• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕತ್ತಲು

By Staff
|

ಅಡುಗೆ ಮನೆಯಿಂದ ಹೊರ ಬಂದು ಎದುರಿಗೆ ನಿಂತ ಅವಳು ‘ಏನಂದೆ ತಲೆ ಸರಿ ಇಲ್ಲದ್ದು ನಿನಗೆ ಪಾಪುವಿಗಲ್ಲ. ಸ್ವಲ್ಪ ಏನಾದರೂ ಆಟ ಆಡಿಸಿ ತಿನ್ನಿಸಬಾರದ ಅದನ್ನು ನಾನೆ ಹೇಳಿಕೊಡಬೇಕಾ’ ಅಂದಳು.

ಮಾತು ಮುಂದುವರಿಸದಂತೆ ಅರ್ಧ ತಿಂದ ತಿಂಡಿ ತಟ್ಟೆಯನ್ನು ಸಿಂಕಿನಲ್ಲಿ ಇಟ್ಟು ‘ಪಾಪುವನ್ನ ಸ್ಕೂಲಿಗೆ ನೀನೆ ಬಿಡುತ್ತಿಯಾ’ ಎಂದು ಪೀಠಿಕೆ ಹಾಕಿದ. ಅವಳು ವಕ್ರವಾಗಿ ನಕ್ಕು ‘ಏನಾದರೂ ಮಾಡಿಕೊ.. ಇವತ್ತು ನನ್ನ ಕಾರು ಬೇರೆ ಇಲ್ಲ’ ಎಂದವಳೆ ಬೆಡರೂಂ ಸೇರಿ ಐದೆ ನಿಮಿಷದಲ್ಲಿ ಪ್ರತ್ಯಕ್ಷವಾಗಿ, ಚಪ್ಪಲಿ ಮೆಟ್ಟಿ ಕೆಳಗೆ ಸೆಕ್ಯೂರಿಟಿಯವನ ಹತ್ತಿರ ಒಂದು ಆಟೋ ಹಿಡಿ ಎಂದು ಹೆಳಿ ದಡದಡನೆ ಲಿಪ್ಟನ ಒಳಸೇರಿಕೊಂಡು ಕ್ಷಣಾರ್ದದಲ್ಲಿ ಮಾಯವಾದಳು. ಇಡಿಯ ಮನೆಯಲ್ಲಿ ಪಾಪು ಮತ್ತು ಇವನು ಇಬ್ಬರೆ ಉಳಿದರು.

ಕೆಳಗೆ ಸ್ಕೂಲವ್ಯಾನು ಬಂದು ನಿಂತ ಸಪ್ಪಳವಾಯಿತು. ಪಾಪು ದಡದಡನೆ ಕೆಳಗೆ ಓಡತೊಡಗಿತು. ಫೀಸ್‌ ಕಟ್ಟುವದು ನೆನಪಾಗಿ ‘ಇವತ್ತು ನಾನೆ ಅವನನ್ನ ಸ್ಕೂಲಿಗೆ ಬಿಡುತ್ತೇನೆ. ಬರುವಾಗ ಮಾತ್ರ ತಿರುಗಿ ಕರೆತನ್ನಿ’ ಅಂದ. ವ್ಯಾನನವನು ‘ಮೊದಲೆ ಹೇಳ ಬಾರದಿತ್ತ ಸರ್‌ ಕೆಳಗೆ ಹತ್ತು ನಿಮಿಷದಿಂದ ಕಾಯುತ್ತಿದ್ದೇನೆ ನಮಗೆ ಮೊದಲೆ ತಿಳಿಸಿದರೆ ತುಂಬ ಅನುಕೂಲ ಆಗುತ್ತದೆ ಸರ್‌’ ಎಂದು ಕ್ಯಾತೆ ತೆಗೆದ. ಅವನಿಗೆ ಬಯ್ಯಬೇಕು ಅಂದುಕೊಂಡವನು ತಿರುಗಿ ಅವನು ಪಾಪುವನ್ನ ಕರೆತರದಿದ್ದರೆ ಅನ್ನಿಸಿ ಸುಮ್ಮನಾದ.

