• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕತ್ತಲು

By Staff
|

ಕೆಲಸದ ಒತ್ತಡ, ಅವಶ್ಯಕತೆಗಳು, ನಗರದ ಜೀವನ ಶೈಲಿ ಮನುಷ್ಯನನ್ನು ಯಾವ ಸ್ಥಿತಿಗೆ ತಲುಪಿಸಬಲ್ಲವು ಎಂಬುದಕ್ಕೆ ಈ ಕತೆ ನಿದರ್ಶನ. ದ್ವಂದ್ವ, ತರ್ಕ, ಏನೇನೋ ಲೆಕ್ಕಾಚಾರಗಳು ಕಥಾನಾಯಕನನ್ನು ಎಲ್ಲಿಗೋ ತಂದು ನಿಲ್ಲಿಸುತ್ತವೆ. ಒಂದರ್ಥದಲ್ಲಿ ನಮ್ಮ ಪಯಣ, ಕತ್ತಲಿನೆಡೆಗೆ.

  • ಆಶೋಕ ಹೆಗಡೆ, ಬೆಂಗಳೂರು

ashokgunjagod@yahoo.com

ದಿನವೊಂದು ಹೀಗೆಯೆ ಶುರುವಾಗಬಾರದು ಎಂದು ಅವನು ಪ್ರತಿ ಬಾರಿ ಹೇಳಿಕೊಂಡರೂ, ಯಾಕೋ ದಿನ ಮಾತ್ರ ಎಂದಿನಂತೆಯೆ ಮತ್ತೆ ಪ್ರಾರಂಭವಾಗಿ ಬಿಟ್ಟಿತ್ತು. ಹೊರುಡುವಾಗಲೆ ಅಸಾಧ್ಯಗಡಿಬಿಡಿ. ಹಾಲಿನವನು ಹಾಲಿಡದೆ, ಪಕ್ಕದ ಅಂಗಡಿಗೆ ಓಡಿ ಹಾಲು ತಂದಿದ್ದಾಯ್ತು. ಟಾಯಲೆಟ ಸೀಟಿನ ಮೇಲೆ ಕುಳಿತು ಪೇಪರನಲ್ಲಿ ಅಖಂಡ ಭ್ರಷ್ಟರ ಅವರ ವಂಧಿಮಾಗಧರ ಚರಿತ್ರೆಯನ್ನ ಓದಿದ್ದಾಯಿತು. ಯಾವುದೋ ಸಿನೆಮಾ ನಾಯಕನಿಗೆ ಹುಟ್ಟಿದ ಎಷ್ಟನೆಯದೋ ಮಗುವಿಗೆ ಹೆಸರೂ ಸೂಚಿಸಿ ಬಹುಮಾನ ಗೆಲ್ಲಿ ಎನ್ನುವ ಜಾಹಿರಾತು ಓದುತ್ತ, ಅದೇ ಗಡಿಬಿಡಿಯಲ್ಲಿ ಮಗನಿಗೆ ಸ್ನಾನ ಮಾಡಿಸುತ್ತ ಮಧ್ಯ ಮಧ್ಯ ಹೊಡೆದುಕೊಳ್ಳುವ ಬ್ಲಾಕ್‌ ಬೆರಿಯಲ್ಲಿ ಕೆಲಸ ಮುಗಿಸುತ್ತಾ, ತಿಂಡಿಯ ತಟ್ಟೆಯ ಮುಂದೆ ಕುಳಿತವನಿಗೆ ಯಾವ ಮಾತು ಬೇಡ ಅನ್ನಿಸುತ್ತಿತ್ತು. ಊರಿನಿಂದ ಅಮ್ಮನ ಪತ್ರ ಬಂದಿದೆ ರಜೆಗೆ ಬರುತ್ತಿರಾ ಎಂದು ಕೇಳಿದ್ದಾರೆ. ಪೋನಿಸಿ ಹೇಳು ಅಂದ ಹೆಂಡತಿಗೆ ಉತ್ತರಿಸುವಷ್ಟು ವ್ಯವಧಾನವೂ ಅವನಲ್ಲಿ ಉಳಿದಿರಲಿಲ್ಲ.

