ಮೊಮ್ಮಗ


‘ಹೌದು, ನಿಮ್ಮ ಮುತ್ಯಾ ಭಾಳ ಛೊಲೊ ಮನಶಾ, ಭಾಳಂದ್ರ ಭಾಳ ಛೊಲೊ ಮನಶಾ.’ ಆ ಮುದುಕಿ ಆಕಿ ವಯಸ್ಸಾದ ದನಿಯಾಗ ಹೆಳ್ತಾ ಇದ್ಲು. ಮೊತಿ ಮ್ಯಾಲ ಸಾವಿರ ಗೆರಿ ಮೂಡಿದ್ವು. ಬೊಚ್ಚು ಬಾಯಿ ತೆಗೆದು ನಗ್ತಾ ಇದ್ಲು. ಆದ್ರ ಅವಳು ನನ್ನ ಆಯಿಯೇನಲ್ಲ. ಆದ್ರ ಆಕಿಗಿ ನಾ ದಿನಾ ಆಕಿನ ನೊಡಾಕ ಬರೊ ಆಕಿ . ನಾ ಆಕಿನ ನೊಡಾಕತ್ತಿದ್ದು ಇರೊದು ಒಂದು ವಾರದ ಹಿಂದಿನಿಂದ.

‘ಆ ಮುದುಕಿಗಿ ಕ್ಯಾನ್ಸರ್‌ ಆಗೆದ.’ ನಮ್ಮಕ್ಕ ಹೇಳ್ತಿದ್ಲು. ‘ಆಕಿ ನಿನ್ನ ತನ್ನ ಅನ್ಕೊಂಡಾಳ. ನಿನು ಹಂಗ ಅನ್ಕೊ. ಇವತ್ತೊ ನಾಳೆ ಸಾಯಾ ಮುದುಕಿ, ಯಾಕ ಆಕಿ ಮನಸ ಕೆಡಿಸೊದು. ಛೊಲೊ ಮುದುಕಿ ಅದಾಳ. ನೀ ಹೆಚ್ಚೇನು ಮಾಡಬೇಕಾಗಿಲ್ಲ, ಆಕಿ ಮಾತ ಕೇಳ್ತಾ ಇರು, ಭಾಳ ಮಾತಾಡ್ತಾಳ ಮುದುಕಿ ’

‘ಆಕಿ ಮಗ, ಎಲ್ಲೆದಾರ?’ ನಾ ಕೇಳ್ದೆ.

‘ಮಗ ಸತ್ತೊಗ್ಯಾನ, ಅದಾನ, ಈಕಿ ಸತ್ತ ಮ್ಯಾಗಾದ್ರೂ ಹೆಣ ತೊಗೊಂಡುಹೊಗಾಕ ಬರ್ತಾನೊ ಇಲ್ಲೊ ಗೊತ್ತಿಲ್ಲ. ಈಗಂತೂ ಒಬ್ಬಾಕಿನೆ ಇದ್ದಾಳ. ನಾಚಿಕೆಯಾಗಬೆಕು ಅವ್ರಿಗಿ, ಆದ್ರ ಏನ್ಮಾಡೋದು, ಎಲ್ಲಾ ಅವ್ರವರು ಪಡಕೊಂಡು ಬಂದಿದ್ದು.’

