• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಯ್ತನ

By Staff
|

ವಾಚಾಳಿಯೆನಿಸಿದ್ದರೂ ಭಾವುಕಳಾದ ನಾನು ಎಸ್‌ಎಸ್‌ಎಲ್‌ಸಿ ಮುಗಿಸಿ ಕಾಲೇಜಿಗೆ ಸೇರಿದ್ದೆ. ಹೊಸ ವಾತವರಣದ ಹೆದರಿಕೆಯಿಂದ ಗೆಳತಿಯರನ್ನು ನಾನಾಗಿಯೇ ಬಯಸಿ ಹೊಗಲಿಲ್ಲ. ಸದಾ ಕಾಲವೂ ಅಮ್ಮನೇ ನನ್ನ ಬೆಸ್ಟ್‌ ಫ್ರೆಂಡ್‌. ಆದರೆ ಮುಂದಿನ ಬೆಂಚಿನ ಕುಳ್ಳರ ಸಾಲಿನಲ್ಲಿ ಒಬ್ಬಳಾಗಿದ್ದ ಸಹಪಾಠಿ ಫ್ಲೋರಾ ನನ್ನಗಮನ ಸೆಳೆದದ್ದು ವಿಶೇಷ ಕಾರಣಕ್ಕಾಗಿ.

ಹೀಗೆ ಒಂದು ದಿನ ಕ್ಲಾಸ್‌ನಲ್ಲಿ ಎಲ್ಲರು ಹರಟುತ್ತಿದ್ದಾಗ ರಾಧ ಪಕ್ಕದವಳಿಗೆ ‘‘ನೋಡೆ ಆ ಫ್ಲೋರಾಳಿಗೆ ಅಮ್ಮ ಎಂದರೆ ಆಗುವುದಿಲ್ಲವಂತೆ, ತಾಯೀಂತ ಮಾತುಬಂದರೆ ಸಾಕು ಕೋಪದಿಂದ ಕಿರ್‌ಚ್ತಾಳಂತೆ. ಎಷ್ಟು ವಿಚಿತ್ರಾಲ್ಲ್ವಾ?’’ ಎನ್ನುತ್ತಿದ್ದದ್ದು ಕಿವಿಗೆ ಬಿತ್ತು. ಅಪ್ಪ, ಅಮ್ಮ ಮನೆ ಕಾಲೇಜೇ ಸರ್ವಸ್ವ ಎಂದು ತಿಳಿದ್ದಿದ್ದ ನನಗೆ ಫ್ಲೋರಾಳ ‘ಮಾತೃ ಶತ್ರುತ್ವ’ ವಿಚಿತ್ರವೆನಿಸದಿರಲಿಲ್ಲ. ಎಲ್ಲಕ್ಕೂ ಏನು? ಏಕೆ? ಹೇಗೆ? ಎನ್ನುತ್ತಿದ್ದ ನಾನು ಅವಳ ಈ ಸ್ವಭಾವಕ್ಕೆ ಕಾರಣ ತಿಳಿಯಲು ಉತ್ಸುಕವಾದೆ.

***

ನಾನು ಫ್ಲೋರಾ ಒಳ್ಳೆಯ ಗೆಳತಿಯರಾದೆವು. ಸ್ನೇಹಸುಖದ ಮೊದಲ ಹಂತದಲ್ಲಿದ್ದ ನಾನು, ನನ್ನ ಸುಖವನ್ನೆಲ್ಲ ಅವಳೆದುರು ಬಣ್ಣ ಬಣ್ಣವಾಗಿ ಹೇಳಿಕೊಳ್ಳುತ್ತಿದ್ದೆ. ಆಗೆಲ್ಲಾ ಅವಳ ಮುಖದಲ್ಲಿ ನಿರಾಸೆಯ ಅಲೆಯನ್ನೂ ಕಾಣುತ್ತಿದ್ದೆ. ಅದರಲ್ಲೂ ನನ್ನಮ್ಮನ ಪ್ರೀತಿ, ಪ್ರೇಮ, ಮುದ್ದುಗಳ ಬಗ್ಗೆ ಹೇಳಿಕೊಳ್ಳುವಾಗಲಂತು ಅವಳು ಸಂಪೂರ್ಣವಾಗಿ ಸೊರಗುತ್ತಿದ್ದಳು. ಆದರೂ ನೇರವಾಗಿ ಕಾರಣ ಕೇಳಲು ಅದೇಕೋ ಅಶಕ್ತಳಾಗಿದ್ದೆ!

