• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕತ್ತಲು

By Staff
|

ಅಲ್ಲೆ ಗೋಡೆಗೊರಗಿ, ಒಂದು ಕೈಯಲ್ಲಿ ರಪರಪನೆ ತಲೆ ಕೆರೆದುಕೊಳ್ಳುತ್ತ.. ಕಿಟಕಿಯಹೊರಗೆ ಕಾಣುವ ಶೂನ್ಯ ದೃಷ್ಟಿಸುತ್ತ ‘ಅಲ್ಲಾ ಮನೋಹರ ಯಾಕೆ ಈ ಬೇಜವಾಬ್ದಾರಿತನ ಪಾಪ, ಪಾಪುವನ್ನ ಇವತ್ತು ಪೀಸ್‌ ಕಟ್ಟಿಲ್ಲ ಎಂದು ಸ್ಕೂಲ್‌ ಟೀಚರ್‌ ಹೊರಗೆ ಕಳುಹಿಸಿದರಂತೆ. ನಾಳೆಯಿಂದ ಸ್ಕೂಲಿಗೆ ಬೇರೆ ಕಳುಹಿಸಬೇಡಿ ಎಂದು ಚೀಟಿ ಬೇರೆ ಕಳುಹಿಸಿದ್ದಾರೆ. ಈ ಭಾಗ್ಯಕ್ಕೆ ಇಷ್ಟು ದುಬಾರಿಯಾದ ಶಾಲೆಯಾದರು ಯಾಕೆ ಬೇಕಿತ್ತು. ಹಾಕಬಹುದಿತ್ತಲ್ಲ ಯಾವುದಾದರು ಸರಕಾರಿ ಶಾಲೆಗೆ.. ನಾನೇನೂ ನಿನ್ನನ್ನ ಇದೆ ಸ್ಕೂಲಿಗೆ ಕಳುಹಿಸು ಅಂದೆನಾ.. ಕೈಯಲ್ಲಿ ಹರಿಯದ ಮೇಲೆ ಯಾಕೆ ಮಾಡಬೇಕು.. ಮಾಡಿದರೆ ಎಲ್ಲ ಸರಿ ಮಾಡಬೇಕು.. ಇಲ್ಲದಿದ್ದರೆ ಮಾಡಬಾರದು. ಪಾಪುವಿಗೆ ಅವನ ಸ್ನೇಹಿತರ ಮುಂದೆ ಕ್ಲಾಸಿನಿಂದ ಹೊರ ನಿಲ್ಲುವಾಗ ಏನು ಅನ್ನಿಸಿರಬಹುದು ಎಂದಾದರು ನೀನು ಯೋಚಿಸಿದ್ದಿಯಾ..’ ದು:ಖ ಹೆಚ್ಚಾಗಿ ಅವಳ ಕಣ್ಣಿಂದ ಎರಡು ಹನಿ ಕಣ್ಣೀರು ಬಿದ್ದು.. ಮನೋಹರನ ಕರಳು ಚುರ್‌ ಎಂದಿತು.

ಹೇಳಬೇಕೆಂದರೆ ದಿನದ ಎಲ್ಲ ರಗಳೆಯ ಮಧ್ಯೆ ಅದೊಂದು ಮರೆತೆ ಹೋಗಿತ್ತು. ಅಥವಾ ತಾನು ಕಟ್ಟಿದ್ದರೂ, ಸ್ಕೂಲು ಮರೆತಿರಬಹುದೆ.. ಅದೂ ನೆನಪಿಗೆ ಬರಲಿಲ್ಲ. ಈಗ ಬೀಸುತ್ತಿರುವ ಗಾಳಿ ಬೇರೆ ದಿಕ್ಕಿಗೆ ತಿರುಗಿದರೆ ಸಾಕೆಂಬ ಆಸೆಯಲ್ಲಿ.. ‘ಅಲ್ಲಾ ನಾನು ತುಂಬಿದ್ದೆನಲ್ಲ’ ಅರಚಿದ. ಸುಳ್ಳು ಅನಾಯಾಸವಾಗಿ ಯಾವ ತಡವರಿಕೆಯಿಲ್ಲದೆ ಬಂದಿತು.

