ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಡಯಾಬಿಟೀಸ್‌ ಕಥೆ

By Staff
|
Google Oneindia Kannada News


ಬೆಳಗ್ಗೇನೆ ಆಫೀಸಿಗೆ ಬಂದ ಗೋಪಿ.

‘ಯಾಕ್ಲಾ ಕೆಟ್ಟ ಮುಖ ಹಾಕ್ಕೊಂಡಿದೀಯ?’ ಅಂದ. ಮತ್ತೆ ಜಗಳಾನೇ?

‘ಸಿಗರೇಟಿಗೆ ಬೆಂಕಿ ಕೊಡ್ತಾ ಹೇಳ್ದೆ, ಹ್ಹೂ, ಮತ್ತೆ’!

‘ಏನಾಯ್ತು ಈವತ್ತು’?

‘ಅಮ್ಮ ರೋನೀನ ಕರೆದ್ರು ಆಟ ಆಡ್ಲಿಕ್ಕೆ, ಅವನು ಈಡಿಯಟ್‌, ಬೆನ್ನು ತಿರುಗಿಸಿಕೊಂಡ್‌ ಹೋದ. ಅಮ್ಮ ಅಳಕ್ಕೆ ಶುರು ಮಾಡಿದ್ರು. ಆಕ್ರೀ, ಅಂದೆ ಇಂಜೆಕ್ಷನ್‌ ಕೊಡ್ತಾ. ಗೊತ್ತಲ್ಲ ಯೂಶುವಲ್‌ ಸ್ಟೈಲ್‌, ‘ಏನಿಲ್ಲ ಏನಿಲ್ಲ’ ಅಂದ್ರು. ಇವ್ಳನ್ನ ಕೇಳ್ದೆ ಏನಾಯ್ತೇ ಅಂತ, ‘ಅವ್ರನ್ನೇ ಕೇಳಿ ಅಂದ್ಲು’.

‘ತಲೆ ಕೆಟ್‌ ಕೆರ ಹಿಡೀತಾ ಇದೆ’ ಅಂದೆ.

‘ನಾನ್‌ ನೋಡ್ದಾಗ ಸರಿ ಇದ್ರಲ್ಲ ಇಬ್ರೂನು ಹೋದ ವಾರ’.

‘ಅದು ಆಗ. ಈ ವಾರದ ಒರಾತ ಬೇರೆ. ನೆನ್ನೆ ಸೊಪ್ಪಿನ ಪಲ್ಯ ಮಾಡಿದ್ಲು, ‘ಡಿಫರೆಂಟಾಗಿ’’. ಊಟ ಆದ್ಮೇಲೆ ಕೇಳಿದಾಳೆ ಚೆನ್ನಾಗಿದ್ಯಾ ಪಲ್ಯ ಅಂತ. ಅಮ್ಮ ಅಂದ್ರಂತೆ ಸೊಪ್ಪಿನ ಪಲ್ಯಕ್ಕೇನು ಚೆನ್ನಾಗೇ ಇರುತ್ತೆ ಅಂತ. ಸಾಕಲ್ಲ, ರಾತ್ರಿಯೆಲ್ಲ ತಲೆ ತಿಂದ್ಲು ನನ್ಹೆಂಡ್ತಿ’.

ಹೋದ ವಾರಕ್ಕೂ ಈ ವಾರಕ್ಕೂ ಭಾಳ ವ್ಯತ್ಯಾಸ ಇದೆ ಅಂತ ಹೇಳ್ತಾ ಸಿಗರೇಟನ್ನ ಅದುಮಿದೆ ಕಾಲ ಕೆಳಗೆ. ಅದೇ ತರಹ ಕಷ್ಟಗಳನ್ನೂ ಅದುಮೋ ಹಾಗಿದ್ರೆ ಎಷ್ಟು ಚೆನ್ನಾಗಿರೋದು. ಕಾಫಿ ಕುಡಿತಾ ಮಾತು ಮುಂದುವರೀತು. ನಂಗೇನೂ ಬೇಡಪ್ಪಾ ಅಂತಿರ್ತಾರೆ. ಆದ್ರೆ ಎಲ್ಲಾನು ಬೇಕು ಅಮ್ಮಂಗೆ. ರಮೇಶನ ಮಗನ ಮುಂಜೀಗೆ ಕರೀಲಿಲ್ಲ ಅಂತಾನೇ ಮೂರು ದಿವಸ ಆಕ್ಷೇಪಣೆ ಮಾಡಿದ್ರು.

ಈ ಪ್ರಸಂಗ ಶುರುವಾಗಿದ್ದು ಭಾನುವಾರ ರಾತ್ರಿ. ಅಮ್ಮ ಅದೇನೋ ಪುಡಿ ತೊಗೊಂಡ್ರು ಕಕ್ಕ ಮಾಡ್ಲಿಕ್ಕೆ. ಕರೆಕ್ಟಾಗಿರೋ ಡೋಸ್‌ ತೊಗೊಂಡ್ರೋ ಇಲ್ವೋ ಗೊತ್ತಿಲ್ಲ. ಬೆಳಗ್ಗೆ ತುಂಬ ಅವಸರ ಆಗಿದೆ ಅಂತ ಕಾಣುತ್ತೆ, ಒಂಟಿಗಾಲಲ್ಲಿ ಎಷ್ಟು ಬೇಗ ಓಡಕ್ಕೆ ಆಗುತ್ತೆ, ಬಾಗಿಲ ಹತ್ರನೇ ಮಾಡಿಕೊಂಡು ಬಿಟ್ಟಿದಾರೆ. ‘ಓ ಘೋರ. ಅದ್ನೆಲ್ಲಾ ಇವ್ಳೇ ಕ್ಲೀನ್‌ ಮಾಡಿದ್ಲು’.