ಅದು ದವಾಖಾನೆ. ನಮ್ಮಕ್ಕ ಅಲ್ಲಿ ಕೆಲ್ಸಾ ಮಾಡ್ತಿದ್ಲು. ನಾ ದಿನಾ ಸಂಜಿಕ ಆಕಿನ ಮನಿಗಿ ಕರ್ಕೊಂಬರಾಕ ಅಲ್ಲಿ ಹೋಗ್ತಿದ್ದೆ. ಈ ಮುದುಕಿನ ಅಲ್ಲಿ ಅಡ್ಮಿಟ್‌ ಮಾಡಿದ್ರು. ಅಡ್ಮಿಟ್‌ ಮಾಡಿದ್ರೊ ಇಲ್ಲ ಸಾಯ್ಲಿ ಅಂತ ಬಿಟ್ಟಿದ್ರೊ ಗೊತ್ತಿಲ್ಲ. ನಾನು ಅಕ್ಕನ ಮಾತ ಕೇಳಿ ಆ ಮುದುಕಿ ನ ಪಾತ್ರ ಮಾಡಾಕ ಶುರು ಮಾಡ್ದೆ. ಸಿನಿಮಾದಾಗಂತೂ ನನಗ್ಯಾರೂ ಪಾತ್ರ ಕೊಡಂಗಿಲ್ಲ ಇಲ್ಲ್ಯಾದ್ರೂ ಮಾಡೂನು ಅಂತ. ಆದ್ರ ಆ ಮುದುಕಿ ಜೊತಿ ಮಾತಾಡಾಕ ಶುರು ಮಾಡಿದ ಮ್ಯಾಲ ನಾ ಬದಲಾಗಗತ್ತೀನಿ ಅನ್ನಸಾಕ ಶುರು ಆಗಿತ್ತು. ಯಾಕಂದ್ರ ನನಗ ಅಕ್ಕನ ಬಿಟ್ರ ಯಾರೂ ಇರ್ಲಿಲ್ಲ. ಇದರಿಂದ ಏನೊ ನನಗ ಆ ದೇವ್ರ ಮ್ಯಾಲ ಸಿಟ್ಟು. ಯಾರ ಮಾತೂ ಕೇಳ್ತಿರಲಿಲ್ಲ. ಅಕ್ಕ ಹೇಳ್ತಿದ್ಲು ನಿನಗ ಹೃದಯಾನೆ ಇಲ್ಲ ಅಂತ.

ಒಂದಿನ ಈ ಆಯಿ ಜೊತಿ ಮಾತಾಡ್ಕೊತ ಕೂಂತಿದ್ದೆ. ಇದ್ದಕಿದ್ದಂಗ ಆಯಿ ಸುಮ್ಮನಾದ್ಲು. ನಾನು ಏಷ್ಟೂಂತ ಹಂಗೆ ಕೂಂತಿರ್ಲಿ ಸುಮ್ನೆ ಒಂದು ಪ್ರಶ್ನೆ ಕೇಳ್ದೆ. ‘ಆಯಿ, ನೀ ಮತ್ತ ಮುತ್ಯಾ ಹ್ಯಾಂಗ ಬೆಟ್ಟಿಯಾದ್ರಿ ಹೇಳಲಾ?’

ಆಯಿ ನನ್ನ ಮೊತಿ ನೋಡಿ ನಕ್ಳು. ‘ನಿನಗೇನ ಗೊತ್ತಿಲ್ಲೆನು, ಎಷ್ಟು ಸಲ ಹೇಳಿನಲ್ಲ. ಎಲ್ಲಾ ಮರ್ತ ಹೋಯ್ತೆನು?’

ಈ ಪ್ರಶ್ನೇನ ಆಕಿ ಮೊದ್ಲ ಕೇಳಿದ್ದ ಅಂತ ಕಾಣಸ್ತದ. ನಾ ಮತ್ತ ಹೇಳ್ದೆ, ‘ಇರ್ಲಿ ಇನ್ನೊಮ್ಮ ಹೇಳ್ಲಾ’.

‘ನಡಿ ಹಂಗಂದ್ರ ಅಲ್ಲಿ ಹೊರಗ ಕುಂತ ಹೇಳ್ತಿನಿ. ನನಗ ಜರಾ ಹೊರಗ ಕರ್ಕೊಂಡ ನಡಿ. ಇಲ್ಲಿ ಕೂತು ಕೂತು ಸಾಕಾಗೆದ’ ಆಯಿ ಹೇಳಿದ್ಲು.

