ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆವ್ವದ ಮನೆಯಲ್ಲಿ... (ಭಾಗ 3)

By Staff
|
Google Oneindia Kannada News

(ಕಥೆ ಮುಂದುವರಿದಿದೆ...)

ಅವನನ್ನೇ ಬೆರಗು ಹತ್ತಿದದವನಂತೆ ನೋಡಿದ ದಿವಾಕರನ ಮುಂಗೈ ತಟ್ಟಿ ಹೇಳಿದ ಮೂರ್ತಿ: ''ನೋಡಯ್ಯ, ನೀನಿಷ್ಟು ಗಾಬರಿಯಾಗೋದು ಬೇಡ. ಈ ಒಂದು ರಾತ್ರೀನ ಅಲ್ಲಿ ಕಳೀತೀವಿ. ಅಲ್ಲಿ ಇರೋದಿಕ್ಕೆ ಆಗೋದಿಲ್ಲ ಅಂತ ಕಂಡುಬಂದ್ರೆ ನೇರವಾಗಿ ನಿನ್ನ ಮನೆಗೆ ಬಂದುಬಿಡ್ತೀವಿ. ಸರಿ ತಾನೆ?"" ಹಾಗೆಂದವನೇ ಗಡಿಯಾರದತ್ತ ನೋಡಿ ''ಹ್ಞೂಂ, ಹತ್ತುಗಂಟೆಯಾಗಿಹೋಗಿದೆ. ನನಗಂತೂ ಜೋರು ನಿದ್ದೆ ಬರ್ತಾ ಇದೆ. ಆ ಮನೆ ಎಲ್ಲಿದೆ ಅಂತ ಸ್ವಲ್ಪ ತೋರಿಸಿಬಿಡು ನಡೆ"" ಎಂದವನೆ ಮುಂದಿನ ಮಾತಿಗೆ ಅವಕಾಶವಿಲ್ಲದಂತೆ ಎದ್ದು ನಿಂತ.

ದಿವಾಕರನ ಹೆಂಡತಿಗೆ ಬಿಡಿಬಿಡಿ ಪದಗಳಲ್ಲಿ ನಮ್ಮ ನಿರ್ಧಾರವನ್ನು ಅರುಹಿ ಅವಳ ಮುಖದಲ್ಲಿ ಮೂಡಿದ ಭಯಾಶ್ಚರ್ಯಗಳನ್ನು ಅಲಕ್ಷಿಸಿ ನಮ್ಮ ಸೂಟ್‌ಕೇಸು ಮತ್ತು ಬ್ಯಾಗುಗಳನ್ನು ದಿವಾಕರನ ಕಾರಿಗೆ ಹಾಕಿ ದೆವ್ವದ ಮನೆಯತ್ತ ಹೊರಟೆವು.

ಸ್ಟರ್ಲಿಂಗ್‌ ಥಿಯೇಟರಿನಿಂದ ನೇರವಾಗಿ ದಕ್ಷಿಣಕ್ಕೆ ಸಾಗಿದ ರಸ್ತೆಯಲ್ಲಿ ವಾಹನ ನಿಧಾನವಾಗಿ ಚಲಿಸಿತು. ಗೊಬ್ಬಳಿ ಮರದ ಬಳಿ ಬಲಕ್ಕೆ ಹೊರಳಿ ಎರಡು ನಿಮಿಷ ಸಾಗಿ ನಿಂತಿತು. ಮೂವರೂ ಕೆಳಗಿಳಿದೆವು.

ಅಲ್ಲೊಂದು ಇಲ್ಲೊಂದು ಬೀದಿ ದೀಪಗಳು, ಹೆಚ್ಚಿನ ಮನೆಗಳು ಕತ್ತಲಲ್ಲಿ ಮುಳುಗಿದ್ದವು. ಸ್ವಲ್ಪ ದೂರದಲ್ಲಿ ಬಾರಿನಂತೆ ಕಂಡ ಅಂಗಡಿಯೊಂದರ ಮುಂದೆ ನಿಂತಿದ್ದ ಎರಡು ಮೂರು ಜನರನ್ನು ಬಿಟ್ಟರೆ ಇಡೀ ರಸ್ತೆ ನಿರ್ಜನವಾಗಿತ್ತು.