ಮನೋಹರ ಶಾಲೆಯ ಅರ್ಧದಾರಿಯನ್ನು ಸಾಗಿರಲಿಲ್ಲ. ಹಿಂದಿನಿಂದ ಬೈಕಿನವನೊಬ್ಬ ಫಿಂ ಫಿಂ ಎಂದು ಹಾರ್ನಮಾಡಿದ. ತಿರುತಿರುಗಿ ಹಾರ್ನಬಜಾಯಿಸಿದ. ಒಮ್ಮೆ ಎಡಬದಿಗೆ ಬಂದ, ಒಮ್ಮೆ ಬಲಬದಿಗೆ ಬಂದ, ಮತ್ತೆ ಎಡಬದಿಗೆ ಬಂದು ಹಾರ್ನಬಜಾಯಿಸಿದ. ಒಂದಿಷ್ಟು ಮುಂದೆಹೋಗಿ ಮುಂದಿನ ರೆಡ್‌ಲೈಟಿನಲ್ಲಿ ಸಿಕ್ಕಿಬಿದ್ದ. ಮತ್ತೆ ಹಿಂದೆ ಬಿದ್ದ, ಬೆನ್ನುಹತ್ತಿದ. ಅವನಿಗೆ ಬುದ್ದಿಕಲಿಸುವ ಹುಕ್ಕಿಯಾಂದು ಎದ್ದಂತೆ ಮನೋಹರ ಕಾರಿನ ಬ್ರೆಕಗಳನ್ನ ದಬಾಯಿಸಿ ಒತ್ತಿದ. ಬೈಕು ದಡ್‌ ಎಂದು ಕಾರಿನ ಹಿಂಬಾಗಕ್ಕೆ ಗುದ್ದಿಕೊಂಡಿತು. ಸೈಡಲೈಟ ಇರಬೇಕು ಪಳ್‌ ಎಂದು ಒಡೆದು ನೆಲದಮೇಲೆ ಬಿದ್ದಿತು. ಬೈಕಿನಮೇಲೆ ಇದ್ದ ಸವಾರ ಮುಖಕೆಳಗಾಗಿ ಬಿದ್ದವನು, ಮಣ್ಣು ಕುಡಿಗಿಕೊಳ್ಳುತ್ತ ಎದ್ದು ನಿಂತ. ‘ತಲೆ ಸರಿ ಇಲ್ಲವಾ ನೀವು ಸಡನ್‌ ಆಗಿ ಬ್ರೇಕ ಹಾಕಿದ್ದರಿಂದಲೇ ನಾನು ಬಿದ್ದೆ. ನೋಡಿ ಈಗ ಗಾಡಿಯ ಮುಂದಿನ ಚಕ್ರ ಬೆಂಡಾಗಿದೆ ರಿಪೇರಿ ಮಾಡುವರಾದರೂ ಯಾರು.. ಒಂದು ಸಾವಿರ ಕೊಟ್ಟು ಗಾಡಿ ತೆಗೆಯಿರಿ’ ಅಂದ. ಅವನ ಹಿಂದೆ ನಾಲ್ಕೈದು ಜನಸೇರಿಕೊಂಡು ತಮಾಷೆ ನೋಡತೊಡಗಿದರು.

‘ಏನಂದೆ ಸನ್‌ ಆಪ್‌ ಅ ಗನ್‌.. ಕಾರಿಗೆ ಗುದ್ದಿ ಕಾರಿನ ಲೈಟ ಒಡೆದಿರುವದಲ್ಲದೆ ಈಗ ಸಾವಿರ ರೂಪಾಯಿ ಕೋಡಬೇಕೋ ’.. ರಾತ್ರಿ ಇಡಿ ಇದ್ದ ಕಿರಿಕಿರಿ ಸ್ಪೋಟಗೊಂಡಂತೆ ಅವನ ಕಪಾಳಕ್ಕೊಂದು ರಪ್‌ ಎಂದು ಬಿಟ್ಟ. ಅವನ ತುಟಿ ಒಡೆದು ಜಿನುಗಿದ ರಕ್ತ ಇವನ ಅಂಗಿಯ ಮೇಲೂ ಬಿತ್ತು. ಇದ್ದಕ್ಕಿದ್ದಂತೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತ ಅವನೂ ಇವನಿಗೆ ದಬದಬ ಎಂದು ಗುದ್ದಿದ. ಇಬ್ಬರೂ ಆ ರೋಡಿನ ಮೇಲೆ ಒಬ್ಬರಿಗೊಬ್ಬರು ಗುದ್ದಿಕೊಂಡು ಹೊರಳಾಡಿದರು. ಈ ಗಲಾಟೆಗೆ ಹೆದರಿ ಕಾರಿನಲ್ಲಿ ಅಳುತ್ತಿದ್ದ ಪಾಪುವನ್ನ ನೋಡಿ ಹೊಡೆಯುತ್ತಿದ್ದವನು ಅದನ್ನು ಬಿಟ್ಟು ಎದ್ದುನಿಂತ.

