• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಮಳೆಯ ರಾತ್ರಿ

By Staff
|

ಆಗತಾನೆ ಮಳೆ ಬಂದು ನಿಂತಿದ್ದರಿಂದ ರೂಹಿನಿಂದ ತೊಟ್ಟಿಕ್ಕುತ್ತಿದ್ದ ಹನಿಯ ಶಬ್ದ, ಇನ್ನು ಸ್ವಲ್ಪ ಹೊತ್ತಿಗೆ ಹಾವಿನ ಹೊಟ್ಟೆಗೆ ಆಹಾರವಾಗುವ ವಿಷಯ ತಿಳಿಯದ ಅಮಾಯಕ ಕಪ್ಪೆಗಳ ವಟಗುಟ್ಟುವಿಕೆ, ಹೆಸರು ಗೊತ್ತಿರದ ಹುಳ ಹುಪ್ಪಡಿಗಳ ಸದ್ದು ಎಲ್ಲವೂ ಸ್ಪಷ್ಟವಿದ್ದವು. ಒಳಗೆ ಅಡುಗೆ ಮಾಡುತ್ತಾ ಕುಳಿತ ‘ಅವಳ’ ಬಳೆಯ ನಾದಸಂಗೀತ ಕೇಳುತ್ತಿತ್ತು. ಇದ್ದ ಪುಟ್ಟ ಮನೆಯಲ್ಲೇ ಮಗ ತನ್ನ ಬಹುದಿನಗಳ ಬಯಕೆ; ಇಂದು ನಿಜವಾಗಿದ್ದ ಮೂರುಗಾಲಿಯ ಕೆಂಪು ಸೈಕಲ್ಲಿನ ಮೇಲೆ ಕುಳಿತು ಆಡುತ್ತಿದ್ದ.

ಹೊರಗೆ ಕುಳಿತಿದ್ದ ‘ಅವನು’ ಮಗನ ಚಿಕ್ಕ ಸಂತೋಷಕ್ಕೂ, ಬೆರಗಿಗೂ ತನ್ನಲ್ಲಿ ಹುಟ್ಟುತ್ತಿದ್ದ ದುಃಖವನ್ನು ಉಮ್ಮಳಿಸದಂತೆ ಬಹು ಕಷ್ಟದಿಂದ ತಡೆದಿದ್ದ. ಒಳಗೆ ಹೋಗಿ ಮಗನ ಜೊತೆ ಆಡಬೇಕೆನಿಸುತ್ತಿದೆ; ಅಳು ನಿಲ್ಲುವುದಿಲ್ಲವೆಂಬ ಖಚಿತತೆ. ಒಳಗೆ ಅಡುಗೆ ಮಾಡುತ್ತಿರುವ ಅವಳ ಜೊತೆ ಕುಳಿತು ಹರಟಬೇಕೆನಿಸುತ್ತಿದೆ; ತನ್ನ ಕಂಗಳು ಅವಳಿಗೆ ನಿಜ ಹೇಳಿಬಿಡುತ್ತವೆಂಬ ಭಯ. ಈ ಐದು ವರ್ಷದ ಜೀವಿತದಲ್ಲಿ ಅವಳು ಮತ್ತು ಅವನು ಒಬ್ಬರಿಗೊಬ್ಬರು ಸುಳ್ಳೇ ಹೇಳಿಕೊಂಡಿಲ್ಲವೆಂಬುದು ಸುಳ್ಳು. ಆದರೆ ಆಗೆಲ್ಲಾ ಹೇಳಿಕೊಂಡದ್ದು ಪ್ರೇಮಿಗಳೆನಿಸಿಕೊಂಡವರು, ಬಡವರೆನಿಸಿಕೊಂಡ ಗಂಡ-ಹೆಂಡತಿಯರು ಒಬ್ಬರಿಗೊಬ್ಬರು ಹೇಳಿಕೊಳ್ಳಲೇಬೇಕಾದ ಸುಳ್ಳುಗಳು.

