• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

..ಹೀಗೇ ಒಂತರಾ ಪ್ರೇಮಕಥೆ

By Staff
|

ವಸಂತ, ವಿಜಯಾಂತ ಇಬ್ಬರಿದ್ದರು.

ಈಗ ಕಳೆದ ಎರಡು ವರ್ಷಗಳಿಂದ ಇಬ್ಬರಿಗೂ ಪರಿಚಯ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೆಲ್ಲಿಂದಲೋ ಬಂದು ಈಗ ಇಲ್ಲಿ ‘ಸೆಟಲ್‌’ ಆಗಿದ್ದಕ್ಕೆ ತಮ್ಮ ಅದೃಷ್ಟವನ್ನು ಬಯ್ದುಕೊಳ್ಳುತ್ತಾ ಒಬ್ಬರನ್ನೊಬ್ಬರು ಪರಿಚಯಮಾಡಿಕೊಂಡಿದ್ದರು.

ವಸಂತಗೆ ಅಡಿಗೆಯೆಂದರೆ ಇಷ್ಟ. ಗೋಬಿ ಮಂಚೂರಿ, ಪಾಲಕ್‌ ಪನೀರ್‌, ಜೋಳದ ರೊಟ್ಟಿ, ಝುಣಕ, ಪೀಟ್ಜಾ, ಪಾಸ್ತಾ, ಲಸಾನಿಯ, ಕಂಗ್‌ಪಾವ್‌ ಚಿಕನ್‌ ಇತ್ಯಾದಿ ಇತ್ಯಾದಿ.... ಹೆಸರಿಲ್ಲದ ದೇಶದ ಅಡಿಗೆಗಳನ್ನೂ ಮಾಡುತ್ತಿದ್ದರು. ಹಳೆಯಕಾಲದವರ ಹಾಗೆ ಮನೆಯಲ್ಲಿ ಒಂದು ಈಳಿಗೆ ಮಣೆಯನ್ನು ಇಟ್ಟುಕೊಂಡಿದ್ದರು. ಸಾಯಂಕಾಲ ಟೆನಿಸ್‌ ಆಡುತ್ತಿದ್ದರು. ಟೀವಿಯಲ್ಲಿ ಬರುವ ಎಲ್ಲ ಆಟಗಳನ್ನು ಹಾಗೂ ಗೃಹಾಲಂಕಾರದ ಕಾರ್ಯಕ್ರಮಗಳನ್ನೂ ಒಂದೇ ಆಸ್ಥೆಯಿಂದ ನೋಡುತ್ತಿದ್ದರು.

ವಿಜಯಗೆ ಲಲಿತಕಲೆಗಳ ಮೇಲೆ ಆಸಕ್ತಿ. ಒಂದು ರಾತ್ರಿ ಯಾವುದೋ ‘ಮ್ಯೂಸಿಕಲ್‌’ಗೆ ಅಂತ ಹೋದರೆ, ಇನ್ನೊಂದು ರಾತ್ರಿ ಯಾವುದೋ ನಾಟಕಕ್ಕೆ ಹೋಗುತ್ತಿದ್ದರು. ಸಿಕ್ಕಸಿಕ್ಕ ಪೇಂಟಿಂಗ್‌ಗಳನ್ನೆಲ್ಲಾ ಕೊಂಡುಕೊಳ್ಳುತ್ತಿದ್ದರು. ಮನೆಯ ನೆಲಮಾಳಿಗೆಯಲ್ಲಿ ಎಲ್ಲಾ ತರದ ಪುಸ್ತಕಗಳೂ ಇದ್ದವು.