‘ಏನಂದೆ, ನೀನು ತುಂಬಿದ್ದಿಯಾ? ಫೀಸ್‌ ತುಂಬಿದ್ದರೆ, ಅದರ ರಶೀತಿ ಇರಬೇಕಲ್ಲ ಎಲ್ಲಿದೆ ಅದು. ಅಥವಾ ಅದನ್ನು ಅವರೇ ಇಟ್ಟುಕೊಂಡರೆ. ಯಾಕೆ ಸುಳ್ಳು ಹೇಳುತ್ತಿ ಮನೋಹರ.. ಯಾರ ನಂಬಿಸಲಿಕ್ಕೆ. ಮನು ಇನ್ನು ನನ್ನ ಹತ್ತಿರ ಸಾಧ್ಯವಿಲ್ಲ. ಪಾಪುವಿಗೆ ಇವತ್ತು ಜ್ವರ ಬೇರೆ. ಆಫೀಸಿನಿಂದ ಆಟೊ ಹಿಡಿದು ಬಂದು ಚೈಲ್ಡಕೆರಲ್ಲಿ ಪಾಪುವನ್ನು ಎತ್ತಿಕೊಂಡು ಡಾಕ್ಟ್ರಿಗೇ ತೋರಿಸಿ ಮನೆಗೆ ತಂದು ಊಟಹಾಕಿ ಔಷಧಿ ಕುಡಿಸಿ ಮಲಗಿಸುವ ಕೆಲಸದ ಮಧ್ಯೆ ನಾನು ಸತ್ತಂತಾಗಿದ್ದೇನೆ. ಈಗ ನೋಡಿದರೆ ರಾತ್ರಿ ಒಂದುಗಂಟೆ ಕುಡಿದು ಮನೆಯ ಒಳಗೆ ಕಾಲಿಟ್ಟು ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದಿಯಾ.. ಯಾವುದಕ್ಕೂ ಒಂದು ಮಿತಿ ಇರಬೇಕು ಮನೊಹರ ಯಾವುದಕ್ಕೂ ಒಂದು ಮಿತಿ ಬೇಕು ಅಂದೆ.. ಕೊನೆಯ ಪಕ್ಷ ನನ್ನ ನಂಬಬಹುದಿತ್ತು.. ಫೀಸ್‌ ಕಟ್ಟಿಲ್ಲ ಅಂದು ನಾನು ಅಂದರೆ ಫೀಸ್‌ ಕಟ್ಟಿದ್ದೇನೆ ಎಂದು ನೀನು ಯಾಕೆ ಎನ್ನುತ್ತಿ. ಸುಳ್ಳು ಯಾಕೆ.. ಒಪ್ಪಿಕೊಳ್ಳಬಹುದಲ್ಲ ತಪ್ಪಾಗಿದೆ.. ಗಂಡಸರ ಬುದ್ಧಿ ಎಲ್ಲಿ ಬಿಡುತ್ತಿ.. ತಪ್ಪು ಒಪ್ಪಿಕೊಳ್ಳುವದು ನಿನ್ನ ದೊಡ್ಡಸ್ತಿಕೆಗೆ ಅವಮಾನವಾದಂತೆ ನೋಡು.. ಅಷ್ಟಿದ್ದರೆ ತಪ್ಪು ಮಾಡಬಾರದು. ಆಫೀಸಿನಲ್ಲಿ ಪ್ರೊಜೆಕ್ಟ ಮೀಟಿಂಗ ಎಂದು ಬೊಗಳೆ ಬಿಡುತ್ತಿಯಲ್ಲ.. ನಾನೆಂದಾದರೂ ಇದೆಲ್ಲದರ ಮಧ್ಯೆಗೆಳೆಯರ ಬಳಗ ಕಟ್ಟಿಕೊಂಡು ಗುಂಡುಹಾಕಲು ವೇಳೆ ಎಲ್ಲಿತ್ತು ಅಂತಾ ಕೇಳಿದೆನಾ...ಯಾಕೆ ನೆರವಾಗಿ ಮನೆಗೆ ಬರದೆ ಅಂಡಲೆಯುತ್ತಿ ಎಂದು ಕೇಳಿದೆನಾ.. ಇದೆನಾ ಸಂಸಾರ ಅಂದರೆ.. ಇದಕ್ಕಿಂತ ಒಂಟಿಯಾಗಿರುವದು ಎಷ್ಟೋ ಮೇಲೂ’ ಎಂದವಳೆ ಕೊಣೆಯ ಒಳಗೆ ಹೋಗಿ ದಬಾರ್‌ ಎಂದು ಬಾಗಿಲು ಹಾಕಿಕೊಂಡಳು.