ನಾ ಆಕಿನ ಗಾಲಿ ಕುರ್ಚಿ ಮ್ಯಾಲ ಕೂರಿಸಿ ಹೊರಗ ಕರ್ಕೊಂಬಂದೆ. ಒಂದ ಕಟ್ಟಿ ಹತ್ರ ನಿಲ್ಸಿ, ಆಕೀನ ಕುರ್ಚಿ ಮ್ಯಾಲಿಂದ ಇಳ್ಸಿ ಕಟ್ಟಿ ಮ್ಯಾಲ ಕೂರಿಸಿದೆ. ನಾನು ಆಕಿ ಜೊತಿ ಕಟ್ಟಿ ಮ್ಯಾಲ ಕೂತೆ. ನಮ್ಮಕ್ಕ ದೂರದಿಂದ ಒಂದ ಸರ್ತಿ ನೊಡಿ ನಕ್ಕೊಂತ ತನ್ನ ಕೆಲಸಕ್ಕ ಹೋದ್ಲು. ದೂರದಿಂದ ನೋಡಿದ್ರ ಆಯಿ, ಕೂತು ಮಾತಾಡಕತ್ತಾರ ಅನಿಸ್ತಿತ್ತೇನೊ.

ಆಯಿ ನನ್ನ ಬೆನ್ನ ಮ್ಯಾಗ ತನ್ನ ಎಡಗೈ ಇಟ್ಟು ಹೇಳ್ಳಾಕತ್ಲು. ‘ನಾನು ನಿಮ್ಮ ಮುತ್ಯಾ ಮೊದ್ಲ ಬೆಟ್ಟಿಯಾಗಿದ್ದು ಕಾಲೇಜಿನಾಗ. ನಿಮ್ಮ ಮುತ್ತ್ಯಾ ಭಾಳ ಶಾಂತವಾಗಿ ಇರ್ತಾ ಇದ್ದ. ನೊಡ್ಲಾಕನು ಚೆಂದಿದ್ದ. ನಾನು ಏನು ಕಡಿಮೆ ಇರಲಿಲ್ಲ್‌ ಅವಾಗ. ಅಂವ ಎಲ್ಲಾರ್ಗೂ ನೆನಪಾಗೋದು ಪರೀಕ್ಷೆಗಳು ಸನಿಪ ಬಂದಾಗ ಮಾತ್ರ. ಯಾಕಂದ್ರ ಎಲ್ಲಾರಿಗೂ ಅಂವ ಬರದಿದ್ದ ನೋಟ್ಸ ಬೇಕಾಗತಿದ್ವು ನೋಡ. ಆದ್ರ ನಾ ಮಾತ್ರ ಎಲ್ಲಾರ ಜೊತಿ ಮಾತಾಡಕೊತ ಇರ್ತಾ ಇದ್ದೆ. ಎಲ್ಲಾರೂ ‘ಮಾತಿನ ಮಲ್ಲಿ’ ಅಂತಾ ಕರೀತಾ ಇದ್ರು. ಮೊದ ಮೊದ್ಲು ಅಂವ ನಂಗ ಕಾಣ್ಸೇ ಇರ್ಲಿಲ್ಲ.’