‘ಬೋಳಿಮಗನೆ ನಿಮ್ಮಮ್ಮನ ಕೇಯಾ ಇನ್ನೂ ಎಲ್ಲಿ ಯಾದರೂ ಸಿಗು ಬಡಿಯದಿದ್ದರೆ ನಾನು ಗೋವಿಂದನೆ ಅಲ್ಲ ಎಂದು ಬರ್‌ ಬರ್‌ ಎಂದು ಎಕ್ಸಲೆಟರ್‌ ಒತ್ತಿ ಅವನೂ ಜಾಗ ಕಿತ್ತ. ಹಿಂದೆ ಹುಟ್ಟಿಕೊಂಡ ಟ್ರಾಪಿಕ ಜಾಮ್‌ ಸರಿಸುತ್ತ ಬಂದ ಪೋಲಿಸ್‌ ಇವನ ಬಳಿ ಬಂದು ‘ನೋಡಿದರೆ ಎಜುಕೆಟೆಡ್‌ ಹಾಗೆ ಕಾಣುತ್ತಿರಿ ನೀವೆ ಹೀಗೆ ಹೊಡೆದಾಡಿಕೊಂಡರೆ ಹೇಗೆ ಸರ್‌, ಏನೋ ಸುಧಾರಿಸಿಕೊಂಡು ಸ್ವಲ್ಪ ಅಡ್ಜಸ್ಟಮಾಡಿಕೊಂಡು ಹೋಗಿ.. ಈಗ ಬೇಗ ಬೇಗ ಗಾಡಿ ತೆಗೆಯಿರಿ’ ಎಂದು ಬುದ್ದಿ ಹೇಳಿದ. ಕಾರು ತೆಗೆಯುತ್ತ ಸೈಡ ಮಿರರ್‌ನಲ್ಲಿ ನೋಡಿದರೆ ಹರಿದ ಶರ್ಟ ಮತ್ತು ಮಣ್ಣು ಮೆತ್ತಿರುವ ಮುಖ ಕಾಣಿಸಿತು.

ಪಾಪು ಆಗಲೆ ಅಳು ನಿಲ್ಲಿಸಿದವನು, ‘ಪೋಕಮನ್‌ ಆಡೊಣವಾ ಪಪ್ಪ’ ಅಂದ. ‘ನಾನು ಪಿಕಾಚೂ ನೀನು ಗೊಲಮ.. ಪಿಕಾಚೂ ತಂಡ ಎಟಾಕ್‌’ ಎಂದು ನಕ್ಕಿತು.

ಸ್ಕೂಲು ತಲುಪಿದಾಗ ಆಗಲೇ ಹೊತ್ತಾಗಿತ್ತು. ಮನೋಹರನ ಅವತಾರ ಕಂಡು ಸೆಕ್ಯೂರಿಟಿ ಗಾರ್ಡ ಒಳಗೆ ಬಿಡೋಕಾಗಲ್ಲ ನಿಮ್ಮನ್ನ ಅಂದ. ‘ಏನು ಮಾತಾಡುತ್ತಿದ್ದೀಯಾ, ನಾನು ಪಾಪುವಿನ ತಂದೆ ಗೊತ್ತ ನಿನಗೆ.. ನಿಮ್ಮ ಪ್ರಾಂಶುಪಾಲರ ಕರೆ ಮಾತಾಡುತ್ತೇನೆ’ ಎಂದು ಗದರಿದ. ಅವನನ್ನ ಸ್ವಲ್ಪ ತಳ್ಳಿಕೊಂಡೆ ಒಳಗ ನುಗ್ಗಿದ. ‘ಹೋಗಿ ಹೋಗಿ ಆದರೆ ಬೇಗನೆ ಬಂದು ಬಿಡಿ ನಿಮ್ಮಂತವರನೆಲ್ಲಾ ಒಳಗೆ ಬಿಟ್ಟರೆ ನಮಗೆ ಬಯ್ಯುತ್ತಾರೆ ಸರ್‌’ ಎಂದ. ‘ನಾನು ಪಾಪುವಿನ ತಂದೆ ಗೊತ್ತಾ ನಿನಗೆ’ ಅಂದ. ಅದು ತನಗೆ ಸಂಬಂಧಿಸಿದ್ದಲ್ಲವನ್ನುವಂತೆ ಅವನು ತಲೆ ಆಡಿಸಿದ.

