• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಪಿಯಾ ಓ ತುಪಿಯಾ

By Staff
|

ಢಂ ಎಂಬ ಶಬ್ದ ಕಿವಿಗೆ ಹೊಕ್ಕಿದ್ದೇ ಇಂದಿರಾ ಗಬಕ್ಕನೆ ಹೊರಗೋಡಿದಳು. ಮನೆ ಮಗನಂತಿದ್ದ ತುಪಿಯಾನ ಹಣೆ ತೂರಿಕೊಂಡು ಗುಂಡು ಮರದ ಬೊಡ್ಡೆಗೆ ಹೊಕ್ಕಿತ್ತು. ಅಡಕೆ ಒಣಗಿಸೋ ತಟ್ಟಿಯ ಚೊಗರಿನ ಬಣ್ಣ ಕರಗಿಹೋಗುವಂತೆ ರಕ್ತ ಚೆಲ್ಲಾಡಿತ್ತು.

‘ಏನ್ರೀ ಎಂತ ಕೆಲ್ಸ ಮಾಡಿದ್ರೀ’ ಎಂದು ಗಂಡನ ಬಳಿಗೆ ಓಡಿದ ಇಂದಿರಾ, ಅವರ ಕೈಯಲ್ಲಿದ್ದ ತೋಪಿನ ಕೋವಿಯನ್ನು ಕಸಿದು ಎಸೆದಳು. ಆದರೆ ಇಂದಿರಳ ಪ್ರಶ್ನೆಗೆ ಉತ್ತರ ಕೊಡುವ ಮನಃಸ್ಥಿತಿಯಲ್ಲಿ ರಘುಪತಿರಾಯರು ಇರಲಿಲ್ಲ. ಒಂದು ಬಗೆ ವಿಷಾದವೋ, ಕೆಲಸ ಮಾಡಿ ಮುಗಿಸಿದ ತೃಪ್ತಿಯೋ, ಸಖನಂತಿದ್ದವನೊಬ್ಬನನ್ನು ಗುಂಡಿಟ್ಟುಕೊಂದ ಪಶ್ಚಾತ್ತಾಪವೋ ಅಂತೂ ಅವರ ತುಟಿ ಮುಚ್ಚಿತ್ತು.

ತುಪಿಯಾಗೂ ಕೆರಗೋಡು ಮನೆತನಕ್ಕೂ ಅಂತಹ ಬಿಟ್ಟಿರಲಾರದ ಸಂಬಂಧವೊಂದು ಇತ್ತು. ಮರಿಯಾಗಿದ್ದಾಗಲೇ ರಾಯರ ಮನೆ ಸೇರಿದ್ದ ತುಪಿಯಾ ನೆಲಸುಟ್ಟು ಅನ್ನಹಾಕಿದ್ದರಿಂದಾಗಿ ಅಲ್ಲೆ ಬೆಳೆದು ದೊಡ್ಡದಾಗಿತ್ತು. ಸುತ್ತಲ ಯಾರ ಮನೆಯಲ್ಲೇ ಕಳವಾದರೂ ರಾಯರ ಮನೆಯಲ್ಲಿ ಸಂಧ್ಯಾನೆ ಸೌಟು ಕಳೆದುಹೋಗದೇ ಇರೋದಕ್ಕೆ ಈ ನಾಯಿಯೇ ಕಾರಣವಾಗಿತ್ತು.

