• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನಗಾಗಿ ನೀನು ಬದುಕಬೇಕಮ್ಮ...

By Staff
|

ಪ್ರೀತಿಯ ಅಮ್ಮನಿಗೆ,

ಅಮ್ಮಾ ಹೇಗಿದ್ದೀಯಾ? ನಿನ್ನ ಪರಿಸ್ಥಿತಿ ಅರಿತೂ ಈ ಪ್ರಶ್ನೆ ಕೇಳುತ್ತಿರುವುದಕ್ಕೆ ಕ್ಷಮೆಯಿರಲಿ. ಇದು ನಾನು ನಿನಗೆ ಬರೆಯುತ್ತಿರುವ ಮೊದಲ ಪತ್ರ. ಇಂತಹ ಪರಿಸ್ಥಿತಿ, ಅಂದರೆ ಈ ಬಗೆಯ ಪತ್ರ ಬರೆಯುವ ಪರಿಸ್ಥಿತಿ ಪ್ರಪಂಚದಲ್ಲಿ ಯಾರಿಗೂ ಬಾರದಿರಲಿ.

ನನ್ನ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ಜುಗುಪ್ಸೆಯಾಗುತ್ತಿದೆ. ಸಂಕಟದ ಸಮಯದಲ್ಲೂ ನಿನ್ನೊಂದಿಗೆ ಇರಲಾಗದ ನನ್ನ ಬದುಕಿಗೆ ಧಿಕ್ಕಾರವಿರಲಿ. ಒಂದೊಂದು ಸಲ ಕೆಲಸ ಬಿಟ್ಟು ಊರಿಗೆ ಓಡಿ ಬರಲೇ ಅನಿಸುತ್ತದೆ. ಆದರೆ ನಮ್ಮ ಮುಂದಿರುವ ಆರ್ಥಿಕ ಮುಗ್ಗಟ್ಟು, ಧೈರ್ಯವನ್ನು ಕಸಿಯುತ್ತದೆ.

ನಿನ್ನನ್ನು ಮುಖತಃ ಎದುರಿಸಲಾಗದೇ, ದೂರವಾಣಿಯಲ್ಲಿ ಹೇಳಲು ಸಾಧ್ಯವಾಗದೇ ಈ ಪತ್ರ ಬರೆಯುತ್ತಿದ್ದೇನೆ. ಕಾಲ ಚಕ್ರ ಉರುಳುತ್ತಲೇ ಇದೆ. ಹಿಂದೆ ಮುಂದೆ ಸಂತೆ ಸಾಲು... ಸಾವು ಯಾರಿಗಿಲ್ಲ ಎಂದೆಲ್ಲ ಹೇಳಿದರೂ/ಅರಿವಿದ್ದರೂ ಅಪ್ಪನ ಸಾವನ್ನು ನನಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡ, ಬೆಂಗಳೂರಿನ ವಾತಾವರಣದ ನಡುವೆ ಎಲ್ಲವನ್ನೂ ತುಸು ಮರೆತಂತೆ ಅನ್ನಿಸಿದರೂ, ಎದೆಯಲ್ಲಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಸಾಧ್ಯವೇ? ನೀನೇ ಹೇಳು.

ನನ್ನ ಪರಿಸ್ಥಿತಿಯೇ ಹೀಗಿದೆ. ಇನ್ನು ನಿನ್ನ ಪರಿಸ್ಥಿತಿಯನ್ನು ನಾನು ಯೋಚಿಸಬಲ್ಲೆ. ದೇವರು ನಮಗೆ ಮೋಸ ಮಾಡಿದ. ನಮ್ಮ ಕುಟುಂಬದಲ್ಲಿನ ನಗು ಕಂಡು ಅವನಿಗೆ ಹೊಟ್ಟೆಕಿಚ್ಚಾಗಿದೆ. ಈಗ ಅವನಿಗೆ ತುಸು ನೆಮ್ಮದಿ ಸಿಕ್ಕಿರಬಹುದು! ಕಷ್ಟಗಳು ನಮಗೆ ಹೊಸವೇನಲ್ಲ. ಆದರೆ ಆಗ ಧೈರ್ಯವಿತ್ತು. ನಮ್ಮಲ್ಲಿ ಛಲವಿತ್ತು. ಏನನ್ನೇ ಆಗಲಿ ಎದುರಿಸುವ ಉತ್ಸಾಹ ಇತ್ತು. ಎಲ್ಲಕ್ಕೂ ಮುಖ್ಯವಾಗಿ ಅಪ್ಪ ಇದ್ದರು.