‘ಆ ಉತ್ತರವನ್ನು ನಾನೇ ಹೇಳ ಬೇಕಾ, ನೀನೆ ಹೇಳಬಹುದಿತ್ತಲ್ಲ ಪೋನಿರಲಿಲ್ಲವ ಮಾತಾಡಲಿಕ್ಕೆ’ ಎಂದು ಅವಳ ಮೇಲೆ ಹರಿಹಾಯ್ದ ಮನೊಹರ. ಅವಳು ಸಿಂಕನಲ್ಲಿ ಕೈ ತೊಳೆಯುತ್ತಿದ್ದವಳೂ, ‘ಇತ್ತೀಚಿಗೆ ಏನಾಗುತ್ತಿದೆಯೋ ನಿನಗೆ ಮಾತನಾಡಿದರೆ ಮೈ ಮೇಲೆ ಬರುತ್ತಿ.. ನೀನುಂಟು ನಿನ್ನ ಅಮ್ಮ ಉಂಟು, ಮಧ್ಯ ನಾನ್ಯಾಕೆ ಸಿಕ್ಕಿ ಹಾಕಿಕೊಳ್ಳಲಿ. ಬೇಕಿದ್ದರೆ ಪೋನ ಮಾಡಿ ಹೇಳು, ಬೇಡದಿದ್ದರೆ ಬಿಡು. ನನಗೆ ಕೆಲಸಕ್ಕೆ ಹೊತ್ತಾಯಿತು’ ಎಂದು ಅವನನ್ನ ಅವನ ಪ್ಲೇಟ ಮುಂದೆಯೆ ಬಿಟ್ಟು ಚಪ್ಪಲಿ ಮೆಟ್ಟಿ ಹೊರನಡೆದಳು.

ಎದ್ದು ದಾರಿಗೆ ಬಿದ್ದಿವನಿಗೆ ಮತ್ತೆ ರೇಜಿಗೆ ಎದ್ದು ಬಿಟ್ಟಿತ್ತು. ಎಫ್‌ ಎಮ್‌ ರೇಡಿಯೋದಲ್ಲಿ ರೂಟ ಒಂದರಲ್ಲಿ ಸುನಯನಳ ಬಡಬಡಿಕೆಯ ಮಾತು, ತರವಾರಿ ಜಾಹಿರಾತುಗಳು, ಅದಕ್ಕೆ ಬರುವ ಅಸಂಖ್ಯಾತ ಕರೆಗಳು.. ನನ್ನ ಅಣ್ಣನಿಗೆ, ನನ್ನ ಮಿಂಡನಿಗೆ ಈ ಹಾಡುಹಾಕಿ.. ಚೊ ಚ್ವಿಟ ಮಾಧುರಿಯ ಮುಂದೆ ಹುಟ್ಟ ಬಹುದಾದ ಮೂರನೆ ಮಗುವಿಗೆ ಇಗಲೇ ಹೆಸರಿಡಿ, ಪೋರ್‌ಂ ಮಾಲಿನಲ್ಲಿ ಸಲ್ಮಾನ್‌ ಖಾನ್‌ ಜೊತೆ ಒಂದು ಐಸಕ್ರಿಮ್‌ ತಿನ್ನುವ ಸದಾವಕಾಶವನ್ನ ಗೆಲ್ಲಿರಿ.. ರೇಜಿಗೆ ಮತ್ತು ಹೆಚ್ಚಾದಂತೆ ರೇಡಿಯಾ ಆಫ್‌ ಮಾಡಿ ಹೊರನೋಡಿದರೆ, ಹೊರಗೆ ವಾಹನದ ದಟ್ಟನೆ. ಹೊಗೆ ಧೂಳು. ಪಿರ್‌ ಎಂದು ಸೀಟಿ ಹೊಡೆಯುವ ಟ್ರಾಫಿಕ್‌ ಪೋಲಿಸು. ಅವನನ್ನ ಕಂಡರೂ ಕಾಣದಂತೆ ಮುನ್ನುಗ್ಗುವ ವಾಹನ ವೀರರು, ಮಾರು ಮಾರಿಗೆ ಕೆಂಪು ದೀಪ, ಎಲ್ಲಿಂದಲೋ ಎಲ್ಲಿಗೋ ಓಡುವ ಬಿ.ಟಿ.ಏಸ್‌ ಬಸ್ಸುಗಳು, ಸ್ಕೂಟರ, ರಿಕ್ಷಾ, ಸೈಕಲ್‌, ಲಾರಿ, ಅವುಗಳೆಲ್ಲದರ ಮಧ್ಯವೇ ಹರಸಾಹಸದಿಂದ ತುಂಬಿದ ಲೋಡ್‌ ಎಳೆಯುವ ಮುದಿ ಎತ್ತುಗಳು, ಮಧ್ಯ ನುಗ್ಗಿಬಿಡುವ ಜನ.. ಎಲ್ಲದರಿಂದ ಹುಟ್ಟಿದ ಕಿರಿಕಿರಿಯನ್ನ ಸಹಿಸಲಾರದಂತೆ ತಲೆ ಒತ್ತಿಕೊಂಡ.