ಮನೆಯ ರೂಹು ಮಣ್ಣಿನದಾದ್ದರಿಂದ ಮಳೆಯು ಬರುವಾಗ ಮನೆಯ ಒಳಗು ಮತ್ತು ಹೊರಗುಗಳಿಗೆ ಅಂಥ ದೊಡ್ಡ ಫರಕ್ಕೇನೂ ಇರುವುದಿಲ್ಲ. ಬಡತನ ಮತ್ತು ಧಾರಾಳತನ, ಪ್ರೀತಿ ಮತ್ತು ಸ್ವಾರ್ಥದಂತೆ ಒಂದನ್ನು ಬಿಟ್ಟು ಮತ್ತೊಂದು ಇರುವುದಿಲ್ಲ. ಮನೆಯಲ್ಲಿ ಹಲ್ಲಿ, ಜಿರಳೆ, ಇಲಿ ಆಗಾಗ ಹಾವು-ಚೇಳು ಎಲ್ಲವಕ್ಕೂ ಧಾರಾಳ ಜಾಗೆ. ಇಂದು ಮಧ್ಯಾಹ್ನ ಡಾಕ್ಟರು ತಮ್ಮ ಛೇಂಬರಿಗೆ ಕರೆದಾಗ ಹೆಚ್ಚೆಂದರೆ ಇನ್ನೊಂದೆರಡು ರೀತಿ ಮಾತ್ರೆ-ಟಾನಿಕ್ಕು ಬರೆದುಕೊಡುತ್ತಾರೆಂದುಕೊಂಡಿದ್ದ ಅವನು. ಆದರೆ ವೈದ್ಯರು ಹೇಳಿದ್ದೇ ಬೇರೆ. ಅವರು ಮಗನ ಜೀವಕ್ಕೆ ಕೊಟ್ಟಿದ್ದ ಕೊಟ್ಟ ಗಡುವು ಎರಡು ದಿನ!

ಅದೆಂಥಾ ಸುಡುಗಾಡು ರೋಗವೋ ಏನೋ, ಇಂಗ್ಲೀಷಿನ ಹೆಸರಾದರೂ ನೆನಪಿಡಬಹುದಿತ್ತು, ವೈದ್ಯಕೀಯ ಭಾಷೆಯ ಹೆಸರುಗಳು ನೆನಪಿನಲ್ಲುಳಿಯುವುದಿಲ್ಲ. ಆ ರೋಗ, ಬಂದು ಹದಿನೈದು ದಿನಗಳೊಳಗೆ ರೋಗಿಯನ್ನು ಕೈಹಿಡಿದುಕೊಂಡು ಬದುಕಿನ ಅಂಗಳದಿಂದ ಸಾವಿನ ಮನೆಯಾಳಗೆ ಕರೆದುಕೊಂಡು ಹೋಗಿ ಬೀಗ ಹಾಕಿಕೊಂಡುಬಿಡುತ್ತದಂತೆ. ‘ನಿಮ್ಮ ಮಗನಿಗೆ ಹಾಗೆ ವಾಂತಿಯಾಗಿ ಎಷ್ಟು ದಿನಗಳಾದವು?’ ಅಂತ ಕೇಳಿದ ಡಾಕ್ಟರು, ಉತ್ತರ ಪಡೆದು ತಮ್ಮಲ್ಲೇ ಏನೋ ಯೋಚಿಸಿಕೊಂಡು ಜೀವದ ಗಡುವು ನೀಡಿಬಿಟ್ಟಿದ್ದರು. ಹತ್ತು ಹದಿನೈದು ದಿನಗಳ ಹಿಂದೆ ವಾಂತಿಯಾದಾಗ, ಅದರಲ್ಲಿ ಕೀವಿನಂಥ ಬೆಳ್ಳನೆಯ ದ್ರವ ಬಂದಾಗಲೇ ವೈದ್ಯರ ಬಳಿ ಕರೆತರಬೇಕಿತ್ತು; ಕನಿಷ್ಟ ಇನ್ನೊಂದೆರಡು ವಾರ, ತಿಂಗಳು ಹೆಚ್ಚು ಮಗನನ್ನು ಬದುಕಿಸಿಕೊಡುತ್ತಿದ್ದರು. ಆದರೆ ಹಾಗೆ ವಾಂತಿಯಾಗಿ ಅರ್ಧಗಂಟೆಗೆಲ್ಲ ಮಗ ಆಡಿಕೊಳ್ಳಲು ಶುರುಮಾಡಿದ. ಸಾವೆಂಬುದು ಹಾಗೆ ತನ್ನ ಬರುವಿಕೆಯ ಸುಳುಹನ್ನು ಕೊಟ್ಟೂ ಕೊಡದೆಯೇ ಕೊಟ್ಟಿತ್ತು.