ಡೈನಿಂಗ ಟೇಬಲನ ಮೇಲೆ ಮುಚ್ಚಿಟ್ಟ ತಣ್ಣಗಾದ ಅನ್ನ. ದಾಲ್‌ ಚಪಾತಿ ಮತ್ತೆ ಬೀನ್ಸ ಪಲ್ಯ. ಆಫೀಸ್‌, ಕೆಲಸ, ಚೈಲ್ಡಕೇರ್‌ ಮಧ್ಯ ಸುಂಟರಗಾಳಿಯಂತೆ ತಿರುಗುವ ಇವಳಿಗೆ ಯಾವಾಗ ಅಡುಗೆ ಮಾಡಲು ವೇಳೆ ಸಿಕ್ಕಿತು ಅಂತ ಮನೋಹರ ಒಮ್ಮೆಯಾಚಿಸಿದ. ಅವೆಲ್ಲವನ್ನು ದಡ ಬಡನೆ ತೆಗೆದು ಪ್ರಿಡ್ಜಗೆ ತುಂಬುವ ಹಂತದಲ್ಲಿದ್ದವನ ಕೈಯಿಂದ ಪ್ಲೇಟೊಂದು ಜಾರಿ ಕೆಳಗೆ ಬಿದ್ದಿದ್ದು ಮನೆಯತುಂಬಾ ರಣರಣಿಸಿತು. ಅದನ್ನ ಹಿಡಿಯುವ ಪ್ರಯತ್ನದಲ್ಲಿ ಬಗ್ಗಿದವನ ಕೈಯಿಂದ ಊಳಿದೆರಡು ತಟ್ಟೆಗಳು ಬಿದ್ದು ಮತ್ತೊಂದಿಷ್ಟು ಸದ್ದಾಯಿತು. ಸಾಲದುದಕ್ಕೆ ರಾತ್ರಿ ಪಾಳಿಗೆ ಜನರನ್ನು ಹೊತ್ತೊಯ್ಯುವ ಅಥವಾ ಮೊದಲ ಪಾಳಿಯ ಕೆಲಸ ಮುಗಿಸಿದವರ ಮನೆಗೆ ಬಿಡುವ ಟಾಟಾ ಸುಮೋ ಒಂದರ ಬಯಂಕರ ಹಾರನ್‌ ನಗಾರಿಯಂತೆ ಬಾರಿಸಿತು.

ಮತ್ತೆ ಬೆಡ್‌ ರೂಂನ ಬಾಗಿಲು ತೆಗೆಯಿತು. ಅವಳು ದಡ ಬಡನೆ ಹೊರಬಂದು ಏದುರಿಗೆ ನಿಂತಳು. ‘ತಿಳಿಯಲ್ಲ ನಿನಗೆ.. 500 ಎಮಜಿ ಆಂಟಿಬಯೋಟಿಕ ಅದು. ಅದನ್ನ ತಿಂದು ಪಾಪ ಒಂದು ಮಾತಾಡದೆ ದೇವರ ಹಾಗೆ ಮಲಗಿದೆ ಪಾಪು.. ಬೆಳಗಿನಿಂದ ನಿಮಗೆ ದುಡಿದು ಹೈರಾಣವಾಗಿದ್ದೀನಿ ನಾನು. ಸ್ವಲ್ಪ ನಾಜೂಕಾಗಿ ಸಪ್ಪಳ ಆಗದಂತೆ ಪ್ಲೇಟ ತೆಗೆದಿಡಬೇಕು ಎಂದು ನಿನಗೆ ಅನ್ನಿಸಲಿಲ್ಲವಾ.. ಬೇರೆಯವರ ಬಗ್ಗೆ ಯೋಚನೆ ಇದ್ದರೆ ತಾನೆ.. ಸ್ವಲ್ಪವಾದರೂ ಇನ್ನೊಬ್ಬರ ಬಗೆಗೆ ಕಾಳಜಿ ಎನ್ನುವದು ಇರಬೇಕು.. ಈಗ ನೋಡು ಒಂದು ಮಾತಾಡದೆಯೆ ನಿಂತಿದ್ದಿಯಾ ನನಗೆ ಗೊತ್ತು ಇನ್ನು ನಾನು ನಾಲ್ಕುಮಾತಾಡಿದರೆ.. ಏನಾದರೂ ಮಾಡಿಕೊ ಎಂದು ಕಾರು ಹತ್ತಿ ಮನೆ ಬಿಟ್ಟು ಹೋಗಿ ಹೆದರಿಸುತ್ತಿಯಾ.. ನಾನು ಹಾಗೆ ಮಾಡಿದರೆ ಹೇಗಿರುತ್ತೆ.. ಹೋದ ಬಾರಿ ಡಾಕ್ಟ್ರಬಳಿಹೋದಾಗ ಏನಂದಿದ್ದದ್ದರೂ.. ಹೇಳು ನೊಡೋಣ..’