‘ಓಹ್‌ ಗಾಡ್‌’ ಅಂದ ಗೋಪಿ.

ಎಲ್ಲ ಕ್ಲೀನ್‌ ಮಾಡಿ ಆದ್ಮೇಲೂ ಅಮ್ಮ ಇನ್ನೂ ವಾದಿಸ್ತಾನೇ ಇದ್ರು ‘ಡೋಸ್‌ ಕರೆಕ್ಟಾಗೇ ಇತ್ತು, ಹೀಗ್ಯಾಕ್‌ ಆಯ್ತೋ ಗೊತ್ತಿಲ್ಲ...’ ನನ್ಹೆಂಡ್ತಿ ಹೇಳಿದ್ಲು. ‘ಹೀಗ್‌ ವಾದಿಸೋದು ಬಿಟ್ಟು, ಒಂದು ಸರ್ತಿ ‘ಸಾರಿ’ ಅಥ್ವಾ ಒಂದು ‘ಥಾಂಕ್ಸ್‌’ ಹೇಳಿದ್ರೇ, ಕಥೆ ಮುಗೀತು ಅದು ಬಿಟ್ಟು ...’

ಸರಿ ಶುರುವಾಯ್ತು ಅಮ್ಮಂದು ವರಾತ, ‘ ನನ್ನಿಂದ ನಿಮಗೆಲ್ಲಾ ಕಷ್ಟ ಎಟ್ಸೆಟ್ರಾ ಎಟ್ಸೆಟ್ರಾ, ನಂಗೊಂದು ತೊಟ್ಟು ವಿಷ ಕೊಟ್ಟು ಬಿಡೋ ಇಲ್ಲಾಂದ್ರೆ ಡಾಕ್ಟರ್‌ ಹತ್ರ ಏನಾದ್ರು ಒಂದು ಇಂಜೆಕ್ಷನ್‌ ಕೊಡಿಸಿ ಬಿಡು’ ಅಂಥ. ಊಟ ಹಾಕ್ಬಹುದು, ಔಷಧಿ ಕೊಡಿಸ ಬಹುದು ಆದ್ರೆ ಇದ್ನೆಲ್ಲಾ ಕೇಳೋದು ಬಹಳ ಕಷ್ಟ.

ಭಾನುವಾರ ಇದಾದ್ಮೇಲೆ ಎಲ್ಲರ ಮಖ ಸ್ವಲ್ಪ ಈಕಡೆ ಆಕಡೆನೇ ಅಂದೆ. ಗೋಪಿ ಕಾಫಿಕುಡಿದು ಹೊರಟ ಅವನ ಕೆಲಸಕ್ಕೆ. ಫೋನ್‌ ರಿಂಗ್‌ ಆಗಕ್ಕೆ ಶುರು ಆಯ್ತು ನಾನು ಇದ್ನ ಅಲ್ಲಿಗೇ ಬಿಟ್ಟೆ.

ಇಷ್ಟರಲ್ಲೆ ನಿಮಗೆ ಗೊತ್ತಾಗಿರಬೇಕು. ಅಮ್ಮಂಗೆ ಭಯಂಕರ ಡಯಾಬಿಟೀಸು. ಇಪ್ಪತ್ತು ವರ್ಷದಿಂದ ನೆಗ್ಲೆಕ್ಟ್‌ ಮಾಡೀ ಮಾಡೀ ಕೋಡ್ಬಳೆ, ಕೇಸರಿ ಭಾತು ತಿಂದಿದಾರೆ. ಹೋದ್ವರ್ಷ ಒಂದು ಮುಳ್ಳು ಚುಚ್ಗೊಂತು ಬಲಕಾಲಿಗೆ ಗೋಪಿ ಮನೇಲಿ ಇದ್ದಾಗ. ಪೂರ್ತಿ ಒಂದು ವಾರ ಯಾರ್ಗೂ ಹೇಳಿಲ್ಲ. ಹುಣ್ಣಾಗಿದೆ. ಗೀತಾ ದೇವರಾಯನ ದುರ್ಗದಲ್ಲಿ ಅಭಿಷೇಕ ಮಾಡಿಸಿ ಊಟ ಹಾಕಿಸಿದ್ಲಲ್ಲ ಅವತ್ತು ಡಾಕ್ಟರ್‌ ಹತ್ರ ಹೋದ್ರು. ಅಷ್ಟೊತ್ತಿಗೆ ಗ್ಯಾಂಗ್ರೀನ್‌ ಶುರುವಾಗಿದೆ. ಹತ್ತು ದಿನ ನರಳಿ ಬೆಂಗಳೂರಿಗೆ ಬಂದ್ರು. ಇಲ್ಲಿ ಒಂದು ಫೈವ್‌ ಸ್ಟಾರ್‌ ಹಾಸ್ಪಿಟಲ್‌ನಲ್ಲಿ ಹತ್ತು ದಿನ ಇದ್ರು. ಕಾಲನ್ನ ಸರ್ಜರಿ ಮಾಡಿ ಕತ್ತರಿಸಿದರು. ಅಲ್ಲಿಂದ ಅವರ ಯಾತನೆ ಬೇಡ.

