• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಯಂವರ

By Staff
|

‘ಕಣ್ಣಾಮುಚ್ಚೆ ಕಾಡೆಗೂಡೆ

ಉದ್ದಿನ ಮೂಡೆ ಉರುಳೇ ಹೋಯ್ತು

ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ

ನಿಮ್ಮಯ ಹಕ್ಕಿ ಮುಚ್ಚಿಕೊಳ್ಳಿ’

‘ಎಲ್ಲರೂ ಬಚ್ಚಿಟ್ಟುಕೊಂಡ್ರಾ?’ ಮುದುಕಪ್ಪ ಕೂಗು ಹಾಕುವುದಕ್ಕೂ ಅವಿತುಕೊಂಡಿದ್ದ ಕಳ್ಳಹಕ್ಕಿಗಳು ‘ಜೂಟ್‌’ ಅನ್ನುವುದಕ್ಕೂ ಸರಿಹೋಗಿ, ಒಮ್ಮೆಗೇ ಗಲಗಲ ಗದ್ದಲವೆಲ್ಲ ಬಯಲಲ್ಲಿ ಅಡಗಿತು.

ಕಳ್ಳಹಕ್ಕಿಗಳ ಪತ್ತೆಯೇ ಇಲ್ಲ . ಮುದುಕಪ್ಪನತ್ತ ಒಂದು ಕಣ್ಣಿಟ್ಟ ಪಿಳಿಪಿಳಿ ಕಣ್ಣುಗಳ ಚೂಟಿ ಹುಡುಗಿ ಹತ್ತಾರು ಹೆಜ್ಜೆ ದೂರದ ಅಡಗುತಾಣಗಳ ಜಾಲಾಡಿ ಪೆಚ್ಚಾದಳು. ಕೊನೆಗೆ ಬಸವಣ್ಣನ ಗುಡಿಯ ಮೋಟು ಗೋಡೆ ಮರೆಯಲ್ಲಿ ಹಕ್ಕಿಯ ವಾಸನೆ ಹಿಡಿದ ಹುಡುಗಿ ಅತ್ತ ಹಾರುಹೆಜ್ಜೆಯಲ್ಲಿ ನಡೆಯುವಾಗ-

ಚಿಗರೆಯಂಥ ಹುಡುಗ ಯಾವ ಮಾಯೆಯಲ್ಲಿ ಹೊರಬಿದ್ದನೋ ‘ಮುದುಕಪ್ಪನ ಮುಟ್ಟಿದೆ’ ಎಂದು ಕೂಗಿದ. ಅವಿತುಕೊಂಡಿದ್ದ ಹಕ್ಕಿಗಳೆಲ್ಲ ಹೊರಬಿದ್ದು ಕುಣಿಯತೊಡಗಿದವು. ಮತ್ತೆ ಕಣ್ಣು ಮುಚ್ಚಿಕೊಳ್ಳಬೇಕಾದ ಅವಮಾನದಲ್ಲಿ ಹುಡುಗಿ ಕಣ್ಣು ತುಂಬ ನೀರು ತುಂಬಿಕೊಂಡಳು. ಅದೇ ಹೊತ್ತಿಗೆ ಕೇಳಿಸಿತು ಟಾಂ ಟಾಂ ಟಾಂ, ಕಿವಿಗಡಚಿಕ್ಕುವ ಸದ್ದು.

‘ಕೇಳ್ರಪ್ಪೋ ಕೇಳ್ರಿ

ಚಿಕ್ಕೋರು ದೊಡ್ಡೋರು ಮುದುಕರು

ಎಲ್ಲರೂನು ಕಿವಿಕೊಟ್ಟು ಕೇಳ್ರಿ

ಮೇಲೆ ಕೇಳಲೇ ಇಲ್ಲ ಅಂದೀರಿ

ನಾನು ಸಾರಲೇ ಇಲ್ಲ ಅಂದೀರಿ..’

ಚಾರನ ಕೂಗಾಟದ ಕಂಠ ಕೇಳಿಸುತ್ತಲೇ ಕೆಲಸ ಬೊಗಸೆ ಬಿಟ್ಟು ಹೆಂಗಸರು ಬಾಗಿಲಿಗೆ ಬಂದರೆ, ಗಂಡಸರು ಬಯಲಿಗೆ ಬಂದರು. ಆಟ ಮರೆತ ಮಕ್ಕಳು ಚಾರನ ಸುತ್ತ ಗುಂಪಾದರು. ನಿಂತಲ್ಲೇ ಎಡಕ್ಕೂ ಬಲಕ್ಕೂ ಓಲಾಡುತ ತಮಟೆಯ ಟಮ ಟಮಗುಟ್ಟಿಸಿದ ಚಾರ, ಕಿವಿಗಳೆಲ್ಲ ತನ್ನತ್ತಲೇ ನೆಟ್ಟಿರುವುದನ್ನು ಗಮನಿಸಿ ತಾರಕ ಸ್ವರದಲ್ಲಿ ಸಾರತೊಡಗಿದ.