ಮನೋಹರ ‘ಏನಂದಿದ್ದರು’ ಅಂದ. ಬೇಡ ಅಂದರು ಸಿಟ್ಟು ಒಡೆದುಕೊಂಡಿತು ಮಾತಿನ ಕೊನೆಯಲ್ಲಿ. ಹೇಗೆ ನೆನಪಿರುತ್ತೆ ನಿನಗೆ.. ಪಾಪುಗೆ ರೆಸಿಸ್ಟನ್ಸ್‌ ಇಲ್ಲ. ನಿರೋಸಿಲ್‌ ಟಾನಿಕ್‌ ಕೊಡಿ ಎಂದಿರಲಿಲ್ಲವೆ. ಅದನ್ನೆನಾದರೂ ತಂದೆಯಾ.. ತಂದರೂ ಔಷಧಿ ನೆನಪುಮಾಡಿಕೊಂಡು ಕೊಟ್ಟೆಯಾ.. ಈವತ್ತು ಡಾಕ್ಟ್ರ ಅದನ್ನಾ ಕೊಡುತ್ತಿದ್ದಿರಾ ಎಂದರು. ನಿನ್ನ ದೆಸೆಯಿಂದ ನಾನು ಸುಳ್ಳು ಹೇಳಬೆಕಾಯಿತು. ನಾನ್ಯಾಕೆ ಸುಳ್ಳು ಹೇಳಬೆಕು. ನಾನು ಸುಳ್ಳೂ ಹೇಳಲು ತಯಾರಿಲ್ಲ ತಿಳಿಯಿತಾ ಅಂದಳು. ಅಂದವಳು ಅಲ್ಲೆ ನಿಂತಳು.

ಮನೋಹರ ಅವಳ ಕಣ್ಣುಗಳನ್ನೇ ನೋಡಿದ. ಎಷ್ಟೆಲ್ಲ ದು:ಖ ರೋಷ ಅಸಹ್ಯಗಳನ್ನ ಅವು ತುಂಬಿಕೊಂಡಂತೆ ಕಂಡವು. ಅವಳ ತಿರಸ್ಕಾರಕ್ಕೆ ಬೇಡವೆಂದರೂ ಅವನೊಳಗೆ ರೇಜಿಗೆ ಹುಟ್ಟತೊಡಗಿತು. ಬಿಗಿಯಾಗುತ್ತಿರುವ ಮತ್ತು ಹದಗೆಡುತ್ತಿರುವ ವಾತಾವರಣವನ್ನು ತಿಳಿಗೊಳಿಸುವಂತೆ.. ‘ಗೊತ್ತಾ ನಿನಗೆ.. ವಾಲ್ಮಿಕಿಯ ಕತೆ.. ಮುನಿಯಾಬ್ಬನ ಉಪದೇಶದಂತೆ ಮನೆಗೆ ಬಂದ ಬೇಡ ತನ್ನ ಹೆಂಡತಿ ಮಕ್ಕಳನ್ನ ಕೇಳಿದ.. ನಾನು ಗೈಯುವ ಪಾಪದಲ್ಲಿ ನೀವು ಪಾಲುದಾರರಾಗುವಿರಾ.. ಹೆಂಡತಿ ಮಕ್ಕಳು ಕ್ಷಣಮಾತ್ರದಲ್ಲಿ ಇಲ್ಲ ನಿನ್ನ ಪಾಪದಲ್ಲಿ ನಾವು ಬಾಗಿಯಲ್ಲ ಅಂದರು. ಬದುಕಿನ ಸತ್ಯಕ್ಕೆ ಮುಖಕೊಟ್ಟ ಬೇಡ ತಪಸ್ಸಿಗೆ ಕುಳಿತ ವಾಲ್ಮಿಕಿಯಾದ.. ರಾಮಾಯಣ.. ’ ಮಾತು ಮುಂದುವರಿಸುವನಿದ್ದ ಅವನಿಗೆ ಅವಳ ಕಣ್ಣುಗಳನ್ನ ನೋಡಿ ಹೆದರಿಕೆಯಾಯಿತು.