‘ಒಂದಿನ ವಿಜ್ಞಾನದ ಅಸೈನಮೆಂಟ ಬರಿಬೇಕಿತ್ತು. ಅದರಲ್ಲಿ ಕಪ್ಪಿಯ ಡ್ರಾಯಿಂಗ ಬಿಡಿಸಬೇಕಿತ್ತು. ಆದ್ರ ನನಗ ಡ್ರಾಯಿಂಗ ತಗಿಲಾಕ ಬರ್ತಿರಲಿಲ್ಲ. ಮಾಸ್ತರು ನನ್ನ ಎಲ್ಲ ಗೆಳತಿರಿಗೆ ಹೇಳಿದ್ರು ಯಾರೂ ಈಕಿಗೆ ಸಹಾಯ ಮಾಡ್ಬಾರ್ದು ಅಂತ. ನನಗ ಅಳು ಬಂದಾಂಗ ಆಗಾಕತ್ತಿತ್ತು. ನಾ ಲೈಬ್ರರಿಯಲ್ಲಿ ಕೂಂತಿದ್ದೆ. ಅವಾಗ್ಲೆ ಅಂವ ಬಂದ. ನನ್ನ ಮುಂದಿನ ಕುರ್ಚಿ ಮ್ಯಾಲ ಕೂಂತು, ನನ್ನ ತ್ರಾಸ ಅರ್ಥಾ ಮಾಡ್ಕೊಂಡವರ ತರ, ನನ್ನ ನೋಟ್‌ ಬುಕ್ಕನಾಗ ಡ್ರಾಯಿಂಗ ಬಿಡಿಸಿ ಕೊಟ್ಟ. ಆದ್ರ ಒಂದ ಮಾತನೂ ಆಡಲಿಲ್ಲ. ಅವಾಗ ನನಗೂ ಗೊತ್ತಿರಲಿಲ್ಲ ಇಂವ ಯಾರು ಅಂತ. ಡ್ರಾಯಿಂಗ ತೆಗೆದುಕೊಟ್ಟವ್ನೆ ತನ್ನ ಬುಕ್ಕ ತೊಗೊಂಡು ಹೊಂಟೋದ. ನಾ ಅವ್ನ ನೋಡ್ತಾನೆ ಕೂತಿದ್ದೆ. ಅವ್ನಿಗೆ ಥ್ಯಾಂಕ್ಸ ಹೇಳಾಕ್ನೂ ಮರ್ತ ಬಿಟ್ಟೆ’

‘ನಾ ಅನ್ಕೊಂಡೆ ಅಂವ ಮತ್ತ ಬಂದ ಮಾತಾಡಸ್ತಾನ ಬಿಡು ಅಂತ, ಆದ್ರ ಅಂವ ಬರ್ಲೆ ಇಲ್ಲ. ಯಾವಾಗರೆ ಮುಂದ ಬಂದ್ರ ನಕ್ಕು ಮುಂದ ಹೋಗಿಬಿಡ್ತಾ ಇದ್ದ. ನನ್ನ ಹತ್ರ ಬರ್ಲೆ ಇಲ್ಲ. ಮತ್ತ ಯಾರಾದ್ರೂ ಆಗಿದ್ರ ನನ್ನ ಬೆನ್ನ ಹಿಂದೇನೆ ಸುತ್ತಾ ಇದ್ರು. ನನಗೂ ಅನ್ನಸ್ತಾ ಇತ್ತು ಎಷ್ಟು ಸೊಕ್ಕು ಇವಂಗ ಅಂತ. ಆದ್ರ ಏನು ಮಾಡೋದು ಡ್ರಾಯಿಂಗ ತೆಗೆದುಕೊಟ್ಟಿದ್ನಲ್ಲ ಅದಕ್ಕ ಥ್ಯಾಂಕ್ಸ್‌ ಹೇಳ್ಬೆಕಿತ್ತು.’

‘ಥ್ಯಾಂಕ್ಸ ಹೇಳ್ಬೆಕಾದ್ರೂ ಎಷ್ಟು ಹುಡುಕಬೆಕಾಯ್ತು ಅವನ್ನ. ಒಂದಿನ ಸಿಕ್ಕ, ನಮ್ಮ ಕಾಲೇಜಿನಾಗ ಒಂದು ತೋಟ ಇತ್ತು. ಅಲ್ಲೇ ಗಿಡದ ಕೆಳಗ ಕೂಂತಿದ್ದ, ಪುಸ್ತಕ ಓದ್ತಾ. ನಾ ಹೋಗಿ ಅವ್ನ ಮುಂದ ಕೂಂತೆ. ನನ್ನ ನೋಡಿ ನಕ್ಕ. ನಾ ಅವನೇ ಏನಾದ್ರೂ ಮಾತಾಡ್ತಾನೆ ಅಂತ ಕಾಯ್ತಾ ಇದ್ದೆ. ಆದ್ರ ಆ ಹುಚ್ಚ ಮತ್ತ ತನ್ನ ಪುಸ್ತಕ ಓದತೊಡಗಿದ. ಒಂದು ಚೆಂದನ ಹುಡುಗಿ ತಾನೆ ಬಂದು ಮುಂದ ಕೂತಾಳ ಅಕಿನ ಮಾತಾಡ್ಸೊದು ಬಿಟ್ಟು...ನಾನೆ ಮಾತು ಶುರು ಮಾಡ್ಬೇಕಾಯ್ತು.’