ಮುಂಚಿನಿಂದಾ ಅವರಿಗೆ ನನ್ನ ಹೆಂಡತಿ ಅಂದರೆ ಸುಮಾರು ಅಸಮಾಧಾನ. ಅಲ್ದೆ ನನ್ನ ಮನೆ ಇರೋದು ಫಸ್ಟ್‌ ಫ್ಲೋರ್‌ನಲ್ಲಿ. ಮೂರು ಮೂರು ದಿನಕ್ಕೊಮ್ಮೆ ಡಾಕ್ಟರ್‌ ಹತ್ತಿರ ಹೋಗಬೇಕಾಗಿರುವುದರಿಂದ ಎರಡನೇ ಅಕ್ಕನ ಮನೆ ನೆಲ ಅಂತಸ್ತಿನಲ್ಲಿ ಇದ್ದುದರಿಂದ ಅಲ್ಲೇ ಸೆಟಲ್‌ ಆದರು.

ಅಮ್ಮಂದು ಮುಂಚಿನಿಂದಾ ಕುಯ್‌ ಕುಯ್‌ ಅನ್ನೋ ಪ್ರಕೃತೀನೆ. ಅಕ್ಕನ ಮನೇಲಿ ಹೊಂದಲಿಲ್ಲ. ಗೀತನ ಮನೆಗೆ ಹೋದ್ರು. ಗೀತಾ ನಮ್ಮ ಮೊದಲನೆ ಅಕ್ಕ. ಗೀತಂಗೆ ಈಗ ಐವತ್ತು ವರ್ಷ. ಅವಳಿಗೆ ಹೈಪರ್‌ ಟೆನ್ಷನ್‌, ಡಯಾಬಿಟೀಸು ಎರಡೂ ಇದೆ. ಎರಡು ಹೆಣ್ಮಕ್ಕಳಿಗೂ ಮದ್ವೆ ಮಾಡಿದಾಳೆ. ಸುಮಾರಾಗಿ ಶ್ರೀಮಂತೆ. ಶ್ರೀಮಂತ ಅಳಿಯಂದಿರು. ಭಾವ ಹತ್ತು ವರ್ಷದ ಹಿಂದೆ ತೀರಿ ಹೋದ್ರು ಸೆರಬ್ರಲ್‌ ಹೆಮರೇಜ್‌ ನಿಂದ. ಎರಡು ಹೆಣ್ಮಕ್ಕಳಲ್ಲದೇ ಒಬ್ಬ ಗಂಡು ಹುಡುಗ ಇದ್ದಾನೆ. ಈಗ ಇಂಜಿನೀರಿಂಗ್‌ ಓದ್ತಾ ಇದ್ದಾನೆ. ದೊಡ್ಡ ಮನೆ. ಅಮ್ಮ ಆರಾಮಾಗಿ ಇರಬಹುದಿತ್ತು. ಆದ್ರೆ ಅವರಿಗೆ ತುಂಬ ವ್ಯಥೆ. ಮಗನ ಮನೇನಲ್ಲಿ ಇಲ್ವಲ್ಲಾ ಅಂತ.

ಮೂರು ತಿಂಗಳು ಆದ್ಮೇಲೆ ಸ್ಮಿತಾ ಬಾಣಂತನಕ್ಕೆ ಅಂತಾ ಬಂದ್ಲು. ಗೀತನ ಗಮನ ಸ್ವಲ್ಪ ಶಿಫ್ಟ್‌ ಆಯಿತು. ಅಷ್ಟೇ ಸಾಕಾಯ್ತು ನಮ್ಮಮ್ಮಂಗೆ. ಶುರುವಾಯ್ತು ಕಿರಿಕಿರಿ. ಅಮ್ಮಂಗೆ ಸ್ವಲ್ಪ ಜಾಸ್ತೀನೇ ಅನ್ಸೋಷ್ಟು ಅಟೆನ್ಷನ್‌ ಬೇಕು. ಅವರನ್ನ ಯಾರಾದ್ರೂ ಲಾಲಿಸ್ತಾ ಇರಲಿ ಅನ್ನೋದು ಅವರ ಆಸೆ.

ಮೊದಲ್ನೇ ಮಗ ನಾನು. ನನಗೆ ಗೀತಂಗೆ ಮಧ್ಯದಲ್ಲಿ ಇನ್ನೂ ಇಬ್ಬರು ಅಕ್ಕಂದಿರು ಇದ್ದಾರೆ. ಮತ್ತೆ ನಾನಾದ್ಮೇಲೆ ಗೋಪಿ. ನಾವು ಅಮ್ಮಂಗೆ ತಮಾಷೆ ಮಾಡ್ತಾ ಇರ್ತೀವಿ. ಲಾಲು ಪ್ರಸಾದ್‌ ಯಾದವ್‌ ಆದ್ಮೇಲೆ ನೀವೇ ಇಂಡಿಯಾಗೆ ದೊಡ್ಡ ಕಂಟಕ ಅಂತ. ಅಮ್ಮ ಸಿರ್‌ ಅಂತ ಊಟ, ಬಟ್ಟೆಗೆ ಏನಾದ್ರು ಕಮ್ಮಿ ಮಾಡಿದ್ವೇನ್ರೋ, ಎದ್ದು ಹೋಗಿ ಅಂತಾರೆ. ಅದೂ ಸರೀನೆ ಊಟಕ್ಕೇನೂ ಕಮ್ಮಿ ಇರಲಿಲ್ಲ ನಮಗೆ.