‘ಏನಂದೆ ಆ ವಾಲ್ಮಿಕಿಯ ರಾಮಾಯಣ ಹಾಳು ಬಡಿಯಲಿ. ಮೊದಲು ನಿನ್ನ ಬದುಕಿನ ರಾಮಾಯಣ ಸರಿ ಮಾಡಿಕೊ ’ ಮತ್ತೆ ರೂಂ ನ ಬಾಗಿಲು ದೊಪ್ಪೆಂದು ಹಾಕಿಕೊಂಡಿತು.

ಅಸಾದ್ಯ ರೇಜಿಗೆಯಲ್ಲಿ ಎಲ್ಲ ಹಾಳಾಗಲಿ ಎಂದು ಸೋಫಾದಮೆಲೆ ಕುಳಿತ. ಮೇಲೆ ಕೇಳಗೆ ನೊಡಿದ. ರೂಂನ ಬಾಗಿಲು ಮತ್ತೆ ತೆರೆದುಕೊಳ್ಳುತ್ತದೆಯೋ ಎಂದು ಕಾದ. ಹೊರಗೆ ಮತ್ತೊಂದೆರಡು ವಾಹನಗಳು ಬರ್‌ ಎಂದು ಸಾಗಿಹೋದವು. ಯಾರೊ ಗ್ಯಾರೇಜಿನಿಂದ ಕಾರ್‌ ತೆಗೆದಿರಬೇಕು. ಅದರ ರಿವರ್ಸ ಹಾರನಿನ ಕೆಟ್ಟ ಸಂಗಿತ ಅಲ್ಲೆಲ್ಲಾ ತುಂಬಿಕೊಂಡಿತು. ಎದುರು ಮನೆಯ ಪ್ಲಾಟಿನಲ್ಲಿರಬೇಕು.. ಸಾಕಿಕೊಂಡ ಡಾಬರಮನ್‌ ನಾಯಿ.. ಯಾರನ್ನೋ ನೆನೆಸಿಕೊಂಡು ಊಳಿಟ್ಟಿತು. ಮೇಲಿನ ಮೆನೆಯವನಿರಬೇಕು.. ಟೊಯ್ಲೆಟ್‌ ಉಪಯೋಗಿಸಿದ್ದು ಪ್ಲಶ್‌ ಮಾಡಿದ್ದು.. ನೀರು ಬಸ್‌ ಎಂದು ಪೈಪಿನಲ್ಲಿ ಹರಿದುಹೊಗಿದ್ದು ಸ್ಪಷ್ಟವಾಗಿ ಕೇಳಿತು.