ವೈದ್ಯಳಾಗಲಿ ಎಂಬ ಮಹದಾಸೆಯಿಂದ ಅಮ್ಮ ನನ್ನನ್ನು ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದಳು.ಆದರೆ ಮೊದಲ ತಿಂಗಳ ಪರೀಕ್ಷೆಯಲ್ಲೇ ಕೆಮಿಸ್ಟ್ರಿಯಲ್ಲಿ ನಪಾಸಾಗಿದ್ದೆ. ಅಮ್ಮ ಬೈಗುಳಗಳ ಮಳೆ ಸುರಿಸಿದ್ದಳು. ನಮ್ಮಲ್ಲಿ ಎಂದೂ ಅಷ್ಟೆ ಅಮ್ಮ ನಕ್ಕರೆ ಮನೆಯೆಲ್ಲಾ ನಗುತ್ತಿತ್ತು. ಅಮ್ಮ ಆತ್ತರೆ ಮೋತಿ(ನಾಯಿ)ನೂ ಅಳುತ್ತಿದ್ದ. ಸರಿ, ಅಮ್ಮನಿಗೆ ಕೋಪ ಬಂದಿದೆ ಎಂದ ಮೇಲೆ ಅಕ್ಕ ಅಣ್ಣ ಅಪ್ಪ ಯಾರೂ ನನ್ನೊಡನೆ ಮಾತಾಡಲಿಲ್ಲ. ಎರಡು ದಿನ ಮೋತಿನೂ ಮೈಮೇಲೆ ಎಗರದೆ ಸುಮ್ಮನಾಗಿದ್ದ!

ಎಂದಿನಂತೆ ಊಟದ ಡಬ್ಬಿಗಳೊಂದಿಗೆ ನಾನು ಫ್ಲೋರಾ ಕಾಲೇಜು ಮೈದಾನದ ಗುಲಗಂಜಿ ಮರದ ನೆರಳಿನಲ್ಲಿ ಕುಳಿತೆವು. ಮಾತು ಬಿಟ್ಟಿದ್ದ ಅಮ್ಮನ ಮೇಲಿನ ಚಾಡಿಯ ಪಟ್ಟಿಯನ್ನೇ ಅವಳೆದುರು ಒಂದೇ ಉಸಿರಿನಲ್ಲಿ ಓದ್ದಿದ್ದೆ. ಫ್ಲೋರಾ ಒಮ್ಮೆಲೆ ಚೀರಿದಳು. ಮುಖಕ್ಕೊತ್ತು ಬಂದಿದ್ದ ರಕ್ತ ಕೆಳಗಿಳಿಯುವ ಮುನ್ನವೇ ಮುಖ ಮುಚ್ಚಿ ಅಳತೊಡಗಿದಳು. ನನಗೇನೂ ಅನ್ನಿಸಲ್ಲಿಲ್ಲ! ಒಂದೆರಡು ನಿಮಿಷಗಳ ನಂತರ ಮಂಡಿಯ ಮೇಲಿಂದ ತಲೆಯೆತ್ತಿ ‘‘ತಾಯಿ ಬೆಲೆ ಗೊತ್ತಿದ್ದರೆ ನೀನು ಹೀಗೆಲ್ಲಾ ಹೇಳುತ್ತಿರಲ್ಲಿಲ್ಲ...’’ ಅವಳೆಂದಾಗ ಅವಳ ಸ್ವಭಾವಕ್ಕೆ ಕಾರಣ ಕೇಳಿಯೇ ಬಿಟ್ಟೆ!.

