ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರುಡೆ

By Staff
|
Google Oneindia Kannada News

ಕಗ್ಗತ್ತಲ ರಾತ್ರಿ, ಒಂದು ನರಪಿಳ್ಳೆಯೂ ಇಲ್ಲದ ನಿರ್ಜನ ಪ್ರದೇಶ. ತಲೆಯ ಮೇಲೇ ರೆಕ್ಕೆ ಬಡಿಯುತ್ತಾ ಹಾರಿಹೋಗುತ್ತಿರುವ ನಿಶಾಚರಿ. ತಡೆದು ತಡೆದು ಕೇಳಿಬರುತ್ತಿರುವ ಜೀರುಂಡೆಯೊಂದರ ನಾದದ ಹೊರತಾಗಿ ಇಡೀ ಪ್ರದೇಶ ನೀರವ... ಇದು ದೆವ್ವಗಳ ಸಂಚಾರಕ್ಕೆ ಹೇಳಿಮಾಡಿಸಿದಂಥ ಸಮಯ!

ಪ್ರೇಮಶೇಖರ, ಪಾಂಡಿಚೆರಿ
[email protected]

Premshekhar, Pondichery''ಸತ್ಯಘಟನೆ"" ಎಂಬ ಒಗ್ಗರಣೆಯೊಡನೆ ಮಾಸಪತ್ರಿಕೆಯೊಂದರಲ್ಲಿ ಕಳೆದ ತಿಂಗಳು ಪ್ರಕಟವಾಗಿದ್ದ ಭೂತಪ್ರೇತಗಳಿಗೆ ಸಂಬಂಧಿಸಿದ ಬರಹವೊಂದಕ್ಕೆ ನಾನು ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ್ದೆ. ಈ ವೈಜ್ಞಾನಿಕ ಯುಗದಲ್ಲಿ ದೆವ್ವಭೂತಗಳಂತಹ ಅಂಧಶ್ರದ್ಧೆಗಳಿಗೆ ಪ್ರಚಾರ ನೀಡುತ್ತಿರುವುದಕ್ಕಾಗಿ ಪತ್ರಿಕೆಯನ್ನು ಟೀಕಿಸಿದ್ದೆ. ನಂಬಲನರ್ಹವಾದ ಅಸಂಬದ್ಧ ವಿಚಾರಗಳನ್ನು ಸತ್ಯಘಟನೆ ಎಂದು ಪ್ರಚಾರ ಮಾಡುತ್ತಿರುವುದರ ಬಗ್ಗೆ ಹೀಗೆ ಲೇವಡಿ ಮಾಡಿದ್ದೆ- ''...ನಿಮ್ಮ ಪತ್ರಿಕೆಯ ಹೆಸರನ್ನು '" ಎಂದು ಬದಲಾಯಿಸಿದರೆ ಹೇಗೆ?""

ಮಾಧವಿಗೆ ಭೂತಪ್ರೇತಗಳ ಬಗ್ಗೆ ಅಪಾರ ನಂಬಿಕೆ. ''ದೇವರು ಇಲ್ಲದಿರಬಹುದು, ಆದರೆ ದೆವ್ವಗಳಂತೂ ಇದ್ದೇ ಇವೆ"" ಎಂದವಳ ಖಚಿತ ಅಭಿಪ್ರಾಯ. ಒಂದೂವರೆ ತಿಂಗಳ ಹಿಂದೆ ನಮ್ಮ ಮದುವೆಯಾದಾಗಿನಿಂದ ಈ ಬಗ್ಗೆ ನಮ್ಮಲ್ಲಿ ಬಿಸಿಬಿಸಿ ಚರ್ಚೆಗಳು ಸಾಮಾನ್ಯವಾಗಿಬಿಟ್ಟಿದ್ದವು. ಹೊಸಾ ಹೆಂಡತಿಯನ್ನು ರೇಗಿಸಿ ಗೋಳಾಡಿಸುವ ಉದ್ದೇಶದಿಂದಲೇ ನಾನು ದೆವ್ವಗಳ ಅಸ್ತಿತ್ವದ ಬಗ್ಗೆ ಹಗುರವಾಗಿ ಮಾತಾಡುವುದರ ಜತೆಗೆ ಅವಳ ಅಭಿಪ್ರಾಯಗಳನ್ನು ತಮಾಷೆ ಮಾಡುತ್ತಿದ್ದೆ. ಅವಳು ಮುಖ ಊದಿಸಿಕೊಂಡು ಎದ್ದುಹೋಗುತ್ತಿದ್ದಳು.

ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ಬರಹದ ಬಗ್ಗೆಯೂ ನಮ್ಮಿಬ್ಬರಲ್ಲಿ ವಾದವಿವಾದ ನಡೆದಿತ್ತು. ಮಾಮೂಲಿನಂತೆ ಅವಳ ಅಭಿಪ್ರಾಯ ನನ್ನ ಅಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧ. ಆ ಬರಹದ ಪ್ರತಿಯೊಂದು ಅಕ್ಷರವೂ ಸತ್ಯ ಎಂದು ಭಾವಿಸಿದ್ದಲ್ಲದೇ ಹಾಗೆಂದು ವಾದಿಸಿದ್ದಳು ಕೂಡ. ಅಲ್ಲದೇ ಆ ಬರಹವನ್ನು ಮೆಚ್ಚಿ ಪತ್ರಿಕೆಗೆ ಒಂದು ಪತ್ರವನ್ನೂ ಬರೆದಿದ್ದಳು.

ಆದರೆ ಈ ಸಂಪಾದಕ ಮಹಾಶಯರುಗಳ ಮನೋಭಾವವೇ ವಿಚಿತ್ರ. ಅದನ್ನು ನನ್ನ ಮುದ್ದಿನ ಮಡದಿ ಮಾಧವಿಯಂತಹ ಮುಗ್ಧೆ ಇರಲಿ ಪಂಡಿತರೂ ಅರ್ಥ ಮಾಡಿಕೊಳ್ಳುವುದು ಕಷ್ಟ. ದೆವ್ವವನ್ನೂ, ದೆವ್ವದ ಮೇಲಿನ ಬರಹವನ್ನೂ ಮನಸಾರೆ ಮೆಚ್ಚಿ ಬರೆದ ಮಾಧವಿಯ ಪತ್ರವನ್ನು ಅಲಕ್ಷಿಸಿ ಬರೀ ಟೀಕೆಗಳಿಂದಲೇ ತುಂಬಿದ್ದ ನನ್ನ ಪತ್ರವನ್ನು ಪ್ರಕಟಿಸಿಬಿಟ್ಟಿದ್ದರು! ಅಲ್ಲಲ್ಲಿ ಕತ್ತರಿಯಾಡಿಸಿದ್ದರೂ ''...ನಿಮ್ಮ ಪತ್ರಿಕೆಯ ಹೆಸರನ್ನು ಎಂದು ಬದಲಾಯಿಸಿದರೆ ಹೇಗೆ?"" ಎಂಬ ಸಾಲನ್ನು (ಸಲಹೆಯನ್ನು!) ಇದ್ದ ಹಾಗೆಯೇ ಪ್ರಿಂಟು ಮಾಡಿಬಿಟ್ಟಿದ್ದರು.

ಸಂಜೆ ಆ ಪತ್ರಿಕೆ ಕೈಗೆ ಸಿಕ್ಕಿದಾಗಿನಿಂದ ನನಗೆ ಏನೋ ಒಂದು ರೀತಿಯ ಹಿಗ್ಗು. ಆದರೆ ಗೋಳಾಡಿಸಲು ಮಾಧವಿ ಕೈಗೆ ಸಿಗುವಂತಿರಲಿಲ್ಲ. ಇನ್ನೂರೈವತ್ತು ಮೈಲಿ ದೂರದ ತವರಿನಲ್ಲಿ ನೆಮ್ಮದಿಯಾಗಿದ್ದಳು. ನಮ್ಮಿಬ್ಬರ ಮದುವೆ ಫೆಬ್ರವರಿ ಹದಿನಾಲ್ಕರಂದು ಆದದ್ದರಿಂದ ಮದುವೆಯ ನಂತರ ಬಂದ ಮೊದಲ ಹಬ್ಬ ಗೌರಿಹಬ್ಬ ಅಥವಾ ದೀಪಾವಳಿಯಾಗಿರದೇ ಯುಗಾದಿಯಾಗಿತ್ತು. ಏಪ್ರಿಲ್‌ ಒಂಬತ್ತರಂದು ಇರುವ ಯುಗಾದಿ ಹಬ್ಬಕ್ಕೆಂದು ಇವಳು ಹದಿನೈದು ದಿವಸ ಮುಂಚೆಯೇ ತಾಯಿ ಮನೆ ಸೇರಿಕೊಂಡುಬಿಟ್ಟಿದ್ದಳು.