ತುಸು ಸಿಟ್ಟಿನ್ಯಾಗ ಕೇಳೆದೆ, ನಿನಗ ಮಾತಾಡ್ಲಾಕ ಬರಂಗಿಲ್ಲೇನು?’

‘ಹಾಂ, ಬರ್ತ್ಯತಿ ಆದ್ರ ಜರೂರತ ಇದ್ರ ಮಾತ್ರ ಮಾತಾಡ್ತೀನಿ’ ಅಂವ ಕಡಿಕೂ ಮಾತಾಡ್ದ.

‘ಇವಾಗ ಜರೂರತ ಐತೆಲ್ಲ, ನಾ ಬಂದ ಮುಂದ ಕೂಂತಿನಿ, ಮಾತಾಡಂಗಿಲ್ಲೇನು?’

‘ನಿ ಆದ್ರೂ ಎಲ್ಲಿ ಮಾತಾಡ್ಸಿದೆ. ಅದಕೆ ನಾನೂ ಅನ್ಕೊಂಡೆ ಮಾತಾಡಬೇಕಾಗಿಲ್ಲ ಅಂತ’

‘ನಿ ಏನ ಅನ್ಕೊಂಡಿ, ನೀ ಏನ ದೊಡ್ಡ....’ ನಾ ಪಟ್ಟಂತ ನಾಲಿಗಿ ಕಚ್ಚ್ಕೊಂಡೆ. ಬಾಯಿಗೆ ಬಂದಿದ್ದು ಹೇಳಿಬಿಡೋಳು ನಾ.

‘ಏನ್‌ ದೊಡ್ಡ ಹೇಳಲಾ ಮುಂದ, ನನಗ ಗೊತ್ತ ನೀವೆಲ್ಲ ಏನಂತಿರಿ ನನಗ ಅಂತ. ಕುಡುಮಿ(ಪುಸ್ತಕದ ಹುಳು), ಹೌದೊ ಇಲ್ಲೊ. ನಾ ಮಾತಾಡೊದು ಬರಿ ಬುಕ್ಕಗಳ ಬಗ್ಗೇನೆ.’

‘ಇವಾಗ ಏನು ಓದಾಕತ್ತಿ, ?’ ನಾನು ಸುಮ್ನೆ ಕೇಳ್ದೆ.

‘ಮೈಸೂರು ಮಲ್ಲಿಗೆ, ಕೆ.ಎಸ್‌.ಎನ್‌ ಅವರದು’

‘ಕೆ.ಎಸ್‌.ಎನ್‌ ಅಂದ್ರೆ?’

‘ಕೆ.ಎಸ್‌. ನರಸಿಂಹಸ್ವಾಮಿಗಳು ಅಂತ. ಕನ್ನಡದ ಪ್ರಸಿದ್ಧ ಪ್ರೇಮ ಕವಿಗಳು’

‘ಓಹೋ ನೀನು ಪ್ರೇಮ ಕಾವ್ಯವನ್ನು ಓದ್ತೀಯಾ ಅಂದಂಗಾಯ್ತು’

‘ಯಾಕ ಓದಬಾರ್ದೇನು?’