***

ಸಿಸ್ಟರ್‌ ಥೆರೇಸಾ ನಾನೋದಿದ್ದ ಕಾನ್ವೆಂಟಿನಲ್ಲೇ ಬಹಳ ವರ್ಷಗಳ ಸೇವೆ ಸಲ್ಲಿಸಿ ಈಗ ಡೆಹ್ರಾಡೂನ್‌ನಲ್ಲಿ ಇದ್ದಾರೆಂದು ಕೇಳಿದ್ದೆ. ಅದೇ ಸಿಸ್ಟರ್‌ ಥೆರೇಸಾ ಬೆಂಗಳೂರಿನಲ್ಲಿ ಯವುದೋ ಕಾರ್ಯ ನಿಮಿತ್ತ ಬೆಳಗಿನ ಜಾವ ನಾಲ್ಕು ಗಂಟೆಗೆ ಕಾರಿನಲ್ಲಿ ಹೊರಟಿದ್ದರು. ನಮ್ಮ ಕಾನ್ವೆಂಟಿನಿಂದ ಹತ್ತು ಹೆಜ್ಜೆ ಮುಂದೆ ಹೋದರೆ ಒಂದು ಕಸದ ತೊಟ್ಟಿ ಇತ್ತು. ಈಗಲೂ ಇದೆ. ಆ ಕಸದ ತೊಟ್ಟಿ ಹತ್ತಿರ ಬಂದ ಕೂಡಲೆ ಸಂತನ ಧ್ಯಾನದಲ್ಲಿದ್ದ ಸಿಸ್ಟರ್‌ ಥೆರೇಸಾರ ಕಣ್ಣುಗಳು ವಿಧಿ ಲಿಖಿತವೆಂಬಂತೆ, ತಣ್ಣನೆಯ ಚಳಿಯಲ್ಲಿ ನಡುಗುತ್ತಾ, ಅಳುತ್ತಾ ಚೀರಾಡುತ್ತಿದ್ದ ಹಸುಗೂಸಿನೆಡೆಗೆ ದೃಷ್ಟಿ ಸಾರಿದವು. ಕರುಣೆಯ ಮೂರ್ತಿ ಆ ದಿನಗೂಸನ್ನು ಎತ್ತಿ ಲಾಲಿಸಿ ಪಾಲಿಸಿ, ಈ ದಿನ ನನ್ನ ಕಣ್ಣೆದುರು ಬೆಳ್ಳಗೆ ಕುಳ್ಳಗೆ ಗುಂಡು ಗುಂಡಾಗಿ ಕೂತಿದ್ದ ಫ್ಲೋರಾಳನ್ನಾಗಿ ಮಾಡಿದ್ದರು. ಅವರಿಗೆ ಅವಳಲ್ಲಿ ಮಿತಿ ಮೀರಿದ ಕರುಣೆಯಿತ್ತು. ಆದರೆ ಆ ಷೋಡಷಿಗೆ ಸಹಸ್ಪಂದನದ, ಮನಸ್ಸಿನ ಭಾವನೆಗಳನ್ನು ಅರಿಯುವ ಹಾಗು ಅವಳೊಂದಿಗೆ ಸಲೀಸಾಗಿ ವರ್ತಿಸುವ ಸಿಸ್ಟರ್‌ ಅಗತ್ಯ! ಗೌರವಾನ್ವಿತ ಥೆರೇಸಾರ ಕರುಣೆಯ ಹೊರೆ ಅವಳಿಗೆ ಕಾಲ್ಬೇಡಿಯಾಗಿ ಬಿಡುತ್ತಿತ್ತು. ಆಕೆಯನ್ನು ಮಗುವಾಗೇ ನೊಡುತ್ತಿದ್ದ ಅವರಿಗೆ ಅವಳ ಬೆಳೆದ ಭಾವನೆಗಳಿಗೆ ಬೇಕಾದ ಆಕಾಶ ಕಾಣಲೇ ಇಲ್ಲ!