ಮಾರನೇ ದಿನ ಬಂದ ಗೋಪಿ ಮನೆಗೆ. ‘ಹ್ಯಾಗಿದೀರ್ರೀ’ ಅಂದ.

‘ಹೂಂ ಬದುಕಿದ್ದೀನಿ ಭೂಮಿಗೆ ದಂಡವಾಗಿ’ ಅಂದ್ರು ಅಮ್ಮ. ಮತ್ತೆ ಹಿಂದಿನ ವಾರದ ಪ್ರವರ ಒಪ್ಪಿಸಿದರು. ಗೋಪಿಗೆ ಮದುವೆ ಆಗಿಲ್ಲವಾದ್ರಿಂದ ಅವನ ಹತ್ತಿರ ಸ್ವಲ್ಪ ಬಿಡುಬೀಸಾಗಿ ಮಾತಾಡ್ತಾರೆ ಅಮ್ಮ. ಅವ ಏನು ಅಂದರೂ ಸುಮ್ಮನಿರ್ತಾರೆ ಅಥ್ವಾ ವಾದ ಮಾಡುತ್ತಾರೆ.

ಅವನಿಗೂ ಹೇಳಿದ್ರು ‘ಸ್ವಲ್ಪ ವಿಷ ಕೊಟ್ಟುಬಿಡು’ ಅಂತ.

ಏನೋ ಯೋಚನೆ ಮಾಡ್ತಾ ಇದ್ದ ಅಂತ ಕಾಣುತ್ತೆ. ‘ಸರಿ ಅಮ್ಮ, ಶನಿವಾರ ತಂದುಕೊಡುತ್ತೇನೆ ಪುಡಿ. ಕಣ್ಣು ಮುಚ್ಚಿಕೊಂಡು ಬಾಯಿಗೆ ಹಾಕಿ ಕೊಳ್ಳುತ್ತೀರ’ ಅಂತ ಕೇಳ್ದ.

‘ಖಂಡಿತಾ’ ಅಂದ್ರು ಅಮ್ಮ. ಶನಿವಾರ ಸಿಕ್ತೀನಿ ಅಂತ ಜಾಗ ಖಾಲಿ ಮಾಡ್ದ.

ಆಫೀಸಿಗೆ ಮಧ್ಯಾಹ್ನ ನಗ್ತಾ ಬಂದ. ಜೇಬಿಂದ ಒಂದು ಸಣ್ಣ ಪಾಕೆಟ್‌ ತೆಗೆದ. ಪ್ಯಾಕೆಟ್‌ ತುಂಬ ಬಿಳಿ ಪುಡಿ. ಏನೋ ಇದು ಅಂದೆ. ಅದೆಲ್ಲಾ ಕೇಳ್ಬೇಡ. ಶನಿವಾರ ಅಮ್ಮಂಗೆ ತೊಗೊಳ್ಳೀ ವಿಷ ಅಂತ ಕೊಡ್ತೀನಿ, ಏನು ಮಾಡ್ತಾರೆ ನೋಡಣ ಅಂದ.

ಏನಾದ್ರೂ ಪ್ರಾಬ್ಲಂ ಆದೀತು ಮಗನೆ ಹುಷಾರು ಅಂದೆ. ಏನಿಲ್ಲ ಸುಮ್ಮನಿರು ಅಂದು ಹೋದ.

ಗೋಪಿ ಕಡೆ ಮಗ ಎಂಜಿನೀಯರು. ಆದ್ರೆ ಮಾಡ್ತಾ ಇರೋದು ಒಂದು ಫಾರ್ಮ್‌. ಫಾರ್ಮ್‌ಗೆ ಅಂಟಿಕೊಂಡಂತೆ ಒಂದು ಬೆಟ್ಟ ಇದೆ. ಅಲ್ಲಿ ಸುಮಾರು ಗಿಡ ಮೂಲಿಕೆ ಇರುವುದಾಗಿ ಗೋಪಿ ಹೇಳ್ತಾನೆ. ಒಂದು ಸಾರಿ ಹೇಳ್ತಾ ಇದ್ದ, ಆ ಬೆಟ್ಟದಲ್ಲಿ ಸಿಗೋ ಒಂದು ಮೂಲಿಕೆನ ಬೆಂಕಿಗೆ ಹಾಕಿದ್ರೆ ಸಾರಿನ್‌ ಅಥ್ವಾ ಮಸ್ಟರ್ಡ್‌ ಗ್ಯಾಸ್‌ ಅಷ್ಟು ವಿಷಪೂರಿತವಾದ ಹೊಗೆ ಬರುತ್ತೆ ಅಂತ. ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ. ಅಮ್ಮಂಗೆ ಇದ್ರಲ್ಲಿ ನಂಬಿಕೆ.