ನಮ್ಮ ಪಾಲಿಗೆ ನೀನೀಗ ಅಮ್ಮ ಮಾತ್ರವಲ್ಲ... ಅಪ್ಪನೂ ಆಗಬೇಕು. ಆಗದ ಹೊರತು ಬೇರೆ ದಾರಿಗಳಿಲ್ಲ. ಇಷ್ಟು ವರ್ಷ ನಿನ್ನ ಮಕ್ಕಳಿಗೆ ನೆರಳು ನೀಡಿದ ನೀನು, ಇನ್ನು ಮುಂದೆಯೂ ನಮ್ಮ ಕೈಬಿಡುವುದಿಲ್ಲ ಎಂಬ ವಿಶ್ವಾಸ ನನ್ನದು. ಅಪ್ಪನನ್ನು ನಾವು ವಿಧಿಯ ಆಟದಲ್ಲಿ ಕಳೆದುಕೊಂಡಿದ್ದೇವೆ. ಸೋತಿದ್ದೇವೆ. ಆದರೆ ನಾವು ಕಲ್ಲಾಗೋಣ. ನಮ್ಮ ಸೌಭಾಗ್ಯ ಕಸಿದ, ಅವನಿಗೆ ನಾವ್ಯಾಕೆ ಹೆದರಬೇಕು?

ಅಮ್ಮ ನೀನು ಧೈರ್ಯ ತೆಗೆದುಕೊಳ್ಳಬೇಕು. ಕಾಲಕಾಲಕ್ಕೆ ಸರಿಯಾಗಿ ಊಟ ಮಾಡು. ನೀನು ನಮಗಾಗಿ ವಿಶೇಷವಾಗಿ ಈ ದಡ್ಡನಿಗಾಗಿ ಎಲ್ಲವನ್ನೂ ಎದುರಿಸಲೇಬೇಕು. ನಾನಿಂದು ಅನಾಥನಾಗಿದ್ದೇನೆ. ಆದರೆ ನೀನಿರುವೆ ಎಂಬ ಧೈರ್ಯ ತುಸು ಸಮಾಧಾನ ತಂದಿದೆ. ಅಣ್ಣನಿಗೆ ಧೈರ್ಯ ಹೇಳು. ಊರಲ್ಲಿ ಬೇಸರವಾದರೆ, ಬೆಂಗಳೂರಿಗೆ ಬಾ...

ಅಮ್ಮ ನಿನ್ನ ದುಃಖ ಮತ್ತು ನೋವನ್ನು ನಾನು ಊಹಿಸಿಯೇ ಗಾಬರಿಕೊಂಡಿದ್ದೇನೆ. ಅದನ್ನೆಲ್ಲ ಅನುಭವಿಸುತ್ತ, ನಮಗೆಲ್ಲ ಧೈರ್ಯ ಹೇಳುವವಳಂತೆ ನೀನು ನಟಿಸುತ್ತಿರುವುದನ್ನು ನಾ ಬಲ್ಲೆ. ನಿನ್ನ ಮನದಾಳದಲ್ಲೀಗ ಅಗ್ನಿಪರ್ವತವಿದೆ. ಆದರೆ ಮನುಷ್ಯರ ಕೈಯಲ್ಲಿ ಏನಿದೆ? ಅಪ್ಪನ ಉಳಿವಿಗಾಗಿ ಎಲ್ಲರೂ ಕೈ ಚಾಚಿದರು... ಆದರೆ ಅವನು ಕೈಕೊಟ್ಟ. ಸಮಾಧಾನ ಮಾಡಿಕೋ...