ಈ ಪ್ರದೇಶ ನನಗೆ ಅಪರಿಚಿತವೇನೂ ಆಗಿರಲಿಲ್ಲ. ನಾನು ಚಿಕ್ಕವನಾಗಿದ್ದಾಗ ಈ ಜಾಗವೆಲ್ಲಾ ರಾಗಿ, ಜೋಳ ಬೆಳೆಯುವ ಹೊಲಗಳಾಗಿದ್ದುದು ನನಗಿನ್ನೂ ನೆನಪಿದೆ. ಆಗ ಸ್ಟರ್ಲಿಂಗ್‌ ಥಿಯೇಟರ್‌ನಿಂದ ನೂರಿನ್ನೂರು ಗಜಗಳವರೆಗೆ ಮಾತ್ರ ಮನೆಗಳಿದ್ದವು. ಅದರಾಚೆ ಹೊಲಗಳು. ವಿದ್ಯಾರಣ್ಯಪುರಂನಲ್ಲಿದ್ದ ನಮ್ಮ ಮನೆಯಿಂದ ಹೊರಟು ಕೈಲಿ ಕ್ಯಾಟರ ಬಿಲ್ಲು ಹಿಡಿದು ಗೆಳೆಯರ ಜತೆ ಸೇರಿ ಹಕ್ಕಿಗಳ ಬೇಟೆಗೆಂದು ಇಲ್ಲೆಲ್ಲಾ ಅಲೆದಾಡಿದ್ದು ಇನ್ನೂ ನೆನಪಿದೆ. ಈಗ ಆ ಹೊಲಗಳೆಲ್ಲವೂ ಮಾಯವಾಗಿ ಮೂರು ನಾಲ್ಕು ಕಿಲೋಮೀಟರ್‌ಗಳಾಚೆಯ ಕೊಪ್ಪಲೂರಿನವರೆಗೂ ಮನೆಗಳು ಎದ್ದುಬಿಟ್ಟಿರುವುದನ್ನು ಎರಡು ವರ್ಷಗಳ ಹಿಂದೊಮ್ಮೆ ಇತ್ತ ಬಂದಾಗ ನೋಡಿದ್ದೆ. ಮೈಸೂರು ನಗರ ಬೆಳೆಯುತ್ತಿರುವ ವೇಗ ನನ್ನನ್ನು ಬೆರಗುಗೊಳಿಸಿತ್ತು. ವ್ಯವಸಾಯದ ಜಮೀನುಗಳೆಲ್ಲ ಹೀಗೆ ಸೈಟುಗಳಾಗಿ ಮನೆಗಳೆದ್ದುಬಿಟ್ಟರೆ ಬೆಳೆ ಬೆಳೆಯುವುದೆಲ್ಲಿ ಎಂಬ ಯೋಚನೆ ನನಗೆ ಆಗ ಬಂದದ್ದುಂಟು.