‘ಕೇಳ್ರಪ್ಪೋ ಕೇಳ್ರಿ

ಚಿಕ್ಕೋರು ದೊಡ್ಡೋರು ಮುದುಕರು

ಎಲ್ಲರೂನು ಕಿವಿಕೊಟ್ಟು ಕೇಳ್ರಿ

ಬರೋ ಆಯಿತವಾರ ಮುಂಜಾನೆ

ನಾಡಿಗೊಬ್ಬ ದೊರೆಯನ್ನ ಪಟ್ಟದಾನೆ

ದೊರೆಮನೆ ಮೈದಾನದಾಗೆ

ನೆರೆಯೋ ದಾಗೆ

ಮಾಲೆ ತೊಡಿಸಿ ಆರಿಸುತ್ತೆ

ಬೆನ್ನ ಮೇಲೆ ಮೆರೆಸುತ್ತೆ

ನೀವೆಲ್ಲ ಅವಾಗ ಅಲ್ಲಿರಬೇಕು

ಹೊಸ ದೊರೆಗೆ ಜೈಕಾರ ಕೂಗಬೇಕು

ಅಂತ ಪ್ರಧಾನಿ ಹೊರಡಿಸವುರೆ ಫರ್ಮಾನು

ಇದನು ನೆನಪಿಡಿ ಎಲ್ಲರೂನು’

ಚಾರ ಹೇಳಿದ ಪ್ರತಿ ಶಬುದವನ್ನೂ ಮನಸು ಕೊಟ್ಟು ಕೇಳಿದ ಮಕ್ಕಳು ದೊಡ್ಡೋರು ಮುದುಕರು ಮತ್ತೆ ತಂತಮ್ಮ ಕೆಲಸ ಬೊಗಸೆಗಳಿಗೆ ವಾಪಸ್ಸಾದರು. ಆ ಹೊತ್ತಿಗೆ ಪುಳ್ಳೆ ಪುರಳೆಗಳ ಒಟ್ಟುಗೂಡಿಸಿ ಬೆಂಕಿ ಮಾಡಿದ ಚಾರ ತಮಟೆಯ ಕಾಯಿಸಿ, ಹದ ಮಾಡತೊಡಗಿದ. ಟಮ ಟಮ ಟಮ್ಮಂತ ತಮಟೆಯ ಹೊಡೆಯುತ್ತ ಚಾರ ನಿಂತಲ್ಲೆ ಓಲಾಡುತ್ತಿದ್ದರೆ, ಮಕ್ಕಳು ಕುಣಿಯತೊಡಗಿದವು.

‘ಕೇಳ್ರಪ್ಪೋ ಕೇಳ್ರಿ..’ ಉರುಹೊಡೆದಿದ್ದ ಡೈಲಾಗನ್ನೇ ಮತ್ತೆ ತಮಟೆಯ ಸದ್ದಿನೊಂದಿಗೆ ಸಾರುತ್ತಾ ಹೊರಟ ಚಾರನನ್ನು ಕೆಲವು ಮಕ್ಕಳು ಹಿಂಬಾಲಿಸಿದರೆ, ಉಳಿದವರು ಮುದುಕಪ್ಪನ ಬೆನ್ನು ಬಿದ್ದರು. ಯಥಾ ಪ್ರಕಾರ ಮುದುಕಪ್ಪನ ದಂಡು ಊರುಮುಂದಲ ಕಟ್ಟೆಯ ಮೇಲೆ ಸಭೆ ಸೇರಿತು.

‘ಮುದುಕಪ್ಪ , ಮುದುಕಪ್ಪ ಅಂದ್ರೇನು ?’ ಪಿಳಿಪಿಳಿ ಕಣ್ಣುಗಳ ಚೂಟಿ ಹುಡುಗಿ ಪ್ರಶ್ನೆಗೆ ಶುರು ಹಚ್ಚಿಕೊಂಡಳು.

‘ ಅಂದ್ರೆ ಮದುವೆ ಕಣ ಮಗ’

‘ಮದುವೇನಾ ! ಅಂಗಾದ್ರೆ ಗಂಡ್ಯಾರು, ಹೆಣ್ಣ್ಯಾರು?’ ಇನ್ನೊಂದು ದನಿ.

‘ಇದು ಹೆಣ್ಣು ಗಂಡು ಜೋಡಿಯಾಗೊ ಮಾಮೂಲಿ ಮದುವೆ ಅಲ್ಲ ಕಣ ಮಗ. ರಾಜ್ಯಲಕ್ಷ್ಮಿ ಜೊತೆ ದೊರೆಯ ಮಹಾಮದುವೆಯಿದು, ಲಕ್ಷ್ಮಿ ನಾರಾಯಣರ ಕಲ್ಯಾಣ’.