ಡಾಕ್ಟರರ ಛೇಂಬರಿನಿಂದ ಹೊರಬಂದವನೇ ಅಲ್ಲೇ ಕುಳಿತಿದ್ದ ಅವಳ ಮುಖವನ್ನಾಗಲೀ, ಅವಳ ತೊಡೆಯ ಮೇಲೆ ಮಲಗಿದ್ದ ಮಗನ ಮುಖವನ್ನಾಗಲೀ ನೋಡದೆ ಅಥವಾ ನೋಡಲಾಗದೇ ಹೊರಗೆ ನಡೆದು ಒಂದು ರಿಕ್ಷಾವನ್ನು ಗೊತ್ತು ಮಾಡಿ ಅವಳನ್ನೂ-ಮಗನನ್ನೂ ಮನೆಗೆ ಕಳಿಸಿಬಿಟ್ಟ. ರಿಕ್ಷಾ ಕದಲುವ ಕೊನೆ ಕ್ಷಣದಲ್ಲಿ ಅವಳು ಕೇಳಿದಳು - ‘ಏನಂತೆ?’ ‘ಏನಿಲ್ಲ, ಮಾಮೂಲಿ ಜ್ವರ ಅಷ್ಟೆ, ಇಲ್ಲೇ ಒಂಚೂರು ಹೋಗ್ಬರ್ತೀನಿ’ ಅಂತ ಹೇಳಿ ಅವಳ ಕಣ್ಣೂ ನೋಡಲಾಗದೆ ಫ್ಯಾಕ್ಟರಿಯ ಕಡೆಗೆ ನಡೆದು ಬಿಟ್ಟ ಅವನು.

***

ಯಾಕೋ ಇಂಥದೊಂದು ರಾತ್ರಿ ಬದುಕಲ್ಲಿ ಬರುತ್ತದೆಂಬ ಊಹೆಯೂ ಇರಲಿಲ್ಲ. ಉಪವಾಸವಿರಲು ಸಿದ್ಧವಾದಂತೆ, ಅವಮಾನ ಸಹಿಸಿಕೊಳ್ಳಲು ಸಿದ್ಧವಾದಂತೆ, ಮಗನ ಸಾವನ್ನು ತಡೆದುಕೊಳ್ಳಲು ಸಿದ್ಧವಾಗಲು ಬದುಕು ಅವಕಾಶವೇ ಕೊಡಲಿಲ್ಲ.ಮಧ್ಯಾಹ್ನ ಇದ್ದಕ್ಕಿದ್ದಂತೆ ಗೊತ್ತಾಗಿತ್ತು - ‘ಮಗನ ಆಯುಷ್ಯ ಇನ್ನೂ ಹೆಚ್ಚೆಂದರೆ ಎರಡು ದಿನ’. ನಿಮಿಷ ನಿಮಿಷಕ್ಕೂ ಕಣ್ಣು ಮಂಜು.

ಅವನು ಕುಳಿತಲ್ಲೇ ಅಸಹನೆಯಿಂದ ಸರಿದಾಡಿದನು. ‘ಎಲ್ಲವನ್ನೂ ಅವಳಿಗೆ ಹೇಳಿಬಿಡಲಾ? ’ ಪ್ರಶ್ನೆಯ ಮಿಂಚೊಂದು ಮನದಲ್ಲೇ ಮಿಂಚಿಹೋಯಿತು. ಜಗತ್ತು ತಮ್ಮನ್ನು ಪ್ರೇಮಿಗಳೆಂದು ಕರೆಯುತ್ತಿದ್ದ ದಿನಗಳಲ್ಲೇ ಅಂದುಕೊಂಡಿದ್ದರು - ‘ನಾವು ಯಾವುದನ್ನೂ ನಮ್ಮಲ್ಲೇ ಮುಚ್ಚಿಟ್ಟುಕೊಳ್ಳಬಾರದು, ಸುಳ್ಳು ಹೇಳಿಕೊಳ್ಳಬಾರದು’ . ಆದರೆ ಬದುಕು ಅದ್ಯಾವುದೋ ತಿರುವಿನಲ್ಲಿ ನಮ್ಮನ್ನು ನಿಲ್ಲಿಸಿ ಅದೇನೇನೋ ಮಾಡಿಸುತ್ತದೆ.

