• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಕೆ ಕೊಟ್ಟ ಮಿಸ್‌ ಕಾಲ್‌...!

By Staff
|

ಕತ್ತಲೆ ಸರಿದು ಇನ್ನೇನು ಬೆಳಕಾಗುವ ಹೊತ್ತು. ಹಕ್ಕಿಗಳು ಚಿಲಿಪಿಲಿ ಅನ್ನುವ ಸಮಯ. ಬೆಳಗಿನ ಶುಭೋದಯದ ಆರಂಭ. ಮನೆಯ ಹೊರಗೆ ಹಕ್ಕಿಗಳ ಕಲರವ. ಅದರೊಳಗೆ ಅಡುಗೆ ಮನೆಯಿಂದ ಅಮ್ಮನ ಕಂಚಿನ ಕಂಠದ ಬೈಗುಳಗಳ ನಿನಾದ. ಅಂತೂ ಹೇಗೋ ಕಷ್ಟು ಪಟ್ಟು ಕಣ್ತೆರೆದೆ. ರಾತ್ರಿಯೆಲ್ಲಾ ಅವಳ ಚಿಂತೆಯಲ್ಲಿ ನಿದ್ದೆ ಬಾರದೆ ಒದ್ದಾಡಿದೆ. ಯಾಕೋ ಆಫೀಸು ಬಿಡುವಾಗ ಅವಳ ಮುಖದಲ್ಲಿ ವೇದನೆಯಿತ್ತು. ಕಣ್ಣಲ್ಲಿ ಆತಂಕವಿತ್ತು. ನನ್ನತ್ತ ಮುಖ ಮಾಡಿ ನೋಡುವಾಗ ಬಲವಂತವಾಗಿ ಅದನ್ನು ಮರೆಮಾಚಲು ಯತ್ನಿಸುತ್ತಿದ್ದಳು. ನಾನು ಕೇಳಿದರೂ ಆಕೆ ಉತ್ತರ ನೀಡುತ್ತಿರಲಿಲ್ಲ. ಅವಳ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಏನಾಗಿದೆ ? ಈ ಆತಂಕದಲ್ಲಿ ಅಂದು ಮನೆ ಸೇರಿದೆ.

ನಾನು ಆಕರ್ಷಿತನಾದದ್ದೇ ಅವಳ ಮುದ್ದು ಮುದ್ದಾದ ಮಾತುಗಳಿಂದ. ನನ್ನ ಚಿಕ್ಕ ಹೃದಯದ ಗೂಡಿನಲ್ಲಿ ಆಕೆ ಸೇರಿಕೊಂಡುಬಿಟ್ಟಿದ್ದಳು.

ಅವಳ ಮೊದಲ ನೋಟ ನನಗೆ ಇನ್ನೂ ನೆನಪಿದೆ. ಹೊಸದಾಗಿ ಆಫೀಸಿಗೆ ಬಂದ ಮೊದಲ ದಿನ ಅವಳ ಪಾಲಿಗೆ ನರಕ. ಎಲ್ಲರೂ ಅವರವರ ಕೆಲಸದಲ್ಲಿ busyಇದ್ದರು. ಅದೇನೋ ಕನಸು ಕಟ್ಟಿಕೊಂಡು ಬಂದಿದ್ದಳೋ? ಮಾತಾಡಿಸುವವರು ಯಾರೂ ಇಲ್ಲ. ಆದರೆ ಆಕೆಯನ್ನು ಪರಿಚಯ ಮಾಡಿಕೊಳ್ಳಲು ಯಾರಿಗೂ ಸಮಯವಿಲ್ಲ. ಒಂದು ರೀತಿ ಅನಾಥಳಂತೆ ಬಂದು ಖುರ್ಚಿಯಲ್ಲಿ ಕೂತಿದ್ದಳು. ಅದೂ ನನ್ನ ಪಕ್ಕದ ಸೀಟಿನಲ್ಲಿ . ನಾನು ಆಗ ಒಂದು ಸಲ ಆಕೆಯತ್ತ ಹೊರಳಿ ನೋಡಿದೆ.‘ಹಲೋ’ ಅಂದಳು. ಸೌಜನ್ಯಕ್ಕೆ ನಾನೂ ‘ಹಲೋ’ ಹೇಳಿ ಸುಮ್ಮನಾದೆ. ಕೆಲಸದ ಸಮಸ್ಯೆಯ ಮಧ್ಯೆಯೂ ಅವಳ ಮುದ್ದು ಮುಖವನ್ನು ನೋಡುತ್ತಿದ್ದೆ. ಆದರೆ ಏನಾಯಿತೋ ತಿಳಿಯಲಿಲ್ಲ ತನ್ನ ಸೀರೆಯ ಚುಂಗಿನಿಂದ ಕಣ್ಣಲ್ಲಿನ ನೀರನ್ನು ಮರೆಮಾಚುತ್ತಿದ್ದಳು. ಬಹುಶಃ ಇಲ್ಲಿ ತನ್ನನ್ನು ಯಾರೂ ಮಾತಾಡಿಸುತ್ತಿಲ್ಲ ಎಂಬ ವೇದನೆಯಿರಬೇಕು.