ತಕ್ಷಣ ರಜ ಸಿಗದ ಕಾರಣ ನಾನವಳ ಜತೆ ಹೋಗಲಾಗಿರಲಿಲ್ಲ. ಹಬ್ಬದ ಹಿಂದಿನ ದಿನ ಬರುವುದಾಗಿ ಹೇಳಿ ಕಳುಹಿಸಿದ್ದೆ. ಆದರೆ ಅವಳು ಹೊರಟ ನಾಲ್ಕು ದಿನಕ್ಕೆ ನನಗೆ ಹೊತ್ತು ಹೋಗದಂತಾಯಿತು. ಅದೇನೋ ''ವಿರಹ"" ಅನ್ನುತ್ತಾರಲ್ಲಾ ಅದು ನನ್ನನ್ನು ಇಡಿಯಾಗಿ ಅಮರಿಕೊಂಡು ಕುಂತಲ್ಲಿ ಕೂರಲಾರದೇ ನಿಂತಲ್ಲಿ ನಿಲ್ಲಲಾರದೇ ಚಡಪಡಿಸುವಂತಾಗಿಬಿಟ್ಟಿತು. ಕೊನೆಗೆ ಡೀನ್‌ ಸಾಹೇಬರನ್ನು ಕಾಡಿ ಬೇಡಿ ಹದಿನೈದು ದಿನಕ್ಕೆ ಇ. ಎಲ್‌. ಸ್ಯಾಂಕ್ಶನ್‌ ಮಾಡಿಸಿಕೊಂಡು ಮಾರ್ಚ್‌ ಮೂವತ್ತೊಂದರ ರಾತ್ರಿ ಹತ್ತುಗಂಟೆಗೆ ಮೈಸೂರಿನ ಬಸ್‌ ಹತ್ತಿದೆ. ಹೊರಡುವ ಮೊದಲು ನನ್ನೊಡನೆ ಹೆಚ್ಚು ಸಲಿಗೆಯಿಂದಿದ್ದ ಕಿರಿಯ ಭಾವಮೈದುನ ಮಧುಗೆ ಫೋನ್‌ ಮಾಡಿ ಊರಿಗೆ ಬರುತ್ತಿರುವುದಾಗಿಯೂ, ಬೆಳಗಿನ ಐದೂವರೆ-ಆರರ ಹೊತ್ತಿಗೆ ಬಸ್‌ ಸ್ಟ್ಯಾಂಡ್‌ನಲ್ಲಿ ನನಗಾಗಿ ಕಾಯಬೇಕೆಂದೂ ಕೇಳಿಕೊಂಡೆ. ನಾನು ಬರುತ್ತಿರುವ ವಿಷಯವನ್ನು ಮಾಧವಿಗೆ ಹೇಳಬಾರದೆಂದೂ ತಿಳಿಸಿದೆ. ಬೆಳಿಗ್ಗೆ ಕಣ್ಣುಜ್ಜಿಕೊಂಡು ಏಳುವವಳ ಮುಂದೆ ದಿಢೀರನೆ ಹೋಗಿ ನಿಂತು 'ಸರ್‌ಪ್ರೈಸ್‌" ಮಾಡಬೇಕೆಂದು ಹಂಚಿಕೆ ಹಾಕಿದೆ.

ನನ್ನವಳ ಊರಿಗೆ ಹೋಗಬೇಕಾದರೆ ಮೈಸೂರಿನಿಂದ ಏಳೆಂಟು ಕಿಲೋಮೀಟರ್‌ ಮೊದಲೇ ಸಿಗುವ ಬೃಹದಾಕಾರದ ಜೋಡಿ ಆಲದಮರಗಳ ಬಳಿ ಇಳಿಯಬೇಕು. ಆ ಸ್ಟಾಪಿನ ಹೆಸರೇ ''ಜೋಡಾಲದ ಮರದ ಸ್ಟಾಪು"" ಅಂತ. ಅಲ್ಲಿ ಇಳಿದು ಎಡಕ್ಕೆ ಸೀಳಿದ್ದ ಮಣ್ಣುಹಾದಿಯಲ್ಲಿ ಒಂದು ಕಿಲೋಮೀಟರ್‌ ನಡೆಯಬೇಕು. ಆ ನಡಿಗೆಯಿಂದ ಪಾರಾಗಲೆಂದೇ ಬಸ್‌ಸ್ಟಾಪ್‌ನಲ್ಲಿ ಬೈಕ್‌ನೊಡನೆ ಕಾದಿರುವಂತೆ ಮಧುಗೆ ಸೂಚನೆ ಕೊಟ್ಟದ್ದು.

