• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರಕೆ

By Staff
|

ತಮ್ಮಣ್ಣಪ್ಪ ಅಷ್ಟು ಕಠೋರವಾದ ಹೊತ್ತುಕೊಳ್ಳುವುದಕ್ಕೆ ಕಾರಣವಿಲ್ಲದೆ ಇಲ್ಲ. ಅವನ ಹೆಂಡತಿ ಮಹಾಲಕ್ಷ್ಮಿ ಇನ್ನೂ ಎಂಟು ವರ್ಷ ಕೂಡ ತುಂಬದ ಮಗ ಕೃಷ್ಣನನ್ನು ಬಿಟ್ಟು ಅಕಾಲದಲ್ಲಿ ಕಣ್ಣು ಮುಚ್ಚಿದಳು. ಹೊಟ್ಟೆನೋವು ಹೊಟ್ಟೆನೋವು ಅಂತ ನಾಲ್ಕೈದು ವರ್ಷ ನರಳಿದವಳಿಗೆ ಏನೇನು ನಾಟಿ ಔಷಧ ಮಾಡಿದರೂ ಪ್ರಯೋಜನವಾಗಲಿಲ್ಲ. ಭುವನಗಿರಿಯ ಸರಕಾರೀ ಆಸ್ಪತ್ರೆಗೆ ಬರುತ್ತಿದ್ದ ಡಾಕ್ಟರುಗಳೋ, ಇವತ್ತಿದ್ದರೆ ನಾಳೆ ಇಲ್ಲ. ಸುಮಾರು ಒಂದೂವರೆ ತಿಂಗಳಿದ್ದ ಒಬ್ಬ ಡಾಕ್ಟರು ಮಹಾಲಕ್ಷ್ಮಿ ಮೇಲೇಳದಂತೆ ಹಾಸಿಗೆ ಹಿಡಿದುಬಿಟ್ಟಾಗ ಮನೆಯವರೆಗೂ ಬಂದು ಪರೀಕ್ಷಿಸಿ ನೋಡಿದವರು ‘‘ಇದಕ್ಕೆ ಆಪರೇಷನ್‌ ಆಗಬೇಕು. ತಕ್ಷಣ ಬೆಂಗಳೂರಿನ ದೊಡ್ಡಾಸ್ಪತ್ರೆಗೆ ಕರಕೊಂಡು ಹೋಗು’’ ಎಂದು ಕೈಚೆಲ್ಲಿಬಿಟ್ಟರು. ತಮ್ಮಣ್ಣಪ್ಪನ ಕಣ್ಣಿಗೆ ಕತ್ತಲೆ ಕವಿದಂತಾುತು. ಹೇಗೋ ಸಾವರಿಸಿಕೊಂಡು ಮಗನನ್ನು ತನ್ನ ಅಣ್ಣ ದೇವಪ್ಪನ ಮನೆಯಲ್ಲಿ ಬಿಟ್ಟು, ಹೆಂಡತಿಯನ್ನು ಎತ್ತಿನ ಗಾಡಿಯಲ್ಲಿ ಕೂರಿಸಿಕೊಂಡು ರೈಲು ಹಿಡಿಯುವುದಕ್ಕಾಗಿ ಸ್ಟೇಷನ್ನಿಗೆ ಹೋದ. ನಸೀಬು ಚೆನ್ನಾಗಿರದಿದ್ದರೆ ದೇವರು ಕೂಡ ಏನೂ ಮಾಡಲಾರ ಅಲ್ಲವೇ? ರೈಲು ಹೊರಟು ಒಂದರ್ಧ ಗಂಟೆ ಕೂಡ ಕಳೆದಿರಲಿಲ್ಲ , ಮಹಾಲಕ್ಷ್ಮಿ ಇದ್ದಕ್ಕಿದ್ದಂತೆ ಒಂದು ಸಲ ಜೋರಾಗಿ ಕಿರುಚಿಕೊಂಡದ್ದೇ ಕಣ್ಣುಮುಚ್ಚಿಬಿಟ್ಟಳು.

