ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಸಂಬಾ

By Staff
|
Google Oneindia Kannada News


ರಾತ್ರಿಯೆಲ್ಲಾ ಕಡಿದ ಸೊಳ್ಳೆಯ ಕಡಿತಕ್ಕೆ ಸರಿಯಾಗಿ ನಿದ್ದೆಯಿರಲಿಲ್ಲ. ಬೆಂಗಳೂರಿನಲ್ಲಾಗಿದ್ದಿದ್ದರೆ ತಂಪಾದ ಹವೆಯಲ್ಲಿ, ಸೊಳ್ಳೆಯಿರದಿದ್ದರೂ ಪರದೆ ಕಟ್ಟಿಕೊಂಡು ಮಲಗುವ ಅಭ್ಯಾಸ. ಬಹಳ ದಿನಗಳ ನಂತರ ಬೆಂಗಳೂರು ಬಿಟ್ಟು ಹೊರಬಂದಿರುವುದು ಅದೂ ಸುಡುಬಿಸಿಲಿನ ಮೇ ತಿಂಗಳಿನಲ್ಲಿ. ಬೆಳಗ್ಗೆ 7 ಘಂಟೆಗೆ ಪ್ರಾಜೆಕ್ಟ್‌ ಸೈಟ್‌ನಲ್ಲಿ ಮೀಟಿಂಗ್‌ ಬೇರೆ ವ್ಯವಸ್ಥೆಗೊಳಿಸಬೇಕಾಗಿತ್ತು. ಸಿಗರೇಟನ್ನೊಂದು ಹತ್ತಿಸಿ ಪಕ್ಕದಲ್ಲಿ ಮಲಗಿದ್ದ ಹರಿಭಾಸ್ಕರನನ್ನು ಎಬ್ಬಿಸಿ ಬೇಗ ರೆಡಿಯಾಗಿ ಹೊರಡಲು ತಯಾರಾಗು ಎಂದೆ.

ಪಕ್ಕದ ರೂಮಿನಲ್ಲಿ ಮಲಗಿರುವವರನ್ನು ಎಬ್ಬಿಸಲೆಂದು ಅಲ್ಲಿಗೆ ಹೋದಾಗ ಯಾರೋ ಸಣ್ಣಗೆ ನರಳುತ್ತಿರುವ ಶಬ್ಧ ಕೇಳಿಸಿತು. ಅಲ್ಲಿ ಮಲಗಿದ್ದ ಶಿವಕುಮಾರನ ಕೈ ಕಾಲುಗಳು ನಡುಗುತ್ತ ಚಳಿಗೆ ಕಂಪಿಸುವಂತಿದ್ದವು. ಅವನ ಪಕ್ಕದಲ್ಲಿ ಮಲಗಿದ್ದ ಜಯಶಂಕರನನ್ನು ಕೂಡಲೆ ಎಬ್ಬಿಸಿದೆ. ‘ಶಿವ ಏನಾಗಿದೆ ನಿನಗೆ’ ಎಂದು ಕೇಳಿದೆ. ‘ಯಾಕೋ ಗೊತ್ತಿಲ್ವೋ, ಸೊಳ್ಳೆ ಕಾಟಕ್ಕೆ ನಿದ್ದೇನೇ ಇಲ್ಲ. ಯಾವಾಗ್ಲೋ ಸ್ವಲ್ಪ ನಿದ್ದೆ ಬಂತು. ಕಣ್ಣು ಬಿಟ್ಟಾಗಿನಿಂದ ಕೈ ಕಾಲು ನಡುಗುತ್ತಿದೆ, ತುಂಬಾ ಚಳಿಯಾಗುತ್ತಿದೆ’ ಎಂದ. ಏನಪ್ಪಾ ಮಾಡುವುದು ಎಂದು ಯೋಚಿಸಿ, ಶಿವಕುಮಾರನನ್ನು ಡಾಕ್ಟರ್ಗೆ ತೋರಿಸಿ ನಂತರ ಸೈಟ್‌ಗೆ ಬರುವಂತೆ ಜಯಶಂಕರನಿಗೆ ತಿಳಿಸಿ ನಾನು ಮತ್ತು ಹರಿಭಾಸ್ಕರ ತುರ್ತಾಗಿ ರೆಡಿಯಾಗಿ ಸೈಟ್‌ಗೆ ತೆರೆಳಿದೆವು.

‘’, ಗುಜರಾತ್‌ ರಾಜ್ಯದ ಸೂರತ್‌ ಜಿಲ್ಲೆಯ ಉತ್ತರಕ್ಕೆ 45 ಕಿ.ಮೀ. ದೂರದಲ್ಲಿದೆ. ಮುಂಬೈನಿಂದ ಅಹಮದಾಬಾದ್‌ಗೆ ಸೂರತ್‌ ಮೂಲಕ ಹೋಗುವ ರಾಷ್ಟ್ರೀಯ ಹೆದ್ದಾರಿ-8, ಟೌನ್ಗೆ ನಾಲಕ್ಕು ಕಿ.ಮೀ. ಅಂಚಿನಲ್ಲಿ ಹಾದು ಹೋಗುತ್ತದೆ. ಇಲ್ಲಿ ಯಾವಾಗಲೂ ಭಾರಿ ವಾಹನ ದಟ್ಟಣಿ. ಮುಂಬೈ ಕಡೆಯಿಂದ ದೆಹಲಿ, ರಾಜಾಸ್ಥಾನ, ಭಾರತದ ಉತ್ತರ ರಾಜ್ಯಗಳಿಗೆ ಸರಕು ಸಾಗಣೆಗಳ ಎಲ್ಲಾ ವಾಹನಗಳು ಈ ಮೂಲಕವೇ ಹಾದು ಹೋಗಬೇಕು. ದಲ್ಲಿರುವ ಗ್ಲಾಸ್‌ ಕಾರ್ಖಾನೆಯೊಂದು ತನ್ನ ಉತ್ಪನ್ನಗಳ ಬೇಡಿಕೆಗಳ ಹೆಚ್ಚಳ ಮತ್ತು ಅದನ್ನು ಪೂರೈಸಲು ಅಡಚಣೆಯಾಗಿದ್ದ ವಿದ್ಯುತ್‌ ಶಕ್ತಿಯ ಪೂರೈಕೆಯನ್ನು ನಿವಾರಣೆಗೊಳಿಸಲು ತಮ್ಮದೇ ಆದ ಜನರೇಟರ್‌ ಪವರ್‌ ಪ್ಲಾಂಟನ್ನು ಕಟ್ಟುವ ಕೆಲಸದ ಕಾಂಟ್ರಾಕ್ಟನ್ನು ನಮ್ಮ ಕಂಪನಿಗೆ ನೀಡಿತ್ತು. ಅದನ್ನು ಅನುಷ್ಠಾನಕ್ಕೆ ತರಲು ನನ್ನನ್ನು ಅಲ್ಲಿಗೆ ಕಳುಹಿಸಿದ್ದರು. ನನ್ನ ಜೊತೆ ಶಿವಕುಮಾರ, ಜಯಶಂಕರ, ಹರಿಭಾಸ್ಕರ ಸಹ ಬಂದರು.

ಹಿಂದಿನ ದಿನ ಬೆಳಗ್ಗೆ ನಾವು ಅಲ್ಲಿಗೆ ಬಂದು ನಮ್ಮ ಇತರ ಕಾಂಟ್ರಾಕ್ಟ್‌ ಕಡೆಯ ಹುಡುಗರನ್ನು ವಿಚಾರಿಸುತ್ತಿದ್ದಾಗ ಅಲ್ಲಿದ್ದ ತಮಿಳುನಾಡಿನ ಕಡೆಯವರೊಬ್ಬನನ್ನು ‘ಎನ್ನಪ್ಪಾ ಎಪ್ಪಡಿ ಇರುಕ್ಕು’ (ಏನಪ್ಪಾ ಹೇಗಿದೆ) ಎಂದು ವಿಚಾರಿಸಿದೆ. ಅದಕ್ಕವನು ‘ಎನ್ನ ಸಾರ್‌, ಇಂಗೆ ಕೊಸು- ರೊಂಬಾ ಸಾರ್‌’ ಎಂದ (ಇದೇನು ಊರು ಸಾರ್‌, ಇಲ್ಲಿ ಸಿಕ್ಕಾಪಟ್ಟೆ ಸೊಳ್ಳೆ ಎಂದು ಹೇಳಿದ). ಬೆಳಿಗ್ಗೆ ಅವನಾಡಿದ ಮಾತು ಸಾಯಂಕಾಲ ಕೆಲಸ ಮುಗಿಸಿ ರೂಮಿನಲ್ಲಿ ಕುಳಿತಿದ್ದಾಗ ನಾಕೈದು ಸೊಳ್ಳೆಗಳು ಕಡಿದ ನಂತರ ಜ್ಞಾಪಕಕ್ಕೆ ಬಂತು. ಶಿವಕುಮಾರ ಸಹ ಅಷ್ಟರಲ್ಲಾಗಲೆ ಬಹಳಷ್ಟು ಕಡಿತಕ್ಕೆ ಒಳಗಾಗಿ ಸೊಳ್ಳೆಗಳನ್ನು ಬಯ್ಯುತ್ತ ಕುಳಿತಿದ್ದ. ಆಗ ನಾನು ಸೂಕ್ಷ್ಮವಾಗಿ ಗಮನಿಸತೊಡಗಿದೆ. ಸುಮಾರು ಸಾಸಿವೆ ಕಾಳಿನ ಸೈಜ್‌ನಿಂದಾ ಹಿಡಿದು ದೊಡ್ಡ ಗೊದ್ದದ ಗಾತ್ರದವರೆಗಿನ ಸೊಳ್ಳೆಗಳು ಗೋಚರಿಸತೊಡಗಿದೆವು. ಇದರ ಜೊತೆಗೆ ಚಿತ್ರ ವಿಚಿತ್ರ ಬಣ್ಣಗಳ ಹಾಗು ಹೊಸಕಿದರೆ ಕೆಟ್ಟ ವಾಸನೆ ಸೂಸುವ ಇತರ ಕ್ರಿಮಿಗಳು ಕಾಣಿಸಿಕೊಂಡವು.

ಖಂಡಿತಾ ನನ್ನ ಜನ್ಮದಲ್ಲಿ ಆ ರೀತಿಯಾದ ಸೊಳ್ಳೆಗಳು ಮತ್ತು ಇತರ ಕ್ರಿಮಿಗಳನ್ನು ನೋಡಿರಲಿಲ್ಲ. ನಮ್ಮ ಜನರೇಟೆರ್‌ ಚಾಲೂ ಮಾಡಿ ಟ್ರಯಲ್‌ ನೋಡಿ ಇಲ್ಲಿಂದ ನಾವು ಹೊರಡಲು ಇನ್ನೂ ಹತ್ತು ದಿನಗಳಾದರು ಆಗುತ್ತದೆ ಹೇಗೆ ಇವನ್ನು ನಿಭಾಯಿಸುವುದು ಎಂಬ ದೊಡ್ಡ ಯೋಚನೆಯಾಯಿತು. ಕೂಡಲೆ ಲಾಡ್ಜ್‌ನ ಹುಡುಗನನ್ನು ಕರೆದು ಒಂದು ಮಸ್ಕಿಟೋ ಕಾಯ್ಲ್‌ು ತರಲು ಹೇಳಿದ್ದೆ. ಅದನ್ನು ಹಚ್ಚಿ ಮಲಗಿದ್ದರೂ ಅವುಗಳ ಕಾಟ ರಾತ್ರಿ ತಡೆಯಲಾಗದೆ ಸರಿಯಾಗಿ ನಿದ್ದೆ ಬಂದಿರಲಿಲ್ಲ.

*

ಪ್ರಾಜೆಕ್ಟ್‌ ಸೈಟ್‌ನಲ್ಲಿ ಮೀಟಿಂಗ್‌ ಮುಗಿಸಿ 9ಕ್ಕೆ ಹೊರಬಂದಾಗ, ಜಯಶಂಕರ ಕಾಣಿಸಿದ. ಕೂಡಲೆ ಬಳಿ ಬಂದು ಶಿವಕುಮಾರನನ್ನು ಹಾಸ್ಪಿಟಲ್‌ ಒಂದರಲ್ಲಿ ಅಡ್ಮಿಟ್‌ ಮಾಡಲಾಗಿದೆ, ಡಾಕ್ಟರ್‌ ‘ಇಟ್‌ ಇಸ್‌ ಸಸ್ಪೆಕ್ಟೆಡ್‌ ಟು ಬಿ ಮಲೇರಿಯಾ’ ಎಂದು ಹೇಳಿದ್ದಾರೆ ಎಂದು ತಿಳಿಸಿದ. ಸಾಯಂಕಾಲ ಕೆಲಸ ಮುಗಿದ ಮೇಲೆ, ಹಾಸ್ಪಿಟಲ್‌ಗೆ ಹೋದಾಗ ಶಿವಕುಮಾರ ಬಹಳ ಕೃಶನಾಗಿ ಮಲಗಿದ್ದ. ಡಾಕ್ಟರ್‌ ಹೇಳಿದರು ‘ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳಿನಲ್ಲಿ ದಲ್ಲಿ ಸೊಳ್ಳೆಗಳ ಹಾವಳಿ ವಿಪರೀತ, ಬಹಳಷ್ಟು ಜನ ಮಲೇರಿಯಾಗೆ ತುತ್ತಾಗುತ್ತಾರೆ. ನಿಮ್ಮ ಶಿವಕುಮಾರನಿಗೆ ರಕ್ತ ಪರೀಕ್ಷೆ ಮಾಡಿದ್ದೇನೆ. ಮಲೇರಿಯ ನೆಗೆಟಿವ್‌ ಬಂದಿದೆ. ಇವತ್ತು ಇಲ್ಲಿಯೆ ಇರಲಿ, ನಾಳೆ ಚೆಕ್‌ಅಪ್‌ ಮಾಡಿ ಡಿಸ್ಚಾರ್ಜ್‌ ಮಾಡುತ್ತೇನೆ’ ಎಂದರು. ನಾವು ಬೆಂಗಳೂರಿನಿಂದ ಬಂದಿರುವುದು ತಿಳಿದು ಯಾವುದಕ್ಕು ನೀವು ಇಲ್ಲಿರುವವರೆಗೆ ಸೊಳ್ಳೆಪರದೆ ಉಪಯೋಗಿಸಿ ಎಂದು ತಿಳಿಸಿದರು.

ರಾತ್ರಿ ಲಾಡ್ಜ್‌ಗೆ ಬಂದು ನಮ್ಮ ಪರಿಸ್ಥಿತಿ ತಿಳಿಸಿ ನಮಗೆ ಮಲಗಲು ರೂಮಿಗೆ ಸೊಳ್ಳೆಪರದೆ ಬೇಕೆಂದು ಕೇಳಿದೆವು. ಲಾಡ್ಜ್‌ ಹುಡುಗ ಎರಡು ಸೊಳ್ಳೆಪರದೆ ತಂದ. ಅದನ್ನು ನೋಡುತ್ತಿದ್ದಂತೆ ವಾಕರಿಕೆ ಬರುವಂತಾಯ್ತು. ಪರದೆ ಕಾನಕಾನಹಳ್ಳಿ ಕೆರೆಯಲ್ಲಿ ಅದ್ದಿ ತೆಗೆದಾಗ ಕಾಣುವ ಬಗ್ಗಡದ ಬಣ್ಣವನ್ನು ಹೋಲುತ್ತಿತ್ತು. ಕಮಟು ವಾಸನೆ ಮೂಗಿಗೆ ಬಡಿಯುತ್ತಿತ್ತು. ಸೊಳ್ಳೆಯ ಕಡಿತವನ್ನು ತಡೆಯಬಹುದು ಆದರೆ ಇದರೊಳಗೆ ಮಲಗಲು ಮಾತ್ರ ಸಾಧ್ಯವಿಲ್ಲ ಎಂದು ನಿರ್ಧರಿಸಿದೆವು. ಇಡೀ ಗೆ ಇದ್ದ ಒಂದೇ ಲಾಡ್ಜ್‌ ಅದು. ಎಲ್ಲಾ ಆರ್ಡಿನರಿ ರೂಮುಗಳು. ಸುಡುಬೇಸಿಗೆಯಾದ್ದರಿಂದ ಸೊಳ್ಳೆಯ ಜೊತೆಗೆ ಯಮ ಸೆಕೆ ಬೇರೆ! ಬೀಸುತ್ತಿದ್ದ ಫ್ಯಾನ್‌ನಿಂದ ಬಿಸಿ ಗಾಳಿ ಮೈಗೆ ನೇರವಾಗಿ ಬಡಿಯುತ್ತಿತ್ತು. ಎರಡೆರಡು ಮಸ್ಕಿಟೋ ಕಾಯ್ಲ್‌ು ಹಚ್ಚಿ ಹಾಗೂ ಹೀಗೂ ಎರಡನೆಯ ರಾತ್ರಿ ಕಳೆದವು.

ಮಾರನೆಯ ದಿನ ನಾನು ಮತ್ತು ಹರಿಭಾಸ್ಕರ ಅಂದಿನ ಕೆಲಸ ಮುಗಿಸಿ ಸಾಯಂಕಾಲ ಲಾಡ್ಜ್‌ಗೆ ವಾಪಸ್‌ ಬರುವುದರೊಳಗೆ ಜಯಶಂಕರ ಶಿವಕುಮಾರನನ್ನು ಹಾಸ್ಪಿಟಲ್ನಿಂದ ಡಿಸ್‌ಚಾರ್ಜ್‌ ಮಾಡಿಸಿ ನಂತರ ಪಕ್ಕದ ಬಾರೋಚ್‌ ನಗರಕ್ಕೆ ಹೋಗಿ ಎರಡು ಸಾಧಾರಣವಾದ ಸೊಳ್ಳೆ ಪರದೆ ಕೊಂಡು ತಂದಿದ್ದ. ಆದರೆ ಆ ಸೊಳ್ಳೇಪರದೆಯ ಒಳಗೂ ನುಗ್ಗುವಷ್ಟು ಸಣ್ಣ ಸೊಳ್ಳೆಗಳು ಅಲ್ಲಿದ್ದು ನಮ್ಮ ನಿದ್ದೆಯನ್ನು ಬಹಳವಾಗಿ ಕಾಡಿದವು.

ಬಹಳವೇ ಒದ್ದಾಡಿ ಹತ್ತು ದಿನಗಳು ಕಳೆದೆವು. ಅಷ್ಟರಲ್ಲಿ ಸೊಳ್ಳೆಗಳು ನಮಗೆ ಪರಿಚಯವಾಗುವಷ್ಟು ಹತ್ತಿರಕ್ಕೆ ಬಂದಿದ್ದವು. ಇದು ಬರೀ ಗುಯ್ಗುಡುತ್ತೆ ಕಚ್ಚುವುದಿಲ್ಲ, ಅದು ಕಚ್ಚಿದರೆ ಸಕತ್ತಾಗಿ ರಕ್ತ ಹೀರುತ್ತೆ, ಇದು ರಾಣಿ ಸೊಳ್ಳೆ, ಇದು ರಾಜಾ ಸೊಳ್ಳೆ, ಇದು ಮಂತ್ರಿ... ಎಲ್ಲಾ ಸೊಳ್ಳೆಗಳನ್ನು ಗುರುತಿಸುವ ಮಟ್ಟಿಗೆ ಬಂದಿದ್ದೆವು. ಆ ಹತ್ತು ದಿನಗಳಲ್ಲಿ ಸಾಯಂಕಾಲ ಯಾರೇ ನಮ್ಮೊಡನೆ ಸೇರಿದರೂ ಎಲ್ಲರ ಚಿಂತೆ ಒಂದೇ. ಹೇಗೆ ಇವತ್ತು ನಿದ್ರಿಸುವುದು? ಸೊಳ್ಳೆಗಳಿಂದ ಹೇಗೆ ಪಾರಾಗುವುದು? ಶಿವಕುಮಾರನಂತೂ ಸೊಳ್ಳೆಗಳನ್ನು ಬೈಯದ ಕೆಟ್ಟ ಪದಗಳೇ ಇಲ್ಲ! ಸೊಳ್ಳೆಗಳನ್ನು ಬಡಿಯುವಾಗ ಹಾಕು ಬೋ...ಮಗಂಗೆ, ಇಲ್ನೋಡು ಸೂ...ಮಗ ಎಷ್ಟು ದಪ್ಪ ಇದೆ, ಬರೀ ಇದೇ ನಮ್ಮ ರಾತ್ರಿಯ ಮಾತಾಗಿತ್ತು. ಸರ್ವರೋಗಕ್ಕು ಸಾರಾಯಿಯೆ ಮದ್ದು, ಹೋಗಲಿ, ಸ್ವಲ್ಪ ಎಣ್ಣೆನಾದ್ರು ಹಾಕಿ ಮಲಗೋಣ ಎಂದರೆ ಗುಜರಾತ್‌ ಗಾಂಧಿ ಹುಟ್ಟಿದ ನಾಡು! ಅಲ್ಲಿ ‘ಲಿಕ್ಕರ್‌ ಬ್ಯಾನ್‌’. ನಮ್ಮದು ಪ್ರಾಣ ಹೋಗುವಂತ ಪರಿಸ್ಥಿತಿ.

*

4 ಮೆಗಾವಾಟ್‌ ಜನರೇಟರನ್ನು ಯಶಸ್ವಿಯಾಗಿ ಶುರು ಮಾಡಿಸಿದಮೇಲೆ ಅದನ್ನು ವೀಕ್ಷಿಸಲು ಆ ಕಂಪನಿಯ ಹಿರಿಯ ಅಧಿಕಾರಿಗಳು ಮುಂಬೈನಿಂದ ಬಂದಿದ್ದರು. ನಮ್ಮೆಲ್ಲರನ್ನು ಅಭಿನಂದಿಸಿ ನಮ್ಮನ್ನು ಸೂರತ್‌ನ ಒಂದು ಹೋಟಲ್‌ ಒಂದರಲ್ಲಿ ಔತಣಕ್ಕೆ ಆಹ್ವಾನಿಸಿದರು. ದಲ್ಲೇ ವಾಸವಾಗಿದ್ದ ಪವರ್‌ ಪ್ಲಾಂಟ್‌ ಮ್ಯಾನೇಜರ್‌ ವೋರಾ ನಮ್ಮನ್ನು ಅವರ ಅಂಬಾಸಿಡರ್‌ ಕಾರ್ನಲ್ಲಿ ಸೂರತ್‌ಗೆ ಕರೆದೊಯ್ದರು. ಸೂರತ್‌ಗೆ ಹೋದ ಆ ಸಾಯಂಕಾಲ ನಮಗೆ ಬಹಳ ಸಂತೋಷದ ದಿನವಾಗಿತ್ತು. ಹವಾನಿಯಂತ್ರಿತ ರೂಮಿನಲ್ಲಿ ಕುಳಿತಿದ್ದ ನಮ್ಮ ಆಶ್ಚರ್ಯಕ್ಕೆ ನಮ್ಮ ಪರಿಚಿತ ಒಂದು ಸೊಳ್ಳೆಯೂ ಕಾಣಿಸಲಿಲ್ಲ. ಯಾರೋ ಎಣ್ಣೆಯನ್ನು ಸಹ ತರಿಸಿದ್ದರು. ಕಂಠ ಮಟ್ಟ ಕುಡಿದು ಚೆನ್ನಾಗಿ ತಿಂದು ನಮ್ಮ ಸೊಳ್ಳೆಯ ಅನುಭವಗಳನ್ನು ಎಲ್ಲರಿಗೂ ತಿಳಿಸಿ ಮರುದಿನ ಬೆಳಿಗ್ಗೆ ನಾವು ಬೆಂಗಳೂರಿಗೆ ವಾಪಸ್‌ ತೆರಳುವ ಬಗ್ಗೆ ಹೇಳಿದೆವು.

ಪಾರ್ಟಿಯ ನಂತರ ಅಂಬಾಸಿಡರ್‌ ಕಾರ್ನಲ್ಲಿ ಸೇರಲು ಹಿಂತಿರುಗುತ್ತಿದ್ದೆವು. ಕಾರಿನಲ್ಲಿಯೆ ಒಂದೆರಡು ಸೊಳ್ಳೆಗಳು ಕಚ್ಚಲು ಪ್ರಾರಂಭವಾದಾಗ ಸಮೀಪಿಸುತ್ತಿರುವ ಸೂಚನೆ ಬಂತು. ಎಲ್ಲರಿಗೂ ಮತ್ತೆ ದಿಗಿಲಾಗತೊಡಗಿತು. ಶಿವಕುಮಾರನಂತು ಮತ್ತೆ ಅವಾಚ್ಯ ಶಬ್ದಗಳಿಂದ ಸೊಳ್ಳೆಗಳನ್ನು ಬೈಯಲು ಶುರುವಿಕ್ಕಿದ. ಇನ್ನೇನು ನ್ಯಾಷನಲ್‌ ಹೈವೆಯಿಂದ ಎಡಕ್ಕೆ ತಿರುಗಬೇಕು, ಅಲ್ಲಿಂದ ಸಿಕ್ಕುವ ಸಣ್ಣ ರಸ್ತೆಯಲ್ಲಿ ನಾಲಕ್ಕು ಕಿ.ಮೀ. ಪಯಣಿಸಬೇಕು ಅಷ್ಟೆ ನಮ್ಮ ಲಾಡ್ಜ್‌ ಸೇರಲು, ಕಾರು ಬುರ್‌ ಬುರ್‌... ಬುರ್‌ ಬುರ್‌... ಶಬ್ಧ ಮಾಡುತ್ತಾ ಸ್ವಲ್ಪ ದೂರ ಹೋಗುವುದರಲ್ಲಿ ನಿಂತೇ ಹೋಯ್ತು. ಆಗ ಸುಮಾರು ರಾತ್ರಿ 1.30. ಕಾರ್‌ ಅಲ್ಲಿಯೇ ನಿಂತ ಕಾರಣ ಪೆಟ್ರೋಲ್‌ ಮುಗಿದದ್ದು. ಕಾರಿನಲ್ಲಿ ಪೆಟ್ರೋಲ್‌ ಮುಗಿದಿದ್ದಕ್ಕೆ ವೋರಾ ಏನೋ ಸಮಜಾಯಶಿ ಕೊಡುತ್ತಿದ್ದ.

ಅಷ್ಟರಲ್ಲಿ ನಮ್ಮ ನಾಲ್ವರಿಗೂ ಕಣ್ಣುಗಳು ಎಳೆಯುತ್ತಿದ್ದುದರಿಂದ ಅವನ ಮಾತುಗಳು ನಮಗೆ ಕೇಳಿಸುತ್ತಿರಲಿಲ್ಲ. ರಸ್ತೆಯಲ್ಲಿ ವಾಹನಗಳು ಒಂದರ ಹಿಂದೊಂದು ರಭಸವಾಗಿ ಶಬ್ಧ ಮಾಡುತ್ತಾ ನಮ್ಮನ್ನು ಅಣಕಿಸುತ್ತಾ ಸಾಗುತ್ತಿದ್ದವು. ಕಾರನ್ನು ತಳ್ಳುತ್ತಾ ರಸ್ತೆಯ ಬದಿಯಿದ್ದ ದೀಪದ ಕಂಬದ ಬಳಿಗೆ ತಂದು ನಿಲ್ಲಿಸಿದೆವು. ಹೈವೇಯಲ್ಲಿ ಓಡಾಡುತ್ತಿದ್ದ ಇತರೆ ವಾಹನಗಳಿಂದ ಪೆಟ್ರೋಲ್‌ ಪಡೆಯುವ ನಮ್ಮ ಪ್ರಯತ್ನ ಸಫಲವಾಗಲಿಲ್ಲ ಮತ್ತು ವೋರಾ ಹೇಳುತ್ತಿದ್ದ ‘ಈ ಸರಿ ರಾತ್ರಿಯಲ್ಲಿ ಈ ದಾರಿಯಾಗಿ ಗೆ ಖಂಡಿತಾ ಯಾವುದೇ ವಾಹನ ದೊರಕುವುದಿಲ್ಲ’. ಎಲ್ಲರೂ ಬಹಳಷ್ಟು ದಣಿದಿದ್ದರು ಹಾಗು ಹೆಚ್ಚಾಗಿ ಟೈಟ್‌ ಆಗಿದ್ದರು. ಹಾಗಾಗಿ ಗೆ ನಾಲಕ್ಕು ಕಿ.ಮೀ. ನಡೆಯುವ ಪ್ರಯತ್ನಕ್ಕಿಂತ ಎಲ್ಲರೂ ಆ ರಾತ್ರಿ ಕಾರ್ನಲ್ಲೇ ಕಳೆಯುವ ನಿರ್ಧಾರ ಮಾಡಿದೆವು. ಶಿವಕುಮಾರ ಸಹಾ ‘ಈ ರಾತ್ರಿ ಲಾಡ್ಜ್‌ಗೆ ಹೋಗಿ ಸೊಳ್ಳೆ ಕೈಯಲ್ಲಿ ಕಚ್ಚಿಸಿಕೊಳ್ಳುವುದಕ್ಕಿಂತ ಕಾರ್ನಲ್ಲೇ ಮಲಗೋಣ’ ಎಂದು ತಿಳಿಸಿದ.

ಕಾರ್ನ ಎಲ್ಲಾ ಬಾಗಿಲು ಜಡಿದು ಐದು ನಿಮಿಷ ಕಳೆಯುವುದರಲ್ಲಿ ಎಲ್ಲರಿಗೂ ಹಾಗೆ ಕುಳಿತಿದ್ದಂತೆ ಮಂಪರು ಹತ್ತತೊಡಗಿತು. ಸುಮಾರು ಸಮಯ ಕಳೆದಿತ್ತು. ಬಹುಶಃ ಅಷ್ಟರಲ್ಲಿ ನಮಗಾಗಿ ಲಾಡ್ಜ್‌ನಲ್ಲಿ ಕಾದು ಕಾದು ಬೇಸತ್ತಿದ್ದ ನಮ್ಮ ಸೊಳ್ಳೆ ಮಿತ್ರರು ನಮ್ಮನ್ನು ಅರಸುತ್ತಾ ಇಲ್ಲಿಗೂ ಬಂದವೆಂದು ಕಾಣುತ್ತೆ! ‘‘ಹಲ್ಕಾ ಸೂ.. ಮಕ್ಕಳಾ... ಇಲ್ಲಿಗೂ ಬಂದ್ರೇನೋ...’’ ಶಿವಕುಮಾರನ ಬಾಯಿ ಬೊಗಳ ತೊಡಗಿತ್ತು. ಹಾಗು ಸರದಿಯಂತೆ ಎಲ್ಲರ ಕೈಗಳು ಮೈಯ ಎಲ್ಲಾ ಭಾಗಕ್ಕೂ ಹೊಡೆಯಲನುವಾಗಿ ಪಟ ಪಟ ಶಬ್ಧ ದೇವಸ್ಥಾನದ ಜಾಗಟೆಯಂತೆ ಕೇಳತೊಡಗಿತು. ಐದು ನಿಮಿಷದಲ್ಲಿ ನಮಗೆ ಇನ್ನು ಕಾರ್ನಲ್ಲಿ ಕೂರಲು ಆಗುವುದಿಲ್ಲ ಎಂದು ತಿಳಿದು ಬಂತು. ಆಗ ಸಮಯ 4.45. ವೋರಾ ಹೇಳಿದ ‘ಹೇಗೂ ಬೆಳಗಾಗುತ್ತಿದೆ ಕೇವಲ 4 ಕಿ.ಮೀ. ಅಷ್ಟೆ. ಕಾರ್‌ ಇಲ್ಲೇ ಬಿಟ್ಟು ನಡೆದು ಹೋಗೋಣ. 6 ಘಂಟೆಯ ವೇಳೆಗೆ ಸೇರಿಬಿಡುತ್ತೇವೆ’ ಎಂದ.

ಮತ್ತೊಮ್ಮೆ ಸೊಳ್ಳೆಯನ್ನು ಶಪಿಸುತ್ತಾ ನಡೆಯಲಾಗದೆ ಕಾಲುಗಳನ್ನು ಎಳೆಯುತ್ತಾ ಗೆ ಬಂದು ಸೇರಿದೆವು. ಬಂದವರು ಎಲ್ಲಾ ಹಾಗೆಯೇ ಹಾಸಿಗೆಯ ಮೇಲೆ ಬಿದ್ದರು. ಬೆಳಗಿನ ಹೊತ್ತು ಸೊಳ್ಳೆ ಕಡಿಯುವುದು ನಿಲ್ಲುವುದರಿಂದ ಎಲ್ಲರೂ ಕೂಡಲೆ ಗಾಢ ನಿದ್ರೆಗೆ ಹೋದರು. ನಾನು ಕೆಲ ರಿಪೋರ್ಟ್‌ ಮಾಡಬೇಕಾದ್ದರಿಂದ ಸ್ನಾನ ಮಾಡಿ ಹಾಗೆಯೇ ಬರೆಯುತ್ತಾ ಕುಳಿತೆ. ಆ ಮಧ್ಯಾನ್ಹ 2 ಘಂಟೆಗೆ ನಾವು ರೈಲು ಹಿಡಿಯಬೇಕಾಗಿತ್ತು. ಮಿಕ್ಕವರೆಲ್ಲಾ ಹಾಗೆಯೇ ಮಲಗಿರಲಿ 12 ಘಂಟೆಗೆ ಎಬ್ಬಿಸಿದರಾಯಿತು ಎಂದು ಚಹಾ ಕುಡಿದು ರಿಪೋರ್ಟ್‌ಗೆ ವೋರಾನ ಸಹಿ ಪಡೆಯಲು ಗ್ಲಾಸ್‌ ಕಾರ್ಖಾನೆಗೆ 9 ಘಂಟೆಗೆ ತೆರಳಿದೆ.

ಸಹಿ ಪಡೆದ ನಂತರ ವೋರಾ ಹೇಳಿದ. ನೆನ್ನೆ ಕಾರ್‌ ನಿಲ್ಲಿಸಿದ ಜಾಗಕ್ಕೆ ಹೋಗಿ ಅದನ್ನು ತರಬೇಕು. ನೀನು ನನ್ನ ಜೊತೆಗೆ ಬಾ ಎಂದ. ಹೀರೋಹೊಂಡಾದಲ್ಲಿ ಕ್ಯಾನ್‌ ಒಂದರಲ್ಲಿ ತುಂಬಿಸಿದ್ದ ಪೆಟ್ರೋಲ್‌ ಹಿಡಿದು ನಾನು ಹಿಂಬದಿ ಕುಳಿತೆ. ದ ಕಿರು ರಸ್ತೆ ದಾಟಿ ಹೈವೆ ಅನತಿ ದೂರದಲ್ಲಿ ಕಾಣಿಸಿಕೊಳ್ಳತೊಡಗಿತು. ಕಾರ್‌ ನಿಲ್ಲಿಸಿದ ಜಾಗ ಹತ್ತಿರವಾಗುತ್ತಿದ್ದಂತೆ ಅಲ್ಲಿ ಬಹಳಷ್ಟು ಜನ ಗುಂಪು ಸೇರಿದ್ದು ಕಂಡು ಬಂತು. ಹತ್ತಿರ ಹೋದಾಗ ಟ್ರಾಫಿಕ್‌ ಪೋಲಿಸ್‌ನ ಜೀಪು ಕಣ್ಣಿಗೆ ಬಿತ್ತು. ಕಾರ್‌ ನಿಲ್ಲಿಸಿದ್ದ ಜಾಗದ ಬಳಿಯಿದ್ದ ಲೈಟ್‌ ಕಂಬ ನೆಲದಲ್ಲಿ ಕಡಿದುಕೊಂಡು ಬಿದ್ದಿತ್ತು. ನಮ್ಮ ಕಾರ್‌ ಕಾಣಿಸದಂತೆ ಆ ಜಾಗದಲ್ಲಿ ಭಾರಿಯಾದ ಟ್ರೇಲರ್‌ ಒಂದು ಮಾಲು ಸಮೇತ ಮಗುಚಿ ಬಿದ್ದಿರುವುದು ಕಾಣಿಸಿತು.

ಆಗ ನನಗೆ ಆ ಜಾಗದಲ್ಲಿ ರಾತ್ರಿ ನಾವೆಲ್ಲಾ ಕಾರ್ನಲ್ಲೇ ಉಳಿದಿದ್ದ ಪಕ್ಷದಲ್ಲಿ ಏನಾಗಬಹುದಾಗಿತ್ತು ಎಂಬ ಸೂಕ್ಷ್ಮ ತಲೆಗೆ ಹೊಳೆದು ಅರೆ ಕ್ಷಣ ಶಾಕ್‌ ಹೊಡೆದಂತಾಯ್ತು. ಕೂಡಲೆ ಎಚ್ಚೆತ್ತ ಮನಕ್ಕೆ ಮೊದಲು ಹೊಳೆದದ್ದು ಆ ರಾತ್ರಿ ನಮ್ಮನ್ನು ಕಚ್ಚಿ, ರಕ್ತ ಹೀರಿ, ಹಿಂಸಿಸಿ, ನೋಯಿಸಿಯೂ ಕಾಪಾಡಿದ್ದ ನಮ್ಮ ದ ಸೊಳ್ಳೆ ಮಿತ್ರರು.

ವೋರಾನ ಕಾರು ಟ್ರೇಲರ್‌ ಕೆಳಗೆ ನಜ್ಜು ಗುಜ್ಜಾಗಿತ್ತು. ಆಕ್ಸಿಡೆಂಟ್‌ ಬೆಳಗಿನ ಜಾವ ಸುಮಾರು 5 ಘಂಟೆಯ ಸಮಯದಲ್ಲಾಗಿತ್ತಂತೆ. ವೋರಾ ಕಾರ್‌ ಸಲುವಾಗಿ ಪೋಲಿಸರಿಗೆ ಮಾಹಿತಿ ನೀಡಲು ಅಲ್ಲೇ ಉಳಿದುಕೊಂಡ. ನಾನು ರೈಲು ಹಿಡಿಯಬೇಕಾದ್ದರಿಂದ ಗೆ ಹಿಂದಿರುಗಿ ಶಿವಕುಮಾರ, ಹರಿಭಾಸ್ಕರ ಮತ್ತು ಜಯಶಂಕರನನ್ನು ಎಬ್ಬಿಸಿ ಎಲ್ಲವನ್ನೂ ವಿವರಿಸಿದೆ.

ರೈಲು ಹೊರಟಿತು. ವೇಗ ಹೆಚ್ಚಿಸಿಕೊಳ್ಳುತ್ತಾ ಮುಂದೆ ಹೋಗುತ್ತಿದ್ದಂತೆ. ಸ್ಟೇಷನ್‌ನಲ್ಲಿದ್ದ ಫಲಕ ಕಿರಿದಾಗತೊಡಗಿತು. ಸೊಳ್ಳೆಗಳ ಬಗೆಗಿನ ಒಲವು ಹಿರಿದಾಗತೊಡಗಿತು.

ಶಿವಕುಮಾರ ಹೇಳುತ್ತಿದ್ದ ‘ಏನೇ ಹೇಳೋ ಈ ಹಾಳೂರಿಗೆ ಮತ್ತೆ ಬರಬಾರದು. ದರಿದ್ರ ಸೊಳ್ಳೆ ಮುಂಡೇವು’.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X