ಮುದುಕಪ್ಪ ಹೇಳಿದ್ದು ಮಕ್ಕಳ ತಲೆಗೆ ಹತ್ತಲಿಲ್ಲ . ಮುಖಗಳ ನೋಡುತ ಕೂತ ಮಕ್ಕಳ ಸಮಾಧಾನಿಸುವವನಂತೆ ಮುದುಕಪ್ಪ ಮಹಾ ಮದುವೆಯ ಕಥೆಯನ್ನು ಹೇಳತೊಡಗಿದ.

‘ದೊರೆ ಅಂದ್ರೆ ಈ ನಾಡಿಗೆಲ್ಲ ಒಡೆಯ. ನಾಡು ಲಕ್ಷ್ಮವ್ವನ ಸ್ವರೂಪ ಅಂತಲೂ, ದೊರೆ ಲಕ್ಷ್ಮಿ ನಾರಾಯಣ ಅಂತಲೂ ನಂತಾತ ಹೇಳ್ತಿದ್ದ. ಅಂಥ ನಮ್ಮೂರ ದೊರೆಯೀಗ ಸ್ವರ್ಗಸ್ಥನಾಗಿದಾನೆ. ಆದರೆ, ದೊರೆ ಕುರ್ಚಿ ಖಾಲಿ ಬೀಳಂಗಿಲ್ಲ . ಒಂದಾನೊಂದು ಕಾಲದಾಗೆ ದೊರೆ ಮಕ್ಕಳೇ ದೊರೆಗಳಾಗುತ ಇದ್ದರು. ಇವಾಗಿನ ಕಾಲವೇ ಬೇರೆ. ದೈವ ಸ್ವರೂಪ ಅಂತ ಭಾವಿಸಿರೋ ಪಟ್ಟದಾನೆ ಯಾರನ್ನು ಮೆಚ್ಚಿ , ಅವರ ಕೊರಳಿಗೆ ಹಾರ ಹಾಕ್ತದೋ ಅವರು ದೊರೆಯಾಗ್ತಾರೆ. ಪಟ್ಟದಾನೆ ಮಾಲೆ ತೊಡಿಸಿ ರಾಜನ್ನ ಮೆರೆಸೋ ಕಾರ್ಯಕ್ರಮವೇ , ಮಹಾಮದುವೆ. ಅಂಥ ಮಹಾಮದುವೆ ಆಯಿತವಾರದ ವತ್ತಾರೆ ನಡೀತದೆ. ಮೊದಲಿಗೆಲ್ಲ ಇಪ್ಪತ್ತು ವರ್ಷಕೋ ಎಪ್ಪತ್ತು ವರ್ಷಕೋ ಒಂದು ಬಾರಿ ನಡೀತಿತ್ತು . ಕಲಿಗಾಲ ಬಂತು ನೋಡು, ಗಳು ನಡೀತಾನೆ ಇರ್ತಾವೆ. ನಮ್ಮಜ್ಜ ತನ್ನ ಜೀವನದಾಗೆ ಒಂದು ಕಂಡಿದ್ದ . ಅಪ್ಪ ನಾಲ್ಕು ದಾಗೆ ಉಂಡಿದ್ದನಂತೆ. ಈ ಪಾಪಿ ಕಣ್ಣುಗಳು ನೋಡಿರೋದಕ್ಕಂತೂ ಲೆಕ್ಕಾನೆ ಇಲ್ಲ ’.

ಬಾಯಿ ಬಿಟ್ಟುಕೊಂಡು ಕಥೆ ಕೇಳುತ್ತಿದ್ದ ಮಕ್ಕಳನ್ನು ನೋಡಿ ‘ಏನು ಅರ್ಥವಾಯ್ತೋ’ ಎಂದು ಮುದುಕಪ್ಪ ಆಕಾಶ ನೋಡಿದ. ಕಥೆ ಕೇಳಿದ ಉತ್ಸಾಹದಲ್ಲಿದ್ದ ಮಕ್ಕಳು,

‘ಮದುವೆಗೆ ನಾವೂ ಹೋಗೋಣ

ದೊರೆಗೆ ಜೈಕಾರ ಕೂಗೋಣ

ಹೋಳಿಗೆ ಊಟ ಮಾಡೋಣ

ಕಾಡೆಗೂಡೆ ಆಡೋಣ’

ಎಂದು ಮತ್ತೆ ಗಲಗಲ ಎದ್ದವು. ಮುದುಕಪ್ಪ ಚೂಟಿ ಹುಡುಗಿಯ ಪಿಳಿಪಿಳಿ ಕಣ್ಣುಗಳ ಮುಚ್ಚಿ ಹಾಡತೊಡಗಿದ,

ಕಣ್ಣಾ ಮುಚ್ಚೆ ಕಾಡೆಗೂಡೆ

ಉದ್ದಿನ ಮೂಡೆ ಉರುಳೇ ಹೋಯ್ತು ...’