ಪಾಪುವಿನ ಕ್ಲಾಸ್‌ ಟೀಚರ್‌ ಕಂಡೊಡನೆ ‘ಸಾರಿ ನಾನು ಹೊರಗಡೆ ದೇಶದಲ್ಲಿದ್ದೇ ನೋಡಿ .. ಇವತ್ತು ಕಟ್ಟುತ್ತಿದ್ದೇನೆ’ಅಂದ. ‘ಇಲ್ಲ ಪಪ್ಪಾ ಸುಳ್ಳು ಹೇಳಬಾರದು.. ನೀನು ಬೆಂಗಳೂರಲ್ಲೆ ಇದ್ದೆ’ ಎಂದಿತು ಪಾಪು. ಟೀಚರ್‌ ಒಂದು ನಮೂನಿಯಾಗಿ ನಕ್ಕರು. ಮನೋಹರ ಮುಖವರೆಸಿಕೊಂಡು ಫೀಸಕಟ್ಟಲು ಆಫೀಸಿಗೆ ಬಂದ. ಪೈನ್‌ ಎಲ್ಲಾಸೇರಿ, ಇಪ್ಪತ್ತು ಮೂರುಸಾವಿರದ ಒಂಬೈನೂರಾ ಮೂವತ್ತು ರೂಪಾಯಿ ಅಂದ ಕ್ಲರ್ಕ. ಫೈನಿಗೆ ರಿಸಿಟ್‌ ಕೋಡಕಾಗಲ್ಲ ಎಂದು ಸೇರಿಸಿದ.

‘ಯಾಕಾಗಲ್ಲ ದಂಡ ಕೋಡ್ತಾ ಇಲ್ವ’ ಅಂದ ಮನೋಹರ. ಕ್ಲರ್ಕ್‌ ‘ಆಗಲ್ಲ ಅಂದರೆ ಆಗಲ್ಲ ಸರ್‌ ಬೇಕಿದ್ದರೆ ಮ್ಯಾನೇಜರ್‌ ನಾಳೆ ಬರುತ್ತಾರೆ ಅವರು ಬಂದಾಗಲೆ ಬಂದು ಕಟ್ಟಿ ಇವತ್ತು ರಜಾ’ ಅಂದ.