ಅಕಾಲದಲ್ಲಿ ತಾಯಿಯನ್ನು ಕಳೆದುಕೊಂಡ ಮಗನನ್ನು ತಮ್ಮಣ್ಣಪ್ಪ ತುಂಬ ಮೆಹನತ್ತಿನಿಂದ ಸಾಕತೊಡಗಿದ. ಮಹಾಲಕ್ಷ್ಮಿ ಇನ್ನೂ ಅವನ ನೆನಪಿನಲ್ಲಿ ಗಟ್ಟಿಯಾಗಿ ಉಳಿದಿದ್ದ ದಿನಗಳವು. ಕೂತರೆ ನಿಂತರೆ ಅವಳ ಸಾವಿನ ದೃಶ್ಯ ಅವನ ಎದೆ ನಡುಗಿಸುತ್ತಿತ್ತು. ನಾಲ್ಕೈದು ಸಲವಾದರೂ ಅವನು ಅಳದ ದಿನಗಳಿಲ್ಲ. ಭುವನಗಿರಿಯ ಜನ ಅಯ್ಯೋ ಪಾಪ ಎಂದರು; ತಮಗೆ ತಿಳಿದ ರೀತಿಯಲ್ಲಿ ಸಮಾಧಾನ ಮಾಡಿದರು. ಆದರೂ ಅವನ ದುಃಖ ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ಒಂದು ರಾತ್ರಿ ನಿದ್ದೆ ಬರದೆ ಹಾಸಿಗೆಯಲ್ಲಿ ಹೊರಳಾಡುತ್ತಿರುವಾಗ ಪಕ್ಕದಲ್ಲೇ ಮಲಗಿದ್ದ ಮಗನ ಮುಖ ಚಿಮಣಿ ದೀಪದ ಬೆಳಕಿನಲ್ಲಿ ಉಜ್ವಲವಾಗಿ ಬೆಳಗುತ್ತಿತ್ತು. ಸಮಯಕ್ಕೆ ಸರಿಯಾಗಿ ವೈದ್ಯರು ಸಿಕ್ಕಿದ್ದರೆ ಹೇಗಾದರೂ ಮಾಡಿ ಮಹಾಲಕ್ಷ್ಮಿಯನ್ನು ಉಳಿಸಿಕೊಳ್ಳಬಹುದಿತ್ತಲ್ಲ ಎಂದು ಅವನು ಸಣ್ಣಗೆ ಅಳತೊಡಗಿದ. ಅದೇ ಹೊತ್ತಿಗೆ ಮಗ ಕೃಷ್ಣ ‘‘ಅಮ್ಮಾ’’ ಎಂದು ಮೆಲ್ಲಗೆ ನರಳಿ ಮಗ್ಗುಲು ಬದಲಾಯಿಸಿದಾಗ ತಮ್ಮಣ್ಣಪ್ಪನ ತಲೆಯಲ್ಲಿ ಫಳಕ್ಕೆಂದು ಮಿಂಚು ಮಿಂಚಿದಂತಾಯಿತು. ಏನಾದರೂ ಮಾಡಿ ಈ ಮಗನನ್ನು ಡಾಕ್ಟರು ಪರೀಕ್ಷೆಗೆ ಓದಿಸಲೇಬೇಕೆನಿಸಿದ್ದೇ ದಡಕ್ಕನೆ ಮೇಲೆದ್ದವನು ನಡುಮನೆಯ ಗೂಡಿನಲ್ಲಿದ್ದ ತಿರುಪತಿ ತಿಮ್ಮಪ್ಪನ ಪಟದ ಮುಂದೆ ಕಣ್ಣುಮುಚ್ಚಿಕೊಂಡು ನಿಂತು, ‘‘ಅಪ್ಪಾ, ತಿಮ್ಮಪ್ಪಾ, ನಾಳೆಯಿಂದ ಒಂಟಿಕಾಲಲ್ಲಿ ನಿಂತುಕೊಳ್ಳೋ ಹೊರ್ತೀನಿ. ನೀನು ಕಣ್ಣುಬಿಟ್ಟು ಈ ಮಗನನ್ನು ಡಾಕ್ಟರು ಮಾಡಪ್ಪಾ, ನಮ್ಮಪ್ಪಾ’’ ಎಂದು ಪ್ರಾರ್ಥಿಸಿದ.