2

ಹೆಚ್ಚೂ ಕಡಿಮೆ ವರುಷದ ಹಿಂದೆ ನಡೆದ ನಂತರ ಕಾಡಿಗೆ ಮರಳಿದ್ದ ಪಟ್ಟದಾನೆ ಹೊಸ ದೊರೆಯನ್ನ ಆಯ್ಕೆ ಮಾಡಬೇಕಾದ್ದರಿಂದ ಹದಿನೈದು ದಿನಗಳ ಹಿಂದೆ ಪುನಃ ಊರಿಗೆ ವಾಪಸ್ಸಾಗಿತ್ತು . ಈಗ ಮರದ ದಿಮ್ಮಿಗಳನ್ನು ಎಳೆಯುವ ಕೆಲಸದಿಂದ ಪಟ್ಟದಾನೆಗೆ ಬಿಡುವು. ಸಾಕು ಸಾಕೆನ್ನುವಷ್ಟು ಹಸಿ ಹುಲ್ಲು , ಕಬ್ಬಿನ ಜಲ್ಲೆಗಳನ್ನು ಮಾವುತ ಗುಡ್ಡೆ ಹಾಕುತಿದ್ದ . ಪಟ್ಟದಾನೆಯ ಪರ್ವತದಂಥ ಮೈ ಮಿರಿಮಿರಿ ಮಿಂಚುವಂತೆ ಹೊಳೆಯಲ್ಲಿ ಮೀಯಿಸುತ್ತಿದ್ದ . ಪ್ರತಿದಿನ ಬೈಗು ಬೆಳಗ್ಗೆ ಪಟ್ಟದಾನೆ ಹಣೆ ಪಾದಕ್ಕೆ ವಿಭೂತಿ ಹಚ್ಚಿ , ಸೊಂಡಿಲಿಗೆ ಹೂದಂಡೆ ಮುಡಿಸುತ್ತಿದ್ದ . ಅದೆಲ್ಲ ಸಂಪ್ರದಾಯ, ಪಟ್ಟದಾನೆಗೆ ಸಲ್ಲಬೇಕಾದ ಗೌರವ.

ಹಕ್ಕಿಗಳೆಲ್ಲ ಗೂಡಿಗೆ ವಾಪಸ್ಸಾಗೋ ಒಂದು ಬೈಗು-

ವಿಭೂತಿ ಹೂದಂಡೆ ಧರಿಸಿಕೊಂಡು ಪಟ್ಟದಾನೆ ರಾಜಗಾಂಭೀರ್ಯದಿಂದ ಮೆರೆಯುತ್ತಿರುವಾಗ್ಗೆ , ಮಾವುತನೊಂದಿಗೆ ಮರಿಯಾನೆಯಂಥ ವ್ಯಕ್ತಿಯಾಬ್ಬರು ಗಜಶಾಲೆಗೆ ಬಂದರು. ಕೊಳಗ ತುಂಬ ಕೊಬ್ಬರಿ ಬೆಲ್ಲವ ಗಜರಾಜನ ಮುಂದಿರಿಸಿ, ಮೊಳಕಾಲೂರಿ ಕೂತ ಆ ಗುಢಾಣ ಹೊಟ್ಟೆಯ ಮನುಷ್ಯ ವಿನೀತ ದನಿಯಲ್ಲಿ ಪ್ರಾರ್ಥಿಸತೊಡಗಿದ :

‘ಶರಣು ಬಂದಿರುವೆ ನಿನ್ನ ಪಾದಕೆ

ನಿನ್ನಲೇ ಇಟ್ಟಿರುವೆನು ನಂಬಿಕೆ

ಮಂಟಪದಲಿ ನನ್ನನು ಒಲಿ

ನಿನ್ನೆಲ್ಲ ಕಷ್ಟಗಳು ತೀರಿದವೆಂದು ತಿಳಿ

ಅರಮನೆಗಿಂತ ಮಿಗಿಲಾದ ಗಜಮನೆಯ ಕಟ್ಟುವೆನು

ಗಜಮನೆಯ ಎದುರಿಗೆ ಹೊಳೆಯ ಹರಿಸುವೆನು

ನಿನಗೆಂದೆ ಕಬ್ಬಿನ ತೋಟಗಳ ಬೆಳೆಸುವೆನು

ಮರೆಯದಿರು ತೊಡಿಸಲು ನನಗೆ ಮಾಲೆಯನು’