‘ಎಲ್ಲಾ ಬ್ಲಡಿ ಚಿಟ್‌’ ಎಂದು ಮನೋಹರ ಗೊಣಗಿಕೊಂಡ. ಅದು ಅರ್ಧ ಕಿವಿಗೆ ಬಿದ್ದಿದ್ದೆ ಕ್ಲರ್ಕ್‌ ತನ್ನ ದೊಡ್ಡ ಅಕೌಂಟ ಪುಸ್ತಕ ಮುಂದೆ ದೂಡಿ ‘ಸ್ವಲ್ಪ ಬಾಯಿ ಹಿಡಿದು ಮಾತಾಡಿ.. ಎರಡೆರಡು ನೋಟಿಸ್‌ ಕಳುಹಿಸಿದರೆ ತೆಗೆದು ನೋಡೋಕೆ ಪುರುಸೋತ್ತಿಲ್ಲದ ಜನ ನೀವು .. ಈ ಫೀಸ್‌ಕಾರ್ಡ ತೆಗೆದು ನೋಡಿ.. ದೊಡ್ಡ ಅಕ್ಷರದಲ್ಲಿ ಬರೆದಿಲ್ಲವಾ ಅಷ್ಟೆಲ್ಲ ಸಿಟ್ಟಿದ್ದವರೂ ಮೊದಲೆ ಕೊಟ್ಟು ಬಿಡಬೇಕಿತ್ತು. ಈ ರಾದ್ದಾಂತವೆ ಇರುತ್ತಿರಲಿಲ್ಲ ನೋಡಿ. ಸ್ವಲ್ಪ ಟೈಂ ನೋಡಿ.. ಹತ್ತು ಘಂಟೆಯಮೇಲೆ ತೆಗೆದುಕೊಳ್ಳುವ ಹಾಗೆಯೆ ಇಲ್ಲ.. ಹತ್ತು ಕಾಲಾದರೂ ಪಾಪ ದೂರದಿಂದ ಬಂದಿದ್ದಿರಾ ಎಂದು ತೆಗೆದುಕೊಂಡರೆ ಇಂಗ್ಲಿಷನಲ್ಲಿ ಬೈಯುತ್ತಿರಾ.. ಅಂದ. ನಾಳೆನೆ ಬನ್ನಿ ಬೇಕಿದ್ದರೆ’ ಎಂದು ಸೇರಿಸಿದ.

ತಲೆಕೆಟ್ಟಂತೆ ಮನೋಹರ ಅವನನ್ನ ನೋಡಿದ. ತಿರುಗಿ ಒಂದುಮಾತಾಡದೆ ದುಡ್ಡು ಎಣಿಸಿಕೊಟ್ಟು ಎದ್ದ. ಕಿಸಿಮುಟ್ಟಿನೋಡಿದರೆ ಎಲ್ಲ ಕೊಟ್ಟಾದಮೇಲೆ ಮೂವತ್ತೈದು ರೂಪಾಯಿ ಇನ್ನು ಉಳಿದಿತ್ತು.

ಆಫೀಸಿನಿಂದ ಹೊರಗೆ ಮೆಟ್ಟಿಲು ಹತ್ತಿ ಬರುತ್ತಿರಬೇಕಾದರೆ ಶಾಲೆಯ ಪ್ರಿನ್ಸಿಪಾಲ ಬೋಳಾರ್‌ ಬರುವದು ಕಾಣಿಸಿತು. ಮನೋಹರ ಅವಳ ಬಳಿಸರಿದು ‘ಫೀಸ್‌ ಕಟ್ಟುವದು ತಡವಾದರೆ ಮಕ್ಕಳನ್ನ ಹೊರಗೆ ನಿಲ್ಲಿಸುವದು ಅಮಾನವೀಯ ಅಂದ. ಪ್ರಿನ್ಸಿಪಾಲ ಬೋಳಾರ್‌ ಕನ್ನಡಕವನ್ನು ಮೇಲೇರಿಸಿ ಮತ್ತೆ ಮನೋಹರನನ್ನ ಮೇಲಿನಿಂದ ಕೆಳಕ್ಕೆ ನೋಡಿದರು. ಹಾರುವ ಸೀರೆಯ ಸೆರಗನ್ನ ಸೊಂಟಕ್ಕೆ ಸಿಲುಕಿಸಿಕೊಂಡು ಬಲಗೈಯಲ್ಲಿ ಕಟ್ಟಿದ ವಾಚನಲ್ಲಿ ಗಂಟೆ ಎಷ್ಟಾಯಿತು’ ಎಂದು ನೋಡಿಕೊಂಡರು. ‘ತಾವು ಯಾರು ಎಂದು ತಿಳಿಯಲಿಲ್ಲ’ ಎಂದು ಉಲಿದರು.