ವಿಜಯ ‘ವಜೈನ ಮಾನೊಲಾಗ್‌’ ಗೆ ಹೋಗುವುದ ನೋಡಿ ವಸಂತಂಗೆ ಆಶ್ಚರ್ಯ. ವಸಂತ ಅಡಿಗೆಗೆ ‘ಮೈಕ್ರೋವೇವ್‌’ ಅನ್ನು ಒಮ್ಮೆಯೂ ಬಳಸದಿರುವುದರ ಬಗ್ಗೆ ವಿಜಯಗೆ ಸೋಜಿಗ.

ಇಬ್ಬರ ಪರಿಚಯವೂ ಆದದ್ದು ಒಂದು ಅಡಿಗೆಯ ಶೋನಲ್ಲಿ. ಅದೊಂತರ ಸಮಕಾಲೀನ ನೃತ್ಯವಂತೆ. ನೃತ್ಯದ ಜತೆಜತೆಗೇ ಯಾವುದೋ ‘ಸಮುದ್ರಜೀವಿ’ಗಳನ್ನೂ ಬೇಯಿಸುವುದು. ನೃತ್ಯ ಮುಗಿಯುವಷ್ಟರಲ್ಲಿ ಅಡಿಗೆಯೂ ಸಿದ್ಧ.

ನಡುವಿನ ಬಿಡುವಿನಲ್ಲಿ ವಸಂತ ಅಡಿಗೆಯ ಪುಸ್ತಕ ತೆಗೆದುಕೊಳ್ಳಲು ಬಂದಿದ್ದರು. ವಿಜಯ ವಸಂತರನ್ನು ಭೇಟಿಯಾಗಿದ್ದರು.

.... ಪರಿಚಯ ಹೀಗೇ ಬೆಳೆಯುತ್ತಾ ಹೋಯಿತು.

ಆದರೆ, ಒಂದು ಎಡವಟ್ಟಿತ್ತು.

ಇಬ್ಬರಿಗೂ ಉದ್ದುದ್ದ ಕೂದಲಿತ್ತು. ವಸಂತ ಮೂಗನ್ನು ಚುಚ್ಚಿಕೊಂಡಿದ್ದರೆ, ವಿಜಯ ಕಿವಿ ಚುಚ್ಚಿಕೊಂಡಿದ್ದರು. ಅವರಿಗೆ ಇವರ ಗಂಟಲು ಕೀರಲೆನಿಸಿದರೆ, ಇವರಿಗೆ ಅವರ ಗಂಟಲು ಗಡಸೆನ್ನಿಸುತ್ತಿತ್ತು. ಇವರಿಗೆ ಅವರದು ಸ್ವಲ್ಪ ಮಟ್ಟಸವಾದ ಎದೆ ಅನ್ನಿಸಿದ್ದರೆ, ಅವರಿಗೆ ಇವರದು ಸ್ವಲ್ಪ ಸಣ್ಣ ನಡು ಅನ್ನಿಸಿತ್ತು. ಇಬ್ಬರೂ ಒಬ್ಬರನ್ನೊಬ್ಬರನ್ನು ಮೇಲೆ, ಕೆಳಗೆ ಕದ್ದು ನೋಡಿ ‘ಛೆ! ಸ್ವಲ್ಪ ದಪ್ಪ ’ ಅಂದುಕೊಂಡಿದ್ದರು.

ಏನು ಇಷ್ಟಪಡಲಿ, ಪಡದಿರಲಿ, ಇಬ್ಬರಿಗೂ ಒಂದು ವಿಷಯ ಮನದಟ್ಟಾಗಿರಲಿಲ್ಲ. ವಸಂತಗೆ ವಿಜಯ, ವಿಜಯಕುಮಾರನೋ ಅಥವಾ ಕುಮಾರಿಯೋ ಗೊತ್ತಿರಲಿಲ್ಲ. ವಿಜಯಗೆ ವಸಂತ, ವಸಂತಕುಮಾರನೋ ವಸಂತಕುಮಾರಿಯೋ ಗೊತ್ತಿರಲಿಲ್ಲ.

