ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರೋದಯ

By Staff
|
Google Oneindia Kannada News


ಮಾವಿನಕೆರೆ ಬಂತು ಇಳ್ಕೊಳ್ಳಿ ಕಂಡಕ್ಟರ್‌ ಕೂಗಿದಾಗ ಶೀಲಾಳಿಗೆ ಎಚ್ಚರವಾಯಿತು. ಬಸ್‌ನಲ್ಲಿ ಯಾವಾಗಲೂ ಪುಸ್ತಕ ಓದುತ್ತಿದ್ದವಳು ಗಂಡನ ಮೇಲಿನ ಬೇಸರ, ಕೋಪದಿಂದಾಗಿ ಕಿಟಕಿ ಬಳಿ ಸೀಟ್‌ ಸಿಕ್ಕರೂ ಪ್ರಕೃತಿಯನ್ನು ಸವಿಯುವ ಮನಸ್ಸಾಗದೆ ಮಲಗಿಬಿಟ್ಟಿದ್ದಳು. ಎದ್ದು ಸೂಟ್‌ಕೇಸ್‌ ಹಿಡಿದು ಬಸ್‌ನಿಂದ ಇಳಿಯತೊಡಗಿದಳು.

ಬೆಳಿಗ್ಗೆಯ ಸಮಯವಾದ್ದರಿಂದ ಸ್ವಲ್ಪ ಚಳಿಯಿತ್ತು. ಪ್ರಕೃತಿಯ ರಮ್ಯ ಸೊಗಸನ್ನು ಮೈಗೂಸಿಕೊಂಡ ಊರು ಮಾವಿನಕೆರೆ. ರಸ್ತೆಯ ಉದ್ದಕ್ಕೂ ಸಾಲುಮರಗಳು. ತಣ್ಣನೆಯ ಗಾಳಿ, ರಸ್ತೆಯ ಪಕ್ಕಕ್ಕೆ ಅಂಟಿಕೊಂಡಂತೆ ಮಾವಿನಕೆರೆ ಎಂದೇ ಹೆಸರಿದ್ದ ಕೆರೆ.

ಬಾಲ್ಯದಲ್ಲಿ ಈ ಕೆರೆಯಲ್ಲಿ ಈಜು ಕಲಿತದ್ದು, ಮೀನು ಹಿಡಿದದ್ದು, ತೆಪ್ಪದ ದೋಣಿವಿಹಾರ ಮಾಡಿದ್ದು ಎಲ್ಲವೂ ನೆನಪಿನಲ್ಲಿ ಬರಲಾರಂಭಿಸಿತು. ಮನೆಯ ಕಡೆಗೆ ಮೆಲ್ಲನೆ ಹೆಜ್ಜೆ ಹಾಕತೊಡಗಿದಳು. ಊರಿನ ಒಳಗೆ ಬಸ್‌ ಪ್ರವೇಶಿಸದ ಕಾರಣ ಮನೆಯವರೆಗೆ ಅರ್ಧ ಮೈಲಿ ನಡೆಯಬೇಕಿತ್ತು. ದಾರಿಯ ನಡುವೆ ಅನೇಕ ಪರಿಚಿತರ ಉಭಯಕುಶಲೋಪರಿ ಸಾಗಿತ್ತು.

‘ಯಾಕೆ ? ನಿನ್ನ ಪತಿದೇವರು ಬರಲಿಲ್ಲವೇ ಜೊತೆಗೆ ?’ ಬಾಲ್ಯದ ಗೆಳತಿ ಕಮಲ ರೇಗಿಸಿದ್ದಳು.

‘ಇಲ್ಲ ಅವರಿಗೆ ಆಫೀಸಿನಲ್ಲಿ ಬಹಳ ಅರ್ಜೆಂಟ್‌ ಕೆಲಸವಿದೆಯಂತೆ, ಎರಡು ದಿನ ಕಳೆದು ಬರಬಹುದು’ ಕೋಪ ಅಡಗಿಸಿಟ್ಟು ನಗುಮುಖದಿಂದ ಹೇಳಿದಳು.

‘ಎಲ್ಲಿ ಬರ್ತಾರೆ ? ಅವರಿಗೆ ಮರೆವು ಅಂತ ನಾನೇ ಬಸ್‌ ಟಿಕೆಟ್‌ ಬುಕ್‌ ಮಾಡಿಸಿ, ಬಸ್‌ ಹೊರಡುವ ಸಮಯವನ್ನ ಹತ್ತು ಬಾರಿ ಹೇಳಿದ್ದರೂ, ಬಸ್‌ ಹೊರಡುವ ಸಮಯವಾದರೂ ಬರಲಿಲ್ಲ. ಫೋನ್‌ ಮಾಡಿದಾಗ ಸಾರಿ ಶೀಲು ನಾನು ಮರೆತೇಬಿಟ್ಟೆ, ಇನ್ನೂ ಆಫೀಸ್‌ನಲ್ಲೇ ಇದ್ದೀನಿ, ನೀನು ಹೊರಡು ನಾನು ಬೇರೆ ಬಸ್‌ನಲ್ಲಿ ಗ್ಯಾರಂಟಿ ಬರ್ತೇನೆ’ ಎಂದಿದ್ದರು. ಮನಸ್ಸಿನಲ್ಲಿಯೇ ಬೈದಕೊಂಡಳು. ಆ ಕೋಪದಲ್ಲೇ ಬಸ್‌ ಹತ್ತಿದ್ದಳು ಶೀಲ. ಎಲ್ಲದಕ್ಕೂ ಮರೆವು, ಅಪ್ಪ ಅಮ್ಮನ ಇಪತ್ತೈದನೇ ವಿವಾಹ ವಾರ್ಷಿಕೋತ್ಸವ ಇಂದು. ಎಂತಹ ಉದಾಸೀನ ಇವರದು. ನಾನೊಬ್ಬಳೇ ಹೋದರೆ ಅವರು ಏನಂದುಕೊಂಡಾರು ಎಂಬ ಚಿಂತೆಯೂ ಇಲ್ಲವಲ್ಲ ಇವರಿಗೆ, ಅವರು ಬರಲಿ ಅವರ ಜೊತೆ ಮಾತನಾಡುವುದೇ ಇಲ್ಲ ನಾನು ಎಂದು ಕೋಪದಿಂದ ಮನಸ್ಸಿನಲ್ಲಿಯೇ ಪ್ರತಿಜ್ಞೆ ಮಾಡಿದ್ದಳು.

ಸೂಟ್‌ಕೇಸ್‌ ಬೇರೆ ಭಾರವಾಗಿತ್ತು. ಅಪ್ಪ ಅಮ್ಮನಿಗೋಸ್ಕರ ಕೊಂಡಿದ್ದ ರೇಶ್ಮೆ ಸೀರೆ, ಪಂಚೆ, ಶರ್ಟ್‌, ಇವಳ ಮತ್ತು ಗಂಡನ ಲಗೇಜ್‌ ಎಲ್ಲವೂ ಸೇರಿ ಸೂಟ್‌ಕೇಸ್‌ ಹಿಡಿದು ನಡೆಯುವುದು ಕಷ್ಟವಾಗಿತ್ತು.

‘ಏ ಶೀಲ ಸ್ವಲ್ಪ ನಿಂತ್ಕೊಳಮ್ಮ’ ಹಿಂದಿನಿಂದ ಯಾರೋ ಕರೆದರು.

ತಿರುಗಿ ನೊಡಿದಾಗ ಅಪ್ಪ ಅಮ್ಮ ನಡೆದುಕೊಂಡು ಬರುತ್ತಿದ್ದಾರೆ. ಇಬ್ಬರ ಕೈಯಲ್ಲೂ ಹೂವಿನ ಹಾರ, ಹಣ್ಣು. ಶೀಲಾಳಿಗೆ ಆಶ್ಚರ್ಯವಾಯಿತು.

‘ಇದೇನಪ್ಪಾ ನನಗೂ ಹೇಳದೆ ಮರು ಮದುವೆನಾ ?’

‘ಏ ಸುಮ್ನಿರೆ, ಮರು ಮದುವೆಯಂತೆ, ನಿನ್ನ ಗೆಳತಿ ವಿದ್ಯಾ ಇದ್ದಾಳಲ್ಲ, ಅವಳು ನಡೆಸೋ ಅನಾಥಮಕ್ಕಳ ಶಾಲೆಗೆ ಹೋಗಿದ್ದೆವು. ಅಲ್ಲೇ ಈ ಸನ್ಮಾನ’ ಅಮ್ಮ ಹೇಳಿದರು.

‘ಸನ್ಮಾನನಾ ? ಏನಕ್ಕೆ ?’ ಶೀಲಾಳಿಗೆ ಕುತೂಹಲವುಂಟಾಯಿತು.

‘ಇದೇನೇ ಹೀಗ್‌ ಕೇಳ್ತೀಯಾ ? ನಮ್ಮ ಅಳಿಯಂದಿರು ಒಂದು ವಾರದ ಹಿಂದೆ ವಿದ್ಯಾಳಿಗೆ ಚೆಕ್‌ ಕಳುಹಿಸಿ ನಮ್ಮ ವಿವಾಹ ವಾರ್ಷಿಕೋತ್ಸವದ ದಿನ ಅಲ್ಲಿನ ಮಕ್ಕಳಿಗೆ ಹೊಸ ಬಟ್ಟೆ, ಪುಸ್ತಕ, ಒಂದು ತಿಂಗಳಿಗೆ ಬೇಕಾಗುವ ಅಕ್ಕಿ, ರಾಗಿ, ಬೇಳೆ ಎಲ್ಲದಕ್ಕೂ ಏರ್ಪಾಡು ಮಾಡಿದ್ದಾರೆ. ಏನೂ ಗೊತ್ತಿಲ್ಲದಂತೆ ಮಾತನಾಡ್ತೀಯಲ್ಲೆ ?’

‘ಹೌದಾ ? ನನಗೆ ಹೇಳಲೇ ಇಲ್ಲವಲ್ಲಾ !’

‘ಸರಿ ಹೋಯ್ತು ಬಿಡು ಯಾವಾಗ್ಲೂ ಅವರನ್ನ ಮರೆಗುಳಿರಾಯರೇ ಅಂತ ರೇಗಿಸೋ ನಿನಗೆ ಜಗಳ, ಮುನಿಸು ಬಿಟ್ಟರೆ ಇನ್ನೇನು ತಿಳಿಯುತ್ತೆ’ ಅಪ್ಪ ಹುಸಿಮುನಿಸು ತೋರಿದರು.

‘ಬೆಳಿಗ್ಗೆನೇ ವಿದ್ಯಾ ಮನೆಗೆ ಬಂದು ನಿಮ್ಮ ಕೈಯಿಂದಲೇ ಮಕ್ಕಳಿಗೆ ಹೊಸಬಟ್ಟೆ, ಪುಸ್ತಕ ನೀಡಬೇಕು ಅಂದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. ನಮ್ಮ ಅಳಿಯಂದಿರು ಸಹಾಯ ಮಾಡಿ ಈ ಮಕ್ಕಳಿಗೆ ಒಳ್ಳೇಯದಾಗ್ತಾ ಇದೆಯಲ್ಲಾ ಅಂತ ನೆನೆಸಿಕೊಂಡಾಗ ನಿಜಕ್ಕೂ ಹೆಮ್ಮೆಯೆನಿಸಿತು ಕಣಮ್ಮ. ನೀನು ನೋಡಬೇಕಿತ್ತು ಆ ಮಕ್ಕಳ ನಗು, ಸಂತೃಪ್ತಿಯನ್ನ. ವಿವಾಹ ವಾರ್ಷಿಕೋತ್ಸವ ಅಂತ ಸುಮ್ಮನೆ ದುಂದುವೆಚ್ಚ ಮಾಡುವುದಕ್ಕಿಂತ ಇದೇ ಪುಣ್ಯದ ಕೆಲಸ. ನಿಜವಾಗಿಯೂ ನಮ್ಮ ಅಳಿಯಂದಿರು ಗ್ರೇಟ್‌’ ಅಪ್ಪ ಅಭಿಮಾನದಿಂದ ಹೇಳಿದರು.

ಗಂಡನ ಬಗ್ಗೆ ಹಲವಾರು ದೂರುಗಳನ್ನು ರೆಡಿಮಾಡಿ ಬಡಿಸಬೇಕೆಂದಿದ್ದ ಶೀಲಾಳಿಗೆ ದಿಗ್ಬ್ರಮೆಯಾಯಿತು. ಒಂದು ಕ್ಷಣ ಮಾತೇ ಹೊರಡಲಿಲ್ಲ.

‘ಅಳಿಯಂದಿರ ಬಗ್ಗೆ ಮಾತಾಡಿ ವಿಷಯನೇ ಮರೆತುಬಿಟ್ಟೆವು ನೋಡಿ. ಅದ್ಸರಿ ಎಲ್ಲೇ ನಮ್ಮ ಅಳಿಯಂದಿರು ? ಜೊತೆಯಲ್ಲಿ ಬರಲಿಲ್ವಾ ?’ ಅಮ್ಮ ವಿಚಾರಿಸಿದರು.

‘ಆಂ... ಇಲ್ಲ. ಅವರಿಗೆ ಅರ್ಜೆಂಟ್‌ ಕೆಲಸ, ಬೇರೆ ಬಸ್‌ ಹಿಡಿದು ಇಂದೇ ಬರ್ತೇನೆ ಅಂದರು. ಅದಕ್ಕೆ ನಾನೊಬ್ಬಳೇ ಬಂದೆ.’

‘ನೀವು ಹೋಗುತ್ತಿರಿ ನಾನು ಗದ್ದೆ, ತೋಟದ ಕಡೆ ಹೋಗಿ ಬರುತ್ತೇನೆ’ ಅಪ್ಪ ಹೇಳಿದರು.

ಅಮ್ಮ ಶೀಲಾಳತ್ತ ತಿರುಗಿ ‘ಸರಿ ಬಾ, ಅವರು ಬರುವಷ್ಟರಲ್ಲಿ ಅಡಿಗೆಗೆ ಸಿದ್ಧ ಮಾಡೋಣ’ ಎಂದರು. ಏನೋ ಮರೆತಂತಾಗಿ ‘ರೀ ಆ ರಂಗನಿಗೆ ಹೇಳಿ ತೋಟದಿಂದ ಬಾಳೆ ಎಲೆ, ಹಲಸಿನ ಹಣ್ಣು ತರೋದಿಕ್ಕೆ. ಅಳಿಯಂದಿರಿಗೆ ನಮ್ಮ ತೋಟದ ಹಲಸಿನ ಹಣ್ಣು ಅಂದ್ರೆ ತುಂಬಾ ಇಷ್ಟ’ ಎಂದು ಅಮ್ಮ ಅಪ್ಪನಿಗೆ ನೆನಪಿಸಿದರು.

ಅಪ್ಪ ತಲೆಯಾಡಿಸಿದರು.

ಸಂಜೆಯ ಸಮಯ.

ಶೀಲಾ ಮನೆಯ ಅಂಗಳದಲ್ಲಿ ಬೆಳೆದ ಮಲ್ಲಿಗೆಯನ್ನು ಬಿಡಿಸುತ್ತಿದ್ದಳು. ಮನಸ್ಸಿನ ತುಂಬಾ ಗಂಡನ ಬಗ್ಗೆ ಅಭಿಮಾನ ತುಂಬಿತ್ತು. ಪರ್ವಾಗಿಲ್ಲ ಇವರು ನನಗೆ ಹೇಳದೇ ಬಹಳ ಒಳ್ಳೆ ಕೆಲಸಾನೇ ಮಾಡಿದ್ದಾರೆ, ಅವರು ಬಂದಾಗ ಕಂಗ್ರಾಟ್ಸ್‌ ಹೇಳಬೇಕು ಎಂದುಕೊಂಡಳು.

ಟ್ರ್ಯಾಕ್ಟರ್‌ ಸದ್ದು ಕೇಳಿಸಿತು. ಕತ್ತೆತ್ತಿ ನೋಡಿದಳು. ಟ್ರ್ಯಾಕ್ಟರ್‌ನಲ್ಲಿ ಪಕ್ಕದ ಮನೆಯ ಮಾದಣ್ಣನ ಜೊತೆ ಪೆಚ್ಚುಮೋರೆ ಹಾಕಿ ಕುಳಿತ ಪತಿರಾಯರು.

‘ಇದೇನ್‌ ಮಾದಣ್ಣ, ಇವರೆಲ್ಲಿ ಗಂಟುಬಿದ್ದರು ನಿನಗೆ ?’ ತನಗಾದ ಸಂತೋಷವನ್ನು ತೋರ್ಪಡಿಸದೆ ಶೀಲಾ ಎಂದಿನಂತೆ ಛೇಡಿಸಿದಳು.

‘ಸುಮ್ನಿರಮ್ಮಾ, ಇವರು ನಿದ್ದೆ ಮಂಪರಿನಲ್ಲಿ ನಮ್ಮೂರಿನ ಹಿಂದಿನ ಸ್ಟಾಪ್‌ನಲ್ಲೇ ಇಳಿದುಕೊಂಡು ಬಿಟ್ಟಿದ್ದರು. ನಾನು ಆ ಊರಿನಿಂದಲೇ ತೆಂಗಿನ ಸಸಿ ತರ್ತಿದ್ನಲ್ಲಾ, ಜೊತೆಯಲ್ಲೆ ಕರೆದುಕೊಂಡು ಬಂದೆ’. ಟ್ರ್ಯಾಕ್ಟರ್‌ನಿಂದ ಇಳಿದು ನಿಂತಿದ್ದ ಶೀಲಾಳ ಪತಿಯ ಕಡೆ ನೋಡಿ ‘ಸರಿ ಭಾವ ನೀವು ಹೊರಡಿ. ನಾನು ಆಮೇಲೆ ಬರ್ತೀನಿ’ ಎಂದ ಮಾದಣ್ಣ ಹೊರಟ.

‘ಏನು ಅಲ್ಲೇ ನಿಂತಿದ್ದೀರಲ್ಲಾ ಮರೆಗುಳಿರಾಯರೇ ? ಇದೇ ಮನೆ ಬನ್ನಿ’ ಶೀಲಾ ಪ್ರೀತಿಯಿಂದ ಕರೆದಳು.

ಮಲ್ಲಿಗೆಯ ಸುವಾಸನೆ ಸುತ್ತಲೂ ಹರಡತೊಡಗಿತ್ತು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X