ಅರವತ್ತರ ಸಿಸ್ಟರ್‌ ಥೆರೇಸಾ ಫ್ಲೋರಾಳನ್ನು ‘ಸಿಸ್ಟರ್‌ ಫ್ಲೋರಾ‘ಳನ್ನಾಗಿ ಮಾಡಬೇಕೆನ್ನುವ ತಮ್ಮ ಮಹದಾಸೆಯನ್ನು, ರೋಮಂಚಕ ಭಾವನೆಗಳ ಏರು ಪೇರಿಗೆ ಸಿಲುಕಿದ್ದ ಅವಳೆದುರು ತಿಳಿಸಿದ್ದರು. ಋಣಭಾರದಿಂದ ಜಗ್ಗಿದ್ದಳು. ಕುಗ್ಗಿಕೊಂಡೇ ಭರವಸೆ ಇತ್ತಿದ್ದಳು. ಅವಳು ‘ನನ್‌‘ ಆಗುವುದಕ್ಕೂ ತಾಯಿಯೆಂದರೆ ಕೋಪಿಸಿಕೊಳ್ಳುವುದಕ್ಕೂ ನನಗೆ ಆಗ ಸಂಬಂಧವೇ ಕಾಣಲಿಲ್ಲ. ಪೆಚ್ಚುಪೆಚ್ಚಾದ ನನ್ನ ನೇರ ಪ್ರಶ್ನೆಗೆ ಅವಳು ‘‘ನನಗೆ ಮದುವೆ ಮಾಡಿಕೊಂಡು ಸಂಸಾರ ಮಕ್ಕಳು ಅಂತ ಇರಬೇಕೆನ್ನುವ ಆಸೆ. ಆದರೆ ನಾನಿದನ್ನು ಸಿಸ್ಟರ್‌ಗೆ ಹೇಗೆ ಹೇಳಲಿ?ಜೀವಕ್ಕಿಂತ ಪ್ರಿಯವಾದ ಅವರ ವಿರುದ್ಧ ನಾನೆಂದೂ ಯಾವ ಹಗುರವಾದ ಕೆಲಸವನ್ನೂ ಮಾಡಿಲ್ಲ. ಆಕೆಯೊಬ್ಬ ದೇವತೆ. ಹೀಗಿರುವಾಗ ಅವರಾಸೆಯನ್ನು ನಾನ್ಹೇಗೆ ವಿರೋಧಿಸಲಿ?. . . . ಅದೇ ನನ್ನ ಹೆತ್ತ ತಾಯಿ ಇದ್ದಿದ್ದರೆ ನನ್ನ ಮೌನಕ್ಕೂ ಅರ್ಥ ನೀಡಿ ನನ್ನನ್ನು ಅರಿಯುತ್ತಿದ್ದಳು. . . . ಈ ಜನ್ಮ ಎಲ್ಲಿ ನೈತಿಕತೆಯ ಚೌಕಟ್ಟನ್ನು ಮೀರಿತ್ತೋ, ಇನ್ನ್ಯಾವ ಅನಿವಾರ್ಯತೆಗಳು ಅವಳನ್ನು ಕಾಡಿತ್ತೋ . . . . ನಾನು ಇಂತಹ ಸಂದಿಗ್ದ ಸ್ಥಿತಿಯನ್ನು ನೋಡುವಂತಾಗಿದೆ. . . ಸಿಸ್ಟರ್‌ ಥೆರೇಸಾರ ಆಸೆಗೆ ವಿರುದ್ಧವಾದ ನನ್ನ ಆಲೋಚನೆಗಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವೆ. . . .’’ ಎಂದು ಒಂದೇ ಉಸಿರಿಗೆ ಒದರಿ ಅತ್ತು-ನಕ್ಕು ಸುಮ್ಮನಾದಳು.