''ಅದೇ ಮನೆ.""ದಿವಾಕರನ ದನಿ ಕೇಳಿ ನನ್ನ ನೆನಪಿನ ಲೋಕದಿಂದ ಹೊರಬಂದು ಮುಂದೆ ನೋಡಿದೆ. ರಸ್ತೆಯ ಒಂದು ಪಕ್ಕ ಎತ್ತರದ ದಿಣ್ಣೆಯೊಂದರ ಮೇಲೆ ನಿಂತ ಒಂಟಿ ಮನೆ ಅದು. ಆ ದಿಣ್ಣೆ ನನಗೆ ಚೆನ್ನಾಗಿ ನೆನಪಿದೆ. ಹಿಂದೆ ಅದರ ನಟ್ಟ ನಡುವೆ ಒಂದು ಬೃಹದಾಕಾರದ ನೇರಳೇ ಮರವಿತ್ತು. ಅದರ ಹಣ್ಣುಗಳನ್ನು ತಿನ್ನಲು ಬರುತ್ತಿದ್ದ ಹಕ್ಕಿಗಳನ್ನು ಹೊಡೆಯಲು ನಾವು ಅಲ್ಲಿ ಗಂಟೆಗಟ್ಟಲೆ ಕೂತದ್ದುಂಟು. ಸಮತಟ್ಟಾದ ಹೊಲಗಳ ನಡುವೆ ಈ ದಿಣ್ಣೆ ಹೇಗೆ ಮೂಡಿತು ಎಂದು ನಾವು ಆಗ ತಲೆ ಕೆಡಿಸಿಕೊಂಡಿದ್ದೆವು. ಅದರ ಬಗ್ಗೆ ನಮ್ಮ ಊಹಾಪೋಹಗಳು ಲಂಗುಲಗಾಮಿಲ್ಲದೇ ಹರಿಯುತ್ತಿದ್ದವು. ಅದರಡಿಯಲ್ಲಿ ಭಾರಿ ನಿಧಿ ಹೂತಿರಬೇಕೆಂದು ಒಬ್ಬ ಹೇಳಿದರೆ ನೂರಾರು ವರ್ಷಗಳ ಹಿಂದೆ ಅಲ್ಲಿ ನಡೆದ ದೊಡ್ಡ ಯುದ್ದವೊಂದರಲ್ಲಿ ಮಡಿದ ಸಾವಿರಾರು ಸೈನಿಕರನ್ನು ಅಲ್ಲಿ ಒಟ್ಟಿಗೆ ಸಮಾಧಿ ಮಾಡಿದ್ದಾರೆ ಎಂದು ನಮ್ಮ ತಾತ ಹೇಳಿದ ಎಂದು ಮತ್ತೊಬ್ಬ ರೈಲು ಬಿಡುತ್ತಿದ್ದ.ಹಿಂದೆ ಅಲ್ಲಿದ್ದ ಭಾರೀ ನೇರಳೆ ಮರ ಈಗಿರಲಿಲ್ಲ. ಅದಿದ್ದ ಸ್ಥಳದಲ್ಲಿ ಈ ಭೂತ ಬಂಗಲೆ ಎದ್ದು ನಿಂತಿತ್ತು.

ಮೂವರೂ ನಿಧಾನವಾಗಿ ದಿಣ್ಣೆಯನ್ನೇರಿ ಮನೆಯನ್ನು ಸಮೀಪಿಸಿದೆವು. ಅದರ ಮುಂಬಾಗಿಲಲ್ಲಿ ನಿಂತು ತಲೆಯೆತ್ತಿ ನೋಡಿದಾಗ ಒಂದಂತಸ್ತಿನ ಆ ಮನೆ ರಸ್ತೆಯಿಂದ ಕಂಡದ್ದಕ್ಕಿಂತಲೂ ಎತ್ತರವಾಗಿದೆಯೆಂದು ನನಗನಿಸಿತು.

ನೀಳವಾದ ಬೀಗದ ಕೈಯನ್ನು ಹೊರತೆಗೆದ ದಿವಾಕರ ಮೂರ್ತಿಯತ್ತ ನೋಡಿ ಗಂಭೀರ ದನಿಯಲ್ಲಿ ಕೇಳಿದ:''ಮತ್ತೊಮ್ಮೆ ಹೇಳುತ್ತಿದ್ದೇನೆ, ನೀವಿಬ್ಬರೂ ಇಲ್ಲಿರುವುದು ಬೇಡ. ಮನೆಗೆ ಹೊರಟುಬಿಡೋಣ,""
''ಅಯ್‌ು ತೆಗೆಯಯ್ಯ ಬಾಗಿಲನ್ನ"" ಎನ್ನುತ್ತಾ ಮೂರ್ತಿ ದಿವಾಕರನ ಕೈಯಿಂದ ಬೀಗದ ಕೈಯನ್ನು ಕಿತ್ತುಕೊಂಡು ತಾನೇ ಬೀಗ ತೆರೆದ.