ಶನಿವಾರ ಬಂದ ಬೆಳಗ್ಗೇನೆ. ತಿಂಡಿ ತಿಂದು ಮೆತ್ತಗೆ ಅಮ್ಮನ ಹತ್ತಿರ ಹೋದ. ಬಿಳಿ ಪುಡಿ ಹಿಡ್ದ ಅವರ ಮುಂದೆ. ಕೈ ಚಾಚದೇನೇ ಅಮ್ಮ ಕೇಳಿದ್ರು, ‘ಏನೋ ಇದು’ ಅಂತ.

‘ಅದೇ ಕೇಳಿದ್ರಲ್ಲ ವಿಷ’ ಅಂದ ತಣ್ಣಗೆ. ‘ತಂದೇ ಬಿಟ್ಯೇನೋ’ ಅಂದ್ರು. ‘ಮತ್ತೆ ನೀವು ಇಷ್ಟು ಸಾರಿ ಕೇಳ್ದಾಗ ಇನ್ನೇನು ಮಾಡ್ಲಿ’ ಅಂಥ ತಂದೆ.

‘ಸುಮಾರಾಗಿ ರಾತ್ರಿ ಊಟ ಆದ್ಮೇಲೆ ಇದನ್ನ ತೊಗಳಿ’ ಅಂದ. ಅಮ್ಮ ಏನೂ ಮಾತಾಡ್ಲೂ ಇಲ್ಲ ಅದನ್ನ ಕೈಚಾಚಿ ತೆಗೆದುಕೊಳ್ಳಲೂ ಇಲ್ಲ. ಹುಸಿನಗೆ ನಗುತ್ತಾ ಗೋಪಿ ಆಚೆ ಬಂದು ರೋನಿ ಜತೆ ಆಟ ಆಡ್ಲಿಕ್ಕೆ ಶುರು ಮಾಡ್ದ. ಆ ಬಿಳಿ ಪುಡಿ ಸಂಜೆ ತನ್ಕಾ ಅಲ್ಲೇ ಬಿದ್ದಿತ್ತು ಟೇಬಲ್‌ ಮೇಲೆ.

ರಾತ್ರಿ ನಾನು ಗೋಪಿ ನೆಮ್ಮದಿಯಾಗೆ ಎರಡು ಪೆಗ್‌ ಹಾಕಿದ್ವಿ. ಅಮ್ಮಂಗೆ ಕಾಣಿಸದ ಹಾಗೆ. ಹನ್ನೆರಡು ಗಂಟೆಗೆ ನಾನು ನನ್ಹೆಂಡ್ತಿ ಕೋಪ ತಾಪ ಎಲ್ಲ ತಣಿಸಿ ಮಲಗಿದೆವು.

ಆಗ್ಲೇ ಹೇಳಿದ್ನಲ್ಲ ನಂಗೆ ಮೂರು ಜನ ಅಕ್ಕಂದ್ರು ಅಂಥ. ಗೀತನ ಕಥೆ ಮೇಲೆ ಹೇಳ್ದೆ. ಎರಡ್ನೇ ಅಕ್ಕ ಪಮ್ಮಿ. ಪೋಸ್ಟ್‌ ಗ್ರಾಜುಯೇಷನ್‌ ಮಾಡಿದ್ದಾಳೆ. . . ಕೆಲ್ಸ ಮಾಡ್ತಾಳೆ ಒಂದು ಬ್ಯಾಂಕ್ನಲ್ಲಿ. ಗಂಡ ಒಬ್ಬ ಇಂಜಿನೀರು. ಬಹಳ ಸಾಧು ಸ್ವಭಾವ. ಆದ್ರೆ ಬಹಳ ಮಡಿ. ನಾವೆಲ್ಲ ಭಾವನ ಮನೆಯವರ ಮಟ್ಟಿಗೆ ಹರಿಜನ. ಫಿಸಿಕ್ಸ್‌ ಮೇಜರ್‌ ಸಬ್ಜೆಕ್ಟು ಓದಿದ ಅಕ್ಕ ಈಗ ಕಚ್ಚೆ ಕಟ್ಟಿ ಮಡಿ ಅಡ್ಗೆ, ಹುಣ್ಮೆ ಅಮಾವಸ್ಯೆಗೆ ಔತಣ ಎಲ್ಲಾ ಮಾಡ್ತಾಳೆ.