ನನಗೂ ಅವಳನ್ನು ಮಾತಾಡಿಸಬೇಕು, ಪರಿಚಯ ಮಾಡಿಕೊಳ್ಳಬೇಕೇನ್ನುವ ಆಸೆ ಇತ್ತು. ಆದರೆ ‘ಬಾಸ್‌’ ಕ್ಷಣ ಕ್ಷಣಕ್ಕೂ ಎದುರಿಗೆ ಓಡಾಡುತ್ತಿದ್ದರಿಂದ ಸಾಧ್ಯವಾಗಿರಲಿಲ್ಲ. ಮಾತು ಇಬ್ಬರಿಗೂ ಬೇಕಾಗಿತ್ತು. ಅದು ಸಾಧ್ಯವಾಗಿರಲಿಲ್ಲ.

ಒಂಟಿಯಾಗಿ ಬಂದು, ಒಂಟಿಯಾಗೇ ಮನೆಗೆ ಹೊರಟ ಅವಳನ್ನು ಹೇಗಾದರೂ ಮಾಡಿ ಮಾತಾಡಿಸಬೇಕು ಅಂದುಕೊಂಡೆ. ಆದರೆ ಎಲ್ಲಿಂದ ಸುರು ಮಾಡುವುದು ಎಂದು ಯೋಚಿಸಿದೆ. ಹಾಂ... ಹೆಸರು ಕೇಳುವುದರಿಂದಲೇ... ಅಂದುಕೊಂಡೆ ‘ ಅಂದ ಹಾಗೆ ನಿಮ್ಮ ಹೆಸ್ರು’ ಪ್ರಶ್ನೆ ಇನ್ನೂ ಗಂಟಲಲ್ಲಿತ್ತು.

ಅಷ್ಟರಲ್ಲಿ ಟೈಪಿಸ್ಟ್‌ ಲೀನಾ ಅವಳನ್ನು ಮನೆಗೆ ಕರೆದೇ ಬಿಟ್ಟಳು. ಅವಳು ಸರಸರನೇ ಬ್ಯಾಗ್‌ ಎತ್ತಿಕೊಂಡು ಅವಳ ಜತೆ ಹೊರಟೇ ಬಿಟ್ಟಳು. ಅದೇಕೋ ಹೋಗುವಾಗ ಒಂದು ಸಲ ನನ್ನತ್ತ ನೋಡಿದಳು. ಅಬ್ಬಾ! ಎಂಥಾ ಕಣ್ಣುಗಳು ಅವು. ದಿನವಿಡೀ ನೋಡಿರಲಿಲ್ಲ. ಆ ಕಣ್ಣುಗಳು ಸೆಳೆದ ಅನುಭವ ಮಧುರ.