ಈವತ್ತಾದರೂ ಮನೆಗೆ ಬೇಗನೆ ಬರಬಹುದೆ ಎಂದುಕೊಂಡು ಕಾರ್‌ನ ಕನ್ನಡಿಯಲ್ಲಿ ನೋಡಿದರೆ ಹಿಂದಿನ ಸೀಟಿನ ಮೇಲಿದ್ದ ಯಾವುದೊ ಚೀಟಿ ಕಂಡಿತು. ಅದನ್ನ ನೋಡಿದ್ದೆ, ಈಗ ಮೂರು ದಿನದ ಹಿಂದೆ ಪಾಪು, ಪಪ್ಪ ಟೀಚರ್‌ ನಿನಗೆ ಕೊಟ್ಟಿದ್ದಾರೆ ಎಂದು ನಕ್ಕಿದ್ದು ನೆನಪಾಯಿತು. ಆಫೀಸಿನಲ್ಲಿ ಓದಿದರಾಯಿತೆಂದು ಹಿಂದಿನ ಸೀಟಿನ ಮೇಲೆ ಬಿಸಾಕಿದ್ದು ಅದು ಮೂರು ದಿನದಿಂದಲೂ ಅಲ್ಲಿಯೆ ಇತ್ತು. ಚೀಟಿ ತೆಗೆದು ನೋಡಿದರೆ, ಅದು ಶಾಲೆಯಿಂದ ಫೀಸ್‌ ತುಂಬಲು ಬಂದ ಕೊನೆಯ ನೋಟಿಸಾಗಿತ್ತು.