ಬಸ್ಸಂತೂ ಭರ್ಜರಿ ರಾಜಹಂಸ. ಸೀಟನ್ನು ಹಿಂದಕ್ಕೆ ವಾಲಿಸಿ ಆರಾಮವಾಗಿ ಒರಗಿ ಕಣ್ಣುಮುಚ್ಚಿದೆ. ಬೆಳಿಗ್ಗೆ ಇದ್ದಕ್ಕಿದ್ದಂತೆ ನನ್ನನ್ನು ನೋಡಿದೊಡನೆ ಮಾಧವಿಯ ಮುಖದಲ್ಲಿ ಮೂಡಬಹುದಾದ ಅಚ್ಚರಿ, ನಂತರದ ಸಂಭ್ರಮ ಎಲ್ಲವನ್ನೂ ಕಲ್ಪಿಸಿಕೊಳ್ಳುತ್ತಾ ನಿದ್ದೆಹೋದೆ.

ಡ್ರೈವರ್‌ ಮಹಾಶಯ ಅದೆಂಥಾ ಪ್ರಚಂಡನೋ ನಾಲ್ಕೂವರೆಗೇ ನನ್ನನ್ನು ಜೋಡಾಲದ ಮರದ ಸ್ಟಾಪಿನಲ್ಲಿ ಒಗೆದು ಓಡಿಬಿಟ್ಟ. ಅಲ್ಲಿ ಇಳಿದವನು ನಾನೊಬ್ಬನೇ. ಜತೆಯಲ್ಲಿ ಒಂದು ನರಪಿಳ್ಳೆಯೂ ಇಲ್ಲ. ಕರೆಂಟ್‌ ಬೇರೆ ಇರಲಿಲ್ಲವೇನೋ. ಬಲಕ್ಕೆ ಐವತ್ತು ಮಾರು ದೂರದಲ್ಲಿದ್ದ ದೊಡ್ಡ ಹಳ್ಳಿ ಕತ್ತಲಲ್ಲಿ ಮುಳುಗಿತ್ತು. ಮಾಧವಿಯ ಊರಿನಲ್ಲೂ ಅದೇ ಗತಿ ಎಂದು ಕಾಣುತ್ತದೆ. ಅತ್ತ ಕಡೆಯ ಯಾವ ದೀಪಗಳೂ ಕಣ್ಣಿಗೆ ಬೀಳಲಿಲ್ಲ. ಬಹಳ ಬೇಗನೆ ನಾನಿಲ್ಲಿಗೆ ಬಂದಿದ್ದರಿಂದ ಮಧು ಸಹಾ ಇನ್ನೂ ಬಂದಿರಲಿಲ್ಲ. ಅವನಿಗೆ ಕರೆ ನೀಡಲೆಂದು ಮೊಬೈಲ್‌ ಕೈಗೆ ತೆಗೆದುಕೊಳ್ಳುತ್ತಿದ್ದಂತೇ ಫಕ್ಕನೆ ನೆನಪಾಯಿತು- ಇಂದು ಏಪ್ರಿಲ್‌ ಒಂದು! ಮೂರ್ಖರ ದಿನ! ಅದು ನೆನಪಾಗುತ್ತಲೇ ಆಲೋಚನೆಯೊಂದು ಮಿಂಚಿನಂತೆ ಸುಳಿಯಿತು. ಅನಿರೀಕ್ಷಿತವಾಗಿ ಕಾಣಿಸಿಕೊಂಡು ಅಚ್ಚರಿ ಉಂಟುಮಾಡುವುದರ ಜತೆಗೇ ಮಾಧವಿಗೆ ಏಪ್ರಿಲ್‌ ಫೂಲ್‌ ಮಾಡಿದರೆ ಹೇಗೆ?

ಕಥೆಯ ಮುಂದಿನ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X