ಮೂರ್ನೆ ಅಕ್ಕ ಒಂಥರಾ ನಮೂನೆ. ಅವಳ ಗಂಡ ಚೆನ್ನಾಗಿ ಓದ್ಕೊಂಡಿರೋ ಮನುಷ್ಯ. ಹೆಂಡ್ತಿ ಪಾರ್ಟಿಗೆ ಬಂದು ಕೋಕ್‌ ಗ್ಲಾಸ್‌ ಹಿಡ್ಕೊಳ್ಳೋವಾಗ ಗ್ಲಾಸ್‌ ಕೆಳಗೆ ಕಿರುಬೆರಳನ್ನ ಇಟ್ಕೊಂಡು ಕೋಕ್‌ ಕುಡೀಲಿ ಅನ್ನೋಷ್ಟು ಆಸೆ ಆತಂಗೆ. ಆದ್ರೆ ಅಕ್ಕ, ಹೇಳಿದ್ನಲ್ಲ, ಒಂಥರಾ ನಮೂನೆ. ಸರಿ ರಾತ್ರೀಲಿ ಕಡ್ಲೇ ಪುರಿಗೆ ಎಣ್ಣೆ ಹಾಕ್ಕೊಂಡು ಸಾಯಿಸುತೆ ಓದೋ ಪ್ರಾಣಿ ಅದು. ಡೇನಿಯಲ್‌ ಸ್ಟೀಲು, ಬಾರ್ಬರಾ ಕಾರ್ಟ್ಲಾಂಡ್‌ ಇವರೆಲ್ಲಾ ಗೊತ್ತಿಲ್ಲ. ಇದ್ರಿಂದಾಗಿ ಗಂಡ ಹೆಂಡ್ತಿಗೆ ಮದ್ವೆ ಆದ ಹೊಸದ್ರಲ್ಲಿ ಬಹಳ ಜಗಳ ಕದನ ಎಲ್ಲಾ ನಡೀತು. ಈಗ ಎಲ್ಲಾ ಸುಮಾರಾಗಿ ಸರಿ ಹೋಗಿದೆ ಅನ್ನಿ. ಗಂಡ ಪಾರ್ಟಿ ಬಿಟ್ಟು ವಾಯುಸ್ತುತಿ ಹೇಳೋ ಸ್ಥಿತಿಗೆ ತಂದಿದಾಳೆ ಅಕ್ಕ. ಇಂಗ್ಲಿಷ್‌ ಗಾದೆ ಇದ್ಯಲ್ಲಾ ‘ಇಫ್‌ ಯು ಕಾನ್ಟ್‌ ಲಿಕ್‌ ದೆಂ, ಜಾಯಿನ್‌ ದೆಂ’ ಆ ಥರ ಆತನೂ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ. ಇವಳ ಮನೆನಲ್ಲೂ ಸ್ವಲ್ಪ ದಿನ ಇದ್ರು ನಮ್ಮಮ್ಮ. ಅಲ್ಲಿಂದ ನಮ್ಮ ಮನೆಗೆ. ಮತ್ತು ಅಲ್ಲಿನ ಮುಂದಿನ ಕಥೆಗೆ.

ಭಾನುವಾರ ವೈಕುಂಠ ಏಕಾದಶಿ. ಅಮ್ಮಂಗೆ ಇಂಜೆಕ್ಷನ್‌ ಕೊಟ್ಟು ನಾನು ಮನೆ ಬಿಟ್ಟೆ. ಸುಮಾರಾಗಿ ನಾನು ಭಾನುವಾರ ಮನೆ ಬಿಡೋದು ಬಹಳ ಅಪರೂಪ, ಆದ್ರೆ ಅವತ್ತು ಓದಕ್ಕೆ ಪುಸ್ತಕ ಇರಲಿಲ್ಲ ಅಂತ ಎಂ ಜಿ ರೋಡಿಗೆ ಹೊರಟೆ.

ಗೋಧಿ ದೋಸೆ, ಹುರುಳೀಕಾಯಿ ಪಲ್ಯ ಮಾಡಿ ಅಮ್ಮಂಗೆ ಕೊಟ್ಟು ನನ್ಹೆಂಡ್ತಿ ಶ್ರೀನಿವಾಸನ ದೇವಸ್ಥಾನಕ್ಕೆ ಹೊರಟಳು. ಸ್ವರ್ಗ ಸಂಪಾದನೆಗೆ.

ಬೆಂಗಳೂರಿನಲ್ಲಿ ಗೊತ್ತಲ್ಲ. ಎಲ್ಲ ಕಡೆನೂ ಜನ. ದರ್ಶಿನಿಯಲ್ಲಿ ಜನ. ಬಸ್ಸಲ್ಲಿ ಜನ. ಹಾಗೇ ದೇವಸ್ಥಾನದಲ್ಲೂ ದೊಡ್ಡ ಕ್ಯೂ. ಮನೆ ಬಿಟ್ಟು ಎರಡು ಘಂಟೆ ಆದ್ಮೇಲೆ ವಾಪಸ್‌ ಬಂದಿದಾಳೆ ನನ್ಹೆಂಡ್ತಿ. ಕಾಲು ತೊಳೆದು ಅಮ್ಮನ ರೂಮಿಗೆ ಹೋಗಿ ನೋಡಿದರೆ ಅಮ್ಮ ತೇಲುಗಣ್ಣು ಮಾಡಿದ್ದಾರೆ. ತಕ್ಷಣ ಟೇಬಲ್‌ ನೋಡಿದ್ದಾಳೆ ನನ್ಹೆಂಡ್ತಿ. ಬಿಳಿ ಪುಡಿ ಇದ್ದ ಪ್ಯಾಕೆಟ್‌ ಮಾಯ. ಒಂದಿಷ್ಟು ಪುಡಿ ಅಲ್ಲೆಲ್ಲಾ ಚೆಲ್ಲಿದೆ.