‘ಹಂಗೇನಿಲ್ಲ, ನಿನ್ನಂತಂವ ಅಂದ್ರೆ, ಹುಡುಗಿ ಮುಂದ ಬಂದ್ರು ಮಾತಾಡ್ಲಾರದವನು ಪ್ರೇಮಕಾವ್ಯ ಓದೋದು ತುಸು ವಿಚಿತ್ರ ಅನಸ್ತೈತಿ ಅದಕ ಕೇಳ್ದೆ. ಹೋಗ್ಲಿ ಕೊನೇಲಿ ಏನಾಗತೈತಿ, ಪ್ರೇಮಿಗಳು ಕೂಡ್ತಾರೊ ಇಲ್ಲೊ’

‘ಗೊತ್ತಿಲ್ಲ, ಪೂರ್ತಿ ಓದಿದ ಮ್ಯಾಲ ಹೇಳ್ತಿನಿ. ನಿನಗೆನ ಅನ್ನಸ್ತದ ಪ್ರೀತಿ ಪ್ರೇಮದ ಬಗ್ಗೆ?’

‘ನನಗೇನ ಅನ್ನಸ್ತದ, ಹುಚ್ಚರ ಸಂತಿ ಅನ್ನಸ್ತದ’

‘ಅಂದ್ರ ನಿನಗ ಅದರಾಗ ನಂಬಿಕಿ ಇಲ್ಲ ಅಂತಾತು’

‘ನನ ಪ್ರಕಾರ ಪ್ರೀತಿ ಅಂತೇನೂ ಇಲ್ಲ. ಒಂದು ಹುಡುಗಾ ಹುಡುಗಿ ದಿನಾ ಬೆಟ್ಟಿ ಆಗ್ತಾ ಇದ್ರ ಆಮ್ಯಾಲ ಒಬ್ರನ ಬಿಟ್ಟ ಇನ್ನೊಬ್ರ ಇರೊಕಾಗಲ್ಲ. ಇಬ್ರಿಗೂ ರೂಡಿ ಆಗಿಬಿಡ್ತದ. ಅದನ್ನ ನೀ ಪ್ರೀತಿ ಅಂದ್ರ ಅನ್ಕೊ.’

ಅಂವ ನಕ್ಕು ಹೇಳ್ದ, ‘ಛೊಲೊ ವಿಚಾರಾನೆ, ನಿನಗೂ ಹಂಗೆನಾದ್ರೂ ಆಗೆದೇನು? ಯಾರ ಜೊತಿ ರೂಡಿ ಏನಾದ್ರೂ , ಅಂದ್ರ ಪ್ರೀತಿ-ಗೀತಿ ಏನಾದ್ರೂ’

‘ನಂಗೇನೂ ಆಗಿಲ್ಲ, ಆದ್ರ ನನ್ನ ಜೊತಿ ಕೆಲವು ಜನಕ್ಕ ಆಗ್ತೈತಿ. ನಿನಗಾಗೆಲ್ಲೇನು?’ ನಾ ಕೆಳ್ದೆ.

‘ನನಗಂತೂ ಇನ್ನೂ ಆಗಿಲ್ಲಾ, ಯಾಕಂದ್ರ ನನಗ ದಿನಾ ಯಾರೂ ಬೆಟ್ಟಿನೂ ಆಗಂಗಿಲ್ಲ , ಅದಕ ರೂಡಿನೂ ಆಗಾಂಗಿಲ್ಲ’

‘ಯಾಕ?’

‘ನನಗೂ ಗೊತ್ತಿಲ್ಲ, ನಾ ಇಂತ ಪುಸ್ತಕಾ ಓದ್ತೀನಿ ಅದಕ್ಕ ಇರ್ಬಹುದು, ಇಲ್ಲ ನಾ ಪ್ರೀತಿ ಪ್ರೇಮಾನ ನಂಬ್ತೀನಿ ಅದಕ ಇರಬಹುದು’

‘ಹಾಂ, ಪ್ರೀತಿ ಬಗ್ಗೆ ಭಾಳ ಓದಿ ಅಂತ ಕಾಣಸ್ತೈತಿ’.