ಅಡಿಗೆ ಮಾಡ್ತಾರೆ, ಟೀವಿ ನೋಡ್ತಾರೆ, ಸ್ಪೋರ್ಟ್ಸ್‌ ಕಾರ್‌ ಬೇಕು, ಹೆಂಗಸರ ಶೋಗಳಿಗೆ ಹೋಗ್ತಾರೆ, ಪೇಂಟಿಂಗ್ಸ್‌ ಕಲೆಕ್ಟ್‌ ಮಾಡ್ತಾರೆ, ಸಮುದ್ರದ ಹಸಿರು ಅವರಿಗಿಷ್ಟವಾದ ಬಣ್ಣವಾದರೆ, ಮೋಟಾರ್‌ಬೈಕು ಇವರಿಗಿಷ್ಟ. ಪೀಟ್ಜಾ ಇಷ್ಟಾಂತ ತಿಳಿದು ಪರವಾಗಿಲ್ಲ ಗೊತ್ತಾಯ್ತು ಅನ್ನುವ ಹೊತ್ತಿಗೆ ಡಯಟ್‌ ಕೋಕ್‌ ಕುಡಿಯುತ್ತಿರುತ್ತಾರೆ. ಸುಂದರವಾದ ಸಂಜೆಯಲ್ಲಿ ಒಳ್ಳೆಯ ಸಂಗೀತ ಕೇಳುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಡರ್ರಂತ ತೇಗಿಬಿಡುತ್ತಾರೆ. ಛೇ ! ಯಾವುದೂ ‘ಎಕ್ಸ್‌ಕ್ಲ್ಯೂಸಿವ್‌’ ಗುಣಗಳಿಲ್ಲವಲ್ಲ, ಗುರುತಿಸೋಕೆ ಅಂದು ಇಬ್ಬರೂ ಒಬ್ಬೊಬ್ಬರೇ ಇದ್ದಾಗ ಬೇಜಾರು ಮಾಡಿಕೊಂಡರು.

ಆದರೆ, ಈ ಪರಿಚಯ ಅನ್ನೋ ಸಂಬಂಧವನ್ನು ಇನ್ನೂ ಮುಂದುವರಿಸುವುದಕ್ಕೆ ಇದೊಂದು ಯಾಕೆ ತೊಡಕಾಗಬೇಕು ಅಂತ ಇಬ್ಬರಿಗೂ ಅರ್ಥವಾಗಲಿಲ್ಲ. ಆದರೆ, ಹಾಗೆ ಕೇಳೋದು ಹೇಗೆ ? ಅಕಸ್ಮಾತ್‌ ‘ಲೈಂಗಿಕ ಕಿರುಕುಳ’ ಅಂತ ಕೋರ್ಟಿಗೆ ಹೋದರೆ?

ಆದರೆ, ಇದು ಬರೀ ಟೆನಿಸ್‌ ಆಟದಲ್ಲಿ , ಕೊಬ್ಬಿಲ್ಲದ ಕೆಪೋಚಿನೋ ಮತ್ತು ನಿಂಬೆರಸಗಳ ವಿನಿಮಯದಲ್ಲಿ ನಿಂತು ಹೋಗುವುದಕ್ಕೆ ಇಬ್ಬರಿಗೂ ಇಷ್ಟವಿರಲಿಲ್ಲ. ಡೇಟನ್ನೋ ನಿಜವಾದ ಡೇಟಿಗೆ ಕರೆಯುವುದಕ್ಕೆ ಇಬ್ಬರಿಗೂ ಅಂಜಿಕೆ. ಇಬ್ಬರಿಗೂ ಪರಸ್ಪರರ ಮೇಲೆ- ಛೆ ಅವರು ಹಾಗುಂಟೆ? ಛೇ ಹಾಗಿರಲಾರದು ಅನ್ನೋ ಅನುಮಾನ, ನಂಬಿಕೆ. ಅನುಮಾನಗಳು ಅನುಮಾನಗಳಾಗೇ ಉಳಿದರೆ?