ನಾನು ಎಂ.ಜಿ.ರೋಡ್‌ನಲ್ಲಿ ಬುಕ್‌ ತಗೊಂಡು ಸ್ಕೂಟರ್‌ ಸ್ಟಾರ್ಟ್‌ ಮಾಡೋ ಹೊತ್ತಿಗೆ ಬಂತು ಹೆಂಡತಿಯಿಂದ ಪೋನ್‌. ಅವಳ ಅಳು ಮಧ್ಯ ಅರ್ಧವೂ ಅರ್ಥವಾಗಲಿಲ್ಲ. ಆದ್ರೂ ಕೇಳ್ದೆ ತಿಂಡಿ ತಿಂದಿದ್ದಾರ ಅಂತ. ಹೂ ಅಂದ್ಲು. ಶುರು ಆಯ್ತು ನನಗೂ ಎದೆ ಹೊಡ್ಕೊಳಕ್ಕೆ. ಅಲ್ಲಿಂದ ಮನೆಗೆ ಗಾಡಿ ಡ್ರೈವ್‌ ಹೇಗೆ ಮಾಡಿದ್ನೋ, ಎಷ್ಟು ಜನಕ್ಕೆ ಬಯ್ದೆನೋ ಭಗವಂತನಿಗೆ ಗೊತ್ತು. ಮನೆಗೆ ಬರೋ ಹೊತ್ತಿಗೆ ಮನೆ ಹತ್ರ ಇರೋ ಒಬ್ಬ ಆಯುರ್ವೇದಿಕ್‌ ಪ್ರಾಕ್ಟೀಷನರ್‌ ಒಬ್ರನ್ನ ನನ್ಹೆಂಡ್ತಿ ಕರ್ಕೊಂಡು ಬಂದಿದ್ಲು. ಅವ್ರು ಕೇಳಿದಾರೆ ಏನು ಪುಡಿ ಅಂತ. ಏನು ಪುಡಿ ಅಂತ ಹೇಳೋದು. ಗೊತ್ತಿಲ್ಲ ಅಂದೆ.

ಗೋಪಿಗೂ ಪೋನು ಮಾಡಿದ್ಲು ಹೆಂಡ್ತಿ. ಅವ್ನೂ ಓಡಿ ಬಂದ.

‘ಬೋಳಿಮಗನೇ, ಏನ್‌ ಪುಡಿನೋ’ ಅಂದೆ. ಅವ್ನೂ ಕಕ್ಕಾಬಿಕ್ಕಿ. ಹಿಂಗಾಗಲ್ಲವಲ್ಲ ಅಂತ ತೊದಲ್ದ. ಡಾಕ್ಟರ್‌ ಪೈಪ್‌ ಹಾಕಿ ಹೊಟ್ಟೆ ವಾಷ್‌ ಮಾಡಿದ್ರು. ಅಮ್ಮನ ಎರಡೂ ಕೈಗಳನ್ನೂ ಹಿಡಿದು ಮೇಲೆ ಕೆಳಗೆ ಅಲ್ಲಡಿಸಕ್ಕೆ ಹೇಳಿದ್ರು. ಏನು ಮಾಡಿದ್ರೂ ಅಮ್ಮ ಎಚ್ಚರ ಆಗವಲ್ಲರು.

ಕುಂಯ್‌ ಅಂತಿದ್ದ ಹೆಂಡತಿಗೆ ಹೇಳ್ದೆ ‘ಸ್ವಲ್ಪ ಬಾಯಿ ಮುಚ್ಚು’ ಅಂತ. ಅವಳು ‘ಹೂಂ’ ಅಂತ ರೂಂನಿಂದ ಹೊರಗೆ ಹೊರಟಳು. ಹೋಗ್ತಾ ಹೋಗ್ತ ಹೊಟ್ಟೆ ತೊಳೆದಿದ್ದ ನೀರಿನ ಪಾತ್ರೆನ ತಗುಲಿಸಿ ಬೀಳಿಸಿದ್ಲು. ಗುರ್‌ ಅಂತ ತಲೆ ಎತ್ತಿದೆ. ಗೋಪೀನೂ ನೀರಿನ ಕಡೆ ನೋಡ್ದ.

ಹೆಂಡ್ತಿ ಕಾರಿಡಾರ್ನಲ್ಲಿ ಇನ್ನೂ ಬಿಕ್ತಾ ಇರೋ ಶಬ್ದ ಬರ್ತಾನೆ ಇತ್ತು. ಹಾಗೇ ಬಿದ್ದಿದ್ದ ನೀರಿನ ಪಾತ್ರೆ ಕಡೆ ನೋಡ್ತಾ ಇದ್ದೆ. ಸಂಪೂರ್ಣ ಕ್ಲಿಯರ್‌ ಆಗಿ ಇತ್ತು. ಹೆಂಡತಿನ ಮತ್ತೆ ಕೂಗ್ದೆ.

‘ಏನ್‌ ತಿಂದಿದ್ರು’ ಅಂದೆ. ‘ಗೋಧಿ ದೋಸೆ, ಹುರುಳಿಕಾಯಿ ಪಲ್ಯ’ ಅಂದ್ಲು ಸೊರ ಸೊರದ ನಡುವೆನೇ.