ಮನೆಗೆ ಬಂದಾಗಿನಿಂದಲೂ ಅದೇ ಕಣ್ಣುಗಳು. ಆ ನೋಟ ಹಾಗೆ ನನ್ನನ್ನು ಹಿಡಿದು ಬಿಟ್ಟಿತ್ತು. ಆ ದಿನವಿಡೀ ನನಗೆ ನಿದ್ದೆಯಿರಲಿಲ್ಲ. ಆ ದಿನ ಕಚೇರಿ ಆರಂಭವಾಗುವ ಮೊದಲೇ ಅವಳನ್ನು ಮಾತಾಡಿಸಬೇಕು. ಅವಳ ಹೆಸರು. ಅಪ್ಪ - ಅಮ್ಮ - ಊರು- ಇತ್ಯಾದಿ. ಎಲ್ಲವನ್ನೂ ಕೇಳಬೇಕು ಅನಿಸಿತು. ಆದರೆ ಅಂದು ಸಾಧ್ಯವಾಗಿರಲಿಲ್ಲ...

ಅವಳ ಗುಂಗಿನಲ್ಲಿ ಎದ್ದಾಗ ಆರು ಗಂಟೆಯಾಗಿತ್ತು. ಅಷ್ಟು ಹೊತ್ತಿಗಾಗಲೇ ಅಮ್ಮ ಎದ್ದು ಅಡುಗೆ ಮನೆ ಸೇರಿದ್ದಳು. ಇನ್ನೇನು ಆಕೆ ಸುಪ್ರಭಾತ ಆರಂಭಿಸಬೇಕು. ಅಷ್ಟರಲ್ಲಿ ನಾನು ಅಡುಗೆ ಮನೆ ಬಾಗಿಲಲ್ಲಿ ನಿಂತಿದ್ದೆ. ಅಮ್ಮನಿಗೆ ಅಚ್ಚರಿಯೋ ಅಚ್ಚರಿ. ಈಗ ಆರು ಗಂಟೆ. ಇಷ್ಟು ಹೊತ್ತಿಗೆ ನಾನು ಎದ್ದು ಹೀಗೆ ಬಾಗಿಲಲ್ಲಿ ನಿಂತಿರುತ್ತೇನೆ ಎಂದು ಕನಸಲ್ಲೂ ಆಕೆ ಎಣಿಸಿರಲಿಲ್ಲ. ಈಗ ಅಮ್ಮ ನಿಜಕ್ಕೂ ಗಾಬರಿ ಆಗಿದ್ದಳು.

‘ಯಾಕೋ ಹುಷಾರ್‌ ಇಲ್ವೇನೋ... ಅಂದಳು’

ಆಗ ಅಮ್ಮನ ಸೆರಗು ಹಿಡಿದು ‘ ಅಮ್ಮ... ಇವತ್ತು ಆಫೀಸಿನಲ್ಲಿ ವಿಪರೀತ ಕೆಲಸವಿದೆ. ಅಲ್ದೆ ಹೊಸಬರೊಬ್ಬರು ಕೆಲಸಕ್ಕೆ ಬಂದಿದ್ದಾರೆ. ಅವರಿಗೆ ಎಲ್ಲನೂ ನಾನೇ ಹೇಳಿಕೊಡಬೇಕು. ಅದಕ್ಕೆ...ಬೇಗ ಹೊರಡಬೇಕು. ನಾನು ಸ್ನಾನ ಮಾಡಿ ಬರ್ತೀನಿ. ತಿಂಡಿ ರೆಡಿ ಮಾಡು’ ಅಂದೆ.

ಅಮ್ಮ , ‘ನಿನ್ನ ಸಂಸಾರದಲ್ಲಿ ಹೆಣ್ಣು ಪ್ರವೇಶ ಮಾಡಿದರೆ ಎಲ್ಲಾ ಸರಿ ಹೋಗುತ್ತೆ’ ಎಂದು ಮತ್ತೊಂದು ಸುಪ್ರಭಾತ ಸುರು ಮಾಡಿದಳು. ನಾನು ಕೇಳಿಸಿದರೂ, ಕೇಳಿಸದಂತೆ ಸ್ನಾನಕ್ಕೆ ಹೋದೆ. ಅಂದು ಕಚೇರಿಗೆ ಬಂದಾಗ ಒಂಬತ್ತು ಗಂಟೆ. ಅವಳು ಬೇಗನೆ ಆಫೀಸಿಗೆ ಬರುತ್ತಾಳೆ ಎಂದು ಕಲ್ಪಿಸಿಕೊಂಡು ನಾನೂ ಬೇಗನೆ ಆಫೀಸಿಗೆ ಬಂದುಬಿಟ್ಟಿದ್ದೆ.‘ಯಾಕೆ ಸಾರ್‌... ಇಷ್ಟು ಬೇಗ ಬಂದ್ರಿ’ ಬಾಗಿಲಲ್ಲಿದ್ದ ಕಾವಲುಗಾರ ಕೇಳಿದಾಗ ತಲೆ ಕೆರೆದುಕೊಂಡೆ.

