ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆವ್ವದ ಮನೆಯಲ್ಲಿ...

By Staff
|
Google Oneindia Kannada News

ಓಹ್‌, ನಾನದನ್ನು ಹೇಗೆ... ಓಹ್‌ ಹೇಗೆ ತಾನೆ ಹೇಳಲಿ?... ನೀವು ಅಳ್ಳೆದೆಯವರಾಗಿದ್ದರೆ ದಯವಿಟ್ಟು... ದಯವಿಟ್ಟು... ಮುಂದೆ ಓದಬೇಡಿ.

* ಪ್ರೇಮಶೇಖರ, ಪಾಂಡಿಚೆರಿ
[email protected]

ಈ ಪ್ರಕರಣದ ಬಗ್ಗೆ ಯಾರಿಗಾದರೂ ಹೇಳಬೇಕು ಎಂಬ ಯೋಚನೆ ನನಗೆ ಅದೆಷ್ಟೋ ಸಲ ಬಂದದ್ದುಂಟು. ಆದರೆ ಪ್ರತಿಸಲವೂ ಯಾವುದೋ ಅವ್ಯಕ್ತ ಶಕ್ತಿಯೊಂದು ನನ್ನ ನಾಲಿಗೆಯನ್ನು ಹಿಂದಕ್ಕೆ ಹಿಡಿದೆಳೆದಂತಾಗಿ ಹೇಳಲಾರದೇ ಇಷ್ಟು ದಿನಗಳವರೆಗೆ ಇದನ್ನು ನನ್ನೊಳಗೇ ಇಟ್ಟುಕೊಂಡಿದ್ದೆ. ಅದನ್ನು ಹೇಳಲೂ ಆಗದೇ ಒಳಗೆ ಇಟ್ಟುಕೊಳ್ಳಲೂ ಆಗದೆ ಸತತ ಏಳು ವರ್ಷಗಳ ಒದ್ದಾಟದ ನಂತರ ಈಗ ಬರವಣಿಗೆಯ ಮೂಲಕ ಹೊರಹಾಕಿ ನನ್ನೆದೆಯನ್ನು ಹಗುರ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ನನಗಾದ ಅನುಭವ ನಿಮಗೆಂದೂ ಆಗಿರಲಾರದು. ನೀವ್ಯಾರೂ ಇದನ್ನು ನಂಬಲಾರಿರಿ ಎಂಬ ಅಳುಕೂ ಸಹ ಇಷ್ಟು ದಿನಗಳವರೆಗೆ ಇದನ್ನು ನನ್ನೆದೆಯಲ್ಲೇ ಇಟ್ಟುಕೊಳ್ಳಲು ಕಾರಣವಾಗಿರಬಹುದು ಎಂದೂ ಒಮ್ಮೊಮ್ಮೆ ಅನಿಸುತ್ತದೆ.

ಇದು ನಡೆದದ್ದು ಏಳು ವರ್ಷಗಳ ಹಿಂದೆ- ತೊಂಬತ್ತೊಂಬತ್ತರ ಮೇ ತಿಂಗಳಲ್ಲಿ, ಹಿಂದೊಮ್ಮೆ ಸಹೋದ್ಯೋಗಿಯಾಗಿದ್ದ ಮನೋಹರನ ತಮ್ಮನ ಮದುವೆಗೆಂದು ಗೆಳೆಯ ಮೂರ್ತಿಯೊಡನೆ ಮೈಸೂರಿಗೆ ಹೋಗಿದ್ದಾಗ.

ಮೈಸೂರು ತಲುಪಿದಾಗ ಕತ್ತಲಾಗುತ್ತಿತ್ತು. ಬಸ್‌ಸ್ಟ್ಯಾಂಡಿನಲ್ಲೇ ಎದುರಾದ ಬಾಲ್ಯದ ಗೆಳೆಯ ದಿವಾಕರ ನಮ್ಮನ್ನು ತನ್ನ ಮನೆಗೆ ಕರೆದುಕೊಂಡು ಹೋದ. ಅವನ ಹೆಂಡತಿ ಸುಮತಿ ನೀಡಿದ ಬಿಸಿಬಿಸಿ ಕಾಫಿ ಹೀರಿ ಬಿಸಿನೀರಿನಲ್ಲಿ ಸ್ನಾನ ಮಾಡಿದ ನಂತರ ಆರಾಮವೆನಿಸಿತು. ನಮಗಾಗಿ ರಾತ್ರಿಯ ಊಟಕ್ಕಾಗಿ ವಿಶೇಷವನ್ನೇನಾದರೂ ಮಾಡುತ್ತೇನೆ ಎಂದು ಹೊರಟ ಹೆಂಡತಿಯನ್ನು ದಿವಾಕರ ತಡೆದ.

