್ಟೇ ಪಕ್ಕಕ್ಕೆ ಹೊರಳಿಸಿ ಯಶೋದೆಯತ್ತ ನೋಡಿದೆ. ಅವಳು ಯಾವುದರ ಪರಿವೆಯೂ ಇಲ್ಲದೇ ಸೊಂಪಾಗಿ ನಿದ್ರಿಸುತ್ತಿದ್ದಳು. ಅವಳು ಹೀಗೆ ನೆಮ್ಮದಿಯಾಗಿ ನಿದ್ರಿಸಿ ಹಲವು ರಾತ್ರಿಗಳೇ ಕಳೆದುಹೋಗಿದ್ದವು. ನನ್ನೆದೆಯಲ್ಲಿನ ದುಗುಡ ಅವಳಿಗೂ ತಟ್ಟಿ ಅವಳೂ ತಳಮಳಗೊಂಡಿದ್ದಳು. ನನ್ನನ್ನು ಕೇಳಲಾಗದೇ, ಕೇಳದೇ ಇರಲೂ ಆಗದೇ ಅವಳು ವ್ಯಾಕುಲಗೊಂಡಿದ್ದಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X