ಸರಿ, ಮಾರನೆಯ ದಿನದಿಂದಲೇ ತಾನು ಹರಸಿಕೊಂಡಂತೆ ನಡೆದುಕೊಳ್ಳತೊಡಗಿದ. ಕೂರುವಾಗ, ನಿಲ್ಲುವಾಗ, ನಡೆದಾಡುವಾಗ, ಅಡುಗೆ ಮಾಡುವಾಗ, ಬಟ್ಟೆ ಒಗೆಯುವಾಗ, ಸಂತೆಗೆ ಸರಕು ಹೊತ್ತೊಯ್ಯುವಾಗ, ಅಷ್ಟೇಕೆ, ಮರ ಹತ್ತುವಾಗ ಕೂಡ ಅವನ ಬಲಗಾಲು ಅವನ ಕುಂಡೆಗೆ ತಾಗುವಂತೆ ಹಿಂದಕ್ಕೆ ಮಡಿಚಿಕೊಂಡೇ ಇರುತ್ತಿತ್ತು. ಮೊದಮೊದಲು ಒಂದೇ ಕಾಲಲ್ಲಿ ನಿಲ್ಲುವುದು, ನಡೆಯುವುದು ಸುಲಭವಾಗಿರಲಿಲ್ಲ. ಹತ್ತು ಹನ್ನೆರಡು ದಿನ ಆಯ ತಪ್ಪದಂತಿರಲು ಅವನೊಂದು ಕೋಲನ್ನು ಹಿಡಿದುಕೊಂಡಿದ್ದೂ ಉಂಟು. ಆಮೇಲೆ ಅದರ ಹಂಗಿಲ್ಲದೆ ದೇವರು ತನಗೆ ಕೊಟ್ಟಿರುವುದು ಒಂದೇ ಕಾಲು ಎಂದುಕೊಂಡವನಂತೆ ಎಡಗಾಲಿಗೇ ಬಲವನ್ನೆಲ್ಲ ವರ್ಗಾಯಿಸಿ ನಿಲ್ಲುತ್ತಿದ್ದ ; ಮುಂದೆ ಹೋಗಬೇಕಾದಾಗ ಕಪ್ಪೆಯಂತೆ ಒಂದೇ ಕಾಲಲ್ಲಿ ನೆಗೆಯುತ್ತಿದ್ದ.

ಮನುಷ್ಯ ಮನಸ್ಸು ಮಾಡಿದರೆ ಯಾವುದು ಸಾಧ್ಯವಿಲ್ಲ? ತಮ್ಮಣ್ಣಪ್ಪ ಹದಿನೈದು-ಹದಿನಾರು ವರ್ಷ ಗಾಣದೆತ್ತಿನಂತೆ ದುಡಿದು ಮಗನನ್ನು ಪೂಸಿಮಾಡಿ ಓದಿಸಿಯೇ ಓದಿಸಿದ. ಕೃಷ್ಣ ಭುವನಗಿರಿಯಲ್ಲಿ ಹೈಸ್ಕೂಲು ಮುಗಿಸಿ ಬೆಂಗಳೂರಿಗೆ ಹೋಗಿ ಕಾಲೇಜು ಸೇರಿದ. ಹಾಸ್ಟಲ್ಲಿನಲ್ಲಿ ಇದ್ದುಕೊಂಡು ಓದಿ ಓದಿ ಡಾಕ್ಟರು ಪರೀಕ್ಷೆಗೂ ಕೂತ. ಆಮೇಲೆ ಡಾಕ್ಟರ್‌ ಕೃಷ್ಣಮೂರ್ತಿ ಆಗಿಬಿಟ್ಟ. ತಮ್ಮಣ್ಣಪ್ಪನ ಸಂತೋಷಕ್ಕೆ ಪಾರವುಂಟೆ? ಆ ಕಡೆಯ ಎಂ.ಎಲ್‌.ಎ.ಯ ಕಾಲು ಹಿಡಿದು ತನ್ನ ಮಗ ಭುವನಗಿರಿಯ ಸರಕಾರಿ ಆಸ್ಪತ್ರೆಗೇ ಡಾಕ್ಟರಾಗಿ ಬರುವುದಕ್ಕೆ ಏನೇನು ಮಾಡಬೇಕೋ ಅದನ್ನೆಲ್ಲ ಮಾಡಿದ.