‘ಅವಳಿಗಾಗಿ...’ ಅನ್ನಲೇ? ಊಹುಂ... ಹ್ಯಾಗೆ ಹೇಳುವುದು? ಸೀದಾ ನನ್ನ ಸೀಟಿಗೆ ಹೋಗಿ ಕುಳಿತೆ.

ಸರಿಯಾಗಿ 10ಗಂಟೆಗೆ ಬಂದಳು ಅವಳು. ಓಹ್‌! ಗುಲಾಬಿ ಸೀರೆ. ಆ ಬಣ್ಣಕ್ಕೆ ಮ್ಯಾಚಿಂಗ್‌ ಬಳೆಗಳು, ದುಂಡು ಮುಖ, ಅದೇ ಕಣ್ಣುಗಳು, ಕಮಲದ ಹಾಗೆ... ಆಗಾಗ ಮೀನಿನ ಹಾಗೆ ನೋಡುತ್ತಿದ್ದ ಅವಳ ನೋಟಕ್ಕೆ ನನ್ನ ಎದೆ ‘ಧಸಕ್‌’ ಎಂದಿತ್ತು. ಆಕೆ ಮೆಲ್ಲಗೆ ಬಂದು ನನ್ನ ಪಕ್ಕದ ಸೀಟಿನಲ್ಲಿ ತನ್ನ ಜಾಗದಲ್ಲಿ ಕುಳಿತಳು.

ಒಮ್ಮೆ ಅವಳಿಗೆ ಮಾತನಾಡಿಸಬೇಕೆಂಬ ಹಂಬಲ. ಆದರೆ ಸನ್ನಿವೇಶ ಸಿಗದೆ ಒದ್ದಾಡಿದೆ. ಆದರೆ ನನ್ನಿಂದ ತಡೆಯಲಾಗಲಿಲ್ಲ. ನಾನೇ ಮಾತನ್ನಾರಂಭಿಸಿದೆ.‘ sorry ಮೇಡಂ. ನಿನ್ನೆ ವಿಪರೀತ ಕೆಲಸ. ನಿಮ್ಮನ್ನು ಮಾತಾಡಿಸ್ಲಿಕ್ಕೆ ಆಗ್ಲಿಲ್ಲ. ಅಂದ ಹಾಗೆ ನಿಮ್ಮ ಹೆಸ್ರು?’ ಎಂದೆ.

‘ಕವಿತಾ’... ಎಂದಳು. ತಕ್ಷಣ ನಾನು ‘ ಓಹ್‌ ಸುಂದರ ಹೆಸರು, ನಾನು ಕವಿತಾ ಪ್ರಿಯ... ಅಂದ್ರೆ ಕವಿತಾ ಬರಿತೀನಿ ಓದ್ತೀನಿ... ನಿಮ್ದ್‌ ಯಾವೂರು?’

‘ಧಾರವಾಡ’

‘ಓಹ್‌... ನನ್ಗೆ ಬೇಂದ್ರೆ ಅಂದ್ರೆ ಪಂಚಪ್ರಾಣ...’ ಎಂದೆ.

ಆಕೆ ನಕ್ಕಳು. ಅದೇ... ದಾಳಿಂಬೆ ಹಲ್ಲುಗಳು. ಪ್ರೇಮ ಅರಳುವಾಗ ಹೆಣ್ಣಿನ ಸೌಂದರ್ಯ ಒಂದೊಂದು ರೂಪ ವನ್ನು ಹೋಲುತ್ತದೆಯಂತೆ... ನಾಸಿಕ ಗುಲಾಬಿ ಎಸಳು. ತುಟಿ ತೊಂಡೆ. ಕಣ್ಣು ಮೀನು. ಅವಳ ಸೌಂದರ್ಯವನ್ನು ನೋಡುತ್ತಾ ಕುಳಿತೆ.