ಈ ನೋಟಿಸ್‌ ಮುಟ್ಟಿದ ಒಂದು ದಿನದೊಳಗಾಗಿ ಹಣ ಪಾವತಿಸಲು ತಪ್ಪಿದರೆ, ನಿಮ್ಮ ಮಗುವಿನ ಶಾಲೆಯ ನೊಂದಣಿಯನ್ನ ರದ್ದು ಪಡಿಸಲಾಗುವದನ್ನ ಈ ಮೂಲಕ ತಿಳಿಸುತ್ತಿದ್ದೇವೆ. ಇತಿ, ಪ್ರಿನ್ಸಿಪಾಲ್‌ ಬೋಳಾರರ ದೊಡ್ಡ ಸಹಿ. ಅರೆ, ಆಗಲೆ ಎರಡು ದಿನವಾಯಿತು ನಾಳೆಯಾದರು ಫೀೕಸ್‌ ಕಟ್ಟಿ ಬಿಡಬೇಕು ಅಂದುಕೊಂಡ. ಈ ಎಲ್ಲ ಗಜಿಬಿಜಿಯ ಮಧ್ಯವೇ ಎಲೆಕ್ಟ್ರಾನಿಕ ಸಿಟಿ ತಲುಪಿ ಕಂಪನಿಯ ಒಳಗೆ ಕಾಲಿಟ್ಟವನಿಗೆ ನೂರೆಂಟು ರಗಳೆಗಳು ಹತ್ತಿಕೊಂಡು ಬಿಟ್ಟಿದ್ದವು. ಮಿಟಿಂಗ, ಪ್ರೋಜೆಕ್ಟ ಪ್ಲಾನಿಂಗ, ಕೆಲಸಕ್ಕೆ ಬರುವವರಿಗಾಗಿ ವಾಕ್‌ ಇನ್‌ ಸಂದರ್ಶನ, ಹೊಸದಾಗಿ ಸೇರುತ್ತಲೆ ಇರುವವರ ಇನಡಕ್ಷನ್‌ ಮಧ್ಯ ಕ್ಲೈಂಟ ಜೊತೆ ಮಾತುಕತೆ, ಪ್ರಪೋಸಲ ಹೀಗೆ ಒಂದಕ್ಕೊಂದು ಕೊಂಡಿ ಬಿಗಿದುಕೊಂಡು ಎಲ್ಲ ಮುಗಿಸಿ ಹೊರಡಬೇಕು ಎಂದು ತಯಾರಾಗುತ್ತಿದ್ದವನಿಗೆ, ಬಾಸ್‌ ಕೆ.ಕೆ ಯಿಂದ ಪೋನು.

ಮನೋಹರ ಒಂದು ಹೊಸ ಕ್ಲೈಂಟಗಾಗಿ ಒಂದು ಪ್ರಸಂನಟೆಶನ ಬೇಕು, ಎಂ. ಡಿ. ಪೋನಿಸಿದ್ದರು. ನಾನು ಬೇರೆಯದೆ ಒಂದು ಕೆಲಸದ ಮೇಲಿದ್ದೇನೆ. ದಯಮಾಡಿ ಮುಗಿಸುತ್ತಿಯಾ? ಅದು ಪ್ರಶ್ನೆ ಅನ್ನುವ ಹಾಗಿರಲಿಲ್ಲ. ಸರಿ, ಮಾಡುತ್ತ ಕುಳಿತವನಿಗೆ ಹೊತ್ತು ಹೋದದ್ದೆ ಅರಿವಿಗೆ ಬರಲಿಲ್ಲ. ಎಲ್ಲ ಮುಗಿದು, ಲ್ಯಾಪಟಾಪ್‌ನ ಸ್ವಿಚ್ಚ್‌ ತೆಗೆದಾಗ ರಾತ್ರಿ ಹತ್ತು ಗಂಟೆ. ಈ ಗಲಾಟೆಯ ಮಧ್ಯೆ ಅವಳಿಂದ ಬಂದ ಮಿಸ್ಸಡ್‌ ಕಾಲ್‌ಗೆ ತಿರುಗಿ ಪೋನಿಸುವದು ಮರೆತುಹೋಗಿತ್ತು. ಈಗ ಮಾಡೋಣವೆ ಅಂದುಕೊಂಡವನಿಗೆ ಬರಬಹುದಾದ ಉತ್ತರಕ್ಕೆ ಅಂಜಿಕೊಂಡಂತೆ ಸುಮ್ಮನೆ ಮೊಬೈಲ್‌ ಆಫ್‌ಮಾಡಿ ‘ಹೇ ನಾಳೆ ಸಿಗುತ್ತೇನೆ’ ಅಂದ ಸಹೊದ್ಯೊಗಿಗಳಿಗೆ. ‘ಅರೆ ಯಾರ್‌, ಈ ರಾತ್ರಿ ಹತ್ತಕ್ಕೆ ಮನೆಯಲ್ಲಿ ಕಾಯುವದು ಅಷ್ಟರಲ್ಲಿಯೆ ಇದೆ ಬಾ, ಸುಮ್ಮನೆ ನಮ್ಮ ಜೊತೆ ಬಾ.. ನಾವು ಹೋಗುವ ದಾರಿಯಲ್ಲಿಯೆ ಹೊಸತಾದ ಡಾಬ ಒಂದು ಬಂದಿದೆ ಸ್ವಲ್ಪ ಊಟ ಮಾಡಿ, ಬೇಕಿದ್ದರೆ ಒಂದು ಪೆಗ್‌ ಜ್ಯಾಕ್‌ ಡ್ಯಾನಿಯಲ್‌ ಹಾಕಿ ಮನೆಗೆ ಹೋದರಾಯಿತು ಅಂದರು. ಎಂದವರೇ ಹೆಚ್ಚುಕಡಿಮೆ ಅವನನ್ನ ದಬ್ಬಿಕೊಂಡೆ ಹೋದರು.