ಕೆಲವು ದಿನಗಳ ನಂತರ ಅವನು ತನ್ನ ಯ ಪೂರೈಕೆಗಾಗಿ ಮಗನನ್ನು ಹೊರಡಿಸಿಕೊಂಡು ತಿರುಪತಿಗೆ ಹೋದ. ತಿರುಪತಿಯಲ್ಲಿ ಮಗ ಏಷ್ಟು ಬೇಡವೆಂದರೂ ಕೇಳದೆ ಒಂಟಿಕಾಲಿನಲ್ಲಿ ಕುಂಟುತ್ತ, ನೆಗೆಯುತ್ತ, ಕುಪ್ಪಳಿಸುತ್ತ ಬೆಟ್ಟ ಹತ್ತಿದ. ಮೈಲಿಗಟ್ಟಲೆ ಉದ್ದದ ಯಾತ್ರಿಕರ ಸಾಲಲ್ಲಿ ಇಂಚಿಂಚೇ ಇಂಚಿಂಚೇ ಮುಂದೆ ಸರಿದು ಸರಿರಾತ್ರಿಯ ಹೊತ್ತಿಗೆ ತಿಮ್ಮಪ್ಪನ ದರ್ಶನ ಪಡೆದದ್ದಾಯಿತು. ದೇವರನ್ನು ನೋಡಿದ ಸಂಭ್ರಮದಿಂದ, ತನ್ನ ಬದುಕು ಸಾರ್ಥಕವಾಯಿತೆಂಬ ಸಂತೋಷದಿಂದ ಹೊರಗೆ ಬಂದ ಮೇಲೆ ಮಗ ಕೃಷ್ಣಮೂರ್ತಿಯೇ, ‘‘ಅಪ್ಪಾ, ನಿನ್ನ ಮುಗೀತಲ್ಲ, ಇನ್ನಾದರೂ ಬಲಗಾಲು ನೆಲಕ್ಕೆ ಬಿಡು’’ ಎಂದು ನೆನಪಿಸಬೇಕಾಯಿತು. ತಮ್ಮಣ್ಣಪ್ಪ ದೇವಸ್ಥಾನದ ಪೌಳಿಯಿಂದ ಆಚೆಗೆ ಬಂದು ಮಗನ ಭುಜವನ್ನು ಬಿಗಿಯಾಗಿ ಹಿಡಿದುಕೊಂಡು, ಎಡಗಾಲಿನ ಮೇಲೆ ಸಾಧ್ಯವಾದಷ್ಟೂ ಭಾರ ಹಾಕಿ ತನ್ನ ಕುಂಡೆಗೆ ಅಂಟಿಕೊಂಡಂತಿದ್ದ ಬಲಗಾಲನ್ನು ಬಿಡಿಸಲು ಪ್ರಯತ್ನಿಸಿದ. ಉಹೂಂ, ಏನು ಮಾಡಿದರೂ ಎಷ್ಟೇ ತಿಣಿಕಿದರೂ ಅದು ಎರಡು ಮೂರು ಇಂಚಿಗಿಂತ ಆಚೆಗೆ ಹಂದಾಡಲಿಲ್ಲ. ಕೃಷ್ಣ ಅಪ್ಪನನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ ಅಲ್ಲಿದ್ದ ಒಂದು ಮರವನ್ನು ಗಟ್ಟಿಯಾಗಿ ಅಪ್ಪಿ ಹಿಡಿದುಕೊಳ್ಳುವಂತೆ ಹೇಳಿದ. ಆಮೇಲೆ ಅವನೇ ಅಪ್ಪನ ಬೆನ್ನ ಹಿಂದು ಕುಕ್ಕರುಗಾಲಿನಲ್ಲಿ ಕೂತುಕೊಂಡು ಆಕಾಶ ನೋಡುತ್ತಿದ್ದ ಆ ಬಲಗಾಲಿನ ಪಾದವನ್ನು ತನ್ನ ಎರಡೂ ಕೈಗಳಲ್ಲಿ ಹಿಡಿದುಕೊಂಡು ಜೋರಾಗಿ ಎಳೆದ; ಉಸಿರು ಬಿಗಿಹಿಡಿದುಕೊಂಡು ಜಗ್ಗಿದ. ಅವನಿನ್ನೂ ಬಿಸಿರಕ್ತದ ಹುಡುಗನಲ್ಲವೆ? ಮಡಿಚಿಕೊಂಡಿದ್ದ ಅಪ್ಪನ ಆ ಕಾಲು ತುಸು ತುಸುವೇ ತುಸು ತುಸುವೇ ಸಡಿಲುಗೊಳ್ಳುತ್ತಾ ಇನ್ನೇನು ಅವನ ಎಡಗಾಲಿಗೆ ಜೊತೆಯಾಗಿ ನೆಲಕ್ಕೂರಬೇಕು, ಅದಾಗ ಕೃಷ್ಣನ ಕೈಗಳಿಂದ ನುಣುಚಿಕೊಂಡದ್ದೇ ಅದು ಎಳೆದು ಬಿಟ್ಟುಬಿಟ್ಟ ಸ್ಪ್ರಿಂಗಿನ ಹಾಗೆ ಅದೆಷ್ಟು ಬಿರುಸಾಗಿ ಸ್ವಸ್ಥಾನಕ್ಕೆ ಹಿಂತಿರುಗಿತೆಂದರೆ ತಮ್ಮಣ್ಣಪ್ಪ ಪಟ್‌ ಎಂದು ಬಿದ್ದ ಏಟಿನಿಂದ ಕುಂಡೆ ಮುಟ್ಟಿನೋಡಿಕೊಳ್ಳಬೇಕಾುತು.