ಯಾಕೊ ಬೇಸರವೊಂದು ಎದ್ದಂತೆ ಸಿಎನಬಿಸಿಯನ್ನು ಹಾಕಿದ. ಸಿಎನಬಿಸಿಯಲ್ಲಿ ಮಾರುಕಟ್ಟೆ ಕುಸಿದು ಬಿದ್ದಿರುವದರ ಬಗ್ಗೆ ದಿರ್ಘ ಚರ್ಚೆನಡೆಯುತ್ತಿತ್ತು. ಅಮೆರಿಕೆಯ ಬಡ್ಡಿದರ ಮತ್ತು ಬೆಲೆಯೇರಿಕೆಯ ಕಾರಣಕ್ಕಾಗಿಯೆ ಇಲ್ಲಿ ಕುಸಿದುಬಿದ್ದಿರಬಹುದಾದ ಮಾರುಕಟ್ಟೆಯ ಗತಿಯನ್ನು ತಿಳಿಸುವಂತಿತ್ತು ಆ ಚರ್ಚೆ. ವಿಶ್ಲೇಷಿಸುವರಲ್ಲಿ ಒಬ್ಬ ಘನಗಂಭೀರತೆಯಲ್ಲಿ ನಾಳೆ ಮಾರುಕಟ್ಟೆ ಮೇಲೆರಬಹುದು.. ಅಥವಾ ಕೆಳಗಿಳಿಯಬಹುದು ಅಥವಾ ಈಗ ಇದ್ದಲ್ಲೆ ಇರಬಹುದು ಅಂದ. ಹಾಗೆ ಹೇಳಲಿಕ್ಕೆ ಅವನಿಗೆ ಯಾರು ಇಲ್ಲಿ ದುಡ್ಡುಕೊಟ್ಟು ಕರೆಸಿದ್ದಾರೆ ಅಂದುಕೊಂಡ. ಅವನು ಅಷ್ಟೆಲ್ಲಾ ಚಾರ್ಟು, ಡೈಗ್ರಾಮ್‌.. ಅಂಕಿ ಸಂಕೆ ಉಪಯೋಗಿಸಿ ಹೇಳಿದ್ದು ಮಾತ್ರ ಅದ್ಬುತವಾಗಿತ್ತು ಅನ್ನಿಸಿತು. ಜನ ಟೀವಿಯನ್ನ ಬರೆ ನೊಡುತ್ತಾರೆ ಆದರೆ ಕೇಳುವದಿಲ್ಲ ಎನ್ನುವ ಹೊಸ ಸತ್ಯ ಹೊಳೆದಂತೆ ಅವನು ಗೆಲುವಾದ. ನಾಳೆ ಹೆಂಡತಿಗೆ ಹೇಳಿದರೆ ಹೇಗೆ ಈ ಹೊಸ ಆವಿಷ್ಕಾರವನ್ನ ಅಂದುಕೊಂಡವನು.. ಯಾಕೋ ಮತ್ತೆ ಬಯ್ಸಿಕೊಂಡರೆ ಅನ್ನಿಸಿತು. ಅದರ ಹಿಂದೆ. ತಾನು ಸುಮಾರು ಎರಡು ಲಕ್ಷವಾದರೂ ಕಳೆದುಕೊಂಡಿರಬಹುದು ಎನ್ನುವದು ಅರಿವಿಗೆ ಬಂದು ಗಡಬಡಾಯಿಸಿ ಒಳಗಡೆಯಿಂದ ಲ್ಯಾಪಟಾಪ್‌ ತೆಗೆದು ತನ್ನ ಷೇರುಗಳ ಸಮಗ್ರ ಲೆಕ್ಕ ಹಾಕಿದ. ಕೊನೆಯಲ್ಲಿ ಎರಡಿರಲಿಕ್ಕಿಲ್ಲ ಅನ್ನಿಸಿ ಸ್ವಲ್ಪ ಸಮಾಧಾನವಾಯಿತು.

ಚಾನಲ್‌ ಬದಲಾಯಿಸಿ ಎನ್‌.ಡಿ.ಟಿ.ವಿ ಯನ್ನ ನೋಡತೊಡಗಿದ. ಅದರಲ್ಲಿ ಮದುವೆಗಿಂತ ಮೊದಲು ಲೈಂಗಿಕ ಸಂಪರ್ಕ ಇಟ್ಟುಕೊಳ್ಳಬೇಕೊ ಅಥವಾ ಮದುವೆಯ ನಂತರವೋ ಎನ್ನುವದರ ಬಗ್ಗೆ ಬಿಸಿಬಿಸಿ ಚರ್ಚೆ. ಮಧ್ಯರಾತ್ರಿ ಮೀರಿದಮೇಲೆಯೆ ಇಂತಹ ಚರ್ಚೆಗೊಂದು ಮಜ ಅನ್ನಿಸಿತು. ಬೋಳಿಮಕ್ಕಳಾ ಮದುವೆಗಿಂತ ಮೊದಲೆ ಮಾಡಿಕೊಳ್ಳಿ. ಮದುವೆಯಾದಮೇಲೆ.. ಅದಕ್ಕೆ ಟೈಂ ಎಲ್ಲಿದೆ ಎಂದು ಹಲ್ಕಟ್‌ ನಗೆಯಾಡಿದ. ಮತ್ತೆ ಚಾನಲ್‌ ಬದಲಾಯಿಸಿದ. ಅಲ್ಲಿ ಮಿಕಾ ಸಿಂಗ್‌ ರಾಖಿಸಾವಂತಳಿಗೆ ಮುತ್ತು ಕೊಟ್ಟಿದ್ದರ ಬಗ್ಗೆ ಚರ್ಚೆನಡೆಯುತ್ತಿತ್ತು. ಕೊಡಿಸಿಕೊಂಡವಳು ಅವಳು.. ಕೊಟ್ಟವನು ಇವನು, ಮಧ್ಯಇವರದ್ದ್ಯಾಕೆ ರಾದ್ದಾಂತ ತರಲೆ ಎನ್ನಿಸಿ ಟಿ.ವಿ ಆಫ್‌ ಮಾಡಿದ. ನಾಳೆ ಬೆಳಗ್ಗೆ ಅವಳೇನಾದರೂ ಶಾಂತವಾಗಿ ಶಾಲೆಯ ಫೀಸ್‌ ಕಟ್ಟಬಹುದೆ? ಮತ್ತೆ ತಿರುಗಿ ಪ್ರಶ್ನೆ ಅಲ್ಲಿಗೆ ಬಂದು ನಿಂತಿತು.