''ತುಂಬಾ ದಿನಗಳ ನಂತರ ಇವರಿಬ್ಬರೂ ಇಲ್ಲಿಗೆ ಬಂದಿದ್ದಾರೆ. ಮೂವರೂ ಹೊರಗೆ ಹೋಗಿ ಒಂದೆರಡು ಬಾಟಲು ಏರಿಸಿ ಗಡದ್ದಾಗಿ ಬಿರಿಯಾನಿ ಹೊಡೆದು ಬರುತ್ತೇವೆ. ಇಂಥಾ ಅವಕಾಶಗಳು ಮತ್ತೆ ಮತ್ತೆ ಸಿಗೋದಿಲ್ಲ.""

ಅವನು ನಗುತ್ತಾ ಹೇಳಿದುದಕ್ಕೆ ಅವನ ಹೆಂಡತಿ ಒಂದುಕ್ಷಣ ಮುಖ ಸಿಂಡರಿಸಿದರೂ ಮರುಕ್ಷಣ ''ಆಯ್ತು ನಿಮ್ಮಿಷ್ಟ"" ಎಂದಳು.

ವಾಸ್ತವವಾಗಿ ದಿವಾಕರನ ಸಲಹೆ ನನಗೆ ಅಪ್ಯಾಯಮಾನವಾಗಿ ಕಂಡಿತ್ತು. ಹನ್ನೆರಡು ಗಂಟೆಗಳ ಬಸ್‌ ಪ್ರಯಾಣದ ಆಯಾಸ ದೂರಾಗಬೇಕಾದರೆ ಸ್ವಲ್ಪ 'ಪರಮಾತ್ಮ"ನನ್ನು ಏರಿಸುವ ಅಗತ್ಯ ನನಗೂ ಕಂಡಿತ್ತು. ಪಟ್ಟಾಗಿ ಎರಡು ಮೂರು ಪೆಗ್‌ ಏರಿಸಿ ಹೊಟ್ಟೆತುಂಬಾ ಬಿರಿಯಾನಿ ಬಾರಿಸಿದರೆ ಭರ್ಜರಿ ನಿದ್ದೆ ಗ್ಯಾರಂಟಿ! ಬೆಳಿಗ್ಗೆ ನಿಧಾನವಾಗಿ ಎದ್ದು ಛತ್ರಕ್ಕೆ ಹೋದರಾಯಿತು. ಹೇಗೂ ರಿಸೆಪ್ಷನ್‌ ಇರುವುದು ಹನ್ನೆರಡೂವರೆಗೆ.

ಮನೆಗೆ ಹತ್ತಿರದಲ್ಲೇ ಇದ್ದ ಬಾರಿನ ಮೂಲೆಯ ಕ್ಯೂಬಿಕಲ್‌ನೊಳಗೆ ಕುಡಿತದ ನಡುವೆ ನಮ್ಮ ಮಾತುಕಥೆ ಸಾಗಿತು. ಯಾವುಯಾವುದೋ ವಿಷಯಗಳನ್ನೆತ್ತಿಕೊಂಡು ಸಾಕಷ್ಟು ಹೊತ್ತು ಮಾತಾಡಿದೆವು. ಅವೆಲ್ಲವನ್ನೂ ನಿಮಗೆ ಹೇಳುವ ಅಗತ್ಯವಿಲ್ಲವೆನಿಸುತ್ತದೆ. ಯಾಕೆಂದರೆ ಅವು ಯಾವುವೂ ನಾನು ಮುಂದೆ ಹೇಳಲಿರುವ ಘಟನೆಗೆ ಪೂರಕವಲ್ಲ. ಸುಮ್ಮನೆ ನಿಮ್ಮ ಸಮಯ ಹಾಳು ಮಾಡಿದಂತಾಗುತ್ತದೆ ಅಷ್ಟೇ. ಹೀಗಾಗಿ ನೇರವಾಗಿ ವಿಷಯಕ್ಕೆ ಬರುತ್ತೇನೆ.

''ನಿಮಗೊಂದು ವಿಲಕ್ಷಣ ಸುದ್ದಿ ಹೇಳಬೇಕು."" ಲೋಟವನ್ನು ಕೆಳಗಿಡುತ್ತಾ ಮೆಲ್ಲಗೆ ದನಿ ಹೊರಡಿಸಿದ ದಿವಾಕರ.

'ಏನದು?" ಎಂಬಂತೆ ನಾನೂ ಮೂರ್ತಿಯೂ ಅವನತ್ತ ನೋಡಿದೆವು.