ರಾತ್ರಿ ಹನ್ನೊಂದರಲ್ಲಿಯೂ ಗಜಿಬಿಜಿ ಗುಡುವ ಹೊಸೂರಿನ ರೋಡಿನಲ್ಲಿ. ಕಿಕ್ಕಿರಿದ ಲಾರಿ ಬಸ್ಸು ಸ್ಕೂಟರ ಕಾರಿನ ಮದ್ಯ ತೂರಿಕೊಂಡು ಪ್ರೋಜೆಕ್ಟ ಕೊಡದ ಗಿರಾಕಿಗೆ ಬಯ್ಯುತ್ತ, ಪ್ಲೈಒವರ ಕಟ್ಟದ ಕರ್ನಾಟಕದ ಘನ ಸರಕಾರವನ್ನು ಬಯ್ಯುತ್ತ, ಐಐಎಮದ ಹುಡುಗರಿಗೆ ಪಾಠ ಹೇಳಿದ ಲಾಲು ಪ್ರಸಾದರ ಬಗ್ಗೆ ಕೊರೆಯುತ್ತ, ಸಂದೀಪ, ‘ಈ ದೇಶ ಯಾವ ಮಟ್ಟಕ್ಕೆ ಇಳಿಯಿತು’ ಎಂದು ಕ್ಯಾಕರಿಸಿ ರಸ್ತೆಗೆ ತುಪ್ಪಿದ. ‘ಬೆಂಚೊದ್‌.. ಆ ಸಲಮಾನ್‌ ಖಾನನಿದ್ದಾನಲ್ಲ, ಮುಂಬೈಯಲ್ಲಿ ನಮ್ಮ ಬಿಲ್ಡಿಂಗ ಮುಂದೆ ಕುಡಿದ ಮತ್ತಿನಲ್ಲಿ ಗಾಡಿ ಓಡಿಸಿ ಮಲಗಿದವರನ್ನ ಕೊಂದಿದ್ದು, ಹೇಗೆ ಮಜವಾಗಿ ಇದ್ದಾನೆ ನೊಡು’ ಅಂದ ಶಮೀರ್‌.

‘ಏ ಬಿಡೋ ಸಲಮಾನ್‌ ಖಾನ್‌ದೇನು ನಮ್ಮ ಧಾರವಾಡದಲ್ಲಿಯೆ ಕೊಂದವರು, ಹೊರಗೆ ಉಂಡಾಡಿಕೊಂಡು ಇದ್ದಾರೆ.. ಹೇಳಬೇಕೆಂದರೆ, ವರುಷಕ್ಕೆ ಒಂದು ಐವತ್ತು ಜೈಲನ ಹೊಸತಾಗಿ ಕಟ್ಟಬೇಕು’ ಅಂದ ಮೂಲಿಮನಿ. ‘ ಹೇಳಬೇಕೆಂದರೇ ಹೇಗಿದ್ದಾಳೋ ಮಲ್ಲಿಕಾ ಶರಾವತ್‌.. ಮದುವೆಯಾದರೆ ಅಂತವಳನ್ನ’ ಅಂದ ಸಂದೀಪ. ‘ಅಬೆ, ಇರೊ ಎರಡು ಬೀಜನೂ ಓಡೆಸಿಕೊಳ್ಳುತ್ತಿ’ ಎಂದು ಮತ್ತೊಂದು ಪೆಗ್‌ ಏರಿಸಿದ ಮೂಲಿಮನಿ.