‘ಅದಕ ಹೇಳ್ದೆ ನನ್ನ ಹತ್ರ ಯಾರೂ ಬರಂಗಿಲ್ಲ ಅಂತ. ಈಗ ನೀನೆ ನೋಡು ನೀ ಮತ್ತ ಸಿಗ್ತಿಯಾ ಇಲ್ಲೊ ಗೊತ್ತಿಲ್ಲ’.

ನನಗ ನಗು ಬಂತು. ಅಂವ ಮತ್ತ ಓದ್ಲಾಕ ಶುರು ಮಾಡ್ದ , ನಾ ಅಲ್ಲಿಂದ ಎದ್ದು ಬಂದೆ. ಹಿಂಗಾಯ್ತು ನಿಮ್ಮ ಮುತ್ಯಾನ ಜೊತಿ ನನ ಬೆಟ್ಟಿ.’ ಮುದುಕಿ ನಗ್ತಾ ಇದ್ಲು ಆದ್ರ ಕಣ್ಣಲ್ಲಿ ನೀರಿತ್ತು. ಸೀರಿ ಸೆರಗನ್ನು ಕಣ್ಣಿಗೊತ್ತಿಕೊಂಡಳು. ‘ನೀನು ನೋಡ್ಲಿಕ ಮಾತ್ರ ನಿಮ್ಮಪ್ಪನಾಂಗಿದಿ, ಆದ್ರ ಗುಣಾ ಎಲ್ಲಾ ನಿಮ್ಮ ಮುತ್ತ್ಯಾಂದ. ನೀ ಮೊದಲಿಂದನೂ ಹಿಂಗ ಅದಿ. ನಿನ್ನ ಎಲ್ಲಾ ಕೆಲಸಾ ಬಿಟ್ಟು ನನ್ನ ನೋಡಾಕ ಬರ್ತಿಯಲ್ಲ.’ ಮುದುಕಿ ಹೇಳ್ತಾ ಇದ್ದ್ಲು.

‘ಅದೆಲ್ಲಾ ಇರ್ಲಿ ಬಿಡು, ಆಮ್ಯಾಲ ಏನಾಯ್ತು ಹೇಳು. ಕತಿ ಅರ್ದಕ ಬಿಡಬ್ಯಾಡ’

‘ಅಮ್ಯಾಲ ಏನ್‌ ಹೆಳ್ಲಿ. ಅಂವ ದಿನಾ ಅಲ್ಲೆ ಅದೆ ಗಿಡದ ಕೆಳಗ ಕೂರತಿದ್ದ. ನಾ ಹೋಗಿ ಅಂವನ ಹತ್ರ ಕೂತು ಮಾತಾಡಿ ಬರ್ತಿದ್ದೆ. ಅಂವ ನಂಗ ರೂಡಿಯಾದಂಗ ಆದ. ಅಂವನ ನಗು, ಅಂವನ ಬುಕ್‌ಗಳು, ಅಂವನ ವಿಚಾರ ಎಲ್ಲಾ ನಂಗ ಇಷ್ಟ ಅಗಾಗತ್ತ್ವು. ಅಂವ ಬುಕ್‌ ಓದಿ ಹೇಳಿ ನನ್ನ ನಗಿಸ್ತಿದ್ದ.’

‘ಮತ್‌, ಅಂವಂಗೂ ನಿನ್ನ ಜೊಡಿ ರೂಡಿ ಆಯ್ತೇನು?’