ಅವಳಿಗೆ ಮುಚ್ಚುಮರೆ ಇಷ್ಟವಾಗುವುದಿಲ್ಲ; ಅವನಿಗೆ ಬಂಗಾರದಂತೆ. ಅದಕ್ಕೆ ಅವಳು ಬೆಳ್ಳಿಯ ಉಂಗುರವನ್ನು ಅವನಿಗೆ ಪ್ರೇಮದ ನೆನಪಾಗಿ, ಮೊದಲ ಚುಂಬನದ ಕುರುಹಾಗಿ ಕೊಟ್ಟಿದ್ದಳು. ಇಂದು ಸಂಜೆ ಫ್ಯಾಕ್ಟರಿಯಿಂದ ಮನೆಗೆ ಬರುವಾಗ ಅಕ್ಕಸಾಲಿಗನಲ್ಲಿ ಅದನ್ನು ಮಾರುವಾಗ ಹಳೆಯದೆಲ್ಲ ನೆನಪಾಗಿ ಅವನು ಕುಳಿತಲ್ಲೇ ಕಣ್ಣೀರಾಗಿದ್ದ. ಅಕ್ಕಸಾಲಿಗನಿಗೆ ಇದೆಲ್ಲ ಹೊಸತಲ್ಲ. ಕೊಳ್ಳುವಾಗ ಸಂತೋಷದಿಂದ ಕೊಳ್ಳುವವರು ಅದರ ವಿರುದ್ಧ ಕ್ರಿಯೆಯಾದ ಮಾರುವಾಗ ಅಳುತ್ತಾರೆ. ಆಶ್ಚರ್ಯವೇನು? ಇದು ಅವನ ತರ್ಕ. ಆದರೆ ಅವನ ಆ ದುಃಖ ಮಗನಿಗೆ ಅವನ ಬಹುದಿನಗಳ ಕನಸಾದ ಸೈಕಲ್‌ ಕೊಳ್ಳುವಾಗ ಶಮನಗೊಂಡಿತ್ತು. ಕಂಗಳಲ್ಲಿ ನೀರ ಪರದೆ ಇತ್ತು. ಆದರೆ ಮನದಲ್ಲಿ ದುಃಖ ಕಡಿಮೆ.

ಮನೆಗೆ ಬಂದವನು ತಂದ ಸೈಕಲ್ಲನ್ನು ನೋಡಿದವನೇ ಮಗ ಓಡಿ ಬಂದು ಅವನನ್ನು ಅಪ್ಪಿಕೊಂಡ. ಮಗ ಬಂದಷ್ಟೇ ವೇಗದಿಂದ ಕಂಬನಿ ಹರಿದವು. ಬೆರಳಿನಲ್ಲಿದ್ದ ಉಂಗುರದ ಅನುಪಸ್ಥಿತಿ ಅವಳ ಗಮನಕ್ಕೆ ಬಾರದೆಯೇ ಇರಲಿಲ್ಲ. ಅವಳು ಕೇಳಲಿಲ್ಲ. ಮೊದಲಾದರೆ ಖಂಡಿತವಾಗಿ ಕೇಳುತ್ತಿದ್ದಳು. ಆದರೆ ಅವನ ಜೊತೆಯ ಈ ಐದು ವರ್ಷದ ಜೀವಿತ ಅವಳಿಗೆ ಇಂಥದೊಂದು ಜೀವನ್ಮುಖಿ ವೈರಾಗ್ಯ ತಂದುಕೊಟ್ಟುಬಿಟ್ಟಿದೆ. ಅವಳಿಗೀಗ ಗೊತ್ತು - ಅವನು ಆ ಉಂಗುರವಿಲ್ಲದೆ, ಅವಳ ಮಾತಿಲ್ಲದೆ, ನಗೆಯಿಲ್ಲದೆ, ಕೇವಲ ಅವಳ ಇರುವಿಕೆಯಲ್ಲೇ ಅವಳನ್ನು ಉತ್ಕಟವಾಗಿ ಪ್ರೀತಿಸಬಲ್ಲ ಮತ್ತು ಪ್ರೀತಿಸುತ್ತಿದ್ದಾನೆ. ಅವನು ಪ್ರತಿಯಾಂದನ್ನು ಹೇಳಿಕೊಳ್ಳುವುದಿಲ್ಲ. ಆದ್ದರಿಂದ ತಾನು ಅರ್ಥ ಮಾಡಿಕೊಳ್ಳಬೇಕು. ಮತ್ತು ಮಾಡಿಕೊಳ್ಳುತ್ತಿದ್ದಾಳೆ.