ಕಳ್ಳರ ಬಗೆಗಿನ ಅದರ ಘ್ರಾಣೇಂದ್ರಿಯ ಶಕ್ತಿ ಸುತ್ತಮುತ್ತ ಹತ್ತಳ್ಳಿಗೆ ಪರಿಚಯವಾಗಿದ್ದರಿಂದ ಕಳವು ಮಾಡುವ ಹುಳ್ಳಗಿನ ಮನಸ್ಸಿನವರು ರಾಯರ ಮನೆಯತ್ತ ಸುಳಿಯುತ್ತಿರಲಿಲ್ಲ. ಏಕೆಂದರೆ ವ್ಯಕ್ತಿಯಾಬ್ಬನಲ್ಲಿ ಕಳ್ಳತನದ ಭಾವನೆ ಇದೆಯೆಂದರೇ ಆತನನ್ನು ಮೆಟ್ಟಿಲು ಹತ್ತಲು ಅದು ಬಿಡುತ್ತಿರಲಿಲ್ಲ. ಅಂತವರೊಬ್ಬರು ಬಂದರೆ ಮನೆಯ ಚಿಟ್ಟೆಯ ಅತ್ತಿಂದಿತ್ತ ಓಡಾಡುತ್ತಾ, ಬೌವ್‌ ಬೌವ್‌, ವ್ವೆಕ್‌ ಎಂದು ತುಸು ವಿಕಾರ ಧ್ವನಿ ಹೊರಡಿಸುತ್ತಾ, ದೇಶದ ಗಡಿಯಲ್ಲಿ ಕಾವಲು ಕಾಯುವ ಸಿಬ್ಬಂದಿಗಳಂತೆ ರಕ್ಷಣಾಗೋಡೆ ನಿರ್ಮಿಸುತ್ತಿತ್ತು.

ಹಾಗಾಗಿ ಹುಳ್ಳನ ಮನಸಿನವರು ಅವರ ಮನೆಕಡೆ ಸುಳಿದು, ತಮ್ಮ ಗುಣವನ್ನು ಜಗಜ್ಜಾಹೀರು ಪಡಿಸಿಕೊಳ್ಳಲು ತಯಾರಿರಲಿಲ್ಲ. ಒಂದು ವೇಳೆ ಅವರ ಮನೆಗೆ ಹೋಗಲೇಬೇಕಾದ ಸಂದರ್ಭ ಬಂದರೆ ಉಣುಗೋಲು ಬದಿಯಲ್ಲೇ ನಿಂತು, ‘ನಮ್ಗೆ ಸೂತಕ ಮಾರ್ರೆ, ಒಳಗೆ ಬರೋ ಹಾಗಿಲ್ಲ. ಇಲ್ಲೆ ಬಂದು ಬಿಡಿ’ ಎಂದು ರಾಯರಿಗೋ ಅಥವಾ ಅವರ ಹೆಂಡ್ತಿ ಇಂದಿರೆಗೆ ಹೇಳಿ ಕರೆಯುತ್ತಿದ್ದರು.

ತುಪಿಯಾಗೆ ಸಿದ್ದಿಸಿದ ಅಂತಹ ಅದ್ಭುತ ಶಕ್ತಿಯ ಬಗ್ಗೆ ದಂತಕತೆಗಳೇ ಹುಟ್ಟಿಕೊಂಡಿದ್ದವು. ಕಂತ್ರಿನಾಯಿಯಾದರೂ ಆಲ್ಸೆಶಿಯನ್‌ನ ಕ್ರಾಸ್‌ ಬ್ರೀಡ್‌ನಂತೆ ನೋಡೋಕೆ ಹುಲಿಥರ ಇದ್ದ ತುಪಿಯಾ, ಎದುರಿಗೆ ನಿಂತರೆ ಎಂಥ ಕಲ್ಲುಮನಸ್ಸಿನವರ ಎದೆಯೂ ಢವ ಢವ ಎನ್ನುತ್ತಿತ್ತು. ಕೆಂಪನೆ ಕಣ್ಣುಗಳು, ಸಿಂಹದ ಕೇಸರಗಳಂತೆ ಜೋತುಬಿದ್ದ ಅದರ ಜೂಲುಗಳು, ಕೋರೆದಾಡೆಗಳು, ನಾಲಗೆ ಹೊರಸೂಸಿದಾಗ ಅದರ ಬಾಯಿಂದ ಹೊರಡುತ್ತಿದ್ದ ಹುಂ ಹುಂ ಶಬ್ಧ. ನಡೆದರೆ ಹುಲಿಯ ಹೆಜ್ಜೆಯಷ್ಟು ಅಗಲವಾಗಿ ಬೀಳುತ್ತಿದ್ದ ಅದರ ಹೆಜ್ಜೆಗುರುತು. . .