ಒಂದಕ್ಕೊಂದು ಕೊಂಡಿ ಇರದ ಮಾತಿಗೆ ಮಾತು ಸೇರಿಸುತ್ತ, ಮಸಾಲೆ ಶೆಂಗಾ ಮಸಾಲೆ ಪಾಪಡ ತರಿಸಿ, ಒಂದು ಚಿಕನ್‌ ಬಿರ್ಯಾನಿ ತಿಂದು, ಜಾಕಡ್ಯಾನಿಯಲ್ಲನ ಹುಳಿತೇಗು ತೇಗಿ, ಹಳೆಯ ಪ್ರೆಯಸಿಯರನ್ನೆಲ್ಲ ಹೊಸತಾಗಿ ಜ್ನಾಪಿಸಿಕೊಂಡು ಅವರ ಬಗ್ಗೆ ಒಂದಿಷ್ಟು ಹಗುರವಾಗಿ ಮಾತನಾಡಿ, ಮನೋಹರ ಮನೆ ತಲುಪಿದಾಗ ರಾತ್ರಿ ಒಂದು ಘಂಟೆಯ ಮೇಲಾಗಿತ್ತು.

ಅರ್ಧನಿದ್ದೆ ತೂಕಡಿಕೆಯಲ್ಲಿದ್ದ ವಾಚಮನನ ಹೆಗಲು ಮುಟ್ಟಿದರೆ, ‘ಬ್ಯಾಂಚೋದ್‌’ ಎಂದು ದಡಬಡಿಸಿ ಎದ್ದು ಕುಳಿತ. ಮನೋಹರನ ಕಂಡಿದ್ದೆ ‘ಸಾರಿ ಸರ, ಈಗಷ್ಟೆ ಒಮ್ಮೆ ಗೇಟನೆಲ್ಲ ನೋಡಿ ಕುಳಿತುಕೊಂಡಲ್ಲೆ ನಿದ್ದಿ ಬಂದ ಹಾಗಾಯ್ತು, ನನಗೆ ಸಣ್ಣ ಸಪ್ಪಳವಾದರು ಎಚ್ಚರ ಆಗುತ್ತೆ’ ಅಂದ. ‘ಕಾರ್‌ ಬಂದು ನಿಂತಿರುವದೇ ಎಚ್ಚರ ಆಗಿಲ್ಲ ನಿನಗೆ.. ಇನ್ನು ಸಣ್ಣ ಸಪ್ಪಳಕ್ಕೆ ಆಗುತ್ತೆ ಮೊದಲು ಗೇಟ ತೆಗೆ’ ಎಂದು ಗದರಿದ.

ಕಣ್ಣು ಒರೆಸುತ್ತ ಗೇಟನ್ನ ತೆಗೆಯುವದನ್ನೆ ಅಸಹನಿಯತೆಯಿಂದ ಕಾದು, ಕಾರು ಒಳಗಿಟ್ಟು, ಒಂದೊಂದೆ ಮೆಟ್ಟಿಲು ಹತ್ತ ತೊಡಗಿದ. ಎದುರಿನ ಮನೆಯಲ್ಲಿರುವ, ಕಾಲಸೆಂಟರಿನಲ್ಲಿ ಕೆಲಸ ಮಾಡುವ ವಿಭಾ ಮೆಟ್ಟಿಲಿಳಿದು ಬರುವದು ಕಂಡಿತು. ಸ್ವಲ್ಪ ಸರಿದು ನಿಂತ. ಆ ಮಧ್ಯರಾತ್ರಿ ಮೀರಿದ ಹೊತ್ತಿನಲ್ಲೂ ಹಗಲಿನಷ್ಟೆ ಜಾಗ್ರತ ಅವಸ್ಥೆಯಲ್ಲಿದ್ದ ಆಕೆ, ‘ಅಂಕಲ್‌ ನನ್ನದೊಂದು ಬಯೋಡಾಟ ನಿಮಗೆ ಕೊಡಲಾ, ನಿಮ್ಮ ಕಂಪನಿಯಲ್ಲಿ ಯಾವುದಾದರೂ ಸಪೊರ್ಟ ಇಂಜನಿಯರ ಹುದ್ದೆ ಇದ್ದರೆ ಹೇಳಿ’ ಅಂದಳು. ‘ಕೊಡು, ಕೊಡು, ನೂರೆಂಟು ಕೆಲಸ ಇದ್ದೆಇರುತ್ತದಲ್ಲ’ ಎಂದು ಮಾತಿಗೆ ನಿಲ್ಲಲು ತೊಡಗಿದ ಅವನ ಮಾತನ್ನು ಅವಳನ್ನು ಕರೆದೊಯ್ಯಲು ಬಂದ ಟಾಟ ಸುಮೋದ ಹಾರನ್‌ ಮುರಿಯಿತು.