‘ನನ್ನ ಹೆಸರು ರಮೇಶ ಎಂದೆ’. ಯಾಕೆ ಸುಮ್ಮನ್ನಿದ್ದಳು.ಅದಕ್ಕೆ ಕ್ಷಣವೇ ಕೇಳಿದೆ‘ಯಾಕೆ ನಿಮಗೆ ಇಷ್ಟವಾಗಲಿಲ್ಲವೇ? ಪರವಾಗಿಲ್ಲ ಬಿಡಿ. ನಿಮ್ಗೆ ಯಾವುದು ಇಷ್ಟವೋ ಆ ಹೆಸರಲ್ಲೇ ಕರೀರಿ. ಅದರಲ್ಲಿ ಏನಂತೆ?’ ಎಂದೆ.

ಆಕೆ ನಕ್ಕಳು... ನಂತರ ನಿಧಾನಕ್ಕೆ ತನ್ನ ಮಾತನಾರಂಭಿಸಿದಳು.

ಹೀಗೇ... ದಿನಗಳು ಹುಟ್ಟಿದವು. ಆದರೆ ನಮ್ಮಿಬ್ಬರ ಮಾತಿನಲ್ಲಿ ವಿಶ್ವಾಸ ಹುಟ್ಟಿತು. ವಿಶ್ವಾಸವೆಂದರೆ ‘ಛೇ’ ಅದು ಪ್ರೀತಿನೇ ಇರಬೇಕೆಂದು ತಪ್ಪು ಭಾವಿಸಬೇಡಿ. ಎಲ್ಲಾ ವಿಶ್ವಾಸಗಳು ಪ್ರೀತೀನೇ ಆಗಿರುವುದಿಲ್ಲ. ವಿಶ್ವಾಸ ಇಬ್ಬರಲ್ಲೂ ಇತ್ತು. ಆದರೆ ಪ್ರೀತಿ ಮಾತ್ರ ನನ್ನಲ್ಲಿ ಮೊಳಕೆಯಾಡೆದು ಆಕೆಯತ್ತಾ ಬಳ್ಳಿಯ ಹಾಗೆ ಬಾಗತೊಡಗಿತು. ಅದರ ಆಗಮನವೇ ಹಾಗೆ. ಒಮ್ಮೆ ಗೊತ್ತಾಗುತ್ತದೆ. ಇನ್ನೊಮ್ಮೆ ಗೊತ್ತಾಗುವುದಿಲ್ಲ. ಕವಿತಾಳಿಗೆ ಗೊತ್ತಾಗದ ಹಾಗೆ ನನ್ನಲ್ಲಿ ಪ್ರೀತಿ ಬೆಳೆಯಿತು. ಅದೊಂದು ದಿನ ಸಂಜೆ. ರಾತ್ರಿ8ಗಂಟೆ ಆಗಿರಬಹುದು ಒಂದು ಮಿಸ್‌ಕಾಲ್‌ ಬಂತು. ಮೊಬೈಲ್‌ ಇದ್ದವರಿಗೆ ಇಂಥ ಮಿಸ್‌ಕಾಲ್‌ಗಳು ಹೊಸೆದೇನಲ್ಲ. ನಿಜ ಹೇಳಬೇಕೆಂದರೆ ನಾನು ಮಿಸ್‌ಕಾಲ್‌ಗಳನ್ನು ತಿರಸ್ಕಾರಮಾಡುತ್ತೇನೆ. ನನಗಾಗಿ ಒಂದೆರಡು ರೂಪಾಯಿ ಖರ್ಚು ಮಾಡಲಾರದ ಈ ಕಾಲ್‌ಗಳು ನನಗೇಕೆ ಬೇಕು? ಆದರೆ ಅದೇಕೊ ಈ ಮಿಸ್‌ಕಾಲ್‌ ನನಗೆ ಗೊತ್ತಾಗದ ಹಾಗೆ ಸೆಳೆಯಿತು. ನೋಡಿದರೆ ಆ ನಂಬರ್‌ ಕವಿತಾಳದು. ತಡಮಾಡಲಿಲ್ಲ. ತಕ್ಷಣ ಅವಳ ಮೊಬೈಲ್‌ಗೆ ಕಾಲ್‌ ಮಾಡಿದೆ.‘ನಾನ್ರೀ... ಮಿಸ್‌ಕಾಲ್‌ ಕೊಟ್ಟಿದ್ದು, ಬೇಜಾರಾಯ್ತೇನ್ರೀ? ಮತ್ತೆ ಏನಿಲ್ಲ. ನಾಳೆ ನನ್ನ ಹುಟ್ಟು ಹಬ್ಬ. ಎಷ್ಟನೇ ವರ್ಷದ್ದು ಅಂತ ಮಾತ್ರ ಕೇಳಬೇಡಿ. ಅದಕ್ಕೆ ಮಧ್ಯಾಹ್ನ ಒಟ್ಟಿಗೇ ಊಟ ಮಾಡೋಣ. ನನ್ನದೇ ಸ್ಕೂಟಿನಲ್ಲಿ ಉಡುಪಿ ಗಾರ್ಡನ್‌ಗೆ ಹೋಗೋಣ’ ಎಂದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತು.‘ಓಹೋ’ ಅಂದೆ. ಮರು ದಿನ ಸರಿಯಾಗಿ ನಾನು ಹತ್ತು ಗಂಟೆಗೆ ಆಫೀಸಿನ ಸೀಟಿನಲ್ಲಿದ್ದೆ. ಕವಿತಾಳಿಗಾಗಿ ಬಾಗಿಲತ್ತ ನೋಡುತ್ತ ಕೂತೆ. ಇದೇನು? ಎಲ್ಲರೂ ಬಂದರು. ಅವಳು ಮಾತ್ರ ಬರಲಿಲ್ಲ. ಯಾಕೋ... ಇವತ್ತು ಕವಿತಾ ಬರಲಿಕ್ಕಿಲ್ಲ. ಹುಟ್ಟು ಹಬ್ಬ ಎಂದು ರಜೆ ಹಾಕಿರಬಹುದೇ ? ಹಾಗಾದರೆ ನನಗೆ ಕೊಟ್ಟ ಮಿಸ್‌ಕಾಲ್‌? ಛೇ... ಕವಿತಾ ಏಕೆ ತಡಮಾಡಿದಳೆಂದು ಸಿಟ್ಟಿಗೆದ್ದೆ. ಕವಿತಾ ಬರಲಿಲ್ಲ. ನನ್ನಲ್ಲಿ ರಕ್ತ ದೊತ್ತಡ ಹೆಚ್ಚಾಗತೊಡಗಿತು.