ಇಂತಿಪ್ಪ ತುಪಿಯಾ ಮಾಡಿದ ಅವಾಂತರಗಳು ಒಂದರೆಡಲ್ಲ.

ಪ್ರಸಿದ್ದ ಪುರೋಹಿತರಾದ ಘನಶ್ಯಾಮ ಭಟ್ಟರು ಅನುಕೂಲಸ್ಥರೇ. ಮನೆಯಲ್ಲಿ ಅಡಕೆ ತೋಟ, ವರ್ಷಕ್ಕಾಗುವಷ್ಟು ಭತ್ತ ಬೆಳೆವ ಗದ್ದೆ, ಪಾರಾಯಣ, ಬ್ರಾಹ್ಮಣಾರ್ಥ, ವ್ರತಕತೆ, ಚೌಲ, ಉಪನಯನ ಹೀಗೆ ವರ್ಷಪೂರ್ತಿ ಅವರಿವರ ಮನೇಲಿ ಮೃಷ್ಟಾನ್ನ, ದಕ್ಷಿಣೆ, ಅಕ್ಕಿ, ತರಕಾರಿ, ಪಾತ್ರೆಪಡಗ ಎಲ್ಲವೂ ಬರುತ್ತಿದ್ದರಿಂದ ಅವರಿಗೇನು ಕೊರತೆ ಇರಲಿಲ್ಲ.

ರಘುಪತಿರಾಯರ ಮನೆಯ ಪೌರೋಹಿತ್ಯವೂ ಅವರದ್ದೇ ಆಗಿತ್ತು. ಒಮ್ಮೆ ಅನಂತವ್ರತ ಮಾಡಿಸುವ ಸಲುವಾಗಿ ಬಂದಿದ್ದ ಅವರಿಗೆ ಶಿವಮೊಗ್ಗದ ರಾವುತ್‌ಚಂದ್‌ ಷಾಉಟ್‌ ಮಲ್‌ ಅಂಗಡಿಯಿಂದ ವಿಶೇಷವಾಗಿ ಮಾಡಿಸಿಕೊಂಡು ಬಂದಿದ್ದ ಚಿನ್ನದ ಪಂಚಪಾತ್ರೆ ಕಣ್ಣಿಗೆ ಬಿತ್ತು. ದೇವರಕಾರ್ಯಕ್ಕೆಂದೇ ಮಾಡಿಸಿಕೊಂಡು ಬಂದಿದ್ದ ಪಂಚಪಾತ್ರೆಗೆ ವಿಶೇಷ ಕೆತ್ತನೆ ಇದ್ದು, ಇನ್ನೂ ಪಾಲಿಶ್‌ಹೋಗದೇ ಇದ್ದುದರಿಂದ ಲಕಲಕ ಹೊಳೆಯುತ್ತಿತ್ತು.

ವ್ರತ ಮಾಡಿಸುತ್ತಾ ಕೂತಿದ್ದ ಭಟ್ಟರಿಗೆ ಅದೇನನ್ನಿಸಿತೋ ಗೊತ್ತಿಲ್ಲ. ವ್ರತ ಮುಗಿದ ಮೇಲೆ ಮನೆಗೆ ಹೊರಡುವಾಗ ಪ್ರಸಾದ ಒಂದಿಷ್ಟು ತೆಗೆದುಕೊಂಡು ಹೋಗಿ ಹಂಚುವ ಅವರ ಅಭ್ಯಾಸದಂತೆ, ಪ್ರಸಾದ ತಗಂಡು ಹೊರಟವರು ಪಂಚಪಾತ್ರೆಯನ್ನು ತಮ್ಮ ಪಂಚೆಯ ಒಂದು ತುದಿಯಲ್ಲಿ ಕಾಯಿ ಅಕ್ಕಿ ಜತೆ ಸೇರಿಸಿ ಗಂಟುಕಟ್ಟಿಕೊಂಡು ಹೊರಟುಬಿಟ್ಟರು.