ನಾನು ಬೆಳೆಯುತ್ತಿದ್ದ ಪರಿಸರಕ್ಕೆ ಅಸಹಜವೆನಿಸುವ ಆದರೆ ಹರಯಕ್ಕೆ ಸಹಜವೆನಿಸುವ ಫ್ಲೋರಾಳ ಬಯಕೆಗಳು ನನ್ನಲ್ಲಿ ಮುಜುಗರವನ್ನುಂಟು ಮಾಡಿತ್ತು. ಆದರೂ ಅವಳು ದುಃಖ ತೋಡಿಕೊಂಡ ರೀತಿ ಸಿಸ್ಟರ್‌ಗಳ ಮೇಲೆ ಕೋಪ ಬರುವಂತೆ ಮಾಡಿತ್ತು. ಸಿಸ್ಟ್‌ರ್‌ಗಳೆಂದರೆ ತಮ್ಮ ಆಸೆಗಳನ್ನು ಗೌಣವಾಗಿಸಿ ಸೇವೆಯನ್ನು ಗುರಿಯಾಗಿಸಿಕೊಂಡವರಂತೆ ಕಾಣಲಿಲ್ಲ. ಬದಲಿಗೆ, ಜನಸೇವೆಯ ಸೋಗಿನಲ್ಲಿ ಸಾಮಾನ್ಯ ಜನರ ಆಸೆ, ಬಯಕೆಗಳನ್ನು ಬಲಿ ತೆಗೆದುಕೊಳ್ಳುವ ಧೂರ್ತರೆಂದು ನಿರ್ಧರಿಸಿಯೇಬಿಟ್ಟೆ!

***

ಕಾಲೇಜಿನ ನಂತರ ನನ್ನ ಫ್ಲೋರಾಳ ಸಂಬಂಧ ಮುಗಿದ ಅಧ್ಯಾಯವಾಯಿತು. ಆದರೂ ಸಿಸ್ಟರ್‌ಗಳ ಮೇಲಿನ ದ್ವೇಷ ಕಡಿಮೆಯೇನಾಗಲಿಲ್ಲ.

ಅಂದು ನಾನೋದ್ದಿದ್ದ ಕಾನ್ವೆಂಟಿನ ಶತಮಾನೋತ್ಸವ ಸಮಾರಂಭ. ಕಾರ್ಯಕ್ರಮ ಮುಗಿಸಿ ಮನೆಗೆ ಹೊರಟ್ಟಿದ್ದ ನನ್ನನ್ನು ಫ್ಲೋರಾಳೇ ಗುರ್ತಿಸಿ ಅಪ್ಪಿಕೊಂಡಾಗ ಸಂತೋಷವಾಯ್ತು. ಅವಳ ಪಕ್ಕಕ್ಕೆ ಒರಗಿದ್ದ ಪುಟ್ಟ ಹುಡುಗನನ್ನು ತನ್ನ ಮಗ ಅಲೆಕ್ಸ್‌ ಎಂದು ಪರಿಚಯ ಮಾಡಿಕೊಟ್ಟಾಗ ನನ್ನ ಕಣ್ಣುಗಳಲ್ಲಿದ್ದ ಗಾಬರಿ ಅಚ್ಚರಿಗಳನ್ನು ಆಕೆ ಗುರುತಿಸದಿರಲಿಲ್ಲ. ಪ್ರೊಫೆಸರ್‌ ಎಬಲ್‌ನ ಪತ್ನಿಯಾಗಿದ್ದ ಫ್ಲೋರಳನ್ನು ಮಾರನೆಯ ದಿನ ಮನೆಗೆ ಆಹ್ವಾನಿಸಿದೆ.

***

ಕಾಫಿ ತಿಂಡಿಗಳ ನಂತರವೂ ಆವರಿಸಿದ್ದ ವಿಚಿತ್ರ ಮೌನವನ್ನು ಗುರ್ತಿಸಿದ ಫ್ಲೋರಳೇ ತನ್ನ ಕಥಾಸಾಗರವನ್ನೇ ಹರಿಯಬಿಟ್ಟಳು.