ಹೇಳಿದುದನ್ನು ಪುನರುಚ್ಚರಿಸಿ, ಮಾತುಗಳೆಲ್ಲ ಪಟ್ಟದಾನೆಗೆ ಅರ್ಥವಾಗಿವೆ ಎನ್ನುವುದನ್ನು ಮನದಟ್ಟು ಮಾಡಿಕೊಂಡ ಆತ ಗಜಶಾಲೆಯಿಂದ ವಾಪಸ್ಸಾದ. ಹೋಗುವ ಮುನ್ನ ತನ್ನ ಕುರಿತು ಆಗಾಗ ಪಟ್ಟದಾನೆಗೆ ನೆನಪಿಸುವಂತೆ ಮಾವುತನಿಗೆ ತಾಕೀತು ಮಾಡಿದ. ‘ನಾನು ರಾಜನಾದರೆ..’ ಎಂದು ಪದವಿಯ ಆಮಿಷ ತೋರಿಸಿದ. ತಲೆಯಾಡಿಸಿದ ಮಾವುತ ಗುಢಾಣ ಹೊಟ್ಟೆಯ ಮನುಷ್ಯನಿಗೆ ಆನೆಯ ಬಾಲದ ಕೂದಲ ತಾಯಿತ ಕಟ್ಟಿದ.

** ** **

ಪಟ್ಟದಾನೆಯ ಮನವೊಲಿಸಲು ಉಪಾಯ ಹೂಡುವವರ ಸಂಖ್ಯೆ ಹೆಚ್ಚಾದಂತೆ ಮಾವುತ ಧರ್ಮಸಂಕಟಕ್ಕೆ ಬಿದ್ದ. ಬಂದವರು ಥರಾವರಿ ಆಮಿಷಗಳನ್ನು ಒಡ್ಡತೊಡಗಿದರು. ಪದವಿ, ಭೂಮಿ, ಹೊನ್ನಿನ ಆಸೆ ಮಾವುತನಿಗೆ ತೋರಿದರೆ- ಪಟ್ಟದಾನೆಗೆ ಮಹಲು ಕಟ್ಟಿಸಿಕೊಡುತ್ತೇವೆಂದರು, ನಿನ್ನ ಹೆಸರಲ್ಲಿ ಉಂಬಳಿ ಬಿಡುತ್ತೇವೆಂದರು, ಇಡೀ ಸಂತತಿ ಕೂತು ತಿನ್ನಲು ಅನುವು ಮಾಡಿಕೊಡುತ್ತೇವೆಂದರು, ನೀನೇ ಕುಲದೇವತೆಯೆಂದರು, ಗುಡಿ ಕಟ್ಟಿಸಿ ಪೂಜಿಸುತ್ತೇವೆಂದರು, ಸೂರ್ಯ ಚಂದ್ರ ನಕ್ಷತ್ರಗಳು ಇರುವವರೆಗೂ ಹೆಸರು ನಿಲ್ಲುವಂಥ ಕಾರ್ಯಗಳ ಮಾಡುತ್ತೇವೆಂದರು... ಪಟ್ಟದಾನೆ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿತ್ತು . ಬಾಗಿದ ಪ್ರತಿಯಾಬ್ಬರ ತಲೆಯನ್ನೂ ಸೊಂಡಿಲಿನಿಂದ ತಡವಿ ಆಶೀರ್ವದಿಸುತ್ತಿತ್ತು . ಉಳಿದಂತೆ ದಿವ್ಯಮೌನ.

ಇನ್ನೊಂದು ಕಡೆ ಮಾವುತನ ಹೆಂಡತಿ ಮಕ್ಕಳನ್ನು ಓಲೈಸುವವರೂ ಹುಟ್ಟಿಕೊಂಡರು. ಹೆಂಡತಿ ಒಬ್ಬ ವ್ಯಕ್ತಿಯ ಕಡೆ ನಿಂತರೆ, ಮಗನದು ಇನ್ನೊಂದು ಪಕ್ಷ . ಗಂಡನ ಮಾತಿಗೆ ಎದುರಾಡದ ಸಾಧ್ವಿ ಸಾವಿತ್ರಿಯಂತ ಆ ಹೆಣ್ಣು ಮಗಳು ತವರು ಸಂಬಂಧ ಹೇಳಿಕೊಂಡ ಮನುಷ್ಯನಿಗೇ ಹಾರ ಹಾಕಿಸುವಂತೆ ಗಂಡನಿಗೆ ದುಂಬಾಲು ಬಿದ್ದಳು. ಗಂಡ ಬಡಪೆಟ್ಟಿಗೆ ಒಪ್ಪದಾಗ ಊಟ ಬಿಟ್ಟು ಅಂಜಿಸಿದಳು. ಪತಿರಾಯ ಜಪ್ಪಯ್ಯ ಅಂದರೂ ಹ್ಞೂಂ ಅನ್ನಲಿಲ್ಲ ವಾದ್ದರಿಂದ ‘ತವರಿಗೆ ಹೋಗ್ತೀನಿ’ ಎನ್ನುವ ಬ್ರಹ್ಮಾಸ್ತ್ರವ ಕೊನೆಯದಾಗಿ ಪ್ರಯೋಗಿಸಿದಳು.