ಅಪ್ಪ ಬದುಕಿರುವ ತನಕ, ನೀನು ಅವರಿಗಾಗಿಯೇ ಬದುಕಿದೆ. ಈಗ ನಮಗಾಗಿ ಬದುಕು. ಅಪ್ಪನಿಗೆ ಹೆಂಡತಿಯಾಗಿ, ಗೆಳತಿಯಾಗಿ, ಮಾಡಿದ ತಪ್ಪುಗಳ ಕ್ಷಮಿಸುವ ಮತ್ತು ಸರಿಪಡಿಸುವ ತಾಯಿಯಾಗಿ ಜೊತೆಯಲ್ಲಿದ್ದೆ. ನಿನ್ನ ಬಗೆಗೆ ಅಪ್ಪನಿಗೆ ಸಾಕಷ್ಟು ಒಲವಿತ್ತು. ಹೀಗಾಗಿಯೇ ಅಮ್ಮನ ಮನಸ್ಸನ್ನು ನೋಯಿಸಬೇಡಿ ಎಂದು ನಮಗೆಲ್ಲ ಹೇಳುತ್ತಿದ್ದರು. ಅಪ್ಪನಿಗೆ ಸುಖ ನೀಡಲು/ ಅವರ ಕಷ್ಟಗಳ ಹಗುರಗೊಳಿಸಲು ನೀನು ಶಕ್ತಿಮೀರಿ ಪ್ರಯತ್ನಿಸಿರುವುದನ್ನು ನಾವು ಕಂಡಿದ್ದೇವೆ.

ಅವರಿಗದು ಸಾಯುವ ವಯಸ್ಸಲ್ಲ. ಆದರೆ ನಮ್ಮ ದುರದೃಷ್ಟದಿಂದ ನಡು ನೀರಲ್ಲಿ ನಮ್ಮನ್ನು ನಿಲ್ಲಿಸಿ, ತಮ್ಮ ಪಾಡಿಗೆ ತಾವು ಹೊರಟು ಹೋದರು. ಅವರಿಗೆ ಹೋಗುವ ಮನಸ್ಸಾದರೂ ಎಲ್ಲಿತ್ತು. ಅವನೇ ಗುಬ್ಬಚ್ಚಿಯನ್ನು ಹಾವು ಎತ್ತಿಕೊಂಡು ಹೋದಂತೆ, ಅಪ್ಪನನ್ನು ಎತ್ತಿಕೊಂಡು ಹೋದ. ಅಪ್ಪ ಇರುವವರೆಗೂ ಸುಖವಾಗಿದ್ದರು. ಜನರ ಪ್ರೀತಿಗೆ ಪಾತ್ರರಾಗಿದ್ದರು. ಒಬ್ಬ ಮನುಷ್ಯನಿಗೆ ಇಷ್ಟು ಸಾಕಲ್ಲವೇನಮ್ಮ... ?

ಅಪ್ಪ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಅವರು ನಮ್ಮ ಜೊತೆಯಲ್ಲಿಲ್ಲ. ಮನಸ್ಸಿನಲ್ಲಿದ್ದಾರೆ. ಮುಂದೆಯೂ ಇರುತ್ತಾರೆ. ಅವರ ಕನಸುಗಳಿಗೆ ನಾವು ಜೀವ ತುಂಬೋಣ. ಅವರ ಹಾದಿಯಲ್ಲಿಯೇ ಸಾಗೋಣ.

ಅಮ್ಮ ನಿನಗಾಗಿ ಮಿಡಿಯುವ ಜೀವಗಳು ಸಾಕಷ್ಟಿವೆ ಎನ್ನುವುದನ್ನು ನೀನು ಮರೆಯಬೇಡ. ನೀನು ಚೆನ್ನಾಗಿದ್ದರಷ್ಟೇ ನಾವಿಲ್ಲಿ ಉಸಿರಾಡಲು ಸಾಧ್ಯ. ಕಷ್ಟಗಳ ಮೂಟೆ ನಿನ್ನ ಮೇಲೆ ಬಿದ್ದಿದೆ. ಆದರೆ ನೀನು ಒಂಟಿಯಲ್ಲ. ನಿನ್ನೊಂದಿಗೆ ನಾವು ಮೂರು ಜನ ಮಕ್ಕಳಿದ್ದೇವೆ.