ಬಟ್ಟೆ ಬದಲಿಸಿ ಗಸಗಸ ಎಂದು ಹಲ್ಲು ತಿಕ್ಕಿ ಬಳಕ್‌ ಎಂದು ತುಪ್ಪಿ ಯಾಕೋ ಅವಳ ಮೇಲೆ ಸಿಟ್ಟಿಗೆ ವಾಶಬೇಸಿನಿನಲ್ಲಿ ಉಚ್ಚೆಹೋಯ್ದು ಮತ್ತೆ ನೀರು ಬಿಟ್ಟು ಸಾಧ್ಯವಾದಷ್ಟು ಮೆತ್ತಗೆ ರೂಂನ ಭಾಗಿಲು ತೆಗೆದು ನಿಧಾನವಾಗಿ ಸೊಳ್ಳೆ ಪರದೆ ಸರಿಸಿ ಮಲಗಲು ಹೊರಟವನಿಗೆ, ಅವಳು ಎದ್ದುಕುಳಿತು ಪಾಪುವಿನ ಹಣೆಗೆ ಒದ್ದೆ ಬಟ್ಟೆ ಇಡುತ್ತಿರುವದ ಕಂಡಿತು. ಅರೆ ಎಚ್ಚರದಲ್ಲಿ, ಪಾಪು ಪಪ್ಪ ಎಂದು ಮತ್ತೆ ತಿರುಗಿ ಮಲಗಿತು. ಮತ್ತೆ ಅವಳನ್ನ ಮಾತನಾಡಿಸುವ ಧೈರ್ಯಬರದೇ ಮಾತನಾಡದೆ ಇರಲೂ ಆಗದೆ ಅವಳ ಭುಜಗಳನ್ನ ನಿಧಾನವಾಗಿ ಮುಟ್ಟಿದ. ಅವಳು ಅವನ ಕೈಯನ್ನ ಸರಕ್ಕನೆ ತೆಗೆದು ಈಚೆ ತಳ್ಳಿ ‘ನೋಡು ನನಗೊಂದು ತಾಸಾದರೂ ನಿದ್ದೆ ಮಾಡಬೇಕು. ಬೆಳಗಿನಿಂದ ದುಡಿದು ಕಡಿದು ಹಾಕುತ್ತಿದ್ದಿಯಲ್ಲ. ಆಯ್ತಲ್ಲ ಎಲ್ಲವು, ಕುಡಿತವಾಯಿತು, ಸ್ನೇಹಿತರ ಜೊತೆ ಮಾತಾಯಿತು ಷೇರುಮಾರುಕಟ್ಟೆಯಾಯಿತು.. ಒಂದು ದಿನವಾದರೂ ನನಗೇನಾಗುತ್ತದೆ ಎಂದು ಕೇಳಿದ್ದಿಯಾ ಈಗ ಈ ಒಲಿಸುವ ಹಟ ಬಿಡು..ಬೇಕಿದ್ದರೇ ಪಾಪುಗೆ ಸ್ವಲ್ಪಹೊತ್ತು ಒದ್ದೆ ಬಟ್ಟೆಹಾಕು..’ ಇವನಿಗೆ ಬೆನ್ನುಹಾಕಿ ದಬಕ್‌ ಎಂದು ಮಗ್ಗಲು ಬದಲಾಯಿಸಿ ಮಲಗಿದಳು.

ಕರೆಂಟ್‌ ಹೊಗಿರಬೇಕು, ಮೇಲೆ ತಿರುಗುವ ಫ್ಯಾನ್‌ ನಿಂತು ಸೊಳ್ಳೆಪರದೆಯ ಒಳಗೆ ಅಸಾಧ್ಯ ಸೆಕೆ ಹುಟ್ಟಿದಂತೆ ಪರಪರನೆ ಮನೋಹರ ಬೆನ್ನು ಕೆರೆದುಕೊಂಡ.

ಮತ್ತೆ ಬೆಳಗಾಯಿತು.