ಇದ್ದಕ್ಕಿದ್ದಂತೆ ಮೊಬೈಲು ರಿಂಗ್‌ ಆಗಿ ಸುಮ್ಮನಾಯಿತು. ನೋಡಿದರೆ ಅವಳದೇ ಮಿಸ್‌ಕಾಲ್‌. ಅವಳಿಗೆ ಫೋನ್‌ ಹಚ್ಚಿದೆ. ಆದರೆ ಮೊಬೈಲ್‌ ರಿಂಗ್‌ ಆಗುತ್ತಲೇ ಇತ್ತು. ಆದರೆ ಆಕೆ ರಿಸೀವ್‌ ಮಾಡಿಕೊಳ್ಳಲಿಲ್ಲ. ಯಾಕೋ ನನಗೆ ಆತಂಕ. ಮೂರು ಗಂಟೆ ಕಳೆದಿರಬಹುದು. ಕೆಳಗಿಂದ ಅಟೆಂಡರ್‌ ಓಡಿ ಬಂದ.

‘ಸಾರ್‌, ಕವಿತಾ ಮೇಡಂರ ಸ್ಕೂಟಿಗೆ ಲಾರೀ ಡಿಕ್ಕಿ ಹೊಡೆದಿದೆ. ಕೈಯಲ್ಲಿ ಮೊಬೈಲ್‌ ಹಿಡಿದಿದ್ದರಂತೆ ಕಂಟ್ರೋಲ್‌ ತಪ್ಪಿತಂತೆ. ಆಕ್ಸಿಡೆಂಟ್‌ ಆಗಿ ಹೋಯ್ತು. ಸಾರ್‌ ಈಗ ಕವಿತಾ ಮೇಡಂ ಅವರನ್ನು ಆಸ್ಪತ್ರೆಗೆ ಒಯ್ದಿದ್ದಾರಂತೆ...’