ಮನೋಹರ ಪಾಪುವಿನ ಹೆಸರು ಹೇಳಿ ಸಂಬಂಧ ಹೇಳಲಾ ಎಂದುಕೊಂಡ. ಯಾಕೊ ಸತ್ಯ ಹೇಳಲು ನಾಲಿಗೆ ತಡವರಿಸಿದಂತೆ ಪಾಪು ಹೇಳುವ ಅವನ ಸ್ನೇಹಿತರ ಹಲವಾರೂ ಹೆಸರಿನಲ್ಲಿ ಒಂದು ಹೆಸರು ಹೇಳಿ ಅವರಿಗೆ ಸಂಬಂಧ ಪಟ್ಟವನು ಎಂದ. ಪ್ರಿನ್ಸಿಪಾಲರೂ ಮತ್ತೆ ಮೂಗಿನ ತುದಿಗೆ ಕನ್ನಡಕ ಎರಿಸಿಕೊಂಡರು. ‘ಆದರೆ ಅವರೆಲ್ಲ ಆಗಲೆ ಫೀಸ ಕಟ್ಟಿದ್ದಾರಲ್ಲ.. ಆ ಹುಡುಗರಿರುವ ಕ್ಲಾಸನಲ್ಲಿ ಫೀಸಕಟ್ಟದೆ ಇರುವ ಮಗು ಒಂದೆ.. ನೀವು ಆ ಮಗುವಿನ ತಂದೆ ಇರಬೇಕು’ ಎಂದು ತಣ್ಣಗೆ ನಕ್ಕರು.

ಮನೋಹರ ಇಲ್ಲಿಂದ ಹೊರ ಬಿದ್ದರೆ ಸಾಕು ಎನ್ನುವಂತೆ ಮುಖವರೆಸಿಕೊಂಡ. ಬೋಳಾರ ಮುಂದುವರಿಸಿದರು. ‘ಅದರಲ್ಲಿ ಅಮಾನೀಯವಾದುದೇನಿದೆ ಎರಡು ಬಾರಿ ನೋಟಿಸ್‌ ಕಳುಹಿಸಿದ್ದಕ್ಕೆ ಬಂದು ಕಟ್ಟಬೇಕಿತ್ತು. ನಿಮಗೆ ಅಷ್ಟೆಲ್ಲಾ ಕೆಟ್ಟಭಾವನೆ ನಮ್ಮಸ್ಕೂಲಿನ ಮೇಲಿದ್ದರೆ ಬೇರೆ ಸ್ಕೂಲಿಗೆ ನೀವು ಸೇರಿಸಬಹುದು’ ಅಂದರು.

ಇನ್ನು ಅದೊಂದು ರಾಮಾಯಣ ಬೇರೆ ಎಂದು ತಲೆಕೊಡವಿ ಮತ್ತೆ ದಾರಿಗೆ ಬಿದ್ದ. ಒಂದು ಟನ್‌ ಆರಡಿಎಕ್ಸ್‌ಇಟ್ಟು ಈ ಶಾಲೆ ಉಡಾಯಿಸಬೇಕು ಎನ್ನುವ ಯೋಚನೆ ಒಂದರ ಹಿಂದೆ, ಪಾಪು ಈಗ ಏನು ಮಾಡುತ್ತಿರಬಹುದು ಅನ್ನಿಸಿ ಖಿನ್ನನಾದ. ಆಷ್ಟರಲ್ಲಿ ಮೊಬೈಲ ಬಾರಿಸತೊಡಗಿತು. ಆ ಕಡೆಯಿಂದ ಪ್ರೀತಿ, ‘ಎಲ್ಲಿದ್ದಿಯಾ ಬಾಸ್‌ ಕೆಕೆ ಬೆಳಗಿನಿಂದ ನಿನ್ನ ಹುಡುಕುತ್ತಿದ್ದಾನೆ. ಯಾವುದೊ ಕ್ಲೈಂಟ ಪ್ರಸೆಂಟೆಶನ ಅಂದಹಾಗಿತ್ತು. ಎಲ್ಲಿದ್ದರೂ ಮಿಟಿಂಗರೂಂಗೆ ತಪ್ಪಿದರೆ ಲಂಚರೂಂಗೆ ನೇರವಾಗಿ ಬರಲು ತಿಳಿಸಿದ್ದಾನೆ’ ಎಂದಳು. ಕಾರಿನ ಗ್ಲಾಸನ ಹೊರಗೆ ಟ್ರಾಪಿಕ್‌ ಪೋಲಿಸ್‌ ಬಡಬಡನೆ ಗ್ಲಾಸಕುಟ್ಟಿ ನಿಲ್ಲಿಸಲು ಸೂಚಿಸಿದ. ‘ಪ್ರೀತಿ ಕೆ.ಕೆ.ಗೆ ಹೇಳು ಬರುವದು ತಡವಾಗುತ್ತದೆ.. ಸ್ಟಕ್‌ ಇನ್‌ ಟ್ರಾಪಿಕ್‌.. ಟಾಯರ್‌ ಬೇರೆ ಪಂಕ್ಚರ’ ಎಂದು ಬುರುಡೆ ಬಿಟ್ಟು ಮೊಬೈಲ್‌ ಆಫ್‌ ಮಾಡಿ ಗ್ಲಾಸ್‌ ಇಳಿಸಿ ಟ್ರಾಪಿಕ್‌ ಪೋಲಿಸನ ಮುಖನೋಡಿದ.