ದೇವರಕೋಣೆಯಿಂದ ಹೊರಬಂದು, ಮುಂಚಕಡೆ ಮೆಟ್ಟಿಲು ಇಳಿಯಲು ಹೆಜ್ಜೆ ಇಡುತ್ತಿದ್ದಂತೆ ಗಬಕ್ಕನೆ ನೆಗೆದ ತುಪಿಯಾ ಅದ್ಯಾವ ಮಾಯದಲ್ಲೋ ಬಟ್ಟೆಗಂಟಿಗೆ ಬಾಯಿ ಹಾಕಿ ಗಂಟನ್ನ ಹರಿದು ತುಂಡು ಮಾಡಿತು. ಎಲ್ಲರೂ ಒಕ್ಕೊರಲಿನಿಂದ ಏಯ್‌ ತುಪಿಯಾ ಎಂದು ಕೂಗುತ್ತಿದ್ದಂತೆ, ಗಂಟಿಂದ ಹೊರಬಿದ್ದ ಪಂಚಪಾತ್ರೆ ತನ್ನ ಕೋರೈಸುವ ಬೆಳಕನ್ನು ಬೀರುತ್ತಾ ಅಂಗಳದ ತುಂಬಾ ಹರಿದಾಡಿತು.

ಮರ್ಯಾದಾ ಪುರುಷೋತ್ತಮರಂತಿದ್ದ ಭಟ್ಟರು ಧಸಕ್ಕೆಂದು ಕೆಳಗೆ ಕೂತವರು, ಕೂಡಲೇ ಸಾವರಿಸಿಕೊಂಡು ‘ಅದೆಂಗೆ ನನ್ನ ಗಂಟಿಗೆ ಬಂತೋ ಮಾರಾಯ. ಯಾರೋ ಅದನ್ನ ಹಾಕಿಟ್ಟಿದ್ದಾರೆ. ಥೋ ಈ ದರಿದ್ರ ನಾಯಿ ನನ್ನ ಮೇಲೆ ಬೀಳಬೇಕೆ, ರಘುಪತಿ ಈ ನಾಯಿನ ಮೊದ್ಲು ಎಲ್ಲಾರು ಕಳ್ಸು’ ಎಂದವರು ನಾನಿನ್ನು ಬರ್ತೆನೆ ಎಂದು ಹೊರಟೇಬಿಟ್ಟರು.

ಇಂತಹದೊಂದು ಎಡವಟ್ಟು ಮಾಡಿದ ತುಪಿಯಾ ಸೀದಾ ಓಡಿಹೋಗಿ ಹುಲ್ಲಿನ ಕುತ್ತರಿ ಸಂದಿ ಅವಿತುಕೊಂಡಿದ್ದು ಮತ್ತೆ, ಸಂಜೆವರೆಗೂ ತಲೆಹಾಕಿರಲೇ ಇಲ್ಲ.

ತುಪಿಯಾನ ಗುಣ ಕಂಡಿದ್ದ ಜನ ಯಾರೂ ಕಳ್ಳತನಕ್ಕಾಗಿ ಇವರ ತೋಟಕ್ಕೆ ಮುಖಹಾಕುತ್ತಿರಲೇ ಇಲ್ಲ. ತೋಟ ಕಾಯುವುದಕ್ಕಾಗಿ ಜನ ಇಡೊದಾಗಲಿ ಅಥವಾ ಸಿಗಂಧೂರಿಗೋ, ಧರ್ಮಸ್ಥಳಕ್ಕೋ ಹರಕೆ ಹೊರೋದಾಗಲಿ ಮಾಡಬೇಕಿರಲೇ ಇಲ್ಲ. ಈ ನಾಯಿ ಕತೆ ಕೇಳಿದ ಜನ ತಮ್ಮ ಮನೆಯಲ್ಲಿ ಸಾಕಿದ್ದ ಹೆಣ್ಣುನಾಯಿಗಳನ್ನೆ ಕನ್ಯಾಮಾಸದಲ್ಲಿ ಕರೆತಂದು ಕ್ರಾಸ್‌ ಮಾಡಿಸಿಕೊಂಡು ಹೋಗುತ್ತಿದ್ದರಾದರೂ, ಅವು ಹಾಕುವ ಮರಿಗಳು ಮಾತ್ರ ಕಂತ್ರಿನಾಯಿಯ ಬುದ್ದಿ ಬಿಟ್ಟು ತುಪಿಯಾನ ಜಾಣ್ಮೆಯನ್ನು ಅಂಟಿಸಿಕೊಂಡು ಜನ್ಮ ತಾಳುತ್ತಿರಲಿಲ್ಲ.