ನೆಲ ನಡುಗಿದಂತಾಯಿತು. ಅವಳು ಕೊಟ್ಟ ಮಿಸ್‌ಕಾಲ್‌ ನಂಬರ್‌ ನೋಡುತ್ತ ಆಸ್ಪತ್ರೆಯತ್ತ ಓಡಿದೆ. ಆಗಲೇ ಅಲ್ಲಿ ಜನ ಸೇರಿತ್ತು. ಮನೆಯವರಿಗಾಗಿ ಕಾಯುತ್ತಿದ್ದರಂತೆ.‘ಗಾಡೀ ಓಡಿಸುವಾಗ ಮೊಬೈಲ್‌ನಲ್ಲಿ ಮಾತಾಡಿದ್ರೆ ಹೀಗೆ ಆಗೋದು. ಈ ಮೊಬೈಲುಗಳು ಯಾಕಾದ್ರೂ ಬಂದ್ವೋ, ಯಾರ ಜೊತೆ ಮಾತಾಡುತ್ತಿದ್ದಳೋ’ ಎಂದು ಸುತ್ತಲು ಇದ್ದ ಜನ ಮಾತಾಡುವುದು ಕೇಳಿ, ನನಗೆ ಗಾಬರಿ. ಯಾಕೆಂದರೆ ಕವಿತಾ ನನಗೆ ಮಿಸ್‌ಕಾಲ್‌ ಕೊಡುವಾಗಲೇ ಅಪಘಾತವಾಗಿರಬಹುದೇ ಎಂಬ ಪ್ರಶ್ನೆ. ಛೇ... ಹಾದು. ಒಮ್ಮೆ ನಾನು ಆಕೆಗೆ ಹೇಳಿದ್ದೆ. ಕವಿತಾ ನಿನ್ನ ಮಿಸ್‌ಕಾಲ್‌ ಪ್ರಿಯ ಎಂದು. ಅದಕ್ಕೇ ಆಕೆ ಇತ್ತೀಚೆಗೆ ವಿಪರೀತ ಮಿಸಕಾಲ್‌ ಕೊಡುತ್ತಿದ್ದಳು.

ಕವಿತಾಳ ಮನೆಯವರೆಲ್ಲಾ ಬಂದರು. ಗೋಳಾಡತೊಡಗಿದರು. ಆಗಲೇ ನನಗೆ ಗೊತ್ತಾಗಿದ್ದು ಕವಿತಾ‘ಮಿಸ್‌’ ಆಗಿದ್ದಾಳೆ ಅಂತ. ನಾನು ಕವಿತಾಳ ಮುಖವನ್ನು ಬಾಗಿ ನೋಡಿದೆ. ಬಿಳಿ ಬಟ್ಟೆಯಲ್ಲಿ ಮುಖ ಮಾತ್ರ ತೆರೆದಿತ್ತು. ಕವಿತಾ ಶಾಂತ ನಿದ್ರೆಯಲ್ಲಿದ್ದಳು. ನನ್ನನ್ನು ನಾನೇ ನಂಬಲಿಲ್ಲ. ಗೋಡೆಯನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಜೇಬಿನಲ್ಲಿದ್ದ ಮೊಬೈಲ್‌ ಬೆಟ್ಟದಂತೆ ಭಾರವಾಗತೊಡಗಿತ್ತು. ಆಕೆ ನನಗೆ ಮಿಸ್‌ಕಾಲ್‌ ಕೊಡಲು ಹೋಗಿ ತನ್ನ ಜೀವ ಬಲಿಕೊಟ್ಟಿದ್ದಳು. ಆಕೆಗೆ ಬಂದ ಯಮನ ಕರೆ ಮಿಸ್‌ ಆಗಲಿಲ್ಲವಲ್ಲ? ಎಂದು ಯಮನನ್ನು ಶಪಿಸಿದೆ...

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more