‘ಇಲ್ಲ, ಅಂವ ಅಂತೂ ನನ ಪ್ರೀತಿಸಾಕ ಶುರು ಮಾಡಿದ್ದಾ, ಅಂವ ಪ್ರೀತಿ ಪ್ರೇಮ ಅಂತ ನಂಬ್ತಾ ಇದ್ನಲ್ಲ.’ ಅವ್ಳ ಕಣ್ಣಾಗ ಹಂಗ ನೀರ ಸುರೀತಿತ್ತು. ನಾ ಕರ್ಚಿಪ ತಗದ ಕೊಟ್ಟೆ. ‘ಅಂವನ ಸಾಯುತಂಕ ಮರಿಲಿಕಾಗಂಗಿಲ್ಲ ನೋಡ. ಮೊದ್ಲ ಬೆಟ್ಟಿಯಾದಾಗ ನಾವಿಬ್ರೂ ಒಬ್ರನ್ನೊಬ್ರು ಇಷ್ಟೊಂದು ಹಚ್ಚಕೊಂಡಬಿಡ್ತಿವಿ ಅನ್ಕೊಂಡಿರಲಿಲ್ಲ’.

‘ಸಾಕು ಬಿಡು ಇವತ್ತಿಗಿ’ ನಾ ಹೇಳ್ದೆ. ಇನ್ನಷ್ಟು ಅಳ್ಸೋದು ಬ್ಯಾಡಾಗಿತ್ತು. ‘ನಿ ರೆಸ್ಟ ತೊಗೊ. ನಾ ಮತ್‌ ನಾಳಿ ಬರ್ತಿನಿ’. ಆಕಿನ ಆಕಿ ಬೆಡ್‌ ತಂಕ ಕರ್ಕೊಂಡೊಗಿ ಮಲಗಿಸಿ, ಸ್ವಲ್ಪ ಹೊತ್ತು ಅಲ್ಲೇ ಆಕಿ ಕೈ ಹಿಡ್ಕೊಂಡು ಕೂತಿದ್ದೆ. ಎದ್ದು ಹೊಂಟಾಗ ಆಕಿ ಮತ್‌ ಹೆಳಿದ್ಲು ‘ನಿ ನಿಮ್ಮ ಮುತ್ಯಾನಂಗ ಅದಿ. ನಿಮ್ಮಪ್ಪ ಹಿಂಗಿರಲಿಲ್ಲ , ಆದ್ರ ನಿ ಮಾತ್ರ ಎಕದಮ್‌ ಹಂಗೆ ಅದಿ’

ನಾ ನಕ್ಕು ಹೇಳ್ದೆ, ‘ನಿ ರೆಸ್ಟ ತೊಗೊ, ನಾ ನಾಳಿ ಬರ್ತಿನಿ’.

ನಾ ಹೊರಗ ಬಂದು ನಿಂತೆ. ಮಂದಿ ಎಲ್ಲಾ ಆ ಕಡಿ ಈ ಕಡಿ ಹೊಂಟಿದ್ದರು. ನಂಗಂತೂ ಒಂಥರಾ ವಿಚಿತ್ರ ಅನ್ಸಾಕತ್ತಿತ್ತು. ಒಂಥರಾ ಅಳು ಬಂದಂಗ ಆಗಾಕತ್ತಿತ್ತು, ಗಂಟ್ಲು ಕಟ್ಟಿಕೊಂಡಿತ್ತು. ಆದ್ರ ನಮ್ಕಡಿ ಗಂಡಸರು ಅಳಬ್ಯಾಡದು ಅಂತ ಹೇಳ್ತಾರ. ನಾ ಅಳು ತಡಕೊಂಡೆ. ನಾ ಎಷ್ಟು ಮೋಸ ಮಾಡಿಲ್ಲ, ಎಷ್ಟು ಕೆಟ್ಟ ಚಟಾ ಮಾಡಿಲ್ಲ, ಎಷ್ಟು ಮಂದಿಗಿ ಬೈದಿಲ್ಲ, ಹೊಡದಿಲ್ಲ. ಜಗತ್ತಿನ್ಯಾಗ ಏನೇನ ಕೆಟ್ಟಾದು ಅಂತಾರ ಅದನೆಲ್ಲಾ ಮಾಡಿದ್ರೂ...

ಈ ಮುದುಕಿ ಹೇಳ್ತಾಳ ‘ನಾ ಮಾತ್ರ ಆ ಮುತ್ಯಾನಂಗ ಅದಿನಿ ಅಂತ’.

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+