ಅವನ ಮನಸ್ಸು ಗೊಂದಲಕ್ಕೆ ಬಿದ್ದಿತ್ತು. ಮತ್ತು ಆ ಗೊಂದಲಕ್ಕೂ ಸಾವಿರ ಪಟ್ಟು ದುಃಖ ಅವನನ್ನು ಆಕ್ರಮಿಸಿಕೊಂಡಿತ್ತು. ‘ಅವಳಿಗೆ ಹೇಳಿಬಿಡಲಾ? ಹಾಗೆ ಹೇಳಿದಕೂಡಲೇ ಅವಳು ಅದನ್ನು ಅಂಗೀಕರಿಸುತ್ತಾಳಾ? ಅಂಗೀಕರಿಸಿದರೆ ತಡೆದುಕೊಳ್ಳುತ್ತಾಳಾ? ಸಾಧ್ಯವಿಲ್ಲ. ಅವಳನ್ನು ತಾನು ಮಾನಸಿಕವಾಗಿ ಸಾಕಷ್ಟು ಗಟ್ಟಿ ಮಾಡಿರಬಹುದು. ಕಷ್ಟಗಳಿಗೆ ಸೋಲದೇ ನಿಲ್ಲುವುದನ್ನು ಕಲಿಸಿರಬಹುದು. ಆದರೆ ಇದು ಸಾವು: ಮಗನದು. ತಾಯಿ ಹೃದಯಕ್ಕೆ ತರ್ಕ ಅರ್ಥವಾಗುವುದಿಲ್ಲ, ತತ್ವಶಾಸ್ತ ತಿಳಿಯುವಿದಿಲ್ಲ. ಮುಂಚೆಯೇ ತಿಳಿಸಿದರೆ ಕನಿಷ್ಠ ಮಗನ ಸಾವು ಸಂಭವಿಸಿದಾಗ ಸ್ವಲ್ಪವಾದರೂ ದುಃಖ ಕಡಿಮೆ ಆಗುತ್ತದಾ? ಉಹುಂ, ಇವೆಲ್ಲ ಅರ್ಥಹೀನ ನಿಷ್ಕರ್ಶೆ.’ ಅವನು ಯೋಚಿಸುವುದನ್ನು ಬಿಟ್ಟುಬಿಟ್ಟನು.

ಒಮ್ಮೆ ಹೊರಗೆ ಹೋಗಿನೋಡಿದರೆ ಕತ್ತಲು ದಟ್ಟವಾಗಿತ್ತು; ಆದರೂ ಒಳಗಿನ ಕತ್ತಲಷ್ಟೇನಲ್ಲ. ಸಂಜೆತನಕ ಜಿನಿಜಿನಿ ಸುರಿದ ಮಳೆ ನಿಂತಿದ್ದರೂ, ಮಳೆಯ ನೆನಪಿಗಿರಲಿ ಅಂತ ಮನೆಯ ಮಣ್ಣಿನ ರೂಹು ಹಿಡಿದಿಟ್ಟುಕೊಂಡಿದ್ದ ಮಳೆನೀರು ಹನಿಹನಿಯಾಗಿ ತೊಟ್ಟಿಕ್ಕುತ್ತಿತ್ತು. ಸೋರದ ಒಂದಿಷ್ಟು ಜಾಗೆಯಲ್ಲೇ ಹಾಸಿಗೆ ಹಾಸಿಕೊಂಡು ಅಮ್ಮ ಮಗ ಮಲಗಿದ್ದರು. ಆಡಿ ಆಡಿ ದಣಿದಿದ್ದ ಮಗ ಸೈಕಲ್ಲಿನ ಪೆಡಲನ್ನು ಕೈಯಲ್ಲಿ ಹಿಡಿದೇ ಮಲಗಿದ್ದ. ಅದನ್ನು ಬಿಡಿಸಿ ತಮ್ಮ ಮಧ್ಯೆ ಮಲಗಿಸಿಕೊಳ್ಳುವಾಗ ಚೂರು ಎಚ್ಚರವಾಗಿ ಮತ್ತೆ ಮಲಗಿದ.

ಒಂದು ಗಾಢ ಮೌನ ಆವರಿಸಿತ್ತು. ತೊಟ್ಟಿಕ್ಕುವ ಹನಿ, ಹೆಸರು ಗೊತ್ತಿರದ ಹುಳಹುಪ್ಪಡಿ ಏಕೋ ಮೌನವನ್ನು ನಿರ್ನಾಮಗೊಳಿಸಲು ಪ್ರಯತ್ನ ಪಟ್ಟು ಸೋಲುತ್ತಿದ್ದವು. ಕಪ್ಪೆ ಅದ್ಯಾವ ಹಾವಿನ ಹೊಟ್ಟೆ ಸೇರಿತ್ತೋ, ಸುಮ್ಮನಿತ್ತು. ಕತ್ತಲು ಕವಿದದ್ದರಿಂದ ಅವನ ಕಂಬನಿ ಕಾಣುತ್ತಿರಲಿಲ್ಲ. ಬಿಕ್ಕುಗಳು ಕೂಡ ಜಾಣ ಮಕ್ಕಳಂತೆ ನಿಶ್ಯಬ್ದವಾಗಿ, ಕೊನೆಗೆ ಮಲಗಿಬಿಟ್ಟಿದ್ದವು. ಅವನಿಗೇ ಗೊತ್ತಿಲ್ಲದಂತೆ, ಅವನನ್ನು ಮಲಗಿಸಿದ್ದು ಫ್ಯಾಕ್ಟರಿ ದುಡಿಮೆಯ ದಣಿವಾ? ರಾತ್ರಿಯಾ? ಅವನಿಗೂ ತಿಳಿಯಲಿಲ್ಲ.

ನಿದ್ರೆ ಮುಸುಕಿ ಅದೆಷ್ಟು ಹೊತ್ತಾಗಿತ್ತೋ ಗೊತ್ತಿಲ್ಲ, ಮಳೆಯು ತಂದಿದ್ದ ತೇವಕ್ಕೆ ನೆನೆದು ನೆನೆದು ಸಹನೆ ಕಳೆದುಕೊಂಡಿದ್ದ ರೂಹಿನ ಮರದ ತೊಲೆಯಾಂದು ಮಲಗಿದ್ದವರ ಮೇಲೆ ಅಸಹಾಯಕವಾಗಿ ಬಿದ್ದಿತ್ತು. ಪಕ್ಕಕ್ಕೆ ಮಲಗಿದ್ದ ಹೆಂಡತಿ-ಮಗ ಚಿಕ್ಕ ಸದ್ದೂ ಮಾಡಲಾಗದೆ ಸತ್ತಿದ್ದರು. ಅವರಿಗಿಂತ ಹತ್ತಾರು ಕ್ಷಣಗಳ ಹೆಚ್ಚು ಆಯುಷ್ಯ ಅವನ ಜೀವಕ್ಕಿತ್ತು. ಪಕ್ಕದಲ್ಲಿ ಜೀವ ಹೋದ ಹೆಂಡತಿ ಮಗನನ್ನು ನೋಡಿ ಒಂದು ಸಮಾಧಾನದ ನಗೆ ನಕ್ಕು ಅವನೂ ಕಣ್ಮುಚ್ಚಿದ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more