‘ನಾನು ನಿಮ್ಮ ಬಳಿ ನಾಳೆ ರಾತ್ರಿ ಮಾತಾಡುತ್ತೇನೆ ಅಂಕಲ್‌’ ಎಂದು ಉಲಿದ ಲಲನಾಮಣಿ ದಡಬಡಿಸಿ ಉಳಿದ ಮೆಟ್ಟಿಲುಗಳನ್ನ ಇಳಿದು ಹೋದಳು. ಅವಳ ಹಿಂದೆ ಲ್ಯಾವಂಡರಿನ ವಾಸನೆ, ಕೆವಿನ್‌ ಕ್ಲೈವದ ಕೂಲ್‌ ವಾಟರಿನ ಸುಗಂದ ಮೂಗಿಗೆ ಬಡಿಯಿತು. ಮನೋಹರ ಉಳಿದ ಮೆಟ್ಟಿಲನ್ನ ಒಂದು, ಎರಡು, ಮೂರು ಎಂದು ಎಣಿಸುತ್ತ ಹತ್ತಿದ. ಅರ್ಧ ಮೆಟ್ಟಿಲು ಹತ್ತಿದವನು, ಲಿಫ್ಟನಲ್ಲಿ ಬಂದಿದ್ದರೆ ಬೇಗನೆ ಬರಬಹುದಿತ್ತು ಅಂತ ಅನಿಸಿದರೂ ಯಾಕೋ ಸ್ವಲ್ಪ ತಡವಾಗಿಯೆ ಮನೆಗೆ ಸೇರಿದರೆ ಈ ಸ್ಥಿತಿಯಲ್ಲಿರುವ ತನಗೆ ಒಳ್ಳೆಯದು ಅನ್ನಿಸಿ ಮೆಟ್ಟಿಲು ಹತ್ತುವದನ್ನ ಮುಂದುವರಿಸಿದ.

ಮಲಗಿದ್ದವಳನ್ನ ಎಬ್ಬಿಸಬಾರದು ಎಂದು ಎಷ್ಟೆ ಎಚ್ಚರ ವಹಿಸಿ, ಮನೆಯ ಕದದ ಕೀ ತಿರುಗಿಸಿದರೂ ದಡಾರ್‌ ಎಂದು ಬಾಗಿಲು ತೆಗೆದುಕೊಂಡಿತು. ಶೂ ಬಿಚ್ಚಿ, ಶೂ ರ್ಯಾಕಿಗೆ ತುರುಕಿ ಮಂದ ಬೆಳಕಲ್ಲಿ ಮುಂದೆ ಅಡಿ ಇಟ್ಟವನು ಹೆಂಡತಿ ಎದುರಿಗೆ ಕಂಡು ತಡವರಿಸಿ ನಿಂತ. ಅವಳು ಕಣ್ಣು ಉಜ್ಜುತ್ತ ನಿಂತಿರುವದ ಕಂಡು, ಮುಂದಿಟ್ಟ ಹೆಜ್ಜೆಯನ್ನ ಹಿಂದಿಟ್ಟು, ‘ಇನ್ನು ಮಲಗಲಿಲ್ಲವಾ’ ಅಂದ.