ಗೂಬೆಯಂತಹ ಕೆಂಪಗೆ ರಾಚುವ ಕಣ್ಣುಗಳುಳ್ಳ ತುಪಿಯಾನ ದೃಷ್ಟಿಯೂ ಅಷ್ಟೇ ಸೂಕ್ಷ್ಮ. ರಾತ್ರಿ ವೇಳೆ ಕಣ್ಣುಕಿವಿ ನೆಟ್ಟಗೆ ಇಟ್ಟುಕೊಂಡು ನಿಯತ್ತಾಗಿ ಪೇದೆ ಕೆಲಸಮಾಡುತ್ತಿದ್ದ ತುಪಿಯಾಗೆ ದನ ಮೆಲುಕು ಹಾಕೋ ಶಬ್ಧ, ನೀರವ ರಾತ್ರಿಯಲ್ಲಿ ಅಡಕೆ ಸೋಗೆ ಧಸಕ್ಕೆಂದು ನೆಲಕ್ಕೆ ಬೀಳುವ ಶಬ್ಧ, ತರಗೆಲೆಯ ಮೇಲೆ ಹಾವು ಹರಿದಾಡುವ ಶಬ್ಧದ ವ್ಯತ್ಯಾಸವೂ ಗೊತ್ತಾಗುತ್ತಿತ್ತು. ಉಪದ್ರವ ಕೊಡದ ಯಾವುದರ ಬಗ್ಗೆಯೂ ತುಪಿಯಾ ಸ್ಪಂದಿಸುತ್ತಿರಲಿಲ್ಲ.

ಹಾಗಾಗಿ ಒಂದು ಕದ್ದಿಂಗಳರಾತ್ರಿಯಲ್ಲಿ ತೆಂಗಿನಕಾಯಿ ಇಳಿಸಲು ಬಂದ ಮಾರನನ್ನು ಇಡೀ ರಾತ್ರಿ ಮರದಿಂದ ಇಳಿಯಲು ತುಪಿಯಾ ಬಿಟ್ಟಿರಲಿಲ್ಲ. ಕಷ್ಟಪಟ್ಟು ಆತ ಪಕ್ಕದ ಅಡಕ್ಕೆ ಮರಕ್ಕೆ ಹಾರಿದರೂ ತುಪಿಯಾನ ಕಣ್ಣಳತೆಯಿಂದ ತಪ್ಪಿಸಿಕೊಳ್ಳಲು ಆಗಿರಲಿಲ್ಲ. ವೆನಿಲ್ಲಾ ಕದಿಯಲು ಬಂದಿದ್ದ ಕುಂಡಿಯಂತೂ ಒಂದು-ಎರಡು ಎಲ್ಲಾ ಅಲ್ಲೆ ಮಾಡಿಕೊಂಡು, ಮೈಪೂರ್ತಿ ಒದ್ದೆಮಾಡಿಕೊಂಡು ಬೆಳಗಿನವರೆಗೂ ನಡುಗುತ್ತಾ ನಿಂತಿದ್ದ.

ರಘುಪತಿರಾಯರ ಮನೆಯ ನಿಷ್ಠಾವಂತ ಕಾವಲುಗಾರ ತುಪಿಯಾಗೆ ಮನೆ ಮಕ್ಕಳ ಮೇಲಂತೂ ಅಪಾರ ಪ್ರೀತಿ. ಪಲ್ಲವಿಗೆ ಅಮ್ಮ ಕಾಣಿಸಿಕೊಂಡು ಮೂರು ದಿನ ಹಾಸಿಗೆ ಹಿಡಿದು ಮಲಗಿದಾಗ ತುಪಿಯಾ ಸಹ ಅನ್ನ ನೀರು ಬಿಟ್ಟು ಇಡೀ ದಿನ ಅವಳ ಹಾಸಿಗೆ ಪಕ್ಕ ಕಣ್ಣೀರು ಸುರಿಸುತ್ತಾ ಕುಳಿತಿತ್ತು. ತುಪಿಯಾನ ಸಂಬಂಧ ನೋಡಿದ ಇಂದಿರೆಯೇ ಮುದುಡಿಹೋಗಿದ್ದಳು.