ಮನೆಯಾಳಗೆ ಹೊರಗೆ ನೆಮ್ಮದಿ ಕಾಣದೆ ನಲುಗಿಹೋಗಿದ್ದ ಮಾವುತನಿಗೆ ಕ್ಕೆ ಇನ್ನೊಂದೇ ದಿನವಿದೆ ಅನ್ನುವಾಗ ಶುರುವಾದದ್ದು ಪ್ರಾಣ ಸಂಕಟ. ಈವರೆಗೆ ಬಂದವರೆಲ್ಲ ಭೂಮಿ ಕಾಣಿಯಾಸೆ ತೋರಿದರೆ, ಈ ಬಾರಿ ಎದುರಾದವನು ಯಮದೂತ. ಆನೆ ತನಗೆ ಮಾಲೆ ಹಾಕುವಂತೆ ಮಾಡದಿದ್ದರೆ, ದ ದಿನವೇ ಮಾವುತನ ಕೊನೆಯ ದಿನವಾಗುತ್ತದೆಂದು ಆತ ಎಚ್ಚರಿಸಿದ. ತನಗೊಲಿಯದಿದ್ದರೆ ದಂತ ಮುರಿಯುವುದಾಗಿ, ಕುಂಭ ಒಡೆದು ಕೊಲ್ಲುವುದಾಗಿ ಆನೆಗೆ ಬೆದರಿಕೆ ಒಡ್ಡಿ ದ. ಸಂತತಿಯನ್ನು ಸರ್ವನಾಶ ಮಾಡುವುದಾಗಿ ಕೂಗಾಡಿದ. ಆತ ಅಷ್ಟೆಲ್ಲಾ ಹಾರಾಡಿ ಆರ್ಭಟಿಸಿದರೂ ಪಟ್ಟದಾನೆ ಮೌನ ಮುರಿಯಲಿಲ್ಲ .

ರಾತ್ರಿ ಕಳೆದು ಬೆಳಕು ಹರಿದರೆ . ಮಾವುತನಿಗೆ ದೂರದ ಮೈದಾನದಾಗೆ ಮೊಳಗುತ್ತಿದ್ದ ನಗಾರಿಗಳು ಎದೆಯಾಳಗೇ ಮೊರೆಯುತ್ತಿವೆ ಎನಿಸುತ್ತಿತ್ತು . ಇದೇ ಕೊನೆಯ ದಿನವೆನಿಸಿ ಮೈಯ್ಯೆಲ್ಲ ನಡುಗುತ್ತಿತ್ತು . ಇಂಥ ನಾಲ್ಕು ಗಳನ್ನು ಯಶಸ್ವಿಯಾಗಿ ಎದುರಿಸಿದ್ದ ಮಾವುತನಿಗೆ ಊಟವೂ ಸೇರಲಿಲ್ಲ . ಆ ದಿನ ರಾತ್ರಿ ಮಾವುತ ಕನಸು ಕಂಡ. ನಾಲಗೆ ಚಾಚಿಕೊಂಡು ನಿಂತ ಎಲ್ಲರನ್ನೂ ಧಿಕ್ಕರಿಸಿದ ಪಟ್ಟದಾನೆ ಮಾವುತನಿಗೆ ಮಾಲೆ ಹಾಕಿ, ಬೆನ್ನ ಮೇಲೆ ಸವಾರಿ ಮಾಡಿಸಿದ ಚಿತ್ರಗಳು ಕನಸಿನಲ್ಲಿದ್ದವು. ಕುರ್ಚಿಯ ಮೇಲೆ ಠೀವಿಯಿಂದ ಕೂತು ಜೈಕಾರಗಳಿಂದ ಉಬ್ಬಿಹೋಗುತ್ತಿದ್ದ ಮಾವುತ ಭಾರೀ ಚೆಲುವನಂತೆ ಕಂಡ. ಉಟ್ಟದ್ದು, ಹೊದ್ದದ್ದೆಲ್ಲ ತೇವವೆನಿಸಿದಂತಾಗಿ ಮಾವುತ ಎದ್ದುಕೂತಾಗ ಇನ್ನೂ ಮಬ್ಬು ಹರಿದಿರಲಿಲ್ಲ .