ಹೀಗೆ ಸಲ್ಲಿಸಿ ಭುವನಗಿರಿಗೆ ಹಿಂತಿರುಗಿದ ಮೇಲೂ ತಮ್ಮಣ್ಣಪ್ಪ ಒಂಟಿ ಕಾಲಿನಲ್ಲಿ ನಿಲ್ಲುವುದು ತಪ್ಪಲಿಲ್ಲ. ಅದರಿಂದ ಹೆಚ್ಚು ಬೇಸರವಾದದ್ದು ಅವನ ಮಗನಿಗೆ. ಅಪ್ಪನೇನೋ ತನ್ನನ್ನು ಓದಿಸುವುದಕ್ಕಾಗಿ ಹೊತ್ತ , ಸರಿ. ಈಗ ಫಲಿಸಿ, ತಾನು ಡಾಕ್ಟರಾದ ಮೇಲೂ ಅವನು ಒಂಟಿಕಾಲಿನವನಾಗಿಯೇ ಉಳಿಯುವುದೆಂದರೆ! ಇದು ಮಾನಾವಮಾನದ ಪ್ರಶ್ನೆ. ಭುವನಗಿರಿಯಲ್ಲಿ ಈಚೆಗೆ ಅಪ್ಪ ಕೆಲವರ ತಮಾಷೆಗೆ ವಸ್ತುವಾಗಿದ್ದು ಕೂಡ ಅವನಿಗೆ ಗೊತ್ತಿತ್ತು. ಒಂದು ದಿನ ಏನೋ ನಿರ್ಧರಿಸಿದವನಂತೆ, ‘‘ಅಪ್ಪಾ, ನಿನ್ನ ಬಲಗಾಲು ಮೊದಲಿನ ಹಾಗೇ ಸರಿಹೋಗಬೇಕಾದ್ರೆ ಆಪರೇಷನ್‌ ಮಾಡಿಸಬೇಕು. ನಾಳೆ ಬೆಳಿಗ್ಗೆ ನಡಿ, ಬೆಂಗಳೂರಿಗೆ ಹೋಗೋಣ’’ ಎಂದ. ತಮ್ಮಣ್ಣಪ್ಪ ಮೊದಲಿಗೆ ಸುತರಾಂ ಒಪ್ಪಲಿಲ್ಲ. ಎಷ್ಟೋ ವರ್ಷ ಒಂಟಿಕಾಲಿನಲ್ಲಿ ನಡೆದವನಿಗೆ ಅದೇ ರೂಢಿಯಾಗಿಹೋಗಿದ್ದರಿಂದ ಈಗ ಮಡಿಚಿಕೊಂಡ ಬಲಗಾಲು ನೇರವಾಗುವುದು ಕೂಡ ಬೇಕಿರಲಿಲ್ಲ. ಹಾಗೇನಾದರೂ ನೇರವಾಗಿದ್ದಿದ್ದರೆ ಅವನಿಗೆ ಇರುಸು ಮುರುಸಾಗುತ್ತಿತ್ತೋ ಏನೊ. ಆದರೆ ಮಗ ಬಿಡಬೇಕಲ್ಲ. ಅವನು ಅಪ್ಪನನ್ನು ಹೇಗೋ ಒಪ್ಪಿಸಿ ಬೆಂಗಳೂರಿಗೆ ಕರೆದುಕೊಂಡು ಹೋದ. ಅಲ್ಲೊಂದು ಆಸ್ಪತ್ರೆಯಲ್ಲಿ ವೈದ್ಯರಿಗೂ ಅದೇ ಅನುಭವ. ಕಡೆಗೆ ಅವರೆಲ್ಲ ಸಮಾಲೋಚಿಸಿ ಉಪಯೋಗವಿಲ್ಲದ ಅವನ ಬಲಗಾಲನ್ನು ಮಂಡಿಯವರೆಗೂ ಕತ್ತರಿಸಿಹಾಕುವುದೇ ಸೂಕ್ತವೆಂದು ತೀರ್ಮಾನಿಸಿದರು. ಎರಡು ಕಾಲುಗಳಿದ್ದೂ ಒಂಟಿಗಾಲಲ್ಲಿ ಕುಂಟುತ್ತ, ನೆಗೆಯುತ್ತ ತಿರುಗಾಡುವ ಅಪ್ಪನಿಂದ ತನಗೆ ಅವಮಾನವೇ; ಕೆಲಸಕ್ಕೆ ಬಾರದ ಆ ಕಾಲು ಕತ್ತರಿಸಿ ಒಂದು ಮರದ ಕಾಲಾದರೂ ತೊಡಿಸಿದರೆ ಒಳ್ಳೆಯದೇನೋ ಎಂದು ಯೋಚಿಸಿದ ಕೃಷ್ಣ ‘‘ಆಗಲಿ’’ ಎಂದದ್ದೇ ತಡ, ವೈದ್ಯರು ತಮ್ಮ ಹತಾರಗಳನ್ನು ಕೈಗೆತ್ತಿಕೊಂಡರು.

