ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀರೆಯೆಂದರೆ ಒಂದಿಷ್ಟು ಗಜಗಳ ಲೆಕ್ಕ ಮಾತ್ರವೇನು?

By * ಅಂಜಲಿ ರಾಮಣ್ಣ, ಬೆಂಗಳೂರು
|
Google Oneindia Kannada News

Saree : Biography of a woman
ಸೀರೆಯೆಂದರೆ ಒಂದಿಷ್ಟು ಗಜಗಳ ಲೆಕ್ಕ ಮಾತ್ರವೇನು?
ಹರಿವ ನದಿ ಪಾತ್ರವದು ಒಟ್ಟು ಮಾಡಿ ಭೂಮ್ಯಾಕಾಶವನು;

ಸೀರೆಯೆಂದರೆ;

ಕಣ್ಗಾಳಿ ಸುಳಿಗಾಳಿ ತೀಡಿ ತೆಗೆವ ಸೆರಗು
ಹಾಲ್ದುಟಿಯ ಹನಿ ಒರೆಸಿ ನೋಟವಾದ ಮೆರುಗು
ಹೊರುವ, ನೀಡುವ ಅವಳತನಕ್ಕೆ ಸಾಕ್ಷಿ ಹೇಳುವ ನೆರಿಗೆಗಳ ಸಾಲು
ಅವನದರಂತೆ ಅದಕ್ಕಿಲ್ಲ ಛ್ಛೇದಗೊಂಡ ಕೈಕಾಲು

ಸೀರೆಯೆಂದರೆ;
ಪಾದಕ್ಕೆರೆಗಿದವರ ತಲೆಕಾಯ್ವ ಪಾವಲಿ, ನೆನಪಿನ ತುದಿ ಗಂಟು
ಅದಕುಂಟು ಅಜ್ಜಿಯ ಅಕ್ಕರೆಯ ಸಕ್ಕರೆ ನೆಂಟು
ಮರಿಯೊಡೆದು ಕನ್ನಡಿಯಲ್ಲಿ ಅಮ್ಮನಾಗುವ ಒನಪು
ಸುತ್ತಿ ಸುತ್ತಿಯೂ ಕಗ್ಗಂಟಾಗದೆ ಉಳಿವ ಒಡಪು

ಸೀರೆಯೆಂದರೆ;
ಮಣ್ಣೂ ಧೂಳು ಸರಿಸಿ ಬೆವರು ಹರಿಸಿ ಜಾಳಾದರೂ ಹಟ ಬಿಡದ ಅರಿವು
ನೀ ಸಾಕೆಂದರೂ ನಾ ಕೊಡುವೆನೆನುವ ನಿಸ್ಪೃಹ ಹೊರ ಹರಿವು
ಅಕ್ಕ ಚಿಕ್ಕವ್ವ ಅತ್ತಿಗೆ ಅತ್ತೆವ್ವ ಕಂಡ ಕಾಮನಬಿಲ್ಲು
ಬಂಧ-ಬಾಂಧವ್ಯಗಳನ್ನು ಉದ್ದಗಲಕ್ಕೂ ಕಟ್ಟಿಟ್ಟ ಭಾವಗಳ ಸೊಲ್ಲು

ಸೀರೆಯೆಂದರೆ;
ಪ್ರತಿ ಪದರು ಚುಕ್ಕಿ ನಕ್ಷತ್ರ ಹೂ ನವಿಲುಗಳಲ್ಲೂ ಒಂದೊಂದು ಗುಟ್ಟು
ಹೊತ್ತು ಹೊತ್ತು ಹೆರಲಾರದ ಭವಿತವ್ಯಗಳ ಹುಟ್ಟು
ಚರಿತ್ರೆಯರುಹೋ ಹಿಮ್ಮಡಿಗಳಿಗೆ ಸಿಕ್ಕಿ ಸುಕ್ಕಾಗದ ಅಂಚು
ತುಂಟ ನೋಟಗಳ ಕಳ್ಳ ನಗುಗಳ ಬೀಸಿ ಹಾರಿಸೋ ಒಳ ಸಂಚು

ಸೀರೆಯೆಂದರೆ;
ಅಲ್ಲವದು ಬರೀ ಹತ್ತಿ ಜರತಾರಿ ರೇಕು ಪೀತಾಂಬರ
ಸೀರೆಯದು ಪುಟಕಿಟ್ಟ ಸೈರಣೆ ಸಂಯಮಗಳ ಸಡಗರ
ಹಿರಿಮೋರೆ, ಅಳುಮುಂಜಿ, ಎತ್ತರ ಗಿಡ್ಡ ಕಪ್ಪು ಬಿಳುಪು ಭೇದ ತೋರದ ಹರ್ಷ
ಹುಡುಗಿಯನು ಒಮ್ಮೆಲೇ ಹೆಣ್ಣಾಗಿಸುವ ಸಂಸ್ಪರ್ಶ

ಸೀರೆಯೆಂದರೆ ಒಂದಿಷ್ಟು ಗಜಗಳ ಲೆಕ್ಕ ಮಾತ್ರವೇನು?
ಹರಿವ ನದಿ ಪಾತ್ರವದು ಒಟ್ಟು ಮಾಡಿ ಭೂಮ್ಯಾಕಾಶವನು;

English summary
Saree means not just the cloth Indian women adore, it is the symbol of womanhood. It symbolizes love, sentiments, affection, mother, sorrow, happiness. Saree is notheing but biography of woman. A Kannada poem by Anjali Ramanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X