ಕೆಲಕ್ಷಣ ತಡೆದು ಹೇಳಲೋ ಬೇಡವೋ ಎಂಬಂತೆ ದಿವಾಕರ ಬಾಯಿ ತೆರೆದ.

''ಇದೊಂದು ದೆವ್ವದ ಸಮಾಚಾರ. ನಿಮಗಿಬ್ಬರಿಗೂ ದೆವ್ವ ಭೂತಗಳಲ್ಲಿ ನಂಬಿಕೆಯಿಲ್ಲ ಎಂದು ನನಗೆ ಗೊತ್ತು. ಆದರೂ ನನ್ನ ಗಮನಕ್ಕೆ ಬಂದ ಈ ಸಂಗತಿಯನ್ನು ನಿಮಗೆ ಹೇಳಬೇಕೆನಿಸುತ್ತದೆ.""

ನಾನೂ ಮೂರ್ತಿಯೂ ಪರಸ್ಪರ ಮುಖ ನೋಡಿಕೊಂಡೆವು. ನಮ್ಮಿಬ್ಬರ ಮುಖಗಳಲ್ಲಿ ನಸುನಗೆಯ ಎಳೆ ಸುಳಿದದ್ದು ಬಹುಷಃ ದಿವಾಕರನಿಗೆ ಗೊತ್ತಾಗಲಿಲ್ಲವೆನಿಸುತ್ತದೆ, ಮಾತು ಮುಂದುವರೆಸಿದ:

''ಕಳೆದ ತಿಂಗಳು ನಮ್ಮ ಮಾವನವರು ಇಲ್ಲೇ ಜೆ ಪಿ ನಗರದ ಫಸ್ಟ್‌ ಸ್ಟೇಜ್‌ನಲ್ಲಿ ಹಳೆಯ ಒಂದಂತಸ್ತಿನ ದೊಡ್ಡ ಮನೆಯೊಂದನ್ನು ಕೊಂಡರು. ಹಲವಾರು ವರ್ಷಗಳಿಂದ ಖಾಲಿ ಬಿದ್ದಿದ್ದ ಮನೆ ಅದು. ಅಗತ್ಯವಿದ್ದ ಸಣ್ಣಪುಟ್ಟ ರಿಪೇರಿಗಳನ್ನು ಮಾಡಿಸಿ ಕಳೆದ ಬುಧವಾರ ಗೃಹಪ್ರವೇಶವನ್ನೂ ಮಾಡಿದೆವು. ಹೋಮ ಮಾಡಿಸಿ, ಭರ್ಜರಿಯಾಗಿ ಸತ್ಯನಾರಾಯಣ ಪೂಜೆಯನ್ನೂ ಮಾಡಿದೆವು. ಗೃಹಪ್ರವೇಶವಾದ ರಾತ್ರಿ ಯಾರಾದರೂ ಅಲ್ಲಿ ಮಲಗಬೇಕೆಂಬ ರೂಢಿಯಿರುವುದರಿಂದ ಆ ರಾತ್ರಿ ನಾನೂ ನನ್ನ ದೊಡ್ಡ ಭಾವಮೈದುನ ನಾಗೇಶನೂ ಅಲ್ಲಿ ಮಲಗಿದೆವು. ಆದರೆ ಆ ರಾತ್ರಿಯನ್ನು ಅಲ್ಲಿ ಪೂರ್ತಿಯಾಗಿ ಕಳೆಯಲು ನಮಗೆ ಆಗಲೇ ಇಲ್ಲ."" ಮಾತು ನಿಲ್ಲಿಸಿದ ದಿವಾಕರ.

''ಯಾಕೆ ಏನಾಯ್ತು?"" ಮೂರ್ತಿ ಪ್ರಶ್ನಿಸಿದ. ನಾನೂ ಮೌನವಾಗಿ ದಿವಾಕರನ ಮುಖವನ್ನೇ ಪ್ರಶ್ನಾರ್ಥಕವಾಗಿ ನೋಡಿದೆ.