ತಮ್ಮಣ್ಣಪ್ಪ ಲಬೋ ಲಬೋ ಎಂದು ಬಾಯಿ ಬಡಿದುಕೊಂಡು ಅತ್ತ. ಕಾಲು ಕತ್ತರಿಸಿದ ಮೇಲೆ ಮಂಡಿಯಲ್ಲಾದ ಗಾಯ ಮಾಯುವ ಹೊತ್ತಿಗೆ ಕೃಷ್ಣ ಸರಿಯಾಗಿ ಹೊಂದುವ ಒಂದು ಮರದ ಕಾಲನ್ನು ತಂದು ಜೋಡಿಸಿದ. ಆದರೆ ತಮ್ಮಣ್ಣಪ್ಪ ಒಂದು ವಾರವಾದರೂ ಆ ಮರದ ಕಾಲಿನಲ್ಲಿ ನಡೆದಾಡುವುದನ್ನೇ ರೂಢಿಮಾಡಿಕೊಳ್ಳಲಿಲ್ಲ. ಅಳುಮುಖ ಮಾಡಿಕೊಂಡು ಸುಮ್ಮನೆ ಒಂದು ಮೂಲೆಯಲ್ಲಿ ಕೂತಿರುತ್ತಿದ್ದ. ಕೆಲವು ದಿನಗಳ ನಂತರ ಒಂದು ಬೆಳಿಗ್ಗೆ ಹೊತ್ತು ಹುಟ್ಟುವ ಹೊತ್ತಿಗೇ ಅಂಗಳದಲ್ಲಾಗುತ್ತಿದ್ದ ಸದ್ದಿನಿಂದ ಕೃಷ್ಣನಿಗೆ ಎಚ್ಚರವಾುತು. ಎದ್ದು ಹೋಗಿ ನೋಡಿದರೆ ತಮ್ಮಣ್ಣಪ್ಪ ಆ ಮರದ ಕಾಲನ್ನು ಕಳಚಿಹಾಕಿ, ಕುಂಟೋಬಿಲ್ಲೆ ಆಡುವವನಂತೆ ನೆಗೆಯುತ್ತಾ ಹಾರುತ್ತಾ ಅದನ್ನು ಅಂಗಳದಲ್ಲಿ ಎಲ್ಲೆಂದರಲ್ಲಿ ಒದ್ದು ಒದ್ದು ದೂರ ದೂರ ಚಿಮ್ಮಿಸುತ್ತಿದ್ದ!

ಇದೆಲ್ಲ ನಡೆದು ಮೂವತ್ತು ವರ್ಷಕ್ಕೂ ಮೇಲಾಯಿತು. ಈಚೆಗೆ ಮುದುಕನೇ ಆಗಿಬಿಟ್ಟಿರುವ ತಮ್ಮಣ್ಣಪ್ಪ ‘‘ನನ್ನ ಕಾಲು ಹೋಯಿತೂ... ನನ್ನ ಕಾಲು ಹೋಯಿತೂ...’’ ಅಂತ ಈಗಲೂ ಗೋಳಾಡುವುದನ್ನು ಬಿಟ್ಟಿಲ್ಲ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more