ಆದರೆ, ಎಲ್ಲಿಯವರೆಗೆ?

ಏನೂ ಪರವಾಗಿಲ್ಲ... ಕೊನೆಯವರೆಗೂ

ಆದ್ರೆ ಹೇಗೆ?

ಏನಾದರೂ ಅಗಲಿ ಅಂತ ವಸಂತ, ವಿಜಯರನ್ನು ಒಮ್ಮೆ ಕೇಳಿದ್ದರು. ‘ನಿಮಗೆ ಮಕ್ಕಳೆಂದರೆ ಇಷ್ಟಾನಾ?’

‘ತುಂಬಾ ಇಷ್ಟ’

‘ಹಾಗಾದ್ರೆ, ಮುಂದಾನೊಂದು ಕಾಲದಲ್ಲಿ ನೀವು ತುಂಬಾ ಮಕ್ಕಳು ಮಾಡ್ಕೋತೀರ’

‘ಅಯ್ಯೋ, ಇಲ್ಲಪ್ಪ, ಮಕ್ಕಳಾಗೋ ಮುಂಚೆ ಮತ್ತು ಅವುಗಳು ದೊಡ್ಡವರಾಗ್ತಾ ಆಗ್ತಾ ಇರೋವಾಗ ಆಗೋ ತಾಪತ್ರಯಾನ ಯಾರನುಭವಿಸ್ತಾರೆ. ಅದೂ ಈಗಿನ ಕಾಲದ ಹದಿವಯಸ್ಸಿನ ಹುಡುಗರ ಚೇಷ್ಟೆಗಳನ್ನು ನೋಡಿದರೆ ಏನೂ ಬೇಡಾಂತ ಅನ್ನಿಸ್ತದೆ. ಯಾವನ್ನಾದರೂ ದತ್ತು ತಗೊಂಡು ಬೆಳೆಸೋದು. ಹದಿನಾರರ ಸುಮಾರಿಗೆ ಯಾವುದಾದರೂ ಬೋರ್ಡಿಂಗ್‌ ಸ್ಕೂಲಿಗೆ ಬಿಡೋದು’ ಅಂದರು.

ವಸಂತಗೆ ಸ್ವಲ್ಪ ಗೊಂದಲವಾಯಿತು. ಮಕ್ಕಳಾಗೋದೇನು ಕಷ್ಟ ಈಗ? ಯಾವುದಾದರೂ ಬ್ಯಾಂಕಿಂದ ಅತಿ ಬಲಶಾಲಿ ‘ಸೆಲ್‌’ ಅನ್ನು ಅತಿ ಸುಂದರಿಯ ‘ಸೆಲ್‌’ ಗೆ ಸೇರಿಸಿ ಇನ್ನೊಬ್ಬ ಮಹಾತಾಯಿಯ ಹೊಟ್ಟೆಯಲ್ಲಿ ಬೆಳೆಸಿ ಕೊನೆಗೆ ಎಲ್ಲಾ ಖರ್ಚು ಜಮಾ ಮಾಡಿದರೆ ಮುಗಿಯಿತು. ಹುಟ್ಟೋ ಮಗೂಗೆ ಕನ್ಫ್ಯೂಸ್‌ ಆಗೋ ಅಷ್ಟು ಅಪ್ಪ, ಅಮ್ಮಂದಿರಿರಬಹುದಾದ ಈ ಕಾಲದಲ್ಲಿ. ಅದಕ್ಕಾ ್ಯಕೆ ಹೆದರ್ತಾರೆ, ಈ ವಿಜಯ. ಸ್ವಲ್ಪ ಪೇಪರ್‌ವರ್ಕ್‌ ಜಾಸ್ತಿ, ಅಷ್ಟೆ.

... ಇಲ್ಲ, ಇದನ್ನು ಹೀಗೇ ಬಿಡಬಾರದು.