ಭಯದೊಂದಿಗೇ ಬೆಳಗು ಕಂಡರೂ ಸಂಪ್ರದಾಯ ತಪ್ಪದಂತೆ, ಕತ್ತಲು ತೀರುವ ಮುನ್ನವೇ ಪಟ್ಟದಾನೆಯನ್ನು ಹೊಳೆಯಲ್ಲಿ ಮೀಯಿಸಿದ. ವಿಭೂತಿ ಹಚ್ಚಿ , ಹೂದಂಡೆಗಳಿಂದ ಶೃಂಗರಿಸಿದ. ಇನ್ನೇನು ದೊರೆಮನೆಗೆ ನಡೆಸುವುದೇ ಬಾಕಿ, ಮಾವುತ ಪಟ್ಟದಾನೆಯ ಕಾಲುಗಳಿಗೆ ಕುಸಿದ. ಆನೆ ಸೊಂಡಿಲಿನಿಂದ ಆತನನ್ನು ಏಳಿಸಿತು. ಇಬ್ಬರ ಕಣ್ತುಂಬಾ ನೀರು.

3

ಹೊಸ ರಾಜನಿಗೆ ಪಟ್ಟದಾನೆ ಮಾಲೆ ಹಾಕೋದನ್ನ ಕಣ್ಣು ತುಂಬಿಕೊಳ್ಳೋದಿಕ್ಕೆಂದು ಗುಂಪಾದವರಿಂದ, ಉಸುಕಿನ ಕಣಕ್ಕೂ ತಾವಿಲ್ಲದಂತೆ ದೊರೆಮನೆ ಮೈದಾನ ತುಂಬಿತ್ತು .

‘ಆನೆ ಸೊಂಡಿಲಲಿ ಹಾರ

ಅದ ಧರಿಸುವನಾರೊ ಧೀರ’

ಎನ್ನುವ ಮಕ್ಕಳ ಪಡೆಯ ಹಾಡಿನೊಂದಿಗೆ ದೊಡ್ಡವರ ಕಂಠಗಳೂ ಕೂಡಿಕೊಳ್ಳುತ್ತಿದ್ದವು. ಮೈದಾನದ ಒಂದು ಮೂಲೆಯಲ್ಲಿ ಸಕಲ ಶೃಂಗಾರದಿಂದ ಶೋಭಿಸುತ್ತಿದ್ದ ಗಜರಾಜ ಗಾಂಭೀರ್ಯವೇ ಮೈತಳೆದಂತೆ ನಿಂತಿದ್ದರೆ, ಎದುರಿಗೆ ಕುರ್ಚಿಯನ್ನೇರಲು ಒಂಟಿಗಾಲಲ್ಲಿ ನಿಂತಿರುವ ಸಾಲುಸಾಲು ಆಕಾಂಕ್ಷಿಗಳು. ಅವರ ಕಣ್ಣುಗಳು ಒಂದು ಸಾರಿ ಆನೆಯತ್ತ ಹೊರಳಿದರೆ, ಮರುಕ್ಷಣ ಬಾ ಬಾ ಎನ್ನುವ ಕುರ್ಚಿಯತ್ತ . ಗಜರಾಜ ಮಾತ್ರ ತನ್ನ ದೃಷ್ಟಿಯ ಮೈದಾನದ ಇನ್ನೊಂದು ಮೂಲೆಯಲ್ಲಿದ್ದ ದೊರೆ ವಂಶದ ಕಾರಣಿಕ ಪುರುಷನ ಪ್ರತಿಮೆಯತ್ತ ಕೀಲಿಸಿದ್ದ.

ಮುಹೂರ್ತ ಹತ್ತಿರವಾಗುತ್ತಿದ್ದಂತೆ, ರಾಜ ಪುರೋಹಿತ ಮಂಗಳದ್ರವ್ಯಗಳೊಂದಿಗೆ ಪಟ್ಟದಾನೆಗೆ ಪೂಜೆ ಸಲ್ಲಿಸಿ,

‘ಗಜರಾಜ ಘನತೇಜ

ನಾಡಿಗೆ ಬೇಕು ಮಹಾರಾಜ

ಒಮ್ಮನದಿ ಅರ್ಹರನು ಆರಿಸು

ಮಾಲೆ ತೊಡಿಸಿ ಮೆರೆಸು’

ಎಂದು ಪಟ್ಟದಾನೆ ಸೊಂಡಿಲಿಗೆ ಮಾಲೆ ನೀಡಿ ಪ್ರಾರ್ಥಿಸಿದ.

ಸೊಂಡಿಲಲ್ಲಿ ಮಾಲೆ ಹಿಡಿದ ಪಟ್ಟದಾನೆ ಕ್ಕೆ ಆಗಮಿಸಿ ಕೊರಳುದ್ದ ಮಾಡಿಕೊಂಡ ಆಕಾಂಕ್ಷಿಗಳತ್ತ ನಿಧಾನವಾಗಿ ಹೆಜ್ಜೆಹಾಕಿತು. ಅನಿಮೇಷರಂತೆ ನಿಂತಿದ್ದ ಪ್ರತಿಯಾಬ್ಬರಿಗೂ ಹೃದಯದ ಬಡಿತ ಜೋರಾಗುತ್ತಿದೆ ಎನಿಸಿತು. ಆವರೆಗೆ ಮೈದಾನದಲ್ಲಿ ತುಂಬಿಕೊಂಡಿದ್ದ ಗುಜುಗುಜು ಗದ್ದಲದ ಜಾಗೆಯಲ್ಲೀಗ ತುಟಿಪಿಟಕ್‌ ನಿಶ್ಯಬ್ದ.