‘ಬೆಳಗಾಯ್ತಲ್ಲ’ ಅಂದ. ಅವಳು ಮಾತನಾಡದೆ ಎದ್ದು ಗಸಗಸನೆ ಹಲ್ಲು ತಿಕ್ಕಿ ಮುಖಕ್ಕೆ ಬಳಬಳ ಎಂದು ನೀರು ಬಡಿದುಕೊಂಡು ಬೆಳಗಿನ ಧಾವಂತಕ್ಕೆ ಸಿದ್ದಳಾದಳು. ಪಾಪುವಿನ ಮೈಮುಟ್ಟಿದರೆ ಜ್ವರ ಇಳಿದಂತಿತ್ತು. ಮೈಮುಟ್ಟಿದ್ದೆ ಕಣ್ಣು ಬಿಟ್ಟು ‘ಸ್ಕೂಲನಲ್ಲಿ ಮಿಸ್‌ ಫೀೕಸ್‌ ಕಟ್ಟಿಲ್ಲ ಎಂದು ನನ್ನನ್ನಾ ಹೊರಗೆ ನಿಲ್ಲಿಸಿದರು ಪಪ್ಪಾ’ ಅಂದಿತು.

ಮನೋಹರನಿಗೆ ಎಲ್ಲಿಲ್ಲದ ಸಿಟ್ಟು ಬಂದು ಅಡುಗೆ ಮನೆಗೆ ನುಗ್ಗಿ ಮಾತಿಗೊಂದು ಎಳೆ ಸಿಕ್ಕಹಾಗೆ ‘ಫೀಸ್‌ ಕಟ್ಟದಿದ್ದರೆ ಅವರು ನಮಗೊಂದು ನೋಟಿಸ್‌ ಕಳುಹಿಸಲಿ ಅಥವಾ ಇನ್ನೊಂದಿಷ್ಟು ದಂಡಹಾಕಲಿ ಮಕ್ಕಳನ್ಯಾಕೆ ಹೊರಗೆ ನಿಲ್ಲಿಸಬೇಕು’ ಅಂದ. ‘ಅದನ್ನ ನನ್ನ ಹತ್ತಿರ ಯಾಕೆ ಕೇಳುತ್ತಿ ಹೋಗಿ ಸ್ಕೂಲನವರನ್ನೆ ಕೇಳು’ ಎಂದು ಅವಳು ಚಪಾತಿಯನ್ನ ಇನ್ನೊಂದಿಷ್ಟು ಗಟ್ಟಿಯಾಗಿ ಲಟ್ಟಿಸಿದಳು.

ಮನೋಹರ ಮತ್ತೆ ಬೆಡ್‌ ರೂಂ ಸೇರಿ ಪಾಪುವನ್ನ ಎತ್ತಿಕೊಂಡು ಬಾತರೂಂಗೆ ತಂದು ದಬದಬನೆ ನೀರು ಹೊಯ್ದ. ಮನೋಹರ ಮುಟ್ಟಿದಲೆಲ್ಲ ಪಾಪುವಿಗೆ ಕಚಗುಳಿ ಹತ್ತಿ ನಗೆಯಾಡುತ್ತ ‘ಪಪ್ಪಾ ಪೋಕೆಮನ್‌ ಆಡುತ್ತಿಯಾ, ನೀನು ಚಾರಿಜಾರ್ಡ್‌ ನಾನು ಪಿಜ್ಞಚು’ ಅಂದಿತು. ರಾತ್ರಿ ಇಡಿ ಜ್ವರದಲ್ಲಿ ಬಳಲಿದ್ದು ಇದೆನಾ ಎನ್ನಿಸಿ ಇವನು ಒಂದಿಷ್ಟು ಗೆಲುವಾದ. ಸ್ನಾನ ಮುಗಿಸಿ ತಿಂಡಿ ತಿನ್ನಲಾರೆ ಎಂದು ರಚ್ಚೆ ಹಿಡಿದ ಪಾಪುವಿಗೆ ಹೇಗೆ ತಿಂಡಿ ತಿನ್ನಿಸುವದು ತಿಳಿಯದೆ ರಗಳೆ ಎದ್ದಂತೆ ‘ಏಯ್‌ ತಲೆ ಹಾಳಾಗಿದೆಯೋ ನಿನಗೆ.. ತಿಂಡಿ ತಿನ್ನದಿದ್ದರೆ ನೋಡು ಒಂದು ತಟ್ಟಿ ಬಿಡುತ್ತೇನೆ’ ಎಂದ. ಪಾಪು ಹೆದರಿಕೊಂಡಂತೆ ಅಳುವ ಮುಖಮಾಡಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more