ಕಾಲೇಜು ವಿದ್ಯಾಭ್ಯಾಸ ಮುಗಿಸಿ ‘ನನ್‌‘ ಆಗಲು ತೆಗೆದುಕೊಳ್ಳಬೇಕಿದ್ದ ಅರ್ಹತಾ ಪರೀಕ್ಷೆಯ ಸಿದ್ಧತೆಗಳನ್ನು ನಡೆಸಿದ್ದಳಂತೆ. ಒಂದು ದಿನ ಸಿಸ್ಟರ್‌ ಥೆರೇಸಾ ಫ್ಲೋರಾಳನ್ನು ಕರೆದು ‘‘ ಮಗಳೇ ನನ್ನ ಸರ್ವಸ್ವವೂ ನೀನೆ. ಜೀವನದ ಪರೀಕ್ಷೆಯಲ್ಲಿ ನೀನು ಯಶಸ್ವಿಯಾದೆ ಮಗು. ನಿನ್ನ ಕಣ್ಣೇ ನಿನ್ನ ಸುಪ್ತ ಬಯಕೆಗಳ ಸುಳಿವು ನೀಡಿದ್ದವು ನನಗೆ. ಆದರೆ ತಪ್ಪು ದಾರಿ ಹಿಡಿಯಬಹುದ್ದಿದ್ದ ನಿನ್ನ ವಯಸ್ಸಿಗೆ ಸರಿ ದಾರಿ ತೋರಿಸಲು ನಾನು ಮೌನವಾಗೇ ಇದ್ದೆ. ನಿನ್ನ ಸಂತಾನದಲ್ಲಿ ಆ ದೇವಧೂತ ಏನು ಸಂದೇಶ ತರುವನೋ ಕಾದು ನೋಡಬೇಕು.. ’’ ಎಂದಾಗ ಫ್ಲೋರಾ ಕಲ್ಲಾಗಿ, ಬಿಕ್ಕಳಿಸಲೂ ಆಗದಂತೆ ಮುಂದೆರಡು ದಿನ ತಟಸ್ಥಳಾಗಿ ಬಿಟ್ಟಳಂತೆ.

ಜೀವಶಾಸ್ತ್ರದ ಪದವಿಧರೆ ಫ್ಲೋರಾ, ಎಬಲ್‌ನನ್ನು ಮೆಚ್ಚಿದಾಗ ಸಿಸ್ಟರ್‌ ಥೆರೇಸಾರ ಆಶೀರ್ವಾದವೇ ಇಬ್ಬರನ್ನು ಒಂದು ಮಾಡಿತೆಂದು ಈಗಲೂ ಅವರೇ ತಮ್ಮ ಬೆಂಗಾವಲೆಂದು ಅವಳು ಹೇಳಿದಾಗ, ನನ್ನ ಕಣ್ಣಿಂದ ಪ್ರಾಯಶ್ಚಿತ್ತದ ಕಣ್ಣೀರು ಧಾರಾಕಾರವಾಗಿ ಹರಿಯಿತು. ಒಮ್ಮೆ ಡೆಹ್ರಾಡೂನಿಗೆ ಹೋಗಿ ಸಿಸ್ಟರ್‌ ಥೆರೇಸಾರಿಗೆ ಕೈ ಮುಗಿದು ಬಂದೆ.

ಈಗಲೂ ಕಿವಿಗೆ ಚರ್ಚಿನ ಗಂಟೆ ಸದ್ದು ಬಿದ್ದಾಗಲ್ಲೆಲ್ಲ, ಕೇವಲ ಹೊತ್ತು ಹೆರುವ ಹೆಣ್ಣು ತಾಯಿಯೋ ಅಥವಾ ಭಾವನೆಗಳ ತುಡಿತಕ್ಕೆ ದ ಸ್ಪಂದನ ನೀಡುವ ಹೆಣ್ಣು ನಿಜವಾದ ತಾಯಿಯೋ ಎನ್ನುವ ಜಿಜ್ಞಾಸೆ ನನ್ನ ಮನದ ಅಂಗಳದಲ್ಲಿ ರಿಂಗುಣಿಸುತ್ತದೆ...

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more