ತುಪಿಯಾಗೆ ಚಿಕ್ಕಂದಿನಿಂದ ಕೋಳಿಕದಿಯುವ ಚಟವೊಂದು ಅಂಟಿಕೊಂಡುಬಿಟ್ಟಿತ್ತು. ಲೈನ್‌ಮನೆಗಳವರು ಸಾಕಿದ ಕೋಳಿಯನ್ನು ಹೊಂಚು ಹಾಕಿ ಚಪ್ಪರಿಸಿ, ತುಪ್ಪಳ ಮಾತ್ರ ಉಳಿಸುತ್ತಿದ್ದ ತುಪಿಯಾ, ಯಾರ ಮನೆಯಲ್ಲಾದರೂ ಮಟನ್‌ ಮಾಡಿದ್ರೆ ಕಾಯಂ ಅತಿಥಿ. ಅವರಾಗೆ ಹಾಕದಿದ್ದರೆ ಹಿಂದಿನ ಬಾಗಿಲು ಬಡಿದು, ಕಾಲಿನಿಂದ ಬಾಗಿಲು ಕೆರೆದು ಮೂಳೆಯನ್ನಾದರೂ ಹಾಕಿಸಿಕೊಂಡು ಅದನ್ನು ಜಬ್ಬದಿದ್ದರೆ ಸಮಾಧಾನವೇ ಇರುತ್ತಿರಲಿಲ್ಲ.

ಇಂತಹ ಬಾಯಿಚಪಲದಿಂದಾಗಿ ತುಪಿಯಾಗೂ ಕಾಡನ ಮಗ ಗುರುವನಿಗೂ ಒಂದು ನೆಂಟಸ್ತಿಕೆ ತಂದುಕೊಟ್ಟಿತ್ತು. ಪುರಸೊತ್ತಿದ್ದಾಗಲೆಲ್ಲ ಎಕ್ಕನ ಹಳ್ಳದ ಗುಂಡಿಯಲ್ಲಿ ಗಾಳಹಾಕಿ ಕಡ್ಡಿಮೀನು ಹಿಡಿಯುತ್ತಿದ್ದ ಗುರುವ ಅದರಲ್ಲಿ ತುಪಿಯಾಗೂ ಪಾಲುಕೊಡುತ್ತಿದ್ದ. ಗದ್ದೆಗೆ ಬರುತ್ತಿದ್ದ ಮೊಲ, ಬರ್ಕಗಳ ದಾರಿಗೆ ‘ಉರುಳು’ ಹಾಕಿ ಅವನ್ನು ಹಿಡಿಯುವ ನ್ಯಾಕ್‌ ಇದ್ದ ಗುರುವ ಅದರಲ್ಲಿಯೂ ಪಾಲುಕೊಡುತ್ತಿದ್ದ. ಶೃಂಗೇರಿ ಕಡೆ ಹೋದ ಕಾಡ ಒಣಮೀನು ತಂದಿಟ್ಟಿದ್ದರೆ ಅದರ ತಲೆಯೋ, ಬಾಲವೋ ತುಪಿಯಾಗೆ ಸಿಗುತ್ತಿತ್ತು.

ಮನೆಕೆಲಸದವನಾಗಿ, ಮನೆಯಲ್ಲೇ ಓಡಾಡಿಕೊಂಡಿದ್ದ ಗುರವನಿಗೂ ತುಪಿಯಾಗೂ ಇದ್ದ ವಿಶ್ವಾಸ ಪಲ್ಲವಿ ಜತೆಗೂ ಬೆಳೆದಿತ್ತು. ತೋಟಕ್ಕೆ ಹೋದವ ಅಲ್ಲಿ ಸಿಗುತ್ತಿದ್ದ ನವಿಲು ಗರಿ, ಕಾಡಿನಲ್ಲಿ ಸಿಗುವ ಸೀತೆದಂಡೆ, ಹಳ್ಳದದಂಡೆಯ ಕೇದಗೆ ಹೂವು ಎಲ್ಲವನ್ನೂ ಚಿಕ್ಕಮ್ಮಾವ್ರಿಗೆ ಅಂತ ತಂದುಕೊಡುತ್ತಿದ್ದ.