‘ಈಗ ಬಂದಿತೆ ಮನೆಯ ಯಜಮಾನರ ಸವಾರಿ. ಏನಾಗಿತ್ತು ನಿನಗೆ ಬೇಗನೆ ಮನೆಗೆ ಬರಲು. ಆರು ಗಂಟೆಯಿಂದ ಒಂದೆ ಸಮನೆ ನಿನ್ನ ಮೊಬೈಲಿಗೆ ಪೋನಾಯಿಸಿದೆ ನಾನು. ಬಿಡುವಾದಾಗ ತಿರುಗಿ ಒಂದು ಪೋನಾದರೂ ಮಾಡಬೇಡವಾ..ಎಷ್ಟು ಕಾಯಬೇಕು ನಾವು.. ನಿನಗ್ಯಾಕೆ ಮೊಬೈಲು, ಹೆಂಡತಿ, ಮಕ್ಕಳು ಮನೆ. ಹಾಸ್ಟೆಲನಲ್ಲಿಯೆ ಇದ್ದು ಬಿಡಬಹುದಿತ್ತು ನೀನು. ನಿನ್ನ ಗೆಳೆಯರ ಜೊತೆ ಮಜಾ ಮಾಡುತ್ತ. ನನ್ನ ಕರ್ಮನೋಡು ನಿನ್ನ ಜೊತೆ ಗುದ್ದಾಡಬೇಕು. ಅದರ ಮೇಲೆ ಗೊತ್ತು ನನಗೆ ಎಲ್ಲ.. ನಿನ್ನ ಈ ತಣ್ಣನೆಯ ಮೆಲಚಾವನಿಸ್ಟಿಕ್‌ ಪಿಗ್‌ದ ಗುಣ. ಸಹಿಸಿಕೊಂಡು ಒಂದು ಮಾತಾಡದೆ ತೆಪ್ಪಗೆ ಇರುತ್ತಿನಿ ನಾನೂ ನೋಡು ಅದಕ್ಕೆ ನೀನು ಹೀಗೆ.. ನಾಲ್ಕು ದಿನಆಯಿತು, ಆಫೀಸಿನಿಂದ ಬರುತ್ತ ಹಣ್ಣು ತರಕಾರಿ ತೆಗೆದುಕೊಂಡು ಬಾ ಎಂದು ಬಂದೆಯಾ,.. ಮೂರುದಿನ ಆಯಿತು ನನ್ನ ಕಾರಿನ ಬ್ಯಾಟರಿಯಾಕೋ ಸರಿಇಲ್ಲ ಎಂದು.. ನೋಡೀಗ ಅದು ಕೆಟ್ಟುಕುಳಿತಿದೆ ಆಫೀಸಿನಲ್ಲಿಯೆ. ಬೇಕಿದ್ದರೆ ನೀನೆ ಹೋಗಿ ತೆಗೆದುಕೊಂಡು ಬಾ..ನಾನು ಎರಡು ಆಟೋ ಹಿಡಿದು, ಒಂದು ಮೈಲಿ ನಡೆದು ಮನೆಸೇರುವದು ಎಷ್ಟು ಆಯಾಸದ ಕೆಲಸ ಎಂದು ಗೊತ್ತಾ ನಿನಗೆ..ಹೋಗಲಿ ನನಗಾಗಿಯೇನು ನೀನು ಮಾಡುವದು ಬೇಡಾ.. ಆದರೆ ಪಾಪುವಿಗೆ.. ಅದರ ಸ್ಕೂಲ ಪೀಸ್‌ ಕಟ್ಟಿದ್ದಿಯಾ? ಇವತ್ತು ಇವತ್ತು..’ ದು:ಖ ಉಕ್ಕಿ ಅವಳ ಕಂಟ ಉಬ್ಬಿಕೊಂಡಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more