ಆಗ ಹತ್ಗೊಂತು ಲೈಟು. ಎರಡು ಗಂಟೆ ಕೆಳಗೆ ಹುರುಳಿಕಾಯಿ ಪಲ್ಯ ತಿಂದಿದ್ರೆ ಹೊಟ್ಟೆ ತೊಳೆದ ನೀರಿನಲ್ಲಿ ಸ್ವಲ್ಪವಾದರೂ ಪಲ್ಯದ ಅವಶೇಷ ಇರಬೇಡವೇ? ನನ್ರೂಮಿಗೆ ನುಗ್ಗಿ ಗ್ಲೂಕೋ ಮೀಟರ್‌ ತಗೊಂಡು ಬಂದೆ. ಡಾಕ್ಟರ್‌ನ ಪಕ್ಕ ತಳ್ಳಿ ಅಮ್ಮನ ಬೆರಳಿಗೆ ಸೂಜಿ ಚುಚ್ಚಿದೆ. ರಕ್ತಕ್ಕೋಸ್ಕರ. ಒಂದು ತೊಟ್ಟೂ ಬರಲಿಲ್ಲ. ಎಷ್ಟು ಒತ್ತಿದರೂ ಇಲ್ಲ. ಸರಿ ಅಂತ ಅವರ ಮೊಣಕೈ ಕೆಳಗಿನ ನಾಳಕ್ಕೇ ಚುಚ್ಚಿದೆ. ಆಗ ಬಂತು ನೋಡಿ ರಕ್ತ. ಅದನ್ನ ಟೆಸ್ಟ್‌ ಮಾಡಿದ್ರೆ ಗ್ಲೂಕೋಸ್‌ ಮಟ್ಟ 22 ಅಂತ ತೋರಿಸ್ತು.

ಡಾಕ್ಟರ್‌ ಮತ್ತೇನೂ ಮಾತಾಡ್ಲಿಲ್ಲ. ಅವರ ಬ್ಯಾಗ್ನಿಂದ ಗ್ಲೂಕೋಸ್‌ ಬಾಟಲ್‌ ತೆಗೆದು ಚುಚ್ಚಿದ್ರು. ಅರ್ಧ ಗಂಟೆ ಕಳೆದ ಮೇಲೆ ಅಮ್ಮ ಕಣ್ಣು ಬಿಟ್ರು.

’ಏನಾಯ್ತು’ ಅಂತ ನಮ್ಮನ್ನೇ ಕೇಳಿದ್ರು. ನಾನು ಕೇಳಿದೆ ‘ನೀವೇ ಹೇಳಿ ಏನಾಯ್ತು ಅಂತ. ಪುಡಿ ತಿಂದ್ರ’ ಅಂದೆ.

‘ಹುಚ್ಚಾ ನಿಂಗೆ’ ಅನ್ನೋ ತರಹ ನೋಡಿದ್ರು. ಮತ್ತೆ ಕೇಳ್ದೆ. ಗೊತ್ತಿಲ್ಲ ಅಂದ್ರು. ದೋಸೆ ಏನಾಯ್ತು ಅಂದೆ. ಆಗ ಬಾಯಿ ಬಿಟ್ರು. ವೈಕುಂಠ ಏಕಾದಶಿ ದಿನ ಹೇಗೆ ಮುಸುರೆ ತಿನ್ನೋದು. ತಿನ್ದೇ ಇದ್ರೆ ನಾನು ಬೈತೀನಿ, ಅದಕ್ಕೆ ಏನ್‌ ಮಾಡಿದಾರೆ, ನನ್ಹೆಂಡ್ತಿ ಕೊಟ್ಟ ದೋಸೆನ ಕಿಟಕಿ ಆಚೆ ಎಸ್ದಿದಾರೆ. ದೋಸೆ ಜೊತೆ ಆ ಬಿಳಿ ಪುಡಿನೂ ಹೋಗಿದೆ. ಎಸ್ಯೋ ರಭಸದಲ್ಲಿ ಸ್ವಲ್ಪ ಅಲ್ಲೆಲ್ಲಾ ಚೆಲ್ಲಿದೆ. ಇನ್ಸುಲಿನ್‌ ತೊಗೊಂಡು ಊಟ ಮಾಡ್ದೆ ಹೋದ್ರೆ ಏನು ಆಗುತ್ತೋ ಅದು ಆಗಿದೆ. ಹೈಪೋಗ್ಲೈಸೀಮಿಕ್‌ ಆಗಿದ್ದಾರೆ. ಹಾಗೇ ಕೋಮಾಕ್ಕೆ ಹೋಗಿದ್ದರೆ ಸಾವು ಒಂದು ಹೆಜ್ಜೆ ದೂರ ಅಷ್ಟೆ.

‘ಬುದ್ಧಿ ಇದ್ಯೇನ್ರೀ’ ಅಂದೆ.

‘ಏನೂ ಪರವಾಗಿಲ್ಲ ಬಿಡು, ಇವತ್ತು ಸತ್ತಿದ್ದರೆ ನೇರ ಸ್ವರ್ಗ’ ಅಂದ್ರು ನಮ್ಮಮ್ಮ. ಅವರು ಯಾವತ್ತೂ ತಮ್ಮ ತಪ್ಪನ್ನ ಒಪ್ಕಳಲ್ಲ. ಇಷ್ಟೆಲ್ಲಾ ಆಗಿದ್ದು ನಿನ್ನಿಂದ್ಲೇ ಅಂತ ಗೋಪಿ ಕಡೆ ನೋಡ್ದೆ. ಅವ ಅಂದ ತಣ್ಣಗೆ. ‘ಅಮ್ಮನ್ನ ಸ್ವರ್ಗದವರೇ ಆಚೆ ದಬ್ಬಿದಾರೆ, ಸಾಕಷ್ಟು ಪುಣ್ಯ ಸ್ಟಾಕ್‌ ಇಲ್ಲ ಅಂತ ಕಾಣ್ಸುತ್ತೆ ಅಮ್ಮನ ಹತ್ತಿರ’ ಅಂತ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X