ಹೇ ಭಾರತಮಾತೆ
- ಶೈಲಜಾ ವಲಕಟ್ಟೆ
ಹಿಮಗಿರಿಯ ಛಾಯೆಯಲಿ ಸಾಗರದಬ್ಬರದ ನಡುವೆಮೆರೆಯುತಿಹ ನಿನ್ನಂದವ ಏನೆಂದು ಹೊಗಳಲಿ ಮಾತೆ
ವರ್ಣಿಸಿದಷ್ಟೂ ಮುಗಿಯದು ನಿನ್ನ ಹಿರಿಮೆಯ ಗಾಥೆ
ಗಿರಿಬನಗಳ ತಪ್ಪಲು ಉಡಿಸಿರಲು ನಿನಗೆ ಹಸಿರು ಸೀರೆ
ಬೆಳಗುತಿದೆ ಕಿರೀಟವದೊ ಆ ಸುಂದರ ಕಾಶ್ಮೀರ
ಕಂಪ ಸೂಸಿವೆ ಮುಡಿಯ ಮೈಸೂರ ಮಲ್ಲಿಗೆ
ಜಯಭೇರಿ ನುಡಿಸಿಹುದು ನಿನ್ನ ಪ್ರೀತಿಯ ಬಲವು
ಕರುಬುತಿವೆ ನಿನ್ನದೃಷ್ಟಕೆ ಆಚೀಚೆ ಮನೆಯವರು
ಮಾಡುತಿವೆ ವಿಫಲ ಯತ್ನ ನಿನ್ನೈಸಿರಿಯ ದೋಚಲು
ಬರೆ ಮೂರ್ಖ ಜನರಿವರು ಬರದೇಕೆ ಬುದ್ಧಿ
ಪೆಟ್ಟು ತಿನ್ನಲೆಂದೇ ಹುಟ್ಟಿಹರೋ ಏನೋ
‘ವಿನಾಶ ಕಾಲೇ ವಿಪರೀತ ಬುದ್ಧಿಃ’ !
*
ಕಲಿಕಾಲ !!
ಹಾಯ್ ಮಮ್ಮಿ ಹಾಯ್ ಡ್ಯಾಡಿ ಅನ್ನೋ ಈ ಕಾಲದಲಿ
ಕನ್ನಡ ರಸವೆಲ್ಲಿ ಪಂಪ ರನ್ನರ ಕನಸೆಲ್ಲಿ
ಮರೆತಿಹರು ಜನರಿಲ್ಲಿ ತಾಯ್ನಾಡ ಭಾಷೆಯನು
ಹಾಲುಂಡ ತವರಿನ ಆ ಸವಿಜೇನ ನೆನಪನು
ಪ್ರತಿದಿನವೂ ಓಡಾಟ ಯಾಂತ್ರಿಕದ ಜೀವನ
ಮಸುಕು ಮರೆಯಾಗುತಿದೆ ಒಲವು ಸಂವೇದನ
ಕಾದಾಟ ಕ್ಷಣಕ್ಷಣವೂ ಹಣ ಸ್ಥಾನಮಾನಕೆ
ಅನುದಿನವೂ ಹೊಸವೇಷ ಕೊನೆಯಿಲ್ಲದ ಗಾಥೆ












Click it and Unblock the Notifications