ಸರ ಮೊಬೈಲ್‌ ಉಪಯೋಗಿಸುವ ಹಾಗಿಲ್ಲ. ಎರಡುನೂರು ರೂಪಾಯಿ ದಂಡ ಕಟ್ಟಿ ಅಂದ. ಮನೋಹರನಿಗೆ ದೊಡ್ದದಾಗಿ ನಗೆ ಬಂದಿತು. ‘ನೋಡಿ ಸಾರ್‌ ಕೇಸ ಹಾಕುವದಿದ್ದರೆ ಹಾಕಿ.. ಹಾಸ್ಪಿಟಲ ಪೋನದು. ನನ್ನ ಹೆಂಡತಿಯ ಹೆರಿಗೆಯ ಸುದ್ದಿ. ಈಗ ನನ್ನ ಬಳಿ ಮೂವತ್ತೈದು ರೂಪಾಯಿ ಇದೆ ಬೇಕಿದ್ದರೆ ಅಷ್ಟಕ್ಕೆ ಅಡ್ಜಸ್ಟ ಮಾಡಿ ಅದಿಲ್ಲದಿದ್ದರೆ ಕ್ರೇಡಿಟ್‌ ಕಾರ್ಡ್‌ ಕೊಡಲಾ’ ಅಂದ.

ಟ್ರಾಫಿಕ್‌ ಪೋಲಿಸ ಹಿಂದೆ ಮುಂದೆ ನೋಡಿ ಗ್ಲಾಸನ ಕೆಳಗೆ ಕೈಹಾಕಿ ಮುವತ್ತೈದು ರೂಪಾಯಿ ತೆಗೆದುಕೊಂಡ. ‘ಮಗನಾ ಸಾರ್‌ ಉಪೇಂದ್ರ ಅಂತ ಹೆಸರಿಡಿ ಚೆನ್ನಾಗಿದೆ’ ಅಂದು ಮತ್ತೆ ಯಾರನ್ನೋ ಹಿಡಿದುಕೊಂಡ. ತಿರುಗಿ ರಿಂಗಾಯಿತು ಮೊಬೈಲ್‌. ಮನೋಹರ ಹಲೋ ಅಂದ. ಶುರುವಾಗಿಯೆ ಬಿಟ್ಟಿತು ಸಂಗೀತ. ‘ನಾವು ಸಾರ್‌ ಐಸಿಐಸಿಯಿಂದ.. ನಿಮಗೊಂದು ಪರಸನಲ್‌ ಆಫರ್‌ ಇದೆ. ಲೈಪ್‌ ಟೈಂ ಫ್ರೀ ಕ್ರೇಡಿಟ್‌ ಕಾರ್ಡ ಸರ್‌.. ಮಿನಿಮಮ್‌ ಡಾಕ್ಯುಮೇಂಟೆಶನ ನಮ್ಮದು .. ನಿಮ್ಮ ಹೇಸರೇನು ಸಾರ್‌...’

‘ಸುಮ್ನೇ ಪೋನಿಡಿ, ಇದೇನು ಪಬ್ಲಿಕ್‌ ಟೋಯಲೆಟಾ ಯಾರು ಬೇಕಾದರೂ ಯಾವಾಗ ಬೇಕಾದರು ಬಂದು ಮೂತ್ರ ವಿಸರ್ಜಿಸಲಿಕ್ಕೆ’ ಅಂದ. ಪೋನ ಗಕ್‌ ಎಂದು ಕಟ್ಟಾಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more