ಬದುಕು ಅಂದರೆ ಅಷ್ಟೇ ಅನಿಸುತ್ತದೆ. ಬಂದದ್ದನ್ನೆಲ್ಲ ಎದುರಿಸಲೇಬೇಕು. ಒಂದು ಪಡೆಯಲು ಇನ್ನೊಂದನ್ನು ಕಳೆದುಕೊಳ್ಳಬೇಕು. ಆದರೆ ನಮ್ಮ ಬದುಕಿನಲ್ಲಿ ಪಡೆದುದಕ್ಕಿಂತಲೂ ಕಳೆದುಕೊಂಡದ್ದೇ ಹೆಚ್ಚು. ಆದರೆ ಏನು ಮಾಡಲು ಸಾಧ್ಯ? ಯೋಗಿ ಪಡೆದದ್ದು ಯೋಗಿಗೆ. ಜೋಗಿ ಪಡೆದದ್ದು ಜೋಗಿಗೆ. ಬಂದದ್ದೆಲ್ಲ ಬರಲಿ ಎದುರಿಸೋಣ.

ಅಮ್ಮ, ದೇವರು ನಿನಗೆ(ನಮಗೆ) ಮೋಸ ಮಾಡಿದ್ದಾನೆ. ಆದರೂ ನೀನು ಅವನನ್ನು ನಂಬು. ಕಾರಣ; ಅವನು ದೇವರು! ಆತ ನಿನ್ನ ಗಂಡ-ಮಕ್ಕಳಿಗೆ ಹಿತ ಕೊಡಲಿ ಎಂದು ಈವರೆಗೆ ಪೂಜಿಸುತ್ತಿದ್ದೆ. ಇನ್ನು ಮುಂದೆ ಬೇಡಿಕೆ ಸಲ್ಲಿಸದೆ ಪೂಜಿಸು. ಆವಾಗಲಾದರೂ ಆ ದೇವರಿಗೆ ನಾಚಿಕೆಯಾಗಲಿ.

ಅಮ್ಮ ಪ್ರಪಂಚ ವಿಚಿತ್ರವಾದುದು. ಉಸಿರಿಡುವ ತನಕ ಒದ್ದಾಟ ತಪ್ಪದು. ಲಾಭವೋ, ನಷ್ಟವೋ... ಈ ಸಮುದ್ರ ಈಜಲೇಬೇಕು. ಈಜಿದವನಿಗೆ ಮುಕ್ತಿ. ಮುಕ್ತಿ ಮಾತು ಪಕ್ಕಕ್ಕಿರಲಿ, ನಮಗಾಗಿ ನೀನು ಈಜಬೇಕಮ್ಮ. ಯಾಕೆಂದರೆ, ನಿನ್ನ ಮಡಿಲಲ್ಲಿ ನಾವಿದ್ದೇವೆ.

ನಿನ್ನ ನೋವು ನನಗೆ ಗೊತ್ತು. ಅದನ್ನು ಮರೆಯುವುದು ಆಗದ ಮಾತು. ಆದರೆ ಕಷ್ಟ ಎದುರಿಸಲು ಶರೀರವನ್ನು ಗಟ್ಟಿ ಮಾಡಿಕೊಳ್ಳಮ್ಮ! ನಾಳೆಗಳಿಗಾಗಿ ನಾವು ಇಂದು ಬದುಕಬೇಕು. ಅದಕ್ಕಾಗಿ ನಮಗಾಗಿ ನೀನು ಇಷ್ಟು ಮಾಡಲಾರೆಯಾ?