ಪುರೋಹಿತ ಪ್ರತಿಯಾಬ್ಬ ಸ್ಪರ್ಧಿಯ ಗುಣ ಬಲ ವಿಶೇಷಗಳನ್ನು ಪಟ್ಟದಾನೆಗೆ ಬಣ್ಣಿಸುತ್ತಿದ್ದ. ಯಾವುದಕ್ಕೂ ಗಮನ ಕೊಡದ ಪಟ್ಟದಾನೆ ತಮ್ಮತ್ತ ನೋಡದೆ ಮುಂದೆ ಹೋದಾಗ, ಕೆಲವರು ಮಂಕಾದರು, ಕೆಲವರು ಸಿಟ್ಟಾದರು, ಕೆಲವರಿಗಂತೂ ಬದುಕೇ ಶೂನ್ಯವೆನಿಸಿತು. ಆನೆ ಮಾತ್ರ ಮೈದಾನವನ್ನೆಲ್ಲ ಸುತ್ತಿಬಂದು ಯಥಾಸ್ಥಾನದಲ್ಲಿ ಸುಮ್ಮನೇ ನಿಂತಿತು, ಮಾಲೆ ಸೊಂಡಿಲಲ್ಲೇ ಉಳಿದಿತ್ತು .

ಸೋಜಿಗಕ್ಕೆ ಬಿದ್ದ ಗುಂಪಿನಲ್ಲಿ ಮತ್ತೆ ಗುಜುಗುಜು ಶುರುವಾಯಿತು. ಏನೋ ಅಪಚಾರವಾಗಿದೆಯೆಂದು ಭಾವಿಸಿದ ಪುರೋಹಿತ ಮತ್ತೆ ಮಂಗಳಾರತಿ ಮಾಡಿ, ಹೊಸ ಹಾರ ನೀಡಿ ಪ್ರಾರ್ಥಿಸಿದ. ಪಟ್ಟದಾನೆ ಅಡಿಯನ್ನೂ ಕದಲಿಸಲಿಲ್ಲ .

ಆ ಹೊತ್ತಿಗಾಗಲೇ ನಿರಾಶೆ, ಅವಮಾನಗಳಿಂದ ಕುದ್ದುಹೋಗಿದ್ದ ಅನೇಕರು ಕತ್ತಿ ಹಿರಿದಿದ್ದರು, ಗುಢಾಣದಂತ ಹೊಟ್ಟೆಯವನಂತೂ ಕೋವಿ ಗುರಿ ಮಾಡಿ ‘ಮಾಲೆ ಹಾಕಿದರೆ ಸರಿ’ ಎನ್ನುವಂತೆ ಸೆಟೆದು ನಿಂತ.

ಎದುರಿಗೆ ನಿಂತವನ ಕಣ್ಣುಗಳಲ್ಲಿ ನಾಲ್ಕೈದು ಕ್ಷಣ ಇಣುಕಿ ನೋಡಿದ ಗಜರಾಜ. ಮರುಕ್ಷಣದಲ್ಲಿ ಮೈದಾನದ ತುಂಬ ತುಂಬಿಕೊಂಡಿತು ಆರ್ತನಾದ. ಕೋವಿ ಗುರಿ ಮಾಡಿದವನನ್ನು ಪಟ್ಟದಾನೆ ನೆಲಕ್ಕೆ ಹೊಸಕಿ ಹಾಕಿತ್ತು . ಆನೆಯ ಹಣೆಯಿಂದ ರಕ್ತ ಜಿನುಗುತ್ತಿತ್ತು . ಉಳಿದ ಉತ್ಸಾಹಿಗಳೆಲ್ಲ ದಿಕ್ಕು ತೋಚದವರಂತೆ ಮುಖ ಮುಖ ನೋಡಿಕೊಳ್ಳುತ್ತಿರುವಾಗ, ಪ್ರತಿಮೆ ಬಳಿಗೆ ಕಾಲೆಳೆದುಕೊಂಡು ಸಾಗಿದ ಪಟ್ಟದಾನೆ ರಾಜವಂಶದ ಕಾರಣಿಕ ಪುರುಷನಿಗೆ ಮಾಲೆ ತೊಡಿಸಿ, ಕೊಡಲಿ ಬೀಸಿಗೆ ಬಲಿಯಾದ ಬಾಳೆಯಂತೆ ಕುಸಿಯಿತು. ಮಾವುತ ಪ್ರತಿಮೆಯಂತೆ ನಿಶ್ಚಲನಾಗಿದ್ದ .

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more