ಪನ್ನೇರಲು, ಚಂದ್ರಬಕ್ಕೆ ಹಲಸು, ಚಂದ್ರಪೇರಲೆ, ರಂಜ, ಚುರ್ಚಿ, ಕರ್ಜಿ, ಕಲ್ಲಸಂಪಿಗೆ ಹಣ್ಣುಗಳನ್ನು ಆಸ್ಥೆಯಿಂದ ತಂದು ಅವಳ ಮುಂದೆ ಸುರಿಯುತ್ತಿದ್ದ. ತಾನು ಕಿತ್ತುಕೊಂಡು ತಿನ್ನುತ್ತಿದ್ದ. ಹೀಗೆ ಬೆಳದ ಒಡನಾಟ, ಸ್ನೇಹಕ್ಕೆ ತಿರುಗಿತ್ತು.

ಕಪ್ಪಗೆ ಕಡಿದರೆ ಮೂರು ತುಂಡಾಗುವಂತೆ ಇದ್ದ ಗುರುವನ ರಟ್ಟೆ ಒಳ್ಳೆ ಹದಕ್ಕೆ ಬಂದ ಬೀಟೆ ತುಂಡಿನಂತೆ ಇತ್ತು. ಕಾಲುಗಳೋ ಸುರುಟಿ ಎಮ್ಮೆ ಕಟ್ಟೋ ದಿಮ್ಮಿಯಂತೆ ಇದ್ದವು. ಬೆಳ್ಳಗೆ, ತೆಳ್ಳಗೆ ಬಳಕುವ ಬಳ್ಳಿಯಂತಿದ್ದ ಪಲ್ಲವಿಗೆ ಅಂತಹದೊಂದು ಮರ ಸುತ್ತಿ, ಹಿಡಿದಪ್ಪಿ ಬೆಳೆವ ಬಯಕೆ ಮೂಡಿದ್ದು ಅಸಹಜವೇನಲ್ಲ. ಯಾವುದೇ ಬಿಗುಮಾನ, ಜಾತಿ ಬೇಲಿಯ ಬಂಧನವರಿಯದೇ ಗುರುವನನ್ನು ಪಲ್ಲವಿ ಸ್ವೀಕರಿಸಿಬಿಟ್ಟಿದ್ದಳು. ಆದರೆ ಮದುವೆಯಾಗಿ ಊರಲ್ಲಂತೂ ಇರುವ ಸ್ಥಿತಿಯಿರಲಿಲ್ಲ. ಹಾಗಾಗೆ ಗುರುವನ ಜತೆ ಶಿವಮೊಗ್ಗ ಸೇರಿಬಿಟ್ಟಳು.

ಇದಾದ ಎರಡನೇ ದಿನಕ್ಕೆ ರಘುಪತಿರಾಯರು ಕೋವಿ ಕೈಗೆತ್ತಿಕೊಂಡು ತುಪಿಯಾಗೆ ಗುಂಡುಹಾರಿಸಿಬಿಟ್ಟರು. ‘ಮನೆತೋಟ ಕಾದರೆ ಏನುಬಂತು, ಹಾಳುಮುಂಡೆದು. . . ಮನೆತನ ಕಾಯಲು ಯೋಗ್ಯತೆ ಇಲ್ಲದ ಪರ್ದೆಶಿ’ ಎಂದು ಸಿಟ್ಟು ಹೊರಹಾಕಿ, ದೂರದೂರಕ್ಕೆ ಓಡುತ್ತಾ, ಆಗಾಗ ಕರಗುತ್ತಾ, ಮತ್ತೆ ದಟ್ಟೈಸುತ್ತಾ ಸಾಗುತ್ತಿದ್ದ ಮೋಡವನ್ನೇ ದಿಟ್ಟಿಸತೊಡಗಿದರು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more