ವಸಂತಗೆ ಜಾಸ್ತಿ ಯೋಚನೆ ಮಾಡದೆ ಒಂದು ನಿರ್ಧಾರಕ್ಕೆ ಬರಬೇಕೆಂದೆನಿಸಿತು. ಅವರಿರೋ ದೇಶದಲ್ಲಿ ತೀರಾ ಜಾಸ್ತಿ ಯೋಚನೆ ಮಾಡದೇ ಮಾಡಬಹುದಾದ ಕೆಲಸವೆಂದರೆ, ಮದುವೆ. ಮತ್ತೆ ಹಾಗೆ ಧಿಡೀರಂತ ಮದುವೆ ಮಾಡಿಕೊಂಡರೆ, ಅದು ರೊಮ್ಯಾಂಟಿಕ್‌ ಕೂಡ. ವಾರಾಂತ್ಯದ ತಿರುಗಾಟಗಳಲ್ಲೇ ಮದುವೆಯಾದೋರನ್ನೆಲ್ಲಾ ಅವರು ಕಂಡಿದ್ದರು.

ಇಬ್ಬರಿಗೂ ಪರಸ್ಪರರು ಕುಮಾರನೋ ಕುಮಾರಿಯೋ ಅನ್ನುವುದು ಗೊತ್ತಿಲ್ಲವಾದರೆ ಆಗಬಹುದಾದ ತೊಂದರೆಗಳನ್ನು..... ತಪ್ಪು, ತೊಂದರೆಗಳನ್ನುವ ಹಾಗಿಲ್ಲ, ಇಶ್ಯೂಗಳನ್ನು ಯೋಚಿಸಿದರು, ವಿಜಯ. ಡ್ಯಾನ್ಸಲ್ಲಿ ‘ಲೀಡ್‌’ ಮಾಡೋದು ಯಾರು? ಅದಕ್ಕೇನು ಕಷ್ಟ. ಲೀಡ್‌ ಮಾಡಬೇಕಾದ ಡ್ಯಾನ್ಸಿಗೇ ಹೋಗದಿದ್ದರಾಯಿತು.

ಮತ್ತೆ ಎಲ್ಲಾ ಸರಕಾರಿ ಹಾಗೂ ಖಾಸಗೀ ಅರ್ಜಿಗಳಲ್ಲೂ ಸಂಗಾತಿಯ ಹೆಸರೇನೆಂದು ಕೇಳುತ್ತಾರೇ ಹೊರತು ಗಂಡ ಅಥವಾ ಹೆಂಡತಿ ಯಾರಂತ ಯಾರೂ ಕೇಳುವುದಿಲ್ಲ. ಸಾಯೋ ಸಮಯಕ್ಕೆ ವಿಲ್‌ನಲ್ಲಿ ಆಸ್ತಿಯ ಹಕ್ಕನ್ನು ಇಬ್ಬರೂ ಒಬ್ಬರಿಗೊಬ್ಬರಿಗೆ ಬರೆದರೆ ಆಯಿತು. ಇಬ್ಬರಿಗೂ ಪರಸ್ಪರರನ್ನು ಅವಲಂಬಿಸಬೇಕಾದ ಅವಶ್ಯಕತೆಯೇನಿಲ್ಲ. ಇನ್ನು ಮಕ್ಕಳ ವಿಷಯ ಮುಂಚೆಯೇ ಸರಿಪಡಿಸಿಕೊಂಡಿದ್ದಾರೆ.

... ಆದರೆ, ಈ ಸಾಂಗತ್ಯ ಬರೀ ಮನಸ್ಸಿಗೆ ಮಾತ್ರ ಸಾಕೇ? ದೇಹಕ್ಕೆ? ಒಬ್ಬರು ಕುಮಾರ, ಇನ್ನೊಬ್ಬರು ಕುಮಾರಿ ಆದರೆ ಸರಿ, ಇಬ್ಬರೂ ಕುಮಾರರಾದರೆ ಅಥವಾ ಇಬ್ಬರೂ ಕುಮಾರಿಯರಾದರೆ?