ಎರಡು ಗುಟುಕು ಪಾನೀಯ ಹೀರಿ ದಿವಾಕರ ಒಮ್ಮೆ ಬಾಗಿಲತ್ತ ನೋಡಿ ಅದೇ ತಗ್ಗಿದ ದನಿಯಲ್ಲಿ ಮಾತು ಮುಂದುವರೆಸಿದ:

''ನಿಜ ಹೇಳಬೇಕೆಂದರೆ ಅಲ್ಲಿ ಏನು ನಡೆಯಿತು ಅಂತ ನಂಗಿನ್ನೂ ಸರಿಯಾಗಿ ಅರ್ಥವಾಗಿಲ್ಲ. ನಾವಿಬ್ಬರೂ ಸುಮಾರು ಹತ್ತು ಗಂಟೆಗೆ ನಿದ್ದೆ ಹೋದೆವು. ಮಧ್ಯರಾತ್ರಿಯ ಹೊತ್ತಿಗೆ ಇಬ್ಬರಿಗೂ ಏಕಕಾಲದಲ್ಲಿ ಎಚ್ಚರವಾಯಿತು. ಯಾರೋ ನಡೆದಾಡುತ್ತಿರುವಂತಹ ಹೆಜ್ಜೆ ಸಪ್ಪಳ ಹಾಲ್‌ನಿಂದ ಕೇಳಿಬಂತು. ಕಳ್ಳರಿರಬಹುದೇನೋ ಎಂದುಕೊಂಡು ಎದ್ದು ದೀಪ ಹಾಕಿ ಹಾಲ್‌ಗೆ ಬಂದೆವು. ಅಲ್ಲಿ ಯಾರೂ ಇರಲಿಲ್ಲ. ಮುಂಬಾಗಿಲು, ಹಿಂಬಾಗಿಲು ಎರಡೂ ಭದ್ರವಾಗಿ ಮುಚ್ಚಿದ್ದವು. ಏನೂ ಅರ್ಥವಾಗದೆ ನಾವು ನಿಂತಾಗ ನಮ್ಮ ಪಕ್ಕದಲ್ಲೇ ಯಾರೊ ನಡೆದುಹೋದಂತಾಯಿತು! ಹಾಗೇ ನೋಡುತ್ತಿದ್ದಂತೇ ನಾವು ಮಲಗಿದ್ದ ಕೋಣೆಯ ಬಾಗಿಲು ತನಗೆ ತಾನೇ ಮುಚ್ಚಿಕೊಂಡಿತು. ಹಿಂದೆಯೇ ಯಾರೋ ಒಳಗಿನಿಂದ ಅಗುಳಿ ಹಾಕಿದ ಶಬ್ಧ.

ನಮ್ಮಿಬ್ಬರಿಗೂ ವಿಪರೀತ ಹೆದರಿಕೆಯಾಗಿ ಮೈಯೆಲ್ಲಾ ಜಳಜಳನೆ ಬೆವತುಹೋಯಿತು. ನಾಗೇಶನಂತೂ ಗಡಗಡನೆ ನಡುಗುತ್ತಿದ್ದ. ವಾಸ್ತವವಾಗಿ ಹೇಳಬೇಕೆಂದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹೆದರಿದ್ದೆ. ಇನ್ನೊಂದು ಕ್ಷಣವೂ ಅಲ್ಲಿ ಉಳಿಯುವ ಧೈರ್ಯ ನಮಗಿರಲಿಲ್ಲ. ಮೈಮೇಲಿದ್ದ ಪಂಚೆ ಬನಿಯನ್‌ನಲ್ಲೇ ಅಲ್ಲಿಂದ ಹೊರಟು ಮನೆ ಸೇರಿ ಎಲ್ಲ ಕಥೆಯನ್ನೂ ಮಾವನವರಿಗೆ ಹೇಳಿದೆವು. ಅವರಂತೂ ನಮ್ಮ ಯಾವ ಮಾತನ್ನೂ ನಂಬಲು ತಯಾರಿರಲಿಲ್ಲ. 'ಗಂಡಸರಾ ನೀವು?" ಎಂದು ನಮ್ಮನ್ನು ಹೀಯಾಳಿಸಿ ನಕ್ಕುಬಿಟ್ಟರು. ಅವರಿಗಂತೂ ದೆವ್ವ ಭೂತಗಳಲ್ಲಿ ಯಾವ ನಂಬಿಕೆಯೂ ಇರಲಿಲ್ಲ. 'ನಾಳೆ ನಾನೊಬ್ಬನೇ ಹೋಗಿ ಅಲ್ಲಿ ಮಲಗಿದ್ದು ಬರುತ್ತೇನೆ. ನೀವ್ಯಾರೂ ಬರುವುದು ಬೇಡ. ಆ ದೆವ್ವವೇನಾದರೂ ಎದುರು ಸಿಕ್ಕಿದರೆ ಮನೆ ಕಾಯಲು ನೇಮಿಸಿಕೊಳ್ಳುತ್ತೇನೆ" ಎಂದರು.""

ಈಗ ದಿವಾಕರನ ಕಥೆಯಲ್ಲಿ ನನಗೆ ಸ್ವಲ್ಪ ಕುತೂಹಲವುಂಟಾಗಿತ್ತು.

ಕಥೆಯ ಎರಡನೆಯ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X