 • ಅಮ್ಮ ಬೆಳಗ್ಗೆ ಪುಟ್ಟದೊಂದು ವಾಕಿಂಗ್‌ ಮಾಡು. ಅಣ್ಣ/ಅತ್ತಿಗೆ/ಪುಟ್ಟಿ ಯಾರನ್ನಾದರೂ ಜೊತೆಗೆ ಕರೆದುಕೊಂಡು ನಾಳೆಯಿಂದಲೇ ಪ್ರಾರಂಭಿಸು. ವಾಕಿಂಗ್‌ನ ಮಹಿಮೆ ಕೆಲವೇ ದಿನಗಳಲ್ಲಿ ನಿನಗೆ ಗೊತ್ತಾಗಲಿದೆ!
 • ಸಂಜೆ ಯಾವುದಾದರೂ ದೇವಸ್ಥಾನಕ್ಕೆ ಹೋಗು -ಬೇಕಿದ್ದರೆ ಅದ್ಯಾವುದೋ ಆಶ್ರಮಕ್ಕೆ ಸೇರಿಕೊ...
 • ಬೀರು ತುಂಬ ಪುಸ್ತಕಗಳಿವೆ. ಹಿಂದೆ ನೀ ಎಷ್ಟೊಂದು ಓದುತ್ತಿದ್ದೆ. ಈಗ ಮತ್ತೊಮ್ಮೆ ಓದುವ ಅಭ್ಯಾಸ ಬೆಳೆಸಿಕೊ... ಪುಸ್ತಕ ಓದೋದರಿಂದ ಮನಸಿನ ನೋವು ಕಡಿಮೆಯಾಗುತ್ತದೆ. ಒಂದಿಷ್ಟು ಆತ್ಮವಿಶ್ವಾಸ ಬರುತ್ತದೆ. ಎಲ್ಲಕ್ಕೂ ಮಿಗಿಲಾಗಿ ಸಮಯ ಕಳೆಯುತ್ತದೆ.
 • ಅಮ್ಮ ನಿನಗೆ ಮೊದಲೇ ಗ್ಯಾಸ್ಟ್ರಿಕ್‌. ದಯಮಾಡಿ ಹೊಟ್ಟೆಗೆ ಹಿಂದಿನಂತೆಯೇ ಮೋಸ ಮಾಡಬೇಡ. ಸಾಧ್ಯವಾದಷ್ಟು ತಿನ್ನು. ತಿನ್ನುವುದು ಕಷ್ಟವಾದರೆ ನಮ್ಮ ಮುಖ ನೋಡಿಯಾದರೂ ಕಷ್ಟಪಟ್ಟು ನುಂಗು! ಅಮ್ಮ ಅರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡ.
 • ನನ್ನ ಈ ಪತ್ರ ಓದಿ ನಿನಗೆ ನಗು ಬರಬಹುದು. ನನಗೆ ಸಮಾಧಾನ ಹೇಳುವಷ್ಟು ದೊಡ್ಡವನಾದನೇ ಎಂದು ಸಿಟ್ಟು ಕೂಡಾ ಬರಬಹುದು. ಆದರೆ ನನ್ನಮ್ಮನಿಗೆ ನಾನು ಇಷ್ಟು ಹೇಳಲೇಬೇಕು ಎಂದೆನಿಸಿ ಈ ಪ್ರಯತ್ನ ಮಾಡಿದ್ದೇನೆ. ಈ ಪತ್ರ ಓದಿದ ಮೇಲೆ ನಿನಗೇನನಿಸಿತು?

  ಅಮ್ಮ, ನೀನೂ ಬರೆಯುವುದನ್ನು ಆರಂಭಿಸು. ಸೊಗಸಾಗಿ ಬರೆಯುವ ಶಕ್ತಿ ನಿನ್ನಲ್ಲಿದೆ... ಪ್ರಯತ್ನಿಸು... ಕನಿಷ್ಟ, ನಿನ್ನ ಮಗನಿಗಾಗಿ ಬರೆಯಲಾದರೂ ಪ್ರಯತ್ನಿಸು.

  ಈ ಪತ್ರದಲ್ಲಿ ತಪ್ಪಿದ್ದರೆ ಕ್ಷಮಿಸು ಎಂದು ನಾನು ಕೇಳುವುದಿಲ್ಲ! ಯಾಕೆಂದರೆ; ಇದು ನನ್ನ ಮೊದಲ ತಪ್ಪಲ್ಲ.

  ನಮಸ್ಕಾರ.

  -ನಿನ್ನ ಕುಮಾರಕಂಠೀರವ!

  ಮುಖಪುಟ / ಸಾಹಿತ್ಯ-ಸಂಸ್ಕೃತಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more