ಮೂವರೂ ಒಳಗೆ ಪ್ರವೇಶಿಸಿದವು.ವಿಶಾಲವಾದ ಹಜಾರ, ಅದರ ಎಡಕ್ಕೆ ಎರಡು ದೊಡ್ಡ ದೊಡ್ಡ ಕೋಣೆಗಳು, ಹಜಾರದ ಬಲಕ್ಕೆ ಊಟದ ಮನೆ, ಅಡಿಗೆ ಮನೆಗಳಿದ್ದವು. ಹಜಾರದ ಆಚೆಬದಿಯಲ್ಲಿ ಅಂದರೆ ಮುಂಬಾಗಿಲಿಗೆ ನೇರವಾಗಿ ಎದುರಿಗೆ ಅಗಲದ ಪರದೆ ಇತ್ತು. ಅದರ ಹಿಂದಿರುವುದೇ ಮಾಸ್ಟರ್‌ ಬೆಡ್‌ರೂಂ ಎಂದು ದಿವಾಕರ ಹೇಳಿದ. ಊಟದ ಮನೆಯ ಬಲಕ್ಕೆ ಮಹಡಿಗೆ ಏರಿಹೋಗಲು ಮೆಟ್ಟಲುಗಳಿದ್ದವು. ಅದಕ್ಕೆ ಹೊಂದಿಕೊಂಡಂತೆ ನಾಲ್ಕಡಿ ಅಗಲದ ಕತ್ತಲುಗಟ್ಟಿದ ಪ್ಯಾಸೇಜ್‌. ಅದು ಬಾತ್‌ರೂಂ ಮತ್ತು ಟಾಯ್ಲೆಟ್‌ಗೆ ಹೋಗುವ ಹಾದಿ ಎಂದು ದಿವಾಕರ ಹೇಳಿದ. ''ಸೊಗಸಾದ ಮನೆ ಕಣಯ್ಯ"" ಮನೆಯೊಳಗೆ ಒಂದು ಸುತ್ತು ಹಾಕಿ ಮಹಡಿಯ ಮೇಲೂ ಏರಿಹೋಗಿ ಬಂದ ಮೂರ್ತಿ ಮೆಚ್ಚಿಕೆಯ ಮಾತಾಡಿದ.''ನೀನೂ ಒಮ್ಮೆ ಮೇಲೆಲ್ಲಾ ಹೋಗಿ ನೋಡಿ ಬಾ"" ಎಂದ ದಿವಾಕರ. ನನಗೆ ಆಸಕ್ತಿಯಿರಲಿಲ್ಲ. ''ನಾಳೆ ನೋಡಿದರಾಯಿತು ಬಿಡು"" ಎನ್ನುತ್ತಾ ಅಲ್ಲೇ ಸೋಫಾದಲ್ಲಿ ಕುಳಿತೆ. ನನ್ನ ಪಕ್ಕದಲ್ಲೇ ಅವನೂ ಕುಳಿತ.

''ನಿನಗೆ ನಿದ್ದೆ ಬರುತ್ತಿಲ್ಲವಾದರೆ ಒಂದೆರಡು ವಿಷಯ ಹೇಳಬಯಸುತ್ತೇನೆ"" ಎಂದ ದಿವಾಕರ. ಅವನು ಯಾವುದೋ ಗಾಢ ಯೋಚನೆಯಲ್ಲಿರುವುದು ಅವನ ಮುಖಭಾವದಿಂದ ನನಗೆ ಅರಿವಾಯಿತು. ''ಅದೇನು ಹೇಳು. ನನಗಿನ್ನೂ ನಿದ್ದೆ ಬರುತ್ತಿಲ್ಲ"" ಎಂದು ಅವನನ್ನು ಉತ್ತೇಜಿಸುವ ದನಿಯಲ್ಲಿ ಹೇಳಿದೆ. ಅದಕ್ಕೇ ಕಾದಿದ್ದವನಂತೆ ಅವನು ಹೇಳತೊಡಗಿದ. ''ನೋಡು, ತಲೆ ಗಟ್ಟಿಯಿದೆ ಎಂದು ಬಂಡೆಗೆ ಗುದ್ದಿಕೊಳ್ಳೋ ಬುದ್ದಿ ಮೂರ್ತಿಯದು. ನನ್ನ ಮಾತುಗಳನ್ನ ಸರಿಯಾಗಿ ಕೇಳೋ ತಾಳ್ಮೆಯೇ ಅವನಿಗಿಲ್ಲ. ನೀನು ಅವನಂತಲ್ಲ. ಹೀಗಾಗಿ ನಿನಗೆ ಒಂದೆರಡು ಮಾತು ಹೇಳ್ತೀನಿ. ವಾರದ ಹಿಂದೆ ಈ ವಿಚಿತ್ರ ಅನುಭವವಾದ ನಂತರ ನಾನು ದೆವ್ವ ಭೂತಗಳ ಬಗ್ಗೆ ಸಾಕಷ್ಟು ಪುಸ್ತಕ ತಿರುವಿ ಹಾಕ್ದೆ. ನನಗೆ ತಿಳಿದ ವಿಷಯಗಳು ನನ್ನನ್ನ ಗಾಬರಿಗೊಳಿಸ್ತಾ ಇವೆ. ದೆವ್ವ ಅಥವಾ ಮನುಷ್ಯನ ಪ್ರೇತ ರೂಪಗಳು ಕಲ್ಪನೆಗಳಲ್ಲ. ಅವು ನಿಜವಾಗಿಯೂ ಇವೆ. ಮತ್ತೂ ಯಾವಾಗಲೂ, ಎಲ್ಲೆಲ್ಲಿಯೂ ಇವೆ. ನಮ್ಮ ಕಣ್ಣಿಗೆ ಕಾಣಿಸದೇ ಅವು ನಮ್ಮ ಸುತ್ತಮುತ್ತಲೆಲ್ಲ ತಿರುಗಾಡುತ್ತಿರುತ್ತವೆ.ಅವುಗಳ ದಾರಿಗೆ ನಾವೇನಾದರೂ ಅಡ್ಡ ಬಂದರೆ ಅವು ಪಕ್ಕಕ್ಕೆ ಸರಿದು ಹೋಗೋದಿಲ್ಲ. ಬದಲಾಗಿ ನೇರವಾಗಿ ನಮ್ಮ ಶರೀರದೊಳಗೆ ಒಂದು ಕಡೆ ಪ್ರವೇಶಿಸಿ ಇನ್ನೊಂದು ಕಡೆಯಿಂದ ಹೊರಬರುತ್ತವೆ. ಅವು ನಮ್ಮ ದೇಹದೊಳಗಿದ್ದ ಅರೆಕ್ಷಣದಲ್ಲಿ ನಮಗೆ ಎದೆಯಾಳದಲ್ಲಿ ಛಳಿಯ ಅನುಭವವಾಗುತ್ತದೆ. ಇದನ್ನು ಓದಿದ ಮೇಲೆ ಇಂಥಾ ಛಳಿಯ ಅನುಭವಗಳು ನನಗೆ ಅನೇಕ ಬಾರಿ ಆಗಿರುವುದು ನೆನಪಿಗೆ ಬಂದು ಬೆವತುಹೋದೆ. ಮತ್ತೆ ಯಾವುದೇ ಸ್ಥಳದಲ್ಲಿ ಅಂದರೆ ಮನೆಯ ಯಾವ ಕೋಣೆಯಲ್ಲಿ ದೆವ್ವ ಇರುತ್ತದೋ ಅಲ್ಲಿ ತಾಪಮಾನ ಬೇರೆ ಕಡೆಗಿಂತ ಬಹಳ ಕೆಳಗಿದ್ದು ಅಲ್ಲಿರುವವರಿಗೆ ಛಳಿಯ ಅನುಭವ ಆಗುತ್ತೆ. ಇದನ್ನೆಲ್ಲ ನಿನಗೆ ಯಾಕೆ ಹೇಳುತ್ತಿದ್ದೇನೆ ಅಂದರೆ ಈ ಮನೆಯಲ್ಲಿನ ಯಾವುದೇ ಸ್ಥಳದಲ್ಲಿ ನಿನಗೆ ಛಳಿಯ ಅನುಭವವಾದರೆ ತಕ್ಷಣ ಅಲ್ಲಿಂದ ಬೇರೆ ಕಡೆ ಹೋಗಿಬಿಡು.""

ಕಥೆಯ ನಾಲ್ಕನೆಯ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X