ಅದೇನು ತೊಂದರೆ? ಅದೇ ಅಲ್ವಾ ಈಗಿನ ತಾಜಾ ಸುದ್ದಿ. ಅಕಸ್ಮಾತ್‌ ಇಬ್ಬರೂ ಒಂದೇ ತಂಡದವರಾದರೆ ಸ್ವಲ್ಪ ದಿನ ಅನುಸರಿಸಿಕೊಳ್ಳೋಕೆ ಪ್ರಯತ್ನಿಸೋದು. ಸರಿಹೋಗಲಿಲ್ಲಾಂದರೆ, ಈ ಡಾಕ್ಟರುಗಳು ಬೇಕಾದರೆ ಕುಮಾರನ್ನ ಕುಮಾರಿ ಮಾಡ್ತಾರೆ, ಕುಮಾರೀನ ಕುಮಾರ ಮಾಡ್ತಾರೆ.

ಲಾಸ್ಟ್‌ನೇಮ್‌ ಮುಂದಿನ ಸಂತತೀಗೆ ಹೋಗೋದು ಹೇಗೆ? ತಾಪತ್ರಯಾನೇ ಬೇಡ. ಮುಂದೆ ಯಾರ್ಯಾರು ಏನೇನು ಅಂತ ಗೊತ್ತಾದಾಗ ಹೋಗಿ ಬ್ಯಾಂಕಲ್ಲಿ ಜಮಾ ಮಾಡಿ ಬರೋದು. ಒಂದಲ್ಲ ಒಂದು ಕಡೆ ಅದು ಉಪಯೋಗಿಸಲ್ಪಟ್ಟೇ ಪಡುತ್ತದೆ. ಸಂತತಿ ಮುಂದುವರಿಯುತ್ತದೆ ಅನ್ನುವುದಕ್ಕೆ ಏನೂ ಅನುಮಾನವಿಲ್ಲ.

ತಾವಂದುಕೊಂಡಷ್ಟು ಕಷ್ಟವೇನಲ್ಲ, ಅನ್ನಿಸಿತು.

ಅದೂ ಅಲ್ಲದೆ, ಎಲ್ಲರೂ ತಮ್ಮ ಹಾಗೇ ಯೋಚಿಸಿದರೆ, ಈ ಇಸಮ್ಮುಗಳು, ಹರಾಸ್‌ಮೆಂಟುಗಳು ಇರುವುದೇ ಇಲ್ಲ.

‘ಸರಿ, ಮದುವೆ ಆಗೇಬಿಡೋಣ’ ಅಂದರು, ವಿಜಯ.

‘ಎಲ್ಲಿ’ ಅಂತ ಇಬ್ಬರೂ ಒಟ್ಟಿಗೇ ಕೇಳಿಕೊಂಡರು.

ಉತ್ತರವನ್ನೂ ಒಟ್ಟಿಗೇ ಹೇಳಿದರು ‘ಸ್ಯಾನ್‌ಫ್ರಾನ್ಸಿಸ್ಕೋ’ ಅಂತ.

ಇಬ್ಬರೂ ಒಬ್ಬರನ್ನೊಬ್ಬರು ಜಿಗುಟಿಕೊಂಡು ‘ಜಿಂಕ್ಸ್‌’ ಅಂದರು.

ಜಾರ್ಜ್‌ ಬುಶ್‌ ಅತ್ತಿದ್ದ. ಜಾನ್‌ ಕೆರಿ ನಕ್ಕನೋ ಇಲ್ಲವೋ ಅಂತ ಅವನ ಮುಖ ನೋಡಿ ಹೇಳೋದು ಕಷ್